ಅಮೆರಿಕ ಮತ್ತಿತರ ಹೊರದೇಶಗಳಲ್ಲಿ ಆರೆಸ್ಸೆಸ್ ಹೇಗೆ ಕೆಲಸ ಮಾಡುತ್ತದೆ ಗೊತ್ತೇ?

ರಾಷ್ಟ್ರೀಯ ಸ್ವಯಂಸೇವಕ ಸಂಘದ ಭಾರತೀಯ ಘಟಕಕ್ಕೂ ಹೊರದೇಶಗಳಲ್ಲಿರುವ ಘಟಕಗಳಿಗೂ ಇರುವ ಮುಖ್ಯ ಹೋಲಿಕೆಗಳನ್ನು ಪ್ರಸ್ತುತಪಡಿಸುವ ಕೃತಿ ‘ದಿ ಆರೆಸ್ಸೆಸ್: ಎ ವ್ಯೂವ್ ಟು ದ ಇನ್ ಸೈಡ್.’ ‘ಸ್ಕ್ರಾಲ್’ ಜಾಲತಾಣ ಪ್ರಕಟಿಸಿರುವ ಈ ಪುಸ್ತಕದ ಆಯ್ದ ಭಾಗದ ಭಾವಾನುವಾದ ಇಲ್ಲಿದೆ

ಅಖಂಡ ಹಿಂದೂ ಏಕೀಕರಣದ ಭಾಗವಾಗಿ ಸಾಗರೋತ್ತರ ಭಾರತೀಯ ಸಮುದಾಯದ ಬಗ್ಗೆ ಆರೆಸ್ಸೆಸ್ ಆಸಕ್ತಿ ತಳೆಯಿತು. ಭಾರತದಿಂದ ವಲಸೆ ಹೋದ ಸ್ವಯಂಸೇವಕರು ಕೀನ್ಯಾ ಮತ್ತು ಮ್ಯಾನ್ಮಾರ್‌ನಲ್ಲಿ ಸಂಘದ ಮೊದಲ ಶಾಖೆಗಳನ್ನು 1947ರಲ್ಲಿ ಆರಂಭಿಸಿದರು. ಇದು ಆರೆಸ್ಸೆಸ್ ವಿಶ್ವವ್ಯಾಪಿಯಾಗಿ ಹರಡಲು ಕಾರಣವಾದ ಬೆಳವಣಿಗೆ. 1953ರಷ್ಟು ಹಿಂದೆಯೇ ಗೋಲ್ವಾಲ್ಕರ್ ಅವರು ರಾಜ್ಯ ಪ್ರಚಾರಕರನ್ನು ಉದ್ದೇಶಿಸಿ ಮಾತನಾಡಿದ ವೇಳೆ, ಜಗತ್ತು ಒಂದು ಕುಟುಂಬ ಎಂಬ ಹಿಂದೂ ಕಲ್ಪನೆಯಡಿ ವಿದೇಶದಲ್ಲಿರುವ ಹಿಂದೂಗಳನ್ನು ಒಗ್ಗೂಡಿಸುವಂತಹ ಪ್ರಚಾರ ಕಾರ್ಯ ಹಮ್ಮಿಕೊಂಡಿದ್ದರು.

ಬೆನೆಡಿಕ್ಟ್ ಆಂಡರ್ಸನ್ ಅವರು ಈ ‘ಬಹು ದೂರದ ರಾಷ್ಟ್ರೀಯತೆ’ ಎಂಬ ಪದ ಬಳಸಲು ಕಾರಣವೂ ಇದೆ. ದೇಶದ ಒಳಗೆ ಮತ್ತು ಹೊರಗೆ ಸಂಘಪರಿವಾರದ ವಿವಿಧ ಸೇವಾ ಯೋಜನೆಗಳಿಗೆ ವಿಫುಲವಾಗಿ ಆರ್ಥಿಕ ಮತ್ತು ಸ್ವಯಂಸೇವೆಯ ಬೆಂಬಲ ಪಡೆಯುವುದರತ್ತ ಆರೆಸ್ಸೆಸ್ ಪ್ರಾಥಮಿಕ ಗಮನ ಹರಿಸುತ್ತದೆ. ಆಂಡರ್ಸನ್ ಊಹೆಗೂ ಮಿಗಿಲಾಗಿ ಬಹು ದೂರದ ರಾಷ್ಟ್ರೀಯತೆ ಎಂಬುದು ಹೆಚ್ಚು ಪ್ರಚಾರ ಪಡೆಯಲು ಸ್ವಯಂಸೇವಕರು ದೇಶ ತೊರೆದಿರುವ ಭಾವನಾತ್ಮಕ ಸನ್ನಿವೇಶ ಕೂಡ ಕಾರಣ ಎನ್ನುತ್ತದೆ ನಮ್ಮದೇ ಸ್ವಂತದ ಸಂಶೋಧನೆ. ಆರೆಸ್ಸೆಸ್ಸಿನ ರಾಷ್ಟ್ರೀಯತೆಯ ಸಂದೇಶ, ನಾಸ್ಟಾಲ್ಜಿಯಾ, ಮನೆಗೀಳು, ತಮ್ಮ ಕುಟುಂಬದ ಸದಸ್ಯರೊಂದಿಗೆ ಗುರುತಿಸಿಕೊಳ್ಳುವ ಉದ್ದೇಶ ಹಾಗೂ ಅದಕ್ಕಿಂತ ಮಿಗಿಲಾಗಿ ಕೋಮುವಾದಿ ಧೋರಣೆ ಹೊಂದಿದ್ದರೆ ಸಾಮಾಜಿಕ ಸ್ಥಾನಮಾನ ವೃದ್ಧಿಸುತ್ತದೆ ಎಂಬ ಕಲ್ಪನೆಯಿಂದ ಭಾರತದಲ್ಲಿ ಇರುವವರೊಂದಿಗೆ ಸಾಮಾಜಿಕ ಸಂಬಂಧ ಹೆಚ್ಚಿಸಿಕೊಳ್ಳುವ ಯತ್ನವೂ ಇದಕ್ಕೆ ಕಾರಣವಿರಬಹುದು.

ಇಂತಹ ಪ್ರಯತ್ನಗಳು ಬೇರೆ-ಬೇರೆ ಸ್ವರೂಪ ಪಡೆಯಬಹುದು. ಉದಾಹರಣೆಗೆ, 1978ರ ಆಂಧ್ರಪ್ರದೇಶ ಚಂಡಮಾರುತ, 2001ರ ಗುಜರಾತ್ ಭೂಕಂಪ, 2004ರ ಡಿಸೆಂಬರಿನಲ್ಲಿ ಸಂಭವಿಸಿದ ಸುನಾಮಿ ಮತ್ತಿತರ ಘಟನೆಗಳಲ್ಲಿ ಬಲಿಯಾದವರಿಗೆ ವಿದೇಶದಲ್ಲಿರುವ ಹಿಂದೂಗಳು ಸಹಾಯಹಸ್ತ ಚಾಚಿದ್ದಿರಬಹುದು ಅಥವಾ ಪ್ರಧಾನಿ ನರೇಂದ್ರ ಮೋದಿ ತಮ್ಮ ವಿದೇಶ ಪ್ರಯಾಣದ ವೇಳೆ ಸಾಗರೋತ್ತರ ರಾಜಕೀಯ ಸಮಾವೇಶಗಳನ್ನು ನಡೆಸಿದಾಗ ಅದಕ್ಕೆ ಬೆಂಬಲ ನೀಡಿದ್ದಿರಬಹುದು.

ಬಿಜೆಪಿ ತನ್ನ ರಾಜಕೀಯ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳಲು ಕೂಡ ವಿದೇಶಿ ಸ್ವಯಂಸೇವಕರ ಇಂತಹ ಪ್ರಯತ್ನಗಳನ್ನು ದುಡಿಸಿಕೊಳ್ಳುತ್ತಿರುತ್ತದೆ. ಉದಾಹರಣೆಗೆ, 2013-14ರಲ್ಲಿ ಮೋದಿ ಪರ ಪ್ರಚಾರ ಮಾಡಲೆಂದು ನೂರಾರು ಜನ ಐಟಿ ವೃತ್ತಿಪರರು ಭಾರತಕ್ಕೆ ವಾಪಸಾಗಿದ್ದರು. ಪ್ರಚಾರಾಂದೋಲನಗಳ ಬಗ್ಗೆ ವಿಫುಲ ಅಧ್ಯಯನ ನಡೆಸಿರುವ ಉಲ್ಲೇಖ್ ಎನ್ ಪಿ ಎಂಬುವವರು ಬರೆದ ಪುಸ್ತಕದಲ್ಲಿ ಸಾಗರೋತ್ತರ ಭಾರತೀಯ ಸಮುದಾಯದ ನಿರ್ದಿಷ್ಟ (ಮತ್ತು ಗಣನೀಯ) ಕೊಡುಗೆಗಳನ್ನು ವಿಶ್ಲೇಷಿಸುವ ಒಂದು ಅಧ್ಯಾಯ ಇದೆ.

ಅದರಲ್ಲಿ ಮೋದಿ ಅವರ ಪರ ಉತ್ತರ ಪ್ರದೇಶದಲ್ಲಿ ಅಮಿತಾಭ್ ಶರ್ಮಾ ಎಂಬುವವರು ಹೇಗೆ ಕೆಲಸ ಮಾಡಿದರು ಎಂಬುದರ ವಿವರಗಳಿವೆ. ಅಮಿತಾಭ್ ಆಸ್ಟರಿಕ್ ಸಲ್ಯೂಷನ್ಸ್ ಕಂಪನಿಯ ಸಂಸ್ಥಾಪಕ ಮುಖ್ಯ ಕಾರ್ಯನಿರ್ವಹಣಾಧಿಕಾರಿ. ಮೋದಿ ಅವರ ಮೂಲಸೌಕರ್ಯ ಮತ್ತು ಕೌಶಲ್ಯ ಆಧಾರಿತ ಶಿಕ್ಷಣದ ಮಾದರಿಗಳನ್ನು ಸಾಮಾನ್ಯ ಮತದಾರರಿಗೆ (ವಿಶೇಷವಾಗಿ ದಲಿತರು ಮತ್ತು ಮುಸ್ಲಿಮರು) ತಲುಪಿಸಲು ಉತ್ತರ ಪ್ರದೇಶದ ಸ್ಥಳೀಯ ಮಾಧ್ಯಮ ವೇದಿಕೆಗಳನ್ನು ಅವರು ದುಡಿಸಿಕೊಂಡು ಸಾಂಪ್ರದಾಯಿಕ ಸಮಾಜ ಕಲ್ಯಾಣ ವಿಧಾನಗಳಿಗಿಂತಲೂ ಭಿನ್ನವಾದ ಸುಧಾರಣೆಯನ್ನು ಆ ಸಮುದಾಯದಲ್ಲಿ ತರಬಹುದು ಎಂದು ಭರವಸೆ ನೀಡಲಾಯಿತು. ಇಂಡಿಯನ್ ಅಮೆರಿಕನ್ ಇಂಟೆಲೆಕ್ಚುವಲ್ಸ್ ಫೋರಂನ ಸಂಸ್ಥಾಪಕ ನಾರಾಯಣ್ ಕಠಾರಿಯಾ ಅವರ ಮತ್ತೊಂದು ಘಟನೆಯನ್ನೂ ಇಲ್ಲಿ ಉದಾಹರಿಸಬಹುದು. ಅವರು ಅಮೆರಿಕದ ಭಾರತೀಯರಲ್ಲಿ ಮೋದಿ ಅವರ ಪರವಾಗಿ ಅಭಿಪ್ರಾಯ ಮೂಡುವಂತೆ ಮಾಡಿದರು. ಅಮೆರಿಕದಲ್ಲಿರುವ ಭಾರತೀಯರು ತಾಯ್ನಾಡಿನಲ್ಲಿರುವ ತಮ್ಮ ಸ್ನೇಹಿತರು ಹಾಗೂ ನೆಂಟರಿಷ್ಟರಲ್ಲಿ ಬಿಜೆಪಿ ಪರ ಅಭಿಪ್ರಾಯ ಮೂಡುವಂತೆ ಮಾಡಿದರು.

39 ರಾಷ್ಟ್ರಗಳಲ್ಲಿ ಇಂತಹ ಸಂಘಟನೆಗಳ ಪ್ರಭಾವವಿದೆ ಎಂಬ ವರದಿಗಳಿದ್ದರೂ ನೇಪಾಳ ಮಾತ್ರವಲ್ಲದೆ ಇಂಗ್ಲಿಷ್ ಬಲ್ಲ ಮೂರು ದೇಶಗಳಾದ ಅಮೆರಿಕ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾಗಳಲ್ಲಿ ಆರೆಸ್ಸೆಸ್ ಉಪಸ್ಥಿತಿ ಪ್ರಧಾನವಾಗಿದೆ. ಒಂದು ದೇಶಕ್ಕಿಂತಲೂ ಮತ್ತೊಂದು ದೇಶದಲ್ಲಿ ಭಿನ್ನವಾಗಿ ಕಾರ್ಯಾಚರಿಸುತ್ತಿದ್ದರೂ ಸಂಘದ ಎಲ್ಲ ಸಾಗರೋತ್ತರ ಪ್ರಾಥಮಿಕ ಘಟಕಗಳನ್ನು ‘ಶಾಖೆ’ ಎಂದು ಕರೆಯಲಾಗುತ್ತಿದೆ. ಭಾರತದ ಹೊರಗೆ ಅತಿ ಹೆಚ್ಚು ಶಾಖೆಗಳನ್ನು ಹೊಂದಿದ ದೇಶಗಳ ಪೈಕಿ ನೇಪಾಳ ಮೊದಲ ಸ್ಥಾನದಲ್ಲಿದೆ. ಅಮೆರಿಕ ಎರಡನೇ ಸ್ಥಾನ ಪಡೆದಿದ್ದು, ಅತಿ ಹೆಚ್ಚು ಶಾಖೆಗಳು ಇತ್ತೀಚೆಗೆ ಆರಂಭವಾಗುತ್ತಿವೆ ಎಂಬ ವರದಿಗಳಿವೆ. ಸುಮಾರು 30 ಲಕ್ಷ ಭಾರತೀಯ ಅಮೆರಿಕನ್ನರು ದೇಶದ ಹೊರಗಿರುವ ಬೃಹತ್ ಹಾಗೂ ಶ್ರೀಮಂತ ಸಮುದಾಯ.

‘ದಿ ಆರೆಸ್ಸೆಸ್ ಎ ವ್ಯೂವ್ ಟು ದ ಇನ್ ಸೈಡ್’ ಕೃತಿಯ ಮುಖಪುಟ
ಇದನ್ನೂ ಓದಿ : ಪ್ರಣಬ್ ಭಾಷಣದ ಬಳಿಕ ಆರೆಸ್ಸೆಸ್ ಸೇರುವವರ ಸಂಖ್ಯೆ ಐದು ಪಟ್ಟು ಹೆಚ್ಚಿದೆಯಂತೆ!

ಅಮೆರಿಕದಲ್ಲಿ ಧರ್ಮಗಳ ಕುರಿತು ಅಧ್ಯಯನ ನಡೆಸುವ ಪ್ಯೂ ಸಂಶೋಧನಾ ಸಂಸ್ಥೆಯ 2014ರ ವರದಿ ಪ್ರಕಾರ, ಒಟ್ಟಾರೆ ಜನಸಂಖ್ಯೆಯ ಶೇ.0.07ರಷ್ಟಿರುವ ಹಿಂದೂಗಳು ಶಿಕ್ಷಣದ ವಿಚಾರದಲ್ಲಿ ದೇಶದ ಪ್ರಮುಖ ಜನಾಂಗೀಯ ಸಮುದಾಯದಷ್ಟೇ ಪ್ರಬಲವಾಗಿದ್ದಾರೆ. ಶೇ.77ರಷ್ಟು ಭಾರತೀಯ ಅಮೆರಿಕನ್ನರು ಕಾಲೇಜು ಶಿಕ್ಷಣ ಅಥವಾ ಸ್ನಾತಕೋತ್ತರ ಶಿಕ್ಷಣ ಪಡೆದವರಾಗಿರುತ್ತಾರೆ. ಶೇ.70ರಷ್ಟು ಮಂದಿ 50 ಸಾವಿರ ಡಾಲರ್ ಅಥವಾ ಅದಕ್ಕಿಂತಲೂ ಹೆಚ್ಚಿನ ಸಂಪಾದನೆ ಮಾಡುತ್ತಾರೆ.

ಶೇ.79ರಷ್ಟು ಅಮೆರಿಕನ್ ಹಿಂದೂಗಳು ಧಾರ್ಮಿಕ ಮನೋಭಾವ ಹೊಂದಿದ್ದು, ಸಮೀಕ್ಷೆ ವೇಳೆ ಧಾರ್ಮಿಕತೆ ತಮ್ಮ ಜೀವನದಲ್ಲಿ ‘ಬಹಳ ಮುಖ್ಯ’ ಅಥವಾ ‘ಮುಖ್ಯ’ ಎಂಬರ್ಥದ ಅಭಿಪ್ರಾಯ ನೀಡಿದ್ದಾರೆ. ಇದು ಆರೆಸ್ಸೆಸ್‌ನ ಅಮೆರಿಕದ ಸಂಘಟನೆಯಾದ ಯುಎಸ್ ಹಿಂದೂ ಸ್ವಯಂಸೇವಕ ಸಂಘಕ್ಕಿರುವ ಬೆನ್ನೆಲುಬು ಎಂಬ ಮಾತಿದೆ. ಜಾಗತಿಕ ಮಟ್ಟದಲ್ಲಿ ಸಂಯೋಜಕರನ್ನು ಒಳಗೊಂಡಿದ್ದರೂ ಆರೆಸ್ಸೆಸ್‌ನಂತೆ ಎಚ್ಎಸ್ಸೆಸ್ ಸ್ವಾಯತ್ತ ಸಂಘಟನೆ. ಆರೆಸ್ಸೆಸ್ಸಿನಂತೆಯೇ ಅನೇಕ ರಾಷ್ಟ್ರೀಯ ಎಚ್‌ಎಸ್‌ಎಸ್ ಘಟಕಗಳು, ಮಹಿಳಾ ಶಾಖೆಯಾದ ಹಿಂದೂ ಸೇವಿಕೋ ಸಮಿತಿ ಅಸ್ತಿತ್ವದಲ್ಲಿದೆ (ಕುಟುಂಬದ ಆಧಾರದ ಮೇಲೆ ನಡೆಯುವ ಶಾಖೆಗಳನ್ನು ಹೊಂದಿರುವ ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ನಲ್ಲಿ ಈ ಸಮಿತಿ ಅಸ್ತಿತ್ವದಲ್ಲಿಲ್ಲ). ಅಮೆರಿಕದ ಎಚ್ಚೆಸ್ಸೆಸ್ ತನ್ನ ಅರೆಕಾಲಿಕ ಕಾರ್ಯಕರ್ತರಾದ ವಿಸ್ತಾರಕ್ ಮತ್ತು ವಿಸ್ತಾರಕಿಯರಿಗೆ ತರಬೇತಿ ನೀಡುತ್ತಿದ್ದು, ಕೆಲವರು ಮಾತ್ರ ಪೂರ್ಣಕಾಲಿಕ ಸ್ವಯಂಸೇವಕಿಯರಿದ್ದಾರೆ. ಇವರ ಮೇಲ್ವಿಚಾರಣೆಗೆ ಒಬ್ಬ ಪ್ರಾದೇಶಿಕ ನಿರ್ದೇಶಕಿ ಇದ್ದಾರೆ. ಸೂಕ್ತ ಶಾಖೆಗಳ ಮೂಲಕ ಎಚ್ಚೆಸ್ಸೆಸ್ ವಾರಗಳ ಕಾಲ ತರಬೇತಿ ನೀಡುತ್ತದೆ.

ಈ ಮೂರು ತರಬೇತಿ ಶಿಬಿರಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸುವವರು (ಸಂಘ ಶಿಖಾ ವರ್ಗ್ ಎಂದು ಕರೆಯಲಾಗುತ್ತದೆ) ಭಾರತದಲ್ಲಿ ಆರೆಸ್ಸೆಸ್ಸಿನ ಎರಡನೇ ವರ್ಷದ ತರಬೇತಿ ಕಾರ್ಯಕ್ರಮಕ್ಕೆ ಹಾಜರಾಗಬಹುದು ಅಥವಾ ಟ್ರಿನಿಡಾಡ್ ಮತ್ತು ಕೀನ್ಯಾದಲ್ಲಿ ಹೊಸದಾಗಿ ಆರಂಭವಾಗಿರುವ ಎರಡನೇ ವರ್ಷದ ತರಬೇತಿ ಶಿಬಿರಗಳನ್ನು ಸೇರಬಹುದಾಗಿದೆ. ಎರಡನೇ ವರ್ಷದ ತರಬೇತಿ ಪೂರೈಸುವವರು ನಾಗ್ಪುರದ ಆರೆಸ್ಸೆಸ್ ಕೇಂದ್ರ ಕಚೇರಿಯಲ್ಲಿ ಮೂರನೇ ವರ್ಷದ ತರಬೇತಿ ಶಿಬಿರದಲ್ಲಿ ಭಾಗವಹಿಸಬಹುದು. ಅನೇಕ ಎಚ್ಎಸ್ಸೆಸ್ ಸದಸ್ಯರು ಈ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ ಎಂದು ಹಿರಿಯ ಎಚ್ಎಸ್ಸೆಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಜಗತ್ತಿನ ಎಲ್ಲಿಂದಲಾದರೂ ಆರೆಸ್ಸೆಸ್ಸಿನ ಹಿಂದುತ್ವ ಸಂದೇಶ ಹರಡಲು ಈ ಅಂತಾರಾಷ್ಟ್ರೀಯ ಮಟ್ಟದ ಸಮೂಹ ಸಹಾಯಕ್ಕೆ ಬರಲಿದೆ.

ಭಾರತದ ಶಾಖೆಗೂ ಎಚ್ಎಸ್ಸೆಸ್ ಶಾಖೆಗೂ ಇರುವ ಸಾಮ್ಯತೆಯನ್ನು ಕಂಡುಕೊಳ್ಳುವ ಉದ್ದೇಶದಿಂದ ನಾವು 2016ರ ಜುಲೈನಲ್ಲಿ ವಾಷಿಂಗ್ಟನ್ ಡಿಸಿಯ ವರ್ಜೀನಿಯಾ ಉಪನಗರದಲ್ಲಿರುವ ಎಚ್ಎಸ್ಸೆಸ್ ಶಾಖೆಯೊಂದರಲ್ಲಿ ಹೊತ್ತು ಕಳೆದೆವು. ನಮಗೆ ಆತಿಥ್ಯ ನೀಡಿದವರು ವೃತ್ತಿಯಿಂದ ಎಂಜಿನಿಯರ್ ಆಗಿದ್ದು, ಡಿ.ಸಿ ಪ್ರದೇಶದ ಶಾಖೆಗಳ ಕಾರ್ಯವಾಹ್ (ನಿರ್ದೇಶಕ) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಪ್ರತಿವಾರ ಅವರು ನಡೆಸುವ ಶಾಖೆ ಸುಮಾರು ಒಂದೂವರೆ ಗಂಟೆಗಳ ಅವಧಿಯದ್ದು. “ಆರೆಸ್ಸೆಸ್ ಸದಸ್ಯನಾಗಿದ್ದ ನಾನು ಭಾರತದಿಂದ ವಲಸೆ ಬಂದ ನಂತರ ನಮ್ಮ ಮಕ್ಕಳಿಗೆ ಭಾರತೀಯ ಮೌಲ್ಯಗಳನ್ನು ತಿಳಿಸಬೇಕು ಎಂಬ ಉದ್ದೇಶದಿಂದ ಎಚ್ಎಸ್ಸೆಸ್ ಸೇರಲು ಬಯಸಿದೆ,” ಎಂದು ತಿಳಿಸಿದರು. ಮಿಗಿಲಾಗಿ ಆಂಡರ್ಸನ್ ಹೇಳಿದ ‘ಬಹು ದೂರದ ರಾಷ್ಟ್ರೀಯತೆ’ಯನ್ನು ಪ್ರತಿಧ್ವನಿಸುವಂತೆ ಅವರು “ಎಚ್ಎಸ್ಸೆಸ್ ನಲ್ಲಿ ಭಾಗವಹಿಸುವುದರಿಂದ ವಲಸಿಗರಲ್ಲಿ ಹಿಂದೂ ಏಕತೆಯ ಪ್ರಜ್ಞೆ ಜಾಗೃತಗೊಳ್ಳುತ್ತದೆ,” ಎಂದರು.

ಅಲ್ಲಿದ್ದ ಸುಮಾರು 50 ಶಿಬಿರಾರ್ಥಿಗಳಲ್ಲಿ ಬಹುತೇಕರು ಕಾಲೇಜು ಶಿಕ್ಷಣ ಪಡೆದವರಾಗಿದ್ದು ಇಂಗ್ಲಿಷನ್ನು ಸುಲಲಿತವಾಗಿ ಆಡಬಲ್ಲವರಾಗಿದ್ದರು. ರಜೆ ಇರುವುದರಿಂದ ಈ ರಾತ್ರಿ ಶಿಬಿರಾರ್ಥಿಗಳ ಸಂಖ್ಯೆ ಅರ್ಧಕ್ಕರ್ಧ ಕಡಿಮೆ ಇದೆ ಎಂದು ಕಾರ್ಯವಾಹ್ ನಮಗೆ ತಿಳಿಸಿದರು. ಡಿ ಸಿ ಪ್ರದೇಶದಲ್ಲಿ ಹಿಂದೂಗಳ ಸಂಖ್ಯೆ ಹೆಚ್ಚುತ್ತಿರುವುದು ಹಾಗೂ ಹಿಂದೂಗಳಲ್ಲಿ ಧರ್ಮಪ್ರಜ್ಞೆ ಹೆಚ್ಚುತ್ತಿರುವುದರಿಂದ ಎಚ್ಎಸ್ಸೆಸ್ ಶಾಖೆಗಳಲ್ಲಿ ಭಾಗವಹಿಸುವವರ ಸಂಖ್ಯೆ ಕಳೆದ ಕೆಲವು ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಹೆಚ್ಚಿದೆ ಎಂದು ಅವರು ಹೇಳಿದರು.

ಎಚ್ಎಸ್ಸೆಸ್ ಸಂಘಟನೆಯನ್ನು ಐದು ಭಾಗಗಳಾಗಿ ವಿಂಗಡಿಸಿದ್ದು, ಡಿ.ಸಿ ಪ್ರದೇಶ ಪೂರ್ವ ಕರಾವಳಿ ವಲಯಕ್ಕೆ ಸೇರುತ್ತದೆ. ಪ್ರತಿ ಶಾಖೆ ಸ್ವಾಯತ್ತವಾಗಿದ್ದರೂ ಇತರ ಕೇಂದ್ರ, ಪ್ರಾದೇಶಿಕ ಮತ್ತು ಸ್ಥಳೀಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿ ಸ್ಥಳೀಯ ಶಾಖಾ ನಾಯಕರನ್ನು ಎಚ್ಎಸ್ಸೆಸ್ ಪ್ರಧಾನ ಕಾರ್ಯದರ್ಶಿ ಆಯ್ಕೆ ಮಾಡುತ್ತಾರೆ. ಪ್ರತಿ ವಲಯವೂ ತನಗೆ ಅಗತ್ಯವಿರುವ ಜಾಗವನ್ನು ಬಾಡಿಗೆಗೆ ಪಡೆದುಕೊಂಡಿರುತ್ತದೆ. ಶಿಬಿರ ಸಾಮಾನ್ಯವಾಗಿ ಒಂದು ವಾರ ಕಾಲ ನಡೆಯುತ್ತದೆ. ಎಚ್ಎಸ್ಸೆಸ್‌ಗೆ ನಿಷ್ಠೆ ಹುಟ್ಟುಹಾಕುವಂತೆ ಮಾಡಲು, ಹೊಸ ಸ್ವಯಂಸೇವಕರು ಮತ್ತು ಯುವಜನರು ಹಿಂದುತ್ವಕ್ಕೆ ಬದ್ಧತೆ ಪ್ರದರ್ಶಿಸಲು ಈ ಶಿಬಿರಗಳು ಶ್ರಮಿಸುತ್ತಿರುತ್ತವೆ ಎಂಬುದು ತಾರ್ಕಿಕವಾಗಿ ಮಹತ್ವದ ಅಂಶ.

ಅಮೆರಿಕದಲ್ಲಿರುವ ಎಲ್ಲ ಶಾಖೆಗಳು ಕುಟುಂಬ ಮೂಲಗಳನ್ನು ಹೊಂದಿದ್ದು, ಸಭೆಗಳಲ್ಲಿ ಭಾಗವಹಿಸುವವರಲ್ಲಿ ಹೆಚ್ಚಿನವರು ಕುಟುಂಬಕ್ಕೆ ಸೇರಿದ ಸದಸ್ಯರು ಎಂಬುದು ನಮಗೆ ತಿಳಿದುಬಂತು. ಭಾರತದಂತೆಯೇ ಅಮೆರಿಕದ ಶಾಖೆಯಲ್ಲಿ ಹೆಚ್ಚು ವ್ಯತ್ಯಾಸಗಳಿಲ್ಲದಿದ್ದರೂ ಇಲ್ಲಿ ಹೆಣ್ಣುಮಕ್ಕಳು ಮತ್ತು ಗಂಡಸರು ಸಮಾನವಾಗಿ ಭಾಗವಹಿಸುತ್ತಾರೆ,” ಎಂದು ನಮ್ಮ ಕಾರ್ಯವಾಹ್ ತಿಳಿಸಿದರು.

ವಯಸ್ಸನ್ನು ಆಧರಿಸಿ ಭಾರತದಲ್ಲಿ ಕೂರಿಸುವಂತೆಯೇ ಶಿಬಿರಾರ್ಥಿಗಳನ್ನು ಅಲ್ಲಿ ಕೂರಿಸಲಾಗಿತ್ತು. ಮೊದಲು ಭಗವಧ್ವಜವನ್ನು ಹಾರಿಸಿ ನಮನ ಸಲ್ಲಿಸಲಾಯಿತು. ನಂತರ ಹಿಂದೂ ಏಕತೆಗೆ ಸಂಬಂಧಿಸಿದ ಪ್ರಾರ್ಥನೆ ಹಾಡಲಾಯಿತು. ಅದರಲ್ಲಿ ಹಿಂದೂ, ಬೌದ್ಧ, ಜೈನ ಹಾಗೂ ಸಿಖ್ ಧರ್ಮಗಳ ಪೂಜೆಗೆ ಮನ್ನಣೆ ಇದೆ ಎಂದು ಸಾರಲಾಯಿತು. ಯೋಗ, ಸೂರ್ಯ ನಮಸ್ಕಾರದಂತಹ ವ್ಯಾಯಾಮಗಳನ್ನು ಹೇಳಿಕೊಡಲಾಯಿತು. ಖೋಖೋದಂತಹ ಆಟಗಳನ್ನು ಆಡಿದ ಬಳಿಕ ಸಾಮಾಜಿಕ, ರಾಜಕೀಯ ಅಂಶಗಳನ್ನು ಚರ್ಚಿಸುವ ಬೌದ್ಧಿಕ್ ಗುಂಪು ಚರ್ಚೆ ಆರಂಭವಾಯಿತು. ತಾಯಿ ಭಾರತವನ್ನು ನೆನಪಿಸುವಂತಹ ಗೀತೆಯನ್ನು ಹಾಡುವುದರೊಂದಿಗೆ ಶಿಬಿರ ಮುಕ್ತಾಯವಾಯಿತು. ಆರಂಭದ ಹಾಡನ್ನು ಹದಿಹರೆಯದ ಹುಡುಗನೊಬ್ಬ ಹಾಡಿದರೆ, ಮುಕ್ತಾಯ ಗೀತೆಯನ್ನು ಹದಿಹರೆಯದ ಹುಡುಗಿಯೊಬ್ಬಳು ಹಾಡಿದಳು.

ಈ ನಿರ್ದಿಷ್ಟ ಸಭೆಯಲ್ಲಿ ಸಂಸ್ಕೃತವನ್ನು ಪ್ರಚುರಗೊಳಿಸುತ್ತಿದ್ದ ಸಂಸ್ಥೆಗೆ ಸೇರಿದ ಅಮೆರಿಕ ಮೂಲದ ಆರೆಸ್ಸೆಸ್ ಪ್ರಚಾರಕರೊಬ್ಬರು ಬೌದ್ಧಿಕ್ (ಸಂಸ್ಕೃತದಲ್ಲಿ) ಕಾರ್ಯಕ್ರಮ ನಡೆಸಿಕೊಟ್ಟರು. ಅಲ್ಲದೆ, ಹಾಗೆ ಭಾಗವಹಿಸಿದ್ದವರು ಅಮೆರಿಕದ ಸೇವಾ ಇಂಟರ್ನ್ಯಾಷನಲ್ ಸಂಸ್ಥೆಯ ಸ್ಥಳೀಯ ಪ್ರತಿನಿಧಿಯಾಗಿದ್ದರು. 1990ರಿಂದ ಸೇವಾ ಇಂಟರ್ನ್ಯಾಷನಲ್ ಅನೇಕ ರಾಷ್ಟ್ರೀಯ ಘಟಕಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸುತ್ತಿದೆ.

2002ರಲ್ಲಿ ಸ್ಥಾಪನೆಯಾದ ಅಮೆರಿಕದ ರಾಷ್ಟ್ರೀಯ ಘಟಕವು ಭಾರತ ಮತ್ತು ಇತರ ದೇಶಗಳಲ್ಲಿನ ಸಂಘಪರಿವಾರದ ಬಾಹುಗಳನ್ನು ಬಲಪಡಿಸಲು ಅಮೆರಿಕದ ಸ್ವಯಂಸೇವಕರಿಗೆ ಅವಕಾಶ ಒದಗಿಸುತ್ತಿದೆ. ಈ ನಿರ್ದಿಷ್ಟ ಶಾಖೆಯಲ್ಲಿ ಆಹಾರ ಮತ್ತು ಆಹಾರ ಬ್ಯಾಂಕುಗಳಿಗೆ ಆಹಾರ ದಾನ ಮಾಡುವುದು, ಜೊತೆಗೆ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮನೆಪಾಠ ಹೇಳಿಕೊಡುವಂತಹ ಕಾರ್ಯವನ್ನು ಸೇವಾ ಇಂಟರ್ನ್ಯಾಷನಲ್ ಮಾಡುತ್ತಿದೆ. 2017ರ ಬಳಿಕ ಅಮೆರಿಕದಲ್ಲಿ ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳು ಸಂಭವಿಸಿದಾಗ ಸ್ವಯಂಸೇವಕ ವೈದ್ಯರು ಹಾಗೂ ವೈದ್ಯಕೀಯ ಪರಿಣತರನ್ನು ಒದಗಿಸುವಂತಹ ಕಾರ್ಯದಲ್ಲಿ ಅಮೆರಿಕ ಘಟಕ ಭಾರಿ ಪ್ರಮಾಣದಲ್ಲಿ ತೊಡಗಿಕೊಂಡಿದೆ.

ವಾಲ್ಟರ್ ಕೆ ಆಂಡರ್ಸನ್ ಮತ್ತು ಶ್ರೀಧರ್ ಡಿ ದಾಮ್ಲೆ ಅವರು ಬರೆದ ‘ದಿ ಆರೆಸ್ಸೆಸ್ ಎ ವ್ಯೂವ್ ಟು ದ ಇನ್ ಸೈಡ್’ ಕೃತಿಯ ಆಯ್ದ ಭಾಗವನ್ನು ಲೇಖಕರ ಅನುಮತಿಯೊಂದಿಗೆ ಸ್ಕ್ರಾಲ್ ಜಾಲತಾಣ ಪ್ರಕಟಿಸಿದೆ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More