ವಿಡಿಯೋ ಸ್ಟೋರಿ | ಮಳೆಗೆ ತತ್ತರಿಸಿದ ಹಾಸನ, ರಸ್ತೆ ಸಂಪರ್ಕ ಕಡಿತ, ಅಧಿಕಾರಿಗಳ ಸಾಹಸ

ಒಂದು ವಾರದಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮಲೆನಾಡಿಗೆ ಹೊಂದಿಕೊಂಡಂತಿರುವ ಜಿಲ್ಲೆಯ ಪ್ರದೇಶಗಳಲ್ಲಿ ಅಪಾರ ಹಾನಿ ಉಂಟಾಗಿದೆ. ಸಕಲೇಶಪುರ ತಾಲೂಕಿನ ಯಡಕುಮರಿ ರೈಲು ನಿಲ್ದಾಣದಲ್ಲಿ ಅಪಾಯಕ್ಕೆ ಸಿಲುಕಿದ್ದ 16 ಮಂದಿ ರೈಲ್ವೆ ಸಿಬ್ದಂದಿಯನ್ನು ರಕ್ಷಣೆ ಮಾಡಲಾಗಿದೆ

ಕಳೆದ ಒಂದು ವಾರದಿಂದ ಹಾಸನ ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲೆನಾಡಿಗೆ ಹೊಂದಿಕೊಂಡಂತಿರುವ ಪ್ರದೇಶಗಳಲ್ಲಿ ಅಪಾರ ಹಾನಿಯುಂಟಾಗಿದೆ. ಒಂದೆಡೆ ರಸ್ತೆ ಮೇಲೆ ಭೂ ಕುಸಿತವುಂಟಾಗಿ ವಾಹನಗಳ ಸಂಚಾರ ಬಂದ್ ಆಗಿದ್ದರೆ, ಮತ್ತೊಂಡೆದೆ ಕಾವೇರಿ ನದಿ ಪ್ರವಾಹದಿಂದ ನಿರಾಶ್ರಿತರಾಗಿರುವವರಿಗೆ ತೆರೆದಿರುವ ತಾತ್ಕಾಲಿಕ ವಸತಿ ಕೇಂದ್ರಗಳೂ ಜಲಾವೃತವಾಗಿ ಪರಿಹಾರ ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತ ಹರಸಾಹಸ ಪಡುತ್ತಿದೆ.

ಸಕಲೇಶಪುರ ತಾಲೂಕಿನ ಯಡಕುಮರಿ ರೈಲು ನಿಲ್ದಾಣದಲ್ಲಿ ಅಪಾಯಕ್ಕೆ ಸಿಲುಕಿದ್ದ 16 ಮಂದಿ ರೈಲ್ವೆ ಸಿಬ್ದಂದಿಯನ್ನು ರಕ್ಷಣೆ ಮಾಡಲಾಗಿದೆ. ಇನ್ನೊಂದೆಡೆ, ಮೂರು ದಿನಗಳ ಹಿಂದೆ ಶಿರಾಡಿ ಘಾಟ್ ರಸ್ತೆಯಲ್ಲಿ ಪಲ್ಟಿಯಾಗಿದ್ದ ಟ್ಯಾಂಕರ್ ಚಾಲಕನ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ. ಅರಕಲಗೂಡು ತಾಲೂಕಿನ ರಾಮನಾಥಪುರದಲ್ಲಿ ನೆರೆ ಹಾವಳಿ ಹೆಚ್ಚಾಗಿದ್ದು, 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವುದರಿಂದ ಮನೆಯಲ್ಲಿದ್ದ ಮನೆಯಲ್ಲಿದ್ದ ವಸ್ತುಗಳೆಲ್ಲ ನೀರಿನಲ್ಲಿ ಮುಳುಗಿಹೋಗಿವೆ.

ಮಳೆಯ ಅಬ್ಬರಕ್ಕೆ ಹಾಸನ ಜಿಲ್ಲೆಯ ಜನರು ಅಕ್ಷರಶಃ ತತ್ತರಿಸಿದ್ದಾರೆ. ಕೆಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ನೀರಿನಲ್ಲಿ ಮುಳುಗಿದ್ದರೆ, ಬೃಹತ್ ಮರಗಳು, ವಿದ್ಯುತ್ ಕಂಬಗಳು ಧರೆಗುರುಳಿ ಕಳೆದ ನಾಲ್ಕೈದು ದಿನಗಳಿಂದ ವಿದ್ಯುತ್ ಸಂಪರ್ಕ ಇಲ್ಲದೆ ಕೆಲ ಗ್ರಾಮಗಳು ಅಕ್ಷರಶಃ ಕತ್ತಲಲ್ಲಿ ಮುಳುಗಿವೆ. ವಿದ್ಯುತ್ ಇಲ್ಲದ ಕಾರಣ ಮೊಬೈಲ್ ಚಾರ್ಜಿಂಗ್ ಸಾಧ್ಯವಿಲ್ಲದೆ, ಹೊರಜಗತ್ತಿನೊಂದಿಗಿನ ಸಂಪರ್ಕ ಕಡಿತಗೊಂಡಿದೆ.

ಮಲೆನಾಡು ಭಾಗವಾದ ಸಕಲೇಶಪುರ-ಆಲೂರು-ಬೇಲೂರು ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಸಂಪೂರ್ಣ ಅಸ್ಯವ್ಯಸ್ತಗೊಂಡಿದೆ. ಶಿರಾಡಿ ಘಾಟ್ ರಸ್ತೆಯಲ್ಲಿ ಪದೇಪದೇ ಭೂಕುಸಿತವಾಗುತ್ತಿದ್ದು  ಮಣ್ಣು ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿಯಾಗುತ್ತಿದೆ. ಇದೇ ರಸ್ತೆಯಲ್ಲಿ ಮೂರು ದಿನಗಳ ಹಿಂದೆ ಗುಡ್ಡ ಕುಸಿತದಿಂದ ಟ್ಯಾಂಕರ್‌ವೊಂದು ಪಲ್ಟಿಯಾಗಿದ್ದು ಮಳೆಯ ನಡುವೆಯೂ ತೀವ್ರ ಶೋಧಕಾರ್ಯ ನಡೆಸಿ ಎರಡು ದಿನಗಳ ನಂತರ ಕ್ಲೀನರ್ ಶವವನ್ನು ಹೊರತೆಗೆಯಲಾಗಿತ್ತು. ಆದರೆ, ಇದುವರೆವಿಗೂ ಟ್ಯಾಂಕರ್ ಚಾಲಕನ ಪತ್ತೆಯಾಗಿಲ್ಲ. ಚಾಲಕ ಸಂತೋಷ್ ಪತ್ನಿ ಮತ್ತು ಸಂಬಂಧಿಕರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ಡಿಸಿ ರೋಹಿಣಿ ಸಿಂಧೂರಿ ಅವರ ಕಾಲಿಗೆ ಬಿದ್ದು, ಆತನನ್ನು ಹುಡುಕಿಕೊಡುವಂತೆ ಅಂಗಲಾಚಿ ಬೇಡಿಕೊಂಡ ಘಟನೆ ನಡೆದಿದೆ. ಶೋಧ ಕಾರ್ಯಕ್ಕೆ ಮಳೆ ಅಡ್ಡಿಯಾಗುತ್ತಿದ್ದು, ಮತ್ತೊಂದು ಕ್ರೇನ್ ಬಳಸಿ ಅತಿ ಶೀಘ್ರವಾಗಿ ಚಾಲಕನನ್ನು ಪತ್ತೆ ಮಾಡಲಾಗುವುದು ಎಂದು ಡಿಸಿ ರೋಹಿಣಿ ಭರವಸೆ ನೀಡಿದ್ದಾರೆ.

ಯಡಕುಮರಿ ರೈಲ್ವೆ ಸಿಬ್ಬಂದಿ ರಕ್ಷಣೆ: ಎಸಿ ಲಕ್ಷ್ಮೀಕಾಂತ್ ರೆಡ್ಡಿ ಸಾಹಸ

ಯಡಕುಮರಿ ರೈಲ್ವೆ ನಿಲ್ದಾಣದಲ್ಲಿ ಸಿಲುಕಿದ್ದ 16 ಮಂದಿ ರೈಲ್ವೆ ಸಿಬ್ಬಂದಿಯನ್ನು ಹೆಲಿಕಾಪ್ಟರ್ ಮೂಲಕ ರಕ್ಷಣೆ ಮಾಡುವಂತೆ ಮನವಿ ಮಾಡಿದ್ದ ರೈಲ್ವೆ ಇಲಾಖೆಗೆ ಜಿಲ್ಲಾಡಳಿತ ತುರ್ತು ಸ್ಪಂದನೆ ನೀಡಿದೆ. ಆದರೆ, ವಿಪರೀತ ಮಳೆಯಾಗುತ್ತಿರುವುದರಿಂದ ಹೆಲಿಕಾಪ್ಟರ್ ಬಳಸಲು ಸಾಧ್ಯವಾಗಲಿಲ್ಲ. ಸಕಲೇಶಪುರ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ಸ್ವತಃ ಕಾರ್ಯಾಚರಣೆಗೆ ಇಳಿದರು. ಶುಕ್ರವಾರ ಬೆಳಗ್ಗೆ ಟ್ರೆಕ್ಕಿಂಗ್ ಪರಿಣಿತರೊಂದಿಗೆ ರಕ್ಷಣೆ ಕಾರ್ಯಾಚರಣೆ ಆರಂಭಿಸಿದ ಲಕ್ಷ್ಮೀಕಾಂತ ರೆಡ್ಡಿ, ಕಾಗಿನೆರೆ ಮೂಲಕ ಕಾಲ್ನಡಿಗೆಯಲ್ಲೇ ಸಾಗಿ ಎಡಕುಮರಿ ರೈಲ್ವೆ ನಿಲ್ದಾಣ ತಲುಪಿದರು. ಪೊಲೀಸ್ ಮತ್ತು ಅಗ್ನಿಶಾಮಕದಳದ ಸಿಬ್ಬಂದಿಗಳೊಂದಿಗೆ ಮಧ್ಯಾಹ್ನ 3 ಗಂಟೆ ವೇಳೆಗೆ ಅಪಾಯಕ್ಕೆ ಸಿಲುಕಿದ್ದ ಎಲ್ಲ 16 ಮಂದಿ ರೈಲ್ವೆ ಸಿಬ್ಬಂದಿಯನ್ನು ಸುರಕ್ಷಿತವಾಗಿ ಸಕಲೇಶಪುರಕ್ಕೆ ಕರೆತಂದರು. ಲಕ್ಷೀಕಾಂತ ರೆಡ್ಡಿ ಅವರ ಖುದ್ದು ಕಾರ್ಯಾಚರಣೆಗೆ ಅಪಾರ ಜನಮೆಚ್ಚುಗೆ ವ್ಯಕ್ತವಾಯಿತು. ತಹಸೀಲ್ದಾರ್ ಗಿರೀಶ್, ಪ್ರೊಬೆಷನರಿ ಎಸಿ ನಂದನ್ ಸಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅರಕಲಗೂಡು ತಾಲೂಕಲ್ಲಿ ಕಾವೇರಿ ಅಬ್ಬರ

ಕೊಡಗಿನಲ್ಲಿ ಮಹಾಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ದಂಡೆ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಅರಕಲಗೂಡು ತಾಲೂಕಿನ ರಾಮನಾಥಪುರ ಮತ್ತು ಕೊಣನೂರು ಹೋಬಳಿಗಳ ಜನತೆ ತತ್ತರಿಸಿದ್ದಾರೆ. ಕಾವೇರಿ ನದಿ ತೀರದಲ್ಲಿರುವ ರಾಮನಾಥಪುರ ಗ್ರಾಮಕ್ಕೆ ನೀರು ನುಗ್ಗಿದ್ದರಿಂದ ೧೦೦ಕ್ಕೂ ಹೆಚ್ಚು ಮನೆಗಳು ಮುಳುಗಡೆಯಾಗಿವೆ. ಮೂರು ದಿನಗಳಿಂದ ಐದಾರು ಮನೆಗಳು ಕುಸಿದಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ. ನಿರಾಶ್ರಿತರಿಗೆಂದು ತೆರಿದಿದ್ದ ಗಂಜಿ ಕೇಂದ್ರವೂ ಜಲಾವೃತವಾಗಿದೆ. ಶಾಸಕ ಎ ಟಿ ರಾಮಸ್ವಾಮಿ ಖುದ್ದು ತೆಪ್ಪವನ್ನೇರಿ ಪ್ರವಾಹಪೀಡಿತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ತಳ್ಳುವ ಗಾಡಿಗಳ ಮೂಲಕ ಗೃಹ ಬಳಕೆ ವಸ್ತುಗಳನ್ನು ಗ್ರಾಮಸ್ಥರು ಸ್ಥಳಾಂತರ ಮಾಡಿದರು. ಮತ್ತಷ್ಟು ತಾತ್ಕಾಲಿಕ ವಸತಿ ಕೇಂದ್ರಗಳನ್ನು ತೆರೆಯುವಂತೆ ಶಾಸಕರು ಜಿಲ್ಲಾಧಿಕಾರಿಗೆ ಮನವಿ ಮಾಡಿದ್ದಾರೆ. ಇನ್ನೆರಡು ದಿನ ಪ್ರವಾಹ ಮುಂದುವರಿಯುವ ಸಾಧ್ಯತೆ ಇದೆ ಎಂದು ತಾಲೂಕು ಆಡಳಿತ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ : ವಿಡಿಯೋ ಸ್ಟೋರಿ | ದಾಖಲೆಯ ಭಾರಿ ಮಳೆಯ ಅಬ್ಬರಕ್ಕೆ ನಲುಗಿದ ಕೇರಳ

ಶಿರಾಡಿ ನರಕ

ಮನೆನಾಡು ಭಾಗದಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತ ಉಂಟಾಗಿರುವ ಕಾರಣ ರಸ್ತೆ ಬಂದ್ ಮಾಡಲಾಗಿದೆ. ಮಣ್ಣು ತೆರವು ಕಾರ್ಯಾಚರಣೆಗೆ ಮಳೆ ಅಡ್ಡಿಯಾಗಿದೆ. ಸಕಲೇಶಪುರ ತಾಲೂಕಿನ ಹೆತ್ತೂರು ಹೋಬಳಿಯ ಮಾಗೇರಿ ಬಳಿ ಸುಮಾರು 600 ಅಡಿಗೂ ಹೆಚ್ಚು ಉದ್ದಕ್ಕೆ ರಸ್ತೆ ಕುಸಿದಿದ್ದು ಸೋಮವಾರಪೇಟೆ-ಸಕಲೇಶಪುರ ನಡುವಿನ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More