ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು  

ಗದ್ದೆಯಲ್ಲಿ ಭತ್ತದ ನಾಟಿ‌ ಮಾಡಲಿದ್ದಾರೆ ಸಿಎಂ ಕುಮಾರಸ್ವಾಮಿ

ವಿಶಿಷ್ಟ ಪ್ರಯತ್ನಕ್ಕೆ ಕೈಹಾಕುತ್ತಿರುವ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶನಿವಾರ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಅರಳುಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸೀತಾಪುರ ಗ್ರಾಮದ ಹೊರವಲಯದಲ್ಲಿರುವ ಮಹದೇವಮ್ಮ ಅವರ ಗದ್ದೆಯಲ್ಲಿ ಭತ್ತದ ನಾಟಿ ಮಾಡಲಿದ್ದಾರೆ. ಮಹದೇವಮ್ಮ ಅವರ 5 ಎಕರೆ ಗದ್ದೆ‌ಯಲ್ಲಿ ನಾಟಿಕಾರ್ಯ ಮುಗಿಯುವವರೆಗೂ ಅಲ್ಲಿಯೇ ಇರಲಿರುವ ಸಿಎಂ, ಮಧ್ಯಾಹ್ನ ರೈತರೊಂದಿಗೆ ಭೋಜನ ಸವಿಯಲಿದ್ದಾರೆ.

ಇಂದು ಭಾಗಶಃ ಸೂರ್ಯಗ್ರಹಣ

ಈ ವರ್ಷದ ಮೂರನೇ ಸೂರ್ಯ ಗ್ರಹಣ  ಇಂದು ಸಂಭವಿಸಲಿದ್ದು, ಸೂರ್ಯ ಭಾಗಶಃ ಗ್ರಹಣಕ್ಕೊಳಗಾಗುತ್ತಾನೆ ಎಂದು ಖಗೋಳ ವಿಜ್ಞಾನಿಗಳು ತಿಳಿಸಿದ್ದಾರೆ. ಮೂರೂವರೆ ಗಂಟೆಗಳ  ಈ ಗ್ರಹಣ ಮಧ್ಯಾಹ್ನ 1:32ಕ್ಕೆ ಆರಂಭವಾಗಿ ಸಂಜೆ 5:02ಕ್ಕೆ ಮುಕ್ತಾಯವಾಗಲಿದೆ. ಇದು ಈ ವರ್ಷದ ಕೊನೆಯ ಸೂರ್ಯಗ್ರಹಣವೂ ಹೌದು. ನಾರ್ವೆ, ಸ್ವೀಡನ್, ಫಿನ್ ಲ್ಯಾಂಡ್ , ಗ್ರೀನ್ ಲ್ಯಾಂಡ್ , ಸ್ಕಾಟ್ಲೆಂಡ್, ಐಸ್ ಲ್ಯಾಂಡ್,  ಈಸ್ಟೋನಿಯಾ, ಲಾಟ್ವಿಯಾ, ರಷ್ಯಾ, ಕಜಕಿಸ್ತಾನ್, ಕಿರ್ಗಿಸ್ತಾನ್, ಮಂಗೋಲಿಯಾ, ಚೀನಾ, ಉತ್ತರ ಕೊರಿಯಾ, ದಕ್ಷಿಣ ಕೊರಿಯಾ, ಪೂರ್ವ ಸೈಬೀರಿಯಾಗಳಲ್ಲಿ ಗ್ರಹಣ ಗೋಚರವಾಗಲಿದೆ.

ಲಾರ್ಡ್ಸ್ ಮೈದಾನದಲ್ಲಿ ಮೂರನೇ ದಿನದ ಕುತೂಹಲ

ಪ್ರವಾಸಿ ಭಾರತ ತಂಡ ಮತ್ತು ಆತಿಥೇಯ ಇಂಗ್ಲೆಂಡ್ ನಡುವಣದ ಎರಡನೇ ಟೆಸ್ಟ್ ಪಂದ್ಯ ಮೂರನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ದಿನದಾಟ ಸಂಪೂರ್ಣ ಮಳೆಯಿಂದಾಗಿ ರದ್ದಾದರೆ, ಎರಡನೇ ದಿನದಾಟವೂ ಬಹುಪಾಲು ವರುಣ ಅಬ್ಬರಿಸಿದ. ವರುಣನ ಕಣ್ಣಾಮುಚ್ಚಾಲೆ ಆಟದ ಮಧ್ಯೆಯೂ ಸಾಗಿದ ಎರಡನೇ ದಿನದಾಟದಲ್ಲಿ ಇಂಗ್ಲೆಂಡ್ ಪ್ರಭುತ್ವ ಮೆರೆದಿದೆ. ಕೊಹ್ಲಿ ಪಡೆಯ ಮೊದಲ ಇನ್ನಿಂಗ್ಸ್ ಅನ್ನು ಕೇವಲ ೧೦೭ ರನ್‌ಗಳಿಗೆ ಕಟ್ಟಿಹಾಕಿದ ಜೇಮ್ಸ್ ಆಂಡರ್ಸನ್ (೨೦ಕ್ಕೆ ೫) ವೃತ್ತಿಬದುಕಿನಲ್ಲಿ ಮತ್ತೊಂದು ಐದು ವಿಕೆಟ್‌ ಸಾಧನೆ ಮೆರೆದರು. ಸದ್ಯ ಆತಿಥೇಯರ ಇನ್ನಿಂಗ್ಸ್ ಅನ್ನು ಭಾರತದ ಬೌಲರ್‌ಗಳು ಹೇಗೆ ಎಷ್ಟು ರನ್‌ಗಳಿಗೆ ಕಟ್ಟಿಹಾಕುತ್ತಾರೆ ಎಂಬ ಕೌತುಕ ಕೆರಳಿದೆ.

ಮಿಥುನ್, ಅಜಯ್ ಜಯರಾಮ್‌ಗೆ ಪ್ರಶಸ್ತಿ ಸುತ್ತಿನ ಗುರಿ

ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಅಜಯ್ ಜಯರಾಮ್ ಹಾಗೂ ಮಿಥುನ್ ಮಂಜುನಾಥ್ ಸೆಮಿಫೈನಲ್ ತಲುಪಿದ್ದು, ಇಂದು ನಡೆಯಲಿರುವ ನಾಲ್ಕರ ಘಟ್ಟದ ಪಂದ್ಯಗಳಲ್ಲಿ ಗೆಲುವಿನ ಗುರಿ ಹೊತ್ತಿದ್ದಾರೆ.೭೫,೦೦೦ ಅಮೆರಿಕನ್ ಡಾಲರ್ ಬಹುಮಾನ ಮೊತ್ತದ ಪಂದ್ಯಾವಳಿಯಲ್ಲಿ ವಿಶ್ವದ ಹದಿಮೂರನೇ ಶ್ರೇಯಾಂಕಿತ ಆಟಗಾರ ಜಯರಾಮ್, ನಿನ್ನೆ ನಡೆದ ಕ್ವಾರ್ಟರ್‌ಫೈನಲ್‌ನಲ್ಲಿ ಕೆನಡಾದ ಶೆಂಗ್ ಕ್ಸಿಯಾವೊಡಾಂಗ್ ವಿರುದ್ಧ ೨೬-೨೪, ೨೧-೧೭ರ ಎರಡು ಗೇಮ್‌ಗಳ ರೋಚಕ ಗೆಲುವು ಸಾಧಿಸಿದರು. ಅಂತೆಯೇ ಮಿಥುನ್, ಚೀನಾದ ಝೌ ಜೆಕಿ ವಿರುದ್ಧ ೧೭-೨೧, ೨೧-೧೯, ೨೧-೧೧ರಲ್ಲಿ ಜಯಿಸಿದರು. ಇಂದು ಶೆಸಾರ್ ಹಿರೆನ್ ರುಸ್ಟಾವಿಟೊ ವಿರುದ್ಧ ಮಿಥುನ್ ಕಾದಾಡಲಿದ್ದರೆ, ಅಜಯ್ ಜಯರಾಮ್, ಜಪಾನ್ ಆಟಗಾರ ಯು ಇಗಾರಶಿ ವಿರುದ್ಧ ಸೆಣಸಲಿದ್ದಾರೆ.

ಟ್ವಿಟರ್ ಸ್ಟೇಟ್ | ಎಫ್‌ಐಆರ್‌ವರೆಗೂ ಮುಂದುವರಿದ ಸಿಬಿಐ ಒಳಜಗಳ
ಸಿಬಿಐ ವಿಶೇಷ ನಿರ್ದೇಶಕ ರಾಕೇಶ್ ವಿರುದ್ಧ ಎಫ್‌ಐಆರ್‌ನಲ್ಲಿರುವ ಆರೋಪಗಳೇನು?
ವಾರ್ಷಿಕ ₹1 ಕೋಟಿಗಿಂತ ಹೆಚ್ಚು ಸಂಪಾದಿಸುವವರ ಸಂಖ್ಯೆ 1.40 ಲಕ್ಷಕ್ಕೆ ಏರಿಕೆ
Editor’s Pick More