ಅತ್ಯಂತ ವಿವಾದಾತ್ಮಕ ಬರಹಗಾರ, ಮಹಾ ನಿಷ್ಠುರವಾದಿ ವಿ ಎಸ್ ನೈಪಾಲ್

ಸ್ವತಃ ಬರಿಗಾಲ ವಸಾಹತುಶಾಹಿ ಎಂದು ಬಣ್ಣಿಸಿಕೊಂಡು ಹಳ್ಳಿಗಾಡಿನ ಬಾಲ್ಯದಿಂದ ಇಂಗ್ಲೆಂಡಿನ ಉನ್ನತ ವರ್ಗಕ್ಕೆ ಪಯಣಿಸಿದ ನೈಪಾಲ್ ಅವರು ೨೦ನೇ ಶತಮಾನದ ಶ್ರೇಷ್ಠ ಬರಹಗಾರರಲ್ಲಿ ಒಬ್ಬರು. ಈ ಕುರಿತ ‘ಇಂಡಿಯನ್ ಎಕ್ಸ್‌ಪ್ರೆಸ್’ ವರದಿಯ ಭಾವಾನುವಾದ ಇಲ್ಲಿದೆ

‘ಎ ಬೆಂಡ್ ಇನ್ ದ ರಿವರ್’ ಮತ್ತು ‘ಎ ಹೌಸ್ ಫಾರ್ ಮಿ. ಬಿಸ್ವಾಸ್‌’ಗಳಂತಹ ತಮ್ಮ ಶ್ರೇಷ್ಠ ಕಾದಂಬರಿಗಳ ಮೂಲಕ ಹಾಗೂ ತಮ್ಮ ಕಠಿಣ ನಿಲುವು ಮತ್ತು ಜನಸಂಪರ್ಕದಿಂದ ದೂರವಿರುವ ಸ್ವಭಾವಗಳ ಮೂಲಕ ವಿಶ್ವದ ಅತ್ಯಂತ ವಿವಾದಗ್ರಸ್ಥ ಲೇಖಕ ಎಂದು ಪರಿಗಣಿತವಾಗಿದ್ದ ಟ್ರೆನಿಡಾಡ್‌ ಸಂಜಾತ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ವಿ.ಎಸ್. ನೈಪಾಲ್ ತಮ್ಮ ಎಂಬತ್ತೈದನೇ ವಯಸ್ಸಿನಲ್ಲಿ ಲಂಡನ್ನಿನ ತಮ್ಮ ಮನೆಯಲ್ಲಿ ಶನಿವಾರ ಕೊನೆಯುಸಿರೆಳೆದಿದ್ದಾರೆ.

ಸಾಧಿಸಿದ ಎಲ್ಲದರಲ್ಲೂ ಘನವಾದದ್ದನ್ನೇ ಮಾಡಿದ್ದರು; ಅದ್ಭುತ ಕ್ರಿಯಾಶೀಲತೆ ಮತ್ತು ಅಮೋಘ ಪ್ರಯತ್ನಗಳಿಂದಲೇ ತುಂಬಿದ್ದ ತುಂಬು ಬದುಕನ್ನು ಸವೆಸಿ ತಮ್ಮನ್ನು ಅತೀವವಾಗಿ ಪ್ರೀತಿಸುತ್ತಿದ್ದ ಜನರ ಮಧ್ಯೆಯೇ ಕೊನೆಯುಸಿರೆಳೆದರು ಎಂದು ಅವರ ಪತ್ನಿ ನಾದಿರಾ ನೈಪಾಲ್ ಹೇಳಿದ್ದಾರೆ.

ಟ್ರೆನಿಡಾಡ್‌ನಿಂದ ಲಂಡನ್‌ವರೆಗಿನ ನೈಪಾಲ್ ಅವರ ಪಯಣ ಹಾಗೂ ವಿವಿಧ ಅಭಿವೃದ್ಧಿಶೀಲ ದೇಶಗಳಲ್ಲಿನ ಮಾರ್ಗಮಧ್ಯದ ನಿಲುಗಡೆಗಳು ಅವರ ಕೃತಿಗಳಲ್ಲಿ ಅಭಿವ್ಯಕ್ತವಾಗಿದೆ. ಏಕೀಕೃತ ದೃಷ್ಟಿಕೋನ ನಿರೂಪಣೆ ಮತ್ತು ನಮಗೆ ದಮನಿತ ಚರಿತ್ರೆಗಳನ್ನು ನೋಡುವ ಅನಿವಾರ್ಯತೆ ತಂದೊಡ್ಡಿದ ಕೃತಿಗಳ ಕೆಡಿಸಲಾಗದ ವಿಮರ್ಶೆಗಾಗಿ ಅವರಿಗೆ ೨೦೦೧ರಲ್ಲಿ ಅವರಿಗೆ ನೊಬೆಲ್ ಪಾರಿತೋಷಕ ಸಂದಿತು.

ಅರ್ಧ ಶತಮಾನ ಅಸಾಮಾನ್ಯ ಬದುಕನ್ನು ಸವೆಸಿದ ನೈಪಾಲ್ ತಮ್ಮ ಎಂಬತ್ತೈದನೇ ವಯಸ್ಸಿನಲ್ಲಿ ಅಸುನೀಗಿದ್ದಾರೆ. ತಮ್ಮನ್ನು ‘ಬರಿಗಾಲ ವಸಾಹತುಶಾಹಿ’ ಎಂದು ಬಣ್ಣಿಸಿಕೊಂಡು ತಮ್ಮ ಹಳ್ಳಿಗಾಡಿನ ಬಾಲ್ಯದಿಂದ ಇಂಗ್ಲೆಂಡಿನ ಉನ್ನತ ವರ್ಗಕ್ಕೆ ಪಯಣಿಸಿದ ಅವರನ್ನು ೨೦ನೇ ಶತಮಾನದ ಶ್ರೇಷ್ಠ ಬರೆಹಗಾರರಲ್ಲಿ ಒಬ್ಬರು ಎಂದು ಪರಿಗಣಿಸಲಾಗುತ್ತದೆ. ‘ಎ ಬೆಂಡ್ ಇನ್ ದ ರಿವರ್’ ಕೃತಿಯಿಂದ ಮೊದಲುಗೊಂಡು ‘ದಿ ಎನಿಗ್ಮ ಆಫ್ ಅರೈವಲ್’, ‘ಫೈಂಡಿಂಗ್ ದ ಸೆಂಟರ್’ ಕೃತಿಗಳ ತನಕ ನೈಪಾಲ್ ಅವರ ಪುಸ್ತಕಗಳು ವಸಾಹತುಶಾಹಿ ಮತ್ತು ನಿರ್ವಸಾಹತುಶಾಹಿ ಪ್ರಕ್ರಿಯೆ, ದೇಶಭ್ರಷ್ಟತೆ ಮತ್ತು ಅಭಿವೃದ್ಧಿಶೀಲ ದೇಶಗಳಲ್ಲಿ ಪ್ರತಿಯೊಬ್ಬರು ನಡೆಸುತ್ತಿರುವ ಹೋರಾಟಗಳನ್ನು ಅನಾವರಣಗೊಳಿಸುತ್ತವೆ.

ವಸಾಹತುಶಾಹಿಯ ಬಗ್ಗೆ ಬಹಳ ವಿಮರ್ಶಾತ್ಮಕವಾಗಿದ್ದರಾದರೂ ಅವರು ಎಲ್ಲಾ ರೀತಿಯ ಸಾಮಾಜಿಕ ಚಳವಳಿಗಳಿಂದ ತಮ್ಮನ್ನು ತಾವು ದೂರವೇ ಇಟ್ಟುಕೊಂಡಿದ್ದರು. ತಮ್ಮನ್ನು ವಾಸ್ತವವಾದಿ ಎಂದು ಪ್ರತಿಪಾದಿಸುತ್ತಿದ್ದ ನೈಪಾಲ್ ಎಲ್ಲಾ ರೀತಿಯ ಭ್ರಮೆಗಳಿಂದ ಮುಕ್ತವಾಗಿದ್ದರು. ‘ಎ ಬೆಂಡ್ ಇನ್ ದ ರಿವರ್’ ಎಂಬ ಅವರ ಕೃತಿ ಶುರುವಾಗುವುದೇ ‘ಪ್ರಪಂಚ ಏನಿದೆಯೋ, ಅದು ಅದೇ’ ಎಂಬ ಸುಪ್ರಸಿದ್ಧ ಮಾತುಗಳಿಂದ. ನಂತರ, ಪ್ಯಾಟ್ರಿಕ್ ಫ್ರೆಂಚ್ ಎಂಬುವವರು ಬರೆದ ನೈಪಾಲ್ ಅವರ ಅಧಿಕೃತ ಜೀವನ ಚರಿತ್ರೆಯ ಶೀರ್ಷಿಕೆಯೂ ಆಗಿರುವ ಈ ಮಾತುಗಳು ವಾಸ್ತವದಲ್ಲಿ ಅವರ ದೃಷ್ಟಿಕೋನವನ್ನು ಸರಿಯಾಗಿ ಪ್ರತಿಫಲಿಸುತ್ತವೆ.

ಧರ್ಮ ಮತ್ತು ರಾಜಕೀಯಗಳ ಬಗ್ಗೆ ನೈಪಾಲ್ ಯಾವಾಗಲೂ ಸಂಶಯದಿಂದಿದ್ದವರು; ಎಲ್ಲಾ ರೀತಿಯ ಆದರ್ಶವಾದಗಳ ಬಗ್ಗೆಯೂ ಅವರು ಸಂದೇಹಗಳನ್ನಿಟ್ಟುಕೊಂಡಿದ್ದರು, ಅದು ಉಕ್ಕೇರಿ ಬರುತ್ತಿದ್ದ ಕ್ರಾಂತಿಕಾರಿ ಹೋರಾಟಗಳಿರಲಿ ಅಥವಾ ಅಸ್ತಿತ್ವದಲ್ಲೇ ಇರದ ಎಲ್ ಡೊರಾಡೋಕ್ಕಾಗಿನ ಸರ್ ವಾಲ್ಟರ್ ರಾಲಿಯವರ ಹುಡುಕಾಟವಿರಲಿ.’

ಇದನ್ನೂ ಓದಿ : ನೆನಪು| ವಿ ಎಸ್ ನೈಪಾಲರಿಗೆ ಮುಂಬೈ ಭೂಗತ ಜಗತ್ತು ಪರಿಚಯಿಸಿದ ಆ ದಿನ

ವಿಶಾಲಾರ್ಥದಲ್ಲಿ ನನ್ನಂತೆಯೇ ನೀವು ಕೂಡ ಹೊಸ ಪ್ರಪಂಚದಿಂದ ಬಂದರೆ, ಜನರು ಹೇಗೆ ಅಸಂಬದ್ಧ ಕಲ್ಪನಾವಿಲಾಸದಲ್ಲಿ ತೇಲುತ್ತಿದ್ದಾರೆ ಹಾಗೂ ಅದರಿಂದ ಎಂತಹ ಸಮಸ್ಯೆಗಳನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂಬುದು ಗೊತ್ತಾಗುತ್ತದೆ. ಹೊಸ ಪ್ರಪಂಚದ ಸರಿಯಾದ ಚರಿತ್ರೆಯನ್ನೇ ನಮಗೆ ಕೊಟ್ಟಿಲ್ಲ. ಇದು ದುಷ್ಟತನದಿಂದ ಮಾಡಿದ ಕೆಲಸವಲ್ಲ. ಇದು ನಿರ್ಲಕ್ಷ್ಯದಿಂದ, ಔದಾಸೀನ್ಯದಿಂದ ಹಾಗೂ ಈ ಪುಟ್ಟ ದ್ವೀಪದ ಚರಿತ್ರೆ ಅಷ್ಟೊಂದು ಮುಖ್ಯ ಸಂಗತಿಯೇನಲ್ಲ ಎಂಬ ಅನಾದರ ಭಾವದಿಂದ ಮಾಡಿದ ಕೆಲಸ. ಈ ಅಂಶಗಳನ್ನು ನಾವು ಅರಿಯಬೇಕಿದೆ. ಬರವಣಿಗೆ ನನ್ನನ್ನು ಅಲ್ಲಿಗೆ ಕರೆದುಕೊಂಡು ಹೋಯಿತು. ವ್ಯಕ್ತಿಯೊಬ್ಬ ಜ್ಞಾನದಿಂದಲೇ ಬರವಣಿಗೆ ಪ್ರಾರಂಭ ಮಾಡಿಲ್ಲ. ವ್ಯಕ್ತಿಯೊಬ್ಬ ತನ್ನನ್ನು ತಾನು ಜ್ಞಾನದೊಳಗೆ ಬರೆದುಕೊಂಡಿದ್ದಾನೆ, ಎಂದು ನೈಪಾಲ್ ೨೦೦೦ರಲ್ಲಿ ಅಸೋಸಿಯೇಟೆಡ್ ಪ್ರೆಸ್‌ಗೆ ಹೇಳಿದ್ದರು.

ಅವರು ವಿಶಾಲಾರ್ಥದಲ್ಲಿ ಆಡಿದ ಮಾತುಗಳು ವಿವಾದಕ್ಕೆ ಕಾರಣವಾದವು. ಉದಾಹರಣೆಗೆ; ಭಾರತವನ್ನು ಗುಲಾಮಿ ಸಮಾಜ ಎಂದು ಕರೆದದ್ದು, ಆಫ್ರಿಕಾಕ್ಕೆ ಭವಿಷ್ಯವಿಲ್ಲ ಎಂದಿದ್ದು ಹಾಗೂ ನನ್ನ ತಲೆ ಖಾಲಿಯಿದೆ ಎಂದು ಹೇಳುವುದಕ್ಕೆ ಭಾರತೀಯ ನಾರಿಯರು ತಮ್ಮ ಹಣೆಯ ಮೇಲೆ ಕುಂಕುಮ ಹಚ್ಚಿಕೊಳ್ಳುತ್ತಾರೆ ಎಂದಿದ್ದು ಮುಂತಾದವುಗಳಿವೆ. ೧೯೮೯ರಲ್ಲಿ ಇರಾನಿನ ಅಯೋತೊಲ್ಹಾ ಖೊಮೇನಿಯವರು ಸಲ್ಮಾನ್ ರಶ್ದಿ ವಿರುದ್ಧ ಫತ್ವಾ ಹೊರಡಿಸಿದ್ದನ್ನು ಕಂಡು ನೈಪಾಲ್ ಇದು ಉಗ್ರ ಸಾಹಿತ್ಯಿಕ ವಿಮರ್ಶೆ ಎಂದು ನಕ್ಕು ಅಪಹಾಸ್ಯ ಮಾಡಿದ್ದರು.

ಅಮೋಘ ಕಲೆ, ಭಯಾನಕ ರಾಜಕೀಯ ಎಂದು ವಿಮರ್ಶಕ ಟೆರ್ರಿ ಈಗಲ್ಟನ್ ಅವರು ನೈಪಾಲ್ ಬಗ್ಗೆ ಒಮ್ಮೆ ಹೇಳಿದ್ದುಂಟು. ನೀಗ್ರೋಗಳೆಡೆಗಿನ ಹೇವರಿಕೆಯಿಂದ ನೈಪಾಲ್ ಅವರ ಗದ್ಯವು ಕಳಂಕಿತವಾಗಿದೆ ಎಂದು ನೊಬೆಲ್ ಪ್ರಶಸ್ತಿ ವಿಜೇತ ಕರಿಬಿಯನ್ ಸಾಹಿತಿ ಡೆರೆಕ್ ವಾಲ್ಕಾಟ್ ದೂಷಿಸಿದ್ದರು. ಆದರೆ, ಟ್ರೆನಿಡಾಡ್‌ನ ಇನ್ನೊಬ್ಬ ಸಹಪಾಠಿ ಲೇಖಕ ಸಿ.ಎಲ್.ಆರ್ ಜೇಮ್ಸ್ ಅದನ್ನು ವಿಭಿನ್ನವಾಗಿ ಮಂಡಿಸಿದ್ದರು: [ನೀಗ್ರೋಗಳ ಬಗ್ಗೆ] ಬಿಳಿಯರು ಏನು ಹೇಳುವುದಕ್ಕೆ ಬಯಸುತ್ತಾರೋ, ಆದರೆ ಅದನ್ನು ಹೇಳುವ ಧೈರ್ಯವಿಲ್ಲದೇ ಸುಮ್ಮನಿರುತ್ತಾರೋ, ಅದನ್ನೇ ನೈಪಾಲ್ ಅವರ ಅಭಿಪ್ರಾಯಗಳು ಪ್ರತಿಫಲಿಸುತ್ತವೆ ಎಂದು ಅವರು ಹೇಳಿದ್ದರು.

ಹತ್ತಿರದಿಂದ ಬಲ್ಲವರಿಗೆ ವಿದ್ಯಾ ಎಂದೇ ಪರಿಚಿತವಿರುವ ವಿದ್ಯಾಧರ ಸೂರಜ್‌ಪ್ರಸಾದ್ ನೈಪಾಲ್ ಅವರ ಪೂರ್ವಜರು ಮೂಲತಃ ಭಾರತೀಯರಾಗಿದ್ದು ಕಡುಬಡತನದ ಬೇಗೆಯಲ್ಲಿ ಬೆಂದು ವೆಸ್ಟ್ ಇಂಡೀಸ್‌ಗೆ ಜೀತದಾಳುಗಳಾಗಿ ಹೋದವರು. ಅವರ ತಂದೆಯವರೂ ಕೂಡ ಸ್ವಯಂಪ್ರೇರಣೆಯಿಂದ ಕಲಿತ ಮಹಾತ್ವಾಕಾಂಕ್ಷಿ ಕಾದಂಬರಿಕಾರನಾಗಿದ್ದರು. ಆದರೆ, ಅವಕಾಶಗಳ ಕೊರತೆಗಳು ಅವರಲ್ಲಿನ ಪ್ರತಿಭೆಯನ್ನು ಕತ್ತುಹಿಸುಕಿ ಕೊಂದವು. ಆದರೆ, ಮಗ ಸಾಧ್ಯವಾದಷ್ಟು ಬೇಗ ಆ ದ್ವೀಪವನ್ನು ತೊರೆದು ಹೋಗುವುದಕ್ಕೆ ದೃಢನಿಶ್ಚಯ ಮಾಡಿದ. ನಂತರದ ವರ್ಷಗಳಲ್ಲಿ ಅವರು ತಮ್ಮ ಜನ್ಮಭೂಮಿಯನ್ನು ಒಂದು ತೋಟಕ್ಕಿಂತ ಹೆಚ್ಚೇನೂ ಅಲ್ಲದ ಜಾಗ ಎಂದು ತಿರಸ್ಕರಿಸುತ್ತಲೇ ಬಂದರು.

‘’ನಾನು ಹುಟ್ಟಿದ್ದು ಅಲ್ಲಿ, ನಿಜ. ಅದೇ ದೊಡ್ಡ ತಪ್ಪು ಅಂತ ನನಗೆ ಅನ್ನಿಸುತ್ತದೆ’’, ಎಂದು ೧೯೮೩ರಲ್ಲಿ ಸಂದರ್ಶನವೊಂದರಲ್ಲಿ ಟ್ರೆನಿಡಾಡ್‌ ಬಗ್ಗೆ ಹೇಳಿದ್ದರು. ೧೯೫೦ರಲ್ಲಿ, ಇಂಗ್ಲೆಂಡಿನಲ್ಲಿ ಅಧ್ಯಯನ ಮಾಡುವುದಕ್ಕಾಗಿ ಅತ್ಯಂತ ಕಡಿಮೆ ಜನರಿಗೆ ನೀಡುವ ಸ್ಕಾಲರ್‌ಷಿಪ್ ಒಂದು ನೈಪಾಲ್ ಅವರಿಗೆ ಸಿಕ್ಕಿತು. ಕೂಡಲೇ ಅವರು ತಮ್ಮ ಕುಟುಂಬವನ್ನು ಅಲ್ಲೇ ಬಿಟ್ಟು ಇಂಗ್ಲೆಂಡಿನ ಆಕ್ಸ್‌ಫರ್ಡ್‌ನಲ್ಲಿ ಯೂನಿವರ್ಸಿಟಿ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಅಧ್ಯಯನ ಮಾಡುವುದಕ್ಕಾಗಿ ಹೊರಟುಹೋದರು.

ಅಲ್ಲೇ ಅವರು ತಮ್ಮ ಮೊದಲ ಪತ್ನಿ ಪಟ್ರಿಷಿಯಾ ಹಾಲೆ ಅವರನ್ನ ಭೇಟಿಯಾಗಿದ್ದು. ೧೯೫೫ರಲ್ಲಿ ತಮ್ಮ ಕುಟುಂಬಕ್ಕೂ ತಿಳಿಸದೇ ಅವರನ್ನು ಮದುವೆಯಾದರು.

ಪದವಿ ಮುಗಿದ ಮೇಲೆ ನೈಪಾಲ್ ಬಡತನ ಮತ್ತು ನಿರುದ್ಯೋಗಗಳನ್ನು ಅನುಭವಿಸಿದರು. ಹಸಿವು, ನಿತ್ರಾಣಗಳಿಂದ ಬಳಲುತ್ತಿದ್ದ ಅವರು ಬದುಕುವುದಕ್ಕೆ ತಮ್ಮ ಹೆಂಡತಿಯ ಆದಾಯವನ್ನೇ ನೆಚ್ಚಿಕೊಂಡಿದ್ದರು. ಆಕ್ಸ್‌ಫರ್ಡ್‌ನಲ್ಲಿ ಶಿಕ್ಷಣ ಪಡೆದಿದ್ದರೂ ತನ್ನನ್ನು ಸುತ್ತುವರೆದಿದ್ದ ಅನ್ಯದ್ವೇಷದ ಪ್ರತಿಕೂಲ ಲಂಡನ್ನಿನಲ್ಲಿ ಬದುಕಿದರು.

ಈ ಜನ ನನ್ನ ಆತ್ಮಸ್ಥೈರ್ಯವನ್ನು ಮುರಿಯುವುದಕ್ಕೆ ಬಯಸಿದರು. ನನ್ನ ಜಾಗ ಯಾವುದು ಅಂತ ನಾನು ಅರಿತುಕೊಳ್ಳಬೇಕೆಂದು ಬಯಸಿದರು, ಎಂದು ತನ್ನ ಕಹಿ ಅನುಭವವನ್ನು ತಮ್ಮ ಪತ್ನಿಗೆ ಬರೆದ ತೀಕ್ಷ್ಣ ಪತ್ರದಲ್ಲಿ ತೋಡಿಕೊಂಡಿದ್ದಾರೆ.

ಕೊನೆಗೆ ನೈಪಾಲ್ ಅವರಿಗೆ ಬಿಬಿಸಿ ವರ್ಲ್ಡ್ ಸರ್ವೀಸ್‌ನಲ್ಲಿ ಒಂದು ರೇಡಿಯೋ ಕೆಲಸ ಸಿಕ್ಕಿತು. ಅಲ್ಲಿ ಅವರು ವೆಸ್ಟ್ ಇಂಡಿಯನ್ ಸಾಹಿತ್ಯದ ಬಗ್ಗೆ ಚರ್ಚಿಸಿ ಒಬ್ಬ ಬರೆಹಗಾರನಾಗಿ ಕೆಲಸ ಮಾಡಲಾರಂಭಿಸಿದರು. ೧೯೫೭ರಲ್ಲಿ ಟ್ರೆನಿಡಾಡ್‌ನ ಏಕಸಮುದಾಯ ನೆಲೆಯ ಕೇರಿಗಳಲ್ಲಿ ಜನರು ಹೇಗೆ ಬದುಕುತ್ತಿದ್ದಾರೆ ಎಂಬ ಚಿತ್ರಣವನ್ನು ಕಟ್ಟಿಕೊಡುವ ಅವರ ಮೊಟ್ಟ ಮೊದಲ ಹಾಸ್ಯಮಯ ಕಾದಂಬರಿ ದ ಮಿಸ್ಟಿಕ್ ಮ್ಯಾಸರ್ ಪ್ರಕಟವಾಗುವುದರೊಂದಿಗೆ ಅವರ ಬದುಕಿನ ದಿಕ್ಕೇ ಬದಲಾಗಿಹೋಯಿತು.

ಪುಸ್ತಕ ವಿಮರ್ಶಕರ ಕಣ್ಣಿಗೆ ಬಿದ್ದ ನೈಪಾಲ್ ೧೯೫೯ರಲ್ಲಿ ತಮ್ಮ ಮೈಗಲ್ ಸ್ಟ್ರೀಟ್ ಎಂಬ ಕಥಾಸಂಕಲನಕ್ಕೆ ಸೋಮರ್‌ಸೆಟ್ ಮಾಮ್ ಪ್ರಶಸ್ತಿಯನ್ನು ಪಡೆದುಕೊಂಡರು. ೧೯೬೧ರಲ್ಲಿ ತಮ್ಮ ಸುಪ್ರಸಿದ್ಧ ‘ಎ ಹೌಸ್ ಫಾರ್ ಮಿ. ಬಿಸ್ವಾಸ್’ ಕಾದಂಬರಿಯನ್ನು ಪ್ರಕಟಿಸಿದರು. ವಸಾಹತುಶಾಹಿ ಸಮಾಜ ಹೇಗೆ ಒಬ್ಬ ವ್ಯಕ್ತಿಯ ಬದುಕನ್ನು ನಿರ್ಬಂಧಿಸುತ್ತದೆ ಎಂದು ವರ್ಣಿಸುವ ಈ ಕಾದಂಬರಿ ನೈಪಾಲ್ ಅವರು ತಮ್ಮ ತಂದೆಗೆ ಅರ್ಪಿಸಿದ ಗೌರವದ ಕಾಣಿಕೆಯಾಗಿತ್ತು.

ಅವರು ವಸಾಹತುಶಾಹಿ ಕೃಷಿ ಸಮಾಜದಲ್ಲಿ ಹುಟ್ಟದೇ ಬೇರೊಂದು ಸಂಸ್ಕೃತಿಯಲ್ಲಿ ಹುಟ್ಟಿದ್ದರೆ ಅವರೊಳಗಿದ್ದ ಪ್ರತಿಭೆಗೆ ಸರಿಯಾದ ಮನ್ನಣೆ ಸಿಕ್ಕು ಸೊಗಸಾಗಿ ಅರಳುತ್ತಿತ್ತು. ಅವರ ಮರುಕಕ್ಕೆ ಅವರು ತಪ್ಪು ಜಾಗದಲ್ಲಿ ಹುಟ್ಟಿದ್ದೂ ಕಾರಣವಾಗಿತ್ತು, ಎಂದು ತಮ್ಮ ತಂದೆ ಕುರಿತು ಅವರು ೨೦೦೦ದಲ್ಲಿ ಎಪಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದರು.

ಢಾಕಾ ಸಾಹಿತ್ಯೋತ್ಸವದಲ್ಲಿ ವಿ ಎಸ್‌ ನೈಪಾಲ್‌ ಅವರು ಬರಹಗಾರ ಮತ್ತು ಜಗತ್ತು ಕುರಿತು ನಡೆಸಿದ ಸಂವಾದ

ತದನಂತರದ ವರುಷಗಳಲ್ಲಿ ನೈಪಾಲ್ ಸುದೀರ್ಘ ಕಾಲ ಪತ್ರಿಕೋದ್ಯಮದ ಪ್ರಬಂಧಗಳನ್ನು ಹಾಗೂ ಪ್ರವಾಸ ಕಥನಗಳನ್ನು ಬರೆಯುವುದಕ್ಕೆ ಬಹಳಷ್ಟು ಸುತ್ತಾಟ ನಡೆಸಿದರು. ತಮ್ಮ ಪೂರ್ವಜರ ಸಂಸ್ಕೃತಿ ಮತ್ತು ರಾಜಕೀಯದ ಬಗ್ಗೆ ಬರೆಯುವುದಕ್ಕಾಗಿ ಅವರು ಭಾರತಕ್ಕೆ ಮೂರು ಬಾರಿ ಬಂದಿದ್ದರು. ಅರ್ಜೈಂಟೀನಾದ ಬ್ಯೂನೊಸ್ ಐರಿಸ್ ನಗರದ ಮಾಜಿ ಮೊದಲ ಮಹಿಳೆಯಾಗಿದ್ದ ಲೇಡಿ ಇವಾ ಪೆರನ್ ಬಗ್ಗೆ ಬರೆಯುವುದಕ್ಕಾಗಿ ಆ ನಗರದಲ್ಲಿ ಒಂದಿಷ್ಟು ಸಮಯ ಕಳೆದಿದ್ದರು. ಅಲ್ಲದೇ, ಇಸ್ಲಾಮ್ ಬಗ್ಗೆ ಬರೆಯುವುದಕ್ಕಾಗಿ ಇರಾನ್, ಪಾಕಿಸ್ತಾನ ಮತ್ತು ಇಂಡೋನೇಶಿಯಾದಲ್ಲೂ ಸಾಕಷ್ಟು ಸಮಯ ಕಳೆದಿದ್ದರು.

೨೦೦೧ರ ಸೆಪ್ಟೆಂಬರ್ ೧೧ರ ದಾಳಿಗಿಂತಲೂ ಬಹಳ ವರ್ಷ ಮುಂಚೆಯೇ ನೈಪಾಲ್ ಇಸ್ಲಾಮಿಕ್ ಉಗ್ರವಾದದ ಬಗ್ಗೆ ತಮ್ಮ ಅಮಾಂಗ್ ಬಿಲಿವರ‍್ಸ್ ಮತ್ತು ಬಿಯಾಂಡ್ ಬಿಲೀಫ್ ರೀತಿಯ ಪುಸ್ತಕಗಳಲ್ಲಿ ಬರೆಯಲಾರಂಭಿಸಿದ್ದರು.

ಅವರಿಗೆ ನೊಬೆಲ್ ಪ್ರಶಸ್ತಿ ನೀಡಿದ ಸ್ವೀಡಿಷ್ ಅಕಾಡೆಮಿಯು ನೊಬೆಲ್ ಸ್ಮರಣ ಸಂಚಿಕೆಯಲ್ಲಿ ಅವರನ್ನು ಮನೆಯಲ್ಲಿ ನೆಲೆನಿಲ್ಲದ ಒಬ್ಬ ಸಾಹಿತ್ಯಿಕ ಪಯಣಿಗ ಎಂದು ಕರೆದಿದೆ. ನೈಪಾಲ್ ಅವರ ಕಥೆಯೇತರ ಕೃತಿಗಳು ಆಗಾಗ್ಗೆ ಹಲವರ ಕೆಂಗಣ್ಣಿಗೆ ಗುರಿಯಾಗಿದ್ದುಂಟು; ಇಸ್ಲಾಮ್ ಮತ್ತು ಭಾರತದ ಬಗ್ಗೆ ಅವರು ತಳೆದಿದ್ದ ನಿಲುವುಗಳಿಂದ ಬಹಳಷ್ಟು ಜನ ಕುಪಿತರಾಗಿದ್ದರು. ಆದರೆ, ರಶ್ದಿಯಂತಹ ಕೆಲವರು ನೈಪಾಲರು ಹಿಂದೂ ರಾಷ್ಟ್ರೀಯವಾದವನ್ನು ಉತ್ತೇಜಿಸುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಅದೇ ಸಮಯದಲ್ಲಿ ಅವರು ಪ್ರಶಸ್ತಿ ತಂದುಕೊಡುವಂತಹ ಶ್ರೇಷ್ಠ ಕಾದಂಬರಿಗಳನ್ನು ಬರೆಯುವ ಕೆಲಸವನ್ನೂ ಮುಂದುವರೆಸಿದ್ದರು. ೧೯೬೭ರಲ್ಲಿ ದ ಮಿಮಿಕ್ ಮೆನ್ ಕಾದಂಬರಿಗೆ ಡಬ್ಲೂ.ಎಚ್. ಸ್ಮಿತ್ ಅವಾರ್ಡ್ ಹಾಗೂ ೧೯೭೧ರಲ್ಲಿ ಆಫ್ರಿಕಾದಲ್ಲಿನ ವಸಾಹತುಶಾಹಿ ಕುರಿತ ಇನ್ ಅ ಫ್ರೀ ಸ್ಟೇಟ್ ಕೃತಿಗೆ ಬೂಕರ್ ಅವಾರ್ಡ್ ಗಳಿಸಿದರು.

ಆಫ್ರಿಕಾ ಖಂಡವೇ ೧೯೭೯ರಲ್ಲಿ ಪ್ರಕಟವಾದ ಅವರ ಎ ಬೆಂಡ್ ಇನ್ ದ ರಿವರ್ ಎಂಬ ಪ್ರಸಿದ್ಧ ಕೃತಿಗೆ ಕಥಾವಸ್ತುವನ್ನು ಒದಗಿಸಿದ್ದು. ಅವರ ಬದುಕಿನ ಪಯಣ ಮತ್ತು ಪರಿವರ್ತನೆಗಳನ್ನು ಪ್ರತಿಬಿಂಬಿಸುವ ೧೯೮೭ರ ಅವರ ದಿ ಎನಿಗ್ಮ ಆಫ್ ಅರೈವಲ್ ಕೃತಿ ನೈಪಾಲ್ ಅವರ ಶ್ರೇಷ್ಠ ಕೃತಿ ಎಂದು ಕೆಲವರು ಅಭಿಪ್ರಾಯಪಡುತ್ತಾರೆ.

ನೈಪಾಲ್ ಅವರಿಗೆ ೧೯೯೦ರಲ್ಲಿ ನೈಟ್‌ಹುಡ್ ಮತ್ತು ೨೦೦೧ರಲ್ಲಿ ಸಾಹಿತ್ಯಕ್ಕಾಗಿ ನೊಬೆಲ್ ಪ್ರಶಸ್ತಿಗಳು ಲಭಿಸಿದವು.

ಅವರ ಸಾಹಿತ್ಯ ಕೃಷಿ ಅಭಿವೃದ್ಧಿಯಾದಂತೆಯೇ ಅವರೊಬ್ಬ ಕಠಿಣ ಮತ್ತು ಮುಂಗೋಪದ ವ್ಯಕ್ತಿ ಎಂಬ ಅಭಿಪ್ರಾಯವೂ ಬೆಳೆಯಿತು. ಖಾಸಗಿ ವ್ಯಕ್ತಿಯಾಗಿದ್ದ ನೈಪಾಲ್ ಅವರಿಗೆ ಯಾವುದೇ ಸ್ನೇಹಿತರಿರಲಿಲ್ಲ. ಆದರೆ, ಒಮ್ಮೆ ಮಾತ್ರ ಅವರ ಗೆಳೆಯನಾಗಿದ್ದ ಪಾಲ್ ಥೆರಾಕ್ಸ್ ಎಂಬ ಅಮೆರಿಕದ ಲೇಖಕ ನೈಪಾಲ್ ಅವರೊಂದಿಗಿನ ತಮ್ಮ ಸಂಬಂಧ ಹಳಸಿದ ಮೇಲೆ ನೈಪಾಲ್ ಬದುಕನ್ನು ಕುರಿತು ೧೯೯೮ರಲ್ಲಿ ಒಂದು ಜೀವನಗಾಥೆ ಬರೆದ ಮೇಲೆ ಅವರ ವೈಯಕ್ತಿಕ ಬದುಕು ಸಾರ್ವಜನಿಕ ಬದುಕಾಗಿ ಮಾರ್ಪಟ್ಟಿತು.

ಸರ್ ವೈದ್ಯಾಸ್ ಶ್ಯಾಡೋ ಎಂಬ ತಮ್ಮ ಆ ಕೃತಿಯಲ್ಲಿ ಥೆರಾಕ್ಸ್ ಅವರು ನೈಪಾಲ್ ಅವರನ್ನು ಜನಾಂಗವಾದಿ, ಸಿಡುಕು ವ್ಯಕ್ತಿ ಮತ್ತು ಸ್ರೀದ್ವೇಷಿ, ವಿಕೃತ ಕಾಮುಕ ಎಂದೆಲ್ಲಾ ಝಾಡಿಸಿದ್ದರು.

ನೈಪಾಲ್ ಅವರು ಥೆರಾಕ್ಸ್ ಅವರ ಈ ಪುಸ್ತಕವನ್ನು ಉಪೇಕ್ಷಿಸಿದರು. ಆದರೆ, ನಂತರದಲ್ಲಿ ಅವರೇ ಸತ್ಯವನ್ನು ಬಹಿರಂಗಪಡಿಸುವ ನೇರಾನೇರವಾದ ತಮ್ಮ ಜೀವನಚರಿತ್ರೆಯನ್ನು ಇನ್ನೊಬ್ಬರಿಂದ ಬರೆಸಿದರು. ಆ ಪುಸ್ತಕವು ಥೆರಾಕ್ಸ್ ಮಾಡಿದ ಕೆಲವು ಆರೋಪಗಳನ್ನೂ ದೃಢೀಕರಿಸಿತು. ೨೦೦೮ರಲ್ಲಿ ಪ್ರಕಟವಾದ ಅವರ ಈ ಜೀವನಚರಿತ್ರೆಯಲ್ಲಿ ಅವರು, ತನಗಿಂತಲೂ ಸುಮಾರು ಹತ್ತು ವರ್ಷ ಕಿರಿಯವಳಾಗಿದ್ದ ಆಗ್ಲೋ-ಅರ್ಜಂಟೇನಿಯನ್ ಮಹಿಳೆಯೊಬ್ಬಳನ್ನು ಭೇಟಿಯಾಗಿದ್ದುನ್ನು ಹಾಗೂ ಅವಳನ್ನು ಮದುವೆಯಾಗಿ ನಿರ್ದಯವಾಗಿ ನಡೆಸಿಕೊಂಡದ್ದನ್ನು ವಿವರಿಸುವುದಕ್ಕಾಗಿಯೇ ಪ್ರತ್ಯೇಕ ಅಧ್ಯಾಯಗಳಿವೆ. ಕಾಸು ಕೊಟ್ಟು ಕಾಮ ತೀರಿಸಿಕೊಳ್ಳುತ್ತಿದ್ದುದರ ಬಗ್ಗೆ ಹಾಗೂ ತಾವೊಬ್ಬ ಮಹಾ ಲಂಪಟ ಎಂದು ನೈಪಾಲ್ ಅವರೇ ನ್ಯೂಯಾರ್ಕರ್ ಮುಂದೆ ಹೇಳಿಕೊಂಡಿದ್ದನ್ನೂ ಈ ಜೀವನಚರಿತ್ರೆ ನೆನಪಿಸುತ್ತದೆಯಲ್ಲದೇ ಇದರಿಂದಾಗಿಯೇ ೧೯೯೬ರಲ್ಲಿ ಸ್ತನ ಕ್ಯಾನ್ಸ್‌ರ್‌ನಿಂದ ಅಸುನೀಗಿದ ಅವರ ಪತ್ನಿ ಹಾಲೆಯ ಬದುಕು ಹೇಗೆ ಸರ್ವನಾಶವಾಯಿತು ಎಂಬುದನ್ನೂ ಅದು ದಾಖಲಿಸುತ್ತದೆ.

ನಾನೇ ಅವಳನ್ನು ಕೊಂದೆ ಅಂತ ಹೇಳಬಹುದು. ನನಗೆ ಹಾಗನ್ನಿಸುತ್ತದೆ, ಎಂದು ನೈಪಾಲ್ ತಮ್ಮ ಜೀವನಚರಿತ್ರೆಯನ್ನು ಬರೆದ ಪ್ಯಾಟ್ರಿಕ್ ಫ್ರೆಂಚ್ ಅವರಿಗೆ ಹೇಳಿದ್ದರು. ಹಾಲೆ ನಿಧನರಾದ ಎರಡು ತಿಂಗಳ ನಂತರ ನೈಪಾಲ್ ಪಾಕಿಸ್ತಾನಿ ಸುದ್ದಿಪತ್ರಿಕೆಯ ಅಂಕಣಗಾರ್ತಿ ನಾದಿರಾ ಖುನುಮ್ ಅಲ್ವಿ ಎಂಬುವವರನ್ನು ಮದುವೆಯಾದರು. ನೈಪಾಲ್ ಅವರ ತದನಂತರದ ಪುಸ್ತಕಗಳಲ್ಲಿ ಮೊದಲಿನವುಗಳ ಥರ ವರ್ಣರಂಜಿತ ಹಾಸ್ಯವಿರಲಿಲ್ಲ; ಕೆಲವರ ಪ್ರಕಾರ ಅವು ಅಷ್ಟೊಂದು ಮನತಟ್ಟುವಂತೆಯೂ ಇರಲಿಲ್ಲ. ಇಂಗ್ಲೆಂಡಿನ ಗ್ರಾಮೀಣ ಪ್ರದೇಶದಲ್ಲಿರುವ ವಿಲ್ಟ್‌ಶೈರ್ ಎಂಬ ಪ್ರತ್ಯೇಕಿತ ಏಕಾಂಕಿ ಮನೆಯಲ್ಲೇ ಅವರು ತಮ್ಮ ಬಹುತೇಕ ಸಮಯವನ್ನು ಕಳೆದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More