ಮಾಜಿ ಸಚಿವ ಎಂ ಪಿ ಪ್ರಕಾಶ್ ಮನೆಯಲ್ಲಿ ನೈಪಾಲ್‌ ಉಪಾಹಾರ ಸವಿದಿದ್ದರು ಗೊತ್ತೇ?‌

ನೊಬೆಲ್‌ ಪುರಸ್ಕೃತ ಸಾಹಿತಿ ನೈಪಾಲ್ ಭಾನುವಾರ‌ ನಿಧನರಾಗಿದ್ದಾರೆ. ಹಿಂದೆ, ಎಂ ಪಿ ಪ್ರಕಾಶ್‌ ಅವರು ಸಚಿವರಾಗಿದ್ದಾಗ ನೈಪಾಲ್‌ ಅವರನ್ನು ತಮ್ಮ ಮನೆಗೆ ಉಪಾಹಾರಕ್ಕೆ ಆಹ್ವಾನಿಸುತ್ತಾರೆ. ಈ ಸಂದರ್ಭವನ್ನು ನೈಪಾಲ್‌, ‘ಇಂಡಿಯಾ: ಎ ಮಿಲಿಯನ್‌ ಮ್ಯುಟನೀಸ್‌ ನೌ’ ಕೃತಿಯಲ್ಲಿ ಸ್ವಾರಸ್ಯಕರವಾಗಿ ವಿವರಿಸಿದ್ದಾರೆ

ಕಾಂಗ್ರೆಸೇತರ ಜನತಾ ಸರ್ಕಾರದಲ್ಲಿ ಸಚಿವರಾಗಿದ್ದ ಎಂ ಪಿ ಪ್ರಕಾಶ್‌ ಅವರು ಭಾನುವಾರ ಬೆಳಿಗ್ಗೆ ಉಪಾಹಾರಕ್ಕೆ ಆಹ್ವಾನಿಸಿದ್ದರು. ಹೋಟೆಲ್‌ ಪಕ್ಕದಲ್ಲೇ ಪ್ರಕಾಶ್ ಅವರ ಮನೆ ಇದ್ದುದರಿಂದ ನಾನು ಮತ್ತು ದೇವಯ್ಯ ಒಟ್ಟಾಗಿ ನಡೆದೊಯ್ಯಲು ನಿರ್ಧರಿಸಿದೆವು. ಆದರೆ, ಸ್ಕೂಟರ್ ಮತ್ತು ಕಾರು ಹೊರಸೂಸುತ್ತಿದ್ದ ಹೊಗೆ, ವಾಹನ ಸಂಚಾರದಿಂದ ಏಳುತ್ತಿದ್ದ ಧೂಳು ನಮ್ಮನ್ನು ಹೈರಾಣಾಗಿಸಿಬಿಟ್ಟಿತು. ಸಚಿವರ ಮನೆ ತಲುಪುವ ವೇಳೆಗೆ ನಾವು ತೊಟ್ಟಿದ್ದ ಬಟ್ಟೆ, ಶೂ, ಕನ್ನಡಕ, ಚರ್ಮ, ತಲೆಗೂದಲು ಎಲ್ಲವೂ ಧೂಳಿನಿಂದ ಆವೃತವಾಗಿತ್ತು.

ಅಂದಹಾಗೆ, ಪ್ರಕಾಶ್‌ ಅವರು ಅಪಾರ ಜನಪ್ರಿಯತೆ ಗಳಿಸಿದ್ದ ನಾಯಕರಲ್ಲ. ಆದರೆ, ಸುಶಿಕ್ಷಿತ ಮತ್ತು ಸಮರ್ಥ ಸಚಿವ ಎಂದು ಹೆಸರು ಗಳಿಸಿದ್ದ ಗಂಭೀರ ರಾಜಕಾರಣಿಯಾಗಿದ್ದು, ಎಲ್ಲದರಿಂದಲೂ ಅಂತರ ಕಾಯ್ದುಕೊಳ್ಳಬಲ್ಲವರಾಗಿದ್ದರು. ರಾಜ್ಯ ರಾಜಕಾರಣದಲ್ಲಿ ಪ್ರಕಾಶ್‌ರಂಥವರು ವಿರಳ ಎಂದೇ ಹೇಳಬಹುದು. ಸಚಿವರಿಗಾಗಿ ನಿರ್ಮಿಸಲಾಗಿದ್ದ ಎರಡು ಮಹಡಿಯ ಕಟ್ಟಡದಲ್ಲಿ ಪ್ರಕಾಶ್‌ ಉಳಿದುಕೊಂಡಿದ್ದರು. ಆದರೆ, ಉಳಿದವರ ಮನೆಯ ಬಳಿ ಇರುತ್ತಿದ್ದಷ್ಟು ಜನಜಂಗುಳಿ ಅಲ್ಲಿರಲಿಲ್ಲ. ಮನೆಯ ಮುಂದೆ ಹಲವು ಕಾರುಗಳನ್ನು ಪಾರ್ಕ್‌ ಮಾಡಲಾಗಿತ್ತು. ಸಾಕಷ್ಟು ಭದ್ರತಾ ಸಿಬ್ಬಂದಿ ಇದ್ದರು. ಕಾರುಗಳ ಪಾರ್ಕಿಂಗ್ ವಿಶೇಷತೆಯನ್ನು ‌ಸಾರುತ್ತಿತ್ತು. ಅಲ್ಲಿ ಪಾರ್ಕ್‌ ಮಾಡಿದ್ದ ಕಾರುಗಳು ಸಚಿವರಿಗೆ ಸಮೀಪವರ್ತಿಗಳಿಗೆ ಸಂಬಂಧಿಸಿದ್ದವು ಎಂಬುದನ್ನು ಸೂಚಿಸುತ್ತಿದ್ದವು. ನಾನು ಮತ್ತು ದೇವಯ್ಯ ಸಹ ಅದೇ ವಿಶೇಷ ಮಂದಿಯ ವಿಭಾಗದಲ್ಲಿದ್ದೆವು.

ನಮ್ಮ ಆಗಮನದ ವಿಷಯ ತಿಳಿಯುತ್ತಿದ್ದಂತೆಯೇ ಹೆಚ್ಚು ಹೊತ್ತು ನಮ್ಮನ್ನು ಕಾಯಿಸದ ಪ್ರಕಾಶ್‌ ಅವರು ತಮ್ಮ ಗುಣಕ್ಕೆ ತಕ್ಕಂತೆ, ಒಳಕೋಣೆಯಿಂದ ಬಂದು ನಮ್ಮನ್ನು ಸ್ವಾಗತಿಸಿದರು. ಸರಳ, ಸಜ್ಜನರಾದ ಸುಮಾರು ೪೦ ವಯೋಮಾನದಲ್ಲಿದ್ದ ಪ್ರಕಾಶ್‌ ಅವರು ತಕ್ಷಣ ನಮ್ಮನ್ನು ದೊಡ್ಡ ಡೈನಿಂಗ್‌ ಟೇಬಲ್‌ ಹೊಂದಿದ್ದ ಉಪಾಹಾರ ಗೃಹಕ್ಕೆ ಕರೆದೊಯ್ದರು. ಕುರ್ಚಿಯಲ್ಲಿ ತಳ ಊರುತ್ತಿದ್ದಂತೆ ನೀಲಿ ಸೀರೆ ಉಟ್ಟಿದ್ದ ಪ್ರಕಾಶ್‌ ಅವರ ಪತ್ನಿ ನಮಗೆ ಉಣಬಡಿಸಲಾರಂಭಿಸಿದರು.

ಉಪಾಹಾರ ಸೇವಿಸುತ್ತಲೇ ಬೆಳಿಗ್ಗೆ ಸಚಿವ ಪ್ರಕಾಶ್‌ ಭೇಟಿ ಮಾಡಿದ ಜನರ ಬಗ್ಗೆ ವಿಚಾರಿಸಿದೆ; ವಿಶೇಷವಾಗಿ, ನಾವು ಮನೆ ಪ್ರವೇಶಿಸುವ ಸಂದರ್ಭದಲ್ಲಿ ಬಾಗಿಲ ಬಳಿ ನಿಂತಿದ್ದ ವ್ಯಕ್ತಿಯ ಬಗ್ಗೆ. ತಾನು ಭೇಟಿ ಮಾಡಿದ ಹಲವರ ಪೈಕಿ ಪ್ರಕಾಶ್‌ ಅವರು ಗ್ರಾಮಲೆಕ್ಕಿಗನ ವಿಷಯ ಪ್ರಸ್ತಾಪಿಸಿದರು. ಐದು ಸಾವಿರ ರುಪಾಯಿ ದುರ್ಬಳಕೆ ಮಾಡಿಕೊಂಡ ಆರೋಪಕ್ಕೆ ಗುರಿಯಾಗಿ, ಸೇವೆಯಿಂದ ವಜಾಗೊಂಡಿರುವ ವ್ಯಕ್ತಿಯ ಬಗ್ಗೆ ಅವರು ಮಾತನಾಡಿದರು. ಪ್ರಕಾಶ್‌ ಅವರನ್ನು ಕಾಣಲೆಂದೇ ಆತ ಸುಮಾರು ೨೦೦ ಮೈಲಿ ದೂರದಿಂದ ಬೆಂಗಳೂರಿಗೆ ಬಂದಿದ್ದ. ಆತನ ಜೊತೆ ಪ್ರಕಾಶ್‌ ೮-೯ ನಿಮಿಷ ಮಾತುಕತೆ ನಡೆಸಿದ್ದರು. ಮಾತಿನ ಸಂದರ್ಭ ಆತ ತಾನು ದುರ್ಬಳಕೆ ಮಾಡಿಕೊಂಡಿದ್ದ ಐದು ಸಾವಿರ ರುಪಾಯಿಯನ್ನು ಮರುಪಾವತಿಸಿರುವುದಾಗಿ ತಿಳಿಸಿದ್ದು, ಪುನಃ ತನ್ನನ್ನು ಸೇವೆಗೆ ಸೇರಿಸಿಕೊಳ್ಳಲು ನೆರವಾಗುವಂತೆ ಮನವಿ ಮಾಡಿದ್ದ. ಆದರೆ, ತಾನು ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ ಎಂದಿದ್ದ ಪ್ರಕಾಶ್‌, ಇಲಾಖಾ ತನಿಖೆಯ ಮೇಲೆ ಎಲ್ಲ ನಿರ್ಧಾರವಾಗುತ್ತದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದರಿಂದ ಆತ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಮತ್ತೆ ಊರಿಗೆ ತೆರಳುವಂತಾಗಿತ್ತು.

ಈ ನಡುವೆ, ಪ್ರಕಾಶ್‌ ಅವರ ಪತ್ನಿ ಪುರಿ ಮತ್ತಿತರ ತಿನಿಸುಗಳನ್ನು ಬಡಿಸುತ್ತಲೇ ಇದ್ದರು. ಪತ್ನಿಯ ಕೈರುಚಿ ಸವಿಯುತ್ತಲೇ ಪ್ರಕಾಶ್‌ ಅವರು, “ಇಲಾಖಾ ತನಿಖೆಯ ನಂತರ ಆತ ಪ್ರಕರಣವನ್ನು ಹೈಕೋರ್ಟ್‌ಗೆ ಕೊಂಡೊಯ್ಯುತ್ತಾನೆ,” ಎಂದರು. ಅದಕ್ಕೆ ನಾನು, “ಅವರಿಗೆ ಉದ್ಯೋಗ ದೊರೆಯುತ್ತದೆಯೇ?” ಎಂದೆ. ಅದಕ್ಕೆ ಅವರು, “ಇಲಾಖಾ ತನಿಖೆಯಲ್ಲಿ ಹೈಕೋರ್ಟ್‌ ತಾಂತ್ರಿಕ ಸಮಸ್ಯೆ ಪತ್ತೆಮಾಡಿದರೆ...” ಎಂದರು. ತಿನ್ನುತ್ತಲೇ ಚರ್ಚೆ ವಿಸ್ತರಿಸಿದ ದೇವಯ್ಯ, “ಹಲವು ಸಂದರ್ಭದಲ್ಲಿ ಅದು ಸಾಧ್ಯ,” ಎಂದರು. ತಾಂತ್ರಿಕ ದೋಷ ಕಂಡುಬಂದರೆ ಅಮಾನತಾಗಿರುವ ಉದ್ಯೋಗಿಗೆ ಸಂಬಳ, ಭತ್ಯೆ ಮರುಪಾವತಿಯಾಗುವುದಲ್ಲದೆ, ಆತ ಕೆಲಸಕ್ಕೆ ಮರುನೇಮಕಗೊಳ್ಳುತ್ತಾನೆ ಎಂದು ಪ್ರಕಾಶ್ ವಿವರಿಸಿದರು.

ಆತನ ಹಿನ್ನೆಲೆ ವಿಚಾರಿಸಿದಾಗ ಆತ ಕೃಷಿಕನ ಮಗನಾಗಿರಬಹುದು ಎಂಬ ಮಾಹಿತಿ ದೊರೆಯಿತು. ಸರ್ಕಾರಿ ಸೇವೆಯಲ್ಲಿ ತಿಂಗಳಿಗೆ ೧,೨೦೦ ರುಪಾಯಿ ವೇತನ ಸಿಗುತ್ತದೆ. ಇದೇ ಕಾರಣಕ್ಕಾಗಿ ಹೆಚ್ಚು ಜಮೀನು ಇಲ್ಲದ ಗ್ರಾಮೀಣ ಪ್ರದೇಶದ ಬಹುತೇಕ ಮಂದಿ ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಾರೆ. ಪ್ರಕರಣದಲ್ಲಿ ಆತನಿಗೆ ಸೋಲಾದರೆ ಆತ ಕೃಷಿಯನ್ನು ನಂಬಿ ಬದುಕು ಸಾಗಿಸುವುದು ಅನಿವಾರ್ಯ ಎಂಬುದು ತಿಳಿಯಿತು, ನಾನು ಮಾತನಾಡಿದ ವ್ಯಕ್ತಿಗೆ ೩೬ ವರ್ಷವಾಗಿದ್ದು, ಮೂವರು ಮಕ್ಕಳಿದ್ದಾರೆ. ಈತ ಪ್ರಕಾಶ್‌ ಅವರ ಕ್ಷೇತ್ರದ ಮತದಾರನಾಗಿದ್ದರಿಂದ ಅವರನ್ನು ಕಾಣಲು ಬಂದಿದ್ದ. ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಪ್ರಕಾಶ್‌ ಆಯ್ಕೆಯಾಗಿದ್ದರು. “ಬಳ್ಳಾರಿ ಭಾಗವು ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿದ್ದು, ಬೇಸಿಗೆಯಲ್ಲಿ ಅಲ್ಲಿ ಬಿಸಿಲು ಅತಿ ಹೆಚ್ಚಿರುತ್ತದೆ,” ಎಂದು ಪ್ರಕಾಶ್‌ ಹೇಳಿದರು. “ಎರಡು ವರ್ಷಗಳಲ್ಲಿ ಆತ, ಜನರು ಪಾವತಿಸಿದ ೫ ಸಾವಿರ ರುಪಾಯಿ ಆಸ್ತಿ ತೆರಿಗೆ ಹಣವನ್ನು ದುರ್ಬಳಕೆ ಮಾಡಿಕೊಂಡಿರಬಹುದು. ಜನರು ತೆರಿಗೆ ಪಾವತಿಸಿದ್ದಕ್ಕೆ ಪ್ರತಿಯಾಗಿ ಆತ ನಕಲಿ ರಸೀದಿಗಳನ್ನು ನೀಡಿ ಸಿಕ್ಕಿಬಿದ್ದಿದ್ದಾನೆ,” ಎಂದರು.

ಪ್ರಕಾಶ್‌ ಅವರ ಮನೆಯಲ್ಲಿ ಉಪಾಹಾರ ಸವಿಯುತ್ತಲೇ ಸಾಕಷ್ಟು ವಿಚಾರಗಳ ಚರ್ಚೆ ನಡೆಸಿ, ಇನ್ನೂ ಹೆಚ್ಚಿನ ಖಾಸಗಿತನಕ್ಕಾಗಿ ಸರ್ಕಾರಿ ಅತಿಥಿಗೃಹಕ್ಕೆ ತೆರಳುವ ನಿರ್ಧಾರವಾಯಿತು. ಮನೆಯಲ್ಲಿ ಹಲವರು ತಮ್ಮನ್ನು ನೋಡಲು ಬರುವುದರಿಂದ ಮಾತುಕತೆಗೆ ಅಡ್ಡಿಯಾಗಬಹುದು ಎಂಬುದು ಪ್ರಕಾಶ್‌ ಅವರ ನಿರ್ಧಾರಕ್ಕೆ ಕಾರಣವಾಗಿತ್ತು. ಅಷ್ಟೊತ್ತಿಗಾಗಲೇ ಪ್ರಕಾಶ್‌ ಅವರ ಮನೆಯ ಮುಂದೆ ಸಾಕಷ್ಟು ಮಂದಿ ಅಹವಾಲುಗಳನ್ನು ಹೊತ್ತು ತಂದಿದ್ದರು. ಸರ್ಕಾರಿ ಕಾರು ಚಾಲಕನ ಹುದ್ದೆಗೆ ಪ್ರಕಾಶ್‌ ಅವರ ಶಿಫಾರಸಿನ ಹೊರತಾಗಿಯೂ ಕೆಲಸ ಸಿಗದೆ ಇರುವುದನ್ನು ತಿಳಿಸಲು ಆತ ಅಲ್ಲಿಗೆ ಬಂದಿದ್ದ. ಈ ಸಂದರ್ಭದಲ್ಲಿ ಹೊರನಡೆಯುತ್ತಲೇ ಪ್ರಕಾಶ್‌ ಅವರು ಮೆಡಿಕಲ್‌ ಪ್ರೊಫೆಸರ್‌ ರೀತಿಯಲ್ಲಿ ಭಾಸವಾಗುತ್ತಿದ್ದರು. ಅಲ್ಲಿ ನೆರೆದಿದ್ದವರ ಕಷ್ಟ-ಸುಖಗಳನ್ನು ಕೇಳುತ್ತ ಸಹಾಯಕರಿಗೆ ಅವುಗಳನ್ನು ಪರಿಶೀಲಿಸುವಂತೆ ಸಲಹೆ ನೀಡುತ್ತಿದ್ದರು. ಈ ಸಂದರ್ಭದಲ್ಲಿ ಎದುರಾದ ವ್ಯಕ್ತಿಯೊಬ್ಬರು, ತನ್ನ ಪತ್ನಿಗೆ ಕ್ಯಾನ್ಸರ್‌ ಆಗಿ ಆಸ್ಪತ್ರೆಯಲ್ಲಿ ದಾಖಲಿಸಿದ್ದು, ಈಗ ಊರಿಗೆ ತೆರಳುವ ಬಸ್‌ ಪ್ರಯಾಣಕ್ಕೆ ೪೨ ರುಪಾಯಿ ಅಗತ್ಯವಿದೆ, ಸಹಾಯ ಮಾಡಲೇಬೇಕು ಎಂದು ಮಗುವನ್ನು ಬಗಲಲ್ಲಿ ಹೊತ್ತೇ ಅವರ ಕಾಲಿಗೆ ಎರಗಿದ್ದ. ಈ ವಿಚಾರವಾಗಿ ಅಂದು ಬೆಳಗ್ಗೆಯೇ ತನ್ನ ಸಿಬ್ಬಂದಿಗೆ ಆತನಿಗೆ ಒಂದಿಷ್ಟು ಹಣ ನೀಡುವಂತೆ ಪ್ರಕಾಶ್‌ ಆದೇಶಿಸಿದ್ದರು. ಎಲ್ಲರ ಸಮಸ್ಯೆಗಳನ್ನು ತಾಳ್ಮೆಯಿಂದಲೇ ಆಲಿಸಿದ ಪ್ರಕಾಶ್‌ ಅವರು ಸಲಹೆ, ಸೂಚನೆಗಳನ್ನು ನೀಡುತ್ತಲೇ ನಮ್ಮನ್ನು ಕಾರಿನ ಬಳಿ ಕರೆದುಕೊಂಡು ಬಂದರು. ಪ್ರಕಾಶ್‌ ಅವರ ಕಾರಿನಲ್ಲಿ, ಮತ್ತದೇ ಧೂಳುಮಯ ರಸ್ತೆಯಲ್ಲಿ ಸರ್ಕಾರದ ಅತಿಥಿ ಗೃಹ ತಲುಪಿದೆವು. ಅಲ್ಲಿಯೂ ಮನೆಯ ರೀತಿಯಲ್ಲಿಯೇ ಸಾಕಷ್ಟು ಮಂದಿ ಅವರನ್ನು ಸುತ್ತುವರಿದರು. ಈ ಸಂದರ್ಭದಲ್ಲಿ ಪ್ರಕಾಶ್‌ ಅವರ ಕಣ್ಣಿನಲ್ಲಿ ಕರ್ನಾಟಕ ನೋಡಲು ಆರಂಭಿಸಿದೆ. ಆನಂತರ ಅತಿಥಿಗೃಹ ಪ್ರವೇಸಿದ ನಂತರ ಭಾರತದಲ್ಲಿ ರಾಜಕೀಯ ಶಕ್ತಿ, ಅದರ ಬಳಕೆ ಮತ್ತು ರಾಜಕೀಯ ಶಕ್ತಿ ಪಡೆಯಲು ವ್ಯಕ್ತಿಯ ಅರ್ಹತೆಗಳೇನು? ಎಂದು ಪ್ರಕಾಶ್‌ ಅವರನ್ನು ಪ್ರಶ್ನಿಸಿದೆ.

ಇದನ್ನೂ ಓದಿ : ನೊಬೆಲ್‌ ಪುರಸ್ಕೃತ ಲೇಖಕ ವಿ ಎಸ್‌ ನೈಪಾಲ್‌ ನಿಧನ; ಲೇಖಕರ ನುಡಿನಮನ

ಇದಕ್ಕೆ ಪ್ರತಿಕ್ರಿಯಿಸಿದ ಪ್ರಕಾಶ್‌ ಅವರು ಭಾರತದ ರಾಜಕಾರಣದಲ್ಲಿ ಜಾತಿ ಪ್ರಮುಖ ಪಾತ್ರವಹಿಸುತ್ತದೆ ಎಂದರು. ರಾಜಕಾರಣದಲ್ಲಿ ಉಜ್ವಲ ಭವಿಷ್ಯ ಕಂಡುಕೊಳ್ಳಬೇಕಾದರೆ ಪ್ರಬಲ ಜಾತಿಗೆ ಸೇರಿದ ವ್ಯಕ್ತಿ ವರ್ಚಸ್ಸು ವೃದ್ಧಿಸಿಕೊಳ್ಳಬೇಕು, ವಿವಿಧ ಜಾತಿಗಳ ಮತ ಪಡೆಯುವುದು ಅಗತ್ಯವಾದ್ದರಿಂದ ಪಕ್ಷವೂ ಮುಖ್ಯವಾಗುತ್ತದೆ. ಅಧಿಕಾರದಲ್ಲಿರುವುದರಿಂದ ವೈಭವೋಪೇತ ಜೀವನ ನಡೆಸಬಹುದು. ಎಲ್ಲ ಕೆಲಸ ಕಾರ್ಯಗಳಿಗೂ ಒಬ್ಬೊಬ್ಬ ಸಹಾಯಕರಿರುತ್ತಾರೆ ಎಂದು ಭಾರತದ ರಾಜಕಾರಣದ ವಿವಿಧ ಮಗ್ಗಲುಗಳ ಕುರಿತು ಪ್ರಕಾಶ್‌ ಅವರ ಅನುಭವ, ಚರ್ಚೆಯ ಹೂರಣವನ್ನು ನೈಪಾಲ್‌ ಅವರು ತಮ್ಮ ಕೃತಿಯಲ್ಲಿ ದಾಖಲಿಸಿದ್ದಾರೆ.

ಎಂ ಪಿ ಪ್ರಕಾಶ್‌ ಮತ್ತು ತಮ್ಮ ನಡುವಿನ ಚರ್ಚೆಯ ಸಂದರ್ಭದಲ್ಲಿ ಟಿಬೆಟಿಯನ್ನರ ಧರ್ಮಗುರು ದಲೈ ಲಾಮಾ ತಂಡವು ಅತಿಥಿಗೃಹಕ್ಕೆ ಬರುವ ವಿಚಾರವನ್ನೂ ನೈಪಾಲ್‌ ಉಲ್ಲೇಖಿಸಿದ್ದಾರೆ. ಈ ಮಾಹಿತಿಯನ್ನು ಪ್ರಕಾಶ್‌ ಅವರೇ ತಮಗೆ ನೀಡಿದರು ಎಂದೂ ಹೇಳಿದ್ದಾರೆ. ಬಡವ-ಶ್ರೀಮಂತ, ರಾಜಕಾರಣಿ-ಮತದಾರ, ಅಧಿಕಾರ, ಮಾಧ್ಯಮಗಳ ಪಾತ್ರ, ಹೀಗೆ ಹಲವಾರು ವಿಚಾರಗಳ ಬಗ್ಗೆ ಸೂಕ್ಷ್ಮ ಒಳನೋಟಗಳನ್ನು ನೈಪಾಲ್‌ ತಮ್ಮ ಕೃತಿಯಲ್ಲಿ ಒದಗಿಸಿದ್ದಾರೆ. ಪ್ರಕಾಶ್‌ ಅವರೊಂದಿಗಿನ ಭೇಟಿ, ಚರ್ಚೆಯ ಮೂಲಕವೇ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿನ ಶಕ್ತಿ, ಹುಳುಕು, ಅಸಮಾನತೆಗಳನ್ನು ನೈಪಾಲ್‌ ವಿವರವಾಗಿ ಸಂಗ್ರಹಿಸಿದ್ದರು ಎಂಬುದು ವಿಶೇಷ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More