ಮಹದಾಯಿ ನ್ಯಾಯಾಧಿಕರಣ ತೀರ್ಪು ರಾಜ್ಯದ ಜನತೆಗೆ ನೀಡಿದ ಸಿಹಿ-ಕಹಿಗಳೇನು?

ಕರ್ನಾಟಕ ಹಾಗೂ ಗೋವಾ ನಡುವಿನ ಮಹದಾಯಿ ನೀರು ಹಂಚಿಕೆಗೆ ಸಂಬಂಧಿಸಿದ ದಶಕಗಳ ವ್ಯಾಜ್ಯಕ್ಕೆ ತಾತ್ಕಾಲಿಕ ವಿರಾಮ ಬಿದ್ದಿದೆ. ಕರ್ನಾಟಕಕ್ಕೆ ೧೩.೪೨ ಟಿಎಂಸಿ, ಗೋವಾಕ್ಕೆ ೨೪ ಟಿಎಂಸಿ, ಮಹಾರಾಷ್ಟ್ರಕ್ಕೆ ೧.೩೦ ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ನ್ಯಾಯಾಧಿಕರಣ ತೀರ್ಪು ಪ್ರಕಟಿಸಿದೆ

ಮಹದಾಯಿ ನದಿ ನೀರು ಬಳಕೆಗೆ ಸಂಬಂಧಿಸಿದಂತೆ ನೆರೆಯ ಗೋವಾ ವಿರುದ್ಧ ಕರ್ನಾಟಕದ ದಶಕಗಳ ಹೋರಾಟಕ್ಕೆ ಮಂಗಳವಾರ ಭಾಗಶಃ ಯಶಸ್ಸು ದೊರೆತಿದೆ. ನ್ಯಾಯಮೂರ್ತಿ ಜೆ ಎಸ್‌ ಪಾಂಚಾಲ್‌ ನೇತೃತ್ವದ ನ್ಯಾಯಾಧಿಕರಣವು, ಅಂತಾರಾಜ್ಯ ನದಿ ನೀರು ವಿವಾದ ಕಾಯ್ದೆ-೧೯೫೬ ಅಡಿ ಕರ್ನಾಟಕಕ್ಕೆ ಕುಡಿಯಲು, ಹಾಗೂ ಕೃಷಿ ಮತ್ತು ಜಲವಿದ್ಯುತ್ ಉತ್ಪಾದನೆಗಾಗಿ ಒಟ್ಟು ೧೩.೪೨ ಟಿಎಂಸಿ ಅಡಿ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ನ್ಯಾಯಾಧಿಕರಣದ ತೀರ್ಪಿಗೆ ರಾಜ್ಯದ ಹೋರಾಟಗಾರರು ಹಾಗೂ ರಾಜಕಾರಣಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಗದಗ ಮತ್ತು ಬಾಗಲಕೋಟೆ ಜಿಲ್ಲೆಯ ವಿವಿಧ ತಾಲೂಕುಗಳ ಜನರು ಕುಡಿಯಲು ಮಹದಾಯಿ ನದಿ ನೀರು ಹರಿಸಬೇಕು ಎಂದು ಆಗ್ರಹಿಸಿ ಹಲವು ಬಾರಿ ಬಂದ್‌ ಆಚರಿಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಮೇಲೆ ಒತ್ತಡ ಹೇರಿದ್ದರು. ಚಿತ್ರರಂಗ ಸೇರಿದಂತೆ ವಿವಿಧ ವಲಯಗಳಿಂದ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗಿತ್ತು. ಈ ಮಧ್ಯೆ, ಕಳಸಾ-ಬಂಡೂರಿ ಹೋರಾಟ ಸಮಿತಿಯು ನೀರು ಪಡೆದೇ ತೀರುವ ಏಕೈಕ ನಿರ್ಣಯದೊಂದಿಗೆ ೨೦೧೫ರ ಜುಲೈನಲ್ಲಿ (೧,೧೨೫ ದಿನಗಳ ) ಹೋರಾಟ ಆರಂಭಿಸಿತ್ತು. ತೀರ್ಪಿನಿಂದ ಹರ್ಷಗೊಂಡಿರುವ ಹೋರಾಟಗಾರರು, ಮಹದಾಯಿ ನದಿ ನೀರು ಹೋರಾಟದ ಕೇಂದ್ರಸ್ಥಾನವಾದ ಹುಬ್ಬಳ್ಳಿಯೂ ಸೇರಿದಂತೆ ರಾಜಧಾನಿ ಬೆಂಗಳೂರು ಹಾಗೂ ಉತ್ತರ ಕರ್ನಾಟಕದ ವಿವಿಧ ಭಾಗಗಳಲ್ಲಿ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಆದರೆ, ಬೆಳಗಾವಿಯಲ್ಲಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ನ್ಯಾಯಾಧಿಕರಣದ ತೀರ್ಪಿನಿಂದ ಅನ್ಯಾಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗ ಹಂಚಿಕೆಯಾಗಿರುವ ನೀರನ್ನು ಸದ್ಬಬಳಕೆ ಮಾಡಿಕೊಳ್ಳಲು ರಾಜ್ಯ ಸರ್ಕಾರ ತಕ್ಷಣ ಕಾರ್ಯಪ್ರವೃತ್ತವಾಗಬೇಕು ಎಂಬ ಆಗ್ರಹ ಬಲವಾಗಿ ಕೇಳಿಬಂದಿದೆ. “ರಾಜ್ಯದ ವಕೀಲರು ನ್ಯಾಯಾಧಿಕರಣದ ತೀರ್ಪನ್ನು ಅಧ್ಯಯನ ನಡೆಸಿ, ಸರ್ಕಾರದ ಜೊತೆ ಚರ್ಚಿಸಿ ಮುಂದಿನ ಕಾನೂನು ಹೋರಾಟ ನಿರ್ಧರಿಸಲಾಗುವುದು,” ಎಂದು ಪ್ರತಿಕ್ರಿಯಿಸಿದ್ದಾರೆ.

ಮಹದಾಯಿ ನ್ಯಾಯಾಧಿಕರಣವು ನದಿಯ ಅಂದಾಜು ೧೮೦ ಟಿಎಂಸಿ ಅಡಿ ನೀರಿನ ಪೈಕಿ ವೈಜ್ಞಾನಿಕವಾಗಿ ಅಂದಾಜು ೩೯ ಟಿಎಂಸಿ ಅಡಿ ನೀರನ್ನು ಗಣನೆಗೆ ತೆಗೆದುಕೊಂಡಿದೆ. ಇದರಲ್ಲಿ ಕರ್ನಾಟಕಕ್ಕೆ ಕುಡಿಯಲು ೩.೯೬ ಟಿಎಂಸಿ ಅಡಿ, ಮಹದಾಯಿ ಜಲಾನಯನ ಪ್ರದೇಶವಾದ ಬೆಳಗಾವಿ ಜಿಲ್ಲೆಯ ಕಣಕುಂಬಿಯಲ್ಲಿ ಕೃಷಿ ಮತ್ತು ಕುಡಿಯುವ ನೀರಿಗಾಗಿ ೧.೫ ಟಿಎಂಸಿ ಅಡಿ, ಜಲ ವಿದ್ಯುತ್‌ ಯೋಜನೆಗೆ ೮.೦೨ ಟಿಎಂಸಿ ಅಡಿ ನೀರು ಸೇರಿದಂತೆ ಒಟ್ಟು ೧೩.೪೨ ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದೆ. ಗೋವಾಕ್ಕೆ ೨೪ ಟಿಎಂಸಿ ಹಾಗೂ ಮಹಾರಾಷ್ಟ್ರಕ್ಕೆ ೧.೩೦ ಟಿಎಂಸಿ ನೀರು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ. ಈ ಮಧ್ಯೆ, ನ್ಯಾಯಾಧಿಕರಣವು ೧೨ ಸಂಪುಟಗಳ ತೀರ್ಪಿನ ದಾಖಲೆಗಳನ್ನು ಕೇಂದ್ರ ಜಲಸಂಪನ್ಮೂಲ ಇಲಾಖೆಗೆ ಸಲ್ಲಿಸಿದೆ. ತೀರ್ಪು ಪ್ರಕಟಿಸುವ ವಿಚಾರದಲ್ಲಿ ನ್ಯಾಯಾಧಿಕರಣವು ಸಂಪ್ರದಾಯದಂತೆ ಮೌಖಿಕವಾಗಿ ತೀರ್ಪು ಓದಿಲ್ಲ. ಆದೇಶದ ಪ್ರತಿಗಳನ್ನು ಬಿಡುಗಡೆ ಮಾಡಿರುವುದಕ್ಕೆ ಹಲವರು ಅಚ್ಚರಿ ವ್ಯಕ್ತಪಡಿಸಿದ್ದು, ನ್ಯಾಯಾಧಿಕರಣವು ನ್ಯಾಯ ವ್ಯವಸ್ಥೆಗೆ ಅಪಚಾರವೆಸಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕರ್ನಾಟಕವು ಕುಡಿಯುವ ನೀರು, ಜಲ ವಿದ್ಯುತ್‌ ಉತ್ಪಾದನೆ ಹಾಗೂ ಕೃಷಿಗಾಗಿ ೩೬.೫೫ ಟಿಎಂಸಿ ಅಡಿ ನೀರಿಗೆ ಮನವಿ ಮಾಡಿತ್ತು. ಆದರೆ, ಕರ್ನಾಟಕದ ಕೆಲವು ಮನವಿಗಳನ್ನು ಮಾತ್ರ ಪುರಸ್ಕರಿಸಿರುವ ನ್ಯಾಯಾಧಿಕರಣವು ರಾಜ್ಯದ ಬೇಡಿಕೆಯ ಪೈಕಿ ಮೂರನೇ ಒಂದು ಭಾಗದಷ್ಟು ಟಿಎಂಸಿ ಮಾತ್ರ ಹಂಚಿಕೆ ಮಾಡಿದೆ. ಮಲಪ್ರಭಾದ ನವಿಲುತೀರ್ಥ ಜಲಾಶಯದಿಂದ ಕಳಸಾ ನಾಲೆಯ ಮೂಲಕ ೩.೫ ಟಿಎಂಸಿ ಹಾಗೂ ಬಂಡೂರಿ ನಾಲಾದ ಮೂಲಕ ೪ ಟಿಎಂಸಿ ನೀರನ್ನು ಕುಡಿಯಲು ಹರಿಸಲು ಅವಕಾಶ ಮಾಡಿಕೊಡುವಂತೆ ಕರ್ನಾಟಕ ಮನವಿ ಮಾಡಿತ್ತು. ಆದರೆ, ನ್ಯಾಯಾಧಿಕರಣವು ಕಳಸಾದ ಮೂಲಕ ೧.೧೮ ಟಿಎಂಸಿ ಹಾಗೂ ಬಂಡೂರಿ ಮೂಲಕ ೨.೭೨ ಟಿಎಂಸಿ ನೀರು ಹರಿಸಲು ಮಾತ್ರ ಒಪ್ಪಿಗೆ ಸೂಚಿಸಿದೆ. ಜಲವಿದ್ಯುತ್‌ ಉತ್ಪಾದನೆಗೆ ಕಾಳಿ ನದಿಗೆ ೫.೫೨ ಟಿಎಂಸಿ ನೀರು ಹಂಚಿಕೆಗೆ ಮನವಿ ಮಾಡಿದ್ದ ಕರ್ನಾಟಕದ ಮನವಿಯನ್ನು ನ್ಯಾಯಾಧಿಕರಣ ಪುರಸ್ಕರಿಸಿಲ್ಲ. ಜಲವಿದ್ಯುತ್‌ ಉತ್ಪಾದನೆಗಾಗಿ ೧೪.೯೭ ಟಿಎಂಸಿ ನೀರಿಗೆ ಮನವಿ ಮಾಡಿದ್ದ ರಾಜ್ಯದ ವಾದವನ್ನು ಮನ್ನಿಸಿರುವ ನ್ಯಾಯಾಧಿಕರಣವು ೮.೦೨ ಟಿಎಂಸಿ ನೀರು ಹಂಚಿಕೆ ಮಾಡಿದೆ. ಬೆಳಗಾವಿ ಜಿಲ್ಲೆಯ ರಾಮದುರ್ಗ, ಸವದತ್ತಿ ಮತ್ತು ಬೈಲಹೊಂಗಲ ತಾಲೂಕುಗಳಲ್ಲಿ ಕುಡಿಯಲು ಹಾಗೂ ನೀರಾವರಿಗಾಗಿ ೭ ಟಿಎಂಸಿ ನೀರು ಹಂಚಿಕೆ ಮಾಡುವಂತೆ ಕೋರಿದ್ದ ಕರ್ನಾಟಕದ ಮನವಿಯನ್ನೂ ನ್ಯಾ. ಪಾಂಚಾಲ್‌ ನೇತೃತ್ವದ ನ್ಯಾಯಾಧಿಕರಣ ಗಣನೆಗೆ ತೆಗೆದುಕೊಂಡಿಲ್ಲ. ನೆರೆಯ ಗೋವಾ ಸರ್ಕಾರವು ಮಹದಾಯಿಯಲ್ಲಿ ತನಗೆ ೭೪ ಟಿಎಂಸಿ ನೀರುಹಂಚಿಕೆ ಮಾಡಬೇಕು ಎಂದು ಆಗ್ರಹಿಸಿತ್ತು. ಆದರೆ, ಉಭಯ ರಾಜ್ಯಗಳ ವಾದವನ್ನು ಬದಿಗೆ ಸರಿಸಿರುವ ನ್ಯಾಯಾಧಿಕರಣವು ಅಳೆದು ತೂಗಿ ನೀರು ಹಂಚಿಕೆ ಮಾಡಿದೆ.

ಮಹದಾಯಿ ಕರ್ನಾಟಕಕ್ಕೆ ಸೇರಬೇಕು ಎಂದು ೧೯೭೬ರಲ್ಲಿ ಹೋರಾಟ ಆರಂಭಿಸಿದ ಬಿ ಎಂ ಹೊರಕೇರಿ ಅವರ ವಾದಕ್ಕೆ ಅಂತಿಮವಾಗಿ ನ್ಯಾಯ ಸಿಕ್ಕಿದೆ. ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು. ಹೆಚ್ಚಿನ ನೀರು ಪಡೆಯುವ ಸಂಬಂಧ ಕಾನೂನು ತಜ್ಞರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು.
ವೀರೇಶ ಸೊಬರದಮಠ, ಕಳಸಾ ಬಂಡೂರಿ ಹೋರಾಟ ಸಮಿತಿ ಮುಖಂಡ

“ಕರ್ನಾಟಕಕ್ಕೆ ಹಂಚಿಕೆಯಾಗಿರುವ ೧೩.೫ ಟಿಎಂಸಿ ಅಡಿ ನೀರಿನ ಪೈಕಿ ೮.೦೨ ಟಿಎಂಸಿ ನೀರನ್ನು ಜಲ ವಿದ್ಯುತ್‌ ಯೋಜನೆಗೆ ಹಂಚಿಕೆ ಮಾಡಲಾಗಿದೆ. ಆದರೆ, ವಿದ್ಯುತ್‌ ಉತ್ಪಾದನೆಯ ನಂತರ ನೀರು ಗೋವಾಕ್ಕೆ ಹರಿಯುವುದರಿಂದ ರಾಜ್ಯದ ನೀರಿನ ಪಾಲು ವಾಸ್ತವದಲ್ಲಿ ಅಂದಾಜು ೫.೫ ಟಿಎಂಸಿ ಮಾತ್ರ. ಆದರೆ, ಗೋವಾದ ಪಾಲು ೨೪ರಿಂದ ೩೨ ಟಿಎಂಸಿಗೆ ಏರಿಕೆಯಾಗಲಿದೆ,” ಎಂದು ನೀರಾವರಿ ತಜ್ಞರಾದ ತಿಮ್ಮೇಗೌಡ, ಕ್ಯಾ.ರಾಜಾ ರಾವ್‌, ಮಾಜಿ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ್‌, ಎಚ್‌ ಕೆ ಪಾಟೀಲ್‌ ಹಾಗೂ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

“ಬಂಡೂರಿ ನಾಲಾವು ಪರಿಸರ ಸೂಕ್ಷ್ಮವಲಯದಲ್ಲಿ ಬರುತ್ತದೆ. ಈ ನಾಲೆಯಿಂದ ಹರಿಸಲು ಹಂಚಿಕೆಯಾಗಿರುವ ೨.೭೨ ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳಬೇಕಾದರೆ ಕೇಂದ್ರ ಪರಿಸರ ಇಲಾಖೆಯಿಂದ ಒಪ್ಪಿಗೆ ಪಡೆಯಬೇಕಾಗುತ್ತದೆ. ಇದಕ್ಕೆ ತಕ್ಷಣ ಒಪ್ಪಿಗೆ ಸಿಗುವ ಸಾಧ್ಯತೆ ಕ್ಷೀಣ. ಕಣಕುಂಬಿಯಲ್ಲಿ ಹಿಂದಿನ ಸರ್ಕಾರ ಕೈಗೊಂಡಿರುವ ಕೆಲಸ ಅವೈಜ್ಞಾನಿಕವಾಗಿದೆ. ಬದಲಿಗೆ ತಕ್ಷಣ ಚೆಕ್‌ಡ್ಯಾಂ ನಿರ್ಮಿಸಿ ಕರ್ನಾಟಕದ ಪಾಲಿನ ಬಹುತೇಕ ನೀರು ಬಳಕೆ ಮಾಡಿಕೊಳ್ಳಲು ಸರ್ಕಾರ ಮುಂದಾಗಬೇಕು. ಜೊತೆಗೆ ಕೇಂದ್ರ ಸರ್ಕಾರದಿಂದ ತಕ್ಷಣ ಒಪ್ಪಿಗೆ ಪಡೆಯಲು ಕಾರ್ಯಪ್ರವೃತ್ತವಾಗಬೇಕಿದೆ,” ಎಂದು ಬಿಜೆಪಿ ಮುಖಂಡ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್‌ನ ಎಚ್‌ ಕೆ ಪಾಟೀಲ್‌ ಅವರು, “ನ್ಯಾಯಾಧಿಕರಣ ತೀರ್ಪಿನಿಂದ ಅನ್ಯಾಯವಾಗಿದೆ,” ಎಂದಿದ್ದಾರೆ. ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ಅವರು ತೀರ್ಪಿಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜೆಡಿಎಸ್‌ ಮುಖಂಡ ಎನ್‌ ಎಚ್‌ ಕೋನರಡ್ಡಿ ಅವರು, “ಕನಿಷ್ಠ ೨೫ ಟಿಎಂಸಿ ನೀರು ರಾಜ್ಯಕ್ಕೆ ಸಿಗಬೇಕಿತ್ತು,” ಎಂದಿದ್ದಾರೆ. ಇದು ಮುಂದಿನ ದಿನಗಳಲ್ಲಿ, ಅದರಲ್ಲೂ ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವುದರಿಂದ ರಾಜಕೀಯ ಜಟಾಪಟಿಗೆ ನಾಂದಿಯಾದರೂ ಅಚ್ಚರಿ ಇಲ್ಲ. ಈ ಮಧ್ಯೆ, “ತೀರ್ಪಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಲು ಅವಕಾಶವಿಲ್ಲ. ಅನ್ಯಾಯ ಎಂದು ಹೇಳುವವರು ನ್ಯಾಯಾಧಿಕರಣದಲ್ಲಿ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲವಾದಲ್ಲಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಬಹುದು,” ಎಂದು ನೀರಾವರಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇದೆಲ್ಲದರ ಮಧ್ಯೆ, ನ್ಯಾಯಾಧಿಕರಣವು ಕೇಂದ್ರ ಜಲ ಸಮಿತಿ (ಸಿಡಬ್ಲ್ಯುಸಿ) ಅಂದಾಜಿಸಿರುವಂತೆ ಮಹದಾಯಿ ನದಿಯಿಂದ ಅಂದಾಜು ೨೦೦ ಟಿಎಂಸಿ ನೀರು ಲಭ್ಯವಿದೆ ಎಂಬುದನ್ನು ಗಣನೆಗೆ ತೆಗೆದುಕೊಂಡಿಲ್ಲ. ಬದಲಿಗೆ ಹಿಂದಿನ ಲೆಕ್ಕಾಚಾರದಂತೆ ಮಹದಾಯಿಯಲ್ಲಿ ಅಂದಾಜು ೧೭೦ ಟಿಎಂಸಿ ನೀರು ಲಭ್ಯವಿದೆ ಎಂಬ ವಾದವನ್ನು ಮನ್ನಿಸಿದೆ ಎನ್ನಲಾಗಿದೆ. ಬಹುತೇಕ ನೀರು ಸಮುದ್ರಕ್ಕೆ ಹರಿದು ಹೋಗಲು ಅವಕಾಶ ಮಾಡಿಕೊಟ್ಟಿರುವುದರ ಬಗ್ಗೆಯೂ ನೀರಾವರಿ ತಜ್ಞರು ಅಸಮಾಧಾನ ಹೊರಹಾಕಿದ್ದಾರೆ. ಗೋವಾ ಪುಟ್ಟ ರಾಜ್ಯವಾಗಿದ್ದು, ಅದಕ್ಕೆ ಹಂಚಿಕೆಯಾಗಿರುವ ನೀರನ್ನು ಸಂಪೂರ್ಣವಾಗಿ ವಿನಿಯೋಗಿಸಿಕೊಳ್ಳುವವರೆಗೆ ಕರ್ನಾಟಕ ಬಳಸಿಕೊಳ್ಳಲು ಅನುವು ಮಾಡಿಕೊಡಬಹುದಿತ್ತು ಎಂಬ ತರ್ಕವನ್ನೂ ಮಂಡಿಸಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ನಿರ್ದೇಶನದಂತೆ ಈಚೆಗೆ ಮಂಡಳಿ ರಚಿಸಲಾಗಿದೆ. ಆದ್ದರಿಂದ ಮಹದಾಯಿ ವಿಚಾರದಲ್ಲೂ ಮಂಡಳಿ ರಚನೆಯ ಪ್ರಸ್ತಾಪವಿದೆಯೇ ಎಂಬುದರ ಬಗ್ಗೆ ಇನ್ನಷ್ಟೇ ಸ್ಪಷ್ಟತೆ ಸಿಗಬೇಕಿದೆ.

ಇದನ್ನೂ ಓದಿ : ಕಾವೇರಿಯಂತೆ, ಮಹದಾಯಿ ವ್ಯಾಜ್ಯದಲ್ಲಿ ರಾಜ್ಯಕ್ಕೆ ಸಿಗುವುದೇ ಗೆಲುವು?

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಭೀಮಗಢ ಅರಣ್ಯ ಪ್ರದೇಶದಲ್ಲಿನ ದೇಗಾಂವ್‌ನಲ್ಲಿ ಹುಟ್ಟುವ ಮಹದಾಯಿ ನದಿಯು ರಾಜ್ಯದಲ್ಲಿ ೨೮ ಕಿ ಮೀ ಸೇರಿದಂತೆ ಒಟ್ಟು ಸುಮಾರು ೮೦ ಕಿ ಮೀ ನಷ್ಟು ಹರಿದು ಸಮುದ್ರ ಸೇರುತ್ತದೆ. ರಾಜ್ಯದಲ್ಲಿಯೇ ಮಹದಾಯಿ ಹುಟ್ಟುವುದರಿಂದ ಅದರ ನೀರು ರಾಜ್ಯಕ್ಕೂ ಸೇರಬೇಕು ಎಂದು ಕರ್ನಾಟಕ ಹಲವು ದಶಕಗಳಿಂದ ವಾದಿಸುತ್ತಿದೆ. ಈ ಸಂಬಂಧ ಮಾಜಿ ಮುಖ್ಯಮಂತ್ರಿ ಎಸ್‌ ಆರ್‌ ಬೊಮ್ಮಾಯಿ ಹಾಗೂ ಗೋವಾ ಮಾಜಿ ಮುಖ್ಯಮಂತ್ರಿ ಪ್ರತಾಪ್‌ ಸಿಂಗ್‌ ರಾಣೆ ಅವರ ನಡುವೆ ೧೯೮೮-೮೯ರಲ್ಲಿ ಒಪ್ಪಂದವಾಗಿತ್ತು. ಆದರೆ, ಅದು ಊರ್ಜಿತವಾಗಲಿಲ್ಲ. ಆನಂತರ ಎಸ್‌ ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಮಾತುಕತೆ ವಿಫಲವಾಗಿತ್ತು. ಈ ಸಂದರ್ಭದಲ್ಲಿ ೨೦೦೨ರಲ್ಲಿ ಮಾಜಿ ಪ್ರಧಾನಿ ಎ ಬಿ ವಾಜಪೇಯಿ ನೇತೃತ್ವದ ಸರ್ಕಾರವು ಕಳಸಾ ಬಂಡೂರಿ ನಾಲಾ ಯೋಜನೆ ಕೈಗೊಳ್ಳಲು ಕರ್ನಾಟಕ ಸರ್ಕಾರಕ್ಕೆ ತಾತ್ವಿಕ ಒಪ್ಪಿಗೆ ನೀಡಿತ್ತು. ಇದಕ್ಕೆ ಗೋವಾ ತೀವ್ರ ವಿರೋಧ ವ್ಯಕ್ತಪಡಿಸಿತ್ತು.

೨೦೦೬ರಲ್ಲಿ ಬೆಳಗಾವಿ ಜಿಲ್ಲೆಯ ಕಣಕುಂಬಿಯಲ್ಲಿ ಕಳಸಾ-ಬಂಡೂರಿ ನಾಲಾ ಯೋಜನೆಗೆ ಮುಖ್ಯಮಂತ್ರಿಯಾಗಿದ್ದ ಎಚ್‌ ಡಿ ಕುಮಾರಸ್ವಾಮಿ ಅವರು ಗೋವಾ ವಿರೋಧದ ನಡುವೆಯೂ ಶಂಕುಸ್ಥಾಪನೆ ನೆರವೇರಿಸಿದ್ದರು. ಇದರಿಂದ ಆಕ್ರೋಶಗೊಂಡ ಗೋವಾ ಕೋರ್ಟ್‌ ಮೆಟ್ಟಿಲೇರಿತ್ತು. ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧಿಕರಣದಲ್ಲಿ ಪರಿಹಾರ ಕಂಡುಕೊಳ್ಳುವಂತೆ ಆದೇಶಿಸಿದ್ದ ಸುಪ್ರೀಂಕೋರ್ಟ್‌, ೨೦೧೦ರಲ್ಲಿ ನ್ಯಾಯಾಧಿಕರಣ ರಚಿಸಿತ್ತು. ಸಾಕಷ್ಟು ಒತ್ತಡದ ನಂತರ ನ್ಯಾಯಾಧಿಕರಣವು ೨೦೧೨ರಲ್ಲಿ ಕಾರ್ಯಾರಂಭ ಮಾಡಿತ್ತು. ಆನಂತರ ಸಾಕಷ್ಟು ಹೋರಾಟ ನಡೆದಿದ್ದು, ಹಲವರು ಜೀವ ಕಳೆದುಕೊಂಡಿದ್ದಾರೆ. ಪ್ರತಿಭಟನೆ, ಬಂದ್‌ ಮತ್ತಿತರ ಕಾರಣಗಳಿಗಾಗಿ ಗೋವಾ ಮತ್ತು ಕರ್ನಾಟಕಕ್ಕೆ ಸಾಕಷ್ಟು ನಷ್ಟವಾಗಿದೆ.

ಇದೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮಾತುಕತೆಯ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಕರ್ನಾಟಕ-ಗೋವಾ-ಮಹಾರಾಷ್ಟ್ರದ ನಾಯಕರಿಗೆ ನ್ಯಾಯಾಧಿಕರಣ ಸಲಹೆ ನೀಡಿತ್ತು. ಆದರೆ, ರಾಜಕೀಯ ಕಾರಣಕ್ಕಾಗಿ ಮುಖಂಡರು ಕೆಸರೆರಾಚ ಆರಂಭಿಸಿದ್ದರಿಂದ ಅಂತಿಮವಾಗಿ ನ್ಯಾಯಾಧಿಕರಣವೇ ವಿವಾದ ಬಗೆಹರಿಸಬೇಕಾಯಿತು. ನ್ಯಾಯಾಧಿಕರಣದ ತೀರ್ಪಿಗೆ ಕರ್ನಾಟಕದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮತ್ತೊಂದು ಸುತ್ತಿನ ಕಾನೂನು ಹೋರಾಟಕ್ಕೆ ನಾಂದಿಯಾಗುವ ಸಾಧ್ಯತೆ ದಟ್ಟವಾಗಿದೆ. ಇನ್ನು ರಾಜ್ಯದಲ್ಲಿ ಕಾಂಗ್ರೆಸ್‌-ಬಿಜೆಪಿ-ಜೆಡಿಎಸ್‌ ನಾಯಕರು ಮಹದಾಯಿ ವಿಚಾರವನ್ನು ರಾಜಕೀಯಕ್ಕೆ ಬೆಳೆಸಿಕೊಳ್ಳುವುದು ನಿಸ್ಸಂಶಯ ಎಂಬುದನ್ನು ತೀರ್ಪಿನ ನಂತರ ಹೊರಬಿದ್ದಿರುವ ಹೇಳಿಕೆಗಳು ದೃಢಪಡಿಸಿವೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More