ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

‘ಥ್ಯಾಂಕ್ ಯು ಕರ್ನಾಟಕ’ದಲ್ಲಿ ಸಿಎಂ ಎಚ್ಡಿಕೆ, ದಲೈಲಾಮಾ ಭಾಗಿ

ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಶುಕ್ರವಾರ ಕೇಂದ್ರೀಯ ಟಿಬೆಟಿಯನ್ ಆಡಳಿತ ಆಯೋಜಿಸಿರುವ ಥ್ಯಾಂಕ್ ಯು ಕರ್ನಾಟಕ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಭಾಗವಹಿಸಲಿದ್ದಾರೆ. ಬೌದ್ಧ ಧರ್ಮಗುರು ದಲೈಲಾಮಾ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಆನಂತರ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರಕ್ಕೆ ತೆರಳಲಿದ್ದಾರೆ.

ನಾಲ್ಕು ದಿನಗಳ ಲಾರ್ಡ್ಸ್ ಟೆಸ್ಟ್‌ಗೆ ಇಂಡಿಯಾ-ಇಂಗ್ಲೆಂಡ್ ಸಜ್ಜು

ಭಾರತ ಮತ್ತು ಇಂಗ್ಲೆಂಡ್ ನಡುವಣದ ಎರಡನೇ ಟೆಸ್ಟ್ ಪಂದ್ಯದ ಮೊದಲ ದಿನದಾಟ ವರುಣನಾಟದಲ್ಲಿ ಕಳೆದುಹೋಗಿದ್ದು, ಪಂದ್ಯ ನಾಲ್ಕು ದಿನಗಳಿಗೆ ಸೀಮಿತವಾದಂತಾಗಿದೆ. ಮಳೆಯಿಂದಾಗಿ ಮೊದಲ ದಿನದಾಟ ಟಾಸ್ ಪ್ರಕ್ರಿಯೆಯೂ ನಡೆಯದೆ ರದ್ದಾಗಿತ್ತು. ಪಂದ್ಯದ ಎರಡನೇ ದಿನವಾದ ಇಂದು ಅರ್ಧತಾಸು ಮುಂಚಿತವಾಗಿಯೇ ಅಂದರೆ ಭಾರತೀಯ ಕಾಲಮಾನ ಮಧ್ಯಾಹ್ನ ೩.೦೦ಕ್ಕೆ ಪಂದ್ಯ ಶುರುವಾಗುವ ಸಾಧ್ಯತೆ ಇದೆ. ಒಂದೊಮ್ಮೆ ಮಳೆ ಇಂದೂ ಕೂಡ ಆಟಕ್ಕೆ ಅಡ್ಡಿಪಡಿಸಿದರೆ, ಲಾರ್ಡ್ಸ್ ಟೆಸ್ಟ್‌ ಮೇಲೆ ಇನ್ನಷ್ಟು ಕರಿನೆರಳು ಆವರಿಸಲಿದೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಸೋಲನುಭವಿಸಿರುವ ಕೊಹ್ಲಿ ಪಡೆ ಐದು ಪಂದ್ಯಗಳ ಸರಣಿಯಲ್ಲಿ ಸಮಬಲ ಸಾಧಿಸುವ ಸಂಕಲ್ಪ ತೊಟ್ಟಿದ್ದರೆ, ಇಂಗ್ಲೆಂಡ್, ೨-೦ ಮುನ್ನಡೆಯ ಚಿಂತನೆಯಲ್ಲಿದೆ.

ರಿತುಪರ್ಣಾ, ಅಜಯ್ ಜಯರಾಂ ಸೆಮಿಫೈನಲ್‌ ಹೊಸ್ತಿಲಲ್ಲಿ

ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ರಿತುಪರ್ಣಾ ದಾಸ್ ಹಾಗೂ ಅಜಯ್ ಜಯರಾಂ ಸೆಮಿಫೈನಲ್‌ ಹೊಸ್ತಿಲಲ್ಲಿದ್ದಾರೆ. ಪುರುಷರ ಸಿಂಗಲ್ಸ್ ವಿಭಾಗದ ಇಂದಿನ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಅಜಯ್, ಕೆನಡಾ ಆಟಗಾರ ಕ್ಸಿಯಾವೊಡಾಂಗ್ ಶೆಂಗ್ ವಿರುದ್ಧ ಕಾದಾಡಲಿದ್ದಾರೆ. ಅಂತೆಯೇ ವನಿತೆಯರ ಸಿಂಗಲ್ಸ್ ವಿಭಾಗದ ಎಂಟರ ಘಟ್ಟದ ಪಂದ್ಯದಲ್ಲಿ ರಿತುಪರ್ಣಾ, ಫಿಟ್ಟಾಯಪಾರ್ನ್ ಚಿಯಾವಾನ್ ಎದುರು ಕಾದಾಡದ್ದಾರೆ. ನಿನ್ನೆ ನಡೆದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ರಿತುಪರ್ಣಾ, ಚೈನೀಸ್ ತೈಪೆಯ ಸುಂಗ್ ಶುವೊ ಯುನ್ ವಿರುದ್ಧ ೨೧-೮, ೨೧-೧೪ರ ಎರಡು ನೇರ ಗೇಮ್‌ಗಳಲ್ಲಿ ಗೆಲುವು ಪಡೆದರು. ಇನ್ನು ಪುರುಷರ ವಿಭಾಗದಲ್ಲಿ ಮಿಥುನ್ ಮಂಜುನಾಥ್ ಚೀನಿ ಆಟಗಾರ ಝೌ ಜೆಕಿ ಎದುರು ಸೆಣಸಲಿದ್ದಾರೆ.

ಚಿಕಿತ್ಸೆಗಾಗಿ ಅಮೆರಿಕ್ಕೆ ತೆರಳಲಿದ್ದಾರೆ ಗೋವಾ ಸಿಎಂ ಪರಿಕ್ಕರ್

ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರು ಚಿಕಿತ್ಸೆಗಾಗಿ ಪುನಃ ಅಮೆರಿಕಕ್ಕೆ ತೆರಳುತ್ತಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಕಚೇರಿ ಪ್ರಕಟಣೆ ಹೊರಡಿಸುವ ಮೂಲಕ, “ಸ್ವಾತಂತ್ರ್ಯ ದಿನಾಚರಣೆ ವೇಳೆ ಪರಿಕ್ಕರ್ ಅವರು ಹಾಜರಿರುವುದಿಲ್ಲ. ಆಗಸ್ಟ್‌ ೧೭ಕ್ಕೆ ಅವರು ವಾಪಸಾಗಲಿದ್ದಾರೆ,” ಎಂದು ತಿಳಿಸಿದೆ. ೬೨ ವರ್ಷದ ಪರಿಕ್ಕರ್ ಅವರು ಕರಳು ಸಂಬಂಧಿ ರೋಗದ ಚಿಕಿತ್ಸೆಗಾಗಿ ಕಳೆದ ಮಾರ್ಚ್ ೭ರಿಂದ ಜೂನ್ ೧೪ರವರೆಗೂ ಅಮೆರಿಕಕ್ಕೆ ತೆರಳಿದ್ದರು.

ರಾಜ್ಯಸಭೆಯಲ್ಲಿ ಅನುಮೋದನೆಗೆ ಬರಲಿದೆ ತ್ರಿವಳಿ ತಲಾಕ್ ಮಸೂದೆ

ಸಂಸತ್ ನ ಮುಂಗಾರು ಅಧಿವೇಶನ ಇಂದು ಕೊನೆಗೊಳ್ಳಲಿದ್ದು, ರಾಜ್ಯಸಭೆಯಲ್ಲಿ ತ್ರಿವಳಿ ತಲಾಕ್ ಮಸೂದೆ ಅನುಮೋದನೆಗೆ ಬರಲಿದೆ. ಪತ್ನಿಗೆ ತ್ರಿವಳಿ ತಲಾಕ್ ನೀಡುವ ಪತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸುವ ಮುಸ್ಲಿಂ ಮಹಿಳೆಯರ ಮದುವೆ ಹಕ್ಕು ರಕ್ಷಣೆ ಮಸೂದೆಯಲ್ಲಿ ಮುಸ್ಲಿಂ ಪುರುಷರಿಗೆ ಜಾಮೀನು ಪಡೆಯುವ ಅವಕಾಶವನ್ನು ಕಲ್ಪಿಸುವ ತಿದ್ದುಪಡಿಗೆ ಗುರುವಾರ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೀಗಾಗಿ ಇಂದು ಮಸೂದೆ ಮತ್ತೊಮ್ಮೆ ಅಂಗೀಕಾರಕ್ಕಾಗಿ ರಾಜ್ಯಸಭೆಗೆ ಬರಲಿದೆ. ತ್ರಿವಳಿ ತಲಾಕ್ ನಿಷೇಧ ಮಸೂದೆಯನ್ನು 2017ರ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲಾಯಿತು. ಲೋಕಸಭೆಯಲ್ಲಿ ಅನುಮೋದನೆ ದೊರೆತರೂ ಮೇಲ್ಮನೆಯಲ್ಲಿ  ಕಾಂಗ್ರೆಸ್ ಮತ್ತಿತರ ಪಕ್ಷಗಳು ಕೆಲವು ತಿದ್ದುಪಡಿಗೆ ಪಟ್ಟು ಹಿಡಿದು ವಿಧೇಯಕಕ್ಕೆ ಅಡ್ಡಿ ಮಾಡಿದ್ದವು. ಹೀಗಾಗಿ ಇಂದು ಮತ್ತೆ ವಿರೋಧ ಪಕ್ಷಗಳು ಆಕ್ಷೇಪ ಎತ್ತಿದರೆ ಸುಗ್ರೀವಾಜ್ಞೆ ಮೂಲಕ ಕಾನೂನು ಜಾರಿಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

ಬ್ಯಾಂಕುಗಳು ಮನಸೋ ಇಚ್ಚೆ ಸಾಲ ನೀಡುವಾಗ ಆರ್‌ಬಿಐ ಏನು ಮಾಡುತ್ತಿತ್ತು?: ಸಿಎಜಿ
ಎಎನ್ಐ ಸುದ್ದಿಸಂಸ್ಥೆಯ ಎಡವಟ್ಟು ವರದಿಗಳ ಹಿಂದಿನ ಮರ್ಮವೇನು?
ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
Editor’s Pick More