ಮಾಧ್ಯಮಗಳ ವಿಶ್ವಾಸಾರ್ಹತೆ ಒರೆಗೆ ಹಚ್ಚಿದ ರಾಫೇಲ್ ಡೀಲ್ ಪ್ರಕರಣ ಸುದ್ದಿ

ಬೋಫೋರ್ಸ್ ಹಗರಣವನ್ನು ಬಯಲಿಗೆಳೆದ ಪತ್ರಕರ್ತ ಅರುಣ್ ಶೌರಿ ಮತ್ತು ವಾಜಪೇಯಿ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ್ದ ನಾಯಕ ಯಶವಂತ ಸಿನ್ಹಾ ರಾಫೇಲ್ ಡೀಲ್ ವಿಷಯದಲ್ಲಿ ಸರ್ಕಾರ ಮತ್ತು ಪ್ರಧಾನಿ ವಿರುದ್ಧ ಮಾಡಿದ ಆರೋಪಗಳು ಮಾಧ್ಯಮಗಳಿಗೆ ಆದ್ಯತೆ ಆಗಲಿಲ್ಲವೇಕೆ?

ನಿನ್ನೆ, ಆಗಸ್ಟ್ 8ರ ಬುಧವಾರ ಇಡೀ ದೇಶದ ಗಮನ ಸೆಳೆಯಬಲ್ಲ ಎರಡು ಪ್ರಮುಖ ಘಟನೆಗಳು ಸಂಭವಿಸಿದವು. ಆ ಪೈಕಿ ಒಂದು, ನೀವೆಲ್ಲ ಊಹಿಸಿರಬಹುದಾದಂತೆ ದ್ರಾವಿಡ ರಾಜಕಾರಣದ ದಣಿವರಿಯದ ನಾಯಕ ಎಂ ಕರುಣಾನಿಧಿ ಅವರ ಅಂತ್ಯಕ್ರಿಯೆ. ಆ ಕುರಿತ ಸುದ್ದಿ ನಮ್ಮ ಮಾಧ್ಯಮಗಳಲ್ಲಿ ನಿರೀಕ್ಷೆಯಂತೆ ಭರ್ಜರಿ ಪ್ರಚಾರ ಪಡೆಯಿತು. ಆದರೆ, ದೇಶದ ದಕ್ಷಿಣದ ಚೆನ್ನೈನ ಮರೀನಾ ಕಡಲತೀರದಲ್ಲಿನ ತಮಿಳು ನಾಯಕನ ಆ ಅಗಲಿಕೆಯ ಅಂತಿಮ ಕ್ಷಣಗಳಷ್ಟೇ ಆಘಾತಕಾರಿಯಾದ ಮತ್ತೊಂದು ಘಟನೆ ಉತ್ತರದ ರಾಜಧಾನಿ ದೆಹಲಿಯಲ್ಲಿ ನಡೆಯಿತು. ಆದರೆ, ಆ ಘಟನೆ ನಮ್ಮ ಬಹುತೇಕ ಟಿವಿ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಕಣ್ಣಿಗೆ ಬೀಳಲೇ ಇಲ್ಲ!

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಬಹುದೊಡ್ಡ ಹಗರಣ ಎಂದೇ ಪ್ರತಿಪಕ್ಷಗಳು ವಾಗ್ದಾಳಿ ನಡೆಸುತ್ತಿರುವ ರಾಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದ ಕುರಿತು ಸ್ವತಃ ಬಿಜೆಪಿಯ ಹಿರಿಯ ನಾಯಕರಾದ ಅರುಣ್ ಶೌರಿ ಮತ್ತು ಯಶವಂತ ಸಿನ್ಹಾ ಗಂಭೀರ ಆರೋಪ ಮಾಡಿದರು. ಸ್ವತಃ ಮೋದಿಯವರನ್ನೇ ಗುರಿಯಾಗಿಸಿಕೊಂಡು, ದೇಶದ ರಕ್ಷಣಾ ಇಲಾಖೆಯ ಇತಿಹಾಸದಲ್ಲೇ ಅತ್ಯಂತ ದೊಡ್ಡದಾದ ಈ ಹಗರಣದ ಹಿಂದೆ ‘ಏಕೈಕ ವ್ಯಕ್ತಿ’ ಕೈವಾಡವಿದೆ ಎಂದು ನೇರ ಆರೋಪ ಮಾಡಿದರು. ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರೊಂದಿಗೆ ಬೋಫೋರ್ಸ್ ಹಗರಣವನ್ನು ಬಯಲಿಗೆಳೆದ ಪತ್ರಕರ್ತ ಅರುಣ್ ಶೌರಿ ಮತ್ತು ವಿದೇಶಾಂಗ, ಹಣಕಾಸು ಸೇರಿದಂತೆ ವಾಜಪೇಯಿ ಅವರ ಸಂಪುಟದಲ್ಲಿ ಪ್ರಮುಖ ಖಾತೆಗಳನ್ನು ನಿರ್ವಹಿಸಿದ ಅನುಭವಿ ನಾಯಕ ಸಿನ್ಹಾ ಮಾಡಿದ ಆ ಆರೋಪಗಳು ನಮ್ಮ ಮಾಧ್ಯಮಗಳಲ್ಲಿ ಜನರ ಕಣ್ಣಿಗೆ ಬೀಳುವಂತೆ ಬಿತ್ತರವಾಗಲೇ ಇಲ್ಲ!

ದೇಶದ ರಕ್ಷಣೆ ಮತ್ತು ಸುರಕ್ಷತೆಗೆ ಸಂಬಂಧಿಸಿದ ಒಂದು ಮಹತ್ವದ ಒಪ್ಪಂದದ ವಿಷಯದಲ್ಲಿ ಇಂತಹ ಗಂಭೀರ ಆರೋಪಗಳು ಕೇಳಿಬಂದಿವೆ. ಅದರಲ್ಲೂ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪತನದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬೋಫೋರ್ಸ್ ಹಗರಣ ಸೇರಿದಂತೆ ಸಾಲು-ಸಾಲು ಹಗರಣಗಳನ್ನು ಬಯಲಿಗೆಳೆಯುವ ಮೂಲಕ ಭಾರತೀಯ ಪತ್ರಿಕೋದ್ಯಮದ ದಂತಕತೆ ಆಗಿರುವ ಅರುಣ್ ಶೌರಿಯಂಥ ವ್ಯಕ್ತಿಯೊಬ್ಬರು ಪತ್ರಿಕಾಗೋಷ್ಠಿಯಲ್ಲಿ ಈ ಘನಗಂಭೀರ ಆರೋಪ ಮಾಡಿದ್ದಾರೆ. “ರಾಫೇಲ್ ಹಗರಣದ ಮುಂದೆ ಬೋಫೋರ್ಸ್ ಏನೇನೂ ಅಲ್ಲ,” ಎಂಬ ಮಾತಿನ ಮೂಲಕವೇ ಅವರು ತಮ್ಮ ಆರೋಪವನ್ನು ಮಂಡಿಸಿದ್ದಾರೆ. “ಇದೊಂದು ಅತ್ಯಂತ ಹೇಯ ಹಗರಣ. ಅಪರಾಧ ಕೃತ್ಯ,” ಎಂದೂ ಅವರು ಹಗರಣವನ್ನು ವ್ಯಾಖ್ಯಾನಿಸಿದ್ದಾರೆ. "ಹಗರಣವನ್ನು ಮುಚ್ಚಿಹಾಕಲು ಸರ್ಕಾರ ಫ್ರಾನ್ಸ್‌ ದೇಶದೊಂದಿಗಿನ ಗೌಪ್ಯತೆಯ ಒಪ್ಪಂದ ನೆಪ ಹೇಳುತ್ತಿದೆ. ಆದರೆ, ವಾಸ್ತವವಾಗಿ ಒಪ್ಪಂದದ ವಿವರಗಳನ್ನು ಬಹಿರಂಗಪಡಿಸದಂತೆ ನಿರ್ಬಂಧಿಸುವ ಯಾವುದೇ ನಿಯಮಗಳೂ ಒಪ್ಪಂದದಲ್ಲಿ ಇಲ್ಲ,” ಎನ್ನುವ ಮೂಲಕ ಮೋದಿ ಅವರ ಸರ್ಕಾರದ ಪ್ರಯತ್ನಗಳನ್ನು ನಗೆಪಾಟಲಿಗೆ ಈಡುಮಾಡಿದ್ದಾರೆ.

ಆದರೆ, ಇಂಗ್ಲಿಷ್ ಮತ್ತು ಕನ್ನಡವೂ ಸೇರಿ ಪ್ರಾದೇಶಿಕ ಭಾಷೆಗಳ ಬಹುತೇಕ ಎಲೆಕ್ಟ್ರಾನಿಕ್ ಮತ್ತು ಮುದ್ರಣ ಮಾಧ್ಯಮಗಳಲ್ಲಿ ಇಂಥದ್ದೊಂದು ಮಹತ್ವದ ಸುದ್ದಿ ಬಹುತೇಕ ಕಸದಬುಟ್ಟಿ ಸೇರಿದೆ. ಕನ್ನಡದ ಮಟ್ಟಿಗೆ ಹೇಳುವುದಾದರೆ, ಬಹುತೇಕ ಯಾವ ಸುದ್ದಿವಾಹಿನಿಗಳಲ್ಲೂ ಈ ಪತ್ರಿಕಾಗೋಷ್ಠಿಯ ವರದಿ ಪ್ರಸಾರವಾದ ಸುಳಿವಿಲ್ಲ. ಇನ್ನು, ಮುದ್ರಣ ಮಾಧ್ಯಮದ ಪೈಕಿ ‘ವಿಜಯ ಕರ್ನಾಟಕ’ ಪತ್ರಿಕೆಯನ್ನು ಹೊರತುಪಡಿಸಿ ಉಳಿದ ಯಾವ ಪ್ರಮುಖ ಪತ್ರಿಕೆಯಲ್ಲೂ ಒಂದೇ ಒಂದು ಸಾಲು ಸುದ್ದಿ ಕೂಡ ಇಲ್ಲ! ಅತ್ಯಂತ ವಿಶ್ವಾಸಾರ್ಹ ಪತ್ರಿಕೆ ಎಂದುಕೊಳ್ಳುವ ‘ಪ್ರಜಾವಾಣಿ’ಯ ಹತ್ತೂವರೆ ಪುಟಗಳ ಪೈಕಿ ಯಾವ ಪುಟದಲ್ಲೂ ಒಂದು ಕಾಲಂ ಸುದ್ದಿಯಾಗಿ ಕೂಡ ದೇಶದ ಸುರಕ್ಷತೆ ಮತ್ತು ಸಾರ್ವಜನಿಕ ಹಣದ ವಂಚನೆ ಪ್ರಶ್ನೆಯನ್ನು ಒಳಗೊಂಡ ಈ ಘಟನೆ ಸ್ಥಾನ ಪಡೆದಿಲ್ಲ!

ಇನ್ನು, ಕನ್ನಡಿಗರ ಧ್ವನಿ ಎಂದುಕೊಂಡಿರುವ ‘ವಿಜಯವಾಣಿ’, ‘ನೇರ, ದಿಟ್ಟ, ನಿರಂತರ’ ಎಂದುಕೊಳ್ಳುವ ‘ಕನ್ನಡಪ್ರಭ’, ಜನಮನದ ಜೀವನಾಡಿ ಎನ್ನುವ ‘ಉದಯವಾಣಿ’ ಪತ್ರಿಕೆಗಳಲ್ಲಿ ರಾಫೇಲ್ ಒಪ್ಪಂದದ ಕುರಿತ ಶೌರಿ, ಸಿನ್ಹಾ ಹಾಗೂ ಭೂಷಣ್ ಅವರ ಪತ್ರಿಕಾಗೋಷ್ಠಿ ಸುದ್ದಿಯೇ ಆಗಿಲ್ಲ. ಕನ್ನಡಿಗರ ಹೆಮ್ಮೆ ಎಂದುಕೊಳ್ಳುವ ‘ವಿಜಯ ಕರ್ನಾಟಕ’ದ ಈ ಸುದ್ದಿಗೆ ಸ್ಥಾನ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಆದರೆ, ಆ ಸುದ್ದಿ ಎಂಟನೇ ಪುಟದ ಕೊನೆಯ ಮೂಲೆಯಲ್ಲಿ ಮೂರು ಕಾಲಂನಷ್ಟು ಪ್ರಕಟವಾಗಿದೆ ಮತ್ತು ಸುದ್ದಿ ಪತ್ರಿಕಾಗೋ‍‍‍‍‍‍ಷ್ಠಿಯ ವರದಿಯ ಬದಲಾಗಿ, ಸಂಕ್ಷಿಪ್ತ ಸಾರವಾಗಿ ಪ್ರಕಟವಾಗಿದೆ ಎಂದರೆ ತಪ್ಪಲ್ಲ.

ಕನ್ನಡದ ಎಲ್ಲ ಪ್ರಮುಖ ಪತ್ರಿಕೆಗಳಲ್ಲಿ ಈ ಸುದ್ದಿಯನ್ನು ಹೀಗೆ ಕೈಬಿಟ್ಟಿರುವುದು ನಮ್ಮ ಮಾಧ್ಯಮಗಳು ಎಷ್ಟರಮಟ್ಟಿಗೆ ಸುದ್ದಿಗೆ ಬದ್ಧವಾಗಿವೆ ಎಂಬುದಕ್ಕೆ ಒಂದು ಅತ್ಯುತ್ತಮ ನಿದರ್ಶನ. ಇದೇ ಪ್ರಶ್ನೆಯನ್ನು ಇಟ್ಟುಕೊಂಡು ಕನ್ನಡ ಪತ್ರಿಕೆಗಳ ಈ ವರಸೆಯ ಬಗ್ಗೆ ಬೆಳಗ್ಗೆಯಿಂದಲೂ ಫೇಸ್ಬುಕ್, ವಾಟ್ಸಪ್, ಟ್ವಿಟರ್‌ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ವ್ಯಕ್ತವಾಗುತ್ತಿದೆ. ಪ್ರಮುಖವಾಗಿ, ಕಾಂಗ್ರೆಸ್ ನಾಯಕ ದಿವಂಗತ ರಾಜೀವ್ ಗಾಂಧಿ ವಿರುದ್ಧದ ಬೋಫೋರ್ಸ್, ಆ ಬಳಿಕದ ಮನಮೋಹನ್ ಸಿಂಗ್ ಸರ್ಕಾರದ ೨ಜಿ ಸ್ಪೆಕ್ಟ್ರಂ, ಲಾಲೂ ಪ್ರಸಾದ್ ಯಾದವ್ ಮೇವು ಹಗರಣಗಳ ವಿಷಯದಲ್ಲಿ ಈ ಮಾಧ್ಯಮಗಳು ಹೇಗೆ ನಡೆದುಕೊಂಡಿದ್ದವು? ಅಂದಿನ ಆ ಉತ್ಸಾಹ ಇಂದು ಯಾಕೆ ಉಳಿದಿಲ್ಲ ಎಂಬ ಪ್ರಶ್ನೆಗಳು ಕೂಡ ಜಾಲತಾಣದಲ್ಲಿ ಚರ್ಚೆಗೊಳಗಾಗಿವೆ.

ಇನ್ನು, ಇಂಗ್ಲಿಷ್ ಮಾಧ್ಯಮಗಳು ಕೂಡ ರಾಫೇಲ್‌ ಹಗರಣದ ಕುರಿತ ಪ್ರಮುಖರ ಪತ್ರಿಕಾಗೋ‍ಷ್ಠಿಯ ಸುದ್ದಿಯನ್ನು ಹತ್ತಿಕ್ಕುವಲ್ಲಿ ಹಿಂದೆ ಬಿದ್ದಿಲ್ಲ. ಕೊಲ್ಕತ್ತಾ ಮೂಲದ ‘ದಿ ಟೆಲಿಗ್ರಾಫ್’ ಪತ್ರಿಕೆಯನ್ನು ಹೊರತುಪಡಿಸಿ ಇನ್ನಾವ ಇಂಗ್ಲಿಷ್ ಪತ್ರಿಕೆಗಳೂ ಈ ಸುದ್ದಿಯನ್ನು ಪ್ರಮುಖವಾಗಿ ತೆಗೆದುಕೊಂಡಿಲ್ಲ. ಟೆಲಿಗ್ರಾಫ್ ಈ ಸುದ್ದಿಯನ್ನು ಮುಖಪುಟದ ಮುಖ್ಯ ಸುದ್ದಿಯಾಗಿ ತೆಗೆದುಕೊಂಡಿದೆ. “ರಾಫೇಲ್ ಡೀಲ್ ಎಕ್ಸ್‌ಪ್ಲೋಡ್ಸ್ ಆನ್ ‘ಒನ್ ಪರ್ಸನ್” ಎಂಬ ತಲೆಬರಹದಡಿ ಏಳು ಕಾಲಂ ಸುದ್ದಿ ಮಾಡಿದೆ. ಇಡೀ ದೇಶದಲ್ಲಿ ಈ ಸುದ್ದಿಗೆ ಈ ಮಟ್ಟಿಗಿನ ಆದ್ಯತೆ ನೀಡಿರುವ ಏಕೈಕ ಪತ್ರಿಕೆ ಟೆಲಿಗ್ರಾಫ್ ಮಾತ್ರ.

ಉಳಿದಂತೆ, ‘ದಿ ಹಿಂದೂ’ನಲ್ಲಿ ಈ ಸುದ್ದಿ ೧೦ನೇ ಪುಟದ ಕೆಳತುದಿಯಲ್ಲಿ ೬ ಕಾಲಂ ಪ್ರಕಟವಾಗಿದೆಯಾದರೂ; ಸುದ್ದಿಯ ವಿವರಗಳಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಹಿರಿಯ ನಾಯಕರ ಆರೋಪಕ್ಕಿಂತ ಮೂರು ಪಟ್ಟು ಹೆಚ್ಚು ಆ ಆರೋಪಗಳಿಗೆ ರಿಲಯನ್ಸ್ ಕಂಪನಿಯ ಸ್ಪಷ್ಟನೆಯೇ ತುಂಬಿದೆ! ಇನ್ನು, ಜನಪ್ರಿಯ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಈ ಸುದ್ದಿಗೆ ಜಾಗವೇ ಸಿಕ್ಕಿಲ್ಲ. ಹಾಗೇ, ‘ಹಿಂದೂಸ್ತಾನ್ ಟೈಮ್ಸ್’‌ನಲ್ಲಿ ಕೂಡ ಒಂದು ಸಾಲೂ ಪ್ರಕಟವಾಗಿಲ್ಲ. ಉತ್ತರ ಭಾರತದ ‘ದಿ ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ಎಂಟನೇ ಪುಟದಲ್ಲಿ ಮೂರು ಕಾಲಂ ಸುದ್ದಿಯಾಗಿದ್ದರೆ, ದಕ್ಷಿಣದ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ನಲ್ಲಿ ೧೧ನೇ ಪುಟದಲ್ಲಿ ಕೆಳಗಿನ ಭಾಗದಲ್ಲಿ ಐದು ಕಾಲಂ ಸುದ್ದಿಯಾಗಿ ಪ್ರಕಟವಾಗಿದೆ.

ಕಳೆದ ಒಂದು ವರ್ಷದಿಂದ ರಾಜಕೀಯವಾಗಿ ಸಾಕಷ್ಟು ಚರ್ಚೆಗೊಳಗಾಗಿರುವ ಮತ್ತು ದೇಶದ ರಕ್ಷಣಾ ಖರೀದಿ ಪ್ರಕ್ರಿಯೆ ಹಾಗೂ ಆ ಕಾರಣದಿಂದಾಗಿ ಸುರಕ್ಷತೆಯ ವಿಷಯದಲ್ಲಿ ಗಂಭೀರ ಪ್ರಶ್ನೆಗಳನ್ನು ಎತ್ತಿರುವ ರಾಫೇಲ್ ಹಗರಣದ ಕುರಿತು ಈವರೆಗೆ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಹಲವು ಪಕ್ಷಗಳು ಆರೋಪಗಳನ್ನು ಮಾಡಿದ್ದವು. ಕೆಲವು ದಿನಗಳ ಹಿಂದೆ, ಕೇಂದ್ರ ಸರ್ಕಾರದ ವಿರುದ್ಧದ ಪ್ರತಿಪಕ್ಷಗಳ ಅವಿಶ್ವಾಸ ಗೊತ್ತುವಳಿ ಮೇಲಿನ ಚರ್ಚೆಯ ವೇಳೆ ಲೋಕಸಭೆಯಲ್ಲಿಯೂ ಈ ಹಗರಣದ ಭಾರಿ ಸದ್ದು ಮಾಡಿತ್ತು.

ಸುಮಾರು 59 ಸಾವಿರ ಕೋಟಿ ರು. ಮೊತ್ತದ ಈ ಒಪ್ಪಂದದಲ್ಲಿ, ಹಿಂದಿನ ಒಪ್ಪಂದಕ್ಕಿಂತ ಅಧಿಕವಾಗಿ ಸುಮಾರು ಸುಮಾರು ೩೬ ಸಾವಿರ ಕೋಟಿ ರು. ಹೆಚ್ಚುವರಿ ಪಾವತಿಗೆ ಒಪ್ಪಿಗೆ ನೀಡಲಾಗಿದೆ. ಅಂದರೆ, ಸುಮಾರು ೩೬,೦೦೦ ಕೋಟಿ ರು. ಅವ್ಯವಹಾರದ ಶಂಕೆ ಇದೆ. ಅದರಲ್ಲೂ, ರಕ್ಷಣಾ ಇಲಾಖೆಯನ್ನಾಗಲೀ, ರಕ್ಷಣಾ ಸಚಿವರನ್ನಾಗಲೀ, ರಕ್ಷಣಾ ಖರೀದಿಗೆ ಸಂಬಂಧಪಟ್ಟ ಸಂಸತ್ತಿನ ವಿಶೇಷ ಸಮಿತಿಯ ಗಮನಕ್ಕಾಗಲೀ ತರದೆ, ಪ್ರಧಾನಿ ಮೋದಿಯವರೇ ಏಕಾಂಗಿಯಾಗಿ ಈ ಒಪ್ಪಂದವನ್ನು ಮಾಡಿಕೊಂಡಿದ್ದಾರೆ. ಅದರ ಹಿಂದೆ ಅವರ ಆಪ್ತ ಕಾರ್ಪೊರೇಟ್ ಸಂಸ್ಥೆಯೊಂದಕ್ಕೆ ಲಾಭ ಮಾಡಿಕೊಡುವ ಉದ್ದೇಶ ಕೂಡ ಇದೆ ಎಂಬ ಆರೋಪಗಳು ಕೇಳಿಬಂದಿದ್ದವು.

ಆದರೆ, ಅಂತಹ ಆರೋಪಗಳು ಕೇಳಿಬಂದಾಗಲೆಲ್ಲ, “ದೇಶದ ಸುರಕ್ಷತೆ ಮತ್ತು ಭದ್ರತೆಯ ವಿಷಯದಲ್ಲಿ ಪ್ರತಿಪಕ್ಷಗಳು ರಾಜಕೀಯ ಮಾಡುತ್ತಿವೆ. ದೇಶದ ಬಗೆಗಿನ ತಮ್ಮ ಕಾಳಜಿ ಎಷ್ಟಿದೆ ಎಂಬುದನ್ನು ತೋರಿಸುತ್ತಿವೆ,” ಎಂಬ ಮಾತುಗಳ ಮೂಲಕ ದೇಶಭಕ್ತಿಯ ಪ್ರಶ್ನೆಯನ್ನು ಎತ್ತಿ ಟೀಕಾಕಾರರ ಬಾಯಿ ಮುಚ್ಚಿಸುವ ಪ್ರಯತ್ನ ನಡೆಸಲಾಗುತ್ತಿತ್ತು. ಆದರೆ, ಇದೀಗ ಆಡಳಿತಾರೂಢ ಬಿಜೆಪಿಯ ಹಿರಿಯ ನಾಯಕರೇ, ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ, ತಮ್ಮದೇ ಪಕ್ಷದ ಪ್ರಧಾನಿಯ ವಿರುದ್ಧ ಬಹಿರಂಗವಾಗಿ ಸಾರ್ವಜನಿಕ ಪತ್ರಿಕಾಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ್ದಾರೆ. “ಇಡೀ ಹಗರಣದ ಕುರಿತು ಸಿಎಜಿ ತನಿಖೆಯಾಗಬೇಕು. ಮುಂದಿನ ಮೂರು ತಿಂಗಳ ಒಳಗೆ ತನಿಖೆ ನಡೆಸಿ, ಸಿಎಜಿ ತನ್ನ ವರದಿಯನ್ನು ದೇಶದ ಜನರ ಮುಂದಿಡಬೇಕು. ಆ ಮೂಲಕ ಆಗಿರುವ ಬಹುಕೋಟಿ ವಂಚನೆಯ ಪರಮ ಅಪರಾಧವನ್ನು ಬಯಲಿಗೆಳೆಯಬೇಕು,” ಎಂದು ಅರುಣ್ ಶೌರಿ, ಯಶವಂತ್ ಸಿನ್ಹಾ ಆಗ್ರಹಿಸಿದ್ದಾರೆ. “ಪ್ರಮುಖ ರಾಜ್ಯಗಳ ವಿಧಾನಸಭಾ ಚುನಾವಣೆ ಹಾಗೂ ೨೦೧೯ರ ಲೋಕಸಭಾ ಚುನಾವಣೆಗಳಲ್ಲಿ ಈ ಹಗರಣವು ಪ್ರಧಾನಿ ಮೋದಿ ಪಾಲಿನ ಬೋಫೋರ್ಸ್ ಆಗಲಿದೆ,” ಎಂಬ ವಿಶ್ಲೇಷಣೆಗಳೂ ಕೇಳಿಬರುತ್ತಿವೆ.

ಇದನ್ನೂ ಓದಿ : ರಫೇಲ್‌ ಯುದ್ಧ ವಿಮಾನ ಖರೀದಿ ಒಪ್ಪಂದ; ಸಿಎಜಿ ತನಿಖೆಗೆ ಸಿನ್ಹಾ, ಶೌರಿ ಆಗ್ರಹ

ಇಷ್ಟೆಲ್ಲ ಭ್ರಷ್ಟಾಚಾರ, ಜನರ ತೆರಿಗೆ ಹಣದ ವಂಚನೆಯ ಶಂಕೆಯೊಂದಿಗೆ ರಾಜಕೀಯವಾಗಿಯೂ ಮಹತ್ವದ ಈ ಹಗರಣದ ಕುರಿತ ಹಿರಿಯ ನಾಯಕರ ಮತ್ತು ಹಿರಿಯ ಪತ್ರಕರ್ತರ ಆರೋಪದ ಸುದ್ದಿ ಮಾತ್ರ ನಮ್ಮ ಮಾಧ್ಯಮಗಳಿಗೆ ಆದ್ಯತೆಯ ಸಂಗತಿಯೇ ಅಲ್ಲ ಎಂಬಂತಾಗಿರುವುದು ಚೋದ್ಯದ ಸಂಗತಿ. ಮಾಧ್ಯಮಗಳನ್ನು ಈ ಮಟ್ಟಿಗಿನ ಮಂಪರಿಗೆ ತಳ್ಳಿರುವ ಶಕ್ತಿಯಾದರೂ ಯಾವುದು ಎಂಬುದು ಸದ್ಯ ಓದುಗ ದೊರೆಗಳು ಅಚ್ಚರಿಯಿಂದ ಕೇಳಿಕೊಳ್ಳುತ್ತಿರುವ ಪ್ರಶ್ನೆ. ಆ ಪ್ರಶ್ನೆಯೇ ಮಾಧ್ಯಮದ ವಿಶ್ವಾಸಾರ್ಹತೆಗೂ ಉತ್ತರ ಹುಡುಕುತ್ತಿದೆ ಎಂಬುದು ಕುಚೋದ್ಯವೇನಲ್ಲ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More