ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲೇ ದಲಿತರ ಮೇಲೆ ದೌರ್ಜನ್ಯ ಹೆಚ್ಚು!

ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೇ ಪರಿಶಿಷ್ಟ ಜಾತಿಗಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಅದರೆ, ರಾಜಕೀಯ ಪಕ್ಷಗಳು ಪರಸ್ಪರ ದೋಷಾರೋಪಣೆಯಲ್ಲಿ ಕಾಲ ಕಳೆಯುತ್ತಿವೆ. ಈ ಕುರಿತು ‘ಇಂಡಿಯಾ ಟುಡೆ’ಗೆ ಕೌಶಿಕ್ ದೇಖಾ ಅವರು ಬರೆದ ಲೇಖನದ ಭಾವಾನುವಾದ ಇಲ್ಲಿದೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮತ್ತು ಬಿಜೆಪಿ ಅಧ್ಯಕ್ಷ ಅಮಿತ್ ಶಾ ನಡುವೆ ವಾಕ್ಸಮರ ಮುಂದುವರಿದಿದೆ. ದಲಿತ ಸಮುದಾಯದ ಏಳಿಗೆಗಾಗಿ ಏನೂ ಮಾಡಿಲ್ಲ ಎಂದು ಇಬ್ಬರೂ ಪರಸ್ಪರ ಆರೋಪ ಮಾಡುತ್ತಿದ್ದಾರೆ. ಶಾ ಅವರು ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಪಕ್ಷದ ವಿರುದ್ಧ ಆರೋಪ ಮಾಡುವ ಮೊದಲು ಸತ್ಯಾಸತ್ಯತೆಗಳ ಅರಿಯಲು ಅಂಕಿ-ಸಂಖ್ಯೆಗಳನ್ನು ನೋಡಲಿ ಎಂದು ಸವಾಲು ಹಾಕಿದ್ದಾರೆ.

ಆದರೆ, ಇತ್ತೀಚಿಗೆ ಪ್ರಕಟಗೊಂಡ ಅಪರಾಧ ಅಂಕಿ-ಸಂಖ್ಯೆಗಳನ್ನು ಅವಲೋಕಿಸಿದರೆ ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳಲ್ಲಿ ಅನುಸೂಚಿತ ಜಾತಿಗಳ ಮೇಲಿನ ದೌಜ್ಯನ್ಯ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿರುವುದು ಕಂಡುಬರುತ್ತದೆ. ರಾಷ್ಟ್ರೀಯ ಅಪರಾಧ ದಾಖಲಾತಿ ಸಂಸ್ಥೆ (ಎನ್‌ಸಿಆರ್‌ಬಿ) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಪ್ರಕಾರ, ೨೦೧೬ರಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಅತಿ ಹೆಚ್ಚು ದಾಖಲಾಗಿರುವ ಐದು ರಾಜ್ಯಗಳೆಂದರೆ ಉತ್ತರ ಪ್ರದೇಶ, ಬಿಹಾರ, ರಾಜಸ್ಥಾನ, ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶ.

೨೦೧೬ರಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರಲಿಲ್ಲ ಹಾಗೂ ಆಂಧ್ರಪ್ರದೇಶದ ಮೈತ್ರಿಕೂಟ ಸರ್ಕಾರದಲ್ಲೂ ಅದು ಪಾಲುದಾರನಾಗಿ ಉಳಿದಿರಲಿಲ್ಲ; ಆದರೂ, ಇಡೀ ದೇಶದಲ್ಲಿ ದಾಖಲಾದ ದಲಿತರ ಮೇಲಿನ ಅಪರಾಧ ಪ್ರಕರಣಗಳ ಪೈಕಿ ಶೇಕಡ ೩೮ರಷ್ಟು ಪ್ರಕರಣಗಳು ದಾಖಲಾಗಿದ್ದು ಬಿಜೆಪಿ ಅಧಿಕಾರದಲ್ಲಿದ್ದ ಇತರ ಮೂರು ರಾಜ್ಯಗಳಲ್ಲೇ; ಬಿಹಾರ (ಶೇಕಡ ೧೪), ರಾಜಸ್ಥಾನ (ಶೇಕಡ ೧೨.೧) ಹಾಗೂ ಮಧ್ಯಪ್ರದೇಶ (ಶೇಕಡ ೧೨.೩). ದೇಶದ ಒಟ್ಟು ದಲಿತ ಜನಸಂಖ್ಯೆಯಲ್ಲಿ ಶೇಕಡ ೨೦ರಷ್ಟು ದಲಿತರು ಇರುವುದು ಈ ಮೂರು ರಾಜ್ಯಗಳಲ್ಲೇ.

ಕೇಸರಿ ಪಕ್ಷಕ್ಕೆ ಒಂದು ಸಿಹಿ ಸುದ್ದಿ ಎಂದರೆ, ಅದು ಆಡಳಿತದಲ್ಲಿರುವ ಬಿಹಾರ ಮತ್ತು ರಾಜಸ್ಥಾನ ರಾಜ್ಯಗಳಲ್ಲಿ ೨೦೧೪ರಿಂದೀಚೆಗೆ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಗಣನೀಯ ಪ್ರಮಾಣದಲ್ಲಿ ಕಡಿಮೆ ಆಗಿರುವುದು. ಬಿಹಾರದಲ್ಲಿ ಶೇಕಡ ೨೮ರಷ್ಟು ಹಾಗೂ ರಾಜಸ್ಥಾನದಲ್ಲಿ ಶೇಕಡ ೨೪ರಷ್ಟು ಪ್ರಕರಣಗಳು ದಾಖಲಾಗಿವೆ. ಆದರೆ, ಚುನಾವಣೆಯನ್ನು ಎದುರಿಸುವುದಕ್ಕೆ ಸಿದ್ಧವಾಗುತ್ತಿರುವ ಮಧ್ಯಪ್ರದೇಶದಲ್ಲಿ ಅನುಸೂಚಿತ ಜಾತಿಗಳ ಮೇಲಿನ ದೌರ್ಜನ್ಯ ಪ್ರಕರಣಗಳು ಶೇಕಡ ೪೯ರಷ್ಟು ಏರಿಕೆ ಕಂಡಿರುವುದು ಡಿಸೆಂಬರ್ ತಿಂಗಳಿನಲ್ಲಿ ನಾಲ್ಕನೆಯ ಬಾರಿಗೆ ಮುಖ್ಯಮಂತ್ರಿಯಾಗಲು ಹೊರಟಿರುವ ಶಿವರಾಜ್ ಸಿಂಗ್ ಚೌಹಾಣ್ ಪಾಲಿಗೆ ಗಂಭೀರ ಎಚ್ಚರಿಕೆಯಾಗಿದೆ.

೨೦೧೬ರಲ್ಲಿ ಕಾಂಗ್ರೆಸ್ ಆಡಳಿತದಲ್ಲಿದ್ದ ರಾಜ್ಯಗಳ ವಿಷಯಕ್ಕೆ ಬರುವುದಾದರೆ, ದೇಶದ ಒಟ್ಟು ಅನುಸೂಚಿತ ಜಾತಿ ಜನಸಂಖ್ಯೆಯಲ್ಲಿ ಶೇಕಡ ೫.೨ರಷ್ಟನ್ನು ಹೊಂದಿರುವ ಕರ್ನಾಟಕದಲ್ಲಿ ಅನುಸೂಚಿತ ಜಾತಿಗಳ ಮೇಲೆ ದೇಶಾದ್ಯಂತ ನಡೆದ ಒಟ್ಟು ದೌರ್ಜನ್ಯ ಪ್ರಕರಣಗಳ ಪೈಕಿ ಶೇಕಡ ೪.೨ರಷ್ಟು ಪ್ರಕರಣಗಳು ದಾಖಲಾಗಿದ್ದವು. ಇಪ್ಪತ್ತು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ದೇಶದ ಮಹಾನಗರಗಳಲ್ಲಿ ರಾಜ್ಯದ ರಾಜಧಾನಿ ಬೆಂಗಳೂರು ಅನುಸೂಚಿತ ಜಾತಿಗಳ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚು ಪ್ರಮಾಣದಲ್ಲಿ ದಾಖಲಾಗಿರುವ ಮಹಾನಗರಗಳಲ್ಲಿ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದಿರುವ ನಗರಗಳೆಂದರೆ ಲಖನೌ, ಪಾಟ್ನಾ ಮತ್ತು ಜೈಪುರ. ದೇಶದ ಒಟ್ಟು ೧೯ ಮಹಾನಗರಗಳಲ್ಲಿ ದಾಖಲಾದ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳ ಪೈಕಿ ಶೇಕಡ ೪೫ರಷ್ಟು ಪ್ರಕರಣಗಳು ದಾಖಲಾಗಿದ್ದು ಈ ಮೂರು ನಗರಗಳಲ್ಲೇ.

ಇದನ್ನೂ ಓದಿ : ದಲಿತ ಸಮುದಾಯ ಆಕ್ರೋಶ ಹೊರಹಾಕಿದ 2014ರಿಂದೀಚಿನ ಪ್ರಮುಖ ಘಟನೆಗಳು

ಭಾರತದ ಒಟ್ಟು ಜನಸಂಖ್ಯೆಯಲ್ಲಿ ಅನುಸೂಚಿತ ಜಾತಿಗಳ ಪ್ರಮಾಣ ಶೇಕಡ ೧೬.೬ರಷ್ಟಿದ್ದು (೨೦.೧ ಕೋಟಿ) ೨೦೦೬ ಮತ್ತು ೨೦೧೬ರ ನಡುವಿನ ಹತ್ತು ವರ್ಷಗಳಲ್ಲಿ ಅವುಗಳ ಮೇಲಿನ ಅಪರಾಧ ಪ್ರಕರಣಗಳ ದಾಖಲಾತಿಯಲ್ಲಿ ಶೇಕಡ ೨೫ರಷ್ಟು ಏರಿಕೆಯಾಗಿದೆ.

೧೯೮೯ರ ಅನುಸೂಚಿತ ಜಾತಿಗಳು ಮತ್ತು ಬುಡಕಟ್ಟುಗಳ (ದೌರ್ಜನ್ಯ ತಡೆ) ಕಾಯ್ದೆ ದುರ್ಬಳಕೆ ಆಗುತ್ತಿರುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ ಸುಪ್ರೀಂ ಕೋರ್ಟು, ೨೦೧೮ರ ಮಾರ್ಚ್ ೨೦ರಂದು ಆದೇಶವೊಂದನ್ನು ನೀಡಿ ಈ ಕಾಯ್ದೆಯಡಿಯಲ್ಲಿ ದಾಖಲಾದ ಅಪರಾಧಗಳಿಗಾಗಿ ನಾಗರಿಕನನ್ನಾಗಲೀ ಅಥವಾ ಸರ್ಕಾರಿ ನೌಕರನನ್ನಾಗಲೀ ಪೂರ್ವಾನುಮತಿಯಿಲ್ಲದೆ ತಕ್ಷಣವೇ ಬಂಧಿಸುವಂತಿಲ್ಲ ಎಂದು ಹೇಳಿತು. ಒಂದು ವೇಳೆ, ದಾಖಲಾದ ದೂರು ದುರುದ್ದೇಶದಿಂದ ಕೂಡಿದೆ ಎಂಬುದು ಕಂಡುಬಂದರೆ ಅಂತಹ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ಪಡೆಯುವುದಕ್ಕೂ ಸುಪ್ರೀಂ ಕೋರ್ಟು ಅವಕಾಶ ಕಲ್ಪಿಸಿದೆ. ಸುಪ್ರೀಂ ಕೋರ್ಟಿನ ಈ ತೀರ್ಪನ್ನು ವಿರೋಧಿಸಿ ದೇಶಾದ್ಯಂತ ದಲಿತ ಸಂಘಟನೆಗಳು ಉಗ್ರವಾಗಿ ಪ್ರತಿಭಟನೆ ನಡೆಸಿದವು.

೨೦೧೬ರ ಎನ್‌ಸಿಆರ್‌ಬಿ ವರದಿಯ ಪ್ರಕಾರ, ಎಸ್‌ಸಿ/ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ೫೩೭೪ ಆಧಾರರಹಿತ ಸುಳ್ಳು ಪ್ರಕರಣಗಳೆಂದು ತನಿಖಾ ಹಂತದಲ್ಲಿ ಪೊಲೀಸರಿಗೆ ಮನದಟ್ಟಾಗಿದ್ದು, ಅಂತಹ ಸುಳ್ಳು ಪ್ರಕರಣಗಳಲ್ಲಿ ಶೇಕಡ ೪೯ರಷ್ಟು ಪ್ರಕರಣಗಳು ರಾಜಸ್ಥಾನವೊಂದರಲ್ಲೇ ದಾಖಲಾಗಿವೆ. ಎಲ್ಲದಕ್ಕಿಂತ ಗಂಭೀರವಾದ ಅಂಶ ಎಂದರೆ, ಈ ಕಾಯ್ದೆಯಡಿಯಲ್ಲಿ ದಾಖಲಾದ ಪ್ರಕರಣಗಳಲ್ಲಿ ಅಪರಾಧ ಸಾಬೀತಾಗಿ ಅಪರಾಧಿಗಳಿಗೆ ಶಿಕ್ಷೆಯಾಗುವ ಪ್ರಮಾಣ ಅತ್ಯಂತ ಕಡಿಮೆಯಾಗಿರುವುದು. ೨೦೧೪ ಮತ್ತು ೨೦೧೬ರ ನಡುವಿನ ಅವಧಿಯಲ್ಲಿ ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾದ ಒಟ್ಟು ಪ್ರಕರಣಗಳ ಪೈಕಿ ಅಪರಾಧವು ಸಾಬೀತಾಗಿ ಶಿಕ್ಷೆ ಪ್ರಕಟವಾಗಿದ್ದು ಕೇವಲ ಶೇಕಡ ೧೬.೩ರಷ್ಟು ಪ್ರಕರಣಗಳಲ್ಲಿ ಮಾತ್ರ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More