ಮೋದಿ ಹೇಳುವ ಅಭಿವೃದ್ಧಿ ಚಿತ್ರಣಕ್ಕೂ, ವಾಸ್ತವಕ್ಕೂ ಇರುವ ವ್ಯತ್ಯಾಸವಿದು

‘ಎಬಿಪಿ ನ್ಯೂಸ್’ ಸುದ್ದಿವಾಹಿನಿ ಪ್ರಕರಣದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರ ಹೇಳಿಕೆಗಳು ಎಷ್ಟರಮಟ್ಟಿಗೆ ಕೆಲವೊಮ್ಮೆ ತಪ್ಪು ಮಾಹಿತಿಗಳಿಂದ ಕೂಡಿರುತ್ತವೆ ಮತ್ತು ಅವು ದೇಶದ ಜನರನ್ನು ಹೇಗೆ ದಿಕ್ಕುತಪ್ಪಿಸುತ್ತವೆ ಎಂಬುದಕ್ಕೆ ಇಲ್ಲಿವೆ ಎರಡು ಉದಾಹರಣೆಗಳು

ಟೀಕೆ, ವಿಮರ್ಶೆಗಳಿಂದ ತಾನು ಅತೀತ ಎಂದು ಭಾವಿಸಿಕೊಂಡಿರುವ ಮತ್ತು ಭಕ್ತರಂತೆಯೇ ದೇಶದ ಪ್ರತಿಯೊಬ್ಬರೂ ತಮ್ಮ ಸ್ತುತಿ ಮಾಡಬೇಕು ಎಂದು ಬಯಸುವ ಆಡಳಿತವೊಂದು, ಮುಕ್ತ ಮಾಧ್ಯಮಗಳನ್ನು ಕೂಡ ತನ್ನ ಮೂಗಿನ ನೇರಕ್ಕೆ ಪಳಗಿಸುವ ನಿಟ್ಟಿನಲ್ಲಿ ಎಂತಹ ಹಪಾಹಪಿಗೆ ಇಳಿಯಲಿದೆ ಎಂಬುದಕ್ಕೆ ಎಬಿಪಿ ಟಿವಿ ವಾಹಿನಿಯ ಇಬ್ಬರು ಹಿರಿಯ ಪತ್ರಕರ್ತರ ರಾಜಿನಾಮೆ ಪ್ರಕರಣ ಜ್ವಲಂತ ಉದಾಹರಣೆ.

ಪ್ರಧಾನಿ ಮೋದಿಯವರ ಸರ್ಕಾರದ ಸಾಧನೆಗಳ ಕುರಿತ ಟೆಲಿಕಾನ್ಫರೆನ್ಸ್‌ನಲ್ಲಿ ಬಿಂಬಿತವಾದ ಸಂಗತಿಗಳ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿದ ಕಾರಣಕ್ಕೆ, ಸರ್ಕಾರ ಮತ್ತು ಮೋದಿಯವರು ಬಿಂಬಿಸುತ್ತಿರುವ ಭಾರತದ ಅಭಿವೃದ್ಧಿಯ ಚಿತ್ರಣಕ್ಕೂ, ವಾಸ್ತವ ಭಾರತದ ಪರಿಸ್ಥಿತಿಗೂ ಇರುವ ವ್ಯತ್ಯಾಸವನ್ನು ಅವರ ಕಣ್ಣಿಗೆ ರಾಚುವಂತೆ ತೋರಿಸಿದ್ದಕ್ಕೆ, ಅವರ ಕಿವಿಗಳಿಗೆ ಇಂಪು ತರದ ಕಟುಸತ್ಯಗಳನ್ನು ಹೇಳಿದ್ದಕ್ಕೆ ಎಬಿಪಿ ವಾಹಿನಿಯ ಜನಪ್ರಿಯ ‘ಮಾಸ್ಟರ್ ಸ್ಟ್ರೋಕ್’ ಎಂಬ ವಾಸ್ತವಿಕ ವರದಿಗಾರಿಕೆಯ ಕಾರ್ಯಕ್ರಮವನ್ನು ನಡೆಸುತ್ತಿದ್ದ ವಾಹಿನಿಯ ವ್ಯವಸ್ಥಾಪಕ ಸಂಪಾದಕ ಮಿಲಿಂದ್ ಖಾಂಡೇಕರ್ ಮತ್ತು ಹಿರಿಯ ಪತ್ರಕರ್ತ ಪುಣ್ಯ ಪ್ರಸೂನ್ ಬಾಜ್‌ಪೈ ಈಗ ಕೆಲಸ ಕಳೆದುಕೊಂಡಿದ್ದಾರೆ.

ಕಳೆದ ಜೂನ್ ೨೦ರಂದು ಪ್ರಧಾನಿ ಮೋದಿಯವರು ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ನಡೆಸಿದ ಸಂವಾದ ಕಾರ್ಯಕ್ರಮದಲ್ಲಿ (ಟೆಲಿಕಾನ್ಫರೆನ್ಸ್) ಭಾಗವಹಿಸಿದ್ದ ಚತ್ತೀಸಗಢದ ಚಂದ್ರಮಣಿ ಕೌಶಿಕ್ ಎಂಬ ಮಹಿಳೆ, ಕೇಂದ್ರ ಸರ್ಕಾರದ ಕೃಷಿ ಯೋಜನೆಗಳಿಂದಾಗಿ ತನ್ನ ಆದಾಯ ಒಂದೇ ವರ್ಷದಲ್ಲಿ ದುಪ್ಪಟ್ಟಾಗಿದೆ ಎಂದು ಹೇಳಿದ್ದರು. ಆಕೆಯ ಆ ಹೇಳಿಕೆಯ ಸತ್ಯಾಸತ್ಯತೆ ಪರಿಶೀಲಿಸಿದ ‘ಎಬಿಪಿ ನ್ಯೂಸ್’, ದೆಹಲಿಯ ಪ್ರಧಾನಮಂತ್ರಿ ಕಚೇರಿಯ ಅಧಿಕಾರಿಗಳ ಒತ್ತಡದಿಂದ ಆಕೆ ಸುಳ್ಳು ಹೇಳಿದ್ದಳು, ಆಕೆಯ ಆದಾಯದಲ್ಲಿ ಅಂತಹ ಯಾವ ಬದಲಾವಣೆಯೂ ಆಗಿರಲಿಲ್ಲ ಎಂಬುದನ್ನು ಆಕೆಯದೇ ಮಾತುಗಳ ಸಹಿತ ವರದಿ ಮಾಡಿತ್ತು. ಈ ವಾಸ್ತವಾಂಶ ವರದಿ ಸಹಜವಾಗೇ ಸರ್ಕಾರದ ಕೆಂಗಣ್ಣಿಗೆ ಗುರಿಯಾಗಿತ್ತು. ನಿರ್ಮಲಾ ಸೀತಾರಾಮನ್, ರಾಜವರ್ಧನ್‌ ಸಿಂಗ್ ರಾಥೋಡ್ ಸೇರಿದಂತೆ ಕೆಲವು ಕೇಂದ್ರ ಸಚಿವರು, ಚತ್ತೀಸಗಢ ಮುಖ್ಯಮಂತ್ರಿ ಕೂಡ ಎಬಿಪಿಯ ಆ ವರದಿಯ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಕೆಂಡಕಾರಿದ್ದರು. ಅದಾದ ಬಳಿಕ ವಾಹಿನಿಯ ಆ ನಿರ್ದಿಷ್ಟ ಕಾರ್ಯಕ್ರಮದ ಪ್ರಸಾರಕ್ಕೆ ಅಡಚಣೆಗಳು ಆರಂಭವಾಗಿದ್ದವು. ಬಿಜೆಪಿ ಮತ್ತು ಸಂಘಪರಿವಾರ ವಾಹಿನಿಯ ಸಂವಾದಗಳನ್ನು ಬಹಿಷ್ಕರಿಸಿತ್ತು. ಅಂತಿಮವಾಗಿ, ಆ ವರದಿ ಮಾಡಿದ ಇಬ್ಬರು ಹಿರಿಯ ಪತ್ರಕರ್ತರ ತಲೆದಂಡದೊಂದಿಗೆ ಪ್ರಕರಣ ಲೋಕಸಭೆಯಲ್ಲೂ ಪ್ರತಿಪಕ್ಷಗಳ ಪಾಳಿಗೆ ಸರ್ಕಾರದ ವಿರುದ್ಧ ಅಸ್ತ್ರವಾಗಿ ಒದಗಿಬಂದಿತ್ತು!

ಅದು ಪ್ರಧಾನ ಮಂತ್ರಿ ಕೃಷಿ ಭಿಮಾ ಯೋಜನೆ ಇರಬಹುದು, ಕೃಷಿ ಸಿಂಚಾಯಿ ಯೋಜನೆ ಇರಬಹುದು, ಜಿಎಸ್‌ಟಿ ಇರಬಹುದು, ನೋಟು ರದ್ದತಿ ಇರಬಹುದು... ಪ್ರಧಾನಿ ಮೋದಿಯವರು ಈವರೆಗೆ ಘೋಷಿಸಿರುವ ನೂರಾರು ಯೋಜನೆಗಳ ಪೂರ್ಣ ಹೆಗ್ಗಳಿಕೆಯನ್ನು ತಮ್ಮದೇ ಕಿರೀಟಕ್ಕೆ ಗರಿಯಾಗಿಸಿಕೊಳ್ಳುವುದು ಸಾಮಾನ್ಯ. ಗಡಿಯಲ್ಲಿ ಯೋಧರ ಹೋರಾಟದಿಂದ ಹಿಡಿದು ಹೊಲದಲ್ಲಿ ರೈತರ ದುಡಿಮೆಯವರೆಗೆ ದೇಶದ ಇಂಚಿಂಚಲ್ಲಿ ಎಲ್ಲಿ ಏನೇ ಒಳ್ಳೆಯದಾದರೂ ಅದಕ್ಕೆ ಮೋದಿಯವರೇ ಕಾರಣ ಎಂದು ಉಘೇಉಘೇ ಎನ್ನುವ ಭಕ್ತರ ಪಡೆಗಳೂ ಇವೆ. ಆದರೆ, ಅದೇ ಯೋಜನೆಗಳಲ್ಲಿ, ಕಾರ್ಯಕ್ರಮಗಳಲ್ಲಿ, ಘೋಷಣೆಗಳಲ್ಲಿ ವಾಸ್ತವಾಂಶ ಇಲ್ಲದೇ ಇದ್ದರೆ, ಅದು ಸುಳ್ಳಾಗಿದ್ದರೆ, ಸತ್ಯಕ್ಕೆ ದೂರವಾಗಿದ್ದರೆ, ಅಂತಹ ಕಹಿ ಸಂಗತಿಯನ್ನು ಎತ್ತಿ ತೋರಿದರೆ, ಆಗ ಮಾಧ್ಯಮಗಳ ವಿರುದ್ಧ ಹರಿಹಾಯಲಾಗುತ್ತದೆ. ಬೆದರಿಸಲಾಗುತ್ತದೆ. ಎಬಿಪಿ ಪತ್ರಕರ್ತರ ವಿಷಯದಲ್ಲಿ ಆದಂತೆ ಬಗ್ಗುಬಡಿಯಲಾಗುತ್ತದೆ.

ಗ್ರಾಮೀಣ ಪ್ರದೇಶದ ಕುಗ್ರಾಮಗಳ ವಿದ್ಯುದೀಕರಣದ ವಿಷಯದಲ್ಲಿಯೂ ಹೀಗೆಯೇ, ಪ್ರಧಾನಿ ಮೋದಿಯವರು, ಕಳೆದ ಏಪ್ರಿಲ್‌ನಲ್ಲಿ, ಕರ್ನಾಟಕದ ಚುನಾವಣೆಗಳ ಹೊತ್ತಲ್ಲಿ, “ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರದ ಲೇಯ್ಸಂಗ್ ಎಂಬ ಕುಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವುದರೊಂದಿಗೆ ಇಡೀ ಭಾರತ ಸಂಪೂರ್ಣ ವಿದ್ಯುದೀಕರಣಗೊಂಡಂತಾಗಿದೆ,” ಎಂದು ಘೋಷಿಸಿದ್ದರು. ಆದರೆ, ವಾಸ್ತವವಾಗಿ ಆ ಘೋಷಣೆ ನಿಜವಾಗಿರಲಿಲ್ಲ. ಏಕೆಂದರೆ, ಈಗಲೂ ದೇಶದ ಸಾವಿರಾರು ಕುಗ್ರಾಮಗಳು ವಿದ್ಯುತ್ ಬೆಳಕು ಕಂಡಿಲ್ಲ ಎಂಬುದನ್ನು ರಾಷ್ಟ್ರೀಯ ಮಾಧ್ಯಮಗಳು ಮರುದಿನವೇ ವರದಿ ಮಾಡಿದ್ದವು. ‘ದಿ ಸ್ಟೇಟ್’‌ ಕೂಡ ಜುಲೈ ಮೊದಲ ವಾರ ಮಲೆನಾಡಿನ ಕುಗ್ರಾಮಗಳಲ್ಲಿ ರಿಯಾಲಿಟಿ ಚೆಕ್ ಮಾಡಿ, ಸಾಗರ ತಾಲೂಕಿನ ಶರಾವತಿ ಕಣಿವೆಯ ಉರುಳುಗಲ್ಲ ಗ್ರಾಮ ವ್ಯಾಪ್ತಿಯ ಕುಗ್ರಾಮಗಳಲ್ಲಿ ಇಂದಿಗೂ ವಿದ್ಯುತ್ ಸಂಪರ್ಕವಿಲ್ಲ ಎಂಬ ಬಗ್ಗೆ ಸ್ಥಳದಿಂದಲೇ ಗ್ರೌಂಡ್ ರಿಪೋರ್ಟ್ ಮಾಡಿತ್ತು.

ಎಬಿಪಿ ಪ್ರಕರಣದ ಹಿನ್ನೆಲೆಯಲ್ಲಿ, ಪ್ರಧಾನಿ ಮೋದಿಯವರ ಹೇಳಿಕೆಗಳು ಎಷ್ಟರಮಟ್ಟಿಗೆ ಕೆಲವೊಮ್ಮೆ ತಪ್ಪು ಮಾಹಿತಿಗಳಿಂದ ಕೂಡಿರುತ್ತವೆ ಮತ್ತು ಅವು ದೇಶದ ಜನರನ್ನು ಹೇಗೆ ದಿಕ್ಕುತಪ್ಪಿಸುತ್ತವೆ ಎಂಬುದಕ್ಕೆ ಈ ವರದಿಯನ್ನು ಮತ್ತೊಮ್ಮೆ ಕಣ್ಣಾಡಿಸಬಹುದು.

ಬೆಳಕಿಗಾಗಿ ಬದುಕು ಕೊಟ್ಟವರ ಊರಿನ ಕಗ್ಗತ್ತಲ ಬದುಕು!

ಕಳೆದ ಏಪ್ರಿಲ್ ಕೊನೆಯ ವಾರ, ಈಶಾನ್ಯ ರಾಜ್ಯಗಳಲ್ಲಿ ಒಂದಾದ ಮಣಿಪುರದ ಲೇಯ್ಸಂಗ್ ಎಂಬ ಕುಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವುದರೊಂದಿಗೆ ಇಡೀ ಭಾರತ ಸಂಪೂರ್ಣ ವಿದ್ಯುದೀಕರಣಗೊಂಡಂತಾಗಿದೆ ಎಂದು ಪ್ರಧಾನಿ ಮೋದಿಯವರು ಘೋಷಿಸಿದ್ದರು. “ಭಾರತದ ಅಭಿವೃದ್ಧಿಯ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ದಿನವಾಗಿ ದಾಖಲಾಗಲಿದೆ. ನಮ್ಮ ಬದ್ಧತೆಯ ಸಾಕಾರದಿಂದಾಗಿ ಹಲವಾರು ಭಾರತೀಯರ ಬದುಕು ಬದಲಾಗಿದೆ. ಈ ಮೂಲಕ ದೇಶದ ಪ್ರತಿ ಹಳ್ಳಿಯೂ ವಿದ್ಯುತ್ ಸಂಪರ್ಕವನ್ನೂ, ಸಬಲೀಕರಣದ ಬಲವನ್ನೂ ಪಡೆದಿವೆ” ಎಂದು ಆಗ ಪ್ರಧಾನಿಗಳು ಟ್ವೀಟ್ ಮೂಲಕ ಹರ್ಷ ವ್ಯಕ್ತಪಡಿಸಿದ್ದರು.

ಅದಾಗಿ ಸರಿಯಾಗಿ ಎರಡು ತಿಂಗಳ ಬಳಿಕ ದೇಶದ ಹೆಮ್ಮೆಯ ಜಲವಿದ್ಯುತ್ ಯೋಜನೆಗಾಗಿ ಮುಳುಗಡೆಯಾದ ಹಿನ್ನೀರಿನ ಹಳ್ಳಿಗಳಿಗೆ ಹೋದಾಗ, ಬೇರೆಯದೇ ಭಾರತದ ದರ್ಶನವಾಯಿತು. ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ವಿಶ್ವಪ್ರಸಿದ್ಧ ಜೋಗ ಜಲಪಾತ ಮತ್ತು ಶರಾವತಿಯ ಕಣಿವೆಯ ಸಾಲು-ಸಾಲು ವಿದ್ಯುತ್ ಉತ್ಪಾದನಾ ಕೇಂದ್ರಗಳಿಂದ ಕೇಲವೇ ಕಿ.ಮೀ.ಗಳ ಅಂತರದಲ್ಲಿರುವ ಉರುಳುಗಲ್ಲು ಎಂಬ ಗ್ರಾಮದ ಐದು ಹಳ್ಳಿಗಳೇ ಅಂತಹ ಆ ಮತ್ತೊಂದು ಭಾರತವನ್ನು ನಮಗೆ ಪರಿಚಯಿಸಿದ ಊರುಗಳು.

ಕಾರ್ಗಲ್- ಕೋಗಾರ್ ರಸ್ತೆಯ ಭಾನುಕುಳಿ ಗ್ರಾಮಪಂಚಾಯ್ತಿ ವ್ಯಾಪ್ತಿಯ ಈ ಊರಗಳು ಈಗಲೂ ವಿದ್ಯುತ್‌, ರಸ್ತೆ, ಶಾಲೆ, ಶುದ್ಧ ಕುಡಿಯುವ ನೀರು ಮುಂತಾದ ಎಲ್ಲಾ ಬಗೆಯ ನಾಗರಿಕ ಸೌಲಭ್ಯಗಳಿಂದ ದೂರವೇ ಉಳಿದಿವೆ. ಗ್ರಾಮ ಪಂಚಾಯ್ತಿ ಕಚೇರಿಗೆ ತಲುಪಲು ಆ ಊರಿನ ಜನ ಕನಿಷ್ಠ ೨೫ ಕೀ.ಮೀ ದೂರ ಬರಬೇಕು. ಆ ಪೈಕಿ ಸುಮಾರು ೧೫ ಕಿ.ಮೀ ದೂರದ ದಟ್ಟ ಕಾಡಿನ ನಡುವಿನ ದಾರಿ ಇಂದಿಗೂ ಗಂಡಿ-ಗೊಟರುಗಳ, ಮರದ ಬೇರು-ಬೊಡ್ಡೆಗಳ ದುರ್ಗಮ ಹಾದಿ. ಮಳೆಗಾಲದ ನಾಲ್ಕೈದು ತಿಂಗಳ ಕಾಲ ಜೀಪು ಹೊರತುಪಡಿಸಿ ಬೇರಾವುದೇ ನಾಲ್ಕು ಚಕ್ರದ ವಾಹನ ಹೋಗಲಾರದು. ಅಲ್ಲಿನ ಜನರಿಗೆ ಬೈಕ್ ಅಥವಾ ಸೈಕಲ್ಲೇ ಸಂಚಾರಕ್ಕೆ ಇರುವ ಆಯ್ಕೆ. ಬೈಕ್, ಸೈಕಲ್ಲನ್ನು ಕೂಡ ಜಾರಿಕೆಯ ಆ ರಸ್ತೆಯಲ್ಲಿ ಚಾಲನೆ ಮಾಡಿ ಅನುಭವವಿದ್ದವರು ಮಾತ್ರ ಓಡಿಸಲು ಸಾಧ್ಯ.

ಭಾನುಕುಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬಿಳಿಗಾರು ಗ್ರಾಮದಿಂದ ಒಳಗೆ ಕಾನೂರು ಕೋಟೆ ರಸ್ತೆಯಲ್ಲಿ ಹತ್ತು ಕಿಮೀ ಸಾಗಿದರೆ, ಮುಂದೆ ಸುಮಾರು ೧೫ ಕಿಮೀ ದುರ್ಗಮ ಹಾದಿ ಸವೆಸಿದರೆ, ಅಲ್ಲಿ ಸಾಲ್ಕೋಡು, ಹೆಬ್ಬನಕೇರಿ, ಚೀಕನಹಳ್ಳಿ, ಮೇಲೂರು ಮತ್ತು ಮುಂಡುವಾಳ ಎಂಬ ಶತಮಾನಗಳ ಪಳೆಯುಳಿಕೆಯಂತಿರುವ ಕುಗ್ರಾಮಗಳು ಸಿಗುತ್ತವೆ. ಒಟ್ಟು ಸುಮಾರು ೮೦ ಮನೆಗಳಿರುವ ಈ ಊರಿನ ಬಹುತೇಕ ಎಲ್ಲರೂ ಹಿರೇಭಾಸ್ಕರ, ಲಿಂಗನಮಕ್ಕಿ ಹಾಗೂ ತಳಕಳಲೆ ಜಲಾಶಯಗಳಲ್ಲಿ ಮುಳುಗಡೆಯಾಗಿ ಆಸ್ತಿ-ಮನೆ ಕಳೆದುಕೊಂಡು ನಿರಾಶ್ರಿತರಾಗಿ ಬಂದು ನೆಲೆ ಕಂಡುಕೊಂಡವರೇ! ಕೆಲವರಂತೂ ಎರಡು, ಮೂರು ಬಾರಿ ನಿರಂತರವಾಗಿ ಮುಳುಗಡೆ ಸಂತ್ರಸ್ತರಾಗಿ, ಪೈಸೆ ಪರಿಹಾರವೂ ಇಲ್ಲದೆ ಬರೀಗೈಲಿ ಊರು ತೊರೆದು, ದುರ್ಗಮ ಕಾಡಿನ ನಡುವೆ ಬದುಕು ಕಂಡುಕೊಂಡವರು.

ಕೇವಲ ಒಂದು, ಎರಡು ಎಕರೆ ಜಮೀನನ್ನೇ ಜೀವನಾಧಾರವಾಗಿ ಹೊಂದಿರುವ ಬಹುತೇಕ ಕುಟುಂಬಗಳಿಗೆ ಕೃಷಿ ಹೊರತುಪಡಿಸಿ ಇತರ ಆದಾಯವೂ ಇಲ್ಲ. ಭಾರೀ ಮಳೆ ಸುರಿಯುವ ಈ ಪ್ರದೇಶದಲ್ಲಿ, ಮಳೆಗಾಲದ ನಾಲ್ಕು ತಿಂಗಳು ಇಡೀ ಜನಸಮುದಾಯವೇ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತದೆ. ತೀರಾ ಅನಿವಾರ್ಯ ಪರಿಸ್ಥಿತಿಯಲ್ಲಿ ಮಾತ್ರ ಗ್ರಾಮದ ಗಟ್ಟಿಮುಟ್ಟಾದ ಯುವಕರು ಬೈಕಿನ ಮೇಲೆ ಸಮೀಪದ ಗ್ರಾಮ ಪಂಚಾಯ್ತಿ ಕೇಂದ್ರವಿರುವ ಬಿಳಿಗಾರಿಗೆ ಹೋಗುತ್ತಾರೆ.

ಐದೂ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಇಡೀ ನಾಡಿಗೆ ಬೆಳಕು ನೀಡಿದ ವಿದ್ಯುತ್ ಯೋಜನೆಗಳಿಗಾಗಿ ಮತ್ತೆ-ಮತ್ತೆ ಸಂತ್ರಸ್ತರಾಗಿ ಬದುಕು ಕಳೆದುಕೊಂಡ ಈ ಜನರ ಬದುಕು ಐವತ್ತು ವರ್ಷಗಳ ಬಳಿಕ ಈಗಲೂ ಕತ್ತಲಲ್ಲೇ ಮುಳುಗಿದೆ. ವಿದ್ಯುತ್ ಮಾರ್ಗಕ್ಕೆ ಶರಾವತಿ ಅಭಯಾರಣ್ಯದ ಕಾನೂನು ಅಡ್ಡಿಯಾಗಿವೆ. ಅಭಯಾರಣ್ಯದ ನಡುವಿನ ಈ ಹಳ್ಳಿಗಳಿಗೆ ವಿದ್ಯುತ್ ಮತ್ತು ರಸ್ತೆ ಸಂಪರ್ಕಕ್ಕೆ ಅರಣ್ಯ ಇಲಾಖೆ ಅವಕಾಶ ನೀಡುತ್ತಿಲ್ಲ.

ಇಲ್ಲಿನ ಜನರ ಒತ್ತಾಯ, ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ಮೆಸ್ಕಾಂ ಈ ಹಳ್ಳಿಗೆ ಎರಡು ವರ್ಷದ ಹಿಂದೆ ಸೋಲಾರ್ ವ್ಯವಸ್ಥೆ ಮಾಡಿತ್ತು. ಆದರೆ, ಕೇವಲ ಆರು ತಿಂಗಳಲ್ಲೇ ಬಹುತೇಕ ಸೋಲಾರ್ ಸಿಸ್ಟಂಗಳು ಹಾಳಾಗಿದ್ದು, ಮತ್ತೆ ಮೆಸ್ಕಾಂ ಆಗಲೀ, ಸೋಲಾರ್ ಅಳವಡಿಸಿದ ಗುತ್ತಿಗೆ ಸಂಸ್ಥೆಯಾಗಲೀ ದುರಸ್ತಿ ಅಥವಾ ಸಿಸ್ಟಂ ಬದಲಾವಣೆಯ ಬಗ್ಗೆ ಗಮನ ಹರಿಸಿಲ್ಲ. ಗ್ರಾಮದ ಕೆಲವರು ಸಾಲ ಮಾಡಿ ಸ್ವಂತ ಸೋಲಾರ್ ಹಾಕಿಸಿಕೊಂಡಿದ್ದರೂ, ಅಲ್ಲಿನ ಮಳೆ ಮತ್ತು ಮೋಡಕವಿದ ವಾತಾವರಣದ ಕಾರಣದಿಂದ ವರ್ಷದ ಆರು ತಿಂಗಳು ಅವು ಬೆಳಕು ನೀಡದ ಪರಿಸ್ಥಿತಿ ಇದೆ. ವಿದ್ಯುತ್ ಇರದ ಹಿನ್ನೆಲೆಯಲ್ಲಿ ಇಡೀ ಐದೂ ಊರಿನ ಬಹುತೇಕ ಮನೆಗಳಲ್ಲಿ ಟಿವಿ ಕೂಡ ಇಲ್ಲ. ಮೊಬೈಲ್ ಫೋನುಗಳಿದ್ದರೂ, ಅವುಗಳಿಗೂ ಪೇಟೆಗೆ ಹೋದಾಗ ಅಂಗಡಿಮುಂಗಟ್ಟುಗಳಲ್ಲಿ ಚಾರ್ಜು ಮಾಡಿಕೊಂಡು ಇಟ್ಟುಕೊಳ್ಳಬೇಕಾದ ಸ್ಥಿತಿ ಇದೆ.

ಇದನ್ನೂ ಓದಿ : ‘ಎಬಿಪಿ ನ್ಯೂಸ್‌’ ಮಾಜಿ ಸುದ್ದಿವಾಚಕ ಬಾಜ್‌ಪೈ ಬಿಚ್ಚಿಟ್ಟ ರಹಸ್ಯಗಳು | ಭಾಗ 2

ಇನ್ನು ಶಿಕ್ಷಣ ಮತ್ತು ಆರೋಗ್ಯ ಸೇವೆಯಂತೂ ಈ ಜನಗಳಿಗೆ ಗಗನಕುಸುಮ. ೮೦ ಮನೆಗಳ ಸುಮಾರು ೩೦ ಮಕ್ಕಳು ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗೆ ಹೋಗುವ ವಯಸ್ಸಿನವರಿದ್ದರೂ, ಆ ಮಕ್ಕಳಿಗೆ ಕನಿಷ್ಠ ೧೦ ಕಿ.ಮೀ. ಒಳಗೆ ಯಾವ ಶಾಲೆಯೂ ಇಲ್ಲ. ಅಂಗನವಾಡಿಯಂತೂ ಅವರ ಪಾಲಿಗೆ ಕನಸು. ಒಂದನೇ ತರಗತಿಗೆ ಈ ಮಕ್ಕಳು ೧೦ ಕಿ.ಮೀ ದೂರ, ಕಲ್ಲುಮುಳ್ಳಿನ ಕಾಡುದಾರಿಯಲ್ಲಿ ನಡೆದುಹೋಗಬೇಕು. ಎರಡು ಹೊಳೆಗಳನ್ನು ಕಾಲುಸಂಕದ ಮೇಲೆ ದಾಟಬೇಕು. ಇನ್ನು ಐದನೇ ತರಗತಿಗೆ ಹೋಗಲು ೨೦-೨೫ ಕಿ.ಮೀ ದೂರದ ಬಿಳಿಗಾರಿಗೇ ಹೋಗಬೇಕು. ಅದೂ ಎದೆನಡುಗಿನ ದಟ್ಟ ಅರಣ್ಯದ ನಡುವಿನ ದುರ್ಗಮ ದಾರಿಯಲ್ಲಿ!

ಶಿಕ್ಷಣದ ಈ ಭೀಕರ ಸವಾಲಿನ ಕಾರಣಕ್ಕಾಗಿಯೇ ಇಲ್ಲಿನ ಬಹುತೇಕ ಮಕ್ಕಳು ಶಿಕ್ಷಣವಂಚಿತರಾಗಿದ್ದಾರೆ. ಹಾಗೂ ಪಟ್ಟಣಗಳಲ್ಲಿ ಸಂಪರ್ಕವಿದ್ದವರು ಸಂಬಂಧಿಕರು, ಇಲ್ಲವೇ ವಿದ್ಯಾರ್ಥಿನಿಲಯಗಳಲ್ಲಿ ಮಕ್ಕಳನ್ನು ಬಿಟ್ಟಿದ್ದಾರೆ. ಅಂತಹ ಅದೃಷ್ಟವಂತರ ಸಂಖ್ಯೆ ಕೂಡ ತೀರಾ ವಿರಳ. ಗ್ರಾಮದ ಶಿವಕುಮಾರ ಎಂಬ ಯುವಕನ ಮಾತುಗಳಲ್ಲೇ ಹೇಳುವುದಾದರೆ, “ಕುಗ್ರಾಮದಲ್ಲಿ ಹುಟ್ಟಿದ ತಪ್ಪಿಗೆ ನಾವು ಶಿಕ್ಷಣ, ಆಧುನಿಕತೆಯಿಂದ ವಂಚಿತರಾಗಬೇಕೆ? ನಗರದ ಜನಗಳ ಬಾಯಲ್ಲಿ ಕಾಡುಜನ ಎನ್ನಿಸಿಕೊಳ್ಳಬೇಕೆ? ಇಂತಹ ಶಾಪದಿಂದ ಪಾರಾಗಬೇಕಾದರೆ ನಾವು ಪಟ್ಟಣದ ಹಾಸ್ಟೆಲ್ ಅಥವಾ ಯಾರಾದರೂ ಸಂಬಂಧಿಕರ ಮನೆಯಲ್ಲಿ ಅಲ್ಲಿನ ಎಲ್ಲಾ ಕಷ್ಟಕೋಟಲೆ ತಡೆದುಕೊಂಡು ಓದಬೇಕು. ಅಷ್ಟಾಗಿಯೂ ಜನ ನಮ್ಮ ಪರಿಸ್ಥಿತಿಯ ಕಂಡು ಕನಿಕರ ತೋರುವುದಿಲ್ಲ. ಬದಲಾಗಿ ನಮ್ಮನ್ನೇ ದಡ್ಡರು, ಕುಗ್ರಾಮದವರು ಎಂದು ಹಳಿಯುತ್ತಾರೆ. ಯಾವ ತಪ್ಪಿಗಾಗಿ ನಮಗೆ ಈ ಅವಮಾನ? ಶಿಕ್ಷೆ?”

ಇನ್ನು ಯಾರಿಗಾದರೂ ದಿಢೀರ್ ಅನಾರೋಗ್ಯವಾದರೆ, ಮಳೆಗಾಲದಲ್ಲಂತೂ ಅವರನ್ನು ಕಂಬಳಿಜೋಲಿ ಕಟ್ಟಿಕೊಂಡೇ ಹೊತ್ತು ಕಾನೂರು ರಸ್ತೆಯವರೆಗೆ ಸಾಗಿಸಬೇಕು. ಅದರಲ್ಲೂ ತುರ್ತು ಚಿಕಿತ್ಸೆಯ ಅಗತ್ಯವಿದ್ದರೆ, ೮೦ ಕಿ.ಮೀ ದೂರದ ಸಾಗರಪಟ್ಟಣಕ್ಕೇ ಹೋಗಬೇಕು!

“ನಮ್ಮ ತಂದೆಯರ ಕಾಲದಲ್ಲೇ ಲಿಂಗನಮಕ್ಕಿ ಜಲಾಶಯ ಯೋಜನೆಯ ಸಂತ್ರಸ್ತರಾಗಿ ನಾವು ಇಲ್ಲಿಗೆ ಬಂದಿದ್ದೇವೆ. ಈ ಊರಿನಲ್ಲಿ ಯಾವ ಸೌಲಭ್ಯಗಳೂ ಇಲ್ಲದೆ, ನಾವು ಬಯಲಬಂಧಿಖಾನೆಯಲ್ಲಿ ಬದುಕುವಂತೆ ಜೀವನ ಕಳೆಯುತ್ತಿದ್ದೇವೆ. ನಮಗೆ ರಸ್ತೆ, ವಿದ್ಯುತ್, ಶಾಲೆ ಸೇರಿದಂತೆ ಎಲ್ಲಾ ಸೌಲಭ್ಯಕ್ಕೂ ಅಡ್ಡಗಾಲಾಗಿರುವುದೇ ಅಭಯಾರಣ್ಯ ಯೋಜನೆ. ಆದರೆ, ಈ ಅಭಯಾರಣ್ಯ ಘೋಷಣೆಯಾಗುವುದಕ್ಕೆ ಮುಂಚೆ ೨೫-೩೦ ವರ್ಷ ಹಿಂದೆಯೇ ನಾವಿಲ್ಲಿ ಸ್ವಂತ ಜಮೀನು-ಮನೆ ಮಾಡಿಕೊಂಡು ನೆಲೆಸಿದ್ದೆವು. ಹಾಗಿರುವಾಗ, ನಮ್ಮ ನಾಗರಿಕ ಹಕ್ಕುಗಳನ್ನು ತುಳಿದು ಇವರು ಪ್ರಾಣಿ-ಪಕ್ಷಿಗಳ ಹಕ್ಕನ್ನು ಸ್ಥಾಪಿಸುವುದು ಸರಿಯೇ?” ಎಂದು ತಮ್ಮ ಸಂಕಷ್ಟಗಳಿಗೆ ಸರ್ಕಾರದ ಅರಣ್ಯ ನೀತಿಗಳೇ ಕಾರಣ ಎಂದು ದೂರುತ್ತಾರೆ ಸಾಲ್ಕೋಡು ನಾಗರಾಜ್.

೧೯೫೦ರ ದಶಕದ ಅಂತ್ಯದ ಸುಮಾರಿಗೆ ಲಿಂಗನಮಕ್ಕಿ ಜಲಾಶಯ ಪೂರ್ಣಗೊಳ್ಳುವ ಹೊತ್ತಿಗೆ ಈ ಉರುಳುಗಲ್ಲು ಗ್ರಾಮ ವ್ಯಾಪ್ತಿಯ ಹಳ್ಳಿಗಳ ನಿವಾಸಿಗಳು ಇಲ್ಲಿಗೆ ವಲಸೆ ಬಂದಿದ್ದಾರೆ. ಆದರೆ, ಶರಾವತಿ ಅಭಯಾರಣ್ಯ ಯೋಜನೆ ಘೋಷಣೆಯಾಗಿದ್ದು, ೧೯೭೨ರಲ್ಲಿ. ಅಭಯಾರಣ್ಯ ಘೋಷಣೆಗೂ ಮುನ್ನವೇ ದಶಕಗಳ ಕಾಲ ಅಲ್ಲಿ ವಾಸವಿದ್ದ ಜನಗಳ ಮೂಲ ಸೌಕರ್ಯದ ಹಕ್ಕನ್ನು ಅರಣ್ಯ ಕಾಯ್ದೆಗಳು ಕಿತ್ತುಕೊಳ್ಳುವುದು ಸರಿಯೇ ಎಂಬ ಅವರ ಪ್ರಶ್ನೆಯಲ್ಲಿ ನ್ಯಾಯವಿಲ್ಲದಿಲ್ಲ.

ಗ್ರಾಮದ ಮತ್ತೊಂದು ಸಮಸ್ಯೆಯ ಬಗ್ಗೆ ಹೇಳುವ, ರಾಮಚಂದ್ರ ನಾಯ್ಕ್, “ನಾವು ಇಲ್ಲಿ ಅಕ್ಷರಶಃ ಕಾಡುಮನುಷ್ಯರಂತೆ ಜೀವನ ನಡೆಸುತ್ತಿದ್ದೇವೆ. ಒಂದು ಪಡಿತರ ಧಾನ್ಯಕ್ಕಾಗಲೀ, ಅಕ್ಕಿಬೇಳೆಗಾಗಲೀ ನಾವು ೨೦ ಕಿ.ಮೀ ದೂರ ಹೋಗಬೇಕು. ಅದೂ ನಮ್ಮೂರಿನ ಜನ ಮಳೆಗಾಳಿ, ಚಳಿಯ ನಡುವೆ ಗೊಂಡಾರಣ್ಯದಲ್ಲಿ ನಡೆದುಕೊಂಡು ಜೀವ ಕೈಯಲ್ಲಿ ಹಿಡಿದುಕೊಂಡು ಹೋಗಬೇಕು. ಕರಡಿ, ಚಿರತೆ, ಹುಲಿ, ಕಾಡುಕೋಣಗಳ ದಾಳಿಯ ಭೀತಿಯಂತೂ ನಮಗೆ ವರ್ಷದ ಮುನ್ನೂರೈವತ್ತು ದಿನವೂ ತಪ್ಪದು. ಇಲ್ಲಿನ ಕಾಲುಹಾದಿಯನ್ನು ಉದ್ಯೋಗಖಾತ್ರಿ ಯೋಜನೆಯಡಿ ಕಚ್ಛಾರಸ್ತೆಯಾಗಿ ಮಾಡಲು ಕೂಡ ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಾರೆ. ಚೀರನಹಳ್ಳಿಯ ಮೇಲೆ ಹಾದುಹೋಗುವ ಕಚ್ಛಾರಸ್ತೆ ಸರಿಪಡಿಸಿದರೆ, ಇಲ್ಲಿಂದ ಮುರುಡೇಶ್ವರ ಕೇವಲ ೨೫ ಕಿ.ಮೀ. ಆಗುತ್ತದೆ. ಈಗಿನ ಕೋಗಾರ್, ಭಟ್ಕಳ ಮಾರ್ಗದಲ್ಲಿ ಅದು ೭೫ ಕಿ,ಮೀ ಆಗುತ್ತದೆ. ಆದರೆ, ಅರಣ್ಯ ಇಲಾಖೆ ನಮ್ಮ ಪಾಲಿನ ಯಮಧೂತನಾಗಿಬಿಟ್ಟಿದೆ. ನಮ್ಮನ್ನೂ ಅವರು ಪಂಜರದ ಪ್ರಾಣಿಗಳನ್ನಾಗಿ ಮಾಡಿಬಿಟ್ಟಿದ್ದಾರೆ” ಎನ್ನುತ್ತಾರೆ.

ಇದನ್ನೂ ಓದಿ : ‘ಎಬಿಪಿ ನ್ಯೂಸ್‌’ ಮಾಜಿ ಸುದ್ದಿವಾಚಕ ಬಾಜ್‌ಪೈ ಬಿಚ್ಚಿಟ್ಟ ರಹಸ್ಯಗಳು | ಭಾಗ 2

ಈ ನಡುವೆ, ಈ ಹಳ್ಳಿಯ ಜನರಿಗೆ ಎತ್ತಂಗಡಿ ಮಾಡಲು ಅರಣ್ಯ ಇಲಾಖೆ ತೆರೆಮರೆಯ ಯತ್ನಗಳು ಆರಂಭಿಸಿದೆ. ಅರಣ್ಯ ಅಧಿಕಾರಿಗಳು ಕಾರ್ಯಾಗಾರ, ಜಾಗೃತಿ ಶಿಬಿರಗಳ ಹೆಸರಲ್ಲಿ ಇಲ್ಲಿನ ಜನರನ್ನು ಒಂದು ಕಡೆ ಸೇರಿಸಿ, ‘ಅರಣ್ಯ ಕಾಯ್ದೆಗಳ ಕಟ್ಟುನಿಟ್ಟಿನ ನಿಯಮಗಳನ್ನು ಹೇಳಿ ನೀವು ಅಭಯಾರಣ್ಯದ ಒಳಗೆ ಬದುಕು ನಡೆಸುವುದು ದುಸ್ತರ, ಅದರ ಬದಲಿಗೆ ಪರಿಹಾರ ಪ್ಯಾಕೇಜ್ ತೆಗೆದುಕೊಂಡು ಹೊರಬನ್ನಿ’ ಎಂದು ಪುಸಲಾಯಿಸತೊಡಗಿದ್ದಾರೆ. ಆದರೆ, ಎರಡು-ಮೂರು ಬಾರಿ ಈಗಾಗಲೇ ಎತ್ತಂಗಡಿಯಾಗಿ, ಮತ್ತೆಮತ್ತೆ ಊರು-ಮನೆ, ಆಸ್ತಿಪಾಸ್ತಿ ಕಳೆದುಕೊಂಡು ಹೈರಾಣಾಗಿರುವ ಈ ಕಾಡಿನಮಕ್ಕಳು, ಅಂತಹ ಆಮಿಷಗಳಿಗೆ ಜಗ್ಗದೇ, ತಮ್ಮ ನೆಲೆಯಲ್ಲೇ ಬದುಕು ಭದ್ರಪಡಿಸಿಕೊಳ್ಳುವ ಮಾತನಾಡುತ್ತಿದ್ದಾರೆ.

ಇಂತಹ ನೋವುಂಡ ಜನರ ಅಳಲನ್ನು ಕೇಳುವ ಕಿವಿ ಮತ್ತು ಹೃದಯ ಆಡಳಿತ ಮತ್ತು ಆಡಳಿತಗಾರರಿಗೆ ಈಗ ಇವೆಯೇ ಎಂಬುದು ಕಾಡುವ ಪ್ರಶ್ನೆ! ಹಾಗಾಗಿ, ಕಲ್ಲು-ಮುಳ್ಳು, ಬೇರು-ಗೊಟರುಗಳ ಜಾರು ದಾರಿಯ ಪಯಣದಲ್ಲಿ ಪಾದದ ಗೆರೆ ಸವೆದಂತೆಯೇ, ಉರುಳುಗಲ್ಲಿನ ಜನರ ಬದುಕು ಕೂಡ ಕಾಡಿನ ನಡುವೆ ಕರಗುತ್ತಿದೆ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More