ಎಬಿಪಿಗೆ ಪತಂಜಲಿ ಜಾಹಿರಾತು ನಿಲ್ಲಿಸಿದ್ದು ಬಾಜಪೈ ರಾಜಿನಾಮೆಗೆ ಕಾರಣವಾಯಿತೇ?

‘ಎಬಿಪಿ ನ್ಯೂಸ್’ ಆಡಳಿತ ಮಂಡಳಿಯು ಮೋದಿ ನೇತೃತ್ವದ ಸರ್ಕಾರವನ್ನು ಓಲೈಸಲು ಮುಂದಿಟ್ಟ ಹೆಜ್ಜೆಯಲ್ಲಿ ಇಬ್ಬರು ಪತ್ರಕರ್ತರು ರಾಜಿನಾಮೆ ನೀಡಿ ಹೊರನಡೆದಿದ್ದಾರೆ. ಇದಕ್ಕೂ ಪತಂಜಲಿ ಕಂಪನಿಯ ಜಾಹಿರಾತು ಒಪ್ಪಂದಕ್ಕೂ ಏನು ಸಂಬಂಧ? ಈ ಕುರಿತು ‘ದಿ ವೈರ್’ ವರದಿಯ ಭಾವಾನುವಾದ ಇಲ್ಲಿದೆ

‘ಎಬಿಪಿ ನ್ಯೂಸ್’ ಸುದ್ದಿವಾಹಿನಿಯ ಆಡಳಿತ ಮಂಡಳಿಯು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರವನ್ನು ಓಲೈಸಲು ಮುಂದಿಟ್ಟ ಹೆಜ್ಜೆಯಲ್ಲಿ ಇಬ್ಬರು ಹಿರಿಯ ಪತ್ರಕರ್ತರು ಈ ತಿಂಗಳ ಆರಂಭದಲ್ಲೇ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರನಡೆದಿದ್ದಾರೆ. ಆದರೆ, ಎಬಿಪಿ ಸುದ್ದಿವಾಹಿನಿಗೆ ಜಾಹಿರಾತು ನೀಡುವುದನ್ನು ಹಠಾತ್ತಾಗಿ ನಿಲ್ಲಿಸಿದ್ದ ಯೋಗ ಗುರು ಹಾಗೂ ವಾಣಿಜ್ಯೋದ್ಯಮಿ ಬಾಬಾ ರಾಮ್‌ ದೇವ್ ಅವರ ಪತಂಜಲಿ ಕಂಪನಿಯು ಈಗ ಜಾಹಿರಾತು ವಿಚಾರದಲ್ಲಿ ಸಂಸ್ಥೆಯೊಂದಿಗೆ ಮಾಡಿಕೊಂಡ ಒಪ್ಪಂದವನ್ನೇ ಹಿಂತಗೆದುಕೊಂಡಿದೆ.

ಬಾಬಾ ರಾಮ್ ದೇವ್ ಅವರ ಪತಂಜಲಿ ಕಂಪನಿಯ ಜಾಹಿರಾತುಗಳಿಂದ ಎಬಿಪಿ ಸುದ್ದಿವಾಹಿನಿಗೆ ಆರ್ಥಿಕ ಬಲ ಬಂದಿತ್ತು ಎನ್ನಲಾಗಿದೆ. ಆದರೆ, ಈ ಚಾನಲ್‌ನಲ್ಲಿ ಹಿರಿಯ ಪತ್ರಕರ್ತ ಪುಣ್ಯ ಪ್ರಸೂನ್ ಬಾಜಪೈ ಅವರು ನಿರೂಪಿಸುತ್ತಿದ್ದ ‘ಮಾಸ್ಟರ್ ಸ್ಟ್ರೋಕ್’ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರ ಜಾರಿಗೊಳಿಸಿದ ಯೋಜನೆಗಳ ಕುರಿತು ಸತ್ಯಾಸತ್ಯತೆ ಬಯಲಾಗುತ್ತಿದ್ದಂತೆ ಸಹಜವಾಗಿಯೇ ಪ್ರಧಾನಿ ಮೋದಿ ಸರ್ಕಾರಕ್ಕೆ ಈ ಕಾರ್ಯಕ್ರಮ ಮುಜುಗರ ಉಂಟುಮಾಡಿತ್ತು. ಹೀಗಾಗಿ, ಜುಲೈ ೧೫ರಿಂದ ಪತಂಜಲಿ ಕಂಪನಿ ಎಬಿಪಿಗೆ ಜಾಹಿರಾತು ನೀಡುವುದನ್ನೇ ನಿಲ್ಲಿಸಿತು ಎಂದು ಜಾಹಿರಾತು ಒಪ್ಪಂದದಲ್ಲಿ ಭಾಗಿಯಾದ ವ್ಯಕ್ತಿಯೊಬ್ಬರು ‘ದಿ ವೈರ್‌’ಗೆ ತಿಳಿಸಿದ್ದಾರೆ.

ಪತಂಜಲಿ ಜಾಹಿರಾತು ನಿಂತ ಮೇಲೆ ಎಬಿಪಿ ಮಾಲೀಕರು ಹಾಗೂ ಸಂಪಾದಕರ ನಡುವೆ ಭಿನ್ನಾಭಿಪ್ರಾಯಗಳು ಆರಂಭವಾಗಿ ಕೊನೆಗೆ ‘ಮಾಸ್ಟರ್ ಸ್ಟ್ರೋಕ್’ ಕಾರ್ಯಕ್ರಮದ ನಿರೂಪಕ ಪುಣ್ಯ ಪ್ರಸೂನ್ ಬಾಜಪೈ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಹೊರನಡೆದರು. ಈ ವಿಷಯವನ್ನು ಬಾಜಪೈ ಅವರೇ ‘ದಿ ವೈರ್’ ವೆಬ್‌ಸೈಟ್‌ಗೆ ಬರೆದ ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ. ಈ ವಿಚಾರವಾಗಿ ‘ದಿ ವೈರ್’, ಪತಂಜಲಿ ವಕ್ತಾರ ಎಸ್ ಕೆ ತಿಜರಾವಾಲಾ ಅವರನ್ನು ಸಂಪರ್ಕಿಸಿದಾಗ, “ಎಬಿಪಿ ಸುದ್ದಿವಾಹಿನಿಗೆ ನೀಡುತ್ತಿದ್ದ ಜಾಹಿರಾತುಗಳನ್ನು ಹಿಂಪಡೆದಿದ್ದು ನಿಜ. ಆದರೆ, ಆ ವಾಹಿನಿ ಮೋದಿ ಕುರಿತು ಪ್ರಸಾರ ಮಾಡಿದ ಸುದ್ದಿಗೂ ನಾವು ಜಾಹಿರಾತು ಹಿಂಪಡೆದಿರುವುದಕ್ಕೂ ಯಾವುದೇ ಸಂಬಂಧವಿಲ್ಲ. ಏಕೆಂದರೆ, ಎಬಿಪಿ ಜೊತೆ ನಾವು ಮಾಡಿಕೊಂಡ ಒಪ್ಪಂದ ೨೦೧೮ರ ಜೂ.೩೦ಕ್ಕೆ ಮುಗಿದಿದೆ. ಆದರೆ, ಸಂಸ್ಥೆಯೇ ಜುಲೈ ೧೫ರವರೆಗೂ ನಮ್ಮ ಜಾಹಿರಾತು ಪ್ರಸಾರ ಮಾಡಿದೆ. ಇದು ನಮ್ಮ ಗಮನಕ್ಕೆ ಬಂದ ಮೇಲೆ ನಾವು ನಮ್ಮ ಜಾಹಿರಾತು ವೇಳಾಪಟ್ಟಿಯನ್ನು ಹಿಂತೆಗೆದುಕೊಂಡಿದ್ದೇವೆ,” ಎಂದು ವಿವರಿಸಿದ್ದಾರೆ.

ಎಬಿಪಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜಾಹಿರಾತುಗಳ ಮೌಲ್ಯ ಕುರಿತು ತಿಜರಾವಾಲಾ ಮಾತನಾಡಲು ನಿರಾಕರಿಸಿದ್ದಾರೆ. ಆದರೆ, ಎಬಿಪಿ ಅಧಿಕಾರಿಯೊಬ್ಬರು ಈ ಕುರಿತು ಪ್ರತಿಕ್ರಿಯಿಸಿದ್ದು, “ಸುಮಾರು 50-60 ಕೋಟಿ ರು. ಮೊತ್ತದ ಜಾಹಿರಾತು ಒಪ್ಪಂದ ಅದಾಗಿತ್ತು. ಬಾಜಪೈ ಹಾಗೂ ಮಿಲಿಂದ್ ಖಂಡೇಕರ್ ಅವರು ರಾಜಿನಾಮೆ ನೀಡಿದ ನಂತರ ಜಾಹಿರಾತು ಪುನರಾಂಭಿಸಲು ಪತಂಜಲಿ ಕಂಪನಿ ಒಪ್ಪಿಗೆ ಸೂಚಿಸಿತ್ತು,” ಎಂದಿದ್ದಾರೆ.

“ಬರುವ ದಿನಗಳಲ್ಲಿ ನಾವು ಜಾಹಿರಾತು ವೇಳಾಪಟ್ಟಿ ಕುರಿತು ಮಾಧ್ಯಮಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬೇಕಾಗಿದೆ. ಯಾವ ಮಾಧ್ಯಮಗಳನ್ನು ಆಯ್ಕೆ ಮಾಡಿಕೊಳ್ಳಬೇಕು, ಯಾವ ಬ್ರ್ಯಾಂಡ್‌ಗಳನ್ನು ಜಾಹಿರಾತಿಗೆ ನೀಡಬೇಕು ಎಂಬುದಾಗಿ ನಾವಿನ್ನೂ ಯೋಜನೆ ತಯಾರಿಸುತ್ತಿದ್ದೇವೆ. ಮಾಧ್ಯಮಗಳ ಒಳಗಿನ ವಿಚಾರದಲ್ಲಿ ನಾವು ಯಾವುದೇ ರೀತಿಯಲ್ಲಿ ಕೈಹಾಕುವುದಿಲ್ಲ. ಅಲ್ಲದೆ, ಸದಾ ನಾವು ಸಂಪಾದಕೀಯ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ನಮ್ಮ ಜಾಹಿರಾತು ನಿಂತಿದ್ದರಿಂದ ಅವರು (ಬಾಜಪೈ ಮತ್ತು ಖಂಡೇಕರ್) ರಾಜಿನಾಮೆ ನೀಡಿದ್ದಾರೆ ಎಂಬ ಆರೋಪ ಅಸಂಬದ್ಧವಾಗಿದೆ,” ಎನ್ನುತ್ತಾರೆ ತಿಜರಾವಾಲಾ.

ಇದನ್ನೂ ಓದಿ : ‘ಎಬಿಪಿ ನ್ಯೂಸ್‌’ ಮಾಜಿ ಸುದ್ದಿವಾಚಕ ಬಾಜ್‌ಪೈ ಬಿಚ್ಚಿಟ್ಟ ರಹಸ್ಯಗಳು | ಭಾಗ 2

ಪತಂಜಲಿ ತನ್ನ ಜಾಹಿರಾತುಗಳನ್ನು ವಾಪಸ್ ಪಡೆದ ನಂತರ ಎಬಿಪಿ ಸುದ್ದಿವಾಹಿನಿಯು ಜಾಹಿರಾತು ಒಪ್ಪಂದ ಉಲ್ಲಂಘಿಸಿದ ಕಾರಣಕ್ಕಾಗಿ ಪತಂಜಲಿಗೆ ನೋಟಿಸ್ ನೀಡಿದೆ ಎನ್ನಲಾಗಿದೆ. ಈ ವಿಷಯವನ್ನು ‘ದಿ ವೈರ್’ ತಿಜರಾವಾಲಾ ಗಮನಕ್ಕೆ ತಂದಾಗ, “ನಮ್ಮ ಜಾಹಿರಾತುಗಳನ್ನು ದಿಢೀರ್ ನಿಲ್ಲಿಸಿದ್ದಕ್ಕಾಗಿ ಎಬಿಪಿ ಸುದ್ದಿವಾಹಿನಿಯವರು ಒಂದು ಇಮೇಲ್ ಮಾಡಿ, ನಮ್ಮ ಜೊತೆ ಜಾಹಿರಾತು ನಿಲ್ಲಿಸಿರುವ ಕುರಿತು ಸಂವಹನ ನಡೆಸಿದ್ದಾರೆ. ಅದು ಕಾನೂನು ನೋಟಿಸ್ ಅಲ್ಲ. ಅಲ್ಲಿಯ ಪತ್ರಕರ್ತರು ನಾವು ಜಾಹಿರಾತು ನಿಲ್ಲಿಸಿದ ನಂತರ ರಾಜಿನಾಮೆ ನೀಡಿರುವುದು ಕೇವಲ ಕಾಕತಾಳಿಯ ಅಷ್ಟೇ. ಎಬಿಪಿಯೊಂದಿಗೆ ಪತಂಜಲಿ ಸಂಬಂಧ ಉತ್ತಮವಾಗಿದೆ,” ಎಂದಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More