ಕೇರಳದಲ್ಲಿ ಮುಂದುವರಿದ ಭೀಕರ ಪ್ರವಾಹ; ಬಲಿಯಾದವರ ಸಂಖ್ಯೆ 324ಕ್ಕೆ ಏರಿಕೆ

ಕೇರಳದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಒಂದು ವಾರದಿಂದ ಸುರಿಯುತ್ತಿರುವ ಮಳೆ, ಜಲಾಶಯದ ಹೊರ ಹರಿವಿನಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ಸಾವಿಗೀಡಾದವರ ಸಂಖ್ಯೆ 324 ದಾಟಿದೆ ಎಂದು ಕೇರಳ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ

ಕೇರಳದಲ್ಲಿ ಮಳೆಯ ಆರ್ಭಟ ಮುಂದುವರಿದದ್ದು, ಕಳೆದ 24 ಗಂಟೆಗಳ ಅವಧಿಯಲ್ಲಿ ನೂರಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಒಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಉಂಟಾದ ಪ್ರವಾಹಕ್ಕೆ ಸಿಲುಕಿ ಸಾವಿಗೀಡಾದವರ ಸಂಖ್ಯೆ 324 ದಾಟಿದೆ ಎಂದು ಕೇರಳ ಮುಖ್ಯಮಂತ್ರಿಗಳ ಕಚೇರಿ ಮಾಹಿತಿ ನೀಡಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಕಚೇರಿ, “ನೂರು ವರ್ಷಗಳ ಇತಿಹಾಸದಲ್ಲಿ ಕೇರಳ ರಾಜ್ಯವು ಅತಿ ಕೆಟ್ಟ ಪ್ರವಾಹವನ್ನು ಎದುರಿಸುತ್ತಿದೆ. ರಾಜ್ಯದ ಬಹುತೇಕ ಜಲಾಶಯಗಳ ಕ್ರಸ್ಟ್‌ ಗೇಟ್‌ಗಳನ್ನು ತೆರೆಯಲಾಗಿದೆ. ಪ್ರವಾಹದಿಂದ 324 ಜನರು ಸಾವನ್ನಪ್ಪಿದ್ದಾರೆ. 2,23,139 ಜನರು ಮನೆ ಕಳೆದುಕೊಂಡು ನಿರ್ಗತಿಕರಾಗಿದ್ದು, 1,500ಕ್ಕೂ ಅಧಿಕ ಸಂತ್ರಸ್ತ ಶಿಬಿರಗಳಲ್ಲಿ ನೆಲೆ ಕಂಡುಕೊಂಡಿದ್ದಾರೆ,” ಎಂದು ತಿಳಿಸಿದೆ.

ದಕ್ಷಿಣ ಕೇರಳದ ಇಡುಕ್ಕಿ, ಮಲಪುರಂ, ಕಣ್ಣೂರು ಜಿಲ್ಲೆಗಳಲ್ಲಿ ಪ್ರವಾಹ ಭೀಕರವಾಗಿದ್ದು, ಭೂಕುಸಿತಗಳು ಮುಂದುವರಿದಿವೆ. ಪೆರಿಯಾರ್‌ ನದಿಯಲ್ಲಿನ ಒಳಹರಿವು ಮಿತಿಮೀರಿದೆ. ಮಲ್ಲಪೆರಿಯಾರ್‌, ಚೇರುಥೋನಿ, ಇಡುಕ್ಕಿ ಹಾಗೂ ಇಡಮಲಯಾರ್‌ ಜಲಾಶಯಗಳಿಂದ ಬಹುಪ್ರಮಾಣದ ನೀರನ್ನು ಹೊರಬಿಡಲಾಗಿದೆ. ಇದರಿಂದ ದಕ್ಷಿಣ ಕೇರಳದ ನದಿ ಪಾತ್ರದಲ್ಲಿರುವ ಮೂರು ಜಿಲ್ಲೆಗಳ ಜನರ ಸ್ಥಿತಿ ಗಂಭೀರವಾಗಿದೆ.

ಈ ವಿಚಾರವಾಗಿ ಕೇರಳ ಸಿಎಂ ಪಿಣರಾಯಿ ವಿಜಯನ್‌ ಅವರು ಶುಕ್ರವಾರ ಪ್ರಧಾನಿ ಮೋದಿಯವರಿಗೆ ಕರೆ ಮಾಡಿ, ಪರಿಸ್ಥಿತಿ ತಮ್ಮ ಕೈಮೀರಿ ಹೋಗುತ್ತಿರುವ ಬಗ್ಗೆ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟಿಸಿರುವ ವಿಜಯನ್‌ ಅವರು, “ಪ್ರಧಾನಿ ಮೋದಿಯವರಿಗೆ ಕರೆ ಮಾಡಿ ಕೇರಳ ಪರಿಸ್ಥಿತಿಯನ್ನು ವಿವರಿಸಿದ್ದೇನೆ. ತುರ್ತು ಸಹಾಯಕ್ಕೆ ಧಾವಿಸುವಂತೆ ಕೇಳಿಕೊಂಡಿದ್ದೇನೆ. ಪರಿಸ್ಥಿತಿ ನಿಯಂತ್ರಣಕ್ಕೆ ಹೆಚ್ಚುವರಿ ಸೈನ್ಯ ಹಾಗೂ ಹೆಲಿಕಾಪ್ಟರ್‌ಗಳನ್ನು ಪೂರೈಸುವಂತೆ ಒತ್ತಾಯಿಸಿದ್ದೇನೆ,” ಎಂದಿದ್ದಾರೆ. ಈ ವಿಚಾರವಾಗಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್‌ ಅವರನ್ನು ಸಂಪರ್ಕಿಸಿರುವುದಾಗಿಯೂ ಪಿಣರಾಯಿ ಹೇಳಿದ್ದಾರೆ.

ಇನ್ನೊಂದೆಡೆ, ಕೇರಳ ಸಿಎಂ ಜೊತೆ ಮಾತನಾಡಿರುವುದಾಗಿ ಟ್ವೀಟ್ ಮೂಲಕ ತಿಳಿಸಿರುವ ಪ್ರಧಾನಿ ಮೋದಿ, “ರಾಜ್ಯದಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿ ಹಾಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಪಿಣರಾಯಿ ವಿಜಯನ್ ಅವರ ಜೊತೆ ಚರ್ಚಿಸಿದ್ದೇನೆ,” ಎಂದು ತಿಳಿಸಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ಅರಿಯಲು ಶುಕ್ರವಾರ ಸಂಜೆ ಕೇರಳಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಕಳೆದ ವಾರ ರಾಜ್ಯದ 14 ಜಿಲ್ಲೆಗಳಲ್ಲಿ ಘೋಷಿಸಲಾಗಿದ್ದ ಕಟ್ಟೆಚ್ಚರವನ್ನು 12 ಜಿಲ್ಲೆಗಳಿಗೆ ಸೀಮಿತಗೊಳಿಸಲಾಗಿದೆ. ತಿರುವನಂತಪುರಂ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಸ್ಪಲ್ಪ ಮಟ್ಟಿಗೆ ಕಡಿಮೆಯಾಗಿದ್ದು, ಕಟ್ಟೆಚ್ಚರ ತೆರವುಗೊಳಿಸಲಾಗಿದೆ. ಕಲ್ಲಿಕೋಟೆ ಜಿಲ್ಲೆಯಲ್ಲಿ ಪರಿಸ್ಥಿತಿ ಸುಧಾರಿಸುತ್ತಿದ್ದು, ಮಧ್ಯ ಹಾಗೂ ದಕ್ಷಿಣ ಕೇರಳದಲ್ಲಿನ ವಿಷಮ ಸನ್ನಿವೇಶ ಮುಂದುವರಿದಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More