ಮಗನಿಗೆ ನೀಡಿದ ಸಾಲದ ವಿವರಗಳನ್ನು ರಹಸ್ಯವಾಗಿಟ್ಟ ಅಮಿತ್ ಶಾ!

ಮಗನ ಉದ್ಯಮಕ್ಕೆ ಸಾಲ ಕೊಡಿಸಲು ಅಡವಿಟ್ಟ ಆಸ್ತಿ ವಿವರವನ್ನು ಅಮಿತ್ ಶಾ ಚುನಾವಣಾ ಅಫಿಡವಿಟ್‌ನಲ್ಲಿ ನಮೂದಿಸಿಲ್ಲ. ಜೇ ಶಾ ಅವರಿಗೆ ನೀಡಲಾದ ಸಾಲ ಸೌಲಭ್ಯಗಳು ಕಳೆದ ವರ್ಷ ಗಣನೀಯವಾಗಿ ಏರಿವೆ. ಈ ಕುರಿತು ‘ಕಾರ್‌ವಾನ್‌’ಗೆ ಕೌಶಲ್ ಶ್ರಾಫ್ ಬರೆದ ಲೇಖನದ ಭಾವಾನುವಾದ ಇದು

ತಮ್ಮ ಮಗ ಜೇ ಶಾ ಒಡೆತನದ ಕುಸುಮ್ ಫಿನ್‌ಸರ್ವ್ ಎಲ್ಎಲ್ಪಿ ಎಂಬ ಕಂಪನಿಗೆ ಸಾಲ ಕೊಡಿಸುವುದಕ್ಕಾಗಿ ಅಮಿತ್ ಶಾ ಅವರು ತಮ್ಮ ಎರಡು ಆಸ್ತಿಗಳನ್ನು ಒತ್ತೆ ಇಟ್ಟಿದ್ದಾರೆ. ಕುಸುಮ್ ಫಿನ್‌ಸರ್ವ್ ಕಂಪನಿಯ ಹಣಕಾಸು ಸ್ಥಿತಿ ಅಷ್ಟೊಂದು ಆಶಾದಾಯಕವಾಗಿಲ್ಲದಿದ್ದರೂ ಅದಕ್ಕೆ ಕಳೆದ ವರ್ಷ ನೀಡಲಾದ ಸಾಲ ಪ್ರಮಾಣದಲ್ಲಿ ಮಾತ್ರ ಯಥೇಚ್ಛ ಏರಿಕೆಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ತಮ್ಮ ಮಗನ ವ್ಯವಹಾರಕ್ಕೆ ಸಾಲ ಕೊಡಿಸುವುದಕ್ಕಾಗಿ ತಮ್ಮ ಆಸ್ತಿಯನ್ನು ಒತ್ತೆ ಇಟ್ಟ ವಿವರಗಳು ಮಾತ್ರ ೨೦೧೭ರಲ್ಲಿ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ನಮೂದಾಗಿಲ್ಲ.

ಸಾರ್ವಜನಿಕವಾಗಿ ಲಭ್ಯವಿರುವ ದಾಖಲೆಗಳ ಪ್ರಕಾರ, ಅಮಿತ್ ಶಾ ಅವರು ತಮ್ಮ ಮಗ ಜೇ ಶಾ ಒಡೆತನದ ಕುಸುಮ್ ಫಿನ್‌ಸರ್ವ್ ಕಂಪನಿಗೆ ೨೫ ಕೋಟಿ ರುಪಾಯಿ ಸಾಲ ಕೊಡಿಸುವುದಕ್ಕಾಗಿ ೨೦೧೬ರಿಂದೀಚೆಗೆ ತಮ್ಮ ಎರಡು ಆಸ್ತಿಗಳನ್ನು ಗುಜರಾತಿನ ಅತಿದೊಡ್ಡ ಸಹಕಾರಿ ಬ್ಯಾಂಕುಗಳಲ್ಲಿ ಒಂದಾದ ಕಾಲುಪುರ್ ಕಮರ್ಷಿಯಲ್ ಕೋಅಪರೇಟಿವ್ ಬ್ಯಾಂಕಿಗೆ ಅಡವಿಟ್ಟಿದ್ದಾರೆ. ‘ದಿ ಕಾರವಾನ್’ ಸಂಗ್ರಹಿಸಿದ ಹೊಸ ದಾಖಲೆಗಳು ಸ್ಪಷ್ಟವಾಗಿ ತೋರಿಸುವಂತೆ ಫಿನ್ಸರ್ವ್ ಕಂಪನಿಯು ೨೦೧೬ರಿಂದ ಈಚೆಗೆ ಎರಡು ಬ್ಯಾಂಕ್ ಮತ್ತು ಒಂದು ಸರ್ಕಾರಿ ಒಡೆತನದ ಸಂಸ್ಥೆಯಿಂದ ಒಟ್ಟು ೯೭.೩೫ ಕೋಟಿ ರುಪಾಯಿ ಸಾಲವನ್ನು ಐದು ಕಂತುಗಳಲ್ಲಿ ಪಡೆದಿದೆ; ೧೦.೩೫ ಕೋಟಿ, ೨೫ ಕೋಟಿ, ೧೫ ಕೋಟಿ, ೩೦ ಕೋಟಿ ಮತ್ತು ೧೭ ಕೋಟಿ ರುಪಾಯಿ. ಇತ್ತೀಚೆಗೆ ಕಂಪನಿಯು ಸಲ್ಲಿಸಿದ ಜಮೆಖರ್ಚು ಪಟ್ಟಿ ಪ್ರಕಾರ, ಅದರ ಮೌಲ್ಯ ಕೇವಲ ೫.೮ ಕೋಟಿ ರುಪಾಯಿಯಾಗಿದ್ದರೂ ಅದಕ್ಕೆ ನೀಡಲಾದ ಸಾಲಸೌಲಭ್ಯಗಳ ಪ್ರಮಾಣ ಶೇ.೩೦೦ ಏರಿಕೆ ಆಗಿರುವುದು ಎಲ್ಲರ ಹುಬ್ಬೇರುವಂತೆ ಮಾಡಿದೆ.

ಜೇ ಶಾ ಅವರ ಕಂಪನಿಗೆ ನೀಡಲಾದ ಸಾಲದ ಒಂದು ಭಾಗಕ್ಕೆ ಅಹ್ಮದಾಬಾದಿನ ಮೂರು ಆಸ್ತಿಗಳನ್ನು ಒತ್ತೆ ಇಡಲಾಗಿದೆ; ಶಿಲಾಜಿ ಹಳ್ಳಿಯಲ್ಲಿರುವ ೩,೮೩೯ ಚದರ ಮೀಟರ್ ವಿಸ್ತೀರ್ಣದ ಒಂದು ನಿವೇಶನ, ಅದೇ ಪ್ರದೇಶದಲ್ಲಿರುವ ೪೫೯ ಚದರ ಮೀಟರ್ ವಿಸ್ತೀರ್ಣದ ಇನ್ನೊಂದು ನಿವೇಶನ ಮತ್ತು ಬೊಡಕ್ದೇವ್ನಲ್ಲಿ ಸಾತ್ರಿಕ್-೨ ಎಂಬ ಹೆಸರಿನ ವಾಣಿಜ್ಯ ಸಂಕೀರ್ಣದ ಮೂರನೇ ಮಹಡಿಯಲ್ಲಿರುವ ೧೮೬ ಚದರ ಮೀಟರ್ ವಿಸ್ತೀರ್ಣದ ಒಂದು ಕಚೇರಿ ಜಾಗ.

ಶಿಲಾಜಿಯ ಎರಡೂ ನಿವೇಶನಗಳು ಅಮಿತ್ ಶಾ ಒಡೆತನದ ಆಸ್ತಿಗಳಾಗಿವೆ. ೨೦೧೬ರ ಮೇ ತಿಂಗಳಲ್ಲಿ ಕಾಲುಪುರ್ ಬ್ಯಾಂಕ್ ಮತ್ತು ಕುಸುಮ್ ಫಿನ್‌ಸರ್ವ್ ಕಂಪನಿ ನಡುವೆ ಮಾಡಿಕೊಳ್ಳಲಾದ ಅಡಮಾನ ಒಪ್ಪಂದದದಲ್ಲಿ ಅಮಿತ್ ಶಾ ಅವರನ್ನು ‘ಅಡಮಾನದಾರ-೨’ ಎಂದು ನಮೂದಿಸಲಾಗಿದೆಯಲ್ಲದೆ, ಅವರನ್ನು ಎರಡೂ ನಿವೇಶನಗಳ ‘ಸಂಪೂರ್ಣ ಮಾಲೀಕರು’ ಎಂದು ಹೇಳಲಾಗಿದೆ. ಜೊತೆಗೆ, ಜೇ ಶಾ ಅವರನ್ನು ಅಡವಿಟ್ಟಿರುವ ತಮ್ಮ ತಂದೆಯ ಎರಡೂ ಆಸ್ತಿಗಳ ‘ಪವರ್ ಆಫ್ ಅಟಾರ್ನಿ"’ ಹೊಂದಿದ ವ್ಯಕ್ತಿಯೆಂದು ನಮೂದಿಸಲಾಗಿದೆ. “ವ್ಯಕ್ತಿಯೊಬ್ಬರು ವಾಣಿಜ್ಯ ವ್ಯವಹಾರವೊಂದಕ್ಕೆ ಸಾಲ ಕೊಡಿಸಲು ತಮ್ಮ ಆಸ್ತಿಯನ್ನು ಅಡವಿಟ್ಟರೆ, ಆ ವ್ಯವಹಾರದಲ್ಲಿ ಅವರು ಸಾಲಕ್ಕೆ ಗ್ಯಾರಂಟೀದಾರರಾಗುತ್ತಾರೆ; ಆ ವ್ಯವಹಾರದಲ್ಲಿ ಅವರಿಗೆ ಲಾಭದಾಯಕ ಷೇರು ಇಲ್ಲದಿರಬಹುದು, ಆದರೆ, ಅವರು ಅದರಲ್ಲಿ ಭಾಗೀದಾರರಂತೂ ಆಗಿರುತ್ತಾರೆ," ಎಂದು ಈ ದಾಖಲೆಗಳನ್ನು ನೋಡಿದ ಆರ್ಥಿಕ ತಜ್ಞರೊಬ್ಬರು ಅಭಿಪ್ರಾಯಪಟ್ಟರು.

ಅಮಿತ್ ಶಾ ಅವರು ರಾಜ್ಯಸಭೆಯ ಸದಸ್ಯರು. ಪ್ರಜಾಪ್ರತಿನಿಧಿತ್ವ ಕಾಯ್ದೆ ಪ್ರಕಾರ, ರಾಜ್ಯಗಳ ವಿಧಾನಸಭೆಗಳ ಅಥವಾ ಸಂಸತ್ತಿನ ಚುನಾವಣೆಗಳಿಗೆ ಸ್ಪರ್ಧಿಸುವಾಗ ಅಭ್ಯರ್ಥಿಯು ತನ್ನ ಆಸ್ತಿ ಮತ್ತು ಸಾಲಸೋಲಗಳನ್ನು ಸ್ಪಷ್ಟವಾಗಿ ನಮೂದಿಸಿದ ಅಫಿಡವಿಟ್ ಅನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕು. ಚುನಾವಣಾ ಅಫಿಡವಿಟ್ಟಿನಲ್ಲಿ ಸುಳ್ಳು ಮಾಹಿತಿಯನ್ನು ಸಲ್ಲಿಸಿದರೆ ಅವರ ನಾಮಪತ್ರವನ್ನೇ ತಿರಸ್ಕರಿಸುವುದಕ್ಕೆ ಚುನಾವಣಾ ಆಯೋಗಕ್ಕೆ ಅಧಿಕಾರವಿದೆ.

"ಶಾಸನಕಾರನ ಚುನಾವಣಾ ಅಫಿಡವಿಟ್ಟಿನಲ್ಲಿ ಪೂರ್ಣಸತ್ಯವಿರಬೇಕು. ಸತ್ಯವಲ್ಲದೆ ಬೇರೇನೂ ಇರಕೂಡದು. ಏನಾದರೂ ಅಸತ್ಯ, ಅಕ್ರಮಗಳು ಕಂಡುಬಂದರೆ ಆ ಶಾಸನಕಾರನ ವಿರುದ್ಧ ಕ್ರಮ ಕೈಗೊಳ್ಳಬೇಕು. ಆದರೆ, ಅಂತಹ ರಾಜಕಾರಣಿಗಳ ವಿರುದ್ಧ ತೆಗೆದುಕೊಳ್ಳುವ ಕ್ರಮ ಎಷ್ಟು ಕಠಿಣವಾಗಿರುತ್ತದೆ ಎಂಬುದೇ ನಿಜವಾದ ಪ್ರಶ್ನೆ," ಎಂಬ ಅನುಮಾನವನ್ನು ವ್ಯಕ್ತಪಡಿಸುತ್ತಾರೆ ಭಾರತದ ಮಾಜಿ ಚುನಾವಣಾ ಆಯುಕ್ತರಾದ ಎಸ್ ವೈ ಖುರೇಷಿ.

ಇದೇ ವಿಚಾರವಾಗಿ ಇನ್ನೊಬ್ಬ ಮಾಜಿ ಚುನಾವಣಾ ಆಯುಕ್ತರನ್ನು 'ದಿ ಕಾರವಾನ್’ ಮಾತಾಡಿಸಿದಾಗ ಅವರೂ ಇದೇ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತ, “ಚುನಾವಣಾ ಸಮಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಅಫಿಡವಿಟ್ಟುಗಳು ಸಲ್ಲಿಕೆಯಾಗುವುದರಿಂದ ಸೀಮಿತ ಅವಧಿಯಲ್ಲೇ ಅವೆಲ್ಲವನ್ನೂ ಸರಿಯಾಗಿ ಪರಿಶೀಲನೆ ಮಾಡುವುದಕ್ಕೆ ಆಗುವುದಿಲ್ಲ,” ಎಂದರು. "ಚುನಾವಣಾ ಅಫಿಡವಿಟ್ಟಿನಲ್ಲಿ ಸುಳ್ಳು ಮಾಹಿತಿ ಒದಗಿಸಿದ ಶಾಸನಕಾರರನ್ನು ಅವರ ಹುದ್ದೆಯಿಂದ ಅನರ್ಹಗೊಳಿಸಬೇಕು. ಜೊತೆಗೆ, ಆ ಅಪರಾಧಕ್ಕಾಗಿ ದೇಶದಲ್ಲಿ ಜಾರಿಯಲ್ಲಿರುವ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು," ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

“ಚುನಾವಣೆಗೆ ನಾಮಪತ್ರ ಸಲ್ಲಿಸುವಾಗ ಅಭ್ಯರ್ಥಿಯು ಕಡ್ಡಾಯವಾಗಿ ತಮ್ಮ ಆಸ್ತಿ ಮತ್ತು ಸಾಲದ ವಿವರಗಳನ್ನು ಚುನಾವಣಾ ಆಯೋಗ ನಿಗದಿಪಡಿಸಿದ ನಿರ್ದಿಷ್ಟ ನಮೂನೆಯ ಅಫಿಡವಿಟ್ ಮೂಲಕ ಸಲ್ಲಿಸುವುದು ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ ೭೫ಎ ಪ್ರಕಾರ ಕಡ್ಡಾಯವಾಗಿದೆ,” ಎನ್ನುತ್ತಾರೆ, 'ಪ್ರಜಾತಾಂತ್ರಿಕ ಸುಧಾರಣೆಗಳಿಗಾಗಿನ ಸಂಸ್ಥೆ' ಎಂಬ ಸರ್ಕಾರೇತರ ಸಂಘಟನೆಯೊಂದರ ಸಂಸ್ಥಾಪಕ ಸದಸ್ಯರಾದ ಜಗದೀಪ್ ಚೊಕ್ಕರ್. ಜೊತೆಗೆ, "ಈ ಅಫಿಡವಿಟ್ಟಿನಲ್ಲಿ ಸುಳ್ಳು ಮಾಹಿತಿ ಒದಗಿಸಿದವರನ್ನು ಅನರ್ಹಗೊಳಿಸುವ ಮತ್ತು ಅವರ ಹುದ್ದೆಯಿಂದ ಕಿತ್ತುಹಾಕುವ ಅಧಿಕಾರವೂ ಚುನಾವಣಾ ಆಯೋಗಕ್ಕಿದೆ. ಅಲ್ಲದೆ, ಅಂಥವರ ವಿರುದ್ಧ ಭಾರತೀಯ ದಂಡಸಂಹಿತೆಯ ವಿವಿಧ ಸೆಕ್ಷನ್ನುಗಳ ಅಡಿಯಲ್ಲಿ ಅಪರಾಧ ದಂಡಪ್ರಕ್ರಿಯೆಯನ್ನೂ ನಡೆಸುವುದಕ್ಕೆ ಅವಕಾಶವಿದೆ. ಸುಳ್ಳು ಮಾಹಿತಿ ನೀಡಿದ ಇಂತಹ ಅಭ್ಯರ್ಥಿಗಳ ವಿರುದ್ಧ ಯಾವುದೇ ಸಾಮಾನ್ಯ ವ್ಯಕ್ತಿ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಬಹುದು," ಎಂದು ಅವರು ಅಭಿಪ್ರಾಯಪಡುತ್ತಾರೆ.

* * *

೨೦೧೭ರಲ್ಲಿ ಕುಸುಮ್ ಫಿನ್‌ಸರ್ವ್ ಕಂಪನಿಯು ಕಾಲುಪುರ್ ಬ್ಯಾಂಕಿನಿಂದ ೨೫ ಕೋಟಿ ರುಪಾಯಿ ಹಾಗೂ ಇನ್ನೊಂದು ಸರ್ಕಾರಿ ಸ್ವಾಮ್ಯದ ಸಂಸ್ಥೆಯಿಂದ ೧೦.೩೫ ಕೋಟಿ ರುಪಾಯಿ ಸಾಲ ಪಡೆದಿದ್ದನ್ನು ಮೊಟ್ಟಮೊದಲು ಆನ್‌ಲೈನ್‌ ಸುದ್ದಿತಾಣ 'ದಿ ವೈರ್’ ವರದಿ ಮಾಡಿತ್ತು. ಲಭ್ಯವಿರುವ ಜಮಾಖರ್ಚು ಪಟ್ಟಿಗಳ ಪ್ರಕಾರ, ೨೦೧೨-೧೩ ಮತ್ತು ೨೦೧೫-೧೬ರ ಹಣಕಾಸು ವರ್ಷಗಳ ನಡುವಿನ ಅವಧಿಯಲ್ಲಿ ಈ ಕಂಪನಿಯು ಹೆಚ್ಚೂಕಡಿಮೆ ಪ್ರತಿವರ್ಷವೂ ನಷ್ಟ ಅನುಭವಿಸಿದೆಯಲ್ಲದೆ, ಉದ್ದಕ್ಕೂ ಅದರ ವ್ಯವಹಾರ ಬಂಡವಾಳವು ಋಣಾತ್ಮಕವಾಗಿದೆ. ಆದರೂ, ಕಳೆದ ಸೆಪ್ಟೆಂಬರ್‌ನಿಂದ ಈಚೆಗೆ ಈ ಕಂಪನಿಗೆ ನೀಡಲಾದ ಸಾಲದ ಮೊತ್ತ ಮೂರು ಪಟ್ಟು ಹೆಚ್ಚಾಗಿದೆ.

೨೦೧೭ರ ಜುಲೈನಲ್ಲಿ ಸಲ್ಲಿಸಿದ ತಮ್ಮ ಚುನಾವಣಾ ಅಫಿಡವಿಟ್ಟಿನಲ್ಲಿ ಅಮಿತ್ ಶಾ ಅವರು, ಶಿಲಾಜಿ ಆಸ್ತಿಗಳ ಒಟ್ಟು ಮೌಲ್ಯ ೫ ಕೋಟಿ ಎಂದು ನಮೂದಿಸಿದ್ದಾರೆ. ಮಾರುಟ್ಟೆಯ ಇಂದಿನ ದರದ ಪ್ರಕಾರ ಸಣ್ಣ ಆಸ್ತಿಯ ಮೌಲ್ಯ ೫೫ ಲಕ್ಷ ರೂಪಾಯಿ ಹಾಗೂ ಬೊಡಕ್ದೇವ್ ಕಚೇರಿ ಜಾಗದ ಮೌಲ್ಯ ೨ ಕೋಟಿ ರುಪಾಯಿ ಎಂದು ಅಂದಾಜಿಸಲಾಗಿದೆ. ಪಿನ್ಸರ್ವ್ ಸಂಸ್ಥೆಯು ಈ ಆಸ್ತಿಗಳನ್ನು ಬಳಸಿ ೨೦೧೬ರಲ್ಲಿ ಕಾಲಪುರ್ ಕಮರ್ಷಿಯಲ್ ಕೋಅಪರೇಟಿವ್ ಬ್ಯಾಂಕಿನಿಂದ ೨೫ ಕೋಟಿ ರುಪಾಯಿ ಸಾಲ ಪಡೆದಿದೆ. ಸೆಪ್ಟೆಂಬರ್ ೨೦೧೭ರಲ್ಲಿ ಅದೇ ಬ್ಯಾಂಕು ಈ ಕಂಪನಿಗೆ ಮತ್ತೆ ೧೫ ಕೋಟಿ ರುಪಾಯಿ ಸಾಲ ನೀಡಿದೆ. ಅದೇ ತಿಂಗಳಲ್ಲಿ ಈ ಕಂಪನಿಯು ಸರಕು ಮತ್ತು ಬಾಕಿಗಳನ್ನು ತೋರಿಸಿ ಇನ್ನೊಂದು ಖಾಸಗಿ ಬ್ಯಾಂಕಿನಿಂದ ಮತ್ತೆ ೩೦ ಕೋಟಿ ರುಪಾಯಿ ಸಾಲ ಪಡೆದಿದೆ. ೨೦೧೭ರ ಜುಲೈನಲ್ಲಿ ಸರ್ಕಾರಿ ಒಡೆತನದ ಗುಜರಾತ್ ಕೈಗಾರಿಕಾ ಅಭಿವೃದ್ಧಿ ನಿಗಮವು ಸನ್ನದ್ ಕೈಗಾರಿಕಾ ಪ್ರದೇಶದಲ್ಲಿ ಈ ಕಂಪನಿಗೆ ೧೫,೭೫೪.೮೩ ಚದರ ಮಿಟರ್ ಜಾಗವನ್ನು ಗುತ್ತಿಗೆಯ ಆಧಾರದಲ್ಲಿ ನೀಡಿದ್ದು, ಈ ಜಾಗವನ್ನು ಅಡವಿಟ್ಟು ಕಂಪನಿಯು ೨೦೧೮ರ ಏಪ್ರಿಲ್‌ನಲ್ಲಿ ಖಾಸಗಿ ಬ್ಯಾಂಕಿನಿಂದ ಮತ್ತೆ ೧೭ ಕೋಟಿ ರುಪಾಯಿ ಸಾಲ ಪಡೆದಿದೆ.

ಜೇ ಶಾ ಒಡೆತನದ ಕಂಪನಿಗಳಿಗೆ ನೀಡಲಾದ ಸಾಲಸೌಲಭ್ಯಗಳ ಬಗ್ಗೆ ಪತ್ರಿಕೆಗಳಲ್ಲಿ ವರದಿಯಾಗಿದ್ದರೂ ಹಾಗೂ ಈ ವಿಷಯವಾಗಿ ಸಂಸತ್ತಿನಲ್ಲಿ ಪ್ರಶ್ನೆಗಳೆದ್ದಿದ್ದರೂ ಕುಸುಮ್ ಫಿನ್‌ಸರ್ವ್ ಕಂಪನಿಯು ೨೦೧೬-೧೭ನೇ ಸಾಲಿನ ತನ್ನ ಜಮಾಖರ್ಚುಗಳ ಪತ್ರಗಳನ್ನು ಗಡುವು ಮುಗಿದು ಒಂಬತ್ತು ತಿಂಗಳಾದರೂ ಇನ್ನೂ ಸಲ್ಲಿಸಿಲ್ಲ.

ಅಮಿತ್ ಶಾ ಮತ್ತು ಕೋಅಪರೇಟಿವ್ ಬ್ಯಾಂಕಿಗೆ ‘ದಿ ಕಾರವಾನ್’ ಕಳಿಸಿದ ಪ್ರಶ್ನೆಗಳಿಗೆ ಇನ್ನೂ ಉತ್ತರ ಬಂದಿಲ್ಲ. ಜೇ ಶಾ ಅವರು ತಮ್ಮ ಮ್ಯಾನೇಜರ್ ಮೂಲಕ ಉತ್ತರಿಸಿದ್ದು, "ನಾವು ಕಾನೂನುಬದ್ಧವಾಗಿ ಕಾನೂನುಬದ್ಧ ವ್ಯವಹಾರವನ್ನು ಮಾಡುತ್ತಿದ್ದೇವೆ ಎಂದು ಹೇಳಲಿಚ್ಚಿಸುತ್ತೇವೆ. ನಮ್ಮ ವ್ಯವಹಾರದ ಪ್ರತಿಯೊಂದು ಲೆಕ್ಕಪತ್ರಗಳನ್ನೂ ಇಟ್ಟಿದ್ದು, ಅದನ್ನು ತೆರಿಗೆ ಅಧಿಕಾರಿಗಳಿಗೆ ಸಲ್ಲಿಸಿದ್ದೇವೆ," ಎಂದು ಹೇಳಿದ್ದಾರೆ. ಅಲ್ಲದೆ, “ಕಾನೂನು ತಜ್ಞರ ಅಭಿಪ್ರಾಯ ಪಡೆದು ಸರಿಯಾಗಿ ಪ್ರತಿಕ್ರಿಯಿಸುವುದಕ್ಕೆ ತಮಗೆ ಏಳೆಂಟು ದಿನಗಳ ಕಾಲಾವಕಾಶ ಬೇಕು,” ಎಂದೂ ಅವರು ಕೇಳಿದ್ದಾರೆ.

"ಸಾಲ ಕೊಡುವಾಗ ಬ್ಯಾಂಕು ಕಠಿಣ ಪ್ರಕ್ರಿಯೆಗಳನ್ನು ಮತ್ತು ವಿವೇಕದ ನಿರ್ಧಾರಗಳನ್ನು ಅನುಸರಿಸುತ್ತದೆ. ಗ್ರಾಹಕರಿಗೆ ಸಂಬಂಧಿಸಿದ ಮಾಹಿತಿಯನ್ನು ಮೂರನೇ ವ್ಯಕ್ತಿಯೊಂದಿಗೆ ಹಂಚಿಕೊಳ್ಳುವುದಕ್ಕೆ ಕಾನೂನಾತ್ಮಕ ನಿರ್ಬಂಧವಿದೆ," ಎಂದು ಕೋಟಕ್ ಬ್ಯಾಂಕು ಪ್ರತಿಕ್ರಿಯಿಸಿದೆ.

ಕುತೂಹಲಕಾರಿ ವಿಷಯ ಏನೆಂದರೆ, ಕಾಲುಪುರ್ ಬ್ಯಾಂಕು ಮತ್ತು ಕುಸುಮ್ ಫಿನ್‌ಸರ್ವ್ ಕಂಪನಿಗಳ ನಡುವಿನ ಅಡಮಾನ ಒಡಂಬಡಿಕೆಯಲ್ಲಿ ಕಂಪನಿಯ ಷೇರುಗಳು, ಸಾಲಗಳು ಮತ್ತು ಯಂತ್ರೋಪಕರಣಗಳಿಗೆ ಸಂಬಂಧಪಟ್ಟ ವಿವರಗಳನ್ನು ಭರ್ತಿ ಮಾಡುವುದಕ್ಕೆ ಮೀಸಲಿಟ್ಟ ಜಾಗಗಳನ್ನು ಹಾಗೇ ಖಾಲಿ ಬಿಡಲಾಗಿದೆ.

೧೯೭೦ರಲ್ಲಿ ಸ್ಥಾಪನೆಯಾದ ಕಾಲುಪುರ್ ಕಮರ್ಷಿಯಲ್ ಕೋಅಪರೇಟಿವ್ ಬ್ಯಾಂಕ್ ಇತ್ತೀಚಿನ ವರ್ಷಗಳಲ್ಲಿ ಗುಜರಾತಿನ ಅತಿದೊಡ್ಡ ಸಹಕಾರಿ ಬ್ಯಾಂಕುಗಳಲ್ಲಿ ಒಂದಾಗಿ ಬೆಳೆದಿದೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ವರದಿಯ ಪ್ರಕಾರ, ಗುಜರಾತ್ ಅರ್ಬನ್ ಕೋಅಪರೇಟಿವ್ ಬ್ಯಾಂಕುಗಳ ಒಕ್ಕೂಟವು ೬,೨೪೯ ಕೋಟಿ ರುಪಾಯಿ ಠೇವಣಿಗಳನ್ನು ಹೊಂದಿರುವ, ೪,೨೨೧ ಕೋಟಿ ರುಪಾಯಿ ಸಾಲ ನೀಡಿರುವ ಹಾಗೂ ೫೫ ಶಾಖೆಗಳನ್ನು ಹೊಂದಿರುವ ಕಾಲುಪುರ್ ಬ್ಯಾಂಕನ್ನು ರಾಜ್ಯದ ಅತ್ಯುನ್ನತ ಬ್ಯಾಂಕು ಎಂದು ಹೆಸರಿಸಿದೆ.

ಗುಜರಾತಿನಲ್ಲಿ ಸಹಕಾರಿ ಬ್ಯಾಂಕುಗಳು ಉತ್ತಮ ವ್ಯವಹಾರ ಮಾಡುತ್ತಿದ್ದು, ಅನೇಕ ಸಲ ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು ನಿರ್ವಹಿಸುವ ಕೆಲಸಗಳನ್ನೂ ಅವು ನಿಭಾಯಿಸುತ್ತಿವೆ. ಸಹಕಾರಿ ಬ್ಯಾಂಕುಗಳ ಈ ಜಾಲವು ನೇರವಾಗಿಯೋ ಅಥವಾ ಪರೋಕ್ಷವಾಗಿಯೋ ಗುಜರಾತ್ ಜನಸಂಖ್ಯೆಯ ಮೂರನೇ ಒಂದು ಭಾಗವನ್ನು ತಲುಪಿವೆ. ಗುಜರಾತಿನಲ್ಲಿ ಒಟ್ಟು ೧೮ ಸಹಕಾರಿ ಬ್ಯಾಂಕುಗಳಿದ್ದು, ಅವುಗಳ ಪೈಕಿ ೧೬ ಬ್ಯಾಂಕುಗಳನ್ನು ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯೇ ನಿಯಂತ್ರಿಸುತ್ತಿದೆ. ನಗರಕೇಂದ್ರಿತ ಸಹಕಾರಿ ಬ್ಯಾಂಕ್ ಆಗಿರುವ ಕಾಲುಪುರ್ ಬ್ಯಾಂಕೂ ಅದಕ್ಕೆ ಹೊರತಲ್ಲ. ನಿರ್ಮಾ ಎಜುಕೇಶನ್ ಅಂಡ್ ರಿಸರ್ಚ್ ಫೌಂಡೇಶನ್‌ನ ಕಾರ್ಯನಿರ್ವಾಹಕ ಟ್ರಸ್ಟಿಯಾಗಿರುವ ಅಂಬುಬಾಯಿ ಮಗನ್‌ಬಾಯಿ ಪಟೇಲ್ ಇದರ ಅಧ್ಯಕ್ಷರಾಗಿದ್ದಾರೆ. ೨೦೧೭ರ ಚುನಾವಣಾ ಅಫಿಡವಿಟ್ ಪ್ರಕಾರ, ಗುಜರಾತಿನ ಉಪಮುಖ್ಯಮಂತ್ರಿ ನಿತಿನ್‌ಬಾಯಿ ಪಟೇಲ್ ಮತ್ತು ಅವರ ಪತ್ನಿ ಕಾಲುಪುರ ಬ್ಯಾಂಕಿನಲ್ಲಿ ಷೇರುದಾರರಾಗಿದ್ದಾರೆ.

'ದಿ ವೈರ್’ ಸುದ್ದಿತಾಣದಲ್ಲಿ ಪ್ರಕಟವಾದ ವರದಿಯು ಪ್ರಧಾನವಾಗಿ ಜೇ ಶಾ ಒಡೆತನದ ಟೆಂಪಲ್ ಎಂಟರ್ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಇನ್ನೊಂದು ಕಂಪನಿ ಒಂದೇ ವರ್ಷದಲ್ಲಿ ತನ್ನ ಆದಾಯವನ್ನು ೧೬,೦೦೦ ಪಟ್ಟು ಹೆಚ್ಚು ಮಾಡಿಕೊಂಡಿದ್ದರ ಮೇಲೆ ಒತ್ತುಕೊಟ್ಟಿತ್ತು. ಹಲವು ವರ್ಷಗಳ ಕಾಲ ನಗಣ್ಯ ಎನ್ನಬಹುದಾದ ಲಾಭಗಳನ್ನು ಅಥವಾ ನಷ್ಟಗಳನ್ನು ಅನುಭವಿಸಿದ್ದ ಈ ಕಂಪನಿಯು ೨೦೧೪-೧೫ರಲ್ಲಿ ೫೦,೦೦೦ ಆದಾಯ ಗಳಿಸಿದ್ದಾಗಿ ಹೇಳಿತ್ತು. ಆದರ ಮುಂದಿನ ವರ್ಷ ಒಮ್ಮಿಂದೊಮ್ಮೆಲೇ ಅದರ ಆದಾಯ ೮೦.೫ ಕೋಟಿ ರುಪಾಯಿಗೆ ಏರಿತ್ತು! ೨೦೧೬ರ ಅಕ್ಟೋಬರ್ ತಿಂಗಳಿನಲ್ಲಿ ಅದೇ ಕಂಪನಿ ತನ್ನ ವಹಿವಾಟನ್ನು ಸಂಪೂರ್ಣವಾಗಿ ನಿಲ್ಲಿಸಿರುವುದಾಗಿ ಘೋಷಿಸಿ, ಕಂಪನಿಯ ನಿವ್ವಳ ಮೊತ್ತವು ಕುಸಿದಿದೆ ಎಂದು ತನ್ನ ನಿರ್ದೇಶಕರ ವರದಿಯಲ್ಲಿ ಹೇಳಿತು. ನಂತರದಲ್ಲಿ ‘ಕಾರವಾನ್’ ನಡೆಸಿದ ತನಿಖೆಯಲ್ಲಿ ತಿಳಿದುಬಂದಿದ್ದೇನೆಂದರೆ, ಜೇ ಶಾ ಅವರ ವ್ಯವಹಾರ ವಹಿವಾಟಿನ ಲಕ್ಷ್ಯವು ಟೆಂಪಲ್ ಎಂಟರ್ ಪ್ರೈಸಸ್‌ನಿಂದ ಕುಸುಮ್ ಫಿನ್‌ಸರ್ವ್‌ಗೆ ವರ್ಗಾವಣೆಯಾಗಿತ್ತು.

‘ದಿ ವೈರ್’ ವರದಿ ಪ್ರಕಟವಾದ ಐದು ದಿನಗಳ ನಂತರ ಇಂಡಿಯಾ ಟುಡೆ ಗ್ರೂಪ್ ಆಯೋಜಿಸಿದ ಸಂವಾದವೊಂದರಲ್ಲಿ ಮಾತಾಡಿದ ಅಮಿತ್ ಶಾ, “ನನ್ನ ಮಗನ ಟೆಂಪಲ್ ಎಂಟರ್ಪ್ರೈಸಸ್ ಕಂಪನಿಯು ಸರ್ಕಾರದೊಂದಿಗೆ ಒಂದೇ ಒಂದು ರುಪಾಯಿಯ ವ್ಯವಹಾರವನ್ನೂ ಮಾಡಿಲ್ಲ, ಒಂದೇ ಒಂದು ರುಪಾಯಿ ಬೆಲೆಬಾಳುವ ಜಮೀನನ್ನೂ ಸರ್ಕಾರದಿಂದ ಪಡೆದಿಲ್ಲ, ಒಂದೇ ಒಂದು ರುಪಾಯಿ ಮೌಲ್ಯದ ಸರ್ಕಾರಿ ಗುತ್ತಿಗೆಯನ್ನೂ ಪಡೆದಿಲ್ಲ,” ಎಂದು ಸಮಜಾಯಿಷಿ ನೀಡಿದ್ದರು. ಅವರು ಹೇಳಿದ್ದು ನಿಜ. ಟೆಂಪಲ್ ಎಂಟರ್‌ ರ್ಪ್ರೈಸಸ್ ಈ ಯಾವ ಕೆಲಸವನ್ನೂ ಮಾಡಿರಲಿಲ್ಲ. ಆದರೆ, ಈ ಎಲ್ಲ ಕೆಲಸವನ್ನು ಜೇ ಶಾ ಒಡೆತನದ ಇನ್ನೊಂದು ಕಂಪನಿಯಾದ ಕುಸುಮ್ ಫಿನ್‌ಸರ್ವ್ ಕಂಪನಿ ಮಾಡಿತ್ತು. ಅದು ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಸಾರ್ವಜನಿಕ ಉದ್ಯಮವಾದ ಐಆರ್‌ಇಡಿಎ ಸಂಸ್ಥೆಯಿಂದ ಸಾಲ ಪಡೆದಿದೆ; ಗುಜರಾತ್ ಸರ್ಕಾರದ ಅಧೀನದಲ್ಲಿರುವ ಕೈಗಾರಿಕಾಭಿವೃದ್ಧಿ ನಿಗಮದಿಂದ ೧೫,೦೦೦ ಚದರ ಮೀಟರ್ ವಿಸ್ತೀರ್ಣದ ಜಾಗ ಪಡೆದಿದೆಯಲ್ಲದೆ, ಅದರ ಜೊತೆಗೆ ಒಪ್ಪಂದ ಮಾಡಿಕೊಂಡಿದೆ.

ಇದನ್ನೂ ಓದಿ : ಅಮಿತ್ ಶಾ ನಿರ್ದೇಶಕರಾಗಿರುವ ಬ್ಯಾಂಕ್‌ಗೆ ಭಾರಿ ಪ್ರಮಾಣದ ಅಮಾನ್ಯ ನೋಟು ಜಮೆ!

ಜೇ ಶಾ ಒಡೆತನದ ಒಂದು ಕಂಪನಿಯಾದ ಟೆಂಪಲ್ ಎಂಟರ್ ರ್ಪ್ರೈಸಸ್ ಒಂದೇ ವರ್ಷದಲ್ಲಿ ತನ್ನ ವಹಿವಾಟನ್ನು ೧೬,೦೦೦ ಪಟ್ಟು ಹೆಚ್ಚಿಸಿಕೊಂಡು ಕೂಡಲೇ ಬಾಗಿಲು ಮುಚ್ಚಿಕೊಂಡರೆ, ಅವರ ಇನ್ನೊಂದು ಕಂಪನಿ ಕುಸುಮ್ ಫಿನ್‌ಸರ್ವ್ ಆರಂಭದಿಂದಲೂ ಒಂದು ಉದ್ಯಮ ವಹಿವಾಟಿನಿಂದ ಇನ್ನೊಂದು ಉದ್ಯಮ ವಹಿವಾಟಿಗೆ ಹಾರುತ್ತ ಬಂದಿದೆ.

ಲಭ್ಯವಿರುವ ಸಾರ್ವಜನಿಕ ದಾಖಲೆಗಳನ್ನು ಪರಿಶೀಲಿಸಿದರೆ ಈ ಕಂಪನಿಯು ಷೇರು ಮಾರಾಟ, ಕನ್ಸಲ್ಟೆನ್ಸಿ, ಕಲ್ಲಿದ್ದಲ್ಲು ವ್ಯಾಪಾರ ಮತ್ತು ಸಿಮೆಂಟ್ ಚೀಲಗಳ ಉತ್ಪಾದನೆಯಂತಹ ಹಲವು ಪ್ರಕಾರದ ವಹಿವಾಟುಗಳನ್ನು ನಡೆಸಿರುವುದು ಗೊತ್ತಾಗುತ್ತದೆ. ಸಾರ್ವಜನಿಕ ದಸ್ತಾವೇಜುಗಳ ಪ್ರಕಾರ, ಜೇ ಶಾ ಈ ಕಂಪನಿಯಲ್ಲಿ ಶೇಕಡ ೬೦ರಷ್ಟು ಷೇರುಗಳನ್ನು ಹೊಂದಿದ್ದರೆ ಅವರ ಪತ್ನಿ ರಿಷಿತಾ ಶಾ ಶೇ.೩೯ರಷ್ಟು ಷೇರುಗಳನ್ನು ಹೊಂದಿದ್ದಾರೆ. ಉಳಿದ ಶೇ.೧ರಷ್ಟು ಷೇರುಗಳನ್ನು ಪ್ರದೀಪ್‌ಬಾಯಿ ಕುಂತಿಲಾಲ್ ಶಾ ಎಂಬ ವ್ಯಕ್ತಿಯು ಹೊಂದಿದ್ದಾರೆ.

‘ದಿ ವೈರ್‌’ಗೆ ನೀಡಿದ ತಮ್ಮ ಪ್ರತಿಕ್ರಿಯೆಯಲ್ಲಿ ಜೇ ಶಾ ಅವರ ವಕೀಲರು, ಕುಸುಮ್ ಎಂಟರ್ ರ್ಪ್ರೈಸಸ್ ಕಂಪೆನಿಯು ಷೇರು ಮಾರಾಟ, ಆಮದು ಮತ್ತು ರಫ್ತು ಹಾಗೂ ಕನ್ಸಲ್ಟೆನ್ಸಿ ಸೇವೆಗಳ ವಿತರಣೆ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ. ೨೦೧೪-೧೫ನೇ ವರ್ಷದಲ್ಲಿ ಕಂಪನಿ ಸಲ್ಲಿಸಿದ ಹಣಕಾಸು ಹೇಳಿಕೆಯಲ್ಲಿ ಅದು ಕೃಷಿ ಸರಕು ಚಟುವಟಿಕೆಯಲ್ಲೂ ತೊಡಗಿರುವುದಾಗಿ ನಮೂದಿಸಿದೆ. ಈ ಕಂಪನಿಯ ಒಟ್ಟು ವಹಿವಾಟಿನಲ್ಲಿ ಶೇ.೬೦ರಷ್ಟು ಪಾಲು ಕನ್ಸಲ್ಟೆನ್ಸಿ ಸೇವೆಗಳದ್ದಾಗಿದ್ದರೆ ಶೇ.೨೯ರಷ್ಟು ಪಾಲು ಕೃಷಿ ಸರಕುಗಳ ವ್ಯಾಪಾರದ್ದಾಗಿದೆ.

ಈ ಕಂಪನಿಗೆ ಪವನ ವಿದ್ಯುಚ್ಛಕ್ತಿ ಉತ್ಪಾದನೆಯಲ್ಲಿ ಯಾವುದೇ ಪೂರ್ವಾನುಭವ ಇಲ್ಲದಿದ್ದರೂ ಕೇಂದ್ರ ಸರ್ಕಾರದ ನವೀನ ಮತ್ತು ಪುನರ್‌ನವೀಕರಿಸಬಹುದಾದ ಇಂಧನ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಪುನಶ್ಚೇತನಗೊಳಿಸಬಹುದಾದ ಇಂಧನ ಇಲಾಖೆ ಏಜೆನ್ಸಿ ಲಿಮಿಟೆಡ್ (ಐಆರ್‌ಇಡಿಎ) ಸಂಸ್ಥೆಯು ಮಧ್ಯಪ್ರದೇಶದ ರಟ್ಲಮ್ ಜಿಲ್ಲೆಯಲ್ಲಿ ೨.೧ ಮೆಗಾವ್ಯಾಟ್ ಸಾಮರ್ಥ್ಯದ ಪವನ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪಿಸಲು ಈ ಕಂಪನಿಗೆ ೧೦.೩೫ ಕೋಟಿ ರುಪಾಯಿಗಳ ಸಾಲವನ್ನು ನೀಡಿದೆ. ಈ ಸಾಲವನ್ನು ನೀಡುವಾಗ ಐಆರ್‌ಇಡಿಎ ತಾನೇ ರೂಪಿಸಿದ ನಿಯಮಾವಳಿಗಳನ್ನು ಗಾಳಿಗೆ ತೂರಿದೆ. ಕೇವಲ ೧ ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಯೋಜನೆಗೆ ಮಾತ್ರ ಸಾಲ ನೀಡುವುದು ಹಾಗೂ ಯೋಜನಾ ವೆಚ್ಚದ ಶೇ.೭೦ರಷ್ಟನ್ನು ಮಾತ್ರ ಸಾಲರೂಪವಾಗಿ ನಿಡುವುದು ಎಂಬ ನಿಯಮವನ್ನು ತಾನೇ ರೂಪಿಸಿದೆ. ಒಂದು ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಯೋಜನೆಗೆ ೪ರಿಂದ ೭ ಕೋಟಿ ರುಪಾಯಿ ಆಗುತ್ತದೆ. ಅದರ ಶೇ.೭೦ರಷ್ಟು ಎಂದರೆ, ಗರಿಷ್ಠ ೪.೯ ಕೋಟಿ ರುಪಾಯಿ ಆಗುತ್ತದೆ. ಆದರೆ, ಕುಸುಮ್ ಫಿನ್‌ಸರ್ವ್ ಕಂಪನಿಗೆ ಈ ನಿಯಮ ಉಲ್ಲಂಘಿಸಿ ಇದರ ದುಪ್ಪಟ್ಟು ಸಾಲ ನೀಡಲಾಗಿದೆ.

ಕುಸುಮ್ ಫಿನ್‌ಸರ್ವ್ ಕಂಪನಿಯ ವ್ಯವಹಾರದ ಬಗ್ಗೆ ಇದಕ್ಕಿಂತ ಹೆಚ್ಚಿನ ಮಾಹಿತಿ ತೆಗೆಯುವುದಕ್ಕೆ ಸಾಧ್ಯವಾಗಿಲ್ಲ. ಏಕೆಂದರೆ, ೨೦೧೫-೧೬ನೇ ವರ್ಷದಿಂದೀಚೆಗೆ ಅದು ತನ್ನ ಹಣಕಾಸು ಹೇಳಿಕೆಗಳನ್ನು ಇನ್ನೂ ಸಲ್ಲಿಸಿಯೇ ಇಲ್ಲ. ೨೦೧೬-೧೭ನೇ ವರ್ಷದಲ್ಲಿ ತನ್ನ ವಾರ್ಷಿಕ ವಹಿವಾಟು ೫ ಕೋಟಿ ರುಪಾಯಿಗಳನ್ನು ದಾಟಿದೆ ಎಂದಷ್ಟೇ ಹೇಳಿದೆಯೇ ಹೊರತು, ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲಾತಿಗಳನ್ನು ಅದು ಸಲ್ಲಿಸಿಲ್ಲ.

ಈಗ ಈ ಕಂಪನಿಯು ಪ್ಲಾಸ್ಟಿಕ್ ಚೀಲ ಉತ್ಪಾದನೆಯಲ್ಲಿ ತೊಡಗಿರುವುದಾಗಿ ಹೇಳಿಕೊಂಡಿದೆ. ಕಾರ್ಪೊರೆಟ್ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿರುವ ದಾಖಲೆಗಳಲ್ಲಿ ಈ ಕ್ಷೇತ್ರದಲ್ಲಿ ಅದು ಹಿಂದೆ ವ್ಯವಹಾರ ಮಾಡಿದ್ದರ ಬಗ್ಗೆ ಯಾವುದೇ ಮಾಹಿತಿ ಕಂಡುಬಂದಿಲ್ಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More