ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ: ಬಿಎಸ್‌ವೈ

ರೈತರ ಎರಡು ಲಕ್ಷ ರುಪಾಯಿವರೆಗೆ ಸಾಲಮನ್ನಾ ಮಾಡುವುದಾಗಿ ಹೇಳಿದ್ದ ರಾಜ್ಯ ಸರ್ಕಾರವು ಒಂದು ಲಕ್ಷ ರುಪಾಯಿ ಸಾಲಮನ್ನಾ ಮಾಡಲು ಮುಂದಾಗಿರುವುದನ್ನು ನೋಡಿದರೆ ಸರ್ಕಾರವು ಆರ್ಥಿಕವಾಗಿ ದಿವಾಳಿ ಆಗಿದೆ ಎನಿಸುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್‌ ಯಡಿಯೂರಪ್ಪ ಹೇಳಿದ್ದಾರೆ. “ಲೋಕೋಪಯೋಗಿ ಇಲಾಖೆ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳಿಗೆ ೧೦ ಸಾವಿರ ಕೋಟಿ ರುಪಾಯಿಯನ್ನೂ ಸರ್ಕಾರ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್‌ ಆಡಳಿತದಲ್ಲಿ ಘೋಷಿಸಿದ್ದ ೯ ಸಾವಿರ ಕೋಟಿ ರುಪಾಯಿ ರೈತರ ಸಾಲಮನ್ನಾದ ಮೊತ್ತವನ್ನು ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಿಲ್ಲ. ಇನ್ನು, ರಾಷ್ಟ್ರೀಕೃತ ಬ್ಯಾಂಕುಗಳಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲಿಂದ ಹಣ ತರುತ್ತಾರೆ?” ಎಂದು ಅವರು ಪ್ರಶ್ನಿಸಿದ್ದಾರೆ,

ರಾಮಚಂದ್ರಾಪುರ ಮಠಕ್ಕೆ ಗೋಕರ್ಣ ಮಹಾಬಲೇಶ್ವರ ದೇವಸ್ಥಾನ ಹಸ್ತಾಂತರ ಆದೇಶ ರದ್ದು

ಗೋಕರ್ಣದ ಮಹಾಬಲೇಶ್ವರ ದೇವಾಲಯವನ್ನು ಈ ಹಿಂದೆ ಹೊಸನಗರದ ರಾಮಚಂದ್ರಾಪುರ ಮಠಕ್ಕೆ ಹಸ್ತಾಂತರ ಮಾಡಿದ್ದ ಸರಕಾರದ ಆದೇಶವನ್ನು ಹೈಕೋರ್ಟ್‌ ಶುಕ್ರವಾರ ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಅರವಿಂದ್ ಕುಮಾರ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. 2008ರ ಆಗಸ್ಟ್ 12ರಂದು ಬಿ ಎಸ್‌ ಯಡಿಯೂರಪ್ಪ ನೇತೃತ್ವದ ಸರ್ಕಾರ ದೇವಾಲಯವನ್ನು ರಾಮಚಂದ್ರಾಪುರ ಮಠದ ಸುಪರ್ದಿಗೆ ನೀಡಿತ್ತು. ದೇವಾಲಯವನ್ನು ಮುಜರಾಯಿ ಇಲಾಖೆ ಪಟ್ಟಿಯಿಂದ ಕೈಬಿಟ್ಟಿದ್ದ ಸರಕಾರದ ಆದೇಶವನ್ನು ಕೂಡ ಹೈಕೋರ್ಟ್‌ ರದ್ದುಗೊಳಿಸಿದೆ. ಜಿಲ್ಲಾಧಿಕಾರಿ ಉಸ್ತುವಾರಿಯಲ್ಲಿ ದೇವಾಲಯ ನಿರ್ವಹಣೆಗೆ ಕೋರ್ಟ್ ಸೂಚನೆ ನೀಡಿದೆ. ರಾಜ್ಯ ಸರ್ಕಾರದ ಧಾರ್ಮಿಕ ಮತ್ತು ದತ್ತಿ ಇಲಾಖೆ ಪುನಃ ವಶಕ್ಕೆ ತೆಗೆದುಕೊಳ್ಳಬೇಕು, ಜಿಲ್ಲಾಧಿಕಾರಿಗಳು ಉಸ್ತುವಾರಿ ವಹಿಸಿಕೊಳ್ಳಬೇಕು ಎಂದಿದೆ. ಉಸ್ತುವಾರಿ ಸಮಿತಿ ಸಲಹೆಗಾರರಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಬಿ ಎನ್ ಶ್ರೀಕೃಷ್ಣ ನೇಮಕವಾಗಿದ್ದಾರೆ.

ಚುನಾವಣಾ ನೀತಿಸಂಹಿತೆ ಉಲ್ಲಂಘನೆ; ಕ್ಷಮೆ ಯಾಚಿಸಿದ ಪಾಕ್ ಭಾವಿ ಪ್ರಧಾನಿ ಇಮ್ರಾನ್

ಜುಲೈ ೨೫ರಂದು ನಡೆದ ಪಾಕಿಸ್ತಾನ ಸಾರ್ವತ್ರಿಕ ಚುನಾವಣಾಯಲ್ಲಿ ನೀತಿಸಂಹಿತೆ ಉಲ್ಲಂಘನೆಗಾಗಿ ಪಾಕಿಸ್ತಾನದ ಭವಿಷ್ಯದ ಪ್ರಧಾನಿ ಇಮ್ರಾನ್ ಖಾನ್ ಚುನಾವಣಾ ಆಯೋಗದ ಕ್ಷಮೆ ಯಾಚಿಸಿದ್ದಾರೆ. ಪಿಟಿಐ ಪಕ್ಷದ ಮುಖ್ಯಸ್ಥ ಇಮ್ರಾನ್‌ ಖಾನ್‌ ಮತದಾನದ ವೇಳೆ ರಹಸ್ಯವಾಗಿ ಮತದಾನ ಮಾಡದೇ ಬಹಿರಂಗವಾಗಿ ಮತಪತ್ರ ಪ್ರದರ್ಶಿಸಿ ಮತ ನೀಡಿದ್ದ ಕಾರಣಕ್ಕಾಗಿ ಅವರಿಗೆ ಚುನಾವಣಾ ಆಯೋಗ ನೋಟಿಸ್ ನೀಡಿತ್ತು. ಅವರು ಗೆದ್ದ ಘೋಷಣೆಗೆ ತಡೆ ನೀಡಲಾಗಿತ್ತು. ಈ ಮೂಲಕ, ಇಮ್ರಾನ್‌ ಖಾನ್‌ ಪ್ರಮಾಣವಚನ ಸ್ವೀಕಾರಕ್ಕೆ ಇದ್ದ ತಡೆ ಅಂತ್ಯವಾದಂತಾಗಿದೆ. ಪ್ರಮಾಣ ವಚನ ಸ್ವೀಕಾರ ಇದೇ ಸ್ವಾತಂತ್ರ್ಯದಿನವಾದ ಆ.೧೪ರಂದು ನಡೆಯಲಿದೆ ಎಂದು ಈ ಮೊದಲು ತಿಳಿಯಲಾಗಿತ್ತು. ಅದು ಈಗ ಮುಂದಕ್ಕೆ ಹೋಗಿದ್ದು, ಆ.೧೮ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಜೀವಂತ ಬಾಂಬ್ ಸಮೇತ ಇಬ್ಬರ ಬಂಧನ

ಭಯೋತ್ಪಾದನಾ ಚಟುವಟಿಕೆಯಲ್ಲಿ ಪಾಲ್ಗೊಂಡ ಅನುಮಾನದ ಮೇಲೆ ಹಿಂದೂ ಗೋರಕ್ಷಕ ಸಂಘಟನೆಯೊಂದರ ಇಬ್ಬರನ್ನು ಮಹಾರಾಷ್ಟ್ರದ ಭಯೋತ್ಪಾದನಾ ವಿರೋಧಿ ದಳ ಬಂಧಿಸಿದೆ. ಬಂಧನದ ವೇಳೆ ಎಂಟು ದೇಶಗಳಿಂದ ತಯಾರಿಸಿದ ಬಾಂಬ್‌ ಹಾಗೂ ಸಾಹಿತ್ಯಕ ಪರಿಕರಗಳನ್ನು ವಶಪಡಿಸಿಕೊಳ್ಳಲಾಗಿದೆ. ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಸನಾತನ ಸಂಸ್ಥೆ ಮೇಲೆ ಬಾಂಬ್ ದಾಳಿಗೆ ಯತ್ನಿಸಿರುವ ಘಟನೆ ನಡೆದಿತ್ತು. ಈ ಕುರಿತು ಪೊಲೀಸರು ಸ್ಪಷ್ಟಪಡಿಸಿದ್ದು, ಬಂಧಿತರನ್ನು ಪುಣೆ ಹಾಗೂ ಔರಂಗಾಬಾದ್ ಬಾಂಬ್ ದಾಳಿ ನಡೆಸುವ ಶಂಕೆಯ ಮೇಲೆ ಬಂಧಿಸಲಾಗಿದೆ ಎಂದಿದ್ದಾರೆ.

ಜೂನ್ ತಿಂಗಳ ಕೈಗಾರಿಕಾ ಉತ್ಪನ್ನ ಸೂಚ್ಯಂಕ ಶೇ.7ಕ್ಕೆ ಏರಿಕೆ

ದೇಶದಲ್ಲಿ ಉತ್ಪಾದನಾ ವಲಯದಲ್ಲಿ ಚೇತರಿಕೆ ಕಂಡುಬಂದಿದ್ದು ಜೂನ್ ತಿಂಗಳ ಕೈಗಾರಿಕಾ ಉತ್ಪನ್ನ ಸೂಚ್ಯಂಕ (ಐಐಪಿ) ಶೇ.7ಕ್ಕೆ ಜಿಗಿದಿದೆ. ಇದು ನಾಲ್ಕು ತಿಂಗಳ ಗರಿಷ್ಠ ಏರಿಕೆ. 2018-19ನೇ ಸಾಲಿನ ಮೊದಲ ತ್ರೈಮಾಸಿಕದಲ್ಲಿ ಕೈಗಾರಿಕಾ ಉತ್ಪನ್ನ ಶೇ.5.2ರಷ್ಟಿದೆ. ರಾಯ್ಟರ್ ಸುದ್ದಿ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬಹುತೇಕ ಆರ್ಥಿಕ ತಜ್ಞರು ಮೊದಲ ತ್ರೈಮಾಸಿಕದಲ್ಲಿ ಶೇ.5.4ರಷ್ಟು ಎಂದು ಅಂದಾಜಿಸಿದ್ದರು. ಕೈಗಾರಿಕಾ ಉತ್ಪನ್ನ ಸೂಚ್ಯಂಕವು ಕೈಗಾರಿಕಾ ವಲಯದ ಸಿದ್ಧ ಉತ್ಪನ್ನವನ್ನು ಆಧರಿಸಿದೆ. ಉತ್ಪಾದನಾ ವಲಯವು ಶೇ.6.9ರಷ್ಟು ಹೆಚ್ಚಿದೆ. ಹಿಂದಿನ ತಿಂಗಳಿಗೆ ಹೋಲಿಸಿದರೆ ಶೇ.2.8ರಷ್ಟು ತ್ವರಿತ ಹೆಚ್ಚಳ ದಾಖಲಿಸಿದೆ. ಉತ್ಪಾದನಾ ವಲಯದಲ್ಲಿರುವ 23 ಕೈಗಾರಿಕಾ ಸಮೂರದ ಪೈಕಿ 19 ಕೈಗಾರಿಕಾ ಸಮೂಹಗಳು ಜೂನ್ ತಿಂಗಳಲ್ಲಿ ಸಕಾರಾತ್ಮಕ ಅಭಿವೃದ್ಧಿ ದಾಖಲಿಸಿವೆ.

ಮುನ್ನಾರ್ ಬಳಿ ಅಪಾಯಕ್ಕೆ ಸಿಲುಕಿದ 69 ಪ್ರವಾಸಿಗರು

ಕೇರಳದ ಮುನ್ನಾರ್ ಬಳಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಇಡುಕ್ಕಿ ಜಿಲ್ಲೆಯ ಪ್ಲಮ್ ಜುಡ್ಡಿ ರೆಸಾರ್ಟ್‌ನಲ್ಲಿ 20 ಮಂದಿ ವಿದೇಶಿಯರು ಸೇರಿದಂತೆ 69 ಮಂದಿ ಪ್ರವಾಸಿಗರು ಅಪಾಯದಲ್ಲಿ ಸಿಲುಕಿದ್ದಾರೆ. ಭಾರಿ ಮಳೆಯಿಂದಾಗಿ ಇಲ್ಲಿ ಭೂಕುಸಿತ ಉಂಟಾಗುತ್ತಿದ್ದು, ರೆಸಾರ್ಟ್ ಸಂಪರ್ಕಿಸುವ ಎಲ್ಲ ರಸ್ತೆಗಳು ಕಡಿತಗೊಂಡಿವೆ. ಅಪಾಯದಲ್ಲಿ ಸಿಲುಕಿದವರ ರಕ್ಷಣೆಗಾಗಿ ಸೇನಾಪಡೆ ಕಾರ್ಯಾಚರಣೆ ಕೈಗೊಂಡಿದೆ. ಕಳೆದ ಎರಡು ದಿನಗಳಿಂದ ಕೇರಳದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಇದುವರೆಗೂ ಸಾವನ್ನಪ್ಪಿದವರ ಸಂಖ್ಯೆ 26ಕ್ಕೆ ಏರಿಕೆಯಾಗಿದೆ. ರಾಷ್ಟ್ರೀಯ ವಿಪತ್ತು ಪಡೆ ಹಾಗೂ ಸೇನಾ ಸಿಬ್ಬಂದಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರವಾಸಿಗರು ಕೇರಳಕ್ಕೆ ಭೇಟಿ ನೀಡದಂತೆ ಎಚ್ಚರಿಕೆಯನ್ನು ಕೂಡ ನೀಡಲಾಗಿದೆ.

ರಾಜಕೀಯಕ್ಕೆ ಬರೋಲ್ಲ ಎಂದ ಕಂಗನಾ

“ಸಿನಿಮಾರಂಗದಲ್ಲಿ ಜನರು ನನಗೆ ಪ್ರೀತಿ, ಗೆಲುವು ನೀಡಿದ್ದಾರೆ. ರಾಜಕೀಯ ಹಾಗೂ ಇತರ ಕ್ಷೇತ್ರಗಳಲ್ಲಿ ನನಗೆ ತೊಡಗಿಸಿಕೊಳ್ಳುವ ಇರಾದೆಯಿಲ್ಲ,” ಎಂದಿದ್ದಾರೆ ಬಾಲಿವುಡ್ ನಟಿ ಕಂಗನಾ ರನಾವತ್‌. ಯೋಗಿ ಸದ್ಗುರು ಅವರೊಂದಿಗಿನ ವಿಡಿಯೋ ಸಂವಾದವೊಂದರಲ್ಲಿ ನಟಿ ಕಂಗನಾ ಈ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಕಂಗನಾರ ರಾಜಕೀಯ ಹೇಳಿಕೆಗಳಿಂದಾಗಿ ಆಕೆ ರಾಜಕೀಯ ಪ್ರವೇಶಿಸಬಹುದು ಎನ್ನುವ ಊಹಾಪೋಹಗಳು ಹರಿದಾಡುತ್ತಿದ್ದವು. ಇದೀಗ ಅವರು ರಾಜಕೀಯದೆಡೆಗಿನ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಮಿಲಿಟರಿ ಹೆಲಿಕಾಪ್ಟರ್‌, ಸಿಬ್ಬಂದಿ ಹಿಂತೆಗೆದುಕೊಳ್ಳಲು ಭಾರತಕ್ಕೆ ಮಾಲ್ಡೀವ್ಸ್‌ ಆಗ್ರಹ

ಮಿಲಿಟರಿ ಹೆಲಿಕಾಪ್ಟರ್‌ ಮತ್ತು ಸೇನಾ ಸಿಬ್ಬಂದಿಯನ್ನು ವಾಪಸ್‌ ಪಡೆಯಬೇಕೆಂದು ಮಾಲ್ಡೀವ್ಸ್‌ ಸರ್ಕಾರ ಭಾರತಕ್ಕೆ ಆಗ್ರಹಿಸಿರುವುದು ಉಭಯ ದೇಶಗಳ ನಡುವೆ ಬಾಂಧವ್ಯ ಕೆಡಲು ಕಾರಣವಾಗಿದೆ. ಹಲವು ದಶಕಗಳಿಂದ ಭಾರತವು ಮಾಲ್ಡೀವ್ಸ್‌ಗೆ ಮಿಲಿಟರಿ ನೆರವು ಒದಗಿಸುತ್ತ ಬಂದಿದೆ. ಆದರೆ, ಈಗ ಹೊಸ ಅಧ್ಯಕ್ಷ ಅಬ್ದುಲ್ಲಾ ಯಾಮಿನ್‌ ಅವರಿಗೆ ಚೀನಾ ಬೆಂಬಲ ನೀಡುತ್ತಿದ್ದು, ಮಾಲ್ಡೀವ್‌ನಲ್ಲಿ ಭಾರಿ ಪ್ರಮಾಣದಲ್ಲಿ ಬಂಡವಾಳ ಹೂಡಿದೆ, ಮಿಲಿಟರಿ ನೆರವು ನೀಡಿದೆ. ಈ ಬೆಳವಣಿಗೆಯಿಂದಾಗಿ ಭಾರತ-ಚೀನಾ ಸಂಬಂಧವೂ ಬಿಕ್ಕಟ್ಟಿಗೆ ಸಿಲುಕಿದೆ.

ವಾವ್ರಿಂಕಾ ಮಣಿಸಿದ ನಡಾಲ್ ಟೊರಾಂಟೊ ಮಾಸ್ಟರ್ಸ್ ಕ್ವಾರ್ಟರ್‌ಗೆ

ಹದಿನೇಳು ಗ್ರಾಂಡ್‌ಸ್ಲಾಮ್ ಪ್ರಶಸ್ತಿ ವಿಜೇತ ರಾಫೆಲ್ ನಡಾಲ್ ಟೊರಾಂಟೊ ಮಾಸ್ಟರ್ಸ್ ಟೆನಿಸ್ ಪಂದ್ಯಾವಳಿಯಲ್ಲಿ ಕ್ವಾರ್ಟರ್‌ಫೈನಲ್ ತಲುಪಿದ್ದಾರೆ. ಇಂದು ನಡೆದ ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್‌ನಲ್ಲಿ ಸ್ವಿಡ್ಸರ್ಲೆಂಡ್‌ನ ಸ್ಟಾನಿಸ್ಲಾಸ್ ವಾವ್ರಿಂಕಾ ವಿರುದ್ಧ ನಡಾಲ್, ೭-೫ ಹಾಗೂ ೭-೬ (೭/೪) ಸೆಟ್‌ಗಳಲ್ಲಿ ಗೆಲುವು ಪಡೆದರು. ಎರಡೂ ಸೆಟ್‌ನಲ್ಲಿ ದಿಟ್ಟ ಪೈಪೋಟಿ ನೀಡಿದ ವಾವ್ರಿಂಕಾ ವಿರುದ್ಧ ನಡಾಲ್ ಮತ್ತೊಮ್ಮೆ ಜಯದ ನಗೆಬೀರಿದರು. ವೃತ್ತಿಬದುಕಿನಲ್ಲಿ ಒಟ್ಟು ೨೦ ಬಾರಿ ಮುಖಾಮುಖಿಯಾಗಿರುವ ಇಬ್ಬರ ಪೈಕಿ ನಡಾಲ್ ೧೭ರಲ್ಲಿ ಜಯ ಸಾಧಿಸಿದಂತಾಗಿದೆ. ಮುಂದಿನ ಸುತ್ತಿನಲ್ಲೀಗ ನಡಾಲ್, ಕ್ರೊವೇಷ್ಯಾದ ಮರಿನ್ ಸಿಲಿಕ್ ವಿರುದ್ಧ ಕಾದಾಡಲಿದ್ದಾರೆ.

ಮಳೆಬಾಧಿತ ಪಂದ್ಯದಲ್ಲಿ ಭಾರತಕ್ಕೆ ಪೆಟ್ಟು ನೀಡಿದ ಜೇಮ್ಸ್ ಆವೇಗ

ಇಂಡೋ-ಆಂಗ್ಲೋ ದ್ವಿಪಕ್ಷೀಯ ಸರಣಿಯ ಲಾರ್ಡ್ಸ್ ಟೆಸ್ಟ್‌ನ ಮೊದಲ ದಿನದಾಟ ಸಂಪೂರ್ಣ ಮಳೆಯಲ್ಲಿ ತೊಯ್ದುಹೋದರೂ, ಎರಡನೇ ದಿನದಾಟವೂ ವರುಣನ ಕಣ್ಣಾಮುಚ್ಚಾಲೆ ನಡೆದಿದೆ. ಈ ಮಧ್ಯೆ, ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿರುವ ಇಂಗ್ಲೆಂಡ್, ಶುರುವಿನಲ್ಲೇ ಜೇಮ್ಸ್ ಆಂಡರ್ಸನ್ ದಾಳಿಯ ಬೆಂಗಾವಲಿನಲ್ಲಿ ಭೋರ್ಗರೆದಿದೆ. ಮೊದಲ ಓವರ್‌ನ ಐದನೇ ಎಸೆತದಲ್ಲೇ ಮುರಳಿ ವಿಜಯ್ ಅವರನ್ನು ಬೌಲ್ಡ್ ಮಾಡಿದ ಜೇಮ್ಸ್, ಏಳನೇ ಓವರ್‌ನ ಮೊದಲ ಎಸೆತದಲ್ಲಿ ಕನ್ನಡಿಗ ರಾಹುಲ್ ವಿಕೆಟ್ ಪಡೆದರು. ಇನ್ನು, ಟೆಸ್ಟ್ ತಜ್ಞ ಚೇತೇಶ್ವರ ಪೂಜಾರ ಅವರನ್ನು ಚೊಚ್ಚಲ ಪಂದ್ಯವನ್ನಾಡುತ್ತಿರುವ ಪೋಪ್ ರನೌಟ್ ಮಾಡಿದ ನಂತರದಲ್ಲಿ ವರುಣ ಮಧ್ಯಪ್ರವೇಶಿಸಿದ! ಈ ವೇಳೆ, ೮.೩ ಓವರ್‌ಗಳಲ್ಲಿ ಭಾರತ ೧೫ ರನ್‌ಗೆ ಪ್ರಮುಖ ೩ ವಿಕೆಟ್ ಕಳೆದುಕೊಂಡಿದ್ದು, ನಾಯಕ ಕೊಹ್ಲಿ (೩) ಕ್ರೀಸ್‌ನಲ್ಲಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More