ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಪಾರ್ಕರ್ ಸೋಲಾರ್ ಪ್ರೋಬ್ ಉಡಾವಣೆ

ಪ್ರಥಮ ಬಾರಿಗೆ ನಾಸಾ ಸೂರ್ಯಯಾನ ಮಾಡುತ್ತಿದ್ದು, ನಾಸಾದ ‘ಪಾರ್ಕರ್ ಸೋಲಾರ್ ಪ್ರೋಬ್’ ಭಾನುವಾರ ಬೆಳಿಗ್ಗೆ ಉಡಾವಣೆಯಾಗಲಿದೆ ಎಂದು ನಾಸಾ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ ಉಡಾವಣೆಯಾಗುವ ಸಮಯವನ್ನು ಬಹಿರಂಗಪಡಿಸಿಲ್ಲ. ಸೋಲಾರ್ ಪ್ರೋಬ್ ಫ್ಲೋರಿಡಾದಲ್ಲಿರುವ ಕೆನಡಿ ಸ್ಪೇಸ್ ಸೆಂಟರ್‌ನಿಂದ ನಭೋಮಂಡಲಕ್ಕೆ ಉಡಾವಣೆಯಾಗಲಿದೆ.

ಏಷ್ಯಾದ ಮೊದಲ ಅತ್ಯಾಧುನಿಕ ನ್ಯಾಯಾಲಯಗಳ ಸಂಕೀರ್ಣ ಉದ್ಘಾಟನೆ

ಹುಬ್ಬಳ್ಳಿಯಲ್ಲಿ ನಿರ್ಮಾಣಗೊಂಡಿರುವ ಏಷ್ಯಾದ ಮಾದರಿ ತಾಲೂಕು ನ್ಯಾಯಾಲಯಗಳ ಸಂಕೀರ್ಣವನ್ನು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಇಂದು ಉದ್ಘಾಟಿಸಲಿದ್ದು, ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪಾಲ್ಗೊಳ್ಳಲಿದ್ದಾರೆ. 125 ಕೋಟಿ ರೂ. ವೆಚ್ಚದಲ್ಲಿ 5.15 ಎಕರೆ ಜಾಗದಲ್ಲಿ ನಿರ್ಮಾಣಗೊಂಡಿರುವ ಸಂಕೀರ್ಣ, 24,525 ಚದರ ಮೀಟರ್‌ ವಿಸ್ತೀರ್ಣದಲ್ಲಿದೆ. ಮೊದಲ ಮಹಡಿಯಲ್ಲಿ ಮೂರು ನ್ಯಾಯಾಲಯಗಳು, ಒಂದು ಕಾನ್ಫರೆನ್ಸ್‌ ಹಾಲ್‌ ಇದ್ದರೆ ಉಳಿದ ಮಹಡಿಗಳಲ್ಲಿ ಕೌಟುಂಬಿಕ ನ್ಯಾಯಾಲಯ, 2 ಜಿಲ್ಲಾ ನ್ಯಾಯಾಲಯ, 2 ಕಾರ್ಮಿಕ ನ್ಯಾಯಾಲಯ 4 ಸಿವಿಲ್‌ ಜ್ಯೂನಿಯರ್‌ ಡಿವಿಜನ್‌, 2 ಜೆಎಂಎಫ್‌ಸಿ, ಮೂರು ಸೀನಿಯರ್‌ ಡಿವಿಜನ್‌ ಕೋರ್ಟ್‌ಗಳಿವೆ. ಸದ್ಯ ಈ ಸಂಕೀರ್ಣದಲ್ಲಿ 17 ಕೋರ್ಟ್‌ಗಳು ಕಾರ್ಯನಿರ್ವಹಿಸಲಿವೆ.

ವಿಯೆಟ್ನಾಂ ಪ್ರಶಸ್ತಿ ಮೇಲೆ ಅಜಯ್ ಜಯರಾಮ್ ಕಣ್ಣು

ಭಾರತದ ಬ್ಯಾಡ್ಮಿಂಟನ್ ಆಟಗಾರ ಅಜಯ್ ಜಯರಾಮ್ ಇಂದು ನಡೆಯಲಿರುವ ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಫೈನಲ್‌ನಲ್ಲಿ ಪ್ರಶಸ್ತಿ ಜಯಿಸುವ ವಿಶ್ವಾಸದಲ್ಲಿದ್ದಾರೆ. ಇಂಡೋನೇಷ್ಯಾದ ಶೆಸರ್ ಹಿರೇನ್ ರುಸ್ತಾವಿಟೊ ಎದುರು ಕಾದಾಡಲಿರುವ ಜಯರಾಮ್, ಋತುವಿನಲ್ಲಿ ಮೊಟ್ಟಮೊದಲ ಪ್ರಶಸ್ತಿಯನ್ನು ಎದುರುನೋಡುತ್ತಿದ್ದಾರೆ. ಕಳೆದ ವಾರ ಪಿ ವಿ ಸಿಂಧು ವಿಶ್ವ ಬ್ಯಾಡ್ಮಿಂಟನ್‌ ಫೈನಲ್‌ನಲ್ಲಿ ಸ್ಪೇನ್ ಆಟಗಾರ್ತಿ ಕೆರೊಲಿನಾ ಮರಿನ್‌ಗೆ ಮಣಿದ ನಿಮಿತ್ತ ಭಾರತಕ್ಕೆ ಚಿನ್ನದ ಪದಕ ಕೈತಪ್ಪಿಹೋಯಿತು. ಹೀಗಾಗಿ, ಅಜಯ್ ಜಯರಾಮ್ ಅಪಾಯಕಾರಿ ಆಟಗಾರ ರುಸ್ತಾವಿಟೊ ವಿರುದ್ಧ ಎಚ್ಚರಿಕೆಯಿಂದ ಹೋರಾಟ ನಡೆಸಲು ಸಜ್ಜಾಗಿದ್ದಾರೆ.

ಲಾರ್ಡ್ಸ್ ಟೆಸ್ಟ್‌ನಲ್ಲಿ ಪುಟಿದೇಳಲು ವಿರಾಟ್ ಪಡೆ ಸನ್ನಾಹ

ಮಳೆಬಾಧಿತ ಲಾರ್ಡ್ಸ್ ಟೆಸ್ಟ್ ಪಂದ್ಯ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಎರಡನೇ ದಿನದಂದು ಭಾರತವನ್ನು ೧೦೭ ರನ್‌ಗಳಿಗೆ ಕಟ್ಟಿಹಾಕಿದ ಇಂಗ್ಲೆಂಡ್, ಮೊದಲ ಇನ್ನಿಂಗ್ಸ್‌ನಲ್ಲಿ ಸವಾಲಿನ ಮೊತ್ತದತ್ತ ಸಾಗಿದೆ. ಮಂದಬೆಳಕಿನ ನಿಮಿತ್ತ ನಿಗದಿತ ಸಮಯಕ್ಕೂ ಮುನ್ನ ಮುಗಿದ ಮೂರನೇ ದಿನದಾಟದ ಅಂತ್ಯಕ್ಕೆ ಇಂಗ್ಲೆಂಡ್ ೮೧ ಓವರ್‌ಗಳಲ್ಲಿ ೬ ವಿಕೆಟ್ ನಷ್ಟಕ್ಕೆ ೨೫೭ ರನ್ ಗಳಿಸಿತ್ತು. ಕ್ರಿಸ್ ವೋಕ್ಸ್ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಿಸಿದ ಚೊಚ್ಚಲ  ಶತಕವು ಇಂಗ್ಲೆಂಡ್ ಇನ್ನಿಂಗ್ಸ್‌ಗೆ ನವಚೈತನ್ಯ ತಂದಿತು. ೧೨೦ ರನ್ ಗಳಿಸಿರುವ ವೋಕ್ಸ್, ಸ್ಯಾಮ್ ಕರನ್ (೨೨) ಜತೆಗೆ ಔಟಾಗದೆ ಕ್ರೀಸ್‌ನಲ್ಲಿದ್ದಾರೆ. ಉಳಿದಿರುವ ನಾಲ್ಕು ವಿಕೆಟ್‌ಗಳನ್ನು ಗಳಿಸಿ ಎರಡನೇ ಇನ್ನಿಂಗ್ಸ್‌ನಲ್ಲಿ ಪುಟಿದೇಳಲು ಭಾರತ ತಂಡ ತವಕಿಸುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More