ಮಾರ್ನಿಂಗ್ ಡೈಜಿಸ್ಟ್ | ಇಂದು ಗಮನಿಸಬೇಕಾದ 4 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಹೈಕೋರ್ಟ್‌ನಲ್ಲಿ ರಾಘವೇಶ್ವರ ಶ್ರೀ ವಿರುದ್ಧದ ಅತ್ಯಾಚಾರ ಪ್ರಕರಣದ ಅರ್ಜಿ ವಿಚಾರಣೆ

ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಅವರನ್ನು ಅತ್ಯಾಚಾರ ಆರೋಪದಿಂದ ಮುಕ್ತಗೊಳಿಸಿರುವ ಸೆಷನ್ಸ್‌ ನ್ಯಾಯಾಲಯದ ಆದೇಶ ಪ್ರಶ್ನಿಸಿರುವ ಅರ್ಜಿ ಮಂಗಳವಾರ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಸಂತ್ರಸ್ತೆ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಆರ್‌ ಬಿ ಬೂದಿಹಾಳ್‌ ಅವರ ಏಕಸದಸ್ಯ ನ್ಯಾಯಪೀಠ ವಿಚಾರಣೆಗೆ ದೈನಂದಿನ ಕಲಾಪ ಪಟ್ಟಿಯಲ್ಲಿ ನಿಗದಿಪಡಿಸಿದೆ. “ಸ್ವಾಮೀಜಿ ಅವರನ್ನು ಆರೋಪದಿಂದ ಮುಕ್ತಗೊಳಿಸಿ 2016ರ ಮಾರ್ಚ್ 31ರಂದು ಹೊರಡಿಸಿದ ಆದೇಶ ರದ್ದುಗೊಳಿಸಬೇಕು,” ಎಂದು ಸಂತ್ರಸ್ತೆ ಮೇಲ್ಮನವಿ ಸಲ್ಲಿಸಿದ್ದಾರೆ.

ಡಿಎಂಕೆ ಕಾರ್ಯಕಾರಣಿ ಸಭೆ

ಡಿಎಂಕೆ ಅಧ್ಯಕ್ಷ ಎಂ ಕರುಣಾನಿಧಿ ಅವರ ನಿಧನಕ್ಕೆ ಸಂತಾಪ ಸೂಚಿಸಲು ಮಂಗಳವಾರ ಪಕ್ಷದ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ. ಪಕ್ಷದ ಮುಖ್ಯ ಕಚೇರಿಯಲ್ಲಿ ನಡೆಯುವ ಈ ಸಭೆಯಲ್ಲಿ ಸಮಿತಿಯ ಎಲ್ಲ ಸದಸ್ಯರು ಪಾಲ್ಗೊಳ್ಳುವಂತೆ ಸೂಚಿಸಲಾಗಿದ್ದು, ಸಭೆಯಲ್ಲಿ ಸಂತಾಪ ನಿರ್ಣಯ ಅಂಗೀಕರಿಸಲಾಗುತ್ತಿದೆ. ಹಾಗೆಯೇ, ಸರ್ವ ಸದಸ್ಯರ ಸಭೆಯ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ. ಎಂ ಕೆ ಸ್ಟಾಲಿನ್ ಅವರನ್ನೇ ಡಿಎಂಕೆ ಕಾರ್ಯಾಧ್ಯಕ್ಷರನ್ನಾಗಿ ಮಾಡಬೇಕೆಂಬ ವಿಚಾರ ಚರ್ಚೆಯಲ್ಲಿದ್ದು, ಸರ್ವ ಸದಸ್ಯರ ಸಭೆಯಲ್ಲಿ ಈ ಕುರಿತು ನಿರ್ಧಾರ ತಗೆದುಕೊಳ್ಳಲಾಗುತ್ತದೆ ಎಂದು ಪಕ್ಷದ ಮುಖಂಡರು ತಿಳಿಸಿದ್ದಾರೆ.

ಎಸ್ಸಿ-ಎಸ್ಟಿ ನೌಕರರ ಮುಂಬಡ್ತಿ ಕುರಿತು ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ

ಎಸ್ಸಿ, ಎಸ್ಟಿ ನೌಕರರ ಮುಂಬಡ್ತಿ ವಿಚಾರವಾಗಿ ಕರ್ನಾಟಕ ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಎಸ್ಸಿ,ಎಸ್ಟಿ ಸರ್ಕಾರಿ ನೌಕರರಿಗೆ ಮುಂಬಡ್ತಿ ನೀಡುವ ಸಂಬಂಧ ವಿಶೇಷ ಕಾಯ್ದೆ ತಂದು ಅನುಷ್ಠಾನಗೊಳಿಸಲು ರಾಜ್ಯ ಸರ್ಕಾರ ಮುಂದಾಗಿತ್ತು. ಆದರೆ, ರಾಜ್ಯ ಸರ್ಕಾರದ ನೂತನ ಕಾಯ್ದೆಯನ್ನು ಪ್ರಶ್ನಿಸಿ ಕೆ ವಿ ಶಿವಕುಮಾರ್ ಮತ್ತು ಕೆಪಿಟಿಸಿಎಲ್ ಸಾಮಾನ್ಯ ವರ್ಗದ ನೌಕರರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳಾದ ಎ ಕೆ ಸಿಕ್ರಿ ಮತ್ತು ಉದಯ್ ಲಲಿತ್ ಅವರಿದ್ದ ಪೀಠ, ವಿಚಾರಣೆಯನ್ನು ಆಗಸ್ಟ್ 14ಕ್ಕೆ ಮುಂದೂಡಿತ್ತು.

ಪ್ಲಿಸ್ಕೋವಾ, ಆಗ್ನೀಸ್ಕಾ ರಾಡ್ವಾಂಸ್ಕಾ ಹಣಾಹಣಿ

ಸಿನ್ಸಿನಾಟಿ ಓಪನ್ ಟೆನಿಸ್ ಪಂದ್ಯಾವಳಿಯಲ್ಲಿಂದು ಜೆಕ್ ಆಟಗಾರ್ತಿ ಕೆರೋಲಿನಾ ಪ್ಲಿಸ್ಕೋವಾ ಹಾಗೂ ವಿಶ್ವದ ಮಾಜಿ ನಂ ೧ ಆಟಗಾರ್ತಿ ಪೋಲೆಂಡ್‌ನ ಆಗ್ನೀಸ್ಕಾ ರಾಡ್ವಾಂಸ್ಕಾ ಸೆಣಸಲಿದ್ದಾರೆ. ಭಾರತೀಯ ಕಾಲಮಾನ ರಾತ್ರಿ ೧೦.೩೦ಕ್ಕೆ ಶುರುವಾಗಲಿರುವ ಮೊದಲ ಸುತ್ತಿನ ಪಂದ್ಯದಲ್ಲಿ ಪ್ಲಿಸ್ಕೋವಾ ಮತ್ತು ರಾಡ್ವಾಂಸ್ಕಾ ಕಾದಾಡಲಿದ್ದಾರೆ. ಅಂತೆಯೇ, ರಾತ್ರಿ ೮.೩೦ಕ್ಕೆ ಆರಂಭವಾಗಲಿರುವ ವನಿತೆಯರ ಸಿಂಗಲ್ಸ್ ವಿಭಾಗದ ಮತ್ತೊಂದು ಮೊದಲ ಸುತ್ತಿನ ಪಂದ್ಯದಲ್ಲಿ ಜಪಾನ್ ಆಟಗಾರ್ತಿ ನೊವೊಮಿ ಒಸಾಕ ಗ್ರೀಕ್ ದೇಶದ ಮರಿಯಾ ಸಕ್ಕಾರಿ ವಿರುದ್ಧ ಹೋರಾಡಲಿದ್ದಾರೆ. ಅಂದಹಾಗೆ, ದಿನದ ಹಿಂದಷ್ಟೇ ಮುಕ್ತಾಯ ಕಂಡ ರೋಜರ್ ಕಪ್‌ನಿಂದ ಹಿಂದೆ ಸರಿದಿದ್ದ ಸೆರೆನಾ ವಿಲಿಯಮ್ಸ್, ಸಿನ್ಸಿನಾಟಿ ಓಪನ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More