ಕಳೆದ ವರ್ಷ ದೇಶದಲ್ಲಿ ಸ್ವಾತಂತ್ರ್ಯ ಹರಣಕ್ಕೆ ಕಾರಣವಾದ ಹತ್ತು ಸಂಗತಿಗಳು

ಇತ್ತೀಚಿನ ವರ್ಷಗಳಲ್ಲಿ ಭಾರತದ ಬೆಳವಣಿಗೆಗಳು, ಆಡಳಿತ ವ್ಯವಸ್ಥೆಯ ವರಸೆಗಳನ್ನು ಗಮನಿಸಿದರೆ ಸರ್ವಸಮಾನತೆ, ಸತ್ಯ, ಮುಕ್ತ ಚಿಂತನೆ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಉಳಿದಿದೆಯೇ ಎಂಬ ಅನುಮಾನ ಮೂಡಿದೆ. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ನಾವು ಕಳೆದುಕೊಂಡ ಸ್ವಾತಂತ್ರ್ಯದ ಪಟ್ಟಿ ಇದು

ಮತ್ತೊಂದು ಸ್ವಾತಂತ್ರ್ಯೋತ್ಸವ ಬಂದಿದೆ. ರಾಜಕೀಯ ಸ್ವಾತಂತ್ರ್ಯದ ಜೊತೆಯಲ್ಲೇ, ಜಾತಿ, ಧರ್ಮ, ಲಿಂಗ ಮತ್ತು ವರ್ಗ ಭೇದವಿಲ್ಲದೆ ಎಲ್ಲ ಭಾರತೀಯರಿಗೂ ಸಮಾನ ಸ್ವಾತಂತ್ರ್ಯವನ್ನು ಪಡೆಯುವುದಕ್ಕಾಗಿ ನಡೆದ ಎರಡು ಶತಮಾನದ ಹೋರಾಟ, ತ್ಯಾಗ, ಬಲಿದಾನದ ಫಲ ಈ ಸ್ವಾತಂತ್ರ್ಯ. ಅಂತಹ ಆಶಯಗಳ ಮೇಲೆಯೇ ನಮ್ಮ ಆಡಳಿತದ ಆಕರ ಸಂವಿಧಾನ ಕೂಡ ನೆಲೆಯಾಗಿದೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಭಾರತದ ಬೆಳವಣಿಗೆಗಳು, ಆಡಳಿತ ವ್ಯವಸ್ಥೆಯ ವರಸೆಗಳನ್ನು ಗಮನಿಸಿದರೆ, ಅಂತಹ ಸರ್ವಸಮಾನತೆಯ, ಸತ್ಯಮೇಯ ಜಯತೆಯ, ಮುಕ್ತ ಚಿಂತನೆಯ ಮತ್ತು ಅಭಿವ್ಯಕ್ತಿಯ ಅವಕಾಶದ ಸ್ವಾತಂತ್ರ್ಯ ಉಳಿದಿದೆಯೇ ಎಂಬ ಅನುಮಾನ ಕಾಡದೇ ಇರದು. ಅದರಲ್ಲೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಅಧಿಕಾರದ ಸೂತ್ರ ಹಿಡಿದ ಬಳಿಕ ಭಾರತದ ಸ್ವಾತಂತ್ರ್ಯದ ಅರ್ಥ ಮತ್ತು ಪ್ರಜಾಪ್ರಭುತ್ವದ ವಾತಾವರಣ ಸಾಕಷ್ಟು ಬದಲಾಗಿದೆ ಎಂದರೆ ತಪ್ಪಾಗಲಾರದು. ವಿಶ್ವದಲ್ಲೇ ಅತ್ಯಂತ ದೊಡ್ಡದಾದ ಮತ್ತು ಪ್ರಬುದ್ಧ ಪ್ರಜಾಪ್ರಭುತ್ವ ಎಂಬ ಹೆಗ್ಗಳಿಕೆ ಹೊಂದಿದ್ದ ಭಾರತೀಯ ವ್ಯವಸ್ಥೆಗೆ ಇದೀಗ ಅಪವಾದಗಳ ಮಸಿ ಮೆತ್ತಿಕೊಂಡಿದೆ.

ದೇಶದ ದಲಿತರು, ಮಹಿಳೆಯರು, ಅಲ್ಪಸಂಖ್ಯಾತರು, ಪತ್ರಕರ್ತರು, ವಿಚಾರವಾದಿಗಳು, ಪ್ರತಿಪಕ್ಷಗಳ ಮುಖಂಡರಿಗೆ ಕೂಡ, “ಈ ಹಿಂದಿನ ದಿನಗಳಿಗೆ ಹೋಲಿಸಿದರೆ,ಈಗ ಏನೋ ಬದಲಾಗಿದೆ. ತಮ್ಮ ಮಾತು,ಬರಹ, ಹೋರಾಟ, ಆಲೋಚನೆ, ಚಿಂತನೆಗೆ ಯಾರೋ ಕಡಿವಾಣ ಹಾಕುತ್ತಿದ್ದಾರೆ,’’ ಎನ್ನಿಸತೊಡಗಿದೆ. ಆಡುವ ಮಾತಿಗೆ ಮುನ್ನವೇ ಕತ್ತುಹಿಸುಕುವ, ಬರೆಯುವ ಬರಹ ಮೂಡುವ ಮೊದಲೇ ಕೈಕಟ್ಟಿಹಾಕುವ, ಹೋರಾಟದ ಹಾದಿಗೆ ಬೇಲಿ ಹಾಕುವ, ಮನದ ಆಲೋಚನೆಗಳನ್ನು ಮುರುಟಿಸುವ ಅನುಭವ ಈಗ ಈ ಎಲ್ಲರದ್ದೂ ಆಗಿದೆ. ಕುಡಿಯುವ ನೀರಿಗೆ, ತಿನ್ನುವ ಅನ್ನಕ್ಕೆ, ಆಡುವ ಮಾತಿಗೆ ಯಾರದ್ದೋ ಅಪ್ಪಣೆ ಪಡೆಯುವ; ಇಲ್ಲವೇ ಜೀವಭಯ ಎದುರಿಸಬೇಕಾದ ಸ್ಥಿತಿ. ಈ ಎಲ್ಲರಿಗೆ ಅವರವರ ಅನುಭವವು, “ನೀನೇನನ್ನೋ ಕಳೆದುಕೊಂಡಿದ್ದೀಯ. ನಿನ್ನ ಅಭಿವ್ಯಕ್ತಿಯ, ಅಡುಗೆಯ, ಊಟದ, ಹೋರಾಟದ, ಪ್ರಶ್ನಿಸುವ, ವಿಚಾರ ಮಾಡುವ, ಉಡುವ-ತೊಡುವ ಸ್ವಾತಂತ್ರ್ಯ ಕಳೆದುಹೋಗಿದೆ; ಅಂಬೇಡ್ಕರರ ವಿಚಾರ ಮತ್ತು ಚಿಂತನೆಯ ಫಲವಾದ ಸಂವಿಧಾನ ಕೊಡಮಾಡಿದ ನಿನ್ನ ಹಕ್ಕುಗಳನ್ನು ಕಸಿದುಕೊಳ್ಳಲಾಗಿದೆ.ನಿನ್ನ ಸ್ವಾತಂತ್ರ್ಯ ಹರಣವಾಗಿದೆ,’’ ಎನ್ನುವ ಅವ್ಯಕ್ತ ಸಂದೇಶವನ್ನು ನೀಡುತ್ತಿದೆ. ಇಂಥ ‘ಹರಣ’ದ ಅನುಭವಕ್ಕೆ ಕಾರಣವಾಗಿರುವ ಹತ್ತು ಬೆಳವಣಿಗೆಗಳಿವು.

1. ವಿಚಾರವಾದಿಗಳ ಹತ್ಯೆ, ಹತ್ಯೆ ಯತ್ನ

ಸ್ವಾತಂತ್ರ್ಯದ ನಿಜ ಅರ್ಥ ಇರುವುದೇ ವ್ಯಕ್ತಿ ಸ್ವಾತಂತ್ರ್ಯದಲ್ಲಿ. ವ್ಯಕ್ತಿ ಸ್ವಾತಂತ್ರ್ಯದ ವಿಸ್ತರಣೆಯ ಭಾಗವಾಗಿಯೇ ರಾಜಕೀಯ ಸ್ವಾತಂತ್ರ್ಯವೂ ಇದೆ. ಮುಕ್ತ ಚಿಂತನೆ, ವಿಮರ್ಶೆ, ಅಭಿವ್ಯಕ್ತಿಗಳ ಸ್ವಾತಂತ್ರ್ಯವೂ ಇದೆ. ಆದರೆ, ಕಳೆದ ನಾಲ್ಕಾರು ವರ್ಷಗಳಿಂದ ಅಂತಹ ಮುಕ್ತ ವಾತಾವರಣವೇ ಕಾಣೆಯಾಗುತ್ತಿದೆ ಎಂಬುದು ದೇಶದ ಎಲ್ಲೆಡೆ ಕೇಳಿಬರುತ್ತಿರುವ ಆತಂಕದ ಮಾತು. ಅಂತಹ ಮಾತುಗಳಿಗೆ ಇಂಬು ನೀಡಿದ್ದು, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ. ಜಾಗತಿಕ ಮಟ್ಟದಲ್ಲಿ ಭಾರತೀಯ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಮರುಚಿಂತನೆಗೆ ಹಚ್ಚಿದ ಈ ಪ್ರಕರಣಕ್ಕೆ ಮುಂಚೆ ಕೂಡ ವಿಚಾರವಾದಿಗಳಾದ ಎಂ ಎಂ ಕಲಬುರ್ಗಿ, ಗೋವಿಂದ ಪಾನ್ಸರೆ, ದಾಭೋಲ್ಕರ್ ಅವರುಗಳನ್ನು ಅವರ ವಿಚಾರವಾದ ಮತ್ತು ಪ್ರಖರ ಚಿಂತನೆಗಳನ್ನು ಹತ್ತಿಕ್ಕುವ ಉದ್ದೇಶದಿಂದಲೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತರಾದವರು ನೀಡಿರುವ ಮಾಹಿತಿ ಪ್ರಕಾರ ಅವರ ಕೊಲ್ಲುವ ಪಟ್ಟಿಯಲ್ಲಿ ಕರ್ನಾಟಕ ಮತ್ತು ದೇಶದ ಹಲವು ಚಿಂತಕರು, ವಿಚಾರವಂತರ ಹೆಸರುಗಳಿದ್ದವು. ಇದೀಗ ದೆಹಲಿ ವಿವಿ ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಹತ್ಯೆಗೆ ಯತ್ನ ನಡೆದಿದೆ. ಅವರು ಕೂಡ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಿದ್ದವರು ಮತ್ತು ಕೇಂದ್ರದ ಬಿಜೆಪಿ ಸರ್ಕಾರದ ನೀತಿಗಳ ವಿರುದ್ಧ ಸಂಘಟಿತ ಹೋರಾಟವನ್ನು ಕಟ್ಟಿದ್ದವರು ಎಂಬುದು ಗಮನಾರ್ಹ.

ಧರ್ಮ ನನಗೆ ಹೆಚ್ಚು ಪರಿಚಿತವಲ್ಲ. ನನಗೆ ವಯಸ್ಸೂ ಆಗಿರುವುದರಿಂದ ನಾನು ಅದರಿಂದ ದೂರವೇ ಆಗಿದ್ದೇನೆ. ಆದರೆ ಅದರ ಜಾಗದಲ್ಲಿ ಬುದ್ಧಿ ಮತ್ತು ವಿಚಾರವಂತಿಕೆಯನ್ನು ನಂಬಿದ್ದೇನೆ. ಅದು ನನಗೆ ಶಕ್ತಿ ಮತ್ತು ನಂಬಿಕೆ ನೀಡುತ್ತದೆ.
ಜವಹರಲಾಲ್‌ ನೆಹರು

೨. ಪ್ರಶ್ನೆ ಮಾಡುವವರ ಧ್ವನಿ ಉಡುಗಿಸುವುದು

ಸೈದ್ಧಾಂತಿಕವಾಗಿ ಎದುರಾಡುವವರನ್ನು ಕೊಲ್ಲುವ, ಕೊಲೆಗೆ ಯತ್ನಿಸಿ ಬೆದರಿಸುವ ಜೊತೆಗೆ ಆಡಳಿತ ವ್ಯವಸ್ಥೆಯನ್ನು, ದುರಾಡಳಿತವನ್ನು, ಅಮಾನವಿಯ ಮತ್ತು ಪರಿಸರ ವಿರೋಧಿ ನಿಲುವುಗಳನ್ನು ಪ್ರಶ್ನೆ ಮಾಡುವವರನ್ನು ಹತ್ತಿಕ್ಕುವ, ಅಂಥವರ ದ್ವನಿಯನ್ನು ವ್ಯವಸ್ಥಿತವಾಗಿ ಉಡುಗಿಸುವ ಪ್ರಯತ್ನವನ್ನೂ ಮಾಡಲಾಗುತ್ತಿದೆ. ವಿದೇಶಿ ಹಣಕಾಸಿನ ನೆರವು ನಿಯಂತ್ರಣ ಕಾಯಿದೆ ಮತ್ತಿತರ ಕಾನೂನು ಬಳಸಿಕೊಂಡು ಮಾನವ ಹಕ್ಕು ಮತ್ತು ಪರಿಸರ ಹೋರಾಟ ನಡೆಸುವ ಆಯ್ದ ನಿರ್ದಿಷ್ಟ ಅಥವಾ “ಗುರುತಿಸಲ್ಪಟ್ಟ’’ ವ್ಯಕ್ತಿಗಳು ಮತ್ತು ಸ್ವಯಂ ಸೇವಾ ಸಂಘಟನೆಗಳನ್ನು ಕೇಂದ್ರ ಹತ್ತಿಕ್ಕುತ್ತಿದೆ. ಕೆಲವು ಕ್ಷುಲ್ಲಕ ಕಾರಣಗಳನ್ನು ಮುಂದೊಡ್ಡಿ ಹಲವು ಜನಪರ ಹೋರಾಟಗಾರರ ನೇತೃತ್ವದ ನೂರಾರು ಸ್ವಯಂ ಸೇವಾ ಸಂಘಟನೆಗಳ ಪರವಾನಗಿಯನ್ನು ರದ್ದು ಗೊಳಿಸಲಾಗಿದೆ. ಇದರಿಂದ ದೇಶದಲ್ಲಿ ನಾಗರಿಕ ಸಮಾಜದ ‘ಒಳಗೊಳ್ಳುವಿಕೆ’ ಸೂಚ್ಯಂಕವು ದೊಡ್ಡ ಮಟ್ಟದಲ್ಲಿ ಕುಸಿತ ಕಂಡಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಅದಕ್ಕಿಂತ ಮುಖ್ಯ, ಪ್ರಶ್ನಿಸುವವರು ಇದ್ದಾಗ ಮಾತ್ರ ‘ಪ್ರಜಾಪ್ರಭುತ್ವದ ಸೌಂದರ್ಯ’ ಅರಳುತ್ತದೆ ಎನ್ನುವ ನಂಬಿಕೆ ಭಾರತದ ಸಂದರ್ಭದಲ್ಲಿ ಮುರುಟಿಹೋಗುತ್ತಿದೆ.

ಭಾರತದ ಪ್ರತೀ ಪ್ರಜೆಯೂ ತಾನು ಭಾರತೀಯ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಪ್ರತೀ ಭಾರತೀಯನೂ ತನ್ನ ಕೆಲವು ಕರ್ತವ್ಯಗಳ ಜೊತೆಗೆ ದೇಶದಲ್ಲಿ ನೆಲೆಸುವ ಹಕ್ಕನ್ನು ಪಡೆದಿದ್ದಾರೆ.
ಸರ್ದಾರ್ ವಲಭ ಬಾಯ್ ಪಟೇಲ್‌

೩. ನಾಗರಿಕರ ಆರ್ಥಿಕ ಸ್ವಾತಂತ್ರ್ಯ ಕಸಿದ ಕೇಂದ್ರ ಸರ್ಕಾರ

ರುಪಾಯಿ ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿಯಲು ಹೊರಗಿನ ಶಕ್ತಿಗಳೇ ಕಾರಣ ಎಂದು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೇಳುತ್ತಿದೆ. ಆದರೆ, ಇದು ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳ ಫಲಶೃತಿ. ದೇಶ ಇನ್ನೂ ಅಪನಗದೀಕರಣದ ಕರಿನೆರಳಿನಿಂದ ಪಾರಾಗಿಲ್ಲ. 2017 ಆಗಸ್ಟ್ 15ರಿಂದ 2018 ಆಗಸ್ಟ್ 15ರವರೆಗೆ ದೇಶದ ನಾಗರಿಕರಿಗೆ ದಕ್ಕಿದ್ದು ಬರೀ ಬೆಲೆ ಏರಿಕೆಗಳ ಕೊಡುಗೆ. ತನ್ನ ಆರ್ಥಿಕ ನೀತಿಗಳ ವೈಫಲ್ಯ ಮುಚ್ಚಿಕೊಳ್ಳಲು ಜನರ ಆರ್ಥಿಕ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ಕಸಿದುಕೊಂಡಿದೆ. ಒಂದೇ ವರ್ಷದಲ್ಲಿ ಪೆಟ್ರೋಲ್, ಡೀಸೆಲ್ ದರ ಶೇ.16-17ರಷ್ಟು ಏರಿಕೆಯಾಗಿದೆ. ಡಾಲರ್ ವಿರುದ್ಧ ರುಪಾಯಿ ಮೌಲ್ಯ ಶೇ.12ರಷ್ಟು ಕುಸಿದಿದೆ. ಸರಕು ಸೇವೆಗಳ ಮೇಲೆ ತೆರಿಗೆ ಹೇರಿದ್ದರಿಂದ ದರವೂ ಹೆಚ್ಚಿದೆ. ಹಣದುಬ್ಬರವೂ ಏರುತ್ತಿದೆ. ಅದರ ಪರಿಣಾಮ ಭಾರತೀಯ ರಿಸರ್ವ್ ಬ್ಯಾಂಕ್ ಸತತವಾಗಿ ಎರಡು ಬಾರಿ ಬಡ್ಡಿದರ ಏರಿಕೆ ಮಾಡಿದೆ. ಈಗ ಬ್ಯಾಂಕ್ ಸಾಲ ಕೂಡಾ ದುಬಾರಿಯಾಗಿದೆ. ಜನರ ಸಂಕಷ್ಟುಗಳು ದಿನದಿಂದ ದಿನಕ್ಕೆ ಹಿಗ್ಗುತ್ತಿವೆ. ಆದರೆ, ಅಂಬಾನಿ, ಅದಾನಿಯಂತಹ ಉದ್ಯಮಿಗಳ ಸಂಪತ್ತು ಮಾತ್ರ ವೃದ್ಧಿಯಾಗುತ್ತಲೇ ಇದೆ. ನೀರವ್ ಮೋದಿಯಂತಹವರು ಸಾವಿರಾರು ಕೋಟಿ ವಂಚಿಸಿ ವಿದೇಶಗಳಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಇತ್ತ ದೇಶದ ಜನರು 2 ಲಕ್ಷ ರೂಪಾಯಿ ನಗದು ವಹಿವಾಟು ನಡೆಸಿದರೂ ಶಿಕ್ಷೆ ಅನುಭವಿಸುವ ಪರಿಸ್ಥಿತಿ ತಲೆದೋರಿದೆ.

ನೈತಿಕತೆ ಮತ್ತು ಅರ್ಥಶಾಸ್ತ್ರದ ನಡುವೆ ಸಂಘರ್ಷವಾದಾಗ ಯಾವಾಗಲೂ ಅರ್ಥಶಾಸ್ತ್ರವೇ ಗೆಲ್ಲುವುದು ಎನ್ನುವುದನ್ನು ಇತಿಹಾಸ ತೋರಿಸಿಕೊಟ್ಟಿದೆ. ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಮೇಲೆ ಸಾಕಷ್ಟು ಒತ್ತಡ ಬೀಳದ ಹೊರತಾಗಿ ತಾವೇ ಉದ್ದೇಶಪೂರ್ವಕವಾಗಿ ಯಾವತ್ತೂ ಬಿಟ್ಟುಕೊಡುವುದಿಲ್ಲ.
ಬಿ ಆರ್ ಅಂಬೇಡ್ಕರ್‌

೪. ಗುಂಪು ದೊಂಬಿಯ ಕರಾಳ ಹತ್ಯೆಗಳು

ಗೋವನ್ನು ಹಿಂದೂಗಳಿಗೆ ಪವಿತ್ರ ಎಂಬ ವಾದವನ್ನು ಮುಂದಿಟ್ಟು, ಗೋಸಾಗಣೆ, ದನದ ಮಾಂಸದ ಬಳಕೆಯ ವಿರುದ್ಧ ದೇಶಾದ್ಯಂತ ವ್ಯಾಪಕ ಮತ್ತು ಅಮಾನುಷ ದಾಳಿಗಳನ್ನು ಹಿಂದುತ್ವವಾದಿ ಗೋರಕ್ಷಕರು ನಡೆಸಿದ್ದಾರೆ. ಮುಸ್ಲಿಮ್‌ ಮತ್ತು ದಲಿತ ಸಮುದಾಯಕ್ಕೆ ಸೇರಿದ ವ್ಯಕ್ತಿಗಳನ್ನು ಗೋರಕ್ಷಣೆಯ ಹೆಸರಿನಲ್ಲಿ ಹತ್ಯೆ ಮಾಡಿದ್ದಾರೆ. ಕರ್ನಾಟಕದ ಉಡುಪಿಯ ಹುಸೇನಬ್ಬ, ಪ್ರವೀಣ ಪೂಜಾರಿ ಕೂಡ ಗೋರಕ್ಷರಕ ಅಟ್ಟಹಾಸಕ್ಕೆ ಬಲಿಯಾದರು. ಗೋರಕ್ಷಕರ ದಾಳಿಗಳಿಂದ ಪ್ರೇರಿತರಾದಂತೆ ಕಂಡುಬರುತ್ತಿರುವ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುವ ಸುಳ್ಳುಸುದ್ದಿಗಳನ್ನೇ ನಂಬಿ ಅಪರಿಚಿತ, ಅಮಾಯಕ ವ್ಯಕ್ತಿಗಳ ಮೇಲೆ ಗುಂಪಾಗಿ ದಾಳಿ ನಡೆಸಿ ಹೊಡೆದು ಸಾಯಿಸುವ ಘಟನೆಗಳು ದೇಶದ ಮೂಲೆ ಮೂಲೆಗಳಲ್ಲಿ ಸಾಂಕ್ರಾಮಿಕ ರೋಗದಂತೆ ಹಬ್ಬಿವೆ. ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ, ಉತ್ತರಪ್ರದೇಶ ಸೇರಿದಂತೆ ದೇಶದ ಹಲವು ಭಾಗದಲ್ಲಿ ಕಳೆದ ಒಂದು ವರ್ಷದಲ್ಲಿ ನಡೆದ ಇಂತಹ ದಾಳಿಗಳಿಗೆ ನೂರಕ್ಕೂ ಹೆಚ್ಚು ಮಂದಿ ಅಮಾಯಕರು ಬಲಿಯಾಗಿದ್ದಾರೆ. ಅಂತಹ ಘಟನೆಗಳಿಗೆ ಪರಿಣಾಮಕಾರಿ ಕಠಿಣ ಕ್ರಮಗಳನ್ನು ಜಾರಿ ಮಾಡುವಲ್ಲಿ ಪೊಲೀಸ್ ಮತ್ತು ಆಡಳಿತ ವ್ಯವಸ್ಥೆಗಳ ವೈಫಲ್ಯ ಹಾಗೂ ಅಧಿಕಾರದ ಸೂತ್ರಧಾರರಿಂದ ಎಚ್ಚರಿಕೆಯ ಮಾತುಗಳ ಕೊರತೆ ಹಿನ್ನೆಲೆಯಲ್ಲಿ ದೇಶದಲ್ಲಿ ಯಾರು, ಯಾರನ್ನು ಬೇಕಾದರೂ ಶಂಕೆ-ಅನುಮಾನದ ಮೇಲೆ ಬೀದಿಯಲ್ಲಿ ಹೊಡೆದು ಸಾಯಿಸಬಹುದೆಂಬ ಆತಂಕದ ವಾತಾವರಣ ನಿರ್ಮಾಣಗೊಂಡಿದೆ.

ನಮ್ಮದು ಸ್ವತಂತ್ರ ದೇಶ ಮತ್ತು ಈ ಸ್ವಾತಂತ್ರ್ಯವನ್ನು ರಕ್ಷಿಸುವುದು ಪ್ರತೀ ಪ್ರಜೆಯ ಕರ್ತವ್ಯ. ಪ್ರತೀ ಭಾರತೀಯನು ತಾನು ರಜಪೂತ, ಸಿಖ್ ಅಥವಾ ಜಾಟ್‌ ಎನ್ನುವುದನ್ನು ಮರೆಯಬೇಕು. ತಾನು ಭಾರತೀಯ ಎನ್ನುವುದನ್ನು ನೆನಪಿಟ್ಟುಕೊಳ್ಳಬೇಕು. ಆತನಿಗೆ ಕೆಲವು ಕರ್ತವ್ಯಗಳ ಜೊತೆಗೆ ದೇಶದಲ್ಲಿ ನೆಲೆಸುವ ಹಕ್ಕನ್ನು ಪಡೆದಿದ್ದಾರೆ.
ಸರ್ದಾರ್ ಪಟೇಲ್‌

೫. ಮಹಿಳೆಯರು, ಮಕ್ಕಳ ಮೇಲಿನ ಪೈಶಾಚಿಕ ಕೃತ್ಯಗಳು

ಇತ್ತೀಚಿನ ವರ್ಷಗಳಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಷ್ಟೇ ಸಾಮಾಜಿಕ ಅಭದ್ರತೆ, ಜೀವ-ಮಾನ ಹಾನಿಯ ಭೀತಿ ಎದುರಿಸುತ್ತಿರುವ ಮತ್ತೊಂದು ವರ್ಗ ಮಹಿಳೆಯರದ್ದು. ಸರಣಿ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಸಾಂಕ್ರಾಮಿಕದಂತೆ ಹರಡಿವೆ. ಅತ್ಯಾಚಾರ ಪ್ರಕರಣಗಳಲ್ಲಿ ಸಂತ್ರಸ್ತ ಮಹಿಳೆ, ಮಕ್ಕಳ ಪರ ನಿಲ್ಲಬೇಕಾದ ಆಡಳಿತ ವ್ಯವಸ್ಥೆ ಮತ್ತು ಸರ್ಕಾರಗಳು ಅತ್ಯಾಚಾರಿ ಅಪರಾಧಿಗಳ ಪರವೇ ವಕಾಲತು ವಹಿಸಿದ ಘಟನೆಗಳೂ ನಡೆದಿವೆ. ಜಮ್ಮು ಕಾಶ್ಮೀರದ ಕಥುವಾದಲ್ಲಿ ಮುಸ್ಲಿಂ ಬುಡಕಟ್ಟು ಬಾಲಕಿಯ ಮೇಲೆ ನಡೆದ ಅತ್ಯಾಚಾರಕ್ಕೆ ಕಾರಣ ಆಕೆಯ ಸಮುದಾಯದ ವಿರುದ್ಧ ಅಲ್ಲಿನ ಹಿಂದುತ್ವವಾದಿ ಸಂಘಟನೆಗಳಿಗೆ ಇದ್ದ ದ್ವೇಷ ಕಾರಣವಾಗಿತ್ತು ಮತ್ತು ಆ ಹಿನ್ನೆಲೆಯಲ್ಲಿ ಅಲ್ಲಿನ ಬಿಜೆಪಿ ಸಮ್ಮಿಶ್ರ ಆಡಳಿತದ ಸಚಿವರೇ ಅತ್ಯಾಚಾರಿಗಳ ಬಂಧನವನ್ನು ವಿರೋಧಿಸಿ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಅದೇ ಬಿಜೆಪಿಯ ಯೋಗಿ ಆದಿತ್ಯನಾಥರು ಸರ್ಕಾರದ ಚುಕ್ಕಾಣಿ ಹಿಡಿದಿರುವ ಉತ್ತರಪ್ರದೇಶದ ಉನ್ನಾವ್‌ ನಲ್ಲಿಯೂ ಇಂತಹದ್ದೇ ಘಟನೆ ನಡೆದಿತ್ತು. ಅವರ ಪಕ್ಷದ ಶಾಸಕನ ವಿರುದ್ಧವೇ ಯುವತಿಯೊಬ್ಬಳು ಅತ್ಯಾಚಾರ ಮತ್ತು ಕೊಲೆ ಆಪಾದನೆ ಮಾಡಿದಾಗಲೂ ಬಿಜೆಪಿ ಸರ್ಕಾರ ಆತನ ರಕ್ಷಣೆಗೆ ನಿಂತಿತ್ತು!

ಒಂದು ಸಮುದಾಯದ ಪ್ರಗತಿಯನ್ನು ನಾನು ಆ ಸಮುದಾಯದ ಮಹಿಳೆಯರು ಸಾಧಿಸಿದ ಪ್ರಗತಿಯನ್ನು ಆಧರಿಸಿ ಅಳೆಯುತ್ತೇನೆ.
ಬಿ ಆರ್ ಅಂಬೇಡ್ಕರ್‌

೬. ಏಕಚಕ್ರಾಧಿಪತ್ಯ ಸ್ಥಾಪನೆಯ ದಾರ್ಷ್ಟ್ಯ

ತಾನು ಸಾಧಿಸಲು ಹೊರಟಿದ್ದನ್ನು (ಹಿಂದೂ ರಾಷ್ಟ್ರ ನಿರ್ಮಾಣ ಇತ್ಯಾದಿ) ಈಡೇರಿಸಿಕೊಳ್ಳಲು ರಾಜಕೀಯವಾಗಿ ಮತ್ತಷ್ಟು ಬಲಿಷ್ಟವಾಗಬೇಕು ಎನ್ನುವುದು ಬಿಜೆಪಿಯ ಇರಾದೆ. ಆದ್ದರಿಂದಲೇ,‘ಕಾಂಗ್ರೆಸ್ ಮುಕ್ತ’ಗೊಳಿಸುವ ಮೂಲಕ ಪ್ರತಿಪಕ್ಷವೇ ಇಲ್ಲದಂತಹ ‘ಏಕ ಚಕ್ರಾಧಿಪತ್ಯ’ವನ್ನು ಸ್ಥಾಪಿಸಿಕೊಳ್ಳುವ ಹಂಬಲ ಹೊಂದಿರುವುದು ಬಿಜೆಪಿ ವರಿಷ್ಠರ ಮಾತುಗಳಲ್ಲೇ ವ್ಯಕ್ತ. ಇಷ್ಟು ಮಾತ್ರವಲ್ಲ ಅವರ ರಾಜಕೀಯ ‘ವಕ್ರದೃಷ್ಟಿ’ ಈಗ ಹಲವು ಪ್ರಾದೇಶಿಕ ಪಕ್ಷಗಳ ಮೇಲೂ ಬಿದ್ದಿದೆ. ತಮ್ಮ ರಾಜಕೀಯ ಇಷ್ಟಾರ್ಥ ಸಿದ್ಧಿಗೆ ಏನನ್ನೂ ಮಾಡಲು ತಯಾರಿರುವ ಬಿಜೆಪಿಯ ಚುನಾವಣಾ ‘ಚಾಣಾಕ್ಯ’ರು, ಈಗಾಗಲೇ ಹಲವು ಬಗೆಯ ತಂತ್ರ-ಪ್ರತಿ ತಂತ್ರಗಳ ಮೂಲಕ ಹಲವು ರಾಜ್ಯಗಳಲ್ಲಿ ದಿಗ್ವಜಯ ಸಾಧಿಸಿದ್ದಾರೆ. ಅಗತ್ಯವಿದ್ದಾಗ ರಾಜಕೀಯ ವಿರೋಧಿಗಳನ್ನು ಹಣಿಯಲು ಸರ್ಕಾರಿ ಇಲಾಖೆಗಳ ಮೂಲಕ ದಾಳಿ ನಡೆಸಿ,ಬೆದರಿಸಿದ್ದೂ ಇದೆ. ಇಂಥ ಹತ್ತುಹಲವು ಅಂಶಗಳು ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಿರುವುದು ಎದ್ದು ಕಾಣುತ್ತಿದ್ದು, ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಳು ನಡೆಯುವ ಬಗ್ಗೆ ಅನುಮಾನ ದಟ್ಟವಾಗತೊಡಗಿದೆ. ಉದಾರವಾದಿ ಪ್ರಜಾಪ್ರಭುತ್ವ ಮತ್ತು ನ್ಯಾಯಸಮ್ಮತ ಚುನಾವಣೆಯ ಆಶಯಗಳನ್ನು ಆಡಳಿತ ಪಕ್ಷ ತನ್ನ ಹಿಡಿತಕ್ಕೆ ತೆಗೆದುಕೊಳ್ಳುತ್ತಿರುವುದರಿಂದ ಭಾರತದ ‘ಉದಾರವಾದಿ ಪ್ರಜಾಪ್ರಭುತ್ವ’ ಸೂಚ್ಯಂಕ ತೀವ್ರ ಕುಸಿದಿದ್ದು, ಜಾಗತಿಕವಾಗಿ ಭಾರತ ೮೧ನೇ ಸ್ಥಾನದಲ್ಲಿದೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ೨೦೧೪ರಲ್ಲಿ ಮೋದಿ ಪ್ರಧಾನಿಯಾದ ನಂತರ ಈ ವಿಷಯದಲ್ಲಿ ಭಾರತ ತೀವ್ರ ಕುಸಿತ ಕಂಡಿದೆ. ದಕ್ಷಿಣಾ ಏಷ್ಯಾದಲ್ಲಿ ಶ್ರೀಲಂಕ, ನೇಪಾಳಗಳು ಭಾರತಕ್ಕಿಂತ ಮೇಲಿವೆ ಎಂದೂ ಈ ವರದಿ ಹೇಳಿದೆ.

ಪ್ರಜಾಪ್ರಭುತ್ವವನ್ನು ಉಳಿಸಿ, ಜನರಲ್ಲಿ ಸ್ವಾತಂತ್ರ್ಯ ಪ್ರಜ್ಸೆ, ಆತ್ಮಗೌರವ ಮತ್ತು ಒಗ್ಗಟ್ಟು ಇರಬೇಕು ಮತ್ತು ಈ ಮೌಲ್ಯಗಳನ್ನು ಗೌರವಿಸುವವರನ್ನೇ ತಮ್ಮ ಪ್ರತಿನಿಧಿಗಳನ್ನಾಗಿ ಆಯ್ಕೆ ಮಾಡುವುದಕ್ಕೆ ಒತ್ತು ನೀಡಬೇಕು.
ಮಹಾತ್ಮ ಗಾಂಧಿ
ಇದನ್ನೂ ಓದಿ : ಸ್ಟೇಟ್‌ಮೆಂಟ್‌ | ಕಳೆದೊಂದು ವರ್ಷದಲ್ಲಿ ನಮ್ಮನ್ನು ಕಾಡಿದ ಸ್ವಾತಂತ್ರ್ಯ ಹರಣದ ಹತ್ತು ಸಂಗತಿಗಳು

೭. ಶಾಂತಿ, ಸೌಹಾರ್ದದ ಸಂಕೇತಗಳ ನಾಶ

ಕೋಮು ಸಾಮರಸ್ಯ, ಧಾರ್ಮಿಕ ಸಹಿಷ್ಣುತೆ ಭಾರತದ ಆತ್ಮ. ಅದನ್ನು ಕಾಪಿಟ್ಟುಕೊಳ್ಳಲು ಅನೇಕ ಮಹನೀಯರು ತಮ್ಮದೇ ನೆಲೆಯಲ್ಲಿ ಕೆಲಸ ಮಾಡಿದ್ದಾರೆ. ಶಾಂತಿ, ಸೌಹಾರ್ದತೆ ಮತ್ತು ಸಾಮರಸ್ಯವನ್ನು ಬಿಂಬಿಸುವ ಅನೇಕ ಸ್ಥಳಗಳು, ಸಂಕೇತಗಳು ನಮ್ಮ ನಡುವೆ ಇವೆ. ಅಂಥವುಗಳನ್ನು ‘ಭಗ್ನ’ಗೊಳಿಸಿ, ಹಿಂದೂರಾಷ್ಟ್ರ ಪತಾಕೆಯನ್ನು ಹಾರಿಸಲು ಹಲವು ಬಲಪಂಥೀಯ ಅಂಗ ಸಂಸ್ಥೆಗಳು ತಮ್ಮದೇ ರೀತಿಯಲ್ಲಿ ಕೆಲಸ ಮಾಡುತ್ತಿವೆ. ವಿಚಾರವಾದಿಗಳನ್ನು ಕೊಲ್ಲುವುದರ ಜೊತೆಗೆ, ಗಾಂಧಿ, ಪೆರಿಯಾರ್, ಅಂಬೇಡ್ಕರ್‌ ಮುಂತಾದವರ ಪ್ರತಿಮೆಗಳನ್ನು, ಅವರು ಸಾರಿರುವ ವಿಚಾರಗಳನ್ನು ಹೊಡೆದು ಕೆಡವಿ ಅಥವಾ ‘ಬಣ್ಣ’ ಬದಲಿಸಿ ತಮ್ಮ ಸಿದ್ಧಾಂತಕ್ಕೆ ಪೂರಕವಾದುದನ್ನು ಸ್ಥಾಪಿಸಿಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಿವೆ. ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಗಾಂಧಿಯನ್ನು ಒಮ್ಮೆ ಕೊಂದದ್ದು ಸಾಲದೆಂಬಂತೆ ಮತ್ತೆ ಮತ್ತೆ ಅವರ ವಿಚಾರಗಳನ್ನು ಇರಿಯುವ ಮೂಲಕ ಗೊಡ್ಸೆ ಸಂತತಿ ವಿಜೃಂಭಿಸುತ್ತಿದೆ. ಸಂವಿಧಾನದ ಜಾತ್ಯತೀತತೆಯ ಆಶಯವನ್ನು ಅರ್ಥಹೀನಗೊಳಿಸಿ, ಅನರ್ಥಕ್ಕೆ ಈಡುಮಾಡಿದ್ದರಲ್ಲಿ ಬಿಜೆಪಿಯ ಜೊತೆ ಎಲ್ಲ ರಾಜಕೀಯ ಪಕ್ಷಗಳ ಪಾಲೂ ದೊಡ್ದದಿದೆ.

ಶಾಂತಿ ಎಂಬುದು ಎರಡು ದೇಶಗಳ ಸಂಬಂಧವಲ್ಲ. ಪ್ರಶಾಂತ ಆತ್ಮದಿಂದ ಸಿಕ್ಕ ಒಂದು ಮನಸ್ಥಿತಿ. ಯುದ್ಧವಿಲ್ಲದಿರುವುದು ಶಾಂತಿಯಲ್ಲ. ಅದೊಂದು ಮನಸ್ಥಿತಿ. ಶಾಂತಿಬಯಸುವವರಿಂದಲೇ ಶಾಂತಿ ದೀರ್ಘಕಾಲ ಉಳಿಯುತ್ತದೆ.
ಜವಹರಲಾಲ್‌ ನೆಹರು

೮. ಹಕ್ಕು ನೀಡಿದ ಸಂವಿಧಾನಕ್ಕೆ ಬೆಂಕಿ ಇಟ್ಟರು

ಎಲ್ಲ ದೇಶವಾಸಿಗಳಿಗೂ ಬದುಕುವ ಸಮಾನ ಹಕ್ಕುಗಳನ್ನು, ಅವರದೇ ಕರ್ತವ್ಯಗಳನ್ನು ನೀಡಿದ ದೇಶದ ಸಂವಿಧಾನವನ್ನೇ ಕೆಲವು ಹಿತಾಸಕ್ತ ವ್ಯಕ್ತಿಗಳು, ಗುಂಪುಗಳು ಸಹಿಸಿಕೊಳ್ಳುತ್ತಿಲ್ಲ. ದೆಹಲಿಯಲ್ಲಿ ಮೀಸಲಾತಿ ಮತ್ತು ದಲಿತರ ವಿರುದ್ಧದ ಪ್ರತಿಭಟನೆಯ ವೇಳೆ ಕಳೆದ ವಾರ ಆರಕ್ಷಣ್ (ಮೀಸಲಾತಿ) ವಿರೋಧಿ ಪಾರ್ಟಿ ಮತ್ತು ಯೂತ್ ಫಾರ್ ಈಕ್ವಾಲಿಟಿ ಸಂಘಟನೆಗಳಿಗೆ ಸೇರಿದವರು, ದೇಶದ ಸಂವಿಧಾನದ ಪ್ರತಿಗೆ ಬೆಂಕಿ ಹಚ್ಚಿದರು. ದೇಶದ ಆಡಳಿತ ಕೇಂದ್ರ ದೆಹಲಿಯಲ್ಲಿ, ಸಂಸತ್ತಿನ ಅನತಿ ದೂರದಲ್ಲಿ ನಡೆದ ಈ ಘಟನೆ ನಿಜಕ್ಕೂ ದೇಶದ ಸ್ವಾತಂತ್ರ್ಯಕ್ಕೆ, ಸ್ವಾತಂತ್ರ್ಯದ ಕನಸುಗಳನ್ನು ಸಂವಿಧಾನದ ಮೂಲಕ ನಮಗೆ ಕಟ್ಟಿಕೊಟ್ಟ ಅಂಬೇಡ್ಕರ್ ಅವರಿಗೆ ಮಾಡಿದ ಅವಮಾನ. ಪ್ರತಿಭಟನಾಕಾರರು ಅಂಬೇಡ್ಕರ್ ವಿರುದ್ಧವೂ ಘೋಷಣೆ ಕೂಗಿದರು ಎನ್ನಲಾಗಿದೆ. ವಿಪರ್ಯಾಸವೆಂದರೆ, ಸಣ್ಣಪುಟ್ಟ ವಿಷಯಗಳಿಗೂ ಟ್ವೀಟ್ ಮಾಡಿ ಪ್ರತಿಕ್ರಿಯಿಸುವ ಪ್ರಧಾನಿ ನರೇಂದ್ರ ಮೋದಿಯವರು ಈ ಘಟನೆಯ ಬಗ್ಗೆ ತುಟಿಬಿಚ್ಚಲಿಲ್ಲ. ಅಷ್ಟೇ ಅಲ್ಲ; ಬಿಜೆಪಿ ಕೂಡ ಒಂದು ರಾಜಕೀಯ ಪಕ್ಷವಾಗಿ ಈ ಘಟನೆಯನ್ನು ಖಂಡಿಸುವ ಮನಸ್ಸು ಮಾಡಲಿಲ್ಲ. ದೇಶದ ಸಂವಿಧಾನ ಬದಲಾಯಿಸುವ ಕುರಿತ ಬಿಜೆಪಿಯ ನಾಯಕ, ಸಚಿವ ಅನಂತಕುಮಾರ್ ಹೆಗಡೆ ವಿವಾದಾತ್ಮಕ ಹೇಳಿಕೆ ಬಳಿಕ ಹಿಂದುತ್ವವಾದಿ ಸಂಘಟನೆಗಳು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಸಂವಿಧಾನ ಪ್ರತಿಗೆ ಬೆಂಕಿ ಹಚ್ಚಿವೆ. ಆ ಮೂಲಕ ಇಡೀ ದೇಶ ಆಧರಿಸುವ ಸಂವಿಧಾನವನ್ನು ಅಪ್ರಸ್ತುತಗೊಳಿಸಿ, ತಮಗೆ ಬೇಕಾದಂತ ‘ವ್ಯವಸ್ಥೆ’ಯನ್ನು ಕಟ್ಟಿಕೊಳ್ಳುವ ಹುನ್ನಾರ ನಡೆಸಿರುವಂತೆ ತೋರುತ್ತಿದೆ.

ಸಂವಿಧಾನ ಎಷ್ಟೇ ಉತ್ತಮದ್ದಾಗಿರಲಿ, ಅದನ್ನು ಅನುಷ್ಠಾನಕ್ಕೆ ತರುವವರು ಉತ್ತಮರಲ್ಲದೇ ಇದ್ದರೆ, ಅದು ಇನ್ನಷ್ಟು ಕೆಡುತ್ತದೆ. ಸಂವಿಧಾನ ಎಷ್ಟೇ ಕೆಟ್ಟದಾಗಿರಲಿ, ಅದನ್ನು ಜಾರಿಗೆ ತರುವವರು ಸರಿಯಿದ್ದರೆ ಉತ್ತಮವೇ ಆಗುತ್ತದೆ.
ಬಿ ಆರ್‌ ಅಂಬೇಡ್ಕರ್‌

೯. ನ್ಯಾಯಾಂಗದ ಸ್ವಾತಂತ್ರ್ಯ ಹರಣ

ಅಧಿಕಾರಸ್ಥರು, ಹಿತಾಸಕ್ತರು ವ್ಯವಸ್ಥೆಯನ್ನು ಕದಲಿಸಲು ಏನೇ ಮಾಡಿದರೂ ಇಂದಿಗೂ ಜನರಿಗೆ ಭರವಸೆಯಾಗಿ ಉಳಿದಿರುವುದು ನ್ಯಾಯಾಂಗ ವ್ಯವಸ್ಥೆ. ಸಂವಿಧಾನ ಖಾತ್ರಿಪಡಿಸಿದ ಹಕ್ಕುಗಳು ಮತ್ತು ಅದು ಜನತೆಗೆ ನಿಖರಗೊಳಿಸಿದ ಕರ್ತವ್ಯಗಳ ಪಾಲನೆಯ ಕುರಿತ ಕಣ್ಗಾವಲು ವ್ಯವಸ್ಥೆಯಾದ ನ್ಯಾಯಾಂಗ ಕೂಡ ಕಳೆದ ಕೆಲವು ವರ್ಷಗಳಲ್ಲಿ ಸಾಕಷ್ಟು ಒತ್ತಡಕ್ಕೆ ಸಿಲುಕಿದೆ ಎಂಬುದು ನ್ಯಾಯಾಂಗದ ಒಳಗಿನ ದನಿಗಳೇ ಬಹಿರಂಗವಾಗಿ ಹೇಳಿಕೊಂಡಿವೆ. ಈ ವರ್ಷಾರಂಭದಲ್ಲಿ ನಾಲ್ವರು ಸುಪ್ರೀಂಕೋರ್ಟ್ ಹಿರಿಯ ನ್ಯಾಯಮೂರ್ತಿಗಳು ನಡೆಸಿದ ಬಹಿರಂಗ ಪತ್ರಿಕಾಗೋಷ್ಠಿ ದೇಶದ ನ್ಯಾಯಾಂಗದ ಸ್ವಾತಂತ್ರ್ಯ ಹರಣದ ಆತಂಕವನ್ನು ನಿಜ ಮಾಡಿತ್ತು. ಕೇಂದ್ರ ಸರ್ಕಾರದ ನ್ಯಾಯಾಂಗದ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂಬುದೂ ಸೇರಿದಂತೆ ಅವರು ವ್ಯಕ್ತಪಡಿಸಿದ ಆತಂಕ ನಂತರದ ದಿನಗಳಲ್ಲಿ ಹಲವು ಸಂದರ್ಭಗಳಲ್ಲಿ ನಿಜವೂ ಆಯಿತು. ಅದು ನ್ಯಾಯಮೂರ್ತಿ ಜೋಸೆಫ್ ಅವರನ್ನು ಸುಪ್ರೀಂಕೋರ್ಟಿಗೆ ಪದೋನ್ನತಿಗೊಳಿಸುವ ವಿಷಯವಿರಬಹುದು, ನ್ಯಾಯಾಧೀಶ ಲೋಯಾ ಅವರ ನಿಗೂಢ ಸಾವಿನ ಕುರಿತ ಪ್ರಕರಣವಿರಬಹುದು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ಸಂಬಂಧಿಸಿದ ಕೆಲವು ಪ್ರಕರಣಗಳ ವಿಚಾರಣೆ ವಿಷಯದಲ್ಲಿರಬಹುದು, ಹಿರಿಯ ನ್ಯಾಯಮೂರ್ತಿಗಳ ಆತಂಕದ ಮಾತುಗಳಲ್ಲಿ ಹುರುಳಿಲ್ಲದೇ ಇಲ್ಲ ಎಂಬ ಅಭಿಪ್ರಾಯ ಮೂಡಿಸಿದವು. ಈಚೆಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳಿಗೆ ಸಂಬಂಧಿಸಿ ಕೋರ್ಟ್‌ ನೀಡುವ ತೀರ್ಪುಗಳು ಹೇಗಿರಬೇಕು ಎಂದು ನಿರ್ದೇಶಿಸಲೂ ಸರ್ಕಾರ ಮುಂದಾಗಿದ್ದು ಗಮನಾರ್ಹ. ಕೆಲವು ಕಠಿಣ ನಿಲುವಿನ ನ್ಯಾಯಾಧೀಶರು ಇದ್ದಾಗ್ಯೂ, ನ್ಯಾಯಾಂಗ ಕೂಡ ಒತ್ತಡಕ್ಕೆ ಒಳಗಾಗಿದೆ ಎಂಬುದು ದೃಢವಾಯಿತು.

ಸಾಮಾಜಿಕ ಸ್ವಾತಂತ್ರ್ಯವನ್ನು ಪಡೆಯದ ಹೊರತಾಗಿ ಕಾನೂನು ಏನೇ ಸ್ವಾತಂತ್ರ್ಯವನ್ನು ಕೊಟ್ಟರೂ ಪ್ರಯೋಜನಕ್ಕೆ ಬಾರದು.
ಬಿ ಆರ್ ಅಂಬೇಡ್ಕರ್‌

೧೦. ಮಾಧ್ಯಮ ಮತ್ತು ಸತ್ಯದ ಕತ್ತು ಹಿಸುಕುವ ಕೃತ್ಯ

ವ್ಯಕ್ತಿಯ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಅಭಿಪ್ರಾಯ ಮಂಡನೆಯ, ಪ್ರತಿಭಟನೆಯ ಹಕ್ಕುಗಳನ್ನು ರಕ್ಷಿಸುವ ಮೂಲಕ ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆಗೆ ಅನುವು ಮಾಡಿಕೊಡುವುದೇ ಮಾಧ್ಯಮ ಮತ್ತು ಪತ್ರಿಕಾ ವೃತ್ತಿಗಳ ಘನತೆ. ಆಡಳಿತ ಮತ್ತು ವ್ಯವಸ್ಥೆಯ ಕುರಿತ ಟೀಕೆ, ಟಿಪ್ಪಣಿಗಳನ್ನು, ರಚನಾತ್ಮಕ ಸಲಹೆಗಳನ್ನು ನೀಡುವುದು ಮಾಧ್ಯಮದ ಹೊಣೆ. ಅಂತಹದ್ದೊಂದು ಕ್ರಿಯಾಶೀಲ ಮಾಧ್ಯಮವು ಪ್ರಜಾಪ್ರಭುತ್ವದ ಅವಿಭಾಜ್ಯ ಅಂಗ ಕೂಡ. ಆದರೆ, ಮಾಧ್ಯಮಗಳ ಆರೋಗ್ಯಕರ ಟೀಕೆಟಿಪ್ಪಣಿಗಳನ್ನು ಸಹಿಸಿಕೊಳ್ಳುವ ಮನಸ್ಥಿತಿ ಹೊಂದಿರದ ಸರ್ಕಾರ, ಸತ್ಯದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎನ್ನುವುದು ಅನೇಕ ಪ್ರಕರಣಗಳಲ್ಲಿ ಜಗಜ್ಜಾಹೀರಾಗಿದೆ. ಮೋದಿಯವರ ಗುಣಗಾನ ಮಾಡದೇ ಇರುವ ಮಾದ್ಯಮಗಳು ಮತ್ತು ತನ್ನ ಯೋಜನೆ-ನೀತಿಗಳ ಕುರಿತ ವಾಸ್ತವಾಂಶ ವರದಿ ಮಾಡುವ ಮಾಧ್ಯಮಗಳ ವಿರುದ್ಧ ಪರೋಕ್ಷ ಬೇಹುಗಾರಿಕೆ ನಡೆಸುತ್ತಿದೆ ಎಂಬ ಮಾತುಗಳೂ ಇವೆ. ಎಬಿಪಿ ನ್ಯೂಸ್ ಪತ್ರಕರ್ತರಿಬ್ಬರ ವಿರುದ್ಧದ ಕ್ರಮ ಅದಕ್ಕೆ ಇತ್ತೀಚಿನ ನಿದರ್ಶನ. ಈ ಹಿಂದೆ ಎನ್‌ಡಿಟಿವಿಯ ರವೀಶ್ ಕುಮಾರ್, ರಾಜ್‌ ದೀಪ್ ಸರ್ದೇಸಾಯಿ, ರಾಣಾ ಆಯೂಬ್ ಅವರಂತವರಿಗೆ ಸಂಘಪರಿವಾರದ ವ್ಯಕ್ತಿಗಳಿಂದಲೇ ನೇರ ಬೆದರಿಕೆಗಳು ಬಂದಿದ್ದವು. ಕೊಲೆ, ಅತ್ಯಾಚಾರದ ಬೆದರಿಕೆ ಒಡ್ಡಲಾಗಿತ್ತು. ಜೊತೆಗೆ, ಮಾಧ್ಯಮಗಳಲ್ಲಿ ತಮ್ಮ ವಿರುದ್ಧದ ಸುದ್ದಿಗಳ ಮೇಲೆ ಕಣ್ಣಿಡಲು ೨೦೦ ಮಂದಿಯ ವಿಶೇಷ ಮಾಧ್ಯಮ ಬೇಹುಗಾರಿಕಾ ತಂಡವನ್ನೇ ಸರ್ಕಾರ ರಚಿಸಿದೆ ಎಂಬ ವರದಿಗಳೂ ಇವೆ. ಪರಿಣಾಮ, ಮೋದಿ ಪರ ಬಹುಪರಾಕು ಹಾಕುವ ಮಾಧ್ಯಮಗಳಿಗಷ್ಟೆ ಉಳಿಗಾಲ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ದೇಶ ಮತ್ತು ಆಯಾ ರಾಜ್ಯಮಟ್ಟದಲ್ಲಿ ಮೋದಿ ಭಕ್ತ ‘ಮಾಧ್ಯಮ ಜಾಲ’ ಬಲಿಷ್ಠಗೊಳ್ಳುತ್ತಿದೆ ಕೂಡ. ಈ ಮಧ್ಯೆ, ಸಂಪಾದಕೀಯ ವಿಭಾಗಗಳೇ ಮೋದಿ ವಿರುದ್ಧದ ವ್ಯಂಗ್ಯವನ್ನು, ವ್ಯಂಗ್ಯರೇಖೆಗಳನ್ನು ಪ್ರಕಟಿಸದೆ ಸ್ವಯಂ ನಿರ್ಬಂಧ ಹೇರಿಕೊಳ್ಳುವಂತಾಗಿರುವುದು ವ್ಯವಸ್ಥೆಯ ವಿಪರ್ಯಾಸ.

ಪತ್ರಿಕಾ ಸ್ವಾತಂತ್ರ್ಯವೆಂಬುದು ಅಮೂಲ್ಯವಾದ ಹಕ್ಕು, ಅದನ್ನು ಯಾವುದೇ ದೇಶವೂ ಬಿಟ್ಟುಕೊಡಬಾರದು
ಮಹಾತ್ಮ ಗಾಂಧಿ

ಇಂಥ ಹತ್ತು ಹಲವು ವಿಪರ್ಯಾಸ, ಆತಂಕ, ತಳಮಳಗಳ ಮಧ್ಯೆಯೇ ಮತ್ತೊಂದು ಸ್ವಾತಂತ್ರ್ಯೋತ್ಸವವನ್ನು ದೇಶ ಇಂದು ಆಚರಿಸುತ್ತಿದೆ. ಭಾರತದ ಸಂವಿಧಾನದ ಸತ್ವ ಮತ್ತು ಅದು ಬಿಂಬಿಸುವ ಸತ್ಯಗಳು ಈ ಎಲ್ಲ ಅಪದ್ಧಗಳನ್ನು ಕಾಲದ ಮರೆಗೆ ತಳ್ಳಿ, ನಮ್ಮ ಪ್ರಜಾತಂತ್ರವನ್ನು, ಅದು ಸಾರುವ ಘನ ಆಶಯಗಳನ್ನು ಪೊರೆಯುತ್ತವೆ ಎನ್ನುವ ಭರವಸೆಯಷ್ಟೇ ದೇಶವಾಸಿಗಳ ಪಾಲಿಗಿರುವ ಈ ಹೊತ್ತಿನ ಸಂಭ್ರಮ. ಅದು ಶಾಶ್ವತ ಸಂಭ್ರಮವಾಗಲಿ ಎಂದು ಬಯಸುವುದು ಭ್ರಮೆ ಎನ್ನಿಸಲೂಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More