ಸಹಭಾಗಿ ಪತ್ರಿಕೋದ್ಯಮ | ಜನಹಿತ ಸುದ್ದಿಗೆ ಕೈಜೋಡಿಸಿದ ‘ಬೆಂಗಳೂರು ಮಿರರ್’

ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಪ್ರಮಾಣವಚನ ಸಮಾರಂಭಕ್ಕೆ ಆಗಿದ್ದ ಒಟ್ಟು ಖರ್ಚಿನ ವಿವರಗಳನ್ನು ‘ದಿ ಸ್ಟೇಟ್‌’ ಮೊದಲ ಬಾರಿಗೆ ಬಹಿರಂಗ ಮಾಡಿತ್ತು. ಇದು ಸಾರ್ವಜನಿಕ ವಲಯ ಮತ್ತು ಸರ್ಕಾರದ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಚರ್ಚೆಯನ್ನು ‘ಬೆಂಗಳೂರು ಮಿರರ್’ ಕೂಡ ವಿಸ್ತರಿಸಿದೆ

ವಿಧಾನಸೌಧದ ಮುಂಭಾಗದಲ್ಲಿ ನಡೆದಿದ್ದ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಆಗಮಿಸಿದ್ದ ಗಣ್ಯಾತಿಗಣ್ಯರ ವಸತಿ, ಊಟೋಪಚಾರಕ್ಕೆ ಆಗಿದ್ದ ಲಕ್ಷಾಂತರ ರೂಪಾಯಿ ಖರ್ಚಿನ ವಿವರವನ್ನು ‘ದಿ ಸ್ಟೇಟ್‌’ ಎರಡು ದಿನದ ಹಿಂದೆಯಷ್ಟೇ ಬಹಿರಂಗಪಡಿಸಿತ್ತು. “ ಪ್ರಮಾಣ ದಿನದಂದು ಗಣ್ಯರಿಗೆ ವಸತಿ ಕಾಯ್ದಿರಿಸಿದ್ದು ಜೆಡಿಎಸ್‌, ಪಾವತಿಸಿದ್ದು ಸರ್ಕಾರ” ಶೀರ್ಷಿಕೆಯೊಂದಿಗೆ ಆಗಸ್ಟ್‌ ೭ರಂದು ಪ್ರಕಟವಾದ ವಿಶೇಷ ವರದಿ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿತ್ತು.

ಈ ಚರ್ಚೆ ಮುಂದುವರಿದಿರುವಾಗಲೇ ಟೈಮ್ಸ್‌ ಗ್ರೂಪ್‌ನ ಆಂಗ್ಲ ಪತ್ರಿಕೆ ‘ಬೆಂಗಳೂರು ಮಿರರ್‌’ ಇಂದು ಇದೇ ವರದಿಯನ್ನು ಮುಖಪುಟದಲ್ಲಿ ಪ್ರಕಟಿಸಿದೆ. ಈ ಮೂಲಕ, ‘ಬೆಂಗಳೂರು ಮಿರರ್‌’ ಪತ್ರಿಕೆ ಕೂಡ ಸಹಭಾಗಿ ಪತ್ರಿಕೋದ್ಯಮಕ್ಕೆ ಕೈಜೋಡಿಸಿದೆಯಲ್ಲದೆ, ಸಾರ್ವಜನಿಕ ವಲಯದಲ್ಲಿ ಚರ್ಚೆಯನ್ನು ಇನ್ನಷ್ಟು ವಿಸ್ತರಿಸಿದೆ. ಇದರ ಜೊತೆಗೆ ರಾಷ್ಟ್ರೀಯ ಮತ್ತು ಪ್ರಾದೇಶಿಕ ಸುದ್ದಿವಾಹಿನಿಗಳು ಕೂಡ ‘ದಿ ಸ್ಟೇಟ್‌’ ವರದಿಯನ್ನು ಆಧರಿಸಿ ವರದಿ ಬಿತ್ತರಿಸಿವೆ.

ಇದನ್ನೂ ಓದಿ : ೨೫ ಸಚಿವರ ಪ್ರಮಾಣವಚನ ದಿನದಂದು ಉಪಾಹಾರಕ್ಕೆ ಆದ ಖರ್ಚು ೧೨ ಲಕ್ಷ ರು!

ಎಚ್ ಡಿ ಕುಮಾರಸ್ವಾಮಿ ಮತ್ತು ಜಿ ಪರಮೇಶ್ವರ್‌ ಅವರು ವಿಧಾನಸೌಧದ ಮುಂಭಾಗದಲ್ಲಿ ಮೇ ತಿಂಗಳಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭಕ್ಕೆ ಆಗಮಿಸಿದ್ದ ೪೨ ಗಣ್ಯ ಅತಿಥಿಗಳ ವಸತಿ, ಊಟೋಪಚಾರ ಮತ್ತು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಗಣ್ಯರಿಗೆ ಆಯೋಜಿಸಿದ್ದ ಹೈ-ಟೀ ವ್ಯವಸ್ಥೆಗೆ ಒಟ್ಟು ೪೧ ಲಕ್ಷ ರೂಪಾಯಿ ಖರ್ಚಾಗಿತ್ತು. ಇದರಲ್ಲಿ ಕೊಠಡಿಗಳಿಗೆಂದು ೩೭,೫೩,೫೩೬ ರೂ., ಹೈ ಟೀ ಗೆ ೪,೩೫,೦೦೧ ರೂ. ಖರ್ಚಾಗಿದೆ.

ವಿಶೇಷವೆಂದರೆ, ಬಹುತೇಕ ಗಣ್ಯ ಅತಿಥಿಗಳ ವಸತಿಗಾಗಿ ಹೋಟೆಲ್‌ನಲ್ಲಿ ಕೊಠಡಿಗಳನ್ನು ಜಾತ್ಯತೀತ ಜನತಾದಳ ಪಕ್ಷ ಕಾಯ್ದರಿಸಿದ್ದರೆ, ಇವರ ವಸತಿ ವೆಚ್ಚವನ್ನು ರಾಜ್ಯ ಸರ್ಕಾರದ ಆತಿಥ್ಯ ಸಂಸ್ಥೆಯಾಗಿರುವ ಕುಮಾರಕೃಪ ಅತಿಥಿಗೃಹದ ವಸತಿ ಶಾಖೆ ಪಾವತಿಸಿದೆ. ವಿಧಾನಸೌಧದ ಮುಂಭಾಗದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ಕೇವಲ ೭ ನಿಮಿಷದಲ್ಲಿ ಪೂರ್ಣಗೊಂಡಿದ್ದನ್ನು ‘ ದಿ ಸ್ಟೇಟ್‌’ ವಿಸ್ತೃತವಾಗಿ ವರದಿ ಮಾಡಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More