ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಲೇಬೇಕಾದ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸುದ್ದಿಗಳ ಒಂದು ನೋಟ

ರಾಜಕೀಯ ಜಟಾಪಟಿಗೆ ಕಾರಣವಾದ ಏರ್‌ ಶೋ ಸ್ಥಳಾಂತರ ವಿವಾದ

ಏರ್‌ ಶೋ ಅನ್ನು ಬೆಂಗಳೂರಿನಿಂದ ಉತ್ತರ ಪ್ರದೇಶದ ಲಖನೌಗೆ ಸ್ಥಳಾಂತರಿಸಲಾಗುತ್ತದೆ ಎಂಬ ವಿಚಾರ ರಾಜಕೀಯ ಸ್ವರೂಪ ಪಡೆದುಕೊಂಡಿದ್ದು, ಕಾಂಗ್ರೆಸ್‌-ಜೆಡಿಎಸ್‌ ಪಕ್ಷಗಳು ಬಿಜೆಪಿ ವಿರುದ್ಧ ತಿರುಗಿಬಿದ್ದಿವೆ. “ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೊಡ್ಡ ರಾಜ್ಯವಾದ ಉತ್ತರ ಪ್ರದೇಶಕ್ಕೆ ಶೋ ಸ್ಥಳಾಂತರಿಸಲಾಗಿದೆ,” ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. “ರಾಜ್ಯದ ಹಿತಾಸಕ್ತಿಯ ಬಗ್ಗೆ ಮಾತನಾಡುವ ಬಿಜೆಪಿ ನಾಯಕರು ಏರ್‌ ಶೋ ಬೆಂಗಳೂರಿನಲ್ಲಿ ನಡೆಯುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು,” ಎಂದು ಜಲಸಂಪನ್ಮೂಲ ಸಚಿವ ಡಿ ಕೆ ಶಿವಕುಮಾರ್‌ ಆಗ್ರಹಿಸಿದ್ದಾರೆ. ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಆರ್‌ ಅಶೋಕ್‌, “ಏರ್‌ ಶೋಗೆ ಸಂಬಂಧಿಸಿದಂತೆ ಕೇಂದ್ರ ಸಚಿವ ಅನಂತಕುಮಾರ್‌ ಅವರ ಜೊತೆ ಚರ್ಚೆ ನಡೆಸಿದ್ದು, ಸಂಪೂರ್ಣ ಮಾಹಿತಿ ಪಡೆದು ಮಾತನಾಡುತ್ತೇನೆ,” ಎಂದಿದ್ದಾರೆ.

ಕೆ-ಶಿಪ್‌ ಸ್ಥಳಾಂತರಕ್ಕೆ ಅವಕಾಶ ಕೊಡಲ್ಲ: ರಮೇಶ ಜಾರಕಿಹೊಳಿ

ಬೆಳಗಾವಿಯಲ್ಲಿದ್ದ ಕರ್ನಾಟಕ ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯ (ಕೆ-ಶಿಪ್‌) ವಿಭಾಗ ಹಾಗೂ ಉಪವಿಭಾಗ ಕಚೇರಿಗಳನ್ನು ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ಹಾಸನಕ್ಕೆ ಸ್ಥಳಾಂತರಿಸಲು ಮುಂದಾಗಿರುವುದು ಸಮ್ಮಿಶ್ರ ಸರ್ಕಾರದಲ್ಲಿ ಭಿನ್ನಮತಕ್ಕೆ ಕಾರಣವಾಗುವ ಸಾಧ್ಯತೆ ಇದೆ. ರೇವಣ್ಣ ಅವರ ನಡೆ ತಪ್ಪು ಎಂದು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದ್ದಾರೆ. “ಕಳೆದ ಮೂರು ತಿಂಗಳಿಂದಲೂ ಕೆ-ಶಿಪ್‌ ಕಚೇರಿ ಸ್ಥಳಾಂತರಿಸುವ ಚರ್ಚೆ ಇತ್ತು. ನಾವು ಅದನ್ನು ತಡೆದಿದ್ದೆವು. ಈಗ ಸ್ಥಳಾಂತರ ಮಾಡಲಾಗಿದೆ. ಅವುಗಳನ್ನು ಬೆಳಗಾವಿಯಲ್ಲೇ ಉಳಿಸಿಕೊಳ್ಳಲು ಯತ್ನಿಸಲಾಗುವುದು,” ಎಂದು ತಿಳಿಸಿದ್ದಾರೆ. ನಗರ ಸ್ಥಳೀಯ ಸಂಸ್ಥೆ ಚುನಾವಣೆ ನಂತರ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ವಾಲ್ಮೀಕಿ ಸಮಾಜದ ಮತ್ತಿಬ್ಬರಿಗೆ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಲು ದೆಹಲಿಗೆ ತೆರಳಿದ್ದಾಗಿ ಅವರು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಪ್ರಿಯಕೃಷ್ಣ ಸ್ಪರ್ಧೆ?

ಬೆಂಗಳೂರಿನ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್‌ನ ಪ್ರಿಯಕೃಷ್ಣ ಸ್ಪರ್ಧಿಸುವ ಸಾಧ್ಯತೆ ಇದೆ. ಬಸವನಗುಡಿ, ವಿಜಯನಗರ, ಪದ್ಮನಾಭನಗರ, ಜಯನಗರ ಸೇರಿದಂತೆ ೮ ವಿಧಾನಸಭಾ ಕ್ಷೇತ್ರಗಳನ್ನು ಬೆಂಗಳೂರು ದಕ್ಷಿಣ ಕ್ಷೇತ್ರ ಹೊಂದಿದೆ. ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕೇಂದ್ರ ಸಚಿವ ಅನಂತ್‌ಕುಮಾರ್‌ ಕಣಕ್ಕಿಳಿಯುವುದು ನಿಚ್ಚಳವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೋವಿಂದರಾಜನಗರದಲ್ಲಿ ಸ್ಪರ್ಧಿಸಿ ಬಿಜೆಪಿಯ ವಿ ಸೋಮಣ್ಣ ಅವರ ಎದುರು ಪ್ರಿಯಕೃಷ್ಣ ಪರಾಭವಗೊಂಡಿದ್ದಾರೆ. ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿಯಿಂದ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಬಹುದು ಎಂದು ಪ್ರಿಯಕೃಷ್ಣ ನಂಬಿದ್ದು, ಈ ಸಂಬಂಧ ಈಗಾಗಲೇ ಇಲ್ಲಿನ ಶಾಸಕರ ಜೊತೆ ಚರ್ಚೆ ಆರಂಭಿಸಿದ್ದಾರೆ ಎನ್ನಲಾಗಿದೆ. ಪ್ರಿಯಕೃಷ್ಣ ಅವರು ಕಾಂಗ್ರೆಸ್‌ ಶಾಸಕ ಎಂ ಕೃಷ್ಣಪ್ಪ ಅವರ ಪುತ್ರ.

ಸನಾತನ ಸಂಸ್ಥೆ ನಿಷೇಧಕ್ಕೆ ಅಶೋಕ್‌ ಚೌಹಾಣ್ ಆಗ್ರಹ

ಸನಾತನ ಸಂಸ್ಥೆಯ ಜೊತೆ ಗುರುತಿಸಿಕೊಂಡಿದ್ದ ವೈಭವ್‌ ರಾವತ್‌ ಅವರ ಮನೆಯಲ್ಲಿ ೨೦ಕ್ಕೂ ಹೆಚ್ಚು ಬಾಂಬ್‌ ಹಾಗೂ ೫೦ ಬಾಂಬ್‌ ತಯಾರಿಸುವಷ್ಟು ಕಚ್ಚಾ ಸಾಮಗ್ರಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ (ಎಟಿಸಿ)‌ ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾವತ್‌ ಮತ್ತು ಮತ್ತಿಬ್ಬರನ್ನು ಬಂಧಿಸಲಾಗಿದೆ. “ಲೋಕಸಭಾ ಚುನಾವಣೆಯಲ್ಲಿ ಗಮನದಲ್ಲಿಟ್ಟುಕೊಂಡು ಧ್ರುವೀಕರಣ ತಂತ್ರ ನಡೆಸಲಾಗಿದ್ದು, ಜಾತ್ಯತೀತ ಶಕ್ತಿಗಳನ್ನು ಒಡೆಯುವ ಹುನ್ನಾರ ನಡೆದಿದೆ. ಆದ್ದರಿಂದ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕು,” ಎಂದು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಅಶೋಕ್‌ ಚೌಹಾಣ್‌‌ ಆಗ್ರಹಿಸಿದ್ದಾರೆ. ಪತ್ರಕರ್ತೆ ಗೌರಿ ಲಂಕೇಶ್‌ ಹತ್ಯೆ ಆರೋಪದಲ್ಲೂ ಸನಾತನ ಸಂಸ್ಥೆ ಕೇಳಿಬಂದಿದೆ. ಆದರೆ, ಇದನ್ನು ಸಂಸ್ಥೆ ನಿರಾಕರಿಸಿದೆ.

ಲೋಕಸಭಾ ಮಾಜಿ ಸ್ಪೀಕರ್‌ ಸೋಮನಾಥ್ ಚಟರ್ಜಿ ಆರೋಗ್ಯ ಸ್ಥಿತಿ ಗಂಭೀರ

ಲೋಕಸಭಾ ಮಾಜಿ ಸ್ಪೀಕರ್‌ ಸೋಮನಾಥ್‌ ಚಟರ್ಜಿ ಅವರ ಆರೋಗ್ಯ ಸ್ಥಿತಿ ವಿಷಮಿಸಿದೆ. ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಚಟರ್ಜಿ ಅವರಿಗೆ ಕೃತಕ ಉಸಿರಾಟ ವ್ಯವಸ್ಥೆ ಮಾಡಲಾಗಿದ್ದು, ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ. ಚಟರ್ಜಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟದ್ದರಿಂದ ಆಗಸ್ಟ್‌ ೧೦ರಂದು ಅವರನ್ನು ಮತ್ತೊಮ್ಮೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಾರತದಲ್ಲಿ ಸುದೀರ್ಘ ಅವಧಿಗೆ ಸಂಸದರಾಗಿ ಕಾರ್ಯನಿರ್ವಹಿಸಿರುವ ಹೆಗ್ಗಳಿಕೆ ಹೊಂದಿರುವ ೮೯ ವರ್ಷದ ಚಟರ್ಜಿ ಅವರು ಈಚೆಗೆ ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ೧೦ ಬಾರಿ ಲೋಕಸಭಾ ಸದಸ್ಯರಾಗಿರುವ ಅವರು ಪ್ರಸಕ್ತ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ೨೦೦೪-೦೯ರ ವರೆಗೆ ಲೋಕಸಭಾ ಸ್ಪೀಕರ್‌ ಆಗಿದ್ದ ಚಟರ್ಜಿ, ೧೯೬೮ರಲ್ಲಿ ಸಿಎಐ (ಎಂ) ಸೇರ್ಪಡೆಯಾಗಿದ್ದರು. ೨೦೦೮ರಲ್ಲಿ ಅವರನ್ನು ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಸಿಪಿಐ (ಎಂ) ಉಚ್ಛಾಟಿಸಿತ್ತು.

ಐತಿಹಾಸಿಕ ಹುಸೈನಿವಾಲ ಸೇತುವೆ ಲೋಕಾರ್ಪಣೆ

ಪಂಜಾಬ್ ಗಡಿಯಲ್ಲಿರುವ ಐತಿಹಾಸಿಕ 250 ಅಡಿ ಅದ್ದದ ಹುಸೈನಿವಾಲ ಸೇತುವೆಯನ್ನು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮ್ ಇಂದು ಲೋಕಾರ್ಪಣೆ ಮಾಡಿದರು. 1971ರ ಭಾರತ ಮತ್ತು ಪಾಕಿಸ್ತಾನ ನಡುವಿನ ಯುದ್ಧದ ಸಂದರ್ಭದಲ್ಲಿ ನಾಶವಾಗಿದ್ದ ಹುಸೈನಿವಾಲ ಸೇತುವೆ, ಫಿರೋಜ್‌ಪುರವನ್ನು ಫಿರೋಜ್‌ಪುರ–ಲಾಹೋರ್‌ ಹೆದ್ದಾರಿಯಲ್ಲಿ ಸಂಪರ್ಕಿಸುತ್ತದೆ. ಎಡಿಜಿಪಿ ವಾಹನದಲ್ಲಿ ಹುಸೈನಿವಾಸ ಸೇತುವೆಯ ಮೇಲೆ ಸಂಚಾರ ಮಾಡಿದ ಸೀತಾರಾಮನ್, ಅವಧಿಗಿಂತ ಮೊದಲೇ ನಿರ್ಮಾಣ ಕಾರ್ಯ ಪೂರ್ಣಗೊಂಡಿದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಯಾವೊಬ್ಬ ಭಾರತೀಯನೂ ದೇಶ ಬಿಡುವ ಅಗತ್ಯವಿಲ್ಲ: ಪ್ರಧಾನಿ

ಯಾವೊಬ್ಬ ಭಾರತೀಯನೂ ದೇಶ ಬಿಡುವ ಅಗತ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತ, ಅಸ್ಸಾಂ ಎನ್ ಆರ್ ಸಿ ವಿವಾದಕ್ಕೆ ಉತ್ತರಿಸಿದ ಅವರು, “ಅಸ್ಸಾಂ ಜನರ ಆತಂಕ ನಿವಾರಿಸಲು ಎಲ್ಲ ರೀತಿಯ ಕ್ರಮ ಕೈಗೊಳ್ಳಲಾಗುವುದು. ಅಮಾಯಕರ ಮೇಲಿನ ಹಲ್ಲೆ-ಹತ್ಯೆ, ಮಹಿಳೆಯರ ಮೇಲಿನ ದೌರ್ಜನ್ಯವವನ್ನು ಸಹಿಸಲು ಸಾಧ್ಯವಿಲ್ಲ. ಈ ವಿಚಾರದಲ್ಲಿ ರಾಜಕೀಯ ಮಾಡದೆ ಶಾಂತಿ ಮತ್ತು ಏಕತೆಯನ್ನು ಕಾಪಾಡುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಿದೆ,” ಎಂದಿದ್ದಾರೆ. ಇದೇ ವೇಳೆ ಲೋಕಸಭೆಯಲ್ಲಿ ತನ್ನನ್ನು ಅಪ್ಪಿಕೊಂಡ ರಾಹುಲ್ ಗಾಂಧಿ ಕ್ರಮಕ್ಕೆ ಉತ್ತರಿಸಿದ ಅವರು, “ಅವರ ಅಪ್ಪುಗೆ ಬಾಲಿಶತನವೇ, ಅಲ್ಲವೇ ಎಂಬುದು ನಿಮ್ಮ ನಿರ್ಧಾರಕ್ಕೆ ಬಿಟ್ಟಿದ್ದು, ಈ ಕುರಿತು ಅನುಮಾನವಿದ್ದರೆ, ಅವರು ಕಣ್ಣು ಹೊಡೆದ ದೃಶ್ಯವನ್ನು ಗಮನಿಸಿ,” ಎಂದಿದ್ದಾರೆ.

ಲಾರ್ಡ್ಸ್‌ನಲ್ಲಿ ದಾಖಲೆ ಬರೆದ ವೇಗಿ ಜೇಮ್ಸ್ ಆಂಡರ್ಸನ್

ಮಳೆಯಾಟಕ್ಕೆ ಸಿಲುಕಿರುವ ಭಾರತ ಮತ್ತು ಇಂಗ್ಲೆಂಡ್ ನಡುವಣದ ಎರಡನೇ ಟೆಸ್ಟ್ ಪಂದ್ಯದಲ್ಲಿ ವೇಗಿ ಜೇಮ್ಸ್ ಆಂಡರ್ಸನ್ ಹೊಸದೊಂದು ದಾಖಲೆ ಬರೆದಿದ್ದಾರೆ. ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ೧೦೦ ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್ ಎಂದೆನಿಸಿಕೊಂಡಿದ್ದಾರೆ ಜೇಮ್ಸ್. ಎರಡನೇ ಇನ್ನಿಂಗ್ಸ್‌ನಲ್ಲಿ ಮುರಳಿ ವಿಜಯ್ (೦) ವಿಕೆಟ್ ಪಡೆಯುತ್ತಿದ್ದಂತೆ ಆಂಡರ್ಸನ್ ಈ ಅವಿಸ್ಮರಣೀಯ ದಾಖಲೆ ಬರೆದರು. ಮುತ್ತಯ್ಯ ಮುರಳೀಧರನ್ ಬಳಿಕ ನಿರ್ದಿಷ್ಟ ಕ್ರೀಡಾಂಗಣದಲ್ಲಿ ೧೦೦ ವಿಕೆಟ್ ಪಡೆದ ಎರಡನೇ ಬೌಲರ್ ಜೇಮ್ಸ್ ಆಂಡರ್ಸನ್. ಅಂದಹಾಗೆ, ಪಂದ್ಯದ ನಾಲ್ಕನೇ ದಿನದಂದು ೮೮.೧ ಓವರ್‌ಗಳಲ್ಲಿ ೭ ವಿಕೆಟ್ ನಷ್ಟಕ್ಕೆ ೩೯೬ ರನ್ ಗಳಿಸಿ ತನ್ನ ಮೊದಲ ಇನ್ನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ೧೭ ಓವರ್‌ಗಳಾದಾಗ ಭಾರತ ೨ ವಿಕೆಟ್ ನಷ್ಟಕ್ಕೆ ೩೨ ರನ್ ಗಳಿಸಿತ್ತಲ್ಲದೆ, ಪೂಜಾರ ಮತ್ತು ಅಜಿಂಕ್ಯ ರಹಾನೆ ಕ್ರಮವಾಗಿ ೯ ಮತ್ತು ೧೧ ರನ್ ಗಳಿಸಿ ಕ್ರೀಸ್‌ನಲ್ಲಿದ್ದರು.

ವಿಯೆಟ್ನಾಂ ಓಪನ್‌ ಫೈನಲ್‌ನಲ್ಲಿ ಅಜಯ್‌ಗೆ ನಿರಾಸೆ

ವಿಯೆಟ್ನಾಂ ಓಪನ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಚಿನ್ನದ ಪದಕ ಗೆಲ್ಲಬೇಕೆಂಬ ಅಜಯ್ ಜಯರಾಮ್ ಬಯಕೆ ಕೈಗೂಡಲಿಲ್ಲ. ಹೊ ಚಿ ಮಿನ್‌ ಸಿಟಿಯಲ್ಲಿ ಮುಕ್ತಾಯ ಕಂಡ ಪಂದ್ಯಾವಳಿಯಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಜಯ್ ಜಯರಾಮ್ ರಜತ ಪದಕಕ್ಕೆ ತೃಪ್ತರಾದರು. ಇಂಡೋನೇಷಿಯಾ ಆಟಗಾರ ಶೆಸಾರ್ ಹಿರೆನ್ ರುಸ್ಟಾವಿಟೊ ವಿರುದ್ಧದ ಹಣಾಹಣಿಯಲ್ಲಿ ಅಜಯ್ ೧೪-೨೧, ೧೦-೨೧ರ ಎರಡು ನೇರ ಗೇಮ್‌ಗಳಲ್ಲಿ ಪರಾಭವಗೊಂಡರು. ಆಕ್ರಮಣಕಾರಿ ಆಟವಾಡಿದ ರುಸ್ಟಾವಿಟೊ ಕೇವಲ ೨೮ ನಿಮಿಷಗಳಲ್ಲೇ ಭಾರತೀಯ ಆಟಗಾರನ ಎದುರು ಪ್ರಭುತ್ವ ಮೆರೆದರು.

ರೋಜರ್ ಕಪ್ ಟೆನಿಸ್ ಪ್ರಶಸ್ತಿ ಸುತ್ತಿಗೆ ದಾಪುಗಾಲಿಟ್ಟ ನಡಾಲ್

ವಿಶ್ವದ ನಂ.೧ ಟೆನಿಸ್ ಆಟಗಾರ ರಾಫೇಲ್ ನಡಾಲ್ ರೋಜರ್ಸ್ ಕಪ್ ಟೆನಿಸ್ ಪಂದ್ಯಾವಳಿಯ ಫೈನಲ್‌ಗೆ ಕಾಲಿಟ್ಟಿದ್ದಾರೆ. ಕರೆನ್ ಕಚಾನೊವ್ ವಿರುದ್ಧ ನಡೆದ ಸೆಮಿಫೈನಲ್‌ನಲ್ಲಿ ನಡಾಲ್, ೭-೬ (೭/೩) ಹಾಗೂ ೬-೪ ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಈ ಗೆಲುವಿನೊಂದಿಗೆ ನಡಾಲ್, ವೃತ್ತಿಬದುಕಿನಲ್ಲಿ ೧೧೬ನೇ ಎಟಿಪಿ ಫೈನಲ್‌ನಲ್ಲಿ ಆಡುವ ಅರ್ಹತೆ ಪಡೆದರು. ಪ್ರಶಸ್ತಿ ಸುತ್ತಿನಲ್ಲಿ ಭಾನುವಾರವಷ್ಟೇ ೨೦ನೇ ವಸಂತಕ್ಕೆ ಕಾಲಿರಿಸಿದ ಗ್ರೀಸ್‌ ದೇಶದ ಯುವ ಆಟಗಾರ ಸ್ಟೆಫಾನಸ್ ಸಿಸಿಪಾಸ್ ವಿರುದ್ಧ ನಡಾಲ್ ಅಂತಿಮ ಸುತ್ತಿನಲ್ಲಿ ಕಾದಾಡಲಿದ್ದಾರೆ. ಈ ಬಾರಿಯ ವಿಂಬಲ್ಡನ್ ರನ್ನರ್‌ಅಪ್ ದಕ್ಷಿಣ ಆಫ್ರಿಕಾದ ಕೆವಿನ್ ಆಂಡರ್ಸನ್ ವಿರುದ್ಧ ೬-೭, ೬-೪, ೭-೬ ಸೆಟ್‌ಗಳಿಂದ ಸಿಸಿಪಾಸ್ ಜಯ ಸಾಧಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More