‘ಅಂದು ದಿಲ್ಲಿಯಲ್ಲಿ ನೋಡಿದ ಆ ಸಿನಿಮಾ ಅಟಲ್‌ಜಿ ಜೊತೆಗೆ ನನ್ನಲ್ಲೂ ಆಶಾವಾದ ತುಂಬಿತ್ತು’

ಎಲ್ ಕೆ ಅಡ್ವಾಣಿಯವರ ಆತ್ಮಚರಿತ್ರೆ ‘ಮೈ ಕಂಟ್ರಿ ಮೈ ಲೈಫ್’ನಿಂದ ಆಯ್ದ ಈ ಭಾಗದಲ್ಲಿ ವಾಜಪೇಯಿ ಜೊತೆಗಿನ ಒಡನಾಟದಲ್ಲಿ ಆಡ್ವಾಣಿಯವರು ಕಲಿತ ‘ಮತ್ತೆ ಸೂರ್ಯೋದಯವಾಗುತ್ತದೆ’ ಎಂಬ ಪಾಠವನ್ನು ಒಪ್ಪಿಕೊಂಡಿದ್ದಾರೆ.  ಅಟಲ್ ಅವರೊಂದಿಗಿನ ಒಡನಾಟದ ಆಪ್ತತೆಯನ್ನು ಈ ಬರಹ ಪಿಸುಗುಡುತ್ತದೆ

ಅಟಲ್‍ಜಿ ಮತ್ತು ನನ್ನ ನಡುವೆ ಉದ್ಭವಿಸಿದ ಎರಡು ಮುಖ್ಯ ಭಿನ್ನಾಭಿಪ್ರಾಯಗಳನ್ನು ಇಲ್ಲಿ ಪ್ರಸ್ತಾಪಿಸಲು ಬಯಸುತ್ತೇನೆ. ಅಯೋಧ್ಯಾ ಚಳವಳಿಯ ಜೊತೆ ಬಿಜೆಪಿ ನೇರವಾಗಿ ಸೇರಿಕೊಳ್ಳುವುದರ ಬಗ್ಗೆ ಅವರಿಗೆ ಸ್ವಲ್ಪ ಆಕ್ಷೇಪಗಳಿದ್ದವು. ಬದ್ಧತೆ ಮತ್ತು ಮನೋಧರ್ಮದಲ್ಲಿ ಕಟ್ಟಾ ಪ್ರಜಾತಂತ್ರವಾದಿಯಾಗಿದ್ದ ಹಾಗೂ ತಮ್ಮ ಸಹೋದ್ಯೋಗಿಗಳ ನಡುವೆ ಏಕಾಭಿಪ್ರಾಯ ಮೂಡಬೇಕೆಂದು ಪ್ರತಿಪಾದಿಸುತ್ತಿದ್ದ ಅಟಲ್‍ಜಿಯವರು ಪಕ್ಷದ ಸಮಷ್ಟಿ ತೀರ್ಮಾನವನ್ನು ಒಪ್ಪಿಕೊಂಡರು.

ಎರಡನೇ ನಿದರ್ಶನವು 2002ರ ಫೆಬ್ರವರಿಯಲ್ಲಿ ಗೋಧ್ರಾದಲ್ಲಿ ಕರಸೇವಕರ ಸಾಮೂಹಿಕ ಹತ್ಯೆಯಾದ ನಂತರ ಗುಜರಾತಿನಲ್ಲಿ ಭುಗಿಲೆದ್ದ ಕೋಮುಗಲಭೆಗಳಿಗೆ ಸಂಬಂಧಿಸಿದ್ದು. ಗೋಧ್ರಾ ಘಟನೆಯ ನಂತರದ ಬರ್ಬರ ದಾಳಿಗಳ ಕಾರಣದಿಂದಾಗಿ ಗುಜರಾತ್ ಸರ್ಕಾರ ಅದರಲ್ಲೂ ಪ್ರಮುಖವಾಗಿ, ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ಖಂಡನೆಗಳು ವ್ಯಕ್ತವಾದವು. ವಿರೋಧ ಪಕ್ಷಗಳು ಮುಂದಿಟ್ಟ ನರೇಂದ್ರ ಮೋದಿಯ ರಾಜಿನಾಮೆ ಬೇಡಿಕೆ ತುತ್ತತುದಿಯನ್ನು ತಲುಪಿತ್ತು. ರಾಜಿನಾಮೆ ಕೊಡುವಂತೆ ಮೋದಿಯವರಿಗೆ ಹೇಳಬೇಕು ಎಂದು ಬಿಜೆಪಿ ಮತ್ತು ಎನ್‍ಡಿಎ ಒಳಗೆ ಕೂಡ ಕೆಲವರು ದನಿ ಎತ್ತಲಾರಂಭಿಸಿದರು. ಆದರೆ, ಈ ವಿಷಯದಲ್ಲಿ ನನ್ನ ನಿಲುವು ಮಾತ್ರ ಸಂಪೂರ್ಣ ಭಿನ್ನವಾಗಿತ್ತು. ಗುಜರಾತ್ ಸಮಾಜದ ವಿವಿಧ ವರ್ಗಗಳಿಗೆ ಸೇರಿದ ಅನೇಕ ಜನರೊಂದಿಗೆ ಮಾತಾಡಿದ ನಂತರ ನನಗೆ, ಮೋದಿಯವರನ್ನು ಅನ್ಯಾಯವಾಗಿ ಗುರಿ ಮಾಡಲಾಗುತ್ತಿದೆ ಎಂದು ಮನವರಿಕೆಯಾಯಿತು. ಈ ವಿಷಯದಲ್ಲಿ ಅವರನ್ನು ಎಷ್ಟು ಗುರಿಮಾಡಿ ವಿಮರ್ಶಿಸಬೇಕಿತ್ತೋ ಅದಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಅವರ ಮೇಲೆ ಟೀಕಾಪ್ರಹಾರ ಮಾಡಲಾಗುತ್ತಿತ್ತು.

ಹೀಗಾಗಿ, ಕೇವಲ ಒಂದು ವರ್ಷದ ಹಿಂದೆಯಷ್ಟೇ ಗುಜರಾತಿನ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೇರಿದ ಮೋದಿಯವರನ್ನು ಸಂಕೀರ್ಣ ಪರಿಸ್ಥಿತಿಯ ಹರಕೆಯ ಕುರಿಯನ್ನಾಗಿ ಮಾಡುವುದು ಅನ್ಯಾಯವಾಗುತ್ತದೆ ಎಂದು ನನಗನ್ನಿಸಿತು. ಹಾಗೆ ಮಾಡಿದರೆ ಗುಜರಾತಿನ ಸಾಮಾಜಿಕ ಸಂರಚನೆ ದೀರ್ಘಕಾಲದಲ್ಲಿ ಇನ್ನಷ್ಟು ಹದಗೆಡುತ್ತದೆ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಗುಜರಾತ್ ಘಟನಾವಳಿಗಳಿಂದ ನನ್ನಷ್ಟೇ ಅಟಲ್‍ಜಿಯವರೂ ನೊಂದುಕೊಂಡಿದ್ದರೆಂದು ನನಗೆ ಗೊತ್ತಿತ್ತು. 1998ರ ಮಾರ್ಚ್‍ನಲ್ಲಿ ನಮ್ಮ ಸರ್ಕಾರ ರಚನೆಯಾದಾಗಿನಿಂದ ದೇಶದಲ್ಲಿ ಕೋಮುಗಲಭೆಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದೆವು. ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ದೇಶಾದ್ಯಂತ ಹಿಂದೂ ಮತೋನ್ಮಾದದ ದಾಳಿಗೆ ಗುರಿಯಾಗುತ್ತಾರೆ ಎಂದು ನಮ್ಮ ವಿರೋಧಿಗಳು ನಮ್ಮ ಮೇಲೆ ಮಾಡುತ್ತಿದ್ದ ಆರೋಪಗಳಿಗೆ ವ್ಯತಿರಿಕ್ತವಾಗಿ ನಾವು 2002ರ ತನಕ ಉತ್ತಮವಾಗಿ ಆಡಳಿತ ನಡೆಸಿದ್ದೆವು. ವಾಸ್ತವದಲ್ಲಿ ಅಟಲ್‍ಜಿಯವರ ಸರ್ಕಾರವು ಭಾರತದಲ್ಲಿ ಮಾತ್ರವಲ್ಲದೆ ವಿಶ್ವಾದ್ಯಂತ ಹಲವು ಮುಸ್ಲಿಂ ದೇಶಗಳಲ್ಲೂ ಮನ್ನಣೆ ಗಳಿಸಲಾರಂಭಿಸಿತ್ತು. ಗುಜರಾತಿನಲ್ಲಿ ಕೋಮು ಗಲಭೆಗಳು ಭುಗಿಲೆದ್ದ ಕೂಡಲೇ ನಮ್ಮ ವಿರೋಧಿಗಳು ಬಿರುಸಾಗಿ ನಡೆಸಿದ ಪ್ರಚಾರದಿಂದಾಗಿ ನಮ್ಮ ಪಕ್ಷಕ್ಕೆ ಮತ್ತು ಕೇಂದ್ರದಲ್ಲಿದ್ದ ನಮ್ಮ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಾರಂಭಿಸಿತು.

ಇದು ಅಟಲ್‍ಜಿಯವರನ್ನು ಚಿಂತೆಗೆ ಈಡುಮಾಡಿತ್ತು. ಇದರ ಬಗ್ಗೆ ಏನಾದರೂ ಮಾಡಬೇಕು, ಸ್ವಲ್ಪ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರಿಗೆ ಅನ್ನಿಸಲಾರಂಭಿಸಿತು. ಈ ನಡುವೆ, ಮೋದಿಯವರಿಗೆ ರಾಜಿನಾಮೆ ಕೊಡುವಂತೆ ಹೇಳಬೇಕು ಎಂದು ಅವರ ಮೇಲೆ ಒತ್ತಡಗಳೂ ಹೆಚ್ಚಾಗಲಾರಂಭಿಸಿದವು. ಈ ವಿಷಯದಲ್ಲಿ ಅಟಲ್‍ಜಿ ಯಾವುದೇ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಲಿಲ್ಲವಾದರೂ ಅವರು ಮೋದಿ ರಾಜಿನಾಮೆಯ ಪರವಾಗಿಯೇ ಇದ್ದರೆಂಬುದು ನನಗೆ ಗೊತ್ತಿತ್ತು. ಅದಕ್ಕೆ ನಾನು ಒಪ್ಪುವುದಿಲ್ಲ ಎಂಬುದು ಅವರಿಗೂ ಗೊತ್ತಿತ್ತು.

ಇದಾದ ಸ್ವಲ್ಪ ಸಮಯದಲ್ಲೇ, 2002ರ ಏಪ್ರಿಲ್ ಎರಡನೇ ವಾರದಲ್ಲಿ, ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿ ಗೋವಾದಲ್ಲಿ ನಡೆಯುವುದರಲ್ಲಿತ್ತು. ಗುಜರಾತ್ ವಿದ್ಯಮಾನಗಳ ಬಗ್ಗೆ ಪಕ್ಷವು ಏನು ಚರ್ಚೆ ನಡೆಸಲಿದೆ ಹಾಗೂ ಮೋದಿ ಭವಿಷ್ಯದ ಬಗ್ಗೆ ಏನು ತೀರ್ಮಾನ ಮಾಡಲಿದೆ ಎಂಬುದರ ಕಡೆಗೇ ಮಾಧ್ಯಮಗಳು ಮತ್ತು ರಾಜಕೀಯ ವಲಯದ ಗಮನ ಕೇಂದ್ರೀಕೃತವಾಗಿತ್ತು. ನವದೆಹಲಿಯಿಂದ ಗೋವಾದ ತನಕ ತನ್ನೊಂದಿಗೆ ಪ್ರಯಾಣ ಮಾಡಬೇಕು ಎಂದು ಅಟಲ್‍ಜಿ ನನಗೆ ಕೇಳಿಕೊಂಡರು. ವಿಶೇಷ ವಿಮಾನದಲ್ಲಿನ ಪ್ರಧಾನಮಂತ್ರಿಗಳ ಪ್ರತ್ಯೇಕ ಕೋಣೆಯಲ್ಲಿ ಆವತ್ತು ನಮ್ಮೊಂದಿಗೆ ಕುಳಿತಿದ್ದವರು ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಅರುಣ್ ಶೌರಿ. ಎರಡು ಗಂಟೆಗಳ ಈ ಪ್ರಯಾಣದಲ್ಲಿ ನಮ್ಮ ಚರ್ಚೆ ಕೂಡಲೇ ಹೊರಳಿದ್ದು ಗುಜರಾತ್ ಕಡೆಗೆ. ಅಟಲ್‍ಜಿಯವರು ಚಿಂತನಾಮಗ್ನ ಮನಸ್ಥಿತಿಗೆ ಜಾರಿದ್ದರಿಂದ ಬಹಳ ಹೊತ್ತು ಮೌನ ಆವರಿಸಿತು. "ನಿಮಗೇನನ್ನಿಸುತ್ತದೆ ಅಟಲ್‍ಜಿ?" ಎಂದು ಸಿಂಗ್ ಪ್ರಶ್ನಿಸುವ ಮೂಲಕ ಆ ಮೌನವನ್ನು ಮುರಿದರು.

ಅಟಲ್‍ಜಿಯವರು ಉತ್ತರಿಸಿದರು: "ಮೋದಿ ಕನಿಷ್ಠ ರಾಜಿನಾಮೆ ನೀಡುತ್ತೇನೆ ಅಂತಾನಾದ್ರೂ ಹೇಳಬೇಕಿತ್ತು."

ಆಗ ನಾನು ಹೇಳಿದ್ದು: "ನರೇಂದ್ರನ ರಾಜಿನಾಮೆಯಿಂದ ಪರಿಸ್ಥಿತಿ ಸುಧಾರಿಸುತ್ತದೆ ಎನ್ನುವುದಾದರೆ ರಾಜಿನಾಮೆ ಕೊಡಿ ಅಂತ ನಾನೇ ಹೇಳುತ್ತೇನೆ. ಆದರೆ, ಅದರಿಂದ ಏನಾದರೂ ಉಪಯೋಗ ಆಗುತ್ತೆ ಅಂತ ನನಗೆ ಅನ್ನಿಸಲ್ಲ. ಅಲ್ಲದೆ, ಪಕ್ಷದ ರಾಷ್ಟ್ರೀಯ ಮಂಡಳಿ ಅಥವಾ ಕಾರ್ಯಕಾರಿಣಿ ಈ ರಾಜಿನಾಮೆಯನ್ನು ಒಪ್ಪುತ್ತೆ ಅಂತಾನೂ ನನಗೆ ಖಾತ್ರಿ ಇಲ್ಲ."

ನಾವು ಗೋವಾಕ್ಕೆ ಬಂದ ತಕ್ಷಣ, ನಾನು ಮೋದಿಯವರನ್ನು ಕರೆದು, ರಾಜಿನಾಮೆ ಕೊಡುವುದಕ್ಕೆ ಮುಂದಾಗಿ ಎಂದು ಹೇಳಿದೆ. ಅವರು ಮನಸಾರೆ ಒಪ್ಪಿಕೊಂಡರು. ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ಚರ್ಚೆ ಶುರುವಾದಾಗ ಬಹಳಷ್ಟು ಜನ ಮಾತಾಡಿ ತಮ್ಮ ಅಭಿಪ್ರಾಯವನ್ನು ಮುಂದಿಟ್ಟರು. ಎಲ್ಲ ಅಭಿಪ್ರಾಯಗಳನ್ನು ಕೇಳಿಸಿಕೊಂಡ ಮೇಲೆ, ಮೋದಿ ಬಹಳ ವಿವರವಾಗಿ ಮಾತಾಡಿ, ಗೋಧ್ರಾ ಮತ್ತು ಗೋಧ್ರೋತ್ತರ ಗಲಭೆಗೆ ಸಂಬಂಧಿಸಿದ ವಿದ್ಯಮಾನಗಳನ್ನು ಕ್ರಮಾನುಗತವಾಗಿ ಬಹಳ ಬಹಳ ದೀರ್ಘವಾಗಿ ವಿವರಿಸಿದರು. ಗುಜರಾತಿನಲ್ಲಿ ಕೋಮು ಗಲಭೆಗಳಿಗಿರುವ ಹಿನ್ನೆಲೆಯನ್ನೂ ವಿವರಿಸಿದ ಅವರು, ಹಿಂದೆಲ್ಲ ರಾಜ್ಯದಲ್ಲಿ ಗಲಭೆಗಳು ಹೇಗೆ ಪದೇಪದೇ ಮರುಕಳಿಸಿ ಅಹ್ಮದಾಬಾದ್ ಮತ್ತು ಇತರ ನಗರಗಳನ್ನು ವಾರಗಟ್ಟಲೆ, ಕೆಲವೊಮ್ಮೆ ತಿಂಗಳುಗಟ್ಟಲೆ ದುರ್ಬಲಗೊಳಿಸಿಬಿಡುತ್ತಿದ್ದವು ಎಂಬುದನ್ನು ತಿಳಿಸಿದರು. "ಹಾಗಿದ್ದರೂ, ಸರ್ಕಾರದ ಮುಖ್ಯಸ್ಥನಾಗಿ ನಾನು ನನ್ನ ರಾಜ್ಯದಲ್ಲಿ ಏನು ನಡೆದಿದೆಯೋ ಅದರ ಹೊಣೆ ಹೊರುತ್ತೇನೆ. ನಾನು ನನ್ನ ರಾಜಿನಾಮೆ ಕೊಡುವುದಕ್ಕೆ ಸಿದ್ಧವಾಗಿದ್ದೇನೆ," ಎನ್ನುತ್ತ ತಮ್ಮ ಭಾಷಣವನ್ನು ಮುಗಿಸಿದರು.

ಮೋದಿ ಈ ಮಾತನ್ನು ಹೇಳಿದಾಕ್ಷಣ ಪಕ್ಷದ ಉನ್ನತ ತೀರ್ಮಾನರೂಪಣೆಯ ಅಂಗದ ನೂರಾರು ಸದಸ್ಯರು ಮತ್ತು ವಿಶೇಷ ಆಹ್ವಾನಿತರು, "ರಾಜಿನಾಮೆ ಕೊಡಬೇಡಿ, ರಾಜಿನಾಮೆ ಕೊಡಬೇಡಿ," ಎಂದು ಕೂಗುತ್ತಿದ್ದುದು ಇಡೀ ಸಭಾಂಗಣದಲ್ಲಿ ಅನುರಣಿಸಲಾರಂಭಿಸಿತು. ನಂತರ ನಾನು ಈ ವಿಷಯದ ಮೇಲೆ ಪಕ್ಷದ ಹಿರಿಯ ನಾಯಕರ ಅಭಿಪ್ರಾಯಗಳನ್ನು ಪ್ರತ್ಯೇಕವಾಗಿ ಕೇಳಿ ತಿಳಿದುಕೊಂಡೆ. ಯಾವುದೇ ಅಪವಾದವಿಲ್ಲದಂತೆ ಪ್ರತಿಯೊಬ್ಬರೂ, "ಇಲ್ಲ, ಅವರು ರಾಜಿನಾಮೆ ಕೊಡಕೂಡದು," ಎಂದು ಗಟ್ಟಿಯಾಗಿ ಪ್ರತಿಪಾದಿಸಿದರು. ಪ್ರಮೋದ್ ಮಹಾಜನ್ ಥರದ ನಾಯಕರಂತೂ, "ರಾಜಿನಾಮೆಯ ಪ್ರಶ್ನೆಯೇ ಉದ್ಭವಿಸುವುದಿಲ್ಲ," ಎಂದು ದೃಢವಾಗಿ ಹೇಳಿದರು.

ಭಾರತೀಯ ಸಮಾಜ ಮತ್ತು ರಾಜಕೀಯದಲ್ಲಿ ಬಿರುಕನ್ನು ಮೂಡಿಸಿದ್ದ ಈ ವಿಷಯದ ಮೇಲೆ ಪಕ್ಷದೊಳಗೆ ಶುರುವಾಗಿದ್ದ ಚರ್ಚೆ ಈ ರೀತಿಯಲ್ಲಿ ಕೊನೆಯಾಯಿತು. ಗೋವಾದಲ್ಲಿ ಪಕ್ಷ ತೆಗೆದುಕೊಂಡಿದ್ದ ತೀರ್ಮಾನ ದೇಶದಲ್ಲಿ ಹಲವರಿಗೆ ಹಿಡಿಸಲಿಲ್ಲವಾದರೂ ಅದು ಸಮಾಜದ ಬಹುತೇಕ ಜನರ ಬಯಕೆಗೆ ಅನುಗುಣವಾಗಿತ್ತು. ಗುಜರಾತಿನಲ್ಲೂ ಈ ತೀರ್ಮಾನಕ್ಕೆ ಅದ್ಭುತ ಮನ್ನಣೆ ಸಿಕ್ಕಿತು.

ಮತ್ತೆ ಬೆಳಗಾಗುತ್ತದೆ

"ನೆನಪು ಎಂಬುದು ನಮ್ಮೊಂದಿಗೆ ನಾವು ಸದಾ ಹೊತ್ತೊಯ್ಯುವ ದಿನಚರಿ," ಎಂದು ಆಸ್ಕರ್ ವೈಲ್ಡ್ ಹೇಳುತ್ತಾರೆ. ನಾನು ನನ್ನ ಈ 'ದಿನಚರಿ'ಯಲ್ಲಿ ನಮೂದಿಸಿರುವ ಅಟಲ್‍ಜಿ ಕುರಿತ ಟಿಪ್ಪಣಿಗಳನ್ನು ಮೆಲುಕು ಹಾಕಿದಾಗ ನಾವಿಬ್ಬರೂ ಬೇರೆ ಬೇರೆಯಾಗಿ ಚಲಿಸಿದ ಕ್ಷಣಗಳಿಗಿಂತಲೂ ನಾವಿಬ್ಬರೂ ಪರಸ್ಪರ ಒಂದುಗೂಡಿ ಚಲಿಸಿದ ಘಟನೆಗಳೇ ಹೆಚ್ಚಾಗಿರುವುದನ್ನು ನಾನು ಕಂಡಿದ್ದೇನೆ; ನಾವು ವಿಫಲರಾಗಿದ್ದಕ್ಕಿಂತ ಹೆಚ್ಚಾಗಿ ಜೊತೆಗೂಡಿ ಸಫಲರಾಗಿದ್ದು ಹೆಚ್ಚು ಖುಷಿ ಕೊಟ್ಟಿದೆ. ನಾವು ಸಫಲರಾಗದಿದ್ದಾಗ ನಿರಾಶೆ ನಮ್ಮನ್ನು ಎದೆಗುಂದಿಸುವುದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಹತಾಶೆಯ ಮೇಲೆ ಭರವಸೆ ಗೆಲುವು ಸಾಧಿಸಿದಾಗ, ಕತ್ತಲನ್ನು ಬೆಳಕು ಹೊಡೆದೋಡಿಸಿದಾಗ ಹಾಗೂ ಪ್ರತಿಯೊಂದು ಪ್ರತಿಕೂಲ ರಾತ್ರಿಯ ನಂತರವೂ ಸದಾವಕಾಶದ ಬೆಳಕು ಹರಿದಾಗ ನಾವು ಅನುಭವಿಸಿದ ಅತೀವ ಸಂತಸದ ಅವಿಸ್ಮರಣೀಯ ಕ್ಷಣಗಳನ್ನು ನಮ್ಮ ಹೃದಯದಲ್ಲಿ ಬೆಚ್ಚಗಿಟ್ಟು ಕಾಪಾಡಿಕೊಳ್ಳುವುದೇ ಬದುಕು ಎಂದು ನನಗನ್ನಿಸುತ್ತದೆ. ಪಕ್ಷದ ಸುದೀರ್ಘ ಪಯಣದಲ್ಲಿ ಕಷ್ಟಕರ ತಿರುವುಗಳು ಬಂದಾಗ ಅಟಲ್‍ಜಿಯವರು ಭರವಸೆ ನೀಡಿ ದಿಕ್ಕು ತೋರಿಸುತ್ತಿದ್ದರು. ಈ ಪಯಣದುದ್ದಕ್ಕೂ ನಾನು ಅವರ ಸಹಯಾತ್ರಿ ಆಗಿದ್ದಕ್ಕೆ ಖುಷಿಪಡುತ್ತೇನೆ.

ಅಟಲ್‍ಜಿಯವರು ತಮ್ಮ ಕಾವ್ಯಾತ್ಮಕ ಆತ್ಮದಿಂದ ಹೊರಹೊಮ್ಮಿದ ವಿನಯ ಮತ್ತು ಸೂಕ್ಷ್ಮತೆಗಳೆಂಬ ವಿರಳ ಗುಣಗಳನ್ನು ಮೈಗೂಡಿಸಿಕೊಂಡಿದ್ದ ರಾಜನೀತಿಜ್ಞರಾಗಿದ್ದರು ಎಂಬುದು ಅವರೊಂದಿಗೆ ನಿಕಟವಾಗಿ ಒಡನಾಡಿದವರಿಗೆ ಗೊತ್ತಿರುತ್ತದೆ. ಅವರ ಕಾವ್ಯವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ ಅವರ ರಾಜಕೀಯ ವ್ಯಕ್ತಿತ್ವವನ್ನು ಅರ್ಥಮಾಡಿಕೊಳ್ಳುವುದಕ್ಕೆ ಆಗುವುದಿಲ್ಲ. ಅವರನ್ನು ಮೆಚ್ಚಿಕೊಳ್ಳುವ ಎಲ್ಲರಂತೆ ನಾನೂ ಅವರ ಕವಿತೆಗಳಿಂದ ಪ್ರಭಾವಿತನಾಗಿದ್ದೇನೆ; ಅದರಲ್ಲೂ ವಿಶೇಷವಾಗಿ ಪಕ್ಷದ ಸಮ್ಮೇಳನಗಳಲ್ಲಿ ಮತ್ತು ಸಾರ್ವಜನಿಕ ಸಮಾರಂಭಗಳಲ್ಲಿ ಅವರೇ ತಮ್ಮ ಕವಿತೆಗಳನ್ನು ವಾಚಿಸಿದಾಗ ಅದಕ್ಕೆ ಮಾರುಹೋಗಿದ್ದೇನೆ. ಉದಾಹರಣೆಗೆ, ತುರ್ತುಪರಿಸ್ಥಿತಿಯ ಸಮಯದಲ್ಲಿ ಅವರು ಬರೆದ ಒಂದು ಕವಿತೆಂಯನ್ನು ದೀನನಾಥ ಮಿಶ್ರಾ ಅವರು 'ಜನವಾಣಿ' ಎಂಬ ಭೂಗತ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಈ ಕವಿತೆಯು ಆ ಸಮಯದ ಮನಸ್ಥಿತಿಯನ್ನು ಹಿಡಿದಿಟ್ಟಿದ್ದು ಮಾತ್ರವಲ್ಲ, ನಂತರದಲ್ಲೂ ಪ್ರಜಾತಂತ್ರ ಪ್ರೇಮಿಗಳನ್ನು ಹುರಿದುಂಬಿಸುತ್ತಲೇ ಇತ್ತು.

ಅಧಿಕಾರದೊಂದಿಗೆ ಸತ್ಯದ ಸಂಘರ್ಷ, ನಿರಂಕುಶದೆದುರು ನ್ಯಾಯದ ಹೋರಾಟ

ಅಂತಿಮ ಕಿರಣ ಅಸ್ತಂಗತವಾದಾಗ ಅಂಧಕಾರ ಸವಾಲೊಡ್ಡುತ್ತದೆ

ಎಲ್ಲನ್ನೂ ಅಪಾಯಕ್ಕೊಡ್ಡಿದ್ದೇವೆ, ಈಗ ಸುಮ್ಮನಾಗಲು ಆಗುವುದಿಲ್ಲ

ಮುರಿದು ಬೀಳುತ್ತೇವೆ, ಆದರೆ ತಲೆಬಾಗುವುದಿಲ್ಲ

ಅಟಲ್‍ಜಿಯವರು ಹತ್ತನೇ ತರಗತಿ ಓದುತ್ತಿದ್ದಾಗ ಬರೆದ ಒಂದು ಕವಿತೆಯು, ಆ ಸಣ್ಣ ವಯಸ್ಸಿನಲ್ಲೇ ಅವರಲ್ಲಿದ್ದ ಪ್ರಬಲ ರಾಷ್ಟ್ರವಾದಿ ಬದ್ಧತೆಗಳಿಗೆ ಕನ್ನಡಿ ಹಿಡಿದಂತಿದೆ. ದೇಶಭಕ್ತಿ ಮತ್ತು ಹಿಂದೂ ಹೆಮ್ಮೆಯ ಬಗ್ಗೆ ಈ ಕೆಳಗಿನ ಸಾಲುಗಳಲ್ಲಿ ಕಾಣುವಂತಹ ಬಲವಾದ ಕಾವ್ಯಾತ್ಮಕ ಅಭಿವ್ಯಕ್ತಿಯನ್ನು ನಾನು ಇಲ್ಲಿತನಕ ಬೇರಾವ ಕವಿತೆಯಲ್ಲೂ ಕಂಡಿಲ್ಲ:

ನಾನೆಲ್ಲಿ ಹೇಳಿದೆ, ಸ್ವತಂತ್ರನಾದ ಮೇಲೆ ಜಗತ್ತನ್ನು ಗುಲಾಮನನ್ನಾಗಿ ಮಾಡುವೆ ಎಂದು?

ನಾನು ಯಾವಾಗಲೂ ಹೇಳಿದ್ದು ಮನಸ್ಸನ್ನು ಗುಲಾಮನನ್ನಾಗಿ ಮಾಡಿಕೊ ಎಂದು.

ನಾನೆಲ್ಲಿ ಅತ್ಯಾಚಾರ ಮಾಡಿದೆ, ಗೋಪಾಲ-ರಾಮನ ಹೆಸರಿನಲ್ಲಿ?

ನಾನೆಲ್ಲಿ ಮನೆಮನೆಯಲ್ಲಿ ನರಸಂಹಾರ ಮಾಡಿದೆ, ವಿಶ್ವವನ್ನು ಹಿಂದೂಕರಣ ಮಾಡುವುದಕ್ಕೆ?

ಯಾರಾದ್ರೂ ಹೇಳುತ್ತೀರಾ, ಕಾಬೂಲ್‍ಗೆ ಹೋಗಿ ಎಷ್ಟು ಮಸೀದಿಗಳನ್ನು ಧ್ವಂಸ ಮಾಡಿದ್ದೇನೆ ಅಂತ?

ನನ್ನ ಧ್ಯೇಯ ಭಯೋತ್ಪಾದಕರನ್ನು ಗೆಲ್ಲುವುದಲ್ಲ, ಲಕ್ಷಾಂತರ ಮಾನವರ ಹೃದಯಗಳನ್ನು ಗೆಲ್ಲುವುದು.

ನನ್ನ ತನು ಹಿಂದೂ, ನನ್ನ ಮನ ಹಿಂದೂ, ನನ್ನ ಬದುಕು ಹಿಂದೂ;

ಅಷ್ಟೇ ಏಕೆ, ನನ್ನ ಒಂದೊಂದು ರಕ್ತನಾಳದ ಗುರುತೂ ಹಿಂದೂ

ನಾನು ಅಸಂಖ್ಯಾತ ಸಂದರ್ಭಗಳಲ್ಲಿ ಅಟಲ್‍ಜಿ ಜೊತೆ ಕಳೆದ ಕ್ಷಣಗಳನ್ನು ತಿರುಗಿ ನೋಡಿದರೆ ಹಾಗೂ ನಾನು ಅವರಿಗೆ ಸಲ್ಲಿಸಬಹುದಾದ ಈ ಅತ್ಯುತ್ತಮ ಗೌರವ ಸಮರ್ಪಣೆಯ ಬಗ್ಗೆ ಯೋಚಿಸಿದರೆ ಬಹಳ ಖುಷಿಯಿಂದ ನನಗೆ ನೆನಪಾಗುವುದು 1959ರಲ್ಲಿ ಅಥವಾ ಅದರ ಆಸುಪಾಸಿನಲ್ಲಿ ನಾವು ಜೊತೆಗೂಡಿ ನೋಡಿದ ಸಿನಿಮಾ. ಹಿಂದಿ ಸಿನಿಮಾಗಳನ್ನು ನೋಡುವುದು ನಮ್ಮಿಬ್ಬರ ಸಾಮಾನ್ಯ ಹವ್ಯಾಸ. 1970ರ ದಶಕದ ತನಕ ಈ ಹವ್ಯಾಸ ನಮ್ಮನ್ನು ದೆಹಲಿಯ ರೀಗಲ್ ಮತ್ತಿತರ ಚಿತ್ರಮಂದಿರಗಳಿಗೆ ಪದೇಪದೇ ಕರೆದುಕೊಂಡು ಹೋಗುತ್ತಿತ್ತು. ಜನಸಂಘದ ನೂರಾರು ಕಾರ್ಯಕರ್ತರೊಂದಿಗೆ ಅಟಲ್‍ಜಿ ಮತ್ತು ನಾನು ದೆಹಲಿ ಮಹಾನಗರ ಪಾಲಿಕೆಯ ಯಾವುದೋ ಒಂದು ಉಪಚುನಾವಣೆಯಲ್ಲಿ ಬಹಳ ಶ್ರಮ ವಹಿಸಿ ಕೆಲಸ ಮಾಡಿದೆವು. ನಮ್ಮ ಅತ್ಯುತ್ತಮ ಪ್ರಯತ್ನಗಳ ನಡುವೆಯೂ ನಮಗೆ ಗೆಲುವು ಸಾಧಿಸಲು ಆಗದಿದ್ದುದು ನಮ್ಮನ್ನು ನಿರಾಶೆಗೆ ದೂಡಿತ್ತು. ಆಗ ಅಟಲ್ ನನ್ನ ಹತ್ತಿರ ಬಂದು, "ನಡೀರಿ, ಯಾವುದಾದರೂ ಸಿನಿಮಾ ನೋಡಲು ಹೋಗೋಣ," ಎಂದರು. ನಾವಿಬ್ಬರೂ ಪಹಾಡ್‌ಗಂಜ್‌ನ ಇಂಪೀರಿಯಲ್ ಚಿತ್ರಮಂದಿರಕ್ಕೆ ಹೋಗಿ ಆಗ ಅಭಿನಯದಲ್ಲಿ ದಂತಕತೆಯಾಗಿದ್ದ ರಾಜ್ ಕಪೂರ್ ಅವರ ಸಿನಿಮಾ ನೋಡಿದೆವು.

ದಾಸ್ತೋವೋಸ್ಕಿಯ ಪ್ರಸಿದ್ಧ ‘ಕ್ರೈಮ್ ಅಂಡ್ ಪನಿಷ್‍ಮೆಂಟ್’ ಕಾದಂಬರಿನ್ನು ಆಧರಿಸಿ ರೂಪಿಸಲಾಗಿದ್ದ ಈ ಸಿನಿಮಾದ ಕತೆಯು ಭಾರತ ಸ್ವಾತಂತ್ರ್ಯಾನಂತರದ ಅವಧಿಯದ್ದು. ಜನರಿಗೆ ಆಗುತ್ತಿರುವ ಅನ್ಯಾಯ ಹಾಗೂ ನೆಹರು ಯುಗ ನೀಡಿದ ಭರವಸೆಗಳನ್ನು ಈಡೇರದಿದ್ದುದರಿಂದ ಜನರಲ್ಲಿ ಉಂಟಾದ ಭ್ರಮನಿರಸನವನ್ನು ಈ ಸಿನಿಮಾ ತೋರಿಸುತ್ತದೆ. ಇದರ ಜೊತೆಗೆ, ಸ್ವಲ್ಪ ತಾಳ್ಮೆ ಇರಬೇಕು, ಬರಲಿರುವ 'ಹೊಸ ಮುಂಜಾನೆ'ಗಾಗಿನ ಭರವಸೆಯನ್ನು ಕಳೆದುಕೊಳ್ಳಬಾರದು ಎಂಬ ಸಂದೇಶವನ್ನೂ ಆ ಸಿನಿಮಾ ಕೊನೆಯಲ್ಲಿ ಕೊಡುತ್ತದೆ. ಚುನಾವಣೆಯಲ್ಲಿ ಸೋತು ಹತಾಶ ಮನಸ್ಥಿತಿಯಲ್ಲಿದ್ದ ಅಟಲ್‍ಜೀಗೂ, ನನಗೂ ಸೂಕ್ತವಾಗಿ ಹೊಂದಿಕೆಯಾಗಿದ್ದ ಈ ಸಿನಿಮಾದ ಆಶಾವಾದಿ ಸಂದೇಶವನ್ನು ಅದರ 'ಫಿರ್ ಸುಬಹ್ ಹೋಗಿ' (ಮತ್ತೆ ಬೆಳಕು ಹರಿಯುತ್ತದೆ) ಎಂಬ ಶೀರ್ಷಿಕೆಯಲ್ಲಿ ಹಿಡಿದಿಡಲಾಗಿತ್ತು.

ಇದನ್ನೂ ಓದಿ : ನೆಹರು ಸಾವಿಗೆ ಶ್ರದ್ಧಾಂಜಲಿ ಸಲ್ಲಿಸಿ ವಾಜಪೇಯಿ ಆಡಿದ್ದ ಹೃದಯಸ್ಪರ್ಶಿ ಮಾತುಗಳು

ತದನಂತರದ ಹಲವಾರು ವರ್ಷ, ಅದರಲ್ಲೂ ವಿಶೇಷವಾಗಿ, ಪ್ರಮುಖ ಚುನಾವಣಾ ಸೋಲಿನ ನಂತರ, ನಾನು ನನ್ನ ಬದುಕಿನ ಮೂಲನಂಬಿಕೆ ಆಗಿಬಿಟ್ಟಿರುವ ‘ಇದೂ ಕೂಡ ಹೋಗಲೇಬೇಕು’ ಎಂಬ ಆಶಾವಾದವನ್ನು ಒತ್ತಿಹೇಳುವುದಕ್ಕೆ ಈ ಘಟನೆಯನ್ನು ಹೇಳುತ್ತಿರುತ್ತೇನೆ. 2004ರಲ್ಲಿ ನಮ್ಮ ಪಕ್ಷದ ಅನಿರೀಕ್ಷಿತ ಸೋಲು ಅಂತಹ ಸಂದರ್ಭಗಳಲ್ಲಿ ಒಂದು. ಸೋಲಿನ ಕತ್ತಲು ಮುಂದಿನ ಸಂಸದೀಯ ಚುನಾವಣೆಗಳಲ್ಲಿ ನಮ್ಮ ಪಕ್ಷದ ಹೊಸ ಬೆಳಗಿಗೆ, ಭಾರತದ ಅಮೋಘ ಐಕ್ಯತೆ, ಭದ್ರತೆ, ಪ್ರಜಾತಂತ್ರ ಮತ್ತು ಅಭಿವೃದ್ಧಿಗೆ ಕಾರಣವಾಗುವಂತಹ ದಿಗ್ವಿಜಯಕ್ಕೆ ಹಾದಿ ಮಾಡಿಕೊಡುತ್ತದೆ ಎಂದು ನಾನು ಬಲವಾಗಿ ನಂಬಿದ್ದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More