ಮುಕ್ತ ಪತ್ರಿಕೋದ್ಯಮದ ಮೇಲೆ ಸರ್ಕಾರದ ಸವಾರಿ ಖಂಡಿಸಿದ ಎಡಿಟರ್ಸ್ ಗಿಲ್ಡ್

ರಾಜಕೀಯ ಹಾಗೂ ವ್ಯಾವಹಾರಿಕ ಹಿತಾಸಕ್ತಿಯಿಂದ ಕೆಲ ಮಾಧ್ಯಮ ಸಂಸ್ಥೆಗಳು ಸ್ವತಂತ್ರ ಪತ್ರಿಕೋದ್ಯಮವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಬಗ್ಗೆ ಭಾರತದ ಸಂಪಾದಕರ ಒಕ್ಕೂಟ ತೀವ್ರ ಅಸಮಾಧಾನ ವ್ಯಕ್ತಡಿಸಿದೆ. ಈ ಕುರಿತ ಎಡಿಟರ್ಸ್ ಗಿಲ್ಡ್ ಹೇಳಿಕೆಯ ಪೂರ್ಣಪಾಠ ಇಲ್ಲಿದೆ

ಮುಕ್ತ ಹಾಗೂ ಸ್ವತಂತ್ರ ಪತ್ರಿಕೋದ್ಯಮವನ್ನು ನಡೆಸುವ ಹಕ್ಕನ್ನು ಕೆಲವು ಶಕ್ತಿಗಳು ಒಳಗೊಳಗೇ ಶಿಥಿಲಗೊಳಿಸಲು ಯತ್ನಿಸುತ್ತಿರುವುದನ್ನು ‘ದಿ ಎಡಿಟರ್ಸ್ ಗಿಲ್ಡ್ ಆಫ್ ಇಂಡಿಯಾ’ ತೀವ್ರವಾಗಿ ಖಂಡಿಸುತ್ತದೆ. ರಾಜಕೀಯ ವ್ಯವಸ್ಥೆಯ ಗೌಪ್ಯ ಹಾಗೂ ಬಹಿರಂಗ ಒತ್ತಡಗಳನ್ನು ತಡೆದುಕೊಳ್ಳಲಾಗದ ಕೆಲವು ಮಾಧ್ಯಮ ಮಾಲೀಕರ ಅಸಮರ್ಥತೆಯಿಂದಾಗಿ ಹಾಗೂ ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸುವ ಟಿವಿ ಸುದ್ದಿಗಳನ್ನು ತಡೆಯುವ ಇಲ್ಲವೇ ಅಡ್ಡಿಪಡಿಸುವ ಪ್ರಯತ್ನಗಳನ್ನು ಪದೇಪದೇ ನಡೆಸುವ ಮೂಲಕ ಈ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆ ಉಂಟಾಗುತ್ತಿದೆ.

ಕಳೆದ ಕೆಲವು ದಿನಗಳಲ್ಲಿ ಸುದ್ದಿವಾಹಿನಿಗಳ ಇಬ್ಬರು ಹಿರಿಯ ಪತ್ರಕರ್ತರು ಬಹಿರಂಗ ಹೇಳಿಕೆ ನೀಡಿ ಹೊರಬಂದಿದ್ದಾರೆ. ತಾವು ಮಾಡಿದ ವರದಿಗಳಿಗೆ ಕತ್ತರಿ ಹಾಕುವ ಮೂಲಕ ಇಲ್ಲವೇ ಅವುಗಳ ಧ್ವನಿಯನ್ನು ಕುಗ್ಗಿಸುವ ಮೂಲಕ ಸರ್ಕಾರದ ಕುರಿತ ಟೀಕೆಯನ್ನು ಮಿತಿಗೊಳಿಸುತ್ತಿದ್ದ ತಮ್ಮ ಮಾಲೀಕರ ಪ್ರಯತ್ನದಿಂದಾಗಿ ರಾಜಿನಾಮೆ ನೀಡಿ ಹೊರಬರುವ ದಾರಿಯ ವಿನಾ ಬೇರೆ ಆಯ್ಕೆ ಇಲ್ಲದಂತಾಗಿದೆ ಎಂದೂ ಅವರು ತಿಳಿಸಿದ್ದಾರೆ.

ಸರ್ಕಾರವು ನೇರವಾದ ಒತ್ತಡದ ಮೂಲಕವೋ ಅಥವಾ ಮಾಧ್ಯಮಗಳ ಮಾಲೀಕರ ಮೂಲಕವೋ ಪತ್ರಕರ್ತರ ಮುಕ್ತ ಹಾಗೂ ಸ್ವತಂತ್ರ ಕಾರ್ಯನಿರ್ವಹಣೆಗೆ ಅಡ್ಡಿಪಡಿಸುವ ಎಲ್ಲ ವಿಧದ ಪ್ರಯತ್ನಗಳನ್ನು ಗಿಲ್ಡ್ ಖಂಡಿಸುತ್ತದೆ. ಅಲ್ಲದೆ, ಮಾಧ್ಯಮ ಸಂಸ್ಥೆಗಳ ಮಾಲೀಕರಿಗೆ ಎಚ್ಚರಿಸುವುದೇನೆಂದರೆ, ಸಾಂಸ್ಥಿಕ ಸಾಮರ್ಥ್ಯ ಹಾಗೂ ಘನತೆಗಳು ಸಂಪಾದಕೀಯ ಸ್ವಾತಂತ್ರ್ಯಕ್ಕೆ ನೇರವಾಗಿ ಸಂಬಂಧಿದ್ದಾಗಿದೆ. ಇವಕ್ಕೆ ಧಕ್ಕೆ ತರುವುದರಿಂದ ಸಂಪಾದಕೀಯ ಸ್ವಾತಂತ್ರ್ಯವನ್ನು ಮೊಟಕುಗೊಳಿಸುತ್ತದೆ. ಸರ್ಕಾರ ಒಡ್ಡುವ ಒತ್ತಡಗಳಿಗೆ ಮಾಧ್ಯಮ ಮಾಲೀಕರು ಯಾವ ಕಾರಣಕ್ಕೂ ತಲೆಬಾಗಬಾರದು ಎಂದು ಎಡಿಟರ್ಸ್ ಗಿಲ್ಡ್ ಈ ಮೂಲಕ ಒತ್ತಾಯಿಸುತ್ತದೆ. ಸಂಸ್ಥೆಗಳ ಮಾಲೀಕರು ಮತ್ತು ಸಂಸ್ಥೆಗಳಲ್ಲಿ ಕೆಲಸ ಮಾಡುವ ಪತ್ರಕರ್ತರು ಪತ್ರಿಕಾ ಸ್ವಾತಂತ್ರ್ಯದಲ್ಲಿ ಹಾಗೂ ಒತ್ತಡಗಳನ್ನು ಪ್ರತಿರೋಧಿಸುವಲ್ಲಿ ಸಮಾನ ಹಿತಾಸಕ್ತಿ ಹೊಂದಿದ್ದಾರೆ ಎಂದು ತಿಳಿಸಬಯಸುತ್ತದೆ.

ಸರ್ಕಾರವನ್ನು ಟೀಕಿಸುವ ಟಿವಿ ಕಾರ್ಯಕ್ರಮಗಳ ಸಿಗ್ನಲ್‍ಗಳಿಗೆ ತಡೆಯೊಡ್ಡುವ ಅಥವಾ ಸಂಪೂರ್ಣವಾಗಿ ಬ್ಲಾಕ್ ಮಾಡುವ ಕೆಲಸವು ಬಹುತೇಕ ಜಾರ್ಜ್ ಆರ್ವೆಲ್ ಹೇಳಿದ್ದ ರೀತಿಯಲ್ಲಿಯೇ ನಡೆಯುತ್ತಿರುವುದಂತೂ ಇನ್ನೂ ಆತಂಕದ ವಿಷಯವಾಗಿದೆ. ಟಿವಿಗಳ ಈ ಪ್ರಸಾರ ಕಾರ್ಯದಲ್ಲಿ ಸರ್ಕಾರ ಮೂಗು ತೂರಿಸುವ ಬಗ್ಗೆ ಟಿವಿ ವಾಹಿನಿಯೊಂದರ ಸಿಬ್ಬಂದಿ ಗಿಲ್ಡ್‌ಗೆ ಅದರ ಸ್ಕ್ರೀನ್‍ಶಾಟ್‍ಗಳನ್ನೂ ಮತ್ತು ಅದರ ವಿವರಗಳನ್ನೂ ಕಳಿಸಿದ್ದಾರೆ. ಅಧಿಕಾರ ವ್ಯವಸ್ಥೆಯ ಇಂತಹ ಪ್ರಯತ್ನಗಳು ಮಾಧ್ಯಮ ಸ್ವಾತಂತ್ರ್ಯದ ಮೂಲಕ್ಕೇ ಪೆಟ್ಟು ನೀಡುವುದಲ್ಲದೆ, ಆ ಮೂಲಕ ನಮ್ಮ ಪ್ರಜಾಪ್ರಭುತ್ವದ ತಳಹದಿಗೇ ಪೆಟ್ಟು ನೀಡುವ ಕೆಲಸವಾಗಿದೆ. ಮಾಹಿತಿ ಪಡೆದುಕೊಳ್ಳುವ ಜನತೆಯ ಹಕ್ಕನ್ನು ಮೊಟಕುಗೊಳಿಸುವ ಜೊತೆಗೆ ಸರ್ಕಾರಗಳಿಗೆ ಉತ್ತರದಾಯಿತ್ವವೇ ಇಲ್ಲವಾಗಿಸುವ ಪ್ರಯತ್ನವೂ ಇದಾಗಿದೆ. ‘ಸ್ನೇಹಿಯಲ್ಲದ’ ಸುದ್ದಿವಾಹಿನಿಗಳಿಗೆ ಶಿಕ್ಷೆ ವಿಧಿಸುವ ಹಾಗೂ ತಮಗೆ ಅನುಕೂಲ ಎನಿಸದ ಧ್ವನಿಗಳನ್ನು ಹತ್ತಿಕ್ಕುವ ನಿರ್ಲಜ್ಜ ಪ್ರಯತ್ನವೂ ಆಗಿದೆ.

ಸುದ್ದಿವಾಹಿನಿಗಳ ಕಾರ್ಯಕ್ರಮಗಳ ಸಿಗ್ನಲ್‍ಗಳಿಗೆ ಅಡ್ಡಿಪಡಿಸುವ ಈ ಘಟನೆಗಳನ್ನು ಪರಿಶೀಲನೆಗೊಳಪಡಿಸಿ, ತನಿಖೆ ನಡೆಸಿ, ಹೇಗೆ ಮತ್ತು ಎಂತಹ ಸನ್ನಿವೇಶಗಳಿಗೊಳಪಟ್ಟು ಈ ಅತಿ ಕೆಟ್ಟ ಸ್ವರೂಪದ ಅತಿಕ್ರಮಗಳು ನಡೆದಿವೆ ಎಂಬುದಕ್ಕೆ ವಿವರಣೆ ಒದಗಿಸಬೇಕೆಂದು ಗಿಲ್ಡ್ ಸರ್ಕಾರವನ್ನು ಆಗ್ರಹಪಡಿಸುತ್ತದೆ. ಮಾಧ್ಯಮ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಅಂತಹ ಮಹಾಪಾತಕದ ಕೃತ್ಯಕ್ಕೆ ಕಾರಣರಾದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದೂ ಆಗ್ರಹಪಡಿಸುತ್ತದೆ. ಹಾಗೆಯೇ, ಸರ್ಕಾರವು ತಾನು ಪ್ರತ್ಯಕ್ಷವಾಗಿಯೇ ಆಗಲೀ ಆಥವಾ ಪರೋಕ್ಷ ವಿಧಾನಗಳ ಮೂಲಕವಾಗಲೀ, ತನ್ನ ಏಜೆನ್ಸಿಗಳ ಮೂಲಕವಾಗಲೀ, ಈ ಕೃತ್ಯದಲ್ಲಿ ತಾನು ಭಾಗಿಯಾಗಿಲ್ಲ ಎಂಬುದನ್ನು ದೇಶಕ್ಕೆ ಖಾತ್ರಿಪಡಿಸಬೇಕು. ಒಂದು ವೇಳೆ, ತಾನು ಈ ಕೆಲಸ ಮಾಡಿಲ್ಲವೆಂದಾದರೆ, ಇದನ್ನು ಎಸಗಿದ ದುಷ್ಕರ್ಮಿಗಳ ಮೇಲೆ ಕೇಸ್ ದಾಖಲಿಸಿ ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತದೆ. ಸುದ್ದಿ ಪ್ರಸಾರ ಸ್ವಾತಂತ್ರ್ಯಕ್ಕೆ ತಡೆಯೊಡ್ಡುವಂತಿಲ್ಲ ಎಂಬುದನ್ನೂ ಈ ಸಂದರ್ಭದಲ್ಲಿ ಗಿಲ್ಡ್ ತಿಳಿಸಲಿಚ್ಛಿಸುತ್ತದೆ.

ಇದನ್ನೂ ಓದಿ : ಅಧಿಕಾರಸ್ಥರ ಪುಂಗಿನಾದಕ್ಕೆ ಮರುಳಾಗುವ ಮಾಧ್ಯಮ ಸೋಂಕು ಮತ್ತೆ ಪ್ರತ್ಯಕ್ಷ!
  • ಸರ್ಕಾರ ಅದರಲ್ಲೂ ರಾಜಕೀಯ ವರ್ಗವು, ಪತ್ರಕರ್ತರ ಒಳಪ್ರವೇಶದ ಆಯ್ದ ನಿರಾಕರಣೆಯನ್ನು ಒಂದು ಆಯುಧವಾಗಿ ಬಳಸಿಕೊಳ್ಳುವ ಪ್ರವೃತ್ತಿಯನ್ನೂ ಸಹ ಗಿಲ್ಡ್ ಖಂಡಿಸುತ್ತದೆ. ಸಾರ್ವಜನಿಕ ಬದುಕಿನಲ್ಲಿರುವವರನ್ನು ಅಥವಾ ಆಧಿಕಾರದ ಹುದ್ದೆಯಲ್ಲಿರುವವರನ್ನು ಪತ್ರಿಕಾಗೋಷ್ಠಿಗಳಂಥ ಸಾರ್ವಜನಿಕ ವೇದಿಕೆಗಳಲ್ಲಿ ಪ್ರಶ್ನಿಸಲು ಕೆಲವೇ ಅವಕಾಶಗಳಿರುವಾಗ ಪ್ರಶ್ನಿಸುವುದು ಎಲ್ಲ ನಾಗರಿಕರ ಪರವಾಗಿ ಪತ್ರಕರ್ತರ ಪ್ರಜಾತಾಂತ್ರಿಕ ಹಕ್ಕಾಗಿದೆ. ಹೀಗಿರುವಾಗ, ಇಂತಹ ಪ್ರವೃತ್ತಿ ತೋರುವುದು ಇನ್ನೂ ಪರಿಸ್ಥಿತಿಯನ್ನು ಹದಗೆಡಿಸುತ್ತದೆ. ಪತ್ರಕರ್ತರ ಈ ಹಕ್ಕನ್ನೇ ನಿರಾಕರಿಸುವುದಾಗಲೀ, ನಿಮ್ಮ ಬಗ್ಗೆ ವಿಮರ್ಶಾ ಭಾವನೆಯುಳ್ಳವರನ್ನು ದೂರ ಇಡುವ ನಡವಳಿಕೆಯಾಗಲೀ, ಒಂದು ಪ್ರಜಾಪ್ರಭುತ್ವದಲ್ಲಿ ತೀರಾ ಅನಾರೋಗ್ಯಕರ ಎನಿಸಿಕೊಳ್ಳುತ್ತವೆ. ದುರದೃಷ್ಟವಶಾತ್, ಇದರಿಂದ ಏಕಮುಖದ ವರದಿಗಾರಿಕೆಗೂ ದಾರಿಯಾಗುತ್ತದೆ. ಇಂತಹ ಅನಾರೋಗ್ಯಕರ ಹಾಗೂ ಅಸಮಾನ ನಡವಳಿಕೆಗಳು ಕೂಡಲೇ ನಿಲ್ಲಬೇಕು.
  • ಮಾಧ್ಯಮ ಸ್ವಾತಂತ್ರ್ಯಕ್ಕೆ ಸಂಬಂಧಿಸಿದಂತೆ, ಪ್ರಮುಖ ರಕ್ಷಣಾ ವ್ಯವಹಾರದ ವಿಷಯವೊಂದರಲ್ಲಿ ಕೆಲವು ಪತ್ರಿಕೆಗಳು ವರದಿ ಮಾಡುವುದನ್ನು ತಡೆಯಲು ಒಂದು ದೊಡ್ಡ ಕಾರ್ಪೊರೆಟ್ ಕಂಪನಿಯು, 'ಸೀಸ್ ಅಂಡ್ ಡೆಸಿಸ್ಟ್' ನೋಟಿಸ್ ಸಲ್ಲಿಸಿರುವುದನ್ನು ಗಿಲ್ಡ್ ಖಂಡಿಸುತ್ತದೆ. ಕಂಪನಿಯು ಈ ನೋಟಿಸ್‌ ಹಿಂಪಡೆಯಬೇಕು. ಹಿಂಪಡೆಯದಿದ್ದರೆ ಅದಕ್ಕೆ ಪ್ರತಿರೋಧವೊಡ್ಡಲಾಗುತ್ತದೆ. ಅಗತ್ಯಬಿದ್ದರೆ, ನ್ಯಾಯಾಲಯಗಳು ಪತ್ರಕರ್ತರ ತನಿಖೆ ನಡೆಸುವ ಹಾಗೂ ಪ್ರಶ್ನೆ ಎತ್ತುವ ಹಕ್ಕನ್ನು ಪರಿಶೀಲಿಸಲಿ.
  • ಪ್ರತಿಷ್ಠಿತ ಛಾಯಾಗ್ರಾಹಕ ಆಗೂ ಜಾಗೃತಿದಾರ ಶಾಹಿದುಲ್ ಆಲಂನನ್ನು ಬಾಂಗ್ಲಾದೇಶದ ಢಾಕಾದಲ್ಲಿ ಮಾಹಿತಿ ಮತ್ತು ಸಂಪರ್ಕ ತಂತ್ರಜ್ಞಾನ ಕಾಯಿದೆಯಡಿ ಬಂಧಿಸಿರುವುದರ ಬಗ್ಗೆ ಎಡಿಟರ್ಸ್ ಗಿಲ್ಡ್ ತೀವ್ರ ಆಘಾತ ವ್ಯಕ್ತಪಡಿಸುತ್ತದೆ. ಆಲಂ ಅವರ ಬಂಧನವು ಅಕಾರಣವಾಗಿದ್ದು, ಸರ್ವಾಧಿಕಾರಿ ಧೋರಣೆಯನ್ನು ತೋರಿಸುತ್ತದೆ. ಸಾರಿಗೆ ಕ್ಷೇತ್ರದಲ್ಲಿನ ಅವ್ಯವಹಾರಗಳು ಮತ್ತು ಅದರಿಂದ ಉಂಟಾದ ಸಾವುಗಳ ವಿರುದ್ಧ ಶಾಲಾ ಮಕ್ಕಳು ಮತ್ತು ಯುವಕರು ಢಾಕಾದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಿದ್ದನ್ನು ಎತ್ತಿತೋರಿಸಿದ್ದು ಅಪರಾಧವಾಗುವುದಿಲ್ಲ. ಗಿಲ್ಡ್, ಆಲಂ ಅವರ ಬೆಂಬಲಕ್ಕೆ ನಿಂತು ಈ ಕೂಡಲೇ ಅವರನ್ನು ಬಂಧನದಿಂದ ಬೇಷರತ್ತಾಗಿ ಬಿಡುಗಡೆ ಮಾಡಬೇಕೆಂದು ಆಗ್ರಹಿಸುತ್ತದೆ.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More