ವಿಡಿಯೋ ಸ್ಟೋರಿ | ಮಳೆ ಆರ್ಭಟಕ್ಕೆ ಕಂಗಾಲಾದ ಕೊಡಗು, ದ್ವೀಪಗಳಾದ ತಗ್ಗು ಪ್ರದೇಶ

ಒಂದು ವಾರದಿಂದ ಸುರಿಯುತ್ತಿರುವ ಮಳೆಯ ಆರ್ಭಟಕ್ಕೆ ಕೊಡಗು ಸೋತು ನೆಲಕಚ್ಚಿದೆ. ಬಹುತೇಕ ಗ್ರಾಮೀಣ ಭಾಗಗಳು ದ್ವೀಪಗಳಂತಾಗಿದ್ದು, ವಿದ್ಯುತ್ ಇಲ್ಲದೆ 3 ವಾರಗಳೇ ಆಗಿವೆ. ಪ್ರತಿಕೂಲ ಹವಾಮಾನದಿಂದಾಗಿ ರಾಷ್ಟ್ರೀಯ ವಿಪತ್ತು ದಳದ ಹೆಲಿಕಾಪ್ಟರ್‌ಗಳು ಕೊಡಗು ತಲುಪಲೇ ಆಗಿಲ್ಲ

ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಹಾಮಳೆಯ ಆರ್ಭಟಕ್ಕೆ ಕೊಡಗು ಸೋತು ನೆಲಕಚ್ಚಿದೆ. ಈ ಮಳೆಯ ಹೊಡೆತವನ್ನು ತಡೆದುಕೊಳ್ಳಲು ಈ ಪುಟ್ಟ ಜಿಲ್ಲೆ ನಿಜಕ್ಕೂ ಶಕ್ತವಾಗಿಲ್ಲ. ಮೊದಲೇ ಗುಡ್ಡಗಾಡು ಪ್ರದೇಶವಾಗಿರುವ ಜಿಲ್ಲೆಯಲ್ಲಿ ಜನರು ಗುಡ್ಡಗಳ ಮೇಲೆಯೇ ಮನೆ ಕಟ್ಟಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಆದರೆ, ಈ ಕಂಡುಕೇಳರಿಯದ ಮಹಾಮಳೆಯಿಂದಾಗಿ ಜಿಲ್ಲೆ ತತ್ತರಿಸಿದೆ. ಬಹುತೇಕ ಗ್ರಾಮೀಣ ಭಾಗಗಳು ದ್ವೀಪಗಳಂತಾಗಿದ್ದು, ವಿದ್ಯುತ್ ಇಲ್ಲದೆ 3 ವಾರಗಳೇ ಆಗಿವೆ. ಜಿಲ್ಲೆಯಲ್ಲಿ ಅತ್ಯಂತ ಹೆಚ್ಚು ಸಾವು-ನೋವು ಸಂಭವಿಸಿರುವುದು ಮಣ್ಣು ಕುಸಿತದ ಕಾರಣದಿಂದಾಗಿ. ಜಿಲ್ಲೆಯ ನೂರಾರು ಗ್ರಾಮಗಳಲ್ಲಿ ಮಣ್ಣು ಕುಸಿದಿದ್ದು, ಜನಜೀವನ ಸಾಮಾನ್ಯ ಸ್ಥಿತಿಗೆ ಬರಬೇಕಾದರೆ ಅನೇಕ ತಿಂಗಳುಗಳೇ ಬೇಕು.

ಅನೇಕ ಕಡೆಗಳಲ್ಲಿ ಮಣ್ಣು ಕುಸಿತ ಮತ್ತು ಗುಡ್ಡಗಳ ಕುಸಿತದಿಂದಾಗಿ 5-8 ಅಡಿಗಳಷ್ಟು ಕೆಸರು ತುಂಬಿಕೊಂಡಿದೆ. ಇದರಿಂದಾಗಿ ಜನರ ರಕ್ಷಣಾ ಕಾರ್ಯ ಅಸಾದ್ಯವಾಗಿದೆ. ಮಂಗಳೂರಿನಿಂದ ರಾಷ್ಟ್ರೀಯ ವಿಪತ್ತು ದಳದ ಎರಡು ಹೆಲಿಕಾಪ್ಟರ್‌ಗಳನ್ನು ಸಂತ್ರಸ್ತರ ರಕ್ಷಣೆಗೆ ನಿಯೋಜಿಸಲಾಗಿದೆಯಾದರೂ ಪ್ರತಿಕೂಲ ಹವಾಮಾನದಿಂದಾಗಿ ಅವು ಕೊಡಗು ತಲುಪಲೇ ಆಗುತ್ತಿಲ್ಲ. ಮಡಿಕೇರಿ ತಾಲೂಕಿನಲ್ಲಿ ಅತಿ ಹೆಚ್ಚು ಸಾವು-ನೋವು ಸಂಭವಿಸಿದ ಬಗ್ಗೆ ವರದಿ ಆಗಿದೆ. ಅಧಿಕೃತವಾಗಿ ಎರಡು ಸಾವು ಸಂಭವಿಸಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ : ಕೇರಳದಲ್ಲಿ ಮುಂದುವರಿದ ಭೀಕರ ಪ್ರವಾಹ; ಬಲಿಯಾದವರ ಸಂಖ್ಯೆ 324ಕ್ಕೆ ಏರಿಕೆ

ಮಡಿಕೇರಿ ಸಮೀಪದ ಕಾಟಕೇರಿ ಎಂಬಲ್ಲಿ ಮಣ್ಣು ಕುಸಿದು ಇಬ್ಬರು ಜೀವಂತ ಸಮಾಧಿ ಆಗಿದ್ದು, ಇನ್ನೋರ್ವ ತೀವ್ರವಾಗಿ ಗಾಯಗೊಂಡಿದ್ದಾರೆ. ಜಿಲ್ಲೆಯಲ್ಲಿ 500ಕ್ಕೂ ಅಧಿಕ ಮನೆಗಳು ಸಂಪೂರ್ಣ ಕುಸಿದುಹೋಗಿವೆ. ಮಡಿಕೇರಿ ಸಮೀಪದ ಮಕ್ಕಂದೂರಿನಲ್ಲಿ ಸುಮಾರು 150 ಜನರು ಸಿಲುಕಿಕೊಂಡಿದ್ದಾರೆ. ಕಾಟಕೇರಿ, ಗರ್ವಾಲೆ, ಹಾಗೂ ಕಾಂಡನಕೊಲ್ಲಿ ಎಂಬಲ್ಲಿಯೂ 50ರಿಂದ 100 ಜನ ಸಿಲುಕಿಕೊಂಡಿದ್ದಾರೆ. ಆದರೆ, ಸಂತ್ರಸ್ಥರನ್ನು ತಲುಪಲು ಸಾಧ್ಯವಾಗುತ್ತಿಲ್ಲ. ಮಕ್ಕಂದೂರಿನ ಎಮ್ಮತ್ತಾಳು ಗ್ರಾಮಕ್ಕೆ ಭಾರಿ ಪ್ರಯಾಸದ ನಂತರ ರಕ್ಷಣಾ ಕಾರ್ಯಕರ್ತರು ಪ್ರವೇಶಿಸಿದ್ದು, ಸಂತ್ರಸ್ತರನ್ನು ಪಾರು ಮಾಡುವ ಕಾರ್ಯ ಭರದಿಂದ ಸಾಗಿದೆ.

ಮಡಿಕೇರಿ ಸಮೀಪದ ಮಂಗಳೂರಿನ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೇ ಇರುವ ತಂತಿಪಾಲ ಎಂಬಲ್ಲಿ ಸುಮಾರು 20 ಜನ ನಾಪತ್ತೆ ಆಗಿದ್ದಾರೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಇಲ್ಲಿ ಗುಡ್ಡ ಕುಸಿದು ಸುಮಾರು 12 ಮನೆಗಳೇ ಸಂಪೂರ್ಣ ಮಣ್ಣಿನಡಿಯಲ್ಲಿ ಸಿಲುಕಿಕೊಂಡಿವೆ ಎನ್ನಲಾಗಿದೆ. ಇದೇ ಹೆದ್ದಾರಿಯಲ್ಲಿರುವ ಮಡಿಕೇರಿಯ ನಗರಸಭಾ ಸದಸ್ಯ ಪಿ ಡಿ ಪೊನ್ನಪ್ಪ ಎಂಬುವವರ ಮನೆ ಗುಡ್ಡ ಕುಸಿದು ಹಾನಿಗೀಡಾಗಿದೆ.

ಮಡಿಕೇರಿ ನಗರದ ಮುತ್ತಪ್ಪ ದೇವಸ್ಥಾನದ ಬಳಿ ಗುರುವಾರ ದೊಡ್ಡ ಮನೆಯೊಂದು 70 ಅಡಿಗಳಷ್ಟು ಕೆಳಕ್ಕೆ ಜಾರಿಕೊಂಡು ಹೋಗುವ ವೀಡಿಯೋ ದೇಶಾದ್ಯಂತ ವೈರಲ್ ಆಗಿದೆ. ಈ ಮನೆ ಮಾಲೀಕ ದುಬೈನಲ್ಲಿದ್ದು, ಮನೆಯ ಕೆಳ ಅಂತಸ್ಥಿನಲ್ಲಿ ಶಿಕ್ಷಕಿಯೊಬ್ಬರು ಬಾಡಿಗೆಗಿದ್ದರೆ, ಮತ್ತೊಂದು ಅಂತಸ್ತಿನಲ್ಲಿ ಯಾಶುದ್ದೀನ್ ಎಂಬುವವರು ತಮ್ಮ ಕುಟುಂಬದೊಂದಿಗೆ ವಾಸವಿದ್ದರು. ಅಪಾಯದ ಸುಳಿವು ಸಿಗುತ್ತಿದ್ದಂತೆ ಇವರು ಮನೆಬಿಟ್ಟು ಹೋಗಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ವಿಶೇಷವೆಂದರೆ ಮನೆ 50 ಅಡಿ ಎತ್ತರದಿಂದ ಕುಸಿದಿದ್ದರೂ, ಯಾವುದೇ ಹಾನಿಗೊಳಗಾಗದೆ, ಇದ್ದ ರೀತಿಯಲ್ಲೇ ಇದೆ. ಇದರ ಸುತ್ತಮುತ್ತಲಿರುವ ಕೆಲವೊಂದು ಮನೆ ಹಾಗೂ ಶೆಡ್ ಗಳು ಕುಸಿಯುವ ಭೀತಿ ಎದುರಿಸುತ್ತಿದ್ದು, ಅಲ್ಲಿನ ನಿವಾಸಿಗಳು ಮನೆಖಾಲಿ ಮಾಡಿದ್ದಾರೆ.

ಸೋಮವಾರಪೇಟೆ-ಸಕಲೇಶಪುರ ಹೆದ್ದಾರಿಯ ಮಾಗೇರಿ ಎಂಬಲ್ಲಿ ಸುಮಾರು 600 ಅಡಿಗಳಷ್ಟು ಬೃಹತ್ ಹೊಂಡ ಆಗಿದೆ. ಕೇರಳಕ್ಕೆ ಸಂಪರ್ಕ ಕಲ್ಪಿಸುವ ಗೋಣಿಕೊಪ್ಪ-ಕುಟ್ಟ ರಸ್ತೆ ಕುಸಿದಿದ್ದು, ಸಂಚಾರ ಸ್ಥಗಿತವಾಗಿದೆ. ಜಿಲ್ಲಾಡಳಿತ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿದೆ. ಬಹುತೇಕ ರಸ್ತೆಗಳು ಕುಸಿದಿದ್ದು, ಮಡಿಕೇರಿ-ಮಂಗಳೂರು ರಸ್ತೆಯ ಅನೇಕ ಕಡೆ ಭೂ ಕುಸಿತ ಆಗಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ.

ಗುರುವಾರ ರಾಜ್ಯ ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಜಿಲ್ಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದರು. ಶುಕ್ರವಾರ ಕಂದಾಯ ಸಚಿವ ಆರ್ ವಿ ದೇಶಪಾಂಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಾ ರಾ ಮಹೇಶ್ ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಹಾನಿಗೀಡಾದ ಪ್ರದೇಶಗಳಿಗೆ ಭೇಟಿ ನೀಡಿ ಜನತೆಗೆ ಸಾಂತ್ವನ ಹೇಳಿದರು. ಮಳೆ ಇನ್ನೂ ಸುರಿಯುತ್ತಲೇ ಇದ್ದು ಜೋರು ಗಾಳಿಯೂ ಬೀಸುತ್ತಿದೆ. ಗ್ರಾಮೀಣ ಪ್ರದೇಶದ ಜನ ಈಗಲೂ ಮುಂದೆ ಏನಾಗುವುದೋ ಎಂಬ ಆತಂಕದಲ್ಲೇ ದಿನ ದೂಡುತಿದ್ದಾರೆ. ಕೊಡಗಿನಲ್ಲೇ ಇಂದು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಲು ಸಾಧ್ಯವಾಗುತ್ತಿಲ್ಲ. ರಸ್ತೆಯು ಸಂಪೂರ್ಣ ಹಾನಿಗೀಡಾಗಿದೆ.

ಈ ಮಧ್ಯೆ, ಜನತೆ ಮಾನವೀಯತೆ ಮೆರೆದಿದ್ದು ವಿಶೇಷ. ಬಹಳಷ್ಟು ಹೋಂ ಸ್ಟೇ , ಕಲ್ಯಾಣ ಮಂಟಪ , ಹೋಟೆಲ್‌ಗಳ ಮಾಲೀಕರು ಸಂತ್ರಸ್ತರಿಗೆ ಊಟ, ವಸತಿ ನೀಡಲು ಮುಂದೆ ಬಂದಿದ್ದಾರೆ. ಕೊಡವ ಸಮಾಜ, ಗೌಡ ಸಮಾಜಗಳು ಸಂತ್ರಸ್ಥರಿಗಾಗಿ ಹಣ, ಆಹಾರ ಮತ್ತು ಬಟ್ಟೆ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿವೆ. ಪಕ್ಷಾತೀತವಾಗಿ ಕಾರ್ಯಕರ್ತರು ಪರಿಹಾರ ಚಟುವಟಿಕೆಗಳಲ್ಲಿ ತೊಡಗಿದ್ದಾರೆ. ಕುಶಾಲನಗರ ಮತ್ತು ಮಡಿಕೇರಿಯಲ್ಲಿ ಆರ್‌ಎಸ್‍ಎಸ್ ಕಾರ್ಯಕರ್ತರು ರಕ್ಷಣಾ ಸೇವಕರ ತಂಡವನ್ನು ರಚಿಸಿಕೊಂಡಿದ್ದು ಸಂತ್ರಸ್ಥರಿಗೆ ನೆರವು ನೀಡುತಿದ್ದಾರೆ,

ಜಿಲ್ಲಾ ಸಚಿವ ಸಾರಾ ಮಹೇಶ್ ಅವರು, “ಈಗಾಗಲೇ 20 ಕೋಟಿ ರೂಪಾಯಿಗಳ ನೆರವನ್ನು ನೀಡಲಾಗಿದ್ದು ಇನ್ನೂ ಹೆಚ್ಚಿನ ನೆರವನ್ನು ನೀಡಲಾಗುವುದು,” ಎಂದು ಘೋಷಿಸಿದ್ದಾರೆ. ಮಳೆ ಕಡಿಮೆ ಆದ ಬಳಿಕವಷ್ಟೇ ಸಾವು-ನೋವಿನ ನಿಖರ ಸಂಖ್ಯೆ ಗೊತ್ತಾಗಲಿದೆ. ಈಗಾಗಲೇ ಜಿಲ್ಲೆಯ ವಾರ್ಷಿಕ ಮಳೆಯ ಪ್ರಮಾಣಕ್ಕೆ ಎರಡು ಪಟ್ಟಿಗೂ ಅಧಿಕ ಮಳೆ ದಾಖಲಾಗಿದೆ. ಅನಾಹುತಕ್ಕೆ ಇದೇ ಕಾರಣವಾಗಿದೆ. ಜಿಲ್ಲೆಯಲ್ಲಿ 20ಕ್ಕೂ ಹೆಚ್ಚು ಶಾಲೆಗಳಲ್ಲಿ ತಾತ್ಕಾಲಿಕ ವಸತಿ ಕೇಂದ್ರಗಳನ್ನು ತೆರೆಯಲಾಗಿದ್ದು, ಸಂತ್ರಸ್ತರಿಗೆ ಆಶ್ರಯ ಕಲ್ಪಿಸಲಾಗಿದ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More