ಎಟಿಎಸ್ ಬಂಧಿತ ಆರೋಪಿಗಳ ಬಳಿ ಪಿಸ್ತೂಲುಗಳು ಪತ್ತೆ; ಗೌರಿ ಹತ್ಯೆಯಲ್ಲಿ ಕೈವಾಡ ಶಂಕೆ

ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ ಅನುಮಾನದ ಮೇಲೆ ಬಲಪಂಥೀಯ ಸಂಘಟನೆಗಳ ಮೂವರು ಕಾರ್ಯಕರ್ತರನ್ನು ಎಟಿಎಸ್ ಬಂಧಿಸಿದೆ. ಗೌರಿ ಲಂಕೇಶ್, ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸಾರೆ, ಕಲಬುರ್ಗಿ ಅವರ ಹತ್ಯೆಯಲ್ಲಿ ಈ ಮೂವರ ಪಾತ್ರ ಇರುವ ಅನುಮಾನ ವ್ಯಕ್ತವಾಗಿದೆ

ಅಪರಾಧ ಕೃತ್ಯಕ್ಕೆ ಸಂಚು ರೂಪಿಸಿದ ಅನುಮಾನದ ಮೇಲೆ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳವು (ಎಟಿಎಸ್) ಬಲಪಂಥೀಯ ಸಂಘಟನೆಗಳ ಮೂವರು ಕಾರ್ಯಕರ್ತರನ್ನು ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ಬಂಧಿಸಿದೆ. ಎಟಿಎಸ್ ತನಿಖೆ ಮತ್ತಷ್ಟು ಚುರುಕುಗೊಂಡಿದ್ದು, ಬಂಧಿತ ಆರೋಪಿಗಳ ಮನೆಗಳಲ್ಲಿ ಅಪರಾಧ ಕೃತ್ಯಕ್ಕೆ ಬಳಸುವ ಶಸ್ತ್ರಾಸ್ತ್ರಗಳ ಪ್ರಮಾಣ ಬಗೆದಷ್ಟೂ ಹೆಚ್ಚುತ್ತಿದೆ.

ಗಮನಾರ್ಹ ಸಂಗತಿ ಎಂದರೆ, ಹಿರಿಯ ಪತ್ರಕರ್ತೆ ಗೌರಿ ಲಂಕೇಶ್, ವಿಚಾರವಾದಿ ನರೇಂದ್ರ ದಾಬೋಲ್ಕರ್, ಗೋವಿಂದ್ ಪನ್ಸಾರೆ, ಸಂಶೋಧಕ ಎಂ ಎಂ ಕಲಬುರ್ಗಿ ಅವರ ಹತ್ಯೆಯಲ್ಲಿ ಈ ಮೂವರ ಪಾತ್ರ ಇರುವ ಅನುಮಾನ ವ್ಯಕ್ತವಾಗಿದೆ. ಆಗಸ್ಟ್ ೧೧ರಂದು ಬಲಪಂಥೀಯ ಸಂಘಟನೆಗಳ ಗುಂಪಿನ ಮೇಲೆ ದಾಳಿ ನಡೆಸಿದ ಎಟಿಎಸ್, ನಲವತ್ತು ವರ್ಷ ವಯಸ್ಸಿನ ವೈಭವ್ ರಾವುತ್‌ನನ್ನು ಮುಂಬೈನ ನಾಲಾ ಸೋಪುರ್ ಪ್ರದೇಶದ ನಿವಾಸದಲ್ಲಿ ಬಂಧಿಸಿದೆ.

ರಾವುತ್ ಬಂಧನದ ವೇಳೆ ಆತನ ನಿವಾಸದಲ್ಲಿ ಅಪಾರ ಪ್ರಮಾಣದ ಭಾರಿ ಸ್ಫೋಟಕಗಳು, ಬಾಂಬ್ ತಯಾರಿಸಲು ಬಳಸುವ ಸಾಮಗ್ರಿ ಹಾಗೂ ಎಂಟು ಕಚ್ಚಾಬಾಂಬ್‌ಗಳು ಎಟಿಎಸ್‌ಗೆ ಸಿಕ್ಕಿದ್ದವು. ಈ ದಾಳಿ ಪುಣೆ ಮತ್ತು ಪಾಲ್ಘರ್‌ಗೂ ವಿಸ್ತರಿಸಿ, ಸುಧನ್ವ ಗೋಂಧಳೀಕರ್ (೩೯) ಹಾಗೂ ಶರದ್ ಕಾಸಾಳ್ಕರ್ (೨೫) ಬಂಧನವಾಗಿದೆ. ಬಂಧಿತರು ವಿವಿಧ ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಮೊದಲ ಬಂಧಿತ ಆರೋಪಿ ವೈಭವ್ ರಾವುತ್ ಮಹಾರಾಷ್ಟ್ರದ ಸನಾತನ ಸಂಸ್ಥೆಯ ಕಾರ್ಯಕರ್ತ ಎನ್ನಲಾಗಿದ್ದು, ಗೋವಂಶ ರಕ್ಷಾ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದಾನೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಬಂಧಿತ ಮೂವರು ಆರೋಪಿಗಳ ಸುತ್ತ ಎಟಿಎಸ್ ತನಿಖೆ ಚುರುಕುಗೊಂಡಿದ್ದು, ಬಂಧಿತರಿಗೆ ಸಂಬಂಧಿಸಿದ ಹಲವಾರು ಸ್ಥಳಗಳಲ್ಲಿ ತಪಾಸಣೆ ನಡೆಸಲಾಗಿದೆ. ತನಿಖೆ ವೇಳೆ ಅಪರಾಧಕ್ಕೆ ಬಳಸುವ ಶಸ್ತ್ರಾಸ್ತ್ರಗಳು ಒಂದೊಂದಾಗಿ ಪತ್ತೆಯಾಗುತ್ತಿದ್ದು, ಈವರೆಗೂ ಜೀವಂತ ಸ್ಫೋಟಕಗಳು, ಬಾಂಬ್ ತಯಾರಿಸುವ ಸಾಮಗ್ರಿ, ಕಚ್ಚಾ ಬಾಂಬ್, ಹತ್ತು ನಾಡ ಪಿಸ್ತೂಲ್, ಒಂದು ರಿವಾಲ್ವರ್, ಒಂದು ಏರ್ ಗನ್, ಆರು ವಾಹನ ನಂಬರ್ ಪ್ಲೇಟ್, ಬೈಕ್‌ಗಳು, ಮೊಬೈಲ್ ಪೋನ್‌ಗಳು, ಪೆನ್‌ ಡ್ರೈವ್‌ಗಳು, ಸಾಹಿತ್ಯ ದಾಖಲೆಗಳು ದೊರಕಿವೆ.

ಈ ಪ್ರಕರಣ ಕುರಿತು ಎಟಿಎಸ್ ಅಧಿಕಾರಿಯೊಬ್ಬರ ಹೇಳಿಕೆಯನ್ನು ‘ಇಂಡಿಯನ್ ಎಕ್ಸ್‌ಪ್ರೆಸ್’ ಉಲ್ಲೇಖಿಸಿದ್ದು, “ಭಾನುವಾರ ವಶಕ್ಕೆ ಪಡೆದಿರುವ ಹತ್ತು ಪಿಸ್ತೂಲ್‌ಗಳನ್ನು ಉತ್ತರ ಪ್ರದೇಶದಿಂದ ಸಂಗ್ರಹಿಸಿರುವ ಸಾಧ್ಯತೆ ಇದೆ,” ಎನ್ನಲಾಗಿದೆ. ಬಂಧಿತ ಆರೋಪಿ ಗೋವಿಂಧಳೀಕರ್‌ನನ್ನು ಶಿವಪ್ರತಿಷ್ಠಾನ ಹಿಂದೂಸ್ತಾನ್ ಸದಸ್ಯನೆಂದು ಶಂಕಿಸಲಾಗಿದ್ದು, ಭೀಮಾ ಕೋರೆಗಾಂವ್ ಹಿಂಸಾಚಾರದ ಪ್ರಕರಣದಲ್ಲಿ ಈತನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ಇಡೀ ಪ್ರಕರಣವನ್ನು ಮಲೆಗಾಂವ್-೨ ಎಂದು ವಿಶ್ಲೇಷಿಸಲಾಗುತ್ತಿದೆ. 2008ರ ಸೆಪ್ಟೆಂಬರ್‌ 8ರಂದು ಮಾಲೇಗಾಂವ್‌ನಲ್ಲಿ ಮೋಟಾರ್‌ ಸೈಕಲ್‌ನಲ್ಲಿ ಅಳವಡಿಸಿದ್ದ 2 ಬಾಂಬ್ ಸ್ಫೋಟಗೊಂಡು 7 ಮಂದಿ ಸಾವನ್ನಪ್ಪಿ, 100ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣದ ತನಿಖೆ ವೇಳೆ ಪ್ರಮುಖ ಆರೋಪಿ ಎಂದು ಕರ್ನಲ್ ಪುರೋಹಿತ್ ರನ್ನು ಬಂಧಿಸಲಾಗಿತ್ತು. ಕಳದೆ ವರ್ಷ ಸುಪ್ರೀಂ ಕೋರ್ಟ್ ಜಾಮೀನು ನೀಡಿದ ಬಳಿಕ ಪುರೋಹಿತ್ ಜೈಲಿನಿಂದ ಹೊರಬಂದಿದ್ದನ್ನು ಇಲ್ಲಿ ನೆನೆಯಬಹುದು.

ಸನಾತನ ಸಂಸ್ಥೆ ನಿಷೇಧಕ್ಕೆ ಹೆಚ್ಚಿದ ಆಗ್ರಹ

ಈ ಬೆಳವಣಿಗೆ ಬೆನ್ನಲ್ಲೇ ಮಹಾರಾಷ್ಟ್ರದ ಸನಾತನ ಸಂಸ್ಥೆಯನ್ನು ನಿಷೇಧಿಸಬೇಕೆಂಬ ಆಗ್ರಹಗಳು ಮತ್ತೆ ಕೇಳಿಬರುತ್ತಿವೆ. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಕ್ಕೆ ಈ ಸಂಘಟನೆಯನ್ನು ನಿಷೇಧಿಸಬೇಕೆಂದು ಎಟಿಎಸ್ ೨೦೧೫ರಲ್ಲಿಯೇ ಸೂಚಿಸಿತ್ತು. ಪಟ್ಟಭದ್ರ ಹಿಸಾಸಕ್ತಿಗಳ ಪ್ರಭಾವದಿಂದಾಗಿ ಎಟಿಎಸ್ ಸಲಹೆ ಮೂಲೆಗುಂಪಾಯಿತು ಎನ್ನಲಾಗಿದೆ.

ಇದನ್ನೂ ಓದಿ : ಪತ್ರಕರ್ತೆ ಗೌರಿ ಹತ್ಯೆ ಆರೋಪಿಗಳ ಹಿನ್ನೆಲೆ ಬೆರಳು ತೋರುತ್ತಿರುವುದು ಯಾರೆಡೆಗೆ?

ಮಹಾರಾಷ್ಟ್ರ ಸನಾತನ ಸಂಸ್ಥೆಯ ವಕೀಲ ಸಂಜೀವ್ ಪುನೆಲಿಕರ್, ಎಟಿಎಸ್ ಮಾಡಿರುವ ಬಂಧನಗಳ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, “ವೈಭವ್ ರಾವುತ್ ಸನಾತನ ಸಂಸ್ಥೆಯ ಸದಸ್ಯನಲ್ಲ. ಆದರೆ, ಸನಾತನ ಸಂಸ್ಥೆಯ ಸದಸ್ಯರಿಗೆ ಪರಿಚಿತನಾಗಿದ್ದಾನೆ. ಹಿಂದೂ ಸಂಘಟನೆಯ ಕಾರ್ಯುಕರ್ತನಾಗಿರುವ ರಾವುತ್‌ನನ್ನು ಗೋಮಾಂಸ ಕುರಿತ ಪ್ರಕರಣದಲ್ಲಿ ಗಡಿಪಾರು ಮಾಡಲಾಗಿತ್ತು,” ಎಂದು ತಿಳಿಸಿದ್ದಾರೆ.

ಇತ್ತ, ಕೆಲವು ವಾರಗಳ ಹಿಂದೆ ಗೋವಾದ ಲೇಖಕ ದಾಮೋದರ್ ಮೌಜೊ ಅವರ ಹತ್ಯೆಗೂ ಸಂಚು ರೂಪಿಸಲಾಗಿದೆ ಎಂಬ ಸಂಗತಿ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಗೋವಾದ ಬಲಪಂಥೀಯ ಸಂಘಟನೆ ಸನಾತನ ಸಂಸ್ಥೆ ನಿಷೇಧಕ್ಕೂ ಆಗ್ರಹ ಕೇಳಿಬಂತು. ಮೌಜೊ ಅವರಿಗೆ ಜೀವಬೆದರಿಕೆಯ ಅಪಾಯ ಅರಿತ ಗೋವಾ ಸರ್ಕಾರ ಪೊಲೀಸ್ ರಕ್ಷಣೆ ಒದಗಿಸಿದೆ. ತಮಗೆ ಎದುರಾಗಿರುವ ಜೀವಬೆದರಿಕೆ ಕುರಿತಾಗಿ ಪ್ರತಿಕ್ರಿಯಿಸಿರುವ ಅವರು, “ಸನಾತನ ಸಂಸ್ಥೆ ದೇಶಕ್ಕೆ ಕ್ಯಾನ್ಸರ್ ಇದ್ದಂತೆ. ಈ ರೋಗವನ್ನು ಹರಡಲು ಬಿಡಬಾರದು,” ಎಂದಿದ್ದರು. ಆದರೆ, ಗೋವಾ ಮೂಲದ ಬಲಪಂಥೀಯ ಸಂಘಟನೆಯಾದ ಸನಾತನ ಸಂಸ್ಥೆ ದೇಶಾದ್ಯಂತ ಪಸರಿಸಿದ್ದು, ಈವರೆಗೂ ಬಂದ ತನ್ನ ಮೇಲಿನ ಆರೋಪಗಳೆಲ್ಲವನ್ನು ತಳ್ಳಿಹಾಕಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More