ಟ್ವಿಟರ್ ಸ್ಟೇಟ್ | ದಲಾಯ್ ಲಾಮಾರನ್ನು ‘ಕೃತಘ್ನ’ ಎಂದು ಜರಿದ ಟ್ವೀಟಿಗರು

ಜಿನ್ನಾ ಪ್ರಧಾನಿಯಾಗಿದ್ದರೆ ದೇಶ ವಿಭಜನೆ ಆಗುವುದನ್ನು ತಡೆಯಬಹುದಿತ್ತು ಎನ್ನುವ ದಲಾಯ್ ಲಾಮಾ ಅಭಿಪ್ರಾಯವನ್ನು ಟ್ವೀಟಿಗರು ಟೀಕಿಸಿದ್ದಾರೆ. ಟಿಬೆಟಿಯನ್ನರಿಗೆ ಆಶ್ರಯ ನೀಡುವ ನೆಹರು ನಿರ್ಧಾರದಿಂದ ಚೀನಾ ಜೊತೆಗೆ ಭಾರತ ಶಾಶ್ವತ ಶತ್ರುತ್ವ ಬೆಳೆಸಿಕೊಂಡಿರುವುದನ್ನು ನೆನಪಿಸಿದ್ದಾರೆ

ನೆಹರು ಕುರಿತಂತೆ ಸತ್ಯಕ್ಕೆ ದೂರವಾದ ಹೇಳಿಕೆ ನೀಡಿದ ಟಿಬೆಟಿಯನ್‌ ಧರ್ಮಗುರು ದಲಾಯ್‌ ಲಾಮಾ ಅವರು ಭಾರತದಲ್ಲಿ ಟ್ವೀಟಿಗರಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ. “ಒಂದು ವೇಳೆ, ಪಂಡಿತ್ ಜವಾಹರಲಾಲ್‌ ನೆಹರು ಅವರೇನಾದರೂ ಮಹಾತ್ಮ ಗಾಂದಿಯವರ ಸಲಹೆಯಂತೆ ಜಿನ್ನಾ ಅವರನ್ನು ದೇಶದ ಮೊದಲ ಪ್ರಧಾನಿಯಾಗಲು ಒಪ್ಪಿದ್ದರೆ, ದೇಶ ವಿಭಜನೆಯಾಗುವುದನ್ನು ತಡೆಯಬಹುದಿತ್ತು,” ಎನ್ನುವ ಅವರ ಹೇಳಿಕೆ ಟ್ವಿಟರ್‌ನಲ್ಲಿ ಬಹಳಷ್ಟು ಚರ್ಚೆಯಾಗಿದೆ. ತಮ್ಮ ಹೇಳಿಕೆ ವಿವಾದಕ್ಕೆ ಒಳಗಾದ ನಂತರ ದಲಾಯ್ ಲಾಮಾ “ನನ್ನ ಹೇಳಿಕೆ ವಿವಾದಕ್ಕೆ ಕಾರಣವಾಗಿದೆ. ನಾನು ತಪ್ಪು ಹೇಳಿಕೆ ನೀಡಿದ್ದರೆ ಕ್ಷಮೆ ಯಾಚಿಸುತ್ತೇನೆ,” ಎಂದು ಸಮಾಧಾನಿಸಲು ಪ್ರಯತ್ನಿಸಿದ್ದಾರೆ.

ದಲಾಯ್ ಲಾಮಾ ಅವರ ಹೇಳಿಕೆಯನ್ನು ಸರ್ದಾರ್ ಪಟೇಲ್ ಅವರಿಗೆ ಪ್ರಧಾನಿ ಪಟ್ಟ ತಪ್ಪಿಸಲು ನೆಹರು ಅವರು ಪ್ರಯತ್ನಿಸಿದ್ದರು ಎನ್ನುವ ಸಿದ್ಧವಾಕ್ಯಕ್ಕೆ ತಳಕು ಹಾಕುವವರೇ ಇರುವ ಸಂದರ್ಭದಲ್ಲಿ, ಮಹಾತ್ಮ ಗಾಂಧಿ ಅವರ ಮರಿಮೊಮ್ಮಗ ತುಷಾರ್ ಗಾಂಧಿ ಅಂತಹ ಪ್ರಯತ್ನ ಸರಿಯಲ್ಲ ಎಂದು ಹೇಳಿದ್ದಾರೆ. “ಧರ್ಮಗುರು ದಲಾಯ್ ಲಾಮಾ ತಮಗೆ ಹೆಚ್ಚು ಜ್ಞಾನವಿಲ್ಲದ, ಸಂಬಂಧಿಸದ ವಿಚಾರದಲ್ಲಿ ಟೀಕೆ ಮಾಡುವುದನ್ನು ಬಿಡಬೇಕು. ಪ್ರಧಾನಿ ಪಟ್ಟವನ್ನು ಜಿನ್ನಾರಿಗೆ ಕೊಡಬೇಕು ಎಂದು ಗಾಂಧೀಜಿ ಅವರು ನೀಡಿರಬಹುದಾದ ಸಲಹೆಯನ್ನು ಪಂಡಿತ್ ನೆಹರು ಅವರು ವಿರೋಧಿಸಿದ್ದು ನಿಜವೇ ಆಗಿದ್ದರೆ, ಸರ್ದಾರ್ ಪಟೇಲ್ ಅವರು ಈ ಸಲಹೆಯನ್ನು ಇನ್ನೂ ಕಟುವಾಗಿ ವಿರೋಧಿಸಿರುತ್ತಿದ್ದರು,” ಎಂದು ತುಷಾರ್ ಗಾಂಧಿ ಟ್ವೀಟ್ ಮಾಡಿದ್ದಾರೆ.

ಜವಾಹರಲಾಲ್ ಅವರು ಸ್ವಾರ್ಥಿಯಾಗಿರುವುದು ನಿಜವೇ ಆಗಿದ್ದಲ್ಲಿ ಟಿಬೆಟಿಯನ್ನರಿಗೆ ಭಾರತದಲ್ಲಿ ಆಶ್ರಯ ಕೊಡುವ ತೀರ್ಮಾನವನ್ನು ಅವರು ತೆಗೆದುಕೊಳ್ಳುತ್ತಿರಲಿಲ್ಲ ಎಂದು ಬಹಳಷ್ಟು ಮಂದಿ ಟ್ವೀಟಿಗರು ಅಭಿಪ್ರಾಯಪಟ್ಟಿದ್ದಾರೆ. ತಕ್ಷಶಿಲಾ ಇನ್ಸ್‌ಟಿಟ್ಯೂಟ್ ನಿರ್ದೇಶಕರಾಗಿರುವ ನಿತಿನ್ ಪೈ ಟ್ವೀಟ್ ಮಾಡಿ, “ಮುಖ್ಯವಾಗಿ, ಅವಿಭಜಿತ ಭಾರತದ ಪ್ರಧಾನಿಯಾಗಿ ಜಿನ್ನಾ ಆಯ್ಕೆಯಾಗಿರುತ್ತಿದ್ದಲ್ಲಿ ದಲಾಯ್‌ ಲಾಮಾ ಅವರಿಗೆ ದೇಶದೊಳಗೆ ಆಶ್ರಯ ಸಿಗುತ್ತಿತ್ತೇ ಎನ್ನುವುದನ್ನು ಅವರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಜಿನ್ನಾ ಅವರು ವಾಸ್ತವವಾದಿ. ಅವರು ಟಿಬೆಟಿಯನ್ನರನ್ನು ಅವರ ಪಾಡಿಗೆ ಬಿಟ್ಟು ಚೀನಾ ಜೊತೆಗೆ ರಾಜಿ ಮಾಡಿಕೊಳ್ಳುತ್ತಿದ್ದರು,” ಎಂದು ಹೇಳಿದ್ದಾರೆ. ಲೇಖಕ ಸಲೀಲ್ ತ್ರಿಪಾಠಿ ಟ್ವೀಟ್ ಮಾಡಿ, “ದಲಾಯ್ ಲಾಮಾ ಅವರ ಪ್ರಕಾರ, ನೆಹರು ಬಹಳ ಸ್ವಾರ್ಥಿಯಾಗಿದ್ದ ಕಾರಣ ಟಿಬೆಟಿಯನ್ ನಿರಾಶ್ರಿತರಿಗೆ ಭಾರತದಲ್ಲಿ ಆಶ್ರಯ ಕೊಟ್ಟು ಅವರ ಸ್ವಾತಂತ್ರ್ಯ ಹೋರಾಟಕ್ಕೆ ನೆರವಾದರು. ನೆಹರು ಅವರು ಎಂದೂ ಧಾರ್ಮಿಕವಾಗಿ ಮಾತನಾಡಲಿಲ್ಲ. ದೋಷಗಳಿದ್ದರೂ ಶ್ರೇಷ್ಠ ನಾಯಕ ನೆಹರು. ನಿಮಗೇನಾಗಿದೆ?” ಎಂದು ಪ್ರಶ್ನಿಸಿದ್ದಾರೆ. “ನೆಹರು ಪ್ರಧಾನಿಯಾಗದೆ ಇದ್ದಲ್ಲಿ ಈ ಸನ್ಯಾಸಿ ಧರ್ಮಶಾಲಾದಲ್ಲಿ ನೆಲೆಸಿರುತ್ತಿರಲಿಲ್ಲ,” ಎಂದು ಪತ್ರಕರ್ತ ವಿನೋದ್ ಶರ್ಮಾ ಟ್ವೀಟ್ ಮಾಡಿದ್ದಾರೆ.

ಬಹಳಷ್ಟು ಟ್ವೀಟಿಗರು ಪ್ರಧಾನಿ ನೆಹರು ಜೊತೆಗಿರುವ ದಲಾಯ್ ಲಾಮಾ ಅವರ ಚಿತ್ರಗಳನ್ನು ಹಾಕಿ ಈಗಿನ ಹೇಳಿಕೆಯನ್ನು ಟೀಕಿಸಿದ್ದಾರೆ. “ಈ ಫೋಟೋದಲ್ಲಿ ಇದ್ದ ಸಂದರ್ಭದಲ್ಲಿ ನೆಹರು ಅವರ ಸ್ವಾರ್ಥ ಮತ್ತು ದೇಶ ವಿಭಜನೆಯ ಬಗ್ಗೆ ದಲಾಯ್ ಲಾಮಾ ಅವರು ತಮ್ಮ ಜ್ಞಾನವನ್ನು ನೆಹರು ಅವರಿಗೆ ಮುಖತಃ ನೀಡಬೇಕಾಗಿತ್ತು. ೬೦ ವರ್ಷಗಳ ನಂತರ ಬಲಪಂಥೀಯರನ್ನು ಸಂತೃಪ್ತಿಪಡಿಸಲು ಹೇಳಿಕೆ ನೀಡುವುದಕ್ಕಿಂತ ಮೊದಲೇ ಅವರ ಬಳಿ ಅವಕಾಶವಿತ್ತು,” ಎಂದು ಪತ್ರಕರ್ತ ಮನ್ ಅಮನ್ ಸಿಂಗ್ ಟ್ವೀಟ್ ಮಾಡಿದ್ದಾರೆ. ಪಂಡಿತ್ ನೆಹರು ಎನ್ನುವ ಹೆಸರು ಇರುವ ಟ್ವೀಟಿಗರೊಬ್ಬರು ನೆಹರು ಅವರು ಹೇಳಿದಂತೆ ದಲಾಯ್ ಲಾಮಾ ಅವರಿಗೆ ಪ್ರತಿಕ್ರಿಯಿಸಿದ್ದಾರೆ. “ನೀನು ಹೇಳಿದ್ದು ಸರಿ ಹುಡುಗ. ಬಹಳಷ್ಟು ಮಂದಿ ನಾನು ಟಿಬೆಟಿಯನ್ನರಿಗೆ ಆಶ್ರಯ ಕೊಡುವ ಬದಲಾಗಿ ಚೀನೀಯರ ಜೊತೆಗೆ ಒಂದೇ ಹಾಸಿಗೆಯಲ್ಲಿ ಕುಳಿತುಕೊಳ್ಳಬೇಕು ಎಂದಿದ್ದರು. ಆದರೆ, ಮಾನವೀಯತೆ ರಾಜಕೀಯ ಲಾಭಗಳನ್ನು ಮೀರಿದೆ. ನಾನು ಅದಕ್ಕಾಗಿ ‘ಧಾರ್ಮಿಕ ನಾಯಕ’ ಎಂದು ಕರೆಸಿಕೊಳ್ಳಬೇಕಾಗಿಲ್ಲ,” ಎಂದು ಪಂಡಿತ್ ನೆಹರು ಎನ್ನುವ ಹೆಸರಿನ ಟ್ವೀಟಿಗರು ಹೇಳಿದ್ದಾರೆ. ಪತ್ರಕರ್ತೆ ಸ್ವಾತಿ ಚತುರ್ವೇದಿ ಅವರೂ ದಲಾಯ್ ಲಾಮಾ ಹಾಗೂ ನೆಹರು ಜೊತೆಗಿರುವ ಫೋಟೋಗಳನ್ನು ಟ್ವೀಟ್ ಮಾಡಿ, “ಕಮೆಂಟ್ ಅಗತ್ಯವಿಲ್ಲ, ಫೋಟೋ ಸಾಕು,” ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದರೆ, ದಲಾಯ್ ಲಾಮಾ ಅವರು ಭಾರತದಲ್ಲಿ ಈಗ ಹೆಚ್ಚು ಪ್ರಚಲಿತದಲ್ಲಿರುವ ಬಲಪಂಥೀಯ ಪಡೆ ಮತ್ತು ಬಿಜೆಪಿಗರನ್ನು ಸಂತೋಷಪಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಹಳಷ್ಟು ಮಂದಿ ಟ್ವೀಟಿಗರು ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ, ಭಾರತದಲ್ಲಿ ಆಧಾರ್ ಇಲ್ಲದೆ ಯಾವುದೇ ಕೆಲಸಗಳು ನಡೆಯುವುದಿಲ್ಲ. ಟಿಬೆಟಿಯನ್ ಮತ್ತು ಶ್ರೀಲಂಕಾ ನಿವಾಸಿಗಳಿಗೆ ಆಧಾರ್ ಕಾರ್ಡನ್ನು ಕೊಡಲು ಭಾರತ ತೀರ್ಮಾನಿಸಿದೆ. ಆದರೆ ಅಫ್ಘನ್ನರು, ಬರ್ಮೀಯರು ಮತ್ತು ಕಾಂಗೋಲೀಸ್ ಸಮುದಾಯಗಳು ಭಾರತದಲ್ಲಿ ಆಧಾರ್ ಕಾರ್ಡನ್ನು ಪಡೆಯಲು ಸಾಧ್ಯವಾಗಿಲ್ಲ. ಹೀಗಾಗಿ, ದಲಾಯ್ ಲಾಮಾ ಅವರು ನೆಹರುರನ್ನು ಟೀಕಿಸುವ ಮಾತುಗಳನ್ನು ತಮ್ಮ ಸಮುದಾಯದ ಲಾಭಕ್ಕಾಗಿ ಆಡುತ್ತಿದ್ದಾರೆ ಎಂದೇ ಟೀಕಿಸಿದ್ದಾರೆ. ಪ್ರಧಾನಿ ಮೋದಿ ಮತ್ತು ಬಿಜೆಪಿ ಪರ ಬೆಂಬಲಿಗರು ಜವಹರಲಾಲ್ ನೆಹರು ಅವರ ಕಟು ಟೀಕಾಕಾರರು, ನೆಹರು ಬಗ್ಗೆ ನಿತ್ಯವೂ ಒಂದಲ್ಲ ಒಂದು ಸುಳ್ಳು ಸುದ್ದಿಗಳು ಹರಡುತ್ತಿವೆ. ಇದೀಗ ದಲಾಯ್ ಲಾಮಾ ಅವರೂ ಅಂತಹ ಮತ್ತೊಂದು ಸುಳ್ಳನ್ನು ಹೇಳುವ ಮೂಲಕ ತಮ್ಮ ರಾಜಕೀಯ ಹಿತಾಸಕ್ತಿ ಕಾಪಾಡಿಕೊಳ್ಳುತ್ತಿದ್ದಾರೆ ಎಂಬ ಟೀಕೆ ಟ್ವಿಟರ್‌ನಲ್ಲಿ ವ್ಯಕ್ತವಾಗಿದೆ.

ಲೇಖಕಿ ಶೋಭಾ ಡೇ ಅವರು ಟ್ವೀಟ್ ಮಾಡಿ, “ನೆಹರು ಅವರು ನಿಮಗಿಂತಲೂ ಹೆಚ್ಚು ಬುದ್ಧಿವಂತರು/ಕುಟಿಲಜ್ಞರಿರಬೇಕು. ದೊಡ್ಡಪ್ಪ ಸರಿಯಾದ ಕಡೆಯಲ್ಲೇ ಬ್ಯಾಟ್ ಮಾಡುತ್ತಿದ್ದಾರೆ. ಇಲ್ಲದೆ ಇದ್ದಲ್ಲಿ ಅವರು ಹೊರಹೋಗಬೇಕಾಗುತ್ತದೆ,” ಎಂದು ಅಭಿಪ್ರಾಯಪಟ್ಟಿದ್ದಾರೆ. “ರೋಹಿಂಗ್ಯಾಗಳು ಮತ್ತು ಬಾಂಗ್ಲಾದೇಶಿಯರು ತಮ್ಮ ಉದ್ಯೋಗಗಳನ್ನು ಕಸಿದುಕೊಂಡು ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದಾದಲ್ಲಿ ಟಿಬೆಟಿಯನ್ನರನ್ನು ಮಾತ್ರ ನಿರಾಶ್ರಿತರು ಎಂದು ಸ್ವೀಕರಿಸುವುದೇಕೆ? ಅವರೇಕೆ ವಿಶೇಷ ಮನ್ನಣೆ ಪಡೆದಿದ್ದಾರೆ? ದಲಾಯ್ ಲಾಮಾ ಅವರ ಕಾರಣದಿಂದ ಭಾರತೀಯರು ಚೀನಾ ಜೊತೆ ಸಂಘರ್ಷ ಮಾಡಬೇಕಾಗಿದೆ ಎನ್ನುವುದನ್ನು ಅವರು ಮರೆತರೇ? ಪ್ರಧಾನಿ ಮೋದಿ ಆಧಾರ್ ಕಾರ್ಡ್ ಕೊಡುತ್ತೇನೆ ಎಂದು ಭರವಸೆ ಕೊಟ್ಟ ಕೂಡಲೇ ನೆಹರು ಬಗ್ಗೆ ಕೆಟ್ಟದಾಗಿ ಮಾತನಾಡುವ ದಲಾಯ್ ಲಾಮಾ ಸಹಾಯ ಮರೆಯುವ ವ್ಯಕ್ತಿಗಳಲ್ಲಿ ಮೊದಲ ಸ್ಥಾನ ಪಡೆಯುತ್ತಾರೆ,” ಎಂದು ಸಿನಿಮಾ ನಿರ್ದೇಶಕ ಮಿದಾತ್ ಕಿದ್ವಾಯ್ ಟ್ವೀಟ್ ಮಾಡಿದ್ದಾರೆ.

“ಮಹಾತ್ಮ ಗಾಂಧಿ ಅವರು ಜಿನ್ನಾ ಅವರನ್ನು ಅವಿಭಜಿತ ಭಾರತದ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದರು. ಆದರೆ, ನೆಹರು ವಿರೋಧಿಸಿದರು' ಎನ್ನುವ ದಲಾಯ್ ಲಾಮಾ ಟೀಕೆ ಸರಿ. ಆದರೆ, ಇವರಿಬ್ಬರಲ್ಲಿ ಯಾರು ಉತ್ತಮ ಪ್ರಧಾನಿ?” ಎಂದು ಆನಂದ್ ರಂಗನಾಥನ್ ಟ್ವಿಟರ್‌ನಲ್ಲಿ ಪ್ರಶ್ನೆ ಮಾಡಿ ಜನಾಭಿಪ್ರಾಯ ಸಂಗ್ರಹಿಸಿದ್ದಾರೆ. ಜಿನ್ನಾ ಅವರನ್ನು ಪ್ರಧಾನಿ ಮಾಡಿದ್ದಲ್ಲಿ ನಿಜವಾಗಿಯೂ ಭಾರತ ವಿಭಜನೆ ಆಗುತ್ತಿರಲಿಲ್ಲವೇ ಎನ್ನುವ ಬಗ್ಗೆಯೂ ಹಲವು ಟ್ವೀಟಿಗರು ಚರ್ಚಿಸಿದ್ದಾರೆ. ಅಂಕಣಕಾರ ಸದಾನಂದ ಧುಮೆ ಟ್ವೀಟ್ ಮಾಡಿ ಇಂತಹುದೇ ಅಭಿಪ್ರಾಯವನ್ನು ಮುಂದಿಟ್ಟಿದ್ದಾರೆ. ಆದರೆ, ಕಾಂಗ್ರೆಸ್ ಟ್ವೀಟಿಗರು ದಲಾಯ್ ಲಾಮಾ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಮುಖಂಡರಾದ ಮನೀಷ್ ತಿವಾರಿ, ಬ್ರಿಜೇಶ್ ಕಾಳಪ್ಪ ಮತ್ತು ಇನ್ನೂ ಅನೇಕರು ಟ್ವಿಟರ್‌ನಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಕೆಲವರು, ಪಾಕಿಸ್ತಾನ ಮತ್ತು ಜಿನ್ನಾರನ್ನು ಸದಾ ಹಣಿಯುತ್ತಿದ್ದ ಹಿಂದುತ್ವ ಬ್ರಿಗೇಡ್ ದಲಾಯ್ ಲಾಮಾ ಅವರ ನೆಹರು ಕುರಿತ ಹೇಳಿಕೆಯನ್ನು ಮುಂದಿಟ್ಟು ಜಿನ್ನಾರನ್ನು ಹೊಗಳುತ್ತಿರುವ ಬಗ್ಗೆ ವ್ಯಂಗ್ಯವಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More