ಹಿಂದಿನ ವಿದ್ಯಾರ್ಥಿಗಳ ಹಿತ ಕಾಯಲು ಪರ್ಯಾಯ ಮಾರ್ಗಕ್ಕೆ ಮುಂದಾದ ಮುಕ್ತ ವಿವಿ

ಯುಜಿಸಿಯ ಮಾನ್ಯತೆ ಬಿಕ್ಕಟ್ಟು ಎದುರಿಸುತ್ತಿದ್ದ ಕರ್ನಾಟಕ ರಾಜ್ಯ ಮುಕ್ತ ವಿವಿ ಮಾನ್ಯತೆ ನವೀಕರಣ ಸಮಸ್ಯೆ ಸದ್ಯಕ್ಕೆ ಬಗೆಹರಿದಿದೆ. ಇದರಿಂದ ಹೊಸ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆಯಾದರೂ, ಮಾನ್ಯತೆ ಕಳೆದುಕೊಂಡ ವರ್ಷಗಳಲ್ಲಿ ಪದವಿ ಪಡೆದಿದ್ದ ವಿದ್ಯಾರ್ಥಿಗಳಿಗೆ ನೆರವಿಗೆ ಯುಜಿಸಿ ಧಾವಿಸಿಲ್ಲ

ವಿಶ್ವವಿದ್ಯಾಲಯ ಧನ ಸಹಾಯ ಆಯೋಗದಿಂದ (ಯುಜಿಸಿ) ಮಾನ್ಯತೆ ನವೀಕರಣ ಪಡೆಯುವಲ್ಲಿ ಯಶಸ್ವಿಯಾಗಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ, ಮಾನ್ಯತೆ ರದ್ದುಗೊಂಡಿದ್ದ ವರ್ಷಗಳ (೨೦೧೩-೧೪,೨೦೧೪-೧೫) ಅವಧಿಯಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳ ಭವಿಷ್ಯದ ಪ್ರಶ್ನೆ ಬಗ್ಗೆಯೂ ಚಿಂತಿತವಾಗಿದೆ. ಆತಂಕದಲ್ಲಿರುವ ವಿದ್ಯಾರ್ಥಿಗಳ ಹಿತ ಕಾಯುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯ ಇನ್ನೊಂದು ಸುತ್ತಿನ ಕಾನೂನು ಹೋರಾಟಕ್ಕೆ ಅಣಿಯಾಗಬೇಕಾದ ಅನಿವಾರ್ಯತೆಗೆ ಸಿಲುಕಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಿಂದಷ್ಟೇ ಮಾನ್ಯತೆ ನವೀಕರಿಸಿರುವುದರಿಂದ ಈ ವರ್ಷದಿಂದ ಪ್ರವೇಶಾತಿ ಪ್ರಕ್ರಿಯೆಗಳು ನಡೆಯಲಿವೆ. ಆದರೆ, ವಿಶ್ವವಿದ್ಯಾಲಯದ ಅಧಿಕಾರಿಗಳು ಈ ಹಿಂದೆ ಮಾಡಿದ್ದ ತಪ್ಪಿನಿಂದಾಗಿ ೯೫,೦೦೦ ವಿದ್ಯಾರ್ಥಿಗಳ ನೆರವಿಗೆ ಯುಜಿಸಿ ಧಾವಿಸದ ಕಾರಣ ಆತಂಕ ದೂರವಾಗಿಲ್ಲ. ಬಹುತೇಕ ವಿದ್ಯಾರ್ಥಿಗಳು ಕರ್ನಾಟಕ ಲೋಕಸೇವಾ ಆಯೋಗ, ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಸರ್ಕಾರಿ ನೌಕರಿಗೆ ನೇಮಕವಾಗಿದ್ದರೂ ಪದವಿ ನೀಡಿರುವ ವಿಶ್ವವಿದ್ಯಾಲಯದ ಮಾನ್ಯತೆ ಮರಳಿ ಬಾರದ ಕಾರಣ, ಇವರೆಲ್ಲರೂ ಸರ್ಕಾರಿ ಸೇವೆಯಿಂದ ವಂಚಿತರಾಗಿದ್ದಾರೆ.

ಹೀಗಾಗಿ ಈ ವಿದ್ಯಾರ್ಥಿಗಳು ಪಡೆದಿರುವ ಪದವಿಗಳಿಗೆ ಮಾನ್ಯತೆ ದೊರಕಿಸಿಕೊಡುವ ನಿಟ್ಟಿನಲ್ಲಿ ಪರ್ಯಾಯ ಮಾರ್ಗಗಳನ್ನು ಹುಡುಕಲಾರಂಭಿಸಿದೆ. “೨೦೧೩-೧೪ರಿಂದ ೨೦೧೪-೧೫ನೇ ಸಾಲಿನವರೆಗೆ ಮಾನ್ಯತೆ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಒಂದು ಬಾರಿಗೆ (One Time Settlement) ೨ ವರ್ಷಗಳ ಮಾನ್ಯತೆಯನ್ನು ಮರಳಿ ಪಡೆಯಲು ಯತ್ನಿಸುವಂತೆ ಯುಜಿಸಿಯನ್ನು ಕೋರಬಹುದು. ವಿದ್ಯಾರ್ಥಿಗಳ ಭವಿಷ್ಯ ಕುರಿತು ವಿಶ್ವವಿದ್ಯಾಲಯ ಮುಂದೊಡ್ಡುವ ವಾದವನ್ನು ಯುಜಿಸಿ ಪುರಸ್ಕರಿಸದೆ ಇದ್ದ ಪಕ್ಷದಲ್ಲಿ ಪುನಃ ನ್ಯಾಯಾಲಯದ ಮೆಟ್ಟಿಲೇರುವ ಮೂಲಕ ಯುಜಿಸಿಯೊಂದಿಗೆ ಕಾನೂನು ಸಂಘರ್ಷಕ್ಕಿಳಿಯುವ ಪರಿಸ್ಥಿತಿಯೂ ಎದುರಾಗಬಹುದು,” ಎನ್ನುತ್ತಾರೆ ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು.

ವಿಶ್ವವಿದ್ಯಾಲಯದ ಮಾನ್ಯತೆ ರದ್ದುಗೊಳ್ಳಲು ಅಧಿಕಾರಿಗಳು ಯುಜಿಸಿ ನಿಯಮ ಉಲ್ಲಂಘಿಸಿದ್ದೇ ಮೂಲ ಕಾರಣವಾಗಿತ್ತು. ಹೀಗಾಗಿ, ಈ ಹಿಂದೆ ಆಗಿರುವ ಉಲ್ಲಂಘನೆಯನ್ನು ನ್ಯಾಯಾಲಯದಲ್ಲಿ ಹೇಗೆ ಸಮರ್ಥನೆ ಮಾಡಿಕೊಳ್ಳಲಿದೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ವಿದ್ಯಾರ್ಥಿಗಳ ಹಿತವನ್ನು ಕಾಯಲು ಬದ್ಧವಾಗಿದ್ದೇನೆ. ಅವರನ್ನು ಮಧ್ಯದಾರಿಯಲ್ಲಿ ಕೈ ಬಿಡುವುದಿಲ್ಲ. ಖಂಡಿತವಾಗಿ ಪರ್ಯಾಯ ಮಾರ್ಗಗಳನ್ನು ಹುಡುಕುತ್ತೇವೆ.
ಶಿವಲಿಂಗಯ್ಯ, ಮುಕ್ತ ವಿವಿ ಕುಲಪತಿ

ನಿಯಮ ಉಲ್ಲಂಘಿಸಿ ಹೊರರಾಜ್ಯಗಳಲ್ಲಿ ತೆರೆದಿದ್ದ ಔಟ್‌ರೀಚ್‌ ಕೇಂದ್ರ ಮತ್ತು ಅಧ್ಯಯನ ಕೇಂದ್ರಗಳಿಗೆ ಕಾನೂನು ನೋಟಿಸ್‌ ಜಾರಿಗೊಳಿಸುವ ಮೂಲಕ ರದ್ದುಗೊಳಿಸಿತ್ತು. ಯುಜಿಸಿ ನಿರ್ದೇಶನವನ್ನು ವಿಶ್ವವಿದ್ಯಾಲಯ ಚಾಚೂತಪ್ಪದೆ ಪಾಲಿಸಿದ್ದರೂ ಈ ಹಿಂದಿನ ೨ ವರ್ಷದ ಮಾನ್ಯತೆಯನ್ನು ನವೀಕರಿಸಿಲ್ಲ.

ಆರ್ಥಿಕ ತೊಂದರೆ ಇಲ್ಲ: ಪ್ರವೇಶ ದಾಖಲಾತಿಯಿಂದ ಬರುವ ಶುಲ್ಕವೊಂದೇ ವಿಶ್ವವಿದ್ಯಾಲಯಕ್ಕೆ ಇರುವ ಪ್ರಮುಖ ಆದಾಯವಾಗಿದೆ. ಮಾನ್ಯತೆ ರದ್ದುಗೊಂಡಿದ್ದ ವರ್ಷದಿಂದ ಮುಕ್ತ ವಿಶ್ವವಿದ್ಯಾಲಯ ಪ್ರವೇಶ ದಾಖಲಾತಿ ನಡೆಸದೆ ಇದ್ದರೂ, ಆರ್ಥಿಕ ನಷ್ಟಕ್ಕೆ ಒಳಗಾಗಿಲ್ಲ. ವಿಶ್ವವಿದ್ಯಾಲಯದಲ್ಲಿ ಕಾಯ್ದಿಟ್ಟ ನಿಧಿಯೂ ಸೇರಿದಂತೆ ಇನ್ನಿತರ ನಿಧಿಗಳ ಮೊತ್ತ ಅಂದಾಜು ೫೯೦ ಕೋಟಿ ರು. ಇದೆ. ಇದರಲ್ಲಿ ಕಾರ್ಪಸ್‌ ಫಂಡ್‌ ಹೆಸರಿನಲ್ಲಿ ೨೭೦ ಕೋಟಿ, ಪೆನ್ಷನ್‌ ಫಂಡ್‌ ಹೆಸರಿನಲ್ಲಿ ೧೦೦ ಕೋಟಿ ರು. ಒಳಗೊಂಡಿದೆ. ಇದರಿಂದ ಬರುತ್ತಿದ್ದ ಬಡ್ಡಿ ಮೊತ್ತದಿಂದ ವಿಶ್ವವಿದ್ಯಾಲಯ ಕಾರ್ಯನಿರ್ವಹಿಸುತ್ತಿದೆ. ಮಾನ್ಯತೆ ರದ್ದಾಗಿದ್ದರಿಂದಾಗಿ ೨೦೧೫-೧೬ರಿಂದ ೨೦೧೭-೧೮ನೇ ಸಾಲಿನವರೆಗೆ ಯಾವುದೇ ಪ್ರವೇಶ ದಾಖಲಾತಿ ನಡೆಸದೆ ಇದ್ದರೂ, ಬಡ್ಡಿ ಹಣದಿಂದಲೇ ಪ್ರತಿ ತಿಂಗಳು ವಿಶ್ವವಿದ್ಯಾಲಯದ ಅಧಿಕಾರಿ, ನೌಕರರಿಗೆ ವೇತನ ತಪ್ಪದೆ ಪಾವತಿಯಾಗುತ್ತಿದೆ.

ಕುಲಪತಿ, ಕುಲಸಚಿವರು ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿ, ನೌಕರರಿಗೆ ವೇತನ ಮತ್ತು ಇತರ ಭತ್ಯೆಗಳಿಗೆಂದು ಪ್ರತಿವರ್ಷ ೨೪ ಕೋಟಿ (ಮಾಸಿಕ ೨ ಕೋಟಿ) ರುಪಾಯಿ ಬೇಕು. ೨೦೧೮-೧೯ನೇ ಸಾಲಿನಲ್ಲಿ ಕನಿಷ್ಠ ೫೦,೦೦೦ ವಿದ್ಯಾರ್ಥಿಗಳು ಪ್ರವೇಶ ಪಡೆದುಕೊಂಡರೆ ಅಂದಾಜು ೩೦ರಿಂದ ೪೦ ಕೋಟಿ ರು. ಆದಾಯ ಬರುವ ಸಾಧ್ಯತೆ ಇದೆ ಎಂದು ವಿವಿ ಮೂಲಗಳು ತಿಳಿಸಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More