ಟ್ವಿಟರ್ ಸ್ಟೇಟ್ | ವ್ಯಂಗ್ಯ, ತಮಾಷೆಗೆ ಕಾರಣವಾದ ಪಲ್ಲವಿ ಜೋಶಿ ರಫೇಲ್ ವಿಡಿಯೋ

ಲಾಕ್ ವ್ಯವಸ್ಥೆಯನ್ನು ತಯಾರಿಸಲು ಮಾಡಿಕೊಂಡ ಒಪ್ಪಂದವೊಂದಕ್ಕೆ ರಫೇಲ್ ಒಪ್ಪಂದವನ್ನು ಹೋಲಿಸಿ ವಿವರಿಸಿದ ಪಲ್ಲವಿ ಜೋಶಿ ಈಗ ಟ್ವಿಟರ್‌ನಲ್ಲಿ ಚರ್ಚೆಗೆ ಗ್ರಾಸವಾಗಿದ್ದಾರೆ. ರಫೇಲ್ ಒಪ್ಪಂದವನ್ನು ಸರಳವಾಗಿ ವಿವರಿಸುವ ನೆಪದಲ್ಲಿ ಪಲ್ಲವಿ ಸುಳ್ಳು ಮಾಹಿತಿ ನೀಡಿರುವ ಆರೋಪ ಕೇಳಿಬಂದಿದೆ

ಸೋಮವಾರ ಬಿಜೆಪಿ ‘ಮೂರ್ಖರಿಗಾಗಿ ರಫೇಲ್ ಒಪ್ಪಂದ’ ಎನ್ನುವ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆ ಮಾಡಿದೆ. “ರಫೇಲ್ ಒಪ್ಪಂದದಲ್ಲಿ ಹಗರಣವಾಗಿರುವ ಬಗ್ಗೆ ಬಿಜೆಪಿ ಮೇಲೆ ಕಾಂಗ್ರೆಸ್ ಆರೋಪ ಹೊರಿಸುತ್ತಿರುವ ಹಿನ್ನೆಲೆಯಲ್ಲಿ, ಈ ವಿಡಿಯೋ ಮೂಲಕ ಸರಳವಾಗಿ ರಫೇಲ್ ಒಪ್ಪಂದವನ್ನು ಜನರಿಗೆ ಅರ್ಥ ಮಾಡಿಸುತ್ತಿದ್ದೇವೆ” ಎಂದು ಬಿಜೆಪಿ ಹೇಳಿಕೊಂಡಿದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪ್ರತಿ ಭಾಷಣದಲ್ಲೂ ಸತತವಾಗಿ ರಫೇಲ್ ಒಪ್ಪಂದದಲ್ಲಿ ಆಗಿರಬಹುದಾದ ಅವ್ಯವಹಾರ ಮತ್ತು ಸರ್ಕಾರ ಈ ವಿಚಾರವನ್ನು ರಹಸ್ಯವಾಗಿಡುತ್ತಿರುವ ಮರ್ಮವೇನು ಎಂದು ಪ್ರಶ್ನಿಸುತ್ತಿದ್ದಾರೆ. ಇದು ಬಿಜೆಪಿ ಸರ್ಕಾರಕ್ಕೆ ಮುಜುಗರ ತಂದಿದೆ. ಇದೇ ಕಾರಣಕ್ಕೆ ಬಿಜೆಪಿ ಬಿಡುಗಡೆ ಮಾಡಿದ ವಿಡಿಯೋದಲ್ಲಿ ನಟಿ ಪಲ್ಲವಿ ಜೋಶಿ ಅವರಿಂದ ರಫೇಲ್ ಒಪ್ಪಂದವನ್ನು ವಿವರಿಸಲಾಗಿದೆ.

ವಿಡಿಯೋದಲ್ಲಿ ಪಲ್ಲವಿ ಜೋಶಿ ಅವರು, ತಾವು ಕಾರ್ಯದರ್ಶಿಯಾಗಿರುವ ವಸತಿ ಸಂಕೀರ್ಣದ ಉದಾಹರಣೆ ನೀಡಿ, “ರಫೇಲ್ ಒಪ್ಪಂದವು ಹೇಗೆ ಯುಪಿಎ ಅವಧಿಯಲ್ಲಿ ಮಾಡಿರುವ ಒಪ್ಪಂದಕ್ಕಿಂತ ಭಿನ್ನವಾಗಿದೆ,” ಎಂದು ವಿವರಿಸಿದ್ದಾರೆ. “ನಮ್ಮ ವಸತಿ ಸಂಕೀರ್ಣದ ಹಿಂದಿನ ಕಾರ್ಯದರ್ಶಿ ಕಟ್ಟಡದ ಲಾಕ್ ವ್ಯವಸ್ಥೆಯನ್ನು ಸುಧಾರಿಸಲು ಫ್ರೆಂಚ್ ಕಂಪನಿ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ, ಕಾರ್ಯದರ್ಶಿ ಅವ್ಯವಹಾರ ಮಾಡುತ್ತಿದ್ದಾನೆ ಎಂದು ತಿಳಿದ ನಂತರ ನಾನು ಫ್ರೆಂಚ್ ಕಂಪನಿಯ ಮಾಲೀಕರ ಜೊತೆಗೆ ಮಾತನಾಡಿ, ಲಾಕ್‌ಗಳ ಬೆಲೆಯ ಬಗ್ಗೆ ಮರುಚಿಂತನೆ ನಡೆಸಿದೆ. ಇತರ ಲಾಭಗಳು ಸೇರಿದಂತೆ ಲಾಕ್ ವ್ಯವಸ್ಥೆಯ ಕೆಲವು ಭಾಗಗಳೂ ಭಾರತದಲ್ಲಿ ತಯಾರಾಗುವಂತೆ ವ್ಯವಸ್ಥೆ ಮಾಡಿದೆ,” ಎಂದು ಪಲ್ಲವಿ ಜೋಶಿ ತಾವು ಅಗ್ಗದಲ್ಲಿ ಲಾಕ್ ವ್ಯವಸ್ಥೆಯನ್ನು ಸುಧಾರಿಸುವ ಒಪ್ಪಂದವನ್ನು ಹೇಗೆ ಮಾಡಿಕೊಂಡೆ ಎಂದು ತಿಳಿಸಿದ್ದಾರೆ. ಜೋಶಿ ಅಂತಿಮವಾಗಿ ತಮ್ಮ ವಿಡಿಯೋದಲ್ಲಿ ರಫೇಲ್ ಒಪ್ಪಂದವು ಇಂತಹುದೇ ವ್ಯವಹಾರ ಎಂದು ಹೇಳಿದ್ದಾರೆ. ಅಲ್ಲದೆ, ಮೋದಿ ಸರ್ಕಾರವು ರಫೇಲ್ ಒಪ್ಪಂದದ ಮೂಲಕ ಭಾರತಕ್ಕೆ ೧೨.೫ ಸಾವಿರ ಕೋಟಿಯನ್ನು ಉಳಿಸಿದೆ ಎಂದೂ ಹೇಳಿದ್ದಾರೆ.

ಅಂತಾಕ್ಷರಿ ಮತ್ತು ಆರೋಹಣ್ ಮೊದಲಾದ ಧಾರಾವಾಹಿಗಳ ಮೂಲಕ ಪ್ರಸಿದ್ಧಿಗೆ ಬಂದ ಪಲ್ಲವಿ ಜೋಶಿ ಹಿಂದಿ ಸಿನಿಮಾ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಅವರ ಪತ್ನಿ. ಬಿಜೆಪಿಗಾಗಿ ಈ ವಿಡಿಯೋವನ್ನು ವಿವೇಕ್ ಅಗ್ನಿಹೋತ್ರಿ ಅವರೇ ನಿರ್ಮಿಸಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹರಿದಾಡುತ್ತಿದೆ. ಪಲ್ಲವಿ ಜೋಶಿ ಮತ್ತು ವಿವೇಕ್ ಅಗ್ನಿಹೋತ್ರಿ ಅವರಿಂದ ವಿಡಿಯೋ ತಯಾರಿಸಿ, ಸರ್ಕಾರದ ಬಗ್ಗೆ ಜನರಲ್ಲಿ ಸಕಾರಾತ್ಮಕ ಭಾವನೆ ಮೂಡಿಸುವ ಕೆಲಸ ಬಿಜೆಪಿ ಮಾಡಿರುವುದು ಇದೇ ಮೊದಲಲ್ಲ. ಹಿಂದೆ ಜಿಎಸ್‌ಟಿ ವಿಚಾರವಾಗಿಯೂ ಜನರಿಗೆ ತಮ್ಮ ಸಮರ್ಥನೆಯನ್ನು ತಲುಪಿಸಲು ಪಲ್ಲವಿ ಜೋಶಿ ಹೀಗೆಯೇ ಬಿಜೆಪಿ ಪರವಾಗಿ ವಿಡಿಯೋದಲ್ಲಿ ಮಾತನಾಡಿದ್ದರು ಎಂದು ಮಾಧ್ಯಮಗಳು ವರದಿ ಮಾಡಿವೆ.

ಬಿಜೆಪಿಯ ಅಧಿಕೃತ ಟ್ವಿಟರ್ ಖಾತೆಗಳು ಮತ್ತು ವಿವೇಕ್ ಅಗ್ನಿಹೋತ್ರಿಯವರು ಈ ವಿಡಿಯೋ ಸಂದೇಶವನ್ನು ಟ್ವಿಟರ್‌ನಲ್ಲಿ ಪ್ರಸಾರ ಮಾಡುತ್ತಲೇ ವ್ಯಾಪಕವಾದ ಟೀಕೆಗಳು ಕೇಳಿಬಂದಿವೆ. “ರಫೇಲ್ ಒಪ್ಪಂದ ಎಂದರೇನು? ಪಲ್ಲವಿ ಜೋಶಿ ಸರಳವಾಗಿ ವಿವರಿಸಿದ್ದಾರೆ,” ಎಂದು ವಿವೇಕ್ ಅಗ್ನಿಹೋತ್ರಿ ಟ್ವೀಟ್ ಮಾಡಿದ್ದಾರೆ. ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್, “ಡಮ್ಮಿಗಳಿಗೆ ಇಲ್ಲಿ ರಫೇಲ್ ಒಪ್ಪಂದ ವಿವರಿಸಿದ್ದೇನೆ,” ಎಂದು ವಿಡಿಯೋವನ್ನು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಪರ ಟ್ವೀಟಿಗರು ಈ ವಿಡಿಯೋವನ್ನು ಟ್ವಿಟರ್ ಟ್ರೆಂಡ್ ಮಾಡುವ ಮೂಲಕ ಟ್ವೀಟಿಗರ ಗಮನ ಸೆಳೆಯಲು ಪ್ರಯತ್ನಿಸಿದ್ದಾರೆ. ಬಿಜೆಪಿ ಪರ ಟ್ವೀಟಿಗರಾದ ನೀತು ಗಾರ್ಗ್‌ ಅವರು ಪಲ್ಲವಿ ಜೋಶಿ ಅದ್ಭುತವಾದ ಚತುರಮತಿಯಾಗಿ ರಫೇಲ್ ಒಪ್ಪಂದವನ್ನು ವಿವರಿಸಿದ್ದಾರೆ ಎಂದು ಪ್ರಶಂಸಿಸಿದ್ದಾರೆ.

ಇದನ್ನೂ ಓದಿ : ಟ್ವಿಟರ್‌ನ ಕರಾಳ ಮುಖವನ್ನು ಮಹಿಳೆಯರಿಗೆ ಪ್ರದರ್ಶಿಸಿದ ವಿವೇಕ್ ಅಗ್ನಿಹೋತ್ರಿ

ಆದರೆ, ಬಿಜೆಪಿಯೇತರ ಟ್ವೀಟಿಗರು ಈ ವಿಡಿಯೋದಿಂದ ಪ್ರಭಾವಿತರಾಗಿಲ್ಲ. ಪನ್‌ಸ್ಟರ್ ಎಂದು ಕರೆದುಕೊಳ್ಳುವ ಟ್ವಿಟರ್ ಖಾತೆಯೊಂದು ವಿವೇಕ್ ಅಗ್ನಿಹೋತ್ರಿಯವರು ಈ ಎರಡು ನಿಮಿಷದ ವಿಡಿಯೋ ತಯಾರಿಸಲು ಕೇವಲ ಹತ್ತು ಸಾವಿರ ರುಪಾಯಿ ತೆಗೆದುಕೊಂಡಿದ್ದಾರೆ ಎನ್ನುವ ವಿಚಾರಕ್ಕಾಗಿ ತಮಾಷೆ ಮಾಡಿದ್ದಾರೆ. “ವಿವೇಕ್ ಅವರ ಅತಿ ಹೆಚ್ಚು ಲಾಭ ಗಳಿಸಿಕೊಟ್ಟ ಕೆಲಸವಿದು,” ಎಂದು ಪನ್‌ಸ್ಟರ್ ಟ್ವೀಟ್ ಮಾಡಿದ್ದಾರೆ. ಆದರೆ, ಪ್ರತಿಯೊಬ್ಬರೂ ಇದನ್ನು ಮೋಜಿನ ವಿಚಾರವಾಗಿ ಸ್ವೀಕರಿಸಿಲ್ಲ. ವಿಡಿಯೋವನ್ನು ಕೃತಿಚೌರ್ಯ ಮಾಡಿ ತಯಾರಿಸಲಾಗಿದೆ ಎನ್ನುವುದರಿಂದ ಆರಂಭಿಸಿ, ವಿಡಿಯೋದಲ್ಲಿ ಸುಳ್ಳು ಮಾಹಿತಿ ನೀಡಲಾಗಿದೆ ಎನ್ನುವವರೆಗೆ ಟ್ವೀಟಿಗರು ಚರ್ಚಿಸಿದ್ದಾರೆ.

ಸಿನಿಮಾ ನಿರ್ದೇಶಕಿ ಸಂಗಮಿತ್ರ ಅವರು ಟ್ವೀಟ್ ಮಾಡಿ, “ನಮ್ಮ ಹೊಸ ರಕ್ಷಣಾ ಸಚಿವೆ ಪಲ್ಲವಿ ಜೋಶಿ ಅವರನ್ನು ಭೇಟಿಯಾಗಿ. ಈ ವಿಡಿಯೋದಲ್ಲಿ ಮತ್ತದೇ ಹಳೇ ಕೊಳೆತು ನಾರುವ ಸುಳ್ಳುಗಳೇ ಇವೆ. ಈ ಬಾರಿ ಹೊಳೆಯುವ ಪ್ಯಾಕೇಜ್‌ನಲ್ಲಿ ನೀಡಲಾಗಿದೆ. ಪಲ್ಲವಿ ಜೋಶಿ ಅವರು ಲಾಕ್ ವ್ಯವಸ್ಥೆ ತಯಾರಿಸುವ ಹೊಣೆಯನ್ನು ತನ್ನ ಸಹೋದರನಿಗೆ ನೀಡಲಾಗಿದೆ ಎನ್ನುವುದನ್ನು ವಿಡಿಯೋದಲ್ಲಿ ತಿಳಿಸಿಲ್ಲ. ಪಲ್ಲವಿ ಅವರ ಸಹೋದರ ಸುಮಾರು 45,000 ಕೋಟಿ ರುಪಾಯಿ ಸಾಲ ಪಡೆದುಕೊಂಡು ತನ್ನ ಜೀವಮಾನದಲ್ಲಿ ಆ ಲಾಕ್ ತಯಾರಿಸಿಲ್ಲ ಎನ್ನುವ ಅಂಶವನ್ನು ಬಿಟ್ಟು ಉಳಿದೆಲ್ಲವನ್ನೂ ಹೇಳಿದ್ದಾರೆ,” ಎಂದು ಟೀಕಿಸಿದ್ದಾರೆ.

ಒಟ್ಟಾರೆ ವಿಡಿಯೋದ ನಿರೂಪಣೆಯ ಕಲ್ಪನೆಯನ್ನೂ ನಿರ್ಮಾಪಕ ವಿವೇಕ್ ಅಗ್ನಿಹೋತ್ರಿ ಅವರು ವಿದೇಶಿ ಜಾಹೀರಾತೊಂದರಿಂದ ಕದ್ದಿದ್ದಾರೆ ಎನ್ನುವ ಆರೋಪವೂ ಕೇಳಿಬಂದಿದೆ. ಉತ್ಕರ್ಷ್ ಪಾಂಡೆ ಸ್ಕಾಟಿಷ್ ಭಾಷೆಯ ವಿಡಿಯೋವೊಂದನ್ನು ಟ್ವೀಟ್ ಮಾಡಿ ವಿವೇಕ್ ಅಗ್ನಿಹೋತ್ರಿ ಮೇಲೆ ಕೃತಿಚೌರ್ಯದ ಆರೋಪ ಹೊರಿಸಿದ್ದಾರೆ. “ಪಲ್ಲವಿ ಜೋಶಿ ರಫೇಲ್ ಒಪ್ಪಂದವನ್ನು ವಿವರಿಸುವ ಸಂಪೂರ್ಣ ಕಲ್ಪನೆಯನ್ನು ಜನಪ್ರಿಯ ಸ್ಕಾಟಿಷ್ ಜಾಹೀರಾತಿನಿಂದ ಕದಿಯಲಾಗಿದೆ. ಆ ಜಾಹೀರಾತಿನಲ್ಲಿ ಮಹಿಳೆಯೊಬ್ಬರು ಸ್ಕಾಟಿಷ್ ಜನಾದೇಶದ ಬಗ್ಗೆ ತಮ್ಮ ದೃಢಚಿತ್ತದ ಬಗ್ಗೆ ಕಾಫಿ ಕಪ್ ಹಿಡಿದು ಇದೇ ರೀತಿಯಲ್ಲಿ ವಿವರಿಸುತ್ತಾರೆ,” ಎಂದು ಉತ್ಕರ್ಷ್ ಟ್ವೀಟ್ ಮಾಡಿದ್ದಾರೆ.

ಆದರೆ, ಬಹಳಷ್ಟು ಮಂದಿ ಸಾಮಾಜಿಕ ಜಾಲತಾಣದಲ್ಲಿ ಪಲ್ಲವಿ ಜೋಶಿ ರಕ್ಷಣಾ ಸಚಿವಾಲಯದ ಒಪ್ಪಂದಗಳ ಬಗ್ಗೆ ವಿವರಿಸುವ ತಜ್ಞರಾಗಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. “ಪಲ್ಲವಿ ಜೋಶಿ ಹೊಸ ರಕ್ಷಣಾ ಸಚಿವೆಯೇ?” ಎಂದು ಕಾಂಗ್ರೆಸ್ ಐಟಿ ಸೆಲ್ ಮುಖ್ಯಸ್ಥೆ ರಮ್ಯಾ ಟ್ವೀಟ್ ಮಾಡಿದ್ದಾರೆ. ಪತ್ರಕರ್ತರಾದ ಸಮೀರಾ ಸೂದ್ ಟ್ವೀಟ್ ಮಾಡಿ, “ಪಲ್ಲವಿ ಜೋಶಿ ನಮಗೆ ರಫೇಲ್ ಒಪ್ಪಂದದ ಬಗ್ಗೆ ವಿವರಿಸುವ ತಜ್ಞರಾಗಲು ರಾಷ್ಟ್ರೀಯ ಭದ್ರತೆ, ರಕ್ಷಣೆ, ಅರ್ಥಶಾಸ್ತ್ರ, ಎಂಜಿನಿಯರಿಂಗ್ ಅಥವಾ ಇತರ ಯಾವುದೇ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದಿರುವ ಕ್ಷಣವನ್ನು ನಾನು ಮಿಸ್ ಮಾಡಿಕೊಂಡುಬಿಟ್ಟೆ!” ಎಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದಾರೆ.

“ಬಿಜೆಪಿ ಸರ್ಕಾರ ಆಗಾಗ್ಗೆ ಪ್ರಚಾರಕ್ಕಾಗಿ ಹೊಸ ಮುಖಗಳನ್ನು ಬಿಡುಗಡೆ ಮಾಡುತ್ತಿರುತ್ತದೆ. ಇದೀಗ ಪಲ್ಲವಿ ಜೋಶಿಯವರದು ಅಂತಹುದೇ ಪ್ರಯತ್ನ,” ಎಂದು ಬಹಳಷ್ಟು ಮಂದಿ ಟ್ವೀಟ್ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ನ್ಯಾಯವಾದಿ ಸಿದ್ ಅವರು, ಪಲ್ಲವಿ ಜೋಶಿ ರಕ್ಷಣಾ ವ್ಯವಹಾರವನ್ನು ವಿವರಿಸುವ ವಿಡಿಯೋವನ್ನು ಬಿಜೆಪಿಯ ಮತ್ತೊಂದು ಪ್ರಚಾರದ ಗಿಮಿಕ್ ಎಂದು ಹೇಳಿದ್ದಾರೆ. “ಬಿಜೆಪಿ ರಫೇಲ್ ಹಗರಣ ಅಡಗಿಸಿಡಲು ಹೊಸ ಪ್ರಚಾರದ ಗಿಮಿಕ್ ಪ್ರದರ್ಶಿಸಿದೆ. ಫೈಟರ್ ಜೆಟ್‌ಗಳನ್ನು ಖರೀದಿಸುವುದನ್ನು ಲಾಕ್ ಖರೀದಿಸುವುದಕ್ಕೆ ಹೋಲಿಸುತ್ತಿದ್ದಾರೆ. ಈ ವಿವರಣೆಯಲ್ಲೂ ಲಾಕ್‌ನ ಬೆಲೆ ಬಹಿರಂಗಪಡಿಸಬಹುದು, ಆದರೆ ರಫೇಲ್ ಬೆಲೆಯನ್ನು ಬಹಿರಂಗಪಡಿಸುವಂತಿಲ್ಲ. ಆದರೆ ಇಂತಹ ಲಾಕ್ ಮಾಡಲು ವಿವೇಕ್ ಅಗ್ನಿಹೋತ್ರಿ ಆಫ್‌ಸೆಟ್ ಗುತ್ತಿಗೆ ಪಡೆದಿದ್ದಾರೆಯೇ?" ಎಂದು ಪ್ರಶ್ನಿಸಿದ್ದಾರೆ ಸಿದ್.

ಮತ್ತೊಂದು ಟ್ವೀಟ್ ಮಾಡಿರುವ ಸಿದ್, ತಮ್ಮದೇ ರೀತಿಯಲ್ಲಿ ಲಾಕ್ ವ್ಯವಸ್ಥೆಯನ್ನೇ ಉದಾಹರಣೆಯಾಗಿಸಿ ರಫೇಲ್ ಒಪ್ಪಂದವನ್ನು ವಿವರಿಸಿದ್ದಾರೆ. “ನಿವಾಸಿಗಳೇ ಮಾಲೀಕರಾಗಿರುವ ಸಂಸ್ಥೆ ತಯಾರಿಸಿದ ಲಾಕ್‌ಗಳನ್ನು ಖರೀದಿಸುವ ಒಪ್ಪಂದ ಮಾಡಲು ಮಾಜಿ ಕಾರ್ಯದರ್ಶಿ ಬಯಸಿದ್ದರು. ಆದರೆ, ಹೊಸ ಕಾರ್ಯದರ್ಶಿ ಈ ಒಪ್ಪಂದವನ್ನು ತನ್ನ ಸಿನಿಮಾ ನಿರ್ದೇಶಕ ಪತಿಗೆ ಕೊಡುತ್ತಾರೆ. ಹೊಸ ಕಾರ್ಯದರ್ಶಿ ಲಾಕ್‌ಗೆ ನಿವಾಸಿಗಳು ಹೆಚ್ಚಿನ ಬೆಲೆ ತೆರುವಂತೆ ಮಾಡಿ ಒಪ್ಪಂದ ಮಾಡಿಕೊಳ್ಳುತ್ತಾರೆ. ಆದರೆ, ಬೆಲೆಯನ್ನು ಬಹಿರಂಗಪಡಿಸುವುದಿಲ್ಲ. ಆ ಲಾಕ್‌ಗಳು ಮೂರು ವರ್ಷವಾದರೂ ಸಿದ್ಧವಾಗುವುದಿಲ್ಲ. ಒಪ್ಪಂದಕ್ಕೆ ಸಹಿ ಹಾಕುವ ಕೆಲವೇ ದಿನಗಳ ಮೊದಲು ಪತಿ ನೋಂದಾಯಿಸಿದ ಕಂಪನಿಯೊಂದಕ್ಕೆ ಲಾಕ್ ತಯಾರಿಸುವ ಒಪ್ಪಂದವನ್ನು ಹೊಸ ಕಾರ್ಯದರ್ಶಿ ನೀಡುತ್ತಾರೆ,” ಎಂದು ಸಿದ್ ಟ್ವೀಟ್ ಮೂಲಕ ವಿವರಿಸಿದ್ದಾರೆ.

ಬಹಳಷ್ಟು ಟ್ವೀಟಿಗರು ರಫೇಲ್ ಒಪ್ಪಂದ ಹಣ ಉಳಿತಾಯ ಮಾಡಿದೆ ಎಂದು ಪಲ್ಲವಿ ಜೋಶಿ ವಿಡಿಯೋದಲ್ಲಿ ಹೇಳಿರುವುದನ್ನೂ ಟೀಕಿಸಿದ್ದಾರೆ. ಆಪ್ ಪಕ್ಷದ ಮುಖಂಡ ಅಂಕಿತ್ ಲಾಲ್ ಟ್ವೀಟ್ ಮಾಡಿ, “ರಫೇಲ್ ಜೆಟ್‌ಗಳ ವಾಸ್ತವ ಖರೀದಿ ಬೆಲೆ ಏನು? ೨೧,೦೦೦ ಕೋಟಿ ರು. ಮೌಲ್ಯದ ಒಪ್ಪಂದವನ್ನು ೧೦ ದಿನಗಳ ಹಿಂದೆ ಅನಿಲ್ ಅಂಬಾನಿ ಸ್ಥಾಪಿಸಿದ ಸಂಸ್ಥೆಯೊಂದಕ್ಕೆ ಹೇಗೆ ನೀಡಲಾಗಿದೆ? ಪಲ್ಲವಿ ಜೋಶಿ ನಮ್ಮ ಹೊಸ ರಕ್ಷಣಾ ಸಚಿವರೇ?” ಎಂದು ಪ್ರಶ್ನಿಸಿದ್ದಾರೆ. ಜೆಟ್ ಲೀ ಎನ್ನುವ ಟ್ವಿಟರ್ ಖಾತೆ, “ರಫೇಲ್ ಒಪ್ಪಂದದ ವಾಸ್ತವದ ಬೆಲೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೊರತುಪಡಿಸಿ ಇನ್ನೆಲ್ಲರಿಗೂ ತಿಳಿದಿದೆ,” ಎಂದು ಟ್ವೀಟ್ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More