ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಲೇಬೇಕಾದ ರಾಜ್ಯ, ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸುದ್ದಿಗಳತ್ತ ನೋಟ

ನನ್ನದು ಮದುವೆ ಆಗಿದೆ ಎಂದ ರಾಹುಲ್ ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿವಾಹ ವಿಚಾರ ಮತ್ತೆ ಚಾಲ್ತಿಗೆ ಬಂದಿದೆ. ಮಂಗಳವಾರ ಹೈದರಾಬಾದ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದಾಗ, ಪತ್ರಕರ್ತರೊಬ್ಬರು ನಿಮ್ಮ ಮದುವೆ ಕುರಿತು ತಿಳಿಸಿ ಎಂದು ಪ್ರಶ್ನಿಸಿದ್ದಾರೆ. ರಾಹುಲ್ ಗಾಂಧಿ ಇದಕ್ಕೆ ಉತ್ತರಿಸುತ್ತ, “ನನಗೆ ಈಗಾಗಲೇ ಮದುವೆಯಾಗಿದೆ- ಅದು ನನ್ನ ಕಾಂಗ್ರೆಸ್ ಪಕ್ಷದೊಂದಿಗೆ,” ಎಂದಿದ್ದಾರೆ. ಇದೇ ವೇಳೆ ಪ್ರಧಾನಿ ಮೋದಿ ಕುರಿತು ಮಾತನಾಡಿ, “ಬರುವ ಸಾರ್ವತ್ರಿಕ ಚುನಾವಣೆ ನಂತರ ಮೋದಿ ಪ್ರಧಾನಿಯಾಗುವುದಿಲ್ಲ. ಬಿಜೆಪಿ ೨೩೦ ಕ್ಷೇತ್ರಗಳನ್ನು ಗೆಲ್ಲುವುದು ಕಷ್ಟ,” ಎಂದು ತಿಳಿಸಿದ್ದಾರೆ.

ರಾಘವೇಶ್ವರ ಆರೋಪ ಮುಕ್ತ ಆದೇಶದಲ್ಲಿ ತೊಡಕು ಬಿಡಿಸಿಡಬಲ್ಲೆ: ಪೊನ್ನಣ್ಣ

ರಾಘವೇಶ್ವರ ಶ್ರೀ ಅವರನ್ನು ಅತ್ಯಾಚಾರ ಆರೋಪದಿಂದ ಕೈಬಿಟ್ಟಿರುವ ಆದೇಶದಲ್ಲಿನ ತೊಡಕುಗಳನ್ನು ವಿವರವಾಗಿ ಬಿಡಿಸಿಡಬಲ್ಲೆ ಎಂದು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ ಎಸ್‌ ಪೊನ್ನಣ್ಣ ಅವರು ಹೈಕೋರ್ಟ್‌ನ ನ್ಯಾ.ಆರ್ ಬಿ ಬೂದಿಹಾಳ್‌ ಅವರಿದ್ದ ಏಕಸದಸ್ಯ ಪೀಠಕ್ಕೆ ತಿಳಿಸಿದ್ದಾರೆ. ಅತ್ಯಾಚಾರ ಆರೋಪದ ರಾಘವೇಶ್ವರ ಶ್ರೀಗಳನ್ನು ಮುಕ್ತಗೊಳಿಸಿರುವ ಸೆಷನ್ಸ್‌ ಕೋರ್ಟ್‌ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಸ್ವಾಮೀಜಿ ಪರ ವಕೀಲ ಪಿ ಎನ್‌ ಮನಮೋಹನ್‌ ಸ್ವಾಮಿ ಅವರು, “ಶ್ರೀಗಳ ಪರ ವಾದ ಮಂಡಿಸಲು ಹಿರಿಯ ವಕೀಲ ರವಿ ನಾಯಕ್‌ ಅವರನ್ನು ನೇಮಕ ಮಾಡಿಕೊಳ್ಳುತ್ತಿದ್ದು, ತಮಗೆ ಕಾಲಾವಕಾಶ ನೀಡಬೇಕು,” ಎಂದು ಮನವಿ ಮಾಡಿದರು. ಇದಕ್ಕೆ ಅವಕಾಶ ನೀಡಬಾರದು ಎಂದು ಸಂತ್ರಸ್ಥೆಯ ಪರ ವಕೀಲ ಎಂ ಟಿ ನಾಣಯ್ಯ ಆಕ್ಷೇಪಿಸಿದರು. ಇದಕ್ಕೆ ಪೊನ್ನಣ್ಣ ದನಿಗೂಡಿಸಿದರು. ವಿಚಾರಣೆಯನ್ನು ಆಗಸ್ಟ್‌ ೧೭ಕ್ಕೆ ಮುಂದೂಡಲಾಗಿದೆ.

ಕೇರಳದಲ್ಲಿ ಮಳೆಯ ಅಬ್ಬರ; ಸರ್ಕಾರದ ವತಿಯಿಂದ ನಡೆಯುವ ಓಣಂ ರದ್ದು

ಸುರಿಯುತ್ತಿರುವ ಭಾರಿ ಮಳೆಗೆ ಕೇರಳದ ಹಲವೆಡೆ ಪ್ರವಾಹ ಪರಿಸ್ಥಿತಿ ಉಂಟಾಗಿ ಭೂಕುಸಿತ, ಆಸ್ತಿ ಹಾನಿ, ಜೀವಹಾನಿ ಸಂಭವಿಸಿದ್ದು, ಈ ಬಾರಿ ಸರ್ಕಾರದ ವತಿಯಿಂದ ನಡೆಯುವ ಓಣಂ ಉತ್ಸವವನ್ನು ರದ್ದುಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ. ಓಣಂಗೆಂದು ಮೀಸಲಿಟ್ಟಿರುವ ಹಣವನ್ನು, ಪರಿಹಾರ ಕಾರ್ಯಕ್ಕಾಗಿ ಬಳಸಿಕೊಳ್ಳಲು ಸರ್ಕಾರ ನಿರ್ಧರಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಇನ್ನೊಂದೆಡೆ, ರಾಜ್ಯಪಾಲ ಪಿ ಸದಾಶಿವಂ ಅವರು ಆ.15ರ ಸ್ವಾತಂತ್ರ್ಯ ದಿನದ ಪ್ರಯುಕ್ತ ಏರ್ಪಡಿಸಲಿದ್ದ ಸತ್ಕಾರ ಕೂಟವನ್ನು ಈಗಾಗಲೇ ರದ್ದುಗೊಳಿಸಿದ್ದಾರೆ. ನೆರೆಪೀಡಿತ ಕೇರಳಕ್ಕೆ ನೆರವಿನ ಮಹಾಪೂರವೇ ಹರಿದುಬರುತ್ತಿದ್ದು, ನಟ ಮೋಹನ್ ಲಾಲ್ ಇಂದು 25 ಲಕ್ಷ ರೂಪಾಯಿ ನೆರವು ನೀಡಿದ್ದಾರೆ.

ಜುಲೈ ತಿಂಗಳಲ್ಲಿ ಶೇ.5.09ಕ್ಕೆ ತಗ್ಗಿದ ಸಗಟುದರ ಹಣದುಬ್ಬರ

ಆಹಾರ ಪದಾರ್ಥಗಳ ಬೆಲೆ ಕುಸಿದ ಹಿನ್ನೆಲೆಯಲ್ಲಿ ಜುಲೈ ತಿಂಗಳ ಸಗಟು ದರ ಸೂಚ್ಯಂಕ (ಡಬ್ಲ್ಯೂಪಿಐ) ಹಣದುಬ್ಬರ ಶೇ.5.09ಕ್ಕೆ ತಗ್ಗಿದೆ. ಜೂನ್ ತಿಂಗಳಲ್ಲಿ ಶೇ.5.77ಕ್ಕೆ ಜಿಗಿದು ನಾಲ್ಕು ವರ್ಷಗಳಲ್ಲೇ ಗರಿಷ್ಠ ಮಟ್ಟಕ್ಕೆ ಏರಿತ್ತು. ಕಳೆದ ವರ್ಷ ಇದೇ ಅವಧಿಯಲ್ಲಿ ಶೇ.1.88ರಷ್ಟಿತ್ತು. 2018 ಏಪ್ರಿಲ್- ಜುಲೈ ಅವಧಿಯಲ್ಲಿ ಸಗಟು ದರ ಹಣದುಬ್ಬರವು ಶೇ.4.8ರಷ್ಟಿದೆ. ಹಿಂದಿನ ವರ್ಷ ಈ ಅವಧಿಯಲ್ಲಿ ಶೇ.2.2ರಷ್ಟಿತ್ತು. ಮೇ ತಿಂಗಳ ಹಣದುಬ್ಬರವನ್ನು ಶೇ.4.4ರಿಂದ ಶೇ.4.8ಕ್ಕೆ ಮೇಲ್ಮುಖವಾಗಿ ಪರಿಷ್ಕರಿಸಲಾಗಿತ್ತು. ಜುಲೈ ತಿಂಗಳಲ್ಲಿ ಹಣದುಬ್ಬರ ತಗ್ಗಲು ಪ್ರಾಥಮಿಕ ವಲಯದ ಸರಕುಗಳ ದರ ಇಳಿಕೆಯೇ ಕಾರಣ. ಜೂನ್ ತಿಂಗಳಲ್ಲಿ ಶೇ.5.3ರಷ್ಟಿದ್ದ ದರವು ಜುಲೈನಲ್ಲಿ ಶೇ.1.7ಕ್ಕೆ ತಗ್ಗಿದೆ. ಆದರೆ, ಉತ್ಪಾದಕ ವಸ್ತುಗಳ ಹಣದುಬ್ಬರ ಶೇ.4.3ರಷ್ಟು, ಇಂಧನ ಪದಾರ್ಧಗಳ ಹಣದುಬ್ಬರ ಶೇ.18.1ರಷ್ಟು ಏರಿದೆ.

ಮುಂದಿನ ವರ್ಷಗಳಲ್ಲಿ ಪಾಕಿಸ್ತಾನದೊಂದಿಗೆ ಸಂಬಂಧ ವೃದ್ಧಿ: ಅಮೆರಿಕ

ಮುಂಬರುವ ವರ್ಷಗಳಲ್ಲಿ ಪಾಕಿಸ್ತಾನದೊಂದಿಗೆ ಅಮೆರಿಕ ಉತ್ತಮ ಸಂಬಂಧ ಬಲಗೊಳಿಸಲು ಬಯಸುತ್ತದೆ. ದಕ್ಷಿಣ ಏಷ್ಯಾದಲ್ಲಿ ಭದ್ರತೆ, ರಾಜಕೀಯ ಸ್ಥಿರತೆ ಮತ್ತು ಸಮೃದ್ಧಿಯ ಹಂಚಿಕೆ ಗುರಿಗಳನ್ನು ಹೆಚ್ಚಿಸಲು ಪಾಕಿಸ್ತಾನ ಸರ್ಕಾರದೊಂದಿಗೆ ಕೆಲಸ ಮಾಡುತ್ತದೆ ಎಂದು ಅಮೆರಿಕ ರಾಜ್ಯ ಕಾರ್ಯದರ್ಶಿ ಮೈಕೆಲ್ ಪೊಂಪಿಯೊ ಮಂಗಳವಾರ ಹೇಳಿದ್ದಾರೆ. ಪಾಕಿಸ್ತಾನದ ೭೨ ನೇ ಸ್ವಾತಂತ್ರ್ಯದಿನದ ಹಿನ್ನೆಲೆಯಲ್ಲಿ ಮಾತನಾಡಿದ ಪಾಂಪಿಯೋ ಪಾಕಿಸ್ತಾನದ ಪ್ರಧಾನಿಯಾಗುತ್ತಿರುವ ಇಮ್ರಾನ್ ಖಾನ್ ಅವರು ಪಾಕಿಸ್ತಾನ ಹಾಗೂ ಅಮೆರಿಕ ದೇಶಗಳು ನಂಬಿಕೆಯ ಮೇಲೆ ಕೆಲಸ ನಿರ್ವಹಿಸಲುಎಂಬ ಭರವಸೆ ಇದೆ ಎಂದಿದ್ದಾರೆ.

17 ವರ್ಷಗಳ ನಂತರ ತೆರೆ ಮೇಲೆ ಬಚ್ಚನ್‌-ಕಾಜೋಲ್‌

ಕಾಜೋಲ್‌ ಅಭಿನಯದ ‘ಹೆಲಿಕಾಪ್ಟರ್‌ ಈಲಾ’ ಹಿಂದಿ ಚಿತ್ರದಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 2001ರ ‘ಕಭಿ ಖುಷಿ ಖಭಿ ಘಮ್‌’ ಹಿಂದಿ ಚಿತ್ರದಲ್ಲಿ ಇಬ್ಬರೂ ನಟಿಸಿದ್ದರು. ಇದೀಗ ಹದಿನೇಳು ವರ್ಷಗಳ ನಂತರ ‘ಹೆಲಿಕಾಪ್ಟರ್ ಈಲಾ’ ಚಿತ್ರದಲ್ಲಿ ಬಚ್ಚನ್ ಜೊತೆ ಕಾಜೋಲ್‌ ತೆರೆ ಹಂಚಿಕೊಳ್ಳಲಿದ್ದಾರೆ. ಗುಜರಾತಿ ನಾಟಕವೊಂದನ್ನು ಆಧರಿಸಿ ತಯಾರಾಗುತ್ತಿರುವ ಈ ಚಿತ್ರವನ್ನು ಪ್ರದೀಪ್ ಸರ್ಕಾರ್ ನಿರ್ದೇಶಿಸುತ್ತಿದ್ದಾರೆ.

ತೂತುಕುಡಿ ಸ್ಟರ್ಲೈಟ್ ಗೋಲಿಬಾರ್; ತನಿಖೆಗೆ ಮದ್ರಾಸ್ ಹೈಕೋರ್ಟ್ ಆದೇಶ

ತಮಿಳುನಾಡಿನ ತೂತುಕುಡಿಯಲ್ಲಿ ಮೇ 22ರಂದು ನಡೆದ ಸ್ಟರ್ಲೈಟ್ ವಿರೋಧಿ ಪ್ರತಿಭಟನೆಯಲ್ಲಿ 13 ಜನರ ಸಾವಿಗೆ ಕಾರಣವಾಗಿದ್ದ ಪೊಲೀಸ್ ಗೋಲಿಬಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಎ ತನಿಖೆಗೆ ಮದ್ರಾಸ್ ಹೈಕೋರ್ಟ್ ಮಂಗಳವಾರ ಆದೇಶಿಸಿದೆ. ನಾಲ್ಕು ತಿಂಗಳ ಒಳಗೆ ತನಿಖೆ ಪೂರ್ಣಗೊಳಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಪೊಲೀಸರು ಗುಂಡು ಹಾರಿಸಿರುವುದು ಹಾಗೂ ರಾಷ್ಟ್ರೀಯ ಭದ್ರತಾ ಕಾಯ್ದೆ ಅಡಿಯಲ್ಲಿ ಪ್ರತಿಭಟನಕಾರರನ್ನು ವಶದಲ್ಲಿ ಇರಿಸಿಕೊಂಡಿರುವುದರ ವಿರುದ್ಧ ಸಲ್ಲಿಸಲಾಗಿದ್ದ ಮನವಿಗಳನ್ನು ಪರಿಶೀಲಿಸಿರುವ ನ್ಯಾಯಮೂರ್ತಿ ಸಿ ಟಿ ಸೆಲ್ವಂ ಹಾಗೂ ಎಂ ಎಂ ಬಶೀರ್ ಅವರನ್ನು ಒಳಗೊಂಡ ವಿಭಾಗೀಯ ಪೀಠ ಈ ಆದೇಶ ಜಾರಿ ಮಾಡಿದೆ.

ಇಂಗ್ಲೆಂಡ್ ವಿರುದ್ಧದ ಮೂರನೇ ಟೆಸ್ಟ್‌ಗೆ ಕೊಹ್ಲಿ ಅಲಭ್ಯ?

ಪ್ರಸ್ತುತ ನಡೆಯುತ್ತಿರುವ ಆತಿಥೇಯ ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ೦-೨ ಹಿನ್ನಡೆ ಅನುಭವಿಸಿರುವ ಭಾರತ ತಂಡ ಮೂರನೇ ಪಂದ್ಯಕ್ಕೆ ಅಣಿಯಾಗಿದೆ. ಇದೇ ಶನಿವಾರದಿಂದ (ಆ.೧೮) ನಾಟಿಂಗ್‌ಹ್ಯಾಮ್‌ನಲ್ಲಿ ನಡೆಯಲಿರುವ ಮೂರನೇ ಪಂದ್ಯಕ್ಕೆ ಕೊಹ್ಲಿ ಅಲಭ್ಯವಾಗುವ ದಿಗಿಲು ಮೂಡಿದೆ. ದೈಹಿಕ ಕ್ಷಮತೆಯಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಹಾಗೂ ಆರ್ ಅಶ್ವಿನ್ ಪೂರ್ಣ ಪ್ರಮಾಣದಲ್ಲಿ ಪಾಸಾಗಿದ್ದು, ಕೊಹ್ಲಿ ಇನ್ನೂ ದೈಹಿಕವಾಗಿ ಕ್ಷಮತೆ ಸಾಧಿಸಿಲ್ಲ. ಪಂದ್ಯ ಶುರುವಾಗಲು ಇನ್ನೂ ಮೂರು ದಿನಗಳು ಬಾಕಿ ಇದ್ದು, ಅಷ್ಟರಲ್ಲಿ ಕೊಹ್ಲಿ ದೈಹಿಕವಾಗಿ ಫಿಟ್ ಆಗಬಹುದು ಎಂಬ ನಿರೀಕ್ಷೆ ಹೊಂದಲಾಗಿದೆ.

ಸ್ಟ್ರೀಟ್ ಫೈಟ್ ಪ್ರಕರಣದಲ್ಲಿ ಬೆನ್ ಸ್ಟೋಕ್ಸ್‌ ನಿರಾಳ?

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬ್ರಿಸ್ಟಲ್‌ನಲ್ಲಿ ನಡೆದ ನೈಟ್ ಕ್ಲಬ್ ಹಗರಣದ ಉರುಳಿನಲ್ಲಿ ಸಿಲುಕಿದ್ದ ಇಂಗ್ಲೆಂಡ್‌ನ ಆಲ್ರೌಂಡರ್ ಬೆನ್ ಸ್ಟೋಕ್ಸ್ ಸದ್ಯ ನಿರಾಳಗೊಂಡಿದ್ದಾರೆ. ಪ್ರಕರಣದ ವಿಚಾರಣೆ ಬ್ರಿಸ್ಟಲ್‌ನ ನ್ಯಾಯಾಲಯದಲ್ಲಿ ನಡೆಯುತ್ತಿದ್ದು, ಇಂದು ನಡೆದ ವಿಚಾರಣೆಯಲ್ಲಿ ೨೭ರ ಹರೆಯದ ಸ್ಟೋಕ್ಸ್ ನೀಡಿದ ಮೂರು ತಾಸುಗಳ ವಿವರಣೆಯಿಂದ ನ್ಯಾಯಾಧೀಶರು ಅವರಲ್ಲಿ ಯಾವುದೇ ದೋಷ ಕಂಡಿಲ್ಲ ಎಂದು ಹೇಳಲಾಗಿದೆ. ವೆಸ್ಟ್ಇಂಡೀಸ್ ಮತ್ತು ಇಂಗ್ಲೆಂಡ್ ನಡುವಣದ ಪಂದ್ಯದ ನಂತರ ಸ್ಟೋಕ್ಸ್ ಬ್ರಿಸ್ಟಲ್ ಕ್ಲಬ್‌ಗೆ ತೆರಳಿದ್ದ ವೇಳೆ ಗಲಭೆಯಾಗಿತ್ತು. ತಲೆಗೆ ಬಿದ್ದ ಪೆಟ್ಟಿನಿಂದ ಅಂದು ರಾತ್ರಿ ತನ್ನ ನೆನಪಿನ ಶಕ್ತಿ ಅಸ್ಪಷ್ಟವಾಗಿತ್ತು ಎಂದು ಬೆನ್ ಸ್ಟೋಕ್ಸ್ ನ್ಯಾಯಾಲಯಕ್ಕೆ ಅರುಹಿದ್ದಾರೆ.

ರಜನೀಕಾಂತ್‌ ಅವರಿಗೆ ರಾಜಕೀಯ ಪರಿಪಕ್ವತೆ ಇಲ್ಲವೆಂದ ಎಐಎಡಿಎಂಕೆ

ನಟ ರಜನೀಕಾಂತ್‌ ಅವರಿಗೆ ರಾಜಕೀಯ ಪರಿಪಕ್ವತೆ ಇಲ್ಲವೆಂದು ಎಐಎಡಿಎಂಕೆ ಹೇಳಿದೆ. ಡಿಎಂಕೆ ನಾಯಕ ಕರುಣಾನಿಧಿ ಅವರ ಅಂತ್ಯಕ್ರಿಯೆ ಸಂದರ್ಭದಲ್ಲಿ ತಮಿಳುನಾಡು ಸಿಎಂ ಪಳನಿಸ್ವಾಮಿ ಅವರ ಗೈರುಹಾಜರಿಯ ಕುರಿತು ಟೀಕಿಸಿದ್ದ ರಜನೀಕಾಂತ್‌ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಎಐಎಡಿಎಂಕೆ ನಾಯಕ ಡಿ ಜಯಕುಮಾರ್, “ರಾಜ್ಯವು ಕರುಣಾನಿಧಿ ಅವರ ಸಾವಿನ ಶೋಕಾಚರಣೆಯಲ್ಲಿದೆ. ಆದರೆ, ರಜನೀಕಾಂತ್‌ ಅವರು ಸಾವಿನಲ್ಲೂ ರಾಜಕಾರಣ ಮಾಡುತ್ತಿದ್ದಾರೆ. ಅವರಿಗೆ ರಾಜಕೀಯ ಪರಿಪಕ್ವತೆ ಇಲ್ಲ,” ಎಂದು ಎಐಎಡಿಎಂಕೆ ನಾಯಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More