ಟ್ವಿಟರ್‌ ಸ್ಟೇಟ್ | ಅಲೆಕ್ಸ್ ಜೋನ್ಸ್ ವಿರುದ್ಧ ಸಾಮಾಜಿಕ ಜಾಲತಾಣಗಳ ಭಾರಿ ಸಮರ

‘ನಿಗೂಢ ರಹಸ್ಯ’ದ ಹೆಸರಿನಲ್ಲಿ ಅಂತರ್ಜಾಲ ಜಾಲತಾಣಗಳಲ್ಲಿ ಸುಳ್ಳು ಮಾಹಿತಿಗಳನ್ನು ಪ್ರಚಾರ ಮಾಡುವ ಅಲೆಕ್ಸ್ ಜೋನ್ಸ್ ಅಮೆರಿಕದಲ್ಲಿ ಹಲವಾರು ಅಮಾಯಕರ ಜೀವನಕ್ಕೆ ಕೊಳ್ಳಿ ಇಟ್ಟಿದ್ದಾರೆ. ಇದೀಗ ಅಲೆಕ್ಸ್ ವಿರುದ್ಧ ಕ್ರಮ ಕೈಗೊಳ್ಳಲೇಬೇಕಾದ ಒತ್ತಡದಲ್ಲಿವೆ ಸಿಲಿಕಾನ್ ವ್ಯಾಲಿ ಸಂಸ್ಥೆಗಳು

ಭಾರತದಲ್ಲಿ ಆರ್‌ಎಸ್‌ಎಸ್‌ ಸಿದ್ಧಾಂತಗಳನ್ನು ಪ್ರಚಾರ ಮಾಡುವ ‘ಪೋಸ್ಟ್‌ ಕಾರ್ಡ್‌’ ಸ್ಥಾಪಕ ಮಹೇಶ್ ಹೆಗಡೆಯಂತಹ ಅಥವಾ ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಹೋಲಿಸಬಹುದಾದ ಒಬ್ಬ ವ್ಯಕ್ತಿ ಅಮೆರಿಕದಲ್ಲಿದ್ದಾನೆ; ಆತನೇ ಅಲೆಕ್ಸ್ ಜೋನ್ಸ್‌. ಇದೀಗ ಅಲೆಕ್ಸ್ ಜೋನ್ಸ್ ವಾಕ್‌ ಸ್ವಾತಂತ್ರ್ಯದ ಹೆಸರಿನಲ್ಲಿ ಅಮೆರಿಕದ ಸಿಲಿಕಾನ್ ವ್ಯಾಲಿ ಸಂಸ್ಥೆಗಳ ಜೊತೆ ಸಮರವನ್ನೇ ಸಾರಿದ್ದಾರೆ. ಪ್ರಚಲಿತ ಘಟನೆಗಳಿಗೆ ರಾಜಕೀಯ ಬಣ್ಣ ಕೊಟ್ಟು, ಅದರ ಹಿಂದೆ ವ್ಯವಸ್ಥಿತ ಪಿತೂರಿ ಇದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವ ಚಾಣಾಕ್ಷನೀತ. ವಿಶ್ವದ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಯುಟ್ಯೂಬ್ ಮತ್ತು ಫೇಸ್‌ಬುಕ್ ಅಲೆಕ್ಸ್‌ ಜಾನ್ಸ್‌ ಅವರನ್ನು ಬ್ಲಾಕ್ ಮಾಡಿದೆ. ಆಪಲ್ ಸಂಸ್ಥೆಯೂ, ಜೋನ್ಸ್‌ ಅವರು ದ್ವೇಷಪೂರ್ಣ ಸಂದೇಶವನ್ನು ಹರಡುತ್ತಾರೆ ಎಂದು ಅವರನ್ನು ದೂರವೇ ಇಟ್ಟಿದ್ದಾರೆ.

ಟ್ವಿಟರ್‌ ಸಾಮಾಜಿಕ ಜಾಲತಾಣದಿಂದಲೂ ಅಲೆಕ್ಸ್ ಜೋನ್ಸ್‌ರನ್ನು ದೂರವಿಡಬೇಕು ಎಂದು ಬಹಳಷ್ಟು ಟೀಕೆಗಳು ವ್ಯಕ್ತವಾಗಿದ್ದವು. ಆದರೆ, ಟ್ವಿಟರ್ ಈಗ ಅಧಿಕೃತವಾಗಿ ಜೋನ್ಸ್‌ ಅವರಿಗೆ ಬೆಂಬಲ ಪ್ರಕಟಿಸಿದೆ. ಅಮೆರಿಕದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳ ಬಗ್ಗೆ ಸಾಮಾನ್ಯವಾಗಿ ಟ್ವೀಟ್ ಮಾಡುವ ಅಲೆಕ್ಸ್ ಅವರು ಟ್ವಿಟರ್ ನಿಯಮಗಳನ್ನು ಉಲ್ಲಂಘಿಸಿಲ್ಲ ಎನ್ನುವುದು ಸಂಸ್ಥೆಯ ಸಮರ್ಥನೆ. ತಂತ್ರಜ್ಞಾನ ಸಂಸ್ಥೆಗಳು ಮತ್ತು ಸ್ಟ್ರೀಮಿಂಗ್ ಸೇವಾ ಸಂಸ್ಥೆಗಳು ಅಲೆಕ್ಸ್ ಜೋನ್ಸ್ ಅವರ ವಿಚಾರಧಾರೆಗೆ ವೇದಿಕೆ ಕೊಡದೆ ಇರಲು ನಿರ್ಧರಿಸಿದ ಹಿನ್ನೆಲೆಯಲ್ಲಿ ಟ್ವಿಟರ್ ಸಂಸ್ಥೆಯ ಮೇಲೂ ಒತ್ತಡವಿತ್ತು. ಈ ಹಿನ್ನೆಲೆಯಲ್ಲಿ, ಸರಣಿ ಟ್ವೀಟ್ ಮಾಡಿರುವ ಟ್ವಿಟರ್‌ನ ಸಹಸಂಸ್ಥಾಪಕ ಮತ್ತು ಸಿಇಒ ಜ್ಯಾಕ್ ಡೋರ್ಸೆ, “ಜೋನ್ಸ್ ಅವರು ಟ್ವಿಟರ್ ನಿಯಮಗಳನ್ನು ಉಲ್ಲಂಘಿಸದೆ ಇರುವ ಕಾರಣದಿಂದ ಅವರ ಟ್ವಿಟರ್ ಖಾತೆಗಳನ್ನು ಅಮಾನತು ಮಾಡಲಾಗದು,” ಎಂದು ತಿಳಿಸಿದ್ದಾರೆ. ಹೀಗಾಗಿ, ಅಲೆಕ್ಸ್ ಜೋನ್ಸ್ ಅವರ ಆನ್‌ಲೈನ್ ಹಿಡಿತವನ್ನು ನಿಯಂತ್ರಿಸಲು ನಿರ್ಧರಿಸದೆ ಇರುವ ಕೆಲವೇ ಸಾಮಾಜಿಕ ಜಾಲತಾಣ ಅಥವಾ ತಂತ್ರಜ್ಞಾನ ಸಂಸ್ಥೆಗಳಲ್ಲಿ ಟ್ವಿಟರ್ ಕೂಡ ಸೇರಿದೆ.

ಜೋನ್ಸ್ ಅವರ ಖಾತೆಗಳನ್ನು ಸಕ್ರಿಯವಾಗಿರಲು ಬಿಟ್ಟಿರುವ ಟ್ವಿಟರ್ ಸಂಸ್ಥೆ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ದ್ವೇಷ ಭಾಷಣ ಮತ್ತು ಜವಾಬ್ದಾರಿಯುತವಾಗಿ ತಂತ್ರಜ್ಞಾನವನ್ನು ಬಳಸುವ ವಿಚಾರದಲ್ಲಿ ಟ್ವಿಟರ್ ಸಂಸ್ಥೆಯ ನಿಯಮಗಳು ಪರಿಣಾಮಕಾರಿಯಾಗಿಲ್ಲ ಎನ್ನುವ ಮಾತೂ ಕೇಳಿಬಂದಿದೆ. ಅಲೆಕ್ಸ್ ಜೋನ್ಸ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ 8,55,000 ಬೆಂಬಲಿಗರಿದ್ದಾರೆ. “ನಿಯಮಗಳನ್ನು ಉಲ್ಲಂಘಿಸಿದಲ್ಲಿ ಜೋನ್ಸ್ ಅವರ ಖಾತೆಯನ್ನು ಅಮಾನತುಗೊಳಿಸುತ್ತೇವೆ. ಆದರೆ, ಈವರೆಗೆ ಅವರು ಟ್ವಿಟರ್ ಸಂಸ್ಥೆಯ ಯಾವುದೇ ನಿಯಮಗಳನ್ನೂ ಉಲ್ಲಂಘಿಸಿಲ್ಲ,” ಎಂದು ಟ್ವಿಟರ್ ಹೇಳಿದೆ. ಆಪಲ್ ಸಂಸ್ಥೆ ಕಳೆದ ಭಾನುವಾರ ಅಲೆಕ್ಸ್ ಜೋನ್ಸ್ ಅವರ ಸಾಮಾನ್ಯ ಎಲ್ಲ ಐಟ್ಯೂನ್‌ ಮತ್ತು ಪಾಡ್‌ಕಾಸ್ಟ್ ಆಪ್‌ಗಳನ್ನು ರದ್ದು ಮಾಡಿದೆ. ಸೋಮವಾರದಂದು ಫೇಸ್‌ಬುಕ್ ಅಲೆಕ್ಸ್ ಜೋನ್ಸ್ ಅವರ ಪುಟಗಳನ್ನು ರದ್ದು ಮಾಡಿದೆ. ನಂತರ ಯುಟ್ಯೂಬ್ ಕೂಡ ಸುಮಾರು ೨.೪ ದಶಲಕ್ಷ ಬೆಂಬಲಿಗರಿದ್ದ ಅಲೆಕ್ಸ್ ಜೋನ್ಸ್ ಅವರ ಇನ್‌ಫೋವಾರ್ಡ್ ಪುಟವನ್ನು ರದ್ದು ಮಾಡಿದೆ. ಯುಟ್ಯೂಬ್ ಮತ್ತು ಫೇಸ್‌ಬುಕ್‌ಗಳು ಅಲೆಕ್ಸ್ ಜೋನ್ಸ್ ಅವರು ಹೊಸ ಪುಟಗಳನ್ನು ತೆರೆಯುವುದನ್ನು ತಾತ್ಕಾಲಿಕವಾಗಿ ತಡೆದಿವೆ. ಸ್ಪಾಟಿಫೈ ಕೂಡ ಕಳೆದ ವಾರ ಅಲೆಕ್ಸ್ ಜೋನ್ಸ್ ಅವರ ಕೆಲವು ಪಾಡ್‌ಕಾಸ್ಟ್‌ಗಳನ್ನು ರದ್ದು ಮಾಡಿದೆ. ಆನ್‌ಲೈನ್‌ನ ಅಶ್ಲೀಲ ವಿಚಾರಗಳ ಜಾಲತಾಣವಾಗಿರುವ ‘ಯುಪೋರ್ನ್‌’ ಕೂಡ ಅಲೆಕ್ಸ್ ಜೋನ್ಸ್ ಅವರ ವಿಡಿಯೋಗಳನ್ನು ರದ್ದು ಮಾಡಿದೆ. ಆದರೆ, ಟ್ವಿಟರ್ ಸಂಸ್ಥೆ ಮಾತ್ರ ಹೊರಗಿನ ಒತ್ತಡಕ್ಕೆ ತಾವು ಮಣಿಯುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ.

ಇದನ್ನೂ ಓದಿ : ಪೋಸ್ಟ್‌ ಕಾರ್ಡ್‌ ಪ್ರಕಟಿಸಿದ ಮೋದಿ-ಸಿಂಗ್‌ ಫೋಟೋಗಳ ಹಿಂದಿನ ಗುಟ್ಟೇನು?

ಟ್ವಿಟರ್‌ನಲ್ಲಿ ಇತ್ತೀಚೆಗೆ, 'ದ್ವೇಷಪೂರಿತ ನಡವಳಿಕೆ ಮತ್ತು ದಬ್ಬಾಳಿಕೆಯ ವರ್ತನೆ'ಗೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಅಳವಡಿಸಲಾಗಿದೆ. 'ದ್ವೇಷಪೂರ್ಣ ಛಾಯಾಚಿತ್ರ'ಗಳನ್ನೂ ನಿಷೇಧಿಸಲಾಗಿದೆ. “ಗಂಭೀರ ದೈಹಿಕ ಹಾನಿ ಮಾಡಬಲ್ಲ, ಮರಣ ಅಥವಾ ರೋಗಗ್ರಸ್ತ ಟ್ವೀಟ್‌ಗಳನ್ನು ವ್ಯಕ್ತಿಯೊಬ್ಬ ಮಾಡುವುದನ್ನು ನಿಷೇಧಿಸುವುದು,” ಮೊದಲಾದ ನಿಯಮಗಳನ್ನು ಟ್ವಿಟರ್ ಹೊಸದಾಗಿ ಅಳವಡಿಸಿದೆ. ಈ ಯಾವುದೇ ನಿಯಮಗಳನ್ನೂ ಅಲೆಕ್ಸ್ ಜೋನ್ಸ್ ಮುರಿದಿಲ್ಲ. ಆದರೆ, ಫೇಸ್‌ಬುಕ್‌ ಕೆಲವು ಸತ್ಯಶೋಧನೆ ಮಾಡುವ ನಿಯಮಗಳನ್ನು ಅಳವಡಿಸಿಕೊಂಡು ಸುಳ್ಳು ಮಾಹಿತಿ ಇರುವ ಪೋಸ್ಟ್‌ಗಳನ್ನು ತಡೆಯಲು ಕ್ರಮ ಕೈಗೊಂಡಿದೆ. ಹೀಗಾಗಿ, ಅಲೆಕ್ಸ್ ಅವರ ‘ಪ್ರಚಾರದ ಮಾಹಿತಿ’ಗಳನ್ನು ಫೇಸ್‌ಬುಕ್ ಅಂಗೀಕರಿಸಿಲ್ಲ.

ಟ್ವಿಟರ್ ಸಂಸ್ಥೆಯ ಈಗಿನ ಸಿಇಒ ಅವರು ಅಲೆಕ್ಸ್ ಜೋನ್ಸ್‌ರಿಗೆ ಬೆಂಬಲ ನೀಡಿರಬಹುದು. ಆದರೆ, ತಮ್ಮ ಮಾಜಿ ಸಿಬ್ಬಂದಿಯಿಂದ ಟ್ವಿಟರ್ ವಿರೋಧ ಎದುರಿಸಿದೆ. ಟ್ವಿಟರ್‌ನ ಮಾಜಿ ಸಂಪರ್ಕ ನಿರ್ದೇಶಕರಾದ ಎಮಿಲಿ ಹೋರ್ನ್ ಅವರು ನೇರವಾಗಿ ಜ್ಯಾಕ್‌ ಅವರಿಗೆ ಪ್ರತ್ಯುತ್ತರ ನೀಡಿ, ಅವರ ನಿರ್ಧಾರವನ್ನು ಟೀಕಿಸಿದ್ದಾರೆ. ವಿವಿಧ ಕ್ಷೇತ್ರಗಳ ಚಿಂತಕರು ಮತ್ತು ವಿಶ್ಲೇಷಕರು ಕೂಡ ಟ್ವಿಟರ್‌ನಲ್ಲಿ ಜ್ಯಾಕ್ ಅವರಿಗೆ ನೇರ ಉತ್ತರ ನೀಡಿ, ಜೋನ್ಸ್‌ರನ್ನು ಬೆಂಬಲಿಸುವ ಟ್ವಿಟರ್ ನಿರ್ಧಾರವನ್ನು ವಿರೋಧಿಸಿದ್ದಾರೆ.

ಹಾಗಿದ್ದರೆ ಮಾಧ್ಯಮಗಳಲ್ಲಿ ಇಷ್ಟೊಂದು ಚರ್ಚೆಯಾಗುತ್ತಿರುವ ಅಲೆಕ್ಸ್ ಜೋನ್ಸ್ ಯಾರು? ಅಲೆಕ್ಸ್ ಅವರ ವಿಚಾರಧಾರೆ ಮತ್ತು ಪೋಸ್ಟ್‌ಗಳನ್ನು ಸಾಮಾಜಿಕ ಜಾಲತಾಣಗಳಿಂದ ನಿವಾರಿಸುವ ಅಗತ್ಯವೇನು ಎನ್ನುವ ಪ್ರಶ್ನೆಯೂ ಬರುತ್ತದೆ. ತಮ್ಮ ಇನ್‌ಫೋವಾರ್ಸ್ ವೆಬ್‌ಸೈಟ್ ಮತ್ತು ವಿಡಿಯೋಗಳು, ಪಾಡ್‌ಕಾಸ್ಟ್‌ಗಳ ಮೂಲಕ ರಾಜಕೀಯ ವಲಯದಲ್ಲಿ ಅಲೆಕ್ಸ್ ಜೋನ್ಸ್ ಅತೀ ಪ್ರಸಿದ್ಧ ಹೆಸರು. ಅಲೆಕ್ಸ್ ಜೋನ್ಸ್ ‘ಇನ್‌ಫೋವಾರ್ಸ್‌’ ಎನ್ನುವ ವೆಬ್‌ತಾಣ ನಡೆಸುವ ಅಮೆರಿಕ ನಿವಾಸಿ. ೧೯೯೯ರಲ್ಲಿ ಅಲೆಕ್ಸ್ ಸ್ಥಾಪಿಸಿದ ಸಂಸ್ಥೆಯ ಅಭಿಮಾನಿಗಳಲ್ಲಿ ರಿಪಬ್ಲಿಕನ್ ಪಕ್ಷದ ಕಾರ್ಯತಂತ್ರಗಳನ್ನು ರೂಪಿಸುವ ರೋಜರ್ ಸ್ಟೋನ್ ಅವರೂ ಸೇರಿದ್ದಾರೆ. ರೋಜರ್ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹಲವು ಪ್ರಚಾರಾಭಿಯಾನದ ಮುಖ್ಯಸ್ಥರಾಗಿದ್ದವರು. ಅಲೆಕ್ಸ್ ಜೋನ್ಸ್ ಅವರು ತಮ್ಮ ಅಬ್ಬರದ ಭಾಷಣಗಳ ಮೂಲಕ ಪ್ರಚಲಿತ ಘಟನೆಗಳಿಗೆ ಮತ್ತೊಂದು ಮಗ್ಗಲಿದೆ ಎಂದು ಹೇಳುವುದರಲ್ಲಿ ಸಿದ್ಧಹಸ್ತರು. ಅಲೆಕ್ಸ್ ಜೋನ್ಸ್ ಅವರಿಗೆ ಅಪಾರ ಬೆಂಬಲಿಗರು ಇರುವುದೇ ತಂತ್ರಜ್ಞಾನ ಸಂಸ್ಥೆಗಳು ಅವರನ್ನು ದೂರ ತಳ್ಳದೆ ಇರಲು ಮುಖ್ಯ ಕಾರಣ.

ಅಂತರ್ಜಾಲದ ಅತೀ ವಿವಾದಾತ್ಮಕ ವ್ಯಕ್ತಿಯಾಗಿರುವ ಅಲೆಕ್ಸ್ ಜೋನ್ಸ್ ಆರಂಭದಲ್ಲಿ ಅಮೆರಿಕದ ವಿಶ್ವವ್ಯಾಪಾರಿ ಸಂಸ್ಥೆಯ ಮೇಲೆ ನಡೆದ ದಾಳಿಯ ಬಗ್ಗೆ ಹಲವು ನಿಗೂಢ ರಹಸ್ಯಗಳನ್ನು ಬಿಚ್ಚಿಡುವ ಪೋಸ್ಟ್‌ಗಳ ಮೂಲಕ ಜನಪ್ರಿಯರಾಗಿದ್ದರು. ಅವರು ನಂತರ ಅಮೆರಿಕದ ಎಲ್ಲಾ ಪ್ರಮುಖ ಘಟನಾವಳಿಗಳ ಹಿಂದೆಯೂ ಜನರಿಗೆ ತಿಳಿಯದ ನಿಗೂಢ ರಹಸ್ಯವಿದೆ ಎಂದು ಸುಳ್ಳು ಸುದ್ದಿಗಳನ್ನು ಅಂತರ್ಜಾಲದಲ್ಲಿ ಹರಡುತ್ತಾ ಹೋಗಿದ್ದರು. ಫ್ಲೋರಿಡಾದ ಹೈಸ್ಕೂಲ್‌ನಲ್ಲಿ ನಡೆದ ಶೂಟಿಂಗ್ ಸುಳ್ಳೆಂದು ಹೇಳಿದರು. ಹಿಲರಿ ಕ್ಲಿಂಟನ್ ಅವರು ಮಕ್ಕಳ ಸಾಗಾಟ ಜಾಲವನ್ನು ನಡೆಸುತ್ತಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದರು. ಈಗಾಗಲೇ ಸಿಲಿಕಾನ್ ವ್ಯಾಲಿ ಸಂಸ್ಥೆಗಳು ಕಳೆದ ಅಮೆರಿಕದ ಚುನಾವಣೆಯಲ್ಲಿ ರಷ್ಯಾದ ಪ್ರಚಾರಾಭಿಯಾನಕ್ಕೆ ಕೊರಳೊಡ್ಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಹಿಗಾಗಿ ಅಲೆಕ್ಸ್ ಜೋನ್ಸ್ ಅವರ ಪ್ರಚಾರಾಭಿಯಾನಕ್ಕೂ ವೇದಿಕೆಯಾಗಿ ತಮ್ಮ ವರ್ಚಸ್ಸನ್ನು ಇನ್ನಷ್ಟು ಕಳೆದುಕೊಳ್ಳಲು ಸಂಸ್ಥೆಗಳು ಸಿದ್ಧರಿಲ್ಲ. ಇದೇ ಕಾರಣದಿಂದ ಬಹಳಷ್ಟು ಸಂಸ್ಥೆಗಳು ಅಲೆಕ್ಸ್ ಜೋನ್ಸ್‌ರಿಗೆ ವೇದಿಕೆಯಾಗದಿರಲು ನಿರ್ಧರಿಸಿವೆ. ಆದರೆ ಟ್ವಿಟರ್ ಮಾತ್ರ ತನ್ನ ನಿಲುವು ಸಡಿಲಿಸಿಲ್ಲ.

ವಾಸ್ತವದಲ್ಲಿ ಸಿಲಿಕಾನ್ ವ್ಯಾಲಿಯ ಸಂಸ್ಥೆಗಳು #BlackLivesMatter ಮತ್ತು #MeToo ಮೊದಲಾದ ಹಲವು ಉತ್ತಮ ಪ್ರಚಾರಾಭಿಯಾನಗಳನ್ನು ಮಾಡಿ ವಾಕ್‌ಸ್ವಾತಂತ್ರ್ಯದ ಹರಿಕಾರರು ಎಂದು ಹೇಳಿಕೊಳ್ಳುತ್ತಾರೆ. ಆದರೆ ಇದರ ನಡುವೆ ಅಲೆಕ್ಸ್ ಜೋನ್ಸ್ ಅವರಂತಹ ಸುಳ್ಳು ಪ್ರಚಾರವಾದಿಗಳು, ಬಿಳೀಯರ ಮೇಲ್ಮೈ ಸಾರುವ ಪಿತೂರಿಗಾರರು ಮತ್ತು ಮೂಲಭೂತವಾದಿಗಳೂ ತಮ್ಮ ಪ್ರಚಾರವನ್ನು ಸದ್ದಿಲ್ಲದೆ ಮಾಡುತ್ತಿರುತ್ತಾರೆ. ಇಂತಹ ವ್ಯಕ್ತಿಗಳನ್ನು ತಡೆಯುವುದು ಸಂಸ್ಥೆಗಳಿಗೆ ಈಗ ಸವಾಲಿನ ವಿಚಾರವಾಗಿ ಪರಿಣಮಿಸಿದೆ. ಇದೀಗ ಟ್ವಿಟರ್ ಹೊರತಾಗಿ ಗ್ಯಾಬ್‌.ಎಐ, ಇನ್‌ಸ್ಟಾಗ್ರಾಮ್, ಗೂಗಲ್ ಪ್ಲಸ್, ಸ್ನಾಪ್‌ಚಾಟ್‌, ಅಸ್ಟ್ರೀಮ್, ವಿಮಿಯೋ, ಫ್ಲಿಕರ್, ಡಿಸ್‌ಕ್ಲೋಸ್‌.ಟಿವಿ, ಮೈಂಡ್ಸ್ ಆಂಡ್ ಸ್ಟಿಟ್ಚರ್‌ ಮೊದಲಾದ ಸಂಸ್ಥೆಗಳು ಅಲೆಕ್ಸ್ ಜೋನ್ಸ್‌ರಿಗೆ ತಮ್ಮ ವೇದಿಕೆ ನೀಡುವುದನ್ನು ಮುಂದುವರಿಸಿವೆ. ಹಾಗೆಯೇ ಗೂಗಲ್, ಯು ಟ್ಯೂಬ್ ಮತ್ತು ಆಪಲ್‌ಗಳಲ್ಲೂ ಅಲೆಕ್ಸ್ ಅವರ ಕೆಲವು ವಿಚಾರಧಾರೆಯ ಮೆಟೀರಿಯಲ್‌ಗಳು ಇನ್ನೂ ಉಳಿದುಕೊಂಡಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More