ಪರಿಸರ ಸೂಚ್ಯಂಕ ಪಟ್ಟಿಯಲ್ಲಿ ದೇಶದ ಗುಣಮಟ್ಟ ಕುಸಿತ ವರದಿ ತಳ್ಳಿಹಾಕಿದ ಕೇಂದ್ರ

2018ನೇ ಸಾಲಿನ ಜಾಗತಿಕ ಪರಿಸರ ಕಾರ್ಯಸಾಧನಾ ಸೂಚ್ಯಂಕದಲ್ಲಿ (Environmental Performance Index) 180 ದೇಶಗಳ ಸ್ಥಿತಿಗತಿ ಆಧಾರಿತ ಪಟ್ಟಿ ಮಾಡಲಾಗಿದ್ದು, ಭಾರತ 177ನೇ ಸ್ಥಾನ ಪಡೆದಿದೆ. ಆದರೆ, ಇದು ನಂಬಲರ್ಹವಲ್ಲದ ಮಾಹಿತಿ ಎಂದು ಕೇಂದ್ರ ಸರ್ಕಾರ ತಳ್ಳಿಹಾಕಿದೆ

2018ನೇ ಜಾಗತಿಕ ಪರಿಸರ ಕಾರ್ಯಸಾಧನಾ ಸೂಚ್ಯಂಕದಲ್ಲಿ (Environmental Performance Index- EPI) ಭಾರತ 180 ದೇಶಗಳ ಪೈಕಿ 177ನೇ ಸ್ಥಾನ ಪಡೆದಿದ್ದನ್ನು ಕೇಂದ್ರ ಸರ್ಕಾರ ತಳ್ಳಿಹಾಕಿದೆ. ಕೇಂದ್ರ ಪರಿಸರ ಇಲಾಖೆ ರಾಜ್ಯ ಸಚಿವ ಮಹೇಶ್ ಶರ್ಮಾ, ಸೂಚ್ಯಂಕ ಪಟ್ಟಿಯ ಕುರಿತಾಗಿ ಅಸಮಾಧಾನ ವ್ಯಕ್ತಪಡಿಸಿ ಪಟ್ಟಿಯನ್ನು ಪೂರ್ವ ಪರಿಶೀಲನೆ ನಡೆಸದೆ ಸೂಚ್ಯಂಕ ಬಿಡುಗಡೆ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. “ಎನ್ಎಎಸ್ಎ ಉಪಗ್ರಹದಿಂದ ಸಂಗ್ರಹಿಸಿದ ಮಾಹಿತಿಯ ಮೇಲೆ ಅವಲಂಬಿತವಾಗಿರುವ ಇದು ಅವೈಜ್ಞಾನಿಕ ವರದಿ,” ಎಂದು ಕೇಂದ್ರ ಸರ್ಕಾರ ಹೇಳಿದೆ.

ಕೇಂದ್ರ ಸರ್ಕಾರದ ಕಳಪೆ ಸಾಧನೆಯನ್ನು ಎತ್ತಿ ತೋರಿಸುವ ಯಾವುದೇ ವರದಿ ಅಥವಾ ಅಧ್ಯಯನವನ್ನು ಮೋದಿ ಸರ್ಕಾರ ಸುಳ್ಳೆಂದು ಪಕ್ಕಕ್ಕೆ ತಳ್ಳುತ್ತಿರುವುದು ಇದೇ ಮೊದಲೇನಲ್ಲ. ಇತ್ತೀಚೆಗೆ, ಭಾರತ ಮಹಿಳೆಯರಿಗೆ ಬಹಳ ಅಪಾಯಕಾರಿ ದೇಶ ಎನ್ನುವ ವರದಿಯ ಬಗ್ಗೆಯೂ ಕೇಂದ್ರ ಸರ್ಕಾರ ಇಂತಹುದೇ ಅಭಿಪ್ರಾಯ ಸೂಚಿಸಿ ವರದಿಯನ್ನು ತಳ್ಳಿಹಾಕಿದೆ.

ಪರಿಸರ ಸೂಚ್ಯಂಕ ಪಟ್ಟಿಯ ಪ್ರಕಾರ, ಭಾರತ ಕಳೆದ 2 ವರ್ಷಗಳಿಗಿಂತಲೂ ಕಳಪೆ ಸಾಧನೆ ತೋರಿದೆ. 2016ರಲ್ಲಿ ಜಿಇಪಿಐ (ಗ್ಲೋಬಲ್ ಎನ್ವಿರಾನ್‌ಮೆಂಟ್‌ ಪರ್ಫಾರ್ಮೆನ್ಸ್ ಇಂಡೆಕ್ಸ್) ಬಿಡುಗಡೆ ಮಾಡಿದ್ದ ವರದಿಯಲ್ಲಿ ಭಾರತ 141ನೇ ಸ್ಥಾನ ಪಡೆದಿತ್ತು. ಆದರೆ, ಈ ಬಾರಿ ಭಾರತ 36 ಸ್ಥಾನ ಕುಸಿದು 177ನೇ ಸ್ಥಾನಕ್ಕೆ ಇಳಿದಿದೆ. ಪರಿಸರ ವಿಚಾರದಲ್ಲಿ ಎರಡು ವರ್ಷಗಳಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಬದಲಾವಣೆ ಆಗಿರುವುದನ್ನು ಸರ್ಕಾರ ತಳ್ಳಿಹಾಕಿದೆ.

ವಿಶ್ವ ಆರ್ಥಿಕ ವೇದಿಕೆ, ಸೆಂಟರ್ ಫಾರ್ ಎನ್ವಿರಾನ್ಮೆಂಟಲ್ ಲಾ ಅಂಡ್ ಪಾಲಿಸಿ, ಯೇಲ್ ಯೂನಿವರ್ಸಿಟಿ ಮತ್ತು ಕೊಲಂಬಿಯಾ ಯೂನಿವರ್ಸಿಟಿಯು ಜೊತೆಗೂಡಿ ೧೮೦ ದೇಶಗಳ ಈ ಪರಿಸರ ಸಾಧನಾ ಸೂಚ್ಯಂಕವನ್ನು ತಯಾರಿಸಿದ್ದವು. ಸಮೀಕ್ಷೆಯಲ್ಲಿ ಗಾಳಿ, ನೀರಿನ ಗುಣಮಟ್ಟ, ನೈರ್ಮಲ್ಯ, ಇಂಗಾಲದ ಡೈ ಆಕ್ಸೈಡ್ ಬಿಡುಗಡೆ ಪ್ರಮಾಣ, ಅರಣ್ಯದ ಪ್ರಮಾಣ, ಅರಣ್ಯನಾಶದ ತೀವ್ರತೆ, ಹೀಗೆ ಒಟ್ಟು 10 ವಿಷಯಗಳನ್ನು ಆಧಾರವಾಗಿಟ್ಟುಕೊಂಡು ಅಂಕಗಳನ್ನು ನೀಡಲಾಗಿದೆ. ಮೌಲ್ಯಮಾಪನದ ಸಂದರ್ಭದಲ್ಲಿ ಮೂರು ಹಂತಗಳಲ್ಲಿ (ನೀತಿ ಉದ್ದೇಶಗಳು, ವಿಷಯ ಸಂಬಂಧಿ ವಿಭಾಗಗಳು ಮತ್ತು ಸೂಚಕಗಳು) ಆಗಿರುವ ವ್ಯತ್ಯಾಸವನ್ನು ಗಮನಿಸಿದರೆ, ಇದು ವೈಜ್ಞಾನಿಕವಾಗಿ ಪರಿಪೂರ್ಣವಾಗಿರುವ ವರದಿಯಲ್ಲ ಎಂದು ಕೇಂದ್ರ ಪರಿಸರ ಸಚಿವಾಲಯ ಹೇಳಿದೆ.

ಪರಿಸರ ಅಸಮತೋಲನ ಹಾಗೂ ಸಂಪನ್ಮೂಲಗಳ ದಿವಾಳಿ ಬಗ್ಗೆ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳುವ ಬದಲು ಪರಿಸರದ ಗುಣಮಟ್ಟ ವರದಿಯನ್ನು ಅಲ್ಲಗಳೆದಿದೆ. ಹಿಂದೆ ಇದೇ ರೀತಿ ಪರಿಸರ ನಾಶದ ಯೋಜನೆಗಳನ್ನು ಉತ್ತೇಜಿಸುತ್ತ ಬಂದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಮಾಡಿದ್ದು ಇದನ್ನೇ. ಪರಿಸರ ಅಸಮತೋಲನವನ್ನು ಹತೋಟಿಗೆ ತರಲು ಮಾಡಿಕೊಂಡ ೧೯೯ ರಾಷ್ಟ್ರಗಳ ಪರಿಸರ ಒಪ್ಪಂದದಿಂದ ಅಮೆರಿಕ ಅಧಿಕೃತವಾಗಿ ಹೊರಬಂದಿದೆ. ಟ್ರಂಪ್ ಯಾವುದೇ ಅಂತಾರಾಷ್ಟ್ರೀಯ ಒಪ್ಪಂದಗಳಿಗೆ ಬೆಲೆ ಕೊಡದೆ ತಮ್ಮ ಇಷ್ಟಾನಿಷ್ಟಗಳಿಗೆ ಅನುಗುಣವಾಗಿ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಭಾರತಕ್ಕೆ ಪಾಠವಾಗಬೇಕಿತ್ತು. ಆದರೆ, ಮೋದಿ ಸರ್ಕಾರವೂ ಪರಿಸರದ ಬಗೆಗಿನ ವರದಿಗಳು ಅಥವಾ ಅಭಿಪ್ರಾಯಗಳನ್ನು ಗಂಭೀರವಾಗಿ ಪರಿಗಣಿಸುವಂತೆ ತೋರುತ್ತಿಲ್ಲ. ಪ್ರಧಾನಿ ಮೋದಿಯವರು ಪರಿಸರ ವಿಚಾರದಲ್ಲಿ ತೋರುತ್ತಿರುವ ಅಲಕ್ಷ್ಯದ ಬಗ್ಗೆ ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗಿನಿಂದ ವಿರೋಧ ಎದುರಿಸುತ್ತಿದ್ದಾರೆ. ನರ್ಮದಾ ಅಣೆಕಟ್ಟು ವಿಚಾರವಾಗಿ ಪರಿಸರ ಹೊರಾಟಗಾರರು ಮತ್ತು ನರೇಂದ್ರ ಮೋದಿಯವರ ನಡುವೆ ದೊಡ್ಡ ಹೋರಾಟವೇ ನಡೆದಿದೆ. ಅದಾನಿ ಕಂಪನಿಗಳಿಗೆ ಪ್ರಧಾನಿ ಮೋದಿಯವರು ಉತ್ತೇಜನ ನೀಡುತ್ತಿರುವುದು ಹಲವು ರಾಜ್ಯಗಳಲ್ಲಿ ಪರಿಸರ ವಿಚಾರವಾದ ಸಂಘರ್ಷಗಳಿಗೆ ಕಾರಣವಾಗಿರುವುದೂ ಮಾಧ್ಯಮಗಳಲ್ಲಿ ವರದಿಯಾಗಿದೆ. ಅಭಿವೃದ್ಧಿ ಕಾರ್ಯಗಳಿಗೆ ಸಮಸ್ಯೆಯಾಗುತ್ತಿದೆ ಎನ್ನುವ ನೆಪ ನೀಡಿ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ ನಿಯಮಗಳನ್ನು ತಿದ್ದುಪಡಿ ಮಾಡಲು ಮುಂದಾಗಿರುವ ವಿಚಾರವಾಗಿಯೂ ಮೋದಿ ಸರ್ಕಾರ ಪರಿಸರ ಕಾರ್ಯಕರ್ತರು ಮತ್ತು ವಿಶ್ಲೇಷಕರ ಟೀಕೆಗೆ ಗುರಿಯಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಗ್ರೀನ್‌ ಪೀಸ್ ಎನ್ನುವ ಪರಿಸರಕ್ಕೆ ಸಂಬಂಧಿಸಿದ ಸರ್ಕಾರೇತರ ಸಂಘಟನೆ ಜೊತೆಗೆ ಮೋದಿ ಸರ್ಕಾರದ ಸಂಘರ್ಷ ಬಹಿರಂಗ ಸತ್ಯ.

ಕರ್ನಾಟಕ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ತುಮಕೂರಿನ ಸಮಾವೇಶದಲ್ಲಿ ಬಯಲುಸೀಮೆಯ ಜಿಲ್ಲೆಗಳಾದ ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಕೋಲಾರ ಮತ್ತು ರಾಮನಗರ ಜಿಲ್ಲೆಯ ವಿವಿಧ ಭಾಗದ ಜನರಿಗೆ ಕುಡಿಯುವ ನೀರು ಪೂರೈಸುವ ನೇತ್ರಾವತಿ ನದಿ ತಿರುವಿನ ಎತ್ತಿನಹೊಳೆ ಯೋಜನೆ ಜಾರಿಗೊಳಿಸಲು ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ಮೋದಿ ಆರೋಪಿಸಿದ್ದರು. ವೈಜ್ಞಾನಿಕವಾಗಿ ಹಾಗೂ ಪರಿಸರ ಸಮತೋಲನವನ್ನು ಹದಗೆಡಿಸುವ ಎತ್ತಿನಹೊಳೆ ಯೋಜನೆಯ ಪರ ನಿಂತಿರುವ ವಿಚಾರದಲ್ಲೂ ಪ್ರಧಾನಿ ಮೋದಿ ಟೀಕೆ ಎದುರಿಸಿದ್ದರು.

ಮೋದಿ ಸರ್ಕಾರ ಮಾತ್ರವಲ್ಲ, ಹಿಂದಿನ ಕಾಂಗ್ರೆಸ್ ಸರ್ಕಾರಗಳೂ ಕಾರ್ಪೋರೆಟ್ ಸಂಸ್ಥೆಗಳಿಗಾಗಿ ಪರಿಸರ ನಿಯಮಗಳನ್ನು ಉಲ್ಲಂಘಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಅದಕ್ಕೆ ಉತ್ತಮ ಉದಾಹರಣೆ, ಇತ್ತೀಚೆಗೆ ಸಂಘರ್ಷದ ಸ್ಥಳವಾಗಿ ಬದಲಾಗಿದ್ದ ತೂತುಕುಡಿ. ೧೯೯೪ರಲ್ಲಿ ವೇದಾಂತ ಎಂಬ ಬಹುರಾಷ್ಟ್ರೀಯ ಕಾರ್ಪೊರೆಟ್ ಕಂಪನಿ ತೂತುಕುಡಿಯಲ್ಲಿ ತಾಮ್ರ ಸಂಸ್ಕರಣ ಘಟಕ ಆರಂಭಿಸಿತ್ತು. ಕಳೆದ ಎರಡು ತಿಂಗಳ ಹಿಂದೆ ಹತ್ತಾರು ಜನರ ಸಾವಿಗೆ ಕಾರಣವಾದ ಈ ಘಟಕದ ಅಕ್ರಮಗಳ ಬಗ್ಗೆ ಸುಮ್ಮನಿದ್ದ ಹಿಂದಿನ ಸರ್ಕಾರಗಳಂತೆ ಮೋದಿ ಸರ್ಕಾರವೂ ಮೌನ ವಹಿಸಿತ್ತು. ಪರಿಸರ ಪರಿಣಾಮ ವರದಿಯನ್ನು (ಇಐಎ) ಗಣನೆಗೆ ತೆಗೆದುಕೊಳ್ಳದೆ, ಅಗತ್ಯವೇ ಇಲ್ಲದ ಉದ್ದಿಮೆಗೆ ಯುಪಿಎ ಅವಧಿಯಲ್ಲಿ ಕೇಂದ್ರ ಪರಿಸರ ಇಲಾಖೆ ಅನುಮತಿಸಿತ್ತು. ೨೦೦೯ರಲ್ಲಿ ವೇದಾಂತ ಕಂಪನಿ ತನ್ನ ಉದ್ದಿಮೆಯ ವಿಸ್ತರಣೆಗೆ ಮುಂದಾದಾಗ ಮನ್‌ಮೋಹನ್ ಸಿಂಗ್ ನೇತೃತ್ವದ ಸರ್ಕಾರ ತನ್ನ ಎರಡನೇ ಅವಧಿಯಲ್ಲಿ, “ಸಾರ್ವಜನಿಕ ಸಮಾಲೋಚನೆ ಇಲ್ಲದೆ ಉದ್ದಿಮೆ ವಿಸ್ತರಣೆ ಮಾಡಕೂಡದು,” ಎಂದು ಹೇಳಿ, ಪರಿಸರ ನಿರಪೇಕ್ಷಣಾ ಪತ್ರ ನೀಡಲು ನಿರಾಕರಿಸಿತ್ತು. ೨೦೦೬ರಲ್ಲಿ ಜಾರಿಗೆ ಬಂದ ಉದ್ದಿಮೆ ಪರಿಸರ ಅನುಮಿತಿ ನಿಯಮಗಳ ಪ್ರಕಾರ, ಕೈಗಾರಿಕಾ ಪ್ರದೇಶದ ಒಳ-ಹೊರಗಿನ ಎಲ್ಲ ಬೃಹತ್ ಉದ್ದಿಮೆಗಳಿಗೂ ಅನುಮತಿ ಕಡ್ಡಾಯವಾಗಿತ್ತು. ಆದರೆ, ೨೦೧೪ರಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರ, ೨೦೧೫ರ ಮಾರ್ಚ್‌ನಲ್ಲಿ ೨೦೧೮ರ ಡಿಸೆಂಬರ್‌ವರೆಗೆ ವೇದಾಂತ ಸ್ಟೆರಲೈಟ್‌ ಕಂಪನಿಗೆ ಪರಿಸರ ಅನುಮತಿ ನೀಡಿತು.

ಇದನ್ನೂ ಓದಿ : ಪ್ರಜಾಪ್ರಭುತ್ವದಲ್ಲಿ ಎದುರಾಳಿ ಇರುತ್ತಾರೆ, ವೈರಿಯಲ್ಲ ಎಂಬ ತತ್ವಕ್ಕೆ ಮೋದಿ ಮಸಿ

ಹೀಗೆ ಹಿಂದಿನಿಂದಲೂ ಸರ್ಕಾರಗಳು ಪರಿಸರ ನಿಯಮಗಳನ್ನು ಉಲ್ಲಂಘಿಸುತ್ತ ಬಂಡವಾಳಶಾಹಿಗಳಿಗೆ ಪರಿಸರ ನಾಶಕ್ಕೆ ಅವಕಾಶ ಕೊಡುತ್ತಲೇ ಬಂದಿವೆ. ಮೋದಿ ಸರ್ಕಾರದ ಅವಧಿಯಲ್ಲಿ ಇದರ ಪ್ರಮಾಣ ಹೆಚ್ಚಾಗಿರುವುದು ಬಹಿರಂಗ ಸತ್ಯ. ಹೀಗಿರುವಾಗ, ಈಗಿನ ಪರಿಸರ ಸಾಧನಾ ಸೂಚ್ಯಂಕದಲ್ಲಿ ಭಾರತ ಕೆಳಗಿಳಿಯುತ್ತ ಬಂದಿರುವ ಬಗ್ಗೆ ಅಚ್ಚರಿಪಡಬೇಕಾಗಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More