ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ 5 ಪ್ರಮುಖ ಸುದ್ದಿಗಳು

ಇಂದು ಗಮನಿಸಬೇಕಾದ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಮುಖ ಸುದ್ದಿಗಳು

ಕಸ್ತೂರಿ ರಂಗನ್ ವರದಿ ಜಾರಿ ವಿಚಾರ: ವಸ್ತುನಿಷ್ಠ ವರದಿಗೆ ಆಗ್ರಹಿಸಿ ಸಭೆ

ಅರಣ್ಯ ಭಾಗದಲ್ಲಿರುವ ಜನವಸತಿ ಪ್ರದೇಶವನ್ನು ಹೊರಗಿಟ್ಟು ಉಳಿದ ಪ್ರದೇಶವನ್ನು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಸೇರಿಸುವ ವಿಚಾರದಲ್ಲಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ವಸ್ತುನಿಷ್ಠ ವರದಿ ಸಲ್ಲಿಸುವಂತೆ ಆಗ್ರಹಿಸುವ ಸಲುವಾಗಿ ಶುಕ್ರವಾರ ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ಪ್ರಮುಖರ ಸಭೆ ಕರೆಯಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 44 ಗ್ರಾಮಗಳು ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿದ್ದು. ಅದು ಜಾರಿಯಾದರೆ ಈ ಎಲ್ಲ ಗ್ರಾಮಗಳು ಅಸ್ತಿತ್ವ ಕಳೆದುಕೊಳ್ಳಲಿವೆ. 2013ರ ಏಪ್ರಿಲ್ 15ರಂದು ಕಸ್ತೂರಿ ರಂಗನ್ ತಂಡ ಕೇಂದ್ರ ಪರಿಸರ ಮತ್ತು ಅರಣ್ಯ ಮಂತ್ರಾಲಯಕ್ಕೆ ವರದಿ ಸಲ್ಲಿಸಿತ್ತು.

ಸಿಎಂ ಎಚ್‌ಡಿಕೆ ದೆಹಲಿಗೆ ಪ್ರಯಾಣ

ಅಟಲ್ ಬಿಹಾರಿ ವಾಜಪೇಯಿಯವರ ಅಂತ್ಯಸಂಸ್ಕಾರ ಯಮುನಾ ನದಿ ತೀರದಲ್ಲಿರುವ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ಸಂಜೆ ೪ ಗಂಟೆಗೆ ನಡೆಯಲಿದೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಶುಕ್ರವಾರ ದೆಹಲಿಗೆ ಪ್ರಯಾಣಿಸಲಿದ್ದು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಪಾರ್ಥೀವ ಶರೀರದ ಅಂತಿಮ‌ ದರ್ಶನ ಪಡೆಯಲಿದ್ದಾರೆ. ಸಂಜೆ ವೇಳೆಗೆ ಅವರು ಬೆಂಗಳೂರಿಗೆ ವಾಪಸಾಗಲಿದ್ದಾರೆ.

ಪಾಕಿಸ್ತಾನದ ಪ್ರಧಾನಿಯಾಗಿ ಇಮ್ರಾನ್ ಖಾನ್ ಆಯ್ಕೆ ಇಂದು

ಪಾಕಿಸ್ತಾನದ ಪ್ರಧಾನಿಯಾಗಿ ತೆಹ್ರಿಕ್-ಎ-ಇನ್ಸಾಫ್ ಪಕ್ಷದ ಇಮ್ರಾನ್ ಖಾನ್ ಅವರನ್ನು ಸಂಸತ್ತಿಗೆ ಹೊಸದಾಗಿ ಆಯ್ಕೆಯಾಗಿರುವ ಚುನಾಯಿತ ಸದಸ್ಯರು ಆಯ್ಕೆ ಮಾಡಲಿದ್ದಾರೆ. ಶುಕ್ರವಾರ ಪ್ರಧಾನಿ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಶನಿವಾರ (ಆ.೧೮) ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿಂದು ಕಡೇ ಪಂದ್ಯ

ಕರ್ನಾಟಕ ಪ್ರೀಮಿಯರ್ ಲೀಗ್ (ಕೆಪಿಎಲ್) ಪಂದ್ಯಾವಳಿಯ ಬೆಂಗಳೂರು ಚರಣದ ಮೂರನೇ ಹಾಗೂ ಕಡೇ ಪಂದ್ಯ ಇಂದು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್ ಅನ್ನು ೬೭ ರನ್‌ಗಳಿಂದ ಮಣಿಸಿದ ರಾಬಿನ್ ಉತ್ತಪ್ಪ ಸಾರಥ್ಯದ ಬೆಂಗಳೂರು ಬ್ಲಾಸ್ಟರ್ಸ್ ಇದೀಗ ಬಳ್ಳಾರಿ ಟಸ್ಕರ್ಸ್ ವಿರುದ್ಧ ಸೆಣಸಲು ಸಜ್ಜಾಗಿದೆ. ಮೊದಲ ಪಂದ್ಯದಲ್ಲಿ ಸ್ಫೋಟಕ ಆಟದೊಂದಿಗೆ ತಂಡಕ್ಕೆ ಅಮೋಘ ಗೆಲುವು ದೊರಕಿಸಿಕೊಟ್ಟಿದ್ದ ಉತ್ತಪ್ಪ, ಪ್ರಚಂಡ ಫಾರ್ಮ್‌ನಲ್ಲಿದ್ದು ಟಸ್ಕರ್ಸ್ ಅವರನ್ನು ಸಾಧ್ಯವಾದಷ್ಟು ಬೇಗನೆ ಕಟ್ಟಿಹಾಕುವ ಗುರಿ ಹೊತ್ತಿದೆ. ಪಂದ್ಯ ಸಂಜೆ ೬.೩೦ಕ್ಕೆ ಶುರುವಾಗಲಿದ್ದು, ಸ್ಟಾರ್ ಸ್ಪೋರ್ಟ್ಸ್ ೨ರಲ್ಲಿ ನೇರಪ್ರಸಾರವಿದೆ.

ಫೆಡರರ್, ಪೊಟ್ರೊ ಹಾಗೂ ಹ್ಯಾಲೆಪ್ ಇಂದು ಕಣಕ್ಕೆ

೨೦ ಗ್ರಾಂಡ್‌ಸ್ಲಾಮ್ ಪ್ರಶಸ್ತಿಗಳ ಒಡೆಯ ರೋಜರ್ ಫೆಡರರ್ ಹಾಗೂ ಫ್ರೆಂಚ್ ಓಪನ್ ಚಾಂಪಿಯನ್ ಸಿಮೋನಾ ಹ್ಯಾಲೆಪ್ ಇಂದು ಕಣಕ್ಕಿಳಿಯುತ್ತಿದ್ದಾರೆ. ಸಿನ್ಸಿನ್ನಾಟಿ ಓಪನ್ ಟೆನಿಸ್ ಪಂದ್ಯಾವಳಿಯ ಪುರುಷರ ಸಿಂಗಲ್ಸ್ ವಿಭಾಗದ ಪ್ರೀಕ್ವಾರ್ಟರ್‌ಫೈನಲ್ ಹಣಾಹಣಿಯಲ್ಲಿ ಫೆಡರರ್ ಅರ್ಜೆಂಟೀನಾದ ಲಿಯೊನಾರ್ಡೊ ಮೆಯೆರ್ ವಿರುದ್ಧ ಸೆಣಸಲಿದ್ದರೆ, ಮತ್ತೊಂದು ಪಂದ್ಯದಲ್ಲಿ ಇದೇ ಅರ್ಜೆಂಟೀನಾದ ಡೆಲ್ ಪೊಟ್ರೊ, ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ವಿರುದ್ಧ ಕಾದಾಡಲಿದ್ದಾರೆ. ಪುರುಷರ ವಿಭಾಗದ ಪಂದ್ಯ ಬೆಳಗ್ಗೆ ೯.೩೦ರಿಂದ ಶುರುವಾಗುವ ಸಾಧ್ಯತೆ ಇದೆ. ಇನ್ನು, ವನಿತೆಯರ ವಿಭಾಗದಲ್ಲಿ ಹ್ಯಾಲೆಪ್ ರಾತ್ರಿ ೮.೩೦ಕ್ಕೆ ಆರಂಭವಾಗಲಿರುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ ಆಶ್ಲೆ ಬಾರ್ಟಿ ವಿರುದ್ಧ ಕಾದಾಡಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More