ಖರೀದಿಸಿದ ರಕ್ಷಣಾ ಉಪಕರಣಗಳ ಮಾಹಿತಿ ಲಭ್ಯ ಇರುವಾಗ ರಾಫೇಲ್ ಡೀಲ್ ಹೇಗೆ ಗೌಪ್ಯ?

2004ರಿಂದ 2016ರವರೆಗೆ ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಮತ್ತು ಕಸ್ಟಮ್ಸ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬೇರೆ ದೇಶಗಳಿಂದ ಆಮದು ಮಾಡಿಕೊಂಡಿದ್ದ ಎಲ್ಲ ರಕ್ಷಣಾ ಉಪಕರಣಗಳ ಬಗ್ಗೆ ಮಾಹಿತಿ ನೀಡಿತ್ತು ಎಂದು ತಿಳಿದುಬಂದಿದೆ. ಹಾಗಾಗಿ, ರಾಫೇಲ್ ಡೀಲ್ ಕುರಿತ ಅನುಮಾನಗಳಿಗೆ ಬಲ ಬಂದಿದೆ

ರಾಫೇಲ್‌ ಡೀಲ್‌ ಪ್ರಕರಣದ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಪಕ್ಷವು ಸೋನಿಯಾ ಗಾಂಧಿ ನೇತೃತ್ವದಲ್ಲಿ ಪ್ರತಿಭಟಿಸಿದೆ. ಪ್ರಧಾನಿ ಮೋದಿಯವರು ಏಕಾಂಗಿಯಾಗಿ ಫ್ರಾನ್ಸ್‌ ದೇಶದೊಂದಿಗೆ ರಾಫೇಲ್‌ ಒಪ್ಪಂದ ಮಾಡಿಕೊಂಡಿದ್ದು, ಇದರಲ್ಲಿ ಅಂದಾಜು 45 ಕೋಟಿ ರು. ಹಗರಣ ನಡೆದಿದೆ ಎಂದು ಕಾಂಗ್ರೆಸ್ ಪಕ್ಷದ ನಾಯಕರು ಆರೋಪಿಸಿದ್ದಾರೆ. ಬೋಫೋರ್ಸ್‌ ಹಗರಣಕ್ಕಿಂತ ಬಹುದೊಡ್ಡ ಹಗರಣ ರಾಫೇಲ್‌ ಒಪ್ಪಂದದಲ್ಲಿ ನಡೆದಿದೆ ಎಂದು ಸ್ವತಃ ಬಿಜೆಪಿ ಹಿರಿಯ ನಾಯಕ ಅರುಣ್‌ ಶೌರಿ ಹಾಗೂ ಕೇಂದ್ರ ಮಾಜಿ ಹಣಕಾಸು ಸಚಿವ ಯಶವಂತ ಸಿನ್ಹಾ ಅವರು ಬುಧವಾರ ಆರೋಪಿಸಿದ್ದರು. ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್‌ ಪಕ್ಷವು, ಕೇಂದ್ರದ ವಿರುದ್ಧ ಸಮರವನ್ನೇ ಸಾರಿದೆ.

ಇದೇ ವೇಳೆ, ರಾಫೇಲ್‌ ಡೀಲ್‌ ಪ್ರಕರಣದ ಬಗ್ಗೆ ಸ್ಪಷ್ಟಿಕರಣ ನೀಡಲು ಪ್ರತಿಪ್ರಕ್ಷಗಳು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿವೆ. ‘ರಾಷ್ಟ್ರೀಯ ಭದ್ರತೆ’ ವಿಚಾರ ಮುಂದಿಟ್ಟುಕೊಂಡು ಕೇಂದ್ರ ಸರ್ಕಾರ ರಾಫೇಲ್‌ ಡೀಲ್‌ ವಿಷಯದಲ್ಲಿ ನುಣುಚಿಕೊಳ್ಳುವ ಪ್ರಯತ್ನವನ್ನು ಹಲವು ಭಾರಿ ಮಾಡಿದೆ. ಯುದ್ಧ ವಿಮಾನ ಹಾಗೂ ಶಸ್ತ್ರಾಸ್ತ್ರ ಆಮದು ಬಗೆಗಿನ ಮಾಹಿತಿಯನ್ನು ಸಂಸತ್ತಿನಲ್ಲಿ ನೀಡಲು ನಿರಾಕರಿಸುತ್ತಿರುವ ಕೇಂದ್ರ ಸರ್ಕಾರದ ಕ್ರಮದ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ರಕ್ಷಣಾ ಉಪಕರಣಗಳ ಆಮದು ಹಾಗೂ ಅದರ ದತ್ತಾಂಶಗಳ ಬಗ್ಗೆ ‘ದಿ ವೈರ್‌’ ವರದಿ ಮಾಡಿದೆ. 2004ರಿಂದ 2016ರವರೆಗೆ ಸೆಂಟ್ರಲ್ ಬೋರ್ಡ್ ಆಫ್ ಎಕ್ಸೈಸ್ ಮತ್ತು ಕಸ್ಟಮ್ಸ್ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಬೇರೆ ದೇಶಗಳಿಂದ ಆಮದು ಮಾಡಿಕೊಂಡಿದ್ದ ಎಲ್ಲ ರಕ್ಷಣಾ ಉಪಕರಣಗಳ ಬಗ್ಗೆ ಮಾಹಿತಿ ನೀಡಿತ್ತು ಎಂಬುದಾಗಿ ತಿಳಿದುಬಂದಿದೆ. ರಕ್ಷಣಾ ಇಲಾಖೆ ಖರೀದಿಸಿದ್ದ ಬೋಲ್ಟ್‌ಗಳು, ಮಿಸೈಲ್‌ಗಳು, ಪೆರಿಸ್ಕೋಪ್‌ಗಳು ಹಾಗೂ ನ್ಯೂಕ್ಲಿಯರ್‌ ರಿಯಾಕ್ಟರ್‌ಗಳ ಖರೀದಿ ಸೇರಿದಂತೆ ಬೇರೆ ದೇಶಗಳೊಂದಿಗೆ ತಾನು ನಡೆಸಿದ್ದ ವಹಿವಾಟಿನ ಪ್ರತಿ ವಿವರಗಳನ್ನು ಪ್ರಕಟಿಸಿತ್ತು ಎನ್ನಲಾಗಿದೆ.

ಈ ರಕ್ಷಣಾ ಉಪಕರಣಗಳ ಆಮದು ಮಾಹಿತಿಯನ್ನು ಜೌಬಾ, ಇಂಪೋಡ್ರೈವ್‌ ಇಂಡಿಯಾ, ಟ್ರೇಡ್‌ ಇಂಟಲಿಜೆನ್ಸ್‌, ಸೈಬೆಕ್ಸ್‌ ಎಕ್ಸಿಮ್ ಹಾಗೂ ಎಕ್ಸಿಮ್‌ ಪಲ್ಸ್‌ ಹೆಸರಿನ ವೆಬ್‌ಸೈಟ್‌ಗಳ ಮೂಲಕ ಪಡೆಯಬಹುದಾಗಿತ್ತು. ಕಸ್ಟಮ್ಸ್‌ ಇಲಾಖೆಯ icegate.gov.in ಪೋರ್ಟ್‌ಲ್‌ನಲ್ಲಿರುವ ಮೂಲ ಮಾಹಿತಿಗಳನ್ನು ಈ ವೈಬ್ ಸೈಟ್‌ಗಳು ತಮ್ಮ ತಾಣದಲ್ಲಿ ಪ್ರಕಟಿಸಿದ್ದವು. ಆ ಅಂಕಿ-ಅಂಶಗಳುಳ್ಳ ಮಾಹಿತಿ ಸೋರಿಕೆ ಬಗ್ಗೆ ಕೆಲ ವ್ಯಾಪಾರ ಸಂಸ್ಥೆಗಳು ಪ್ರಧಾನಿ ಕಚೇರಿಗೆ ದೂರು ನೀಡಿದ್ದವು. ಆ ಹಿನ್ನೆಲೆಯಲ್ಲಿ 2016ರ ನ.25ರಂದು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಮಾಹಿತಿಯನ್ನು ಸಾರ್ವಜನಿಕರಿಗೆ ಒದಗಿಸುವುದನ್ನು ಸ್ಥಗಿತಗೊಳಿಸಲಾಯಿತು. ಇದಕ್ಕೂ ಮುನ್ನ ಕಸ್ಟಮ್ಸ್‌ ಬೋರ್ಡ್‌ ಸೇರಿದಂತೆ ಹಲವು ಇಲಾಖೆಗಳಿಗೆ ತನ್ನ ಕಾರ್ಯಗಳ ಪ್ರಾಮಾಣಿಕತೆ ಹಾಗೂ ಸೂಕ್ಷ್ಮ ವ್ಯವಹಾರದ ಮಾಹಿತಿ ಗೌಪ್ಯತೆ ನಡುವೆ ಸಮತೋಲನ ಕಾಪಾಡಿಕೊಳ್ಳುವುದರ ಬಗ್ಗೆ ಸರ್ಕಾರ ಸೂಚಿಸಿತ್ತು. ಆ ದತ್ತಸಂಚಯ ಸ್ಥಗಿತಗೊಳಿಸುವುದರ ಕುರಿತಾದ ಕಡತವನ್ನು ಆರ್‌ಟಿಐ ಮೂಲಕ ಪಡೆಯಲಾಗಿದ್ದು, ಕಸ್ಟಮ್ಸ್‌ ಇಲಾಖೆ ಹೇಗೆ ಪಾರದರ್ಶಕತೆ ಮತ್ತು ಗೌಪ್ಯತೆ ಸಮಸ್ಯೆಗಳನ್ನು ಪರಿಗಣಿಸಿದೆ ಎಂಬುದರ ಕುರಿತು ತಿಳಿಯಬಹುದು.

ರಕ್ಷಣಾ ಉಪಕರಣಗಳ ಆಮದು ಬಗೆಗಿನ ಅಂಕಿ-ಅಂಶಗಳ ವಿವರ ನೋಡಿದಾಗ, ತನ್ನ ರಕ್ಷಣಾ ಬಜೆಟ್‌ನಲ್ಲಿ ಭಾರತವು ಎಷ್ಟು ಪ್ರಮಾಣದ ಹಣ ವ್ಯಯಿಸುತ್ತದೆ ಹಾಗೂ ಯಾವ ರೀತಿಯಲ್ಲಿ ಖರ್ಚು ಮಾಡುತ್ತದೆ ಎಂಬುದನ್ನು ಅರಿಯಬಹುದು. ರಾಫೇಲ್‌ ಕಂಪನಿಯು ಡೆಸ್ಸಾಲ್ಟ್ ಏವಿಯೇಷನ್, ಪ್ರಸಿದ್ಧ ಜೆಟ್‌ ಮಿರಾಜ್‌ ಮತ್ತು ಅದರ ನವೀಕರಿಸಿದ ಆವೃತ್ತಿ ಮಿರಾಜ್-2000ಗಳನ್ನು ಭಾರತಕ್ಕೆ ಸರಬರಾಜು ಮಾಡಿದ್ದರ ಮಾಹಿತಿ ಹಾಗೂ ಉಪಕರಣಗಳಿಗೆ ವ್ಯಯಿಸಿದ ಹಣದ ಬಗೆಗಿನ ಮಾಹಿತಿ ಇಲ್ಲಿ ಪಡೆಯಬಹುದು.

ಭಾರತವು ಫ್ರಾನ್ಸ್‌ನಿಂದ ಯುದ್ಧವಿಮಾನಗಳನ್ನಷ್ಟೇ ಆಮದು ಮಾಡಿಕೊಳ್ಳುವುದಿಲ್ಲ. ತಂತ್ರಜ್ಞಾನ ವರ್ಗಾವಣೆ ಒಪ್ಪಂದದ ಮೂಲಕ ಎರಡೂ ದೇಶಗಳು ‘ಪ್ರಾಜೆಕ್ಟ್‌-75’ ಅಡಿ ಕೆಲಸ ಮಾಡುತ್ತಿದೆ. ಈ ಮೂಲಕ, ಪ್ರೊಪೆಲ್ಲ್‌ಗಳು, ಸ್ಟೀರಿಂಗ್‌ ಗಿಯರ್‌ಗಳು, ಅನಿಲ ಟರ್ಬೊ ಉತ್ಪಾದಕಗಳು, ಟಾರ್ಪೆಡೋಸ್‌ಗಳಿಗೆ ಬೇಕಾದ ಬಿಡಿಭಾಗಗಳು, ಸೋನಾರ್‌ ಬಯೋಕಾನ್‌ಗಳು, ಏರ್ ಫ್ಲೋ ಕವಾಟಗಳು ಮತ್ತು ಇತರ ಬಿಡಿಭಾಗಗಳ ಬಗೆಗಿನ ಮಾಹಿತಿಯೂ ನಮಗೆ ದೊರಕುತ್ತದೆ.

ಭಾರತವು ಫ್ರಾನ್ಸ್‌ ಹೊರತುಪಡಿಸಿ ಅನ್ಯದೇಶಗಳಿಂದ ಆಮದು ಮಾಡಿಕೊಂಡ ರಕ್ಷಣಾ ಉಪಕರಣಗಳ ಬಗ್ಗೆಯೂ ಮಾಹಿತಿ ದೊರಕುತ್ತದೆ. ರಷ್ಯಾದಿಂದ ಅಣು ರಿಯಾಕ್ಟರ್‌ಗಳ ಬಿಡಿಭಾಗಗಳು, ಯುಎಸ್‌ನಿಂದ ಡಿಆರ್‌ಡಿಒ ಸಂಶೋಧನಾ ಕೇಂದ್ರಗಳಿಗೆ ತರಿಸಿಕೊಂಡ ಉಪಕರಣಗಳ ಬಗ್ಗೆ ಅಂಕಿ-ಅಂಶಗಳನ್ನು ಪಡೆಯಬಹುದು.

ಅಮೆರಿಕ ಸೇರಿದಂತೆ ಜಗತ್ತಿನ ಹಲವು ದೇಶಗಳು ಅನ್ಯದೇಶಗಳೊಂದಿಗೆ ಆಮದು ಮಾಡಿಕೊಂಡ ರಕ್ಷಣಾ ಉಪಕರಣಗಳ ಬಗೆಗಿನ ವಿವರಗಳನ್ನು ಪ್ರಕಟಿಸುತ್ತವೆ. ಆದರೆ, ಈಗ ರಾಫೇಲ್‌ ಡೀಲ್‌ ಬಗ್ಗೆ ಎದ್ದಿರುವ ಪ್ರಶ್ನೆ ಹಾಗೂ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅದರ ಬಗ್ಗೆ ಕೊಡುತ್ತಿರುವ ಅಸಮಂಜಸ ಸ್ಪಷ್ಟನೆಗಳು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More