ಕಾರ್ನಾಟಿಕ್ ಸಂಗೀತ ಗಾಯಕರನ್ನು ಗುರಿಯಾಗಿಸಿದ ಬಲಪಂಥೀಯ ಪಡೆಗಳು

ಅಂತರ್ಜಾಲ ಬಳಕೆದಾರರು ತಮ್ಮ ಫೇಸ್‌ಬುಕ್, ಟ್ವಿಟರ್ ಥ್ರೆಡ್‌ಗಳಲ್ಲಿ ಕಾರ್ನಾಟಿಕ್ ಸಂಗೀತ ಗಾಯಕರನ್ನು ‘ಹಿಂದುತ್ವದ ವಂಚಕರು’, ‘ಕೃತಿಚೋರರು’ ಮೊದಲಾದ ಪದ ಬಳಸಿ ಟ್ರೆಂಡ್ ಮಾಡುತ್ತ ವಿರೋಧಿಸಿದ್ದಾರೆ. ಈ ಕುರಿತ ‘ದಿ ನ್ಯೂಸ್ ಮಿನಿಟ್‌’ ಲೇಖನದ ಭಾವಾನುವಾದ ಇಲ್ಲಿದೆ

ಕಳೆದ ಒಂದು ವಾರದಿಂದ ತಮಿಳುನಾಡಿನ ಕಾರ್ನಾಟಿಕ್ (ಕರ್ನಾಟಕ) ಶಾಸ್ತ್ರೀಯ ಸಂಗೀತ ಪದ್ಧತಿಯ ಗಾಯಕರು ಅಂತರ್ಜಾಲದಲ್ಲಿ ದೊಡ್ಡ ಮಟ್ಟದ ವಿರೋಧಿ ಪ್ರಚಾರಾಭಿಯಾನಕ್ಕೆ ಗುರಿಯಾಗಿದ್ದಾರೆ. ಮೊತ್ತಮೊದಲಿಗೆ ಟಿ ಸ್ಯಾಮ್ಯುಯೆಲ್ ಜೋಸೆಫ್ ಅವರು ಸಂಯೋಜಿಸಿದ ‘ಏಸುವಿನ ಸಂಗಮ ಸಂಗೀತಂ’ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಹಾಡುವ ಗಾಯಕರ ಮೇಲೆ ವ್ಯವಸ್ಥಿತ ಆನ್‌ಲೈನ್ ದಾಳಿ ನಡೆಯಿತು. ಕಾರ್ಯಕ್ರಮದಲ್ಲಿ ಹಾಡಲು ಸಿದ್ಧರಾದ ಗಾಯಕ ಒ ಎಸ್ ಅರುಣ್ ಅವರು ಅಂತರ್ಜಾಲದ ಟ್ರೋಲ್‌ಗಳ ದಾಳಿಗೆ ಗುರಿಯಾದರು. ಅಂತರ್ಜಾಲ ಬಳಕೆದಾರರು ತಮ್ಮ ಫೇಸ್‌ಬುಕ್ ಪುಟ, ಯುಟ್ಯೂಬ್ ಕಮೆಂಟ್ ವಿಭಾಗಗಳಲ್ಲಿ ಮತ್ತು ಟ್ವಿಟರ್ ಥ್ರೆಡ್‌ಗಳಲ್ಲಿ ಕಾರ್ನಾಟಿಕ್ ಸಂಗೀತ ಗಾಯಕರನ್ನು ‘ಹಿಂದುತ್ವದ ವಂಚಕರು’ ಮತ್ತು ‘ಕಾರ್ನಾಟಿಕ್ ಸಂಗೀತಕ್ಕೆ ಅವಹೇಳನ ಮಾಡಿದವರು’ ಮತ್ತು ‘ಕೃತಿಚೋರರು’ ಎನ್ನುವಂತಹ ಪದಗಳನ್ನು ಬಳಸಿ ಟ್ವಿಟರ್ ಟ್ರೆಂಡ್ ಮಾಡುತ್ತ ವಿರೋಧಿಸಿದ್ದಾರೆ.

ಜನಪ್ರಿಯ ಕಾರ್ನಾಟಿಕ್ ಸಂಗೀತಗಾರರು ಸಕ್ರಿಯವಾಗಿ ಇತರ ಧರ್ಮದ ದೇವರಿಗೆ ಸಂಬಂಧಿಸಿದ ಶಾಸ್ತ್ರೀಯ ಕೃತಿಗಳನ್ನು ಹಾಡುತ್ತಿದ್ದಾರೆ ಎನ್ನುವುದೇ ಈಗ ಹಠಾತ್ ಆಗಿ ಬಲಪಂಥೀಯ ಪಡೆಗಳು ಆನ್‌ಲೈನ್‌ನಲ್ಲಿ ಈ ಗಾಯಕರಿಗೆ ಬೆದರಿಕೆ ಹಾಕಲು ಕಾರಣ. ನಿತ್ಯಶ್ರೀ ಮಹಾದೇವನ್ ಮತ್ತು ಒ ಎಸ್ ಅರುಣ್ ಅವರು ಸಕ್ರಿಯವಾಗಿ ಇತರ ಧರ್ಮಗಳ ದೇವರಿಗೆ ಸಂಬಂಧಿಸಿದ ಭಕ್ತಿಗೀತೆಗಳನ್ನು ಹಾಡುತ್ತಾರೆ. ಸ್ವತಃ ‘ರಸಿಕರು’ (ಅಭಿಮಾನಿಗಳು) ಎಂದು ಕರೆದುಕೊಳ್ಳುವ ಅಂತರ್ಜಾಲ ಪಡೆಯ ಪ್ರಕಾರ, ಇತರ ಧರ್ಮಗಳಿಗೆ ಸಂಬಂಧಿಸಿದ ಭಕ್ತಿಗೀತೆಗಳನ್ನು ಹಾಡುವುದು ಹಿಂದೂ ಧರ್ಮಕ್ಕೆ ದೊಡ್ಡ ಬೆದರಿಕೆ; ಇದೇ ಕಾರಣದಿಂದ ಭಕ್ತಿಗೀತೆಗಳನ್ನು ಹಾಡುವ ಕಲಾವಿದರ ವಿರುದ್ಧ ಅವಹೇಳನಕಾರಿ ಆನ್‌ಲೈನ್ ಪ್ರಚಾರವನ್ನು ನಡೆಸುತ್ತಿದ್ದಾರೆ.

ಚೆನ್ನೈನಲ್ಲಿ ಟಿ ಸ್ಯಾಮ್ಯುಯೆಲ್ ಜೋಸೆಫ್ (ಶ್ಯಾಮ್‌) ಅವರು ಆಗಸ್ಟ್ ೨೬ರಂದು ಆಯೋಜಿಸಿದ್ದ ‘ಯೇಸುವಿನ ಸಂಗಮ ಸಂಗೀತಂ’ ಕಾರ್ಯಕ್ರಮದಲ್ಲಿ ಗಾಯಕ ಒ ಎಸ್ ಅರುಣ್ ಅವರು ಹಾಡಲು ಒಪ್ಪಿಕೊಂಡಲ್ಲಿಂದ ಈಗಿನ ಸಂಘರ್ಷ ಆರಂಭವಾಗಿತ್ತು. “ನಾವು ಇದೇ ಮೊದಲು ಕ್ರಿಶ್ಚಿಯನ್ ಗೀತೆಗಳನ್ನು ಹಾಡುತ್ತಿಲ್ಲ. ಶ್ಯಾಮ್ ದಶಕಗಳಿಂದ ಉದ್ಯಮದಲ್ಲಿ ಹಲವು ಸಂಗೀತಗಾರರ ಜೊತೆಗೆ ಕೆಲಸ ಮಾಡಿದ್ದಾರೆ. ನಾನೇ ಮೂರು ದಶಕಗಳ ವೃತ್ತಿಜೀವನದಲ್ಲಿ ಅವರ ಜೀಸಸ್ ಅಲ್ಬಂನಲ್ಲಿ ಹಲವು ಹಾಡುಗಳನ್ನು ಹಾಡಿದ್ದೇನೆ,” ಎನ್ನುತ್ತಾರೆ ಅರುಣ್. ತಮ್ಮ ಫೇಸ್‌ಬುಕ್ ಪುಟದಲ್ಲಿ ಅರುಣ್ ಅವರು ಇಂತಹ ದ್ವೇಷಪೂರ್ಣ ಸಂದೇಶಗಳನ್ನು ನಿರಂತರವಾಗಿ ಕಾಣುತ್ತಲೇ ಬಂದಿದ್ದಾರೆ. ಹಿಂದೂಗಳ ಮೇಲಿನ ‘ಕಾಳಜಿ’ ಎಂದು ಹೇಳಿಕೊಳ್ಳುವ ಮಂದಿ ವಿದೇಶಗಳಿಂದಲೂ ಅವರಿಗೆ ಕರೆ ಮಾಡಿ ಬೆದರಿಸಿದ್ದಾರೆ. ಬೈಗುಳಗಳು ಮತ್ತು ಅಭಿಪ್ರಾಯಗಳು ಮುಖ್ಯವಾಗಿ ಎರಡು ಪ್ರಮುಖ ವಿಚಾರಗಳಲ್ಲಿ ಕಂಡುಬಂದಿದೆ. ಮೊದಲನೆಯದಾಗಿ, ಒಬ್ಬ ಹಿಂದೂ ಗಾಯಕ ಇತರ ಧರ್ಮಗಳ ದೇವರನ್ನು ಹೊಗಳುವುದು ಮತ್ತು ಎರಡನೆಯದು, ಕಾರ್ನಾಟಿಕ್ ಸಂಗೀತವನ್ನು ಇತರ ಸಮುದಾಯಗಳು ಬಳಸಿಕೊಳ್ಳುತ್ತಿರುವುದು.

“ನಾನು ಒತ್ತಡ ಸಹಿಸಿಕೊಳ್ಳಲು ಸಾಧ್ಯವಾಗದೆ ಮರುದಿನವೇ, ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಆಯೋಜಕರಿಗೆ ತಿಳಿಸಿದೆ. ಸಂಗೀತ ಎನ್ನುವುದು ಸಾರ್ವತ್ರಿಕ ಮತ್ತು ಪ್ರಜಾಸತ್ತಾತ್ಮಕ. ಯಾರು ಏನು ಹಾಡುತ್ತಾರೆ ಎನ್ನುವುದನ್ನು ನಾವು ತಡೆಯಲು ಸಾಧ್ಯವಿಲ್ಲ ಮತ್ತು ಇತರ ದೇವರಿಗೆ ಸಂಬಂಧಿಸಿದ ಹಾಡುಗಳಿಗೆ ಕಾರ್ನಾಟಿಕ್ ಕೃತಿಗಳನ್ನು ಬಳಸುವುದರಲ್ಲಿ ಯಾವುದೇ ಸಮಸ್ಯೆ ನನಗೆ ಕಾಣುವುದಿಲ್ಲ. ನಾವು ಜಾಗತಿಕವಾಗಿ ಹಲವು ಸಂಸ್ಕೃತಿಗಳಿಂದ ಹೊಸತನ್ನು ಕಲಿಯುತ್ತಿರುವ ಕಾಲದಲ್ಲಿ ನೆಲೆಸಿದ್ದೇವೆ. ವರ್ಷಗಳಿಂದ ಗಜಲ್‌ಗಳನ್ನು ಹಾಡುತ್ತಿದ್ದೇನೆ ಮತ್ತು ಸೂಫಿ ಹಬ್ಬಗಳಲ್ಲೂ ಭಾಗವಹಿಸಿದ್ದೇನೆ. ಹಾಗೆಂದು ನಾನು ಮುಸ್ಲಿಮನಾದೆ ಎಂದರ್ಥವೇ? ಖಂಡಿತ ಅಲ್ಲ. ಹೀಗೆ ನನ್ನ ಮೇಲೆ ಒತ್ತಡ ಹಾಕಿದಾಗ ಹೃದಯಪೂರ್ವಕ ಕಾರ್ಯಕ್ರಮ ನೀಡಲು ಸಾಧ್ಯವಾಗುವುದಿಲ್ಲ ಎಂದು ಗಾಯನವನ್ನು ರದ್ದುಗೊಳಿಸಿದ್ದೇನೆ,” ಎಂದು ಅರುಣ್ ಹೇಳಿದ್ದಾರೆ.

ಕಾರ್ಯಕ್ರಮ ರದ್ದು ಮಾಡಿದ ನಂತರವೂ ಆರ್‌ಎಸ್‌ಎಸ್‌ನ ಎಸ್ ರಾಮನಾಥನ್ ಅರುಣ್ ಮೇಲೆ ಹರಿಹಾಯ್ದಿದ್ದಾರೆ. ಸಂಘಪರಿವಾರ ಬಿಡುಗಡೆ ಮಾಡಿರುವ ಆಡಿಯೋ ಸಂಭಾಷಣೆಯೊಂದರಲ್ಲಿ ಎಸ್ ರಾಮನಾಥನ್ ಅರುಣ್ ಅವರಿಗೆ ಬೆದರಿಕೆ ಹಾಕಿದ್ದಾರೆ. “ಇತರ ಗಾಯಕರೂ ಇತರ ಧರ್ಮಗಳ ಭಕ್ತಿಗೀತೆಗಳನ್ನು ಹಾಡುತ್ತಿರುವಾಗ ತಮ್ಮನ್ನು ಮಾತ್ರ ಪ್ರತ್ಯೇಕವಾಗಿ ನೋಡಿ ಬೈಯುತ್ತಿರುವುದೇಕೆ ಎಂದು ಅರ್ಥವಾಗುತ್ತಿಲ್ಲ,” ಎನ್ನುತ್ತಾರೆ ಅರುಣ್. ಆದರೆ, ಇತರ ಗಾಯಕರೂ ಇಂತಹ ದ್ವೇಷಪೂರ್ಣ ದಾಳಿಯನ್ನು ಎದುರಿಸಿದ್ದಾರೆ. ಕಾರ್ನಾಟಿಕ್ ಗಾಯಕ ಟಿ ಎಂ ಕೃಷ್ಣ ಅವರು ಚರ್ಚ್‌ನಲ್ಲಿಯೇ ಕಾರ್ಯಕ್ರಮ ನೀಡಿದ್ದರು. ಈ ವಿಚಾರ ತಿಳಿದ ಕೂಡಲೇ ರಾಮನಾಥನ್ ಅವರು ಇತರ ಗಾಯಕರ ಮೇಲೆ ದೈಹಿಕ ಹಲ್ಲೆಯ ಬೆದರಿಕೆಯನ್ನು ಹಾಕಿದ್ದರು. ಇತರ ಗಾಯಕರೆಲ್ಲರನ್ನೂ ಸ್ವತಃ ಭೇಟಿ ಮಾಡಿ ಈ ಬಗ್ಗೆ ಮಾತನಾಡುವುದಾಗಿ ರಾಮನಾಥನ್ ಹೇಳಿದ್ದಾರೆ.

ರಾಮನಾಥನ್ ಬಹಿರಂಗ ಹೇಳಿಕೆ ನೀಡಿದ ನಂತರ ಕಾರ್ನಾಟಿಕ್ ಸಂಗೀತದ ಬಗ್ಗೆ ಕಾಳಜಿ ಹೊಂದಿದವರೆಂದು ಹೇಳಿಕೊಳ್ಳುವ ಪಡೆ ಇತರ ಗಾಯಕರನ್ನು ಬೆದರಿಸಲು ಆರಂಭಿಸಿದರು. ಅರುಣಾ ಸಾಯಿರಾಮ್ ಅವರು ಕಾರ್ನಾಟಿಕ್ ಶಾಸ್ತ್ರೀಯ ಸಂಗೀತದಲ್ಲಿ ಹಾಡಿದ ಕ್ರಿಶ್ಚಿಯನ್ ಹಾಡುಗಳ ಅಲ್ಬಂ ಬಿಡುಗಡೆ ಮಾಡುತ್ತಿರುವ ೨೦೦೮ರ ಛಾಯಾಚಿತ್ರಗಳು, ‘ಸಮಾನುಲೇವರು ಪ್ರಭೋ’ ಎನ್ನುವ ಪಾರಂಪರಿಕ ಕೃತಿಯಲ್ಲಿ ಕ್ರಿಶ್ಚಿಯನ್ ಹಾಡನ್ನು ಹಾಡಿದ ನಿತ್ಯಶ್ರೀ ಮಹಾದೇವನ್ ಅವರ ೨೦೧೫ರ ಚಿತ್ರ ಮತ್ತು ಒ ಎಸ್ ಅರುಣ್ ಅವರು ವೇದಿಕೆ ಮೇಲೆ ಕಾರ್ಯಕ್ರಮ ನೀಡುತ್ತಿರುವಾಗ ಕ್ರೈಸ್ತರ ಶಿಲುಬೆಯನ್ನು ಧರಿಸಿರುವ ಚಿತ್ರಗಳನ್ನು ಹರಿಯಬಿಟ್ಟು ಟೀಕಿಸಲಾರಂಭಿಸಿದರು.

ಇದನ್ನೂ ಓದಿ : ವಿಡಿಯೋ | ಪೆರಿಯಾರ್ ಪ್ರತಿಮೆ ಧ್ವಂಸ, ಗಾಯನದ ಮೂಲಕ ಖಂಡಿಸಿದ ಟಿ ಎಂ ಕೃಷ್ಣ

ಆದರೆ, ಹಾಡುಗಾರರೇ ಈ ಬಗ್ಗೆ ಹೆಚ್ಚು ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ ಎನ್ನುವುದು ಟಿ ಎಂ ಕೃಷ್ಣ ಅವರ ಅಭಿಪ್ರಾಯ. “ಕಾರ್ನಾಟಿಕ್ ಸಂಗೀತವು ಆಳವಾಗಿ ಬ್ರಾಹ್ಮಣೀಯ ಹಿಂದೂ ವ್ಯವಸ್ಥೆಯಲ್ಲಿ ತಳವೂರಿದೆ ಮತ್ತು ಅವರೇ ಅದನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ. ಹೀಗಾಗಿ, ಅದು ನಮ್ಮನ್ನು ಕಚ್ಚಲು ಆರಂಭಿಸಿದೆ. ಈ ಕಾರ್ನಾಟಿಕ್ ಗಾಯಕರು ಮುಖ್ಯವಾಗಿ ತಮ್ಮ ಸಮುದಾಯದವರಾಗಿರುವ ಕಾರಣ ಈ ವ್ಯಕ್ತಿಗಳು ಅಷ್ಟೊಂದು ಕಟುವಾಗಿ ವರ್ತಿಸುತ್ತಿದ್ದಾರೆ. ಅವರ ಮೂಢನಂಬಿಕೆಗಳಿಗೆ ಅನುಗುಣವಾಗಿ ಗಾಯಕರು ನಡೆದುಕೊಳ್ಳದಿರುವಾಗ ಸಿಟ್ಟಾಗುತ್ತಿದ್ದಾರೆ,” ಎಂದು ಟಿ ಎಂ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

ಟಿ ಎಂ ಕೃಷ್ಣ ಅವರ ಪ್ರಕಾರ, ಅರುಣ್ ಕಾರ್ಯಕ್ರಮವನ್ನು ರದ್ದು ಮಾಡಬಾರದಿತ್ತು. “ಸಂಗೀತಗಾರರು ದೃಢ ನಿಲುವನ್ನು ಹೊಂದಿರಬೇಕಾದ ಕಾಲವಿದು. ನಾವು ವೃತ್ತಿಪರ ಕಾರಣ ನೀಡಿ ಹಣಕ್ಕಾಗಿ ಈ ಕೆಲಸ ಮಾಡುತ್ತೇವೆ ಎನ್ನುವುದನ್ನು ಒಪ್ಪಿಕೊಳ್ಳಬೇಕು ಅಥವಾ ಕಾರ್ನಾಟಿಕ್ ಸಂಗೀತ ಹಿಂದೂಗಳಿಗೆ ಮಾತ್ರವೇ ಸೀಮಿತವಲ್ಲ ಎನ್ನುವುದನ್ನು ಗಟ್ಟಿಯಾಗಿ ಹೇಳಬೇಕು. ಇದು ರಕ್ಷಣಾತ್ಮಕವಾಗಿ ವರ್ತಿಸುವ ಕಾಲವಲ್ಲ,” ಎಂದು ಟಿ ಎಂ ಕೃಷ್ಣ ಹೇಳಿದ್ದಾರೆ. ಆದರೆ ನಡೆದಿರುವುದು ಅದೇ. ಅರುಣ್ ಅವರು ಆನ್‌ಲೈನ್ ದಾಳಿಯನ್ನು ತಡೆಯಲಾರದೆ ತಮ್ಮ ಕಾರ್ಯಕ್ರಮವನ್ನೇ ರದ್ದು ಮಾಡಿದರೆ, ನಿತ್ಯಶ್ರೀ ಮತ್ತು ಅರುಣಾ ಅವರು ಶಾಸ್ತ್ರೀಯ ಕಾರ್ನಾಟಿಕ್ ಕೃತಿಗಳನ್ನು ಇತರ ಧರ್ಮದ ಭಕ್ತಿಗೀತೆಗಳಲ್ಲಿ ಬಳಸಬಹುದು ಎಂದು ದಿಟ್ಟವಾಗಿ ಹೇಳದೆಹೋದರು.

“ಕಾರ್ನಾಟಿಕ್ ಸಂಗೀತದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಿರುವ ನಾನು ಎಲ್ಲ ಸಂಯೋಜಕರನ್ನೂ ಗೌರವಿಸುತ್ತೇನೆ. ತ್ಯಾಗರಾಜ ಕೃತಿಯನ್ನು ನಾನು ‘ರಾಮ’ನ ಹೆಸರನ್ನು ಮತ್ತೊಂದರಲ್ಲಿ ಬದಲಿಸಿ ಎಂದೂ ಹಾಡುವುದಿಲ್ಲ. ಅದನ್ನು ಒಪ್ಪಲು ಸಾಧ್ಯವಿಲ್ಲ. ಹಾಗೆಂದು, ತ್ಯಾಗರಾಜರ ಮಾಸ್ಟರ್‌ಪೀಸ್ ‘ರಾಮಾ ನೀ ಸಮಾನ ಮೇವರು’ ಅನ್ನು ‘ಕರಹರಪ್ರಿಯ’ದಲ್ಲಿ ಹಾಡುವುದಕ್ಕೂ ಮತ್ತು ಶಂಕರಾಭರಣಂನಲ್ಲೇ ಬಹುತೇಕ ಸಂಯೋಜಿಸಲಾಗಿರುವ ಕ್ರಿಶ್ಚಿಯನ್ ಹಾಡು ‘ಸಾಮಾನುಲೇವರು ಪ್ರಭೋ’ಗೂ ಸಂಬಂಧವೇ ಇಲ್ಲ,” ಎನ್ನುತ್ತಾರೆ ನಿತ್ಯಶ್ರೀ ಮಹಾದೇವನ್.

“ಶ್ರೀಮಂತ ಹಿಂದೂ ಪರಂಪರೆ ಇರುವ ಕುಟುಂಬದಿಂದ ಬಂದ ತಮ್ಮ ಗಾಯನ ಪ್ರದರ್ಶನ ಕೋಮು ಸೌಹಾರ್ದವನ್ನು ಬಿಂಬಿಸುತ್ತದೆ,” ಎಂದು ನಿತ್ಯಶ್ರೀ ಅವರು ಅಭಿಪ್ರಾಯಪಡುತ್ತಾರೆ. “ನಾನು ಬೆಳೆದುಬಂದ ಪರಂಪರೆಯ ಬಗ್ಗೆ ಬಹಳ ಗೌರವವಿದೆ. ಅದನ್ನು ಉಳಿಸಿ ಬೆಳೆಸುವಲ್ಲಿ ನಂಬಿಕೆ ಇಟ್ಟಿರುವೆ. ಹಾಗೆಯೇ, ಶ್ರೀಮಂತ ಕಾರ್ನಾಟಿಕ್ ಶಾಸ್ತ್ರೀಯ ಸಂಗೀತವನ್ನು ನಾನು ಜೀವನವಿಡೀ ನನ್ನೊಳಗೆ ತುಂಬಿಕೊಂಡು ಬೆಳೆದಿದ್ದೇನೆ. ಶ್ರೀಮಂತ ಶಾಸ್ತ್ರೀಯ ಸಂಗೀತ, ಪರಂಪರೆ, ಸಮುದಾಯ, ಸಮಾಜ, ರಾಷ್ಟ್ರ ಮತ್ತು ಮನುಕುಲದ ವರ್ಚಸ್ಸನ್ನು ಹಾಳುಗೆಡಹುವ ಕಾರ್ಯವನ್ನು ನಾನೆಂದೂ ಮಾಡುವುದಿಲ್ಲ ಎನ್ನುವ ದೃಢ ನಂಬಿಕೆ ಇದೆ,” ಎಂದು ಅವರು ಹೇಳಿದ್ದಾರೆ. ಅರುಣಾ ಸಾಯಿರಾಂ ಅವರು ಟ್ವೀಟ್ ಮಾಡಿ, “ಕ್ರೈಸ್ತ ಸಂಗೀತದ ಉದ್ದೇಶಕ್ಕಾಗಿ ಕೃತಿಗಳನ್ನು ಬದಲಾಯಿಸಿ ಹಾಡಿಲ್ಲ,” ಎಂದು ತಮ್ಮ ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.

ಈ ಸ್ಪಷ್ಟೀಕರಣಗಳಿಂದ ಅಂತರ್ಜಾಲದಲ್ಲಿ ಈ ಗಾಯಕರನ್ನು ಅವಹೇಳನ ಮಾಡುವ ಪ್ರಯತ್ನ ಮಾತ್ರ ನಿಂತಿಲ್ಲ. ಹಾಡುಗಾರರ ಮೇಲೆ ಕೃತಿಚೌರ್ಯದ ಆರೋಪ ಹೊರಿಸಲಾಗುತ್ತಿದೆ. ಹಿಂದೂ ಸಂಪ್ರದಾಯವನ್ನು ಹಣಕ್ಕಾಗಿ ಮಾರುವ ಮೂಲಕ ಯುವಜನರಿಗೆ ಕೆಟ್ಟ ಉದಾಹರಣೆಯಾಗುತ್ತಿದ್ದಾರೆ ಎಂದು ದೂರಲಾಗುತ್ತಿದೆ. ಈ ಕಾರ್ಯಕ್ರಮಗಳನ್ನು ಬಹಿಷ್ಕರಿಸಲೂ ಕರೆನೀಡಲಾಗಿದೆ. “ಇಂತಹ ದ್ವೇಷಮಯ ವಾತಾವರಣ ಸೃಷ್ಟಿಯ ಪ್ರಯತ್ನಕ್ಕೆ ಕೊನೆಯೇ ಇರುವುದಿಲ್ಲ,” ಎಂದು ಡ್ಯಾನ್ಸರ್ ಮತ್ತು ಇತಿಹಾಸತಜ್ಞರೂ ಆಗಿರುವ ಸ್ವರ್ಣಮಾಲ್ಯ ಅಭಿಪ್ರಾಯಪಟ್ಟಿದ್ದಾರೆ. “ತಪ್ಪು ಅಭಿಪ್ರಾಯಗಳನ್ನು ಸೃಷ್ಟಿಸುವ ಪ್ರಯತ್ನವು ಬಹುಕಾಲದಿಂದ ನಡೆಯುತ್ತಿದೆ. ಮುತ್ತುಸ್ವಾಮಿ ದೀಕ್ಷಿತರ್ ಅವರ ಬಗ್ಗೆ ನಾವು ಬಹಳಷ್ಟು ಪ್ರಶಂಸಿಸುತ್ತೇವೆ. ಆದರೆ, ಅವರು ಸಂಸ್ಕೃತ ಮತ್ತು ತೆಲುಗಿನಲ್ಲಿ ಪಾಶ್ಚಾತ್ಯ ಲಿಪಿಗಳನ್ನು ಬಳಸಿ ಸಂಯೋಜಿಸಿದ್ದಾರೆ. ಅದನ್ನೇ ನಂತರ ನಾವು ‘ನೊಟ್ಟುಸ್ವರ ಸಾಥಿಯ’ ಎಂದು ಹೇಳಿದ್ದೇವೆ. ಅದು ಬುದ್ಧಿವಂತಿಕೆಯಲ್ಲವೇ?” ಎಂದು ಅವರು ಪ್ರಶ್ನಿಸುತ್ತಾರೆ.

ಹಾಗಿದ್ದರೆ, ಈಗ ಕಾರ್ನಾಟಿಕ್ ಗಾಯಕರ ಮೇಲೆ ದ್ವೇಷಮಯ ವಾತಾವರಣ ಸೃಷ್ಟಿಯಾಗಲು ಕಾರಣವೇನು? “ಇವೆಲ್ಲವನ್ನೂ ಪ್ರಮುಖವಾಗಿ ತೋರಿಸುವಂತಹ ಒಂದು ವಾತಾವರಣದಲ್ಲಿ ನಾವೀಗ ನೆಲೆಸಿದ್ದೇವೆ. ನಾವು ಅತಿ ಸೂಕ್ಷ್ಮವಾಗಿ ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ. ನಮ್ಮ ಸಂಸ್ಕೃತಿಯ ಮೇಲೆ ದಾಳಿಯಾಗುತ್ತದೆ ಎಂದುಕೊಳ್ಳುತ್ತಿದ್ದೇವೆ. ಹಾಗೆ ಅಂದುಕೊಂಡು ರಕ್ಷಣಾತ್ಮಕವಾಗಿ ಕೆಲಸ ಮಾಡುವ ಪ್ರಯತ್ನದಲ್ಲಿದ್ದೇವೆ,” ಎನ್ನುವುದು ಸ್ವರ್ಣಮಾಲ್ಯ ಅಭಿಪ್ರಾಯ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More