ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ ೧೦ ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಕೇರಳದಲ್ಲಿ ಭಾರಿ ಮಳೆ; ಸಾವಿನ ಸಂಖ್ಯೆ 22ಕ್ಕೆ ಏರಿಕೆ

ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ಸಾವನಪ್ಪಿದವರ ಸಂಖ್ಯೆ 22ಕ್ಕೆ ಏರಿದೆ. ವೈನಾಡು ಜಿಲ್ಲೆಯಲ್ಲಿ ಭೂಕುಸಿತ ಉಂಟಾದ ಪರಿಣಾಮ ಪ್ರಮುಖ ರಸ್ತೆಗಳ ಸಂಪರ್ಕ ಕಡಿತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. 26 ವರ್ಷಗಳ ನಂತರ ಪೂರ್ಣಪ್ರಮಾಣದಲ್ಲಿ ತುಂಬಿರುವ ಇಡುಕ್ಕಿ ಡ್ಯಾಂ ನೀರನ್ನು ಹೊರಬಿಟ್ಟಿರುವ ಪರಿಣಾಮ, ಇಡುಕ್ಕಿ ಜಿಲ್ಲೆಯ ಬಹುತೇಕ ಪ್ರದೇಶಗಳು ಮುಳುಗಡೆಯಾಗಿದ್ದು, ಈ ಭಾಗದಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಹಲವು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.

ಹಿಟ್ಲರ್‌ ವೇಷ ಧರಿಸಿ ಸಂಸತ್‌ ಕಲಾಪಕ್ಕೆ ಆಗಮಿಸಿದ ಟಿಡಿಪಿ ಸಂಸದ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ತೆಲುಗು ದೇಶಂ ಪಕ್ಷದ ಸಂಸದ ನರಮಳ್ಳಿ ಶಿವಪ್ರಸಾದ್‌ ಅವರು ಸರ್ವಾಧಿಕಾರಿ ಅಡಾಲ್ಫ್‌ ಹಿಟ್ಲರ್‌ ಹೋಲುವ ವೇಷ ಧರಿಸಿ ಗುರುವಾರ ನಡೆದ ಸಂಸತ್‌ ಕಲಾಪಕ್ಕೆ ಆಗಮಿಸಿದರು. ಈ ಮೂಲಕ, ಪ್ರಧಾನಿ ಮೋದಿ ಅವರ ವಿರುದ್ಧ ವಿಭಿನ್ನ ರೀತಿಯ ಪ್ರತಿಭಟನೆ ಕೈಗೊಂಡರು. ಕಳೆದ ವಾರ ರಾಮ ಹಾಗೂ ನಾರದ ಮುನಿಯ ವೇಷ ಧರಿಸಿ ಕಲಾಪಕ್ಕೆ ಆಗಮಿಸುವ ಮೂಲಕ ನರಹಳ್ಳಿ ಶಿವಪ್ರಸಾದ್‌ ಅವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟಿಸಿದ್ದರು.

ಟ್ರಾಯ್ ಮುಖ್ಯಸ್ಥ ಆರ್ ಎಸ್ ಶರ್ಮಾ ಅಧಿಕಾರಾವಧಿ ವಿಸ್ತರಣೆ

‘ಆಧಾರ್‌’ ಅನ್ನು ಸಮರ್ಥಿಸಿಕೊಂಡಿದ್ದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಮುಖ್ಯಸ್ಥ ಆರ್ ಎಸ್ ಶರ್ಮಾ ಅವರ ಅಧಿಕಾರಾವಧಿಯನ್ನು ಎರಡು ವರ್ಷ ವಿಸ್ತರಿಸಲಾಗಿದೆ. ೨೦೧೫ರಲ್ಲಿ ಶರ್ಮಾ ಅವರು ಮೂರು ವರ್ಷದ ಅವಧಿಗೆ ಟ್ರಾಯ್ ಮುಖ್ಯಸ್ಥರಾಗಿ ಆಯ್ಕೆ ಆಗಿದ್ದರು. ಇಂದು ಅವರ ಸೇವಾ ಅವಧಿ ಮುಗಿಯುತ್ತಿದ್ದಂತೆ ಟ್ರಾಯ್ ಆಯ್ಕೆ ಮಂಡಳಿ ಶರ್ಮಾ ಅವರಿಗೆ ೨೦೨೦ವರೆಗೂ ಅಧಿಕಾರವಧಿ ವಿಸ್ತರಿಸಿದೆ. ಈ ಹಿಂದೆ ಅವರು ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಆಧಾರ್) ಮುಖ್ಯಸ್ಥರಾಗಿದ್ದರು. ಟ್ವಿಟರ್‌ನಲ್ಲಿ ಆಧಾರ್ ಸಂಖ್ಯೆಯನ್ನು ಬಯಲು ಮಾಡುವ ಬೇಜವಾಬ್ದಾರಿ ತೋರಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಕಟುಟೀಕೆಗಳು ಕೇಳಿಬಂದಿದ್ದವು.

ವಿಶ್ವಸಂಸ್ಥೆ ಮಾನವ ಹಕ್ಕುಗಳ ಮಂಡಳಿಯ ಮುಂದಿನ ಮುಖ್ಯಸ್ಥೆಯಾಗಿ ಚಿಲಿಯ ಮಿಚೆಲ್ ಬ್ಯಾಚಲೆಟ್ ಆಯ್ಕೆ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಮುಂದಿನ ಮುಖ್ಯಸ್ಥೆಯಾಗಿ ಚಿಲಿಯ ಮಾಜಿ ಅಧ್ಯಕ್ಷೆ ಮಿಷೆಲ್ ಬ್ಯಾಚಲೆಟ್ ಅವರ ಹೆಸರನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಅಂಟೋನಿಯೋ ಗುಟೆರೆಸ್ ಗುರುವಾರ ನಾಮನಿರ್ದೇಶನ ಮಾಡಿದ್ದಾರೆ. ಎರಡು ಬಾರಿ ಚಿಲಿ ದೇಶದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿರುವ ಮಿಷೆಲ್, ಮಹಿಳಾ ಹಕ್ಕುಗಳ ವಕೀಲರೂ ಆಗಿದ್ದಾರೆ. ಮಿಷೆಲ್ ಅವರನ್ನು ಮುಖ್ಯಸ್ಥೆಯನ್ನಾಗಿ ಮಾಡಲು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ೧೯೩ ದೇಶಗಳು ಸಹಮತ ಸೂಚಿಸಿವೆ.

ತ್ರಿವಳಿ ತಲಾಖ್ ಮಸೂದೆ ತಿದ್ದುಪಡಿ; ಮ್ಯಾಜಿಸ್ಟ್ರೇಟ್‌ರಿಂದ ಜಾಮೀನು ಪಡೆಯಲು ಅವಕಾಶ

ತ್ರಿವಳಿ ತಲಾಖ್ ಮಸೂದೆ ತಿದ್ದುಪಡಿಗೆ ಕೇಂದ್ರ ಸಚಿವ ಸಂಪುಟ ಗುರುವಾರ ಒಪ್ಪಿಗೆ ನೀಡಿದ್ದು, ಮ್ಯಾಜಿಸ್ಟ್ರೇಟ್‌ರಿಂದ ಜಾಮೀನು ಪಡೆಯಲು ಅವಕಾಶ ನೀಡಲಾಗಿದೆ. ಪತ್ನಿಯು ತನಗೆ ಹಾಗೂ ತನ್ನ ಮಕ್ಕಳಿಗೆ ಜೀವನಾಂಶ ಕೋರಿ ನ್ಯಾಯಾಲಯದ ಮೊರೆಹೋಗಲು ಅನುವು ಮಾಡಿಕೊಡಲಾಗಿದೆ ಎಂದು ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಹೇಳಿದ್ದಾರೆ. ತ್ರಿವಳಿ ತಲಾಖ್ ತಿದ್ದುಪಡಿ ಮಸೂದೆಯನ್ನು ಕಳೆದ ಡಿಸೆಂಬರ್‌ನಲ್ಲಿ ಲೋಕಸಭೆಯಲ್ಲಿ ಅಂಗೀಕರಿಸಲಾಗಿತ್ತು. ಈ ಮಸೂದೆ ರಾಜ್ಯಸಭೆಯಲ್ಲಿ ಇನ್ನೂ ಅಂಗೀಕಾರಗೊಳ್ಳಬೇಕಿದೆ.

ಅಮೆರಿಕ ಜೊತೆ ಪಾಕ್ ವಿಶ್ವಾಸಾರ್ಹ ಸಂಬಂಧ ಬೆಳೆಸಲಿದೆ ಎಂದ ಭಾವಿ ಪ್ರಧಾನಿ ಇಮ್ರಾನ್ ಖಾನ್

ಅಮೆರಿಕ-ಪಾಕಿಸ್ತಾನ ನಡುವೆ ಸಂಬಂಧ ಹಳಸಿರುವ ಹೊತ್ತಲ್ಲಿ, “ಪಾಕಿಸ್ತಾನ ಅಮೆರಿಕದ ಜೊತೆ ಸಮತೋಲಿತ ಹಾಗೂ ವಿಶ್ವಾಸಾರ್ಹ ಸಂಬಂಧ ವೃದ್ಧಿಸಲಿದೆ,” ಎಂದು ಭಾವಿ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಪಾಕಿಸ್ತಾನ ಭಯೋತ್ಪಾದಕರಿಗೆ ಸ್ವರ್ಗ ಎಂದು ಟ್ರಂಪ್ ಹೇಳಿಕೆ ನೀಡಿದ್ದರು, ಹಾಗೂ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸದ ಹೊರತು ನೆರವಿನ ಹಣ ಕೊಡುವುದಿಲ್ಲ ಎಂದು ಪಾಕಿಸ್ತಾನಕ್ಕೆ ಕೊಡಬೇಕಿದ್ದ ೨೫೫ ದಶಲಕ್ಷ ಡಾಲರ್ ರಕ್ಷಣಾ ನೆರವಿಗೆ ತಡೆಹಾಕಿ ಮಸೂದೆ ಮಂಡಿಸಲಾಗಿತ್ತು. ಕಳೆದ ಹದಿನೈದು ವರ್ಷಗಳಿಂದ ಅಮೆರಿಕ ೩೩೦೦ ಕೋಟಿ ಡಾಲರ್‌ಗಳಷ್ಟು ನೆರವನ್ನು ಪಾಕಿಸ್ತಾನಕ್ಕೆ ಕೊಟ್ಟಿದೆ.

ಗ್ರಾಮದ ಮರುನಾಮಕರಣ ವಿವಾದದಲ್ಲಿ ರಾಜಸ್ಥಾನ ಸರ್ಕಾರ

ರಾಜಸ್ಥಾನ ಸರ್ಕಾರ ಬಾರ್ಮರ್ ಜಿಲ್ಲೆಯ 'ಮಿಯಾನ್ ಕಾ ಬಾರಾ' ಎಂಬ ಗ್ರಾಮದ ಹೆಸರನ್ನು ‘ಮಹೇಶ್ ನಗರ’ ಎಂಬ ಹೆಸರಿನೊಂದಿಗೆ ಮರುನಾಮಕರಣ ಮಾಡುವ ಮೂಲಕ ವಿವಾದಕ್ಕೆ ಗುರಿಯಾಗಿದೆ. ಮುಸ್ಲಿಂ ಹೆಸರುಗಳಿಂದ ಗುರುತಿಸಲ್ಪಟ್ಟಿದ್ದ 8 ಗ್ರಾಮಗಳ ಹೆಸರನ್ನು ಹಿಂದೂ ಹೆಸರಿನೊಂದಿಗೆ ಮರುನಾಮಕರಣ ಮಾಡಲಾಗಿದ್ದು, ಇಲ್ಲಿನ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂಗಳಾಗಿದ್ದಾರೆ. “ಈ ಹಿಂದೆ ಇಡಲಾಗಿದ್ದ ಮುಸ್ಲಿಂ ಹೆಸರುಗಳು ಗ್ರಾಮದಲ್ಲಿ ಮುಸ್ಲಿಂ ಜನಾಂಗ ನೆಲೆಸಿರುವಂತೆ ಬಿಂಬಿತವಾಗಿದ್ದವು, ಈ ಹಿನ್ನೆಲೆಯಲ್ಲಿ ನಮ್ಮ ಗ್ರಾಮಗಳಿಗೆ ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಡಲು ಬೇರೆಯ ಹಳ್ಳಿಯ ಜನಗಳು ಹಿಂದೇಟು ಹಾಕುತ್ತಿದ್ದರು, ಹಳ್ಳಿಗಳ ಮರುನಾಮಕರಣದಿಂದ ತಮಗೆ ಒಳಿತಾಗಿದೆ,” ಎಂದು ಹಳ್ಳಿಗರು ಅಭಿಪ್ರಾಯಪಟ್ಟಿದ್ದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಆಸ್ಕರ್‌ನಲ್ಲಿ ‘ಜನಪ್ರಿಯ ಸಿನಿಮಾ ವಿಭಾಗ’ ಘೋಷಣೆ

ಆಸ್ಕರ್‌ ಪುರಸ್ಕಾರದಲ್ಲಿ ಅಕಾಡೆಮಿಯು ಕೆಲವು ಮಾರ್ಪಾಟುಗಳನ್ನು ಮಾಡಿದೆ. ಆಸ್ಕರ್ ಪ್ರಶಸ್ತಿಗೆ ಹೊಸದಾಗಿ ‘ಜನಪ್ರಿಯ ಸಿನಿಮಾ ವಿಭಾಗ’ವನ್ನು ಸೇರಿಸಲಾಗಿದೆ. ಜನಪ್ರಿಯತೆ ಮಾನದಂಡ ಆಧರಿಸಿ ಚಿತ್ರವನ್ನು ಗೌರವಿಸುವುದು ಇದರ ಉದ್ದೇಶ. ಆಸ್ಕರ್ ಪ್ರಶಸ್ತಿ ಸಮಾರಂಭ ನಡೆಯುವ ಅವಧಿಯನ್ನು ಮೂರು ಗಂಟೆಗಳಿಗೆ ಕಡಿತಗೊಳಿಸಿರುವುದು ಮತ್ತೊಂದು ಮಾರ್ಪಾಟು. ಅಮೆರಿಕ ಸಿನಿಮಾ ಛಾಯಾಗ್ರಾಹಕ ಜಾನ್‌ ಬೈಲಿ ಅಕಾಡೆಮಿ ಅಧ್ಯಕ್ಷರಾಗಿ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದಾರೆ.

ವಿಂಬಲ್ಡನ್ ಚಾಂಪಿಯನ್ ಏಂಜಲಿಕ್ ಕೆರ್ಬರ್‌ಗೆ ಆಘಾತ

ಚೊಚ್ಚಲ ವಿಂಬಲ್ಡನ್ ಚಾಂಪಿಯನ್ ಏಂಜಲಿಕ್ ಕೆರ್ಬರ್, ಮಾಂಟ್ರಿಯಲ್ ಡಬ್ಲ್ಯೂಟಿಎ ಚಾಂಪಿಯನ್‌ಶಿಪ್‌ನಲ್ಲಿ ಆಘಾತ ಅನುಭವಿಸಿದ್ದಾರೆ. ವಿಶ್ವದ ನಾಲ್ಕನೇ ಶ್ರೇಯಾಂಕಿತೆ ಕೆರ್ಬರ್, ಫ್ರಾನ್ಸ್ ಆಟಗಾರ್ತಿ ಅಲಿಜಿ ಕಾರ್ನೆಟ್ ಎದುರಿನ ಪಂದ್ಯದಲ್ಲಿ ೪-೬, ೧-೬ ನೇರ ಸೆಟ್‌ಗಳಲ್ಲಿ ಸೋಲನುಭವಿಸಿದರು. ಎಡಗೈ ಆಟಗಾರ್ತಿ ಕೆರ್ಬರ್, ೩೪ನೇ ಶ್ರೇಯಾಂಕಿತೆಯ ಎದುರು ೩೨ ಅನಗತ್ಯ ತಪ್ಪು ಹೊಡೆತಗಳಿಂದ ಪ್ರಮಾದವೆಸಗಿದರು. ಇನ್ನು, ಮರಿಯಾ ಶರಪೋವಾ, ರಷ್ಯನ್ ಆಟಗಾರ್ತಿ ಡರಿಯಾ ಕಸಾಕಿನಾ ವಿರುದ್ಧ ೬-೦, ೬-೨ ನೇರ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ೨೫ ವಿನ್ನರ್‌ಗಳಿಂದ ಶರಪೋವಾ ವಿಜೃಂಭಿಸಿದರು.

ಭಾರತ-ಇಂಗ್ಲೆಂಡ್ ನಡುವಣದ ಲಾರ್ಡ್ಸ್ ಪಂದ್ಯಕ್ಕೆ ವರುಣನ ಕಾಟ

ಭಾರತ ಮತ್ತು ಇಂಗ್ಲೆಂಡ್ ನಡುವಣದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟಕ್ಕೆ ವರುಣ ಅಡ್ಡಿಪಡಿಸಿದ ಭಾರತೀಯ ಕಾಲಮಾನ ಮಧ್ಯಾಹ್ನ ೩.೩೦ಕ್ಕೆ ಶುರುವಾಗಬೇಕಿದ್ದ ಪಂದ್ಯ ಸಂಜೆ ಏಳು ಗಂಟೆಯಾದರೂ ಶುರುವಾಗಿರಲಿಲ್ಲ. ತದನಂತರವೂ ತೀವ್ರತರ ಮಳೆಯಿಂದಾಗಿ ಅವಧಿಗೂ ಮುನ್ನವೇ ಭೋಜನ ವಿರಾಮ ನೀಡಲಾಯಿತು. ಎಜ್‌ಬ್ಯಾಸ್ಟನ್ ಪಂದ್ಯದಲ್ಲಿ ೩೧ ರನ್ ಸೋಲನುಭವಿಸಿರುವ ಭಾರತ ತಂಡ, ಲಾರ್ಡ್ಸ್ ಪಂದ್ಯವನ್ನು ಗೆದ್ದು ಐದು ಪಂದ್ಯಗಳ ಸರಣಿಯಲ್ಲಿ ೧-೧ ಸಮಬಲ ಸಾಧಿಸುವ ಗುರಿ ಹೊತ್ತಿದೆ. ಅಂದಹಾಗೆ, ಮೊದಲ ಪಂದ್ಯದಲ್ಲಿ ಆಕರ್ಷಕ ಪ್ರದರ್ಶನ ನೀಡಿದ್ದ ಆಲ್ರೌಂಡರ್ ಸ್ಯಾಮ್ ಕರನ್‌ಗೆ ಇದೀಗ ಓಲ್ಲಿ ಪೋಪ್ ಕೂಡಾ ಕೈಜೋಡಿಸಲಿರುವುದು ಪಂದ್ಯದ ವಿಶೇಷ. ಪೋಪ್‌ಗೆ ಲಾರ್ಡ್ಸ್ ಟೆಸ್ಟ್‌ನಿಂದ ವಂಚಿತವಾಗಿದ್ದ ಬೆನ್ ಸ್ಟೋಕ್ಸ್ ಶುಭ ಕೋರಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More