ವಿಡಿಯೋ ಸ್ಟೋರಿ | ಸೀತಾಪುರದಲ್ಲಿ ನಾಟಿ ಶಾಸ್ತ್ರ ಮಾಡಿದ ಸಿಎಂ ಮುಂದಿರುವ ಹೊಣೆಗಳೇನು?

ಮಂಡ್ಯದಲ್ಲಿ ಸಿಎಂ ಎಚ್‌ಡಿಕೆ ಮಾಡಿದ ವೈಭವದ ನಾಟಿ ಅನೇಕ ಕಾರಣಕ್ಕೆ ಗಮನ ಸೆಳೆಯಿತು. ಯಂತ್ರಗಳ ಭರಾಟೆಯನ್ನು ಸರ್ಕಾರವೇ ಉತ್ತೇಜಿಸುವ ಈ ಕಾಲದಲ್ಲಿ ನೇಗಿಲು, ಎತ್ತು ಬಳಸಿದ್ದು ವಿಶೇಷ. ಸ್ವಾವಲಂಬಿ ಕೃಷಿ ಪದ್ಧತಿ ಉತ್ತೇಜಿಸಲು ಸಿಎಂ ಮುಂದಾಗದಿದ್ದರೆ ಇದೆಲ್ಲ ನಾಟಕ ಎನಿಸಬಹುದು

ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳಕುಪ್ಪೆ-ಸೀತಾಪುರ ಗ್ರಾಮದ ಐದು ಎಕರೆ ಗದ್ದೆ ಮತ್ತು ಅದರ ಸುತ್ತಲಿನ ಸಿಂಗಾರಗೊಂಡ ಜಮೀನು ಥೇಟ್ ಗ್ರಾಮೀಣ ಸೊಗಡಿನ ಸಿನಿಮಾ ಚಿತ್ರೀಕರಣಕ್ಕೆ ಸಜ್ಜಾಗಿದ್ದ ಸೆಟ್‌ನಂತೆಯೇ ಇತ್ತು. ಬಿಜೆಪಿ ಆಕ್ಷೇಪದ ಪ್ರಕಾರ, ಶನಿವಾರ (ಆ.೧೧) ಅಲ್ಲಿ ನಡೆದದ್ದು ನಾಟಕ ಮತ್ತು ಗಿಮಿಕ್‌. ಆದರೆ, ಶುಭ್ರ ಬಿಳಿ ಪಂಚೆಯನ್ನು ಎತ್ತಿ ಕಟ್ಟಿ ಕೆಸರು ಗದ್ದೆಗಿಳಿದು ‘ನಾಟಿ ಶಾಸ್ತ್ರ’ ಮಾಡಿದ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿಯವರ ಪ್ರಕಾರ, ಅದು ನಾಡಿನ ರೈತರಲ್ಲಿ ಆತ್ಮವಿಶ್ವಾಸವನ್ನು, ಕೃಷಿಯಲ್ಲಿ ಭರವಸೆಯನ್ನು ತುಂಬುವ ಉಪಕ್ರಮ.

ಸೀತಾಪುರದ ಕೆಂಚೇಗೌಡರಿಗೆ ಸೇರಿದ ಈ ಗದ್ದೆಯನ್ನು ಐವತ್ತಕ್ಕೂ ಹೆಚ್ಚು ರೈತರು ೨೫ ಜೊತೆ ಎತ್ತು, ನೇಗಿಲು ಮತ್ತು ಸ್ಥಳೀಯ ಸಾಂಪ್ರದಾಯಿಕ ಕೃಷಿ ಪರಿಕರಗಳನ್ನು ಬಳಸಿ ಉಳುಮೆ ಮಾಡಿ, ನಾಟಿಗೆ ಹದಗೊಳಿಸಿದ್ದರು. ಅದಾಗಲೇ ಸಿದ್ಧಪಡಿಸಿದ್ದ ‘ಎಂಸಿ ೧೩’ ತಳಿಯ ಭತ್ತದ ಪೈರನ್ನು ನೆಡಲು ೧೫೦ಕ್ಕೂ ಹೆಚ್ಚು ಕೃಷಿಕ ಮಹಿಳೆಯರು ಬಂದಿದ್ದರು. ಗದ್ದೆಗೆ ಹೋಗುವ ದಾರಿಯನ್ನು ಬಹುವಿಧದಲ್ಲಿ ಸಿಂಗರಿಸಲಾಗಿತ್ತು. ಡೊಳ್ಳು, ತಮಟೆ ಸಹಿತ ಹಲವು ಜನಪದ ವಾದ್ಯಗಳು, ನಾಟಿ ಹಾಡು, ಸೋಬಾನೆ ಪದಗಳು ಅನುರಣಿಸಿದವು. ಹೆಗ್ಗಡಹಳ್ಳಿಯ ಸೋಬಾನೆ ಕೃಷ್ಣೇಗೌಡ ತಂಡದವರು ಸೋಬಾನೆ ಹಾಡುತ್ತಿದ್ದುದು ಧ್ವನಿವರ್ಧಕದಲ್ಲಿ ಸುತ್ತಲ ಹತ್ತಾರು ಹಳ್ಳಿಗಳಿಗೆ ಕೇಳಿಸುತ್ತಿತ್ತು. ಜೊತೆಗೆ, ದೇಸಿ ಸೊಗಡಿನ ಊಟ, ಆದಿಚುಂಚನಗಿರಿಯ ನಿರ್ಮಲಾನಂದನಾಥ ಸ್ವಾಮೀಜಿ, ಹಲವು ಜೆಡಿಎಸ್ ಸಚಿವರು, ಶಾಸಕರು, ರಾಜಕೀಯ ಮುಖಂಡರ ಹಾಜರಿ, ಸುಸಜ್ಜಿತ ವೇದಿಕೆ, ನೂಕುನುಗ್ಗಲು ತಡೆಯಲು ಬ್ಯಾರಿಕೇಡ್, ವ್ಯಾಪಕ ಪೊಲೀಸ್ ಭದ್ರತೆ, ಸಾವಿರಾರು ರೈತ-ಜನರಿಗೆ ಇಲ್ಲಿ ನಡೆಯುವುದನ್ನೆಲ್ಲ ಕಾಣಿಸಲಿಕ್ಕೆಂದು ಎರಡು ಬೃಹತ್‌ ಎಲ್‌ಇಡಿ ಪರದೆಯ ವ್ಯವಸ್ಥೆ, ಇತ್ಯಾದಿ.

ಬಹುಶಃ ಇಷ್ಟೊಂದು ವೈಭವದ ನಾಟಿ ಕಾರ್ಯಕ್ರಮವನ್ನು ಸುತ್ತಲಿನ ಜನ ಹಿಂದೆಂದೂ ಕಂಡಿರಲಿಲ್ಲ. ಮಾತ್ರವಲ್ಲ, ಇತ್ತೀಚಿನ ದಶಕಗಳಲ್ಲಿ ಎತ್ತುಗಳು, ನೇಗಿಲು, ಹಲಗೆ ಮತ್ತಿತರ ಪರಿಕರ ಬಳಸಿ ಗದ್ದೆಯನ್ನು ಹದಗೊಳಿಸುವುದು, ಮಹಿಳೆಯರ ಮೂಲಕವೇ ನಾಟಿ ಮಾಡಿಸುವುದು, ನಾಟಿ ವೇಳೆ ಜನಪದ ಹಾಡು ಕೇಳುವುದು ಹಳ್ಳಿಗಳಲ್ಲೇ ತೀರಾ ಅಪರೂಪ. ಮಂಡ್ಯ ಮಾತ್ರವಲ್ಲ, ರಾಜ್ಯದ ಎಲ್ಲೆಡೆಯೂ ಈಗ ಕೃಷಿ ಚಟುವಟಿಕೆಗಳು ಬಹುತೇಕ ಯಂತ್ರಗಳನ್ನು ಅವಲಂಬಿಸಿವೆ. ಉಳುಮೆಗೆ ಟ್ರ್ಯಾಕ್ಟರ್, ಪವರ್‌ ಟಿಲ್ಲರ್; ನಾಟಿಗೆ, ಕೊಯ್ಲಿಗೆ, ಕಳೆ ತೆಗೆಯಲು ಎಲ್ಲದಕ್ಕೂ ಯಂತ್ರಗಳೇ ಹೆಚ್ಚು ಬಳಕೆಯಲ್ಲಿವೆ. ಸಮಯಕ್ಕೆ ‘ಆಳು’ಗಳು (ಕೃಷಿಕಾರ್ಮಿಕರು) ಸಿಗುವುದಿಲ್ಲ ಮುಂತಾದ ಕಾರಣಕ್ಕೆ ರೈತರು ‘ಸರಳ’ ಯಂತ್ರಮಾರ್ಗ ಹಿಡಿದಿದ್ದಾರೆ.

ರೈತರಿಗೆ ಅನುಕೂಲ ಕಲ್ಪಿಸುವ ನೆಪದಲ್ಲಿಯೇ ಕೃಷಿಯಲ್ಲಿ ಅತಿ ಯಾಂತ್ರಿಕತೆಯನ್ನು ಸರ್ಕಾರಿ ಇಲಾಖೆಗಳು ಹೆಚ್ಚೇ ಎನ್ನುವಷ್ಟು ಉತ್ತೇಜಿಸುತ್ತಿವೆ. ಇದರ ಹಿಂದೆ ಅಧಿಕಾರಸ್ಥರ ವ್ಯಾವಹಾರಿಕ ತಂತ್ರ, ಲಾಭಕೋರತನಗಳು ಇಲ್ಲದಿಲ್ಲ. ಯಂತ್ರೋಪಕರಣ, ಬಿತ್ತನೆ ಬೀಜ, ರಸಗೊಬ್ಬರ, ಕೀಟನಾಶಕ, ಮಾರುಕಟ್ಟೆ ಸಹಿತ ಎಲ್ಲ ಹಂತದ ‘ವಂಚನೆ’ಯ ಜಾಲದಲ್ಲಿ ಸಿಲುಕಿ ತನ್ನತನವನ್ನು ಮತ್ತು ಸ್ವಾವಲಂಬನೆಯನ್ನು ಕಳೆದುಕೊಂಡಿರುವ ಕೃಷಿಕನಿಗೆ ಕೆಲವೊಮ್ಮೆ ಇಂಥ ಸಂಗತಿಗಳೇ ದುಬಾರಿಯಾಗುತ್ತಿವೆ. ಸಾಲ ಮಾಡಿ ಖರೀದಿಸಿದ ಇಂಥ ಯಂತ್ರ-ತಂತ್ರಗಳನ್ನು ಬಳಸಿಯೂ, ಬೆಳೆದ ಪದಾರ್ಥಕ್ಕೆ ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದಿದ್ದರೆ ಅಥವಾ ಯಾವುದೋ ಕಾರಣಕ್ಕೆ ಬೆಳೆ-ಇಳುವರಿ ನಷ್ಟವಾದರೆ ರೈತ ಸಾಲಗಾರನಾಗಿ ಆತ್ಮಹತ್ಯೆಯ ದಾರಿ ತುಳಿಯುತ್ತಾನೆ. ಯಂತ್ರ-ಉಪಕರಣಗಳನ್ನು ತಯಾರಿಸುವ ಬೃಹತ್ ಕಂಪನಿಗಳು, ವಿವಿಧ ಹಂತದ ದಲ್ಲಾಳಿಗಳು ಮಾತ್ರ ತಮ್ಮ ಪಾಲಿನ ಲಾಭವನ್ನು ಏರಿಸಿಕೊಳ್ಳುತ್ತಲೇ ಇದ್ದಾರೆ. ಕೃಷಿ ಕ್ಷೇತ್ರ ಅನುಭವಿಸುತ್ತಿರುವ ವಿಪರ್ಯಾಸವಿದು.

ಇಂಥ ಸ್ಥಿತಿಯಲ್ಲಿ ಕುಮಾರಸ್ವಾಮಿಯವರ 'ನಾಟಿ ಶಾಸ್ತ್ರ’ಕ್ಕೆ ನಡೆದ ಸಿದ್ಧತೆಯಲ್ಲಿ ಯಾವುದೇ ಯಂತ್ರೋಪಕರಣ ಬಳಸದೆ, ಹಳೆಯ ಸ್ವಾವಲಂಬಿ ಕೃಷಿ ಪದ್ಧತಿಯನ್ನೇ ಬಿಂಬಿಸಿದ್ದು ಗಮನಾರ್ಹ. ಮಾತ್ರವಲ್ಲ, “ಸಾಲ ಮನ್ನಾ ಮಾಡಿದ ಮಾತ್ರಕ್ಕೆ ರೈತರ ಎಲ್ಲ ಸಮಸ್ಯೆಗಳು ಬಗೆಹರಿದುಬಿಡುತ್ತವೆ ಎಂದೇನೂ ನಾನು ಭಾವಿಸಿಲ್ಲ. ರೈತರಿಗೆ ಆರ್ಥಿಕ ಶಕ್ತಿ ತುಂಬುವಂತಹ ಹೊಸ ಬಗೆಯ ಕೃಷಿನೀತಿಯನ್ನು ತರಬೇಕೆನ್ನುವುದು ನನ್ನ ಕಲ್ಪನೆ,’’ ಎನ್ನುವ ಭರವಸೆದಾಯಕ ಮಾತುಗಳನ್ನೂ ಆಡಿದ್ದಾರೆ. ಕೃಷಿ ಕ್ಷೇತ್ರ ಮತ್ತು ರೈತನ ಏಳಿಗೆ ಎಂದರೆ ಯಂತ್ರೋಪಕರಣಗಳನ್ನು, ರಾಸಾಯನಿಕಗಳನ್ನು ಕಂಡುಹಿಡಿಯುವುದು; ಸಬ್ಸಿಡಿಯ ಮೂಲಕ ಅವುಗಳು ಕಡಿಮೆ ದರಕ್ಕೆ ರೈತರ ಕೈಗೆಟಕುವಂತೆ ಮಾಡುವುದು ಎಂದೇ ಅಧಿಕಾರಸ್ಥರು ವ್ಯವಸ್ಥೆಯನ್ನು ನಂಬಿಸುತ್ತಿದ್ದಾರೆ. “ಕೃಷಿ ಕ್ಷೇತ್ರ ಕೃಷಿಕಾರ್ಮಿಕರ ಸಮಸ್ಯೆಯನ್ನು ಎದುರಿಸುತ್ತಿದೆ,’’ ಎನ್ನುವ ಸೃಷ್ಟಿತ ನಂಬಿಕೆಯನ್ನು ಇದಕ್ಕೆ ಪುರಾವೆಯನ್ನಾಗಿ ನೀಡಲಾಗುತ್ತಿದೆ. ಈ ಮೂಲಕ, ಹಳ್ಳಿಗಳಲ್ಲಿ ದಶಕಗಳ ಹಿಂದಿದ್ದ ಸ್ವಾವಲಂಬಿ, ಕೊಡು-ಕೊಳ್ಳುವಿಕೆಯ ಪದ್ಧತಿಯನ್ನು, ಕೃಷಿಕ ಮತ್ತು ಕೃಷಿಕಾರ್ಮಿಕರ ಮಧ್ಯದ ಸೌಹಾರ್ದವಾದ ಸಂಬಂಧವನ್ನು ಕಡಿದುಹಾಕಲಾಗಿದೆ.

ಇಂಥ ವ್ಯವಸ್ಥಿತ ವಂಚನೆಯ ಜಾಲಗಳಿಂದ ಕೃಷಿಕರನ್ನು ಬಚಾವು ಮಾಡಬೇಕೆಂದರೆ ‘ವಿಷಮುಕ್ತ’ ಮತ್ತು ಆದಷ್ಟು ಸ್ವಾವಲಂಬಿ ಕೃಷಿ ವಿಧಾನಗಳನ್ನು ಅಳವಡಿಸಬೇಕು, ಯಾವುದೇ ಬೆಳಗೆ ಯೋಗ್ಯ ಬೆಲೆ ಸಿಗುವಂಥ ರೀತಿಯಲ್ಲಿ ರೈತಸ್ನೇಹಿ ಮಾರುಕಟ್ಟೆ ವ್ಯವಸ್ಥೆಯನ್ನು ಬಲಿಷ್ಠಗೊಳಿಸಬೇಕು, ಕೃಷಿ ಕಸುಬಿಗಿದ್ದ ಗೌರವದ ಸ್ಥಾನವನ್ನು ಮರುಸ್ಥಾಪಿಸಬೇಕು ಎಂದು ಅನೇಕ ಕೃಷಿ ತಜ್ಞರು ಪ್ರತಿಪಾದಿಸುತ್ತಿದ್ದಾರೆ. ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ, ಸಾವಯವ ಕೃಷಿ ಪದ್ಧತಿಗಳು ರೈತ ಸಮುದಾಯಕ್ಕೆ ಉಪಕಾರಿ ಎನ್ನುವ ಅಭಿಪ್ರಾಯವು ಗಟ್ಟಿಯಾಗುತ್ತಿದೆ. ಅಲ್ಲದೆ, ಹೆಚ್ಚು ನೀರನ್ನು ಬೇಡುವ ಭತ್ತ, ಕಬ್ಬು ಮುಂತಾದ ಬೆಳೆಗಳಿಗೆ ಬದಲು ಕಡಿಮೆ ನೀರಿನಲ್ಲಿ ಬೆಳೆದು ಹೆಚ್ಚು ಸಂಪಾದಿಸುವ ಬಹುಬೆಳೆ ಪದ್ಧತಿಯನ್ನು ಮಂಡ್ಯದಂಥ ಜಿಲ್ಲೆಯಲ್ಲಿ ಉತ್ತೇಜಿಸುವ ಅಗತ್ಯವೂ ಇದೆ. ‘ನಾಟಿ’ ನಂತರ ಮುಖ್ಯಮಂತ್ರಿಯವರು ಹೇಳಿದಂತೆ, “ಮಳೆ ಕೊರತೆಯ ಕಾರಣ ಮೂರ್ನಾಲ್ಕು ವರ್ಷಗಳಿಂದ ಮಂಡ್ಯ ಜಿಲ್ಲೆ ರೈತರು ಭತ್ತ ನಾಟಿ ಮಾಡಿರಲಿಲ್ಲ. ಮಾತ್ರವಲ್ಲ, ಕೃಷಿ ಚಟುವಟಿಕೆಗಳತ್ತಲೇ ನಿರುತ್ಸಾಹ ಹೊಂದಿದ್ದರು. ಈ ವರ್ಷ ಉತ್ತಮ ಮಳೆಯಾಗಿದೆ. ಅನ್ನದಾತ ರೈತರಲ್ಲಿ ಉತ್ಸಾಹ ತುಂಬಿ, ಅವರ ಕಷ್ಟ-ಸುಖಗಳನ್ನು ಅರಿಯಲು ಬಂದಿದ್ದೇನೆ,’’ ಎಂದೂ ಸಿಎಂ ಸೇರಿಸಿದರು.

ರೈತರಲ್ಲಿ ಹೀಗೆ ಉತ್ಸಾಹ ತುಂಬುವುದು ಒಳ್ಳೆಯದೇ. ಆದರೆ, ಕಳೆದ ವರ್ಷ ಮಳೆ ಕೊರತೆಯಾಗಿದ್ದಾಗ, “ಈ ವರ್ಷ ಹುರುಳಿ, ಹೆಸರು ಬೆಳೆಯಿರಿ,’’ ಎಂದು ಸಲಹೆ ನೀಡಿದ್ದ ಅಂದಿನ ಸಿಎಂ ಸಿದ್ದರಾಮಯ್ಯ ವಿರುದ್ಧ ಮಂಡ್ಯ ಜಿಲ್ಲೆಯ ಜನ ತಿರುಗಿಬಿದ್ದು, “ನಾವು ಏನು ಬೆಳೆಯಬೇಕು ಎಂದು ಹೇಳಲು ನೀವ್ಯಾರು? ನಮ್ಮ ಬೆಳಗೆ ನೀರು ಕೊಡಿ,’’ ಎಂದು ಹೂಂಕರಿಸಿದ್ದು ಮತ್ತು ಅದನ್ನು ಜೆಡಿಎಸ್‌ ಚುನಾವಣಾ ವಿಷಯವನ್ನಾಗಿ ಮಾರ್ಪಡಿಸಿದ್ದನ್ನು ಕುಮಾರಸ್ವಾಮಿ ನೆನಪಿಸಿಕೊಳ್ಳಬೇಕು. ಈ ವರ್ಷವೇನೋ ಉತ್ತಮ ಮಳೆಯಾಗಿದೆ. ಮುಂದೆಯೂ ಹೀಗೇ ಆಗುತ್ತದೆಂದೇನೂ ಅಲ್ಲ. ಅಲ್ಲದೆ, ನಿರಂತರವಾಗಿ ಭತ್ತ, ಕಬ್ಬು ಮುಂತಾದ ಏಕಬೆಳೆಗಳನ್ನೇ ಬೆಳೆದದ್ದು ಮತ್ತು ಜಮೀನಿನಲ್ಲಿ ಯಥೇಚ್ಚ ನೀರು ನಿಲ್ಲಿಸಿದ್ದರಿಂದ ಭೂಮಿ ಫಲವತ್ತತೆ ಕುಸಿದಿರುವುದನ್ನೂ ತಜ್ಞರು ಗುರುತಿಸಿದ್ದಾರೆ. ಆದ್ದರಿಂದ, ಮಳೆ ಕೊರತೆಯ ಸಂದರ್ಭದಲ್ಲಿಯೂ ಭತ್ತ, ಕಬ್ಬಿಗೆ ಜೋತುಬೀಳದೆ ಪರ್ಯಾಯ ಬೆಳೆಯನ್ನು ಅವಲಂಬಿಸುವ ಕುರಿತಂತೆ ಮಂಡ್ಯ ರೈತರಲ್ಲಿ ಅರಿವು ಮೂಡಿಸುವ ಜವಾಬ್ದಾರಿಯನ್ನು ಕುಮಾರಸ್ವಾಮಿ ಅವರೇ ಹೊರಬೇಕು. ಅವರ ಸಾಂಕೇತಿಕ ನಾಟಿ ಈ ದಿಸೆಯಲ್ಲಿ ಮುನ್ನುಡಿ ಬರೆದರೆ ಸೂಕ್ತ. ಇಲ್ಲವೇ ಪ್ರತಿಪಕ್ಷಗಳು ಆಡಿಕೊಳ್ಳುತ್ತಿರುವಂತೆ 'ಇದು ಶೋ ಆಫ್‌', 'ಗಿಮಿಕ್‌' ಅಥವಾ 'ನಾಟಕ’ ಮಾತ್ರವೇ ಆಗುತ್ತದೆ.

ಈ ಮಧ್ಯೆ, ‘ಸಿಎಂ ನಾಟಿ’ಗೆ ಸಿಕ್ಕ ಪ್ರಚಾರ, ನಡೆದ ಸಿದ್ಧತೆಗಳಿಂದ ಅಚ್ಚರಿಗೆ ಬಿದ್ದಂತೆ ತೋರಿದ ಬಿಜೆಪಿ ನಾಯಕರಾದ ಕೆಎಸ್ ಈಶ್ವರಪ್ಪ, ಬಿ ಎಸ್ ಯಡಿಯೂರಪ್ಪ, “ಇದು ಕೇವಲ ಪ್ರದರ್ಶನ, ಗಿಮಿಕ್‌. ನಿಜವಾದ ರೈತ ಕಾಳಜಿ ಇದರಲಿಲ್ಲ. ನಾಟಿ ಮಾಡಿದರೆ ಯಾವ ಪುರುಷಾರ್ಥ ಸಾಧಿಸಿದಂತಾಗುತ್ತದೆ?’’ ಎಂದು ಟೀಕಿಸಿದರು. ಅದಕ್ಕೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್‌ ವಿಶ್ವನಾಥ್, “ಬಿಜೆಪಿಗೆ, ಮೋದಿಗೆ ರೈತರು ಮತ್ತು ಅವರ ಸಂಕಷ್ಟ ಅರ್ಥ ಆಗುವುದಿಲ್ಲ. ಅವರಿಗೇನಿದ್ದರೂ ಅಂಬಾನಿ, ಅದಾನಿಗಳಂಥ ದೊಡ್ಡವರಷ್ಟೇ ಗೊತ್ತಾಗುವುದು. ನಾಟಿಯನ್ನು ವ್ಯಂಗ್ಯ ಮಾಡುವ ಮೂಲಕ ಬಿಜೆಪಿಯವರು ರೈತರನ್ನೂ ವ್ಯಂಗ್ಯ ಮಾಡಿದ್ದಾರೆ,’’ ಎಂದು ಛೇಡಿಸಿದರು. ಸಿಎಂ ಕುಮಾರಸ್ವಾಮಿ ಕೂಡ, “ವಿರೋಧ ಪಕ್ಷಗಳನ್ನು ಮೆಚ್ಚಿಸಲೆಂದೋ, ಯಾರಿಗೋ ಹೆದರಿಯೋ ಈ ಕೆಲಸ ಮಾಡುತ್ತಿಲ್ಲ. ನನ್ನ ಹೃದಯದಿಂದ ಮಾಡಿದ ಕೆಲಸವಿದು. ನಾನು ಮಣ್ಣಿನ ಮಗ ಅಂತ ಹೊಸದಾಗಿ ನಿರೂಪಿಸಬೇಕಾಗಿಲ್ಲ. ಈ ನಾಡಿನ ರೈತರು ಸಹಿತ ಎಲ್ಲರೂ ನೆಮ್ಮದಿಯಿಂದ ಬದುಕುವಂಥ ವಾತಾವರಣ ನಿರ್ಮಿಸಬೇಕೆನ್ನುವುದು ನನ್ನ ಬಯಕೆ. ವಿಧಾನಸೌಧದಲ್ಲಿ ಕುಳಿತು ಆದೇಶ ಹೊರಡಿಸುವ ಜಾಯಮಾನ ನನ್ನದಲ್ಲ. ಅದಕ್ಕೆ ನಿಮ್ಮ ಬಳಿ ಬಂದು ಸಮಸ್ಯೆ ಅರಿತು ಆದೇಶ ನೀಡುತ್ತಿದ್ದೇನೆ,’’ ಎನ್ನುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದರು.

ಇದನ್ನೂ ಓದಿ : ಮುದ್ದಿ ಕಿ ಬಾತ್ | ಯಡಿಯೂರಪ್ಪನವರಿಗೆ ‘ನಾಟಿ ಚಾಲೆಂಜ್’ ಪಾಸ್ ಮಾಡಿದ್ರೆ ಹೆಂಗೆ?

"ಇದೇನು ಸರ್ಕಾರಿ ಕಾರ್ಯಕ್ರಮ ಅಲ್ಲ. ಇದೊಂಥರ ಕುಟುಂಬದ ಕಾರ್ಯಕ್ರಮ. ಊರಿನ ಹಬ್ಬದಂತೆ," ಎಂದು ಮುಖ್ಯಮಂತ್ರಿ ಹೇಳಿದರಾದರೂ ಅದಕ್ಕೆ ಸರ್ಕಾರದ ವಿವಿಧ ಇಲಾಖೆಗಳ ಶ್ರಮ, ಸಿದ್ಧತೆಯ ವೆಚ್ಚ ಇತ್ಯಾದಿಗಳು ಕಡಿಮೆ ಏನಿರಲಿಲ್ಲ. “ಬೆಳಗ್ಗೆ ೧೧ರಿಂದ ಮಧ್ಯಾಹ್ನದವರೆಗೆ ಮುಖ್ಯಮಂತ್ರಿ ಕೃಷಿಕ ಮಹಿಳೆಯರ ಜೊತೆ ಗದ್ದೆಯಲ್ಲಿದ್ದು ನಾಟಿ ಮಾಡುತ್ತಾರೆ, ಅವರ ಜೊತೆ ಸಂವಾದ ನಡೆಸುತ್ತಾರೆ,’’ ಎಂದೆಲ್ಲ ಪ್ರಚಾರ ಮಾಡಲಾಗಿತ್ತು. ೨ ಗಂಟೆ ತಡವಾಗಿ ಬಂದ ಸಿಎಂ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ಬಿಳಿಪಂಚೆಯನ್ನು ಎತ್ತಿಕಟ್ಟಿ ತುಂತುರು ಮಳೆಯಲ್ಲೇ ಗದ್ದೆಗಿಳಿದು ಸಾಂಕೇತಿಕವಾಗಿ ‘ನಾಟಿ ಶಾಸ್ತ್ರ’ ಮಾಡಿದರು. ಇನ್ನಷ್ಟು ಹೊತ್ತು ನಾಟಿ ಮಾಡುವ ಉತ್ಸಾಹ ಹೊಂದಿದ್ದರಾದರೂ, ಅಭಿಮಾನಿಗಳು, ಹಿಂಬಾಲಕರ ನೂಕುನುಗ್ಗಲು, ಸೆಲ್ಫಿ ಭರಾಟೆ ಅದಕ್ಕೆ ಆಸ್ಪದ ನೀಡಲಿಲ್ಲ. ನಂತರ ರೈತರನ್ನುದ್ದೇಶಿಸಿ ಆಡಿದ ಮಾತುಗಳಲ್ಲಿನ ಪ್ರಮುಖ ಅಂಶಗಳು ಹೀಗಿದ್ದವು:

  • ಇದು ನನ್ನ ಜೀವನದ ಅಮೃತ ಗಳಿಗೆ. ನನಗೂ ಹೊಲ ಉತ್ತು, ಗೊಬ್ಬರ ಹೊತ್ತು ಗೊತ್ತು. ಈಗ ಸೋಂಬೇರಿಯಾಗಿದ್ದೇನೆ. ಇಪ್ಪತ್ತೈದು ವರ್ಷದ ನಂತರ ಗದ್ದೆಗೆ ಇಳಿದೆ. ಪ್ರತಿದಿನ ರೈತರು ಎಷ್ಟು ಕಷ್ಟಪಡುತ್ತಾರೆ ಎನ್ನುವುದು ಗೊತ್ತಾಯಿತು. ನಾನು ಬದುಕಿರುವವರೆಗೂ ಪ್ರತಿವರ್ಷ ನಿಮ್ಮ ಊರಿಗೆ ಬಂದು ನಾಟಿಯಲ್ಲಿ ಪಾಲ್ಗೊಳ್ಳುತ್ತೇನೆ. ರೈತರಿಗೆ ಒಳಿತಾಗುವಂತಹ ಕೃಷಿ ಪದ್ಧತಿಯನ್ನು ಜಾರಿಗೆ ತರಲು ಬದ್ಧನಾಗಿರುತ್ತೇನೆ.
  • ಗೌರಿ-ಗಣೇಶ ಹಬ್ಬದ ವೇಳೆಗೆ ರೈತರೂ ಸೇರಿ ರಾಜ್ಯದ ಆರೂವರೆ ಕೋಟಿ ಜನರಿಗೆ ಸಂತಸ ನೀಡುವಂಥ ಕಾರ್ಯಕ್ರಮ ನೀಡಲಿದ್ದೇನೆ. ರೈತರ ಮನೆ ಬಾಗಿಲಿಗೆ ಯಾವ ಸಾಲಗಾರರೂ ಬಾರದಂತಹ ಸ್ಥಿತಿಯನ್ನು ನಿರ್ಮಿಸುತ್ತೇನೆ.
  • ೩೭ ಮಂದಿ ಶಾಸಕರಷ್ಟೇ ಇದ್ದರೂ ‘ದೇವರ ದಯೆ’ಯಿಂದ ನಾನು ಮುಖ್ಯಮಂತ್ರಿ ಆಗಿದ್ದೇನೆ. ಮಂಡ್ಯ ಜಿಲ್ಲೆಯ ಎಲ್ಲ ಕ್ಷೇತ್ರಗಳಲ್ಲೂ ಗೆಲ್ಲಿಸಿದ ನಿಮ್ಮ ಋಣವನ್ನು ತೀರಿಸುವ ಕರ್ತವ್ಯ ನನ್ನದು. ಮಂಡ್ಯದ ಸರ್ವಾಂಗೀಣ ಅಭಿವೃದ್ಧಿಗೆ ಕ್ರಮ ಕೈಗೊಳ್ಳುತ್ತೇನೆ. ಈ ಭಾಗದ ಅಗತ್ಯವಾದ ಸೇತುವೆ ನಿರ್ಮಾಣ ಮತ್ತು ಕುಡಿಯುವ ನೀರು ವ್ಯವಸ್ಥೆಗೆ ಕ್ರಮ ಕೈಗೊಳ್ಳುವೆ.
  • ಹಾಗಂತ ನಾನು ಒಂದು ಪ್ರಾಂತ್ಯಕ್ಕೆ ಸೀಮಿತ ಅಲ್ಲ. ಪ್ರತಿ ತಿಂಗಳೂ ಒಂದೊಂದು ಜಿಲ್ಲೆಯಂತೆ ಎಲ್ಲ ೩೦ ಜಿಲ್ಲೆಯ ರೈತರ ಜಮೀನುಗಳಿಗೆ ಹೋಗಿ, ಒಂದು ದಿನ ಇದ್ದು ದಾಳಿಂಬೆ, ದ್ರಾಕ್ಷಿ, ಕಲ್ಲಂಗಡಿ ಸಹಿತ ಎಲ್ಲ ಬೆಳೆಗಾರರ ಸಮಸ್ಯೆ ಆಲಿಸುತ್ತೇನೆ. ಮುಖ್ಯಮಂತ್ರಿಯಾಗಿ ಎರಡು ತಿಂಗಳಷ್ಟೇ ಆಗಿದೆ. ನಾಲ್ಕಾರು ತಿಂಗಳು ಸಮಯ ಕೊಡಿ. ನಿಮ್ಮ ಬದುಕನ್ನು ಹಸನುಗೊಳಿಸುವ ಕೆಲಸ ಮಾಡುತ್ತೇನೆ. ಏನೇ ಕಷ್ಟ ಇದ್ದರೂ ನನ್ನ ಬಳಿ ಬನ್ನಿ, ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ.
ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More