ವಾಜಪೇಯಿ ಕಾಲ: ಪ್ರಧಾನಿ ಮತ್ತವರ ಆಪ್ತರನ್ನು ಗುರಿಯಾಗಿಸಿದರೆ ಒಡೆಯುತ್ತಿತ್ತು ಸಹನೆಯ ಕಟ್ಟೆ!

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿ ವರದಿಗಾರಿಕೆ ಹೇಗಿತ್ತು? ಇಂದಿಗಿಂತಲೂ ವ್ಯವಸ್ಥೆ ಹೆಚ್ಚು ಸುಧಾರಿತವಾಗಿತ್ತು. ಆದರೆ, ಪ್ರಧಾನಿ ಮತ್ತು ಅವರ ಸುತ್ತಲಿದ್ದವರನ್ನು ಗುರಿಯಾಗಿರಿಸಿದರೆ ಮಾತ್ರ ಸಹನೆಯ ಕಟ್ಟೆ ಒಡೆಯುತ್ತಿತ್ತು. ಇದಕ್ಕೆ ಕೆಲವು ನಿದರ್ಶನಗಳು ಇಲ್ಲಿವೆ

ಪ್ರಜಾಪ್ರಭುತ್ವ ಸರ್ಕಾರವೊಂದು ತನ್ನ ಮಾಧ್ಯಮಗಳಿಗೆ ನೀಡಿರುವ ಸ್ವಾತಂತ್ರ್ಯವನ್ನು ಅವಲಂಬಿಸಿ ಅದರ ಆರೋಗ್ಯವನ್ನು ಅಳೆಯಬಹುದು. ನಾನು ವಾಜಪೇಯಿ ಅವರ ಎನ್‌ಡಿಎ ಆಡಳಿತಾವಧಿಯಲ್ಲಿ (1998-2004) ‘ಔಟ್‌ಲುಕ್’ ನಿಯತಕಾಲಿಕೆಯ ಪ್ರಚಲಿತ ವಿದ್ಯಮಾನಗಳ ವಿಭಾಗದ ಮುಖ್ಯಸ್ಥನಾಗಿದ್ದಾಗ, ನರೇಂದ್ರ ಮೋದಿ ಮತ್ತು ವಾಜಪೇಯಿ ಅವರ ನಡುವಿನ ಹೋಲಿಕೆಗಳ ಬಗ್ಗೆ ಬರೆಯುವಂತೆ ಆಗಾಗ ಸೂಚಿಸಲಾಗುತ್ತಿತ್ತು. ಯಾವುದೂ ಕಪ್ಪು-ಬಿಳುಪಿನಿಂದ ಕೂಡಿರದ ಕಾರಣ ಅಂತಹ ಹೋಲಿಕೆ ಸುಲಭ ಸಾಧ್ಯವಾಗಿರಲಿಲ್ಲ. ಇಬ್ಬರೂ ನಾಯಕರ ಕೆಲಸಗಳಲ್ಲಿ ಹೋಲಿಕೆಗಳು ಸಾಕಷ್ಟು ಇರುವಂತೆ ವಿರೋಧಾಭಾಸಗಳೂ ಇರುತ್ತಿದ್ದವು.

ಉದಾಹರಣೆಗೆ, ‘ಲಕ್ಷ್ಮಣ ರೇಖೆ’ಯನ್ನೇ ತೆಗೆದುಕೊಳ್ಳಿ. ವಾಜಪೇಯಿ ಅವರು ನಂಬಿದ್ದರು ಎಂಬ ಕಾರಣಕ್ಕೆ ಮೋದಿಯವರೂ ಇದನ್ನು ನಂಬಿದ್ದಾರೆ. ಆದರೆ, ಮುಖ್ಯ ವ್ಯತ್ಯಾಸವೆಂದರೆ ಹಿಂದಿನವರು ನಿಗದಿಗೊಳಿಸಿದ್ದ ನೈತಿಕ ಚೌಕಟ್ಟು ಈಗಿನ ಆಡಳಿತದಂತೆ ಜಟಿಲವಾಗಿರದೆ ಸುಲಭವಾಗಿತ್ತು. ಆದರೆ, ವಾಜಪೇಯಿ ಅವರು ಪತ್ರಿಕಾ ವಿಮರ್ಶೆಯನ್ನು ಹಗುರವಾಗಿ ಪರಿಗಣಿಸುತ್ತಿದ್ದರು ಅಥವಾ ಅವರು ‘ತಪ್ಪು ವರದಿ’ಗಳ ವಿರುದ್ಧ ರಹಸ್ಯವಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳದಂತೆ ತಮ್ಮ ಸಲಹೆಗಾರರನ್ನು ತಡೆಯುತ್ತಿದ್ದರು ಎನ್ನುವ ಬಿಡುಬೀಸಿನ ಹೇಳಿಕೆ ಸರಿಯಲ್ಲ.

ಹಾಗಾದರೆ, ಮಾಧ್ಯಮಗಳು ಎನ್‌ಡಿಎ-1 ಸರ್ಕಾರದ ಬಗ್ಗೆ ಏನನ್ನು ಬರೆಯುತ್ತಿದ್ದವು? ಪತ್ರಿಕೆಗಳು ಮುಕ್ತವಾಗಿದ್ದವೇ ಅಥವಾ ವಿವೇಚನಾಹೀನ ನಿರ್ಬಂಧಕ್ಕೆ ಒಳಗಾಗಿದ್ದವೇ? ವಾಜಪೇಯಿ ಅವರ ಆಡಳಿತಾವಧಿಯಲ್ಲಿ ವ್ಯವಸ್ಥೆ ಹೆಚ್ಚು ಸಹಿಷ್ಣುವಾಗಿತ್ತು. ಅಸಹಿಷ್ಣುತೆ ಇದ್ದರೂ ಅದೇ ಪ್ರಧಾನಧಾರೆಯಲ್ಲಿ ಇರಲಿಲ್ಲ. ಹಾಗೆಂದು, ಟೀಕಾಕಾರರು ಮುಕ್ತವಾಗಿ ತಮ್ಮ ಆಯುಧ ಝಳಪಿಸಬಹುದಿತ್ತು ಎಂದೇನೂ ಅಲ್ಲ. ಮುಖ್ಯವಾಗಿ, ‘ಬದುಕಿ, ಬದುಕಲು ಬಿಡಿ’ ಎಂಬ, ವಾಜಪೇಯಿಯವರು ಆಗಾಗ ಬಳಸುತ್ತಿದ್ದ ತತ್ವದಡಿ ಅವರು ಉಸಿರಾಡಬಹುದಿತ್ತು. ಆದರೆ, ಭಿನ್ನಾಭಿಪ್ರಾಯ ಹೊಂದಿರುವವರು ವ್ಯವಸ್ಥೆಯ ಭಾಗವಾಗಲು ಅವಕಾಶ ಸಿಗದೆ ಬೆಲೆ ತೆರಬೇಕಾಗುತ್ತಿತ್ತು ಮತ್ತು ಅವರನ್ನು ಅನುಮಾನದಿಂದ ನೋಡಲಾಗುತ್ತಿತ್ತು.

‘ಔಟ್‌ಲುಕ್’ನಲ್ಲಿದ್ದಾಗ ನಾವು ಕೆಲವು ಸಂದರ್ಭಗಳಲ್ಲಿ ಲಕ್ಷ್ಮಣ ರೇಖೆಯನ್ನು ಮೀರಿ ಸಣ್ಣಪುಟ್ಟ ಪೆಟ್ಟು ತಿಂದರೆ, ಮತ್ತೆ ಕೆಲವು ಬಾರಿ ತೀವ್ರವಾಗಿ ಜರ್ಜರಿತರಾಗಿದ್ದುಂಟು. ವಿಪರ್ಯಾಸ ಎಂದರೆ, ವ್ಯವಸ್ಥೆಯ ವಿರುದ್ಧದ ವರದಿಗಳು, ವರದಿಗಾರರು ತೆಗೆದುಕೊಳ್ಳುತ್ತಿದ್ದ ನಿರ್ಧಾರದಿಂದ ಮಾತ್ರವಲ್ಲದೆ ಪತ್ರಕರ್ತರು ಅಧಿಕಾರಶಾಹಿಗಳೊಂದಿಗೆ ಸಂವಹನ ನಡೆಸಲು ಸಮ್ಮತಿ ನೀಡುವ ಪ್ರಜಾಪ್ರಭುತ್ವವಾದಿ ಪರಿಸ್ಥಿತಿಯಿಂದಾಗಿ ಪ್ರಕಟಣೆಯ ಭಾಗ್ಯ ಕಾಣುತ್ತಿದ್ದವು. ಆಗ ವಿಚಕ್ಷಣಾ ದಳದಿಂದ ಎಲ್ಲವನ್ನೂ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿರಲಿಲ್ಲ ಅಥವಾ ಪತ್ರಕರ್ತರು ಯಾರನ್ನು ಸಂಪರ್ಕಿಸುತ್ತಾರೆ ಎಂದು ಖುದ್ದು ಗಮನಿಸುವ ಸ್ಥಿತಿ ನಿರ್ಮಾಣ ಆಗಿರಲಿಲ್ಲ. ಸರ್ಕಾರದ ನೀತಿ ನಿಜಾಯಿತಿಗಳನ್ನು ಮುಕ್ತವಾಗಿ ಪ್ರಶಂಸಿಸುವ ಮತ್ತು ವಿಮರ್ಶಿಸುವ ಆರೋಗ್ಯಕರ ಅಂತರ ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಮತ್ತು ಅಧಿಕಾರಶಾಹಿ ನಡುವೆ ಇತ್ತು.

‘ಬಿಗ್ ಬ್ರದರ್ ಗಮನಿಸುತ್ತಿದ್ದಾರೆ’ ಎಂದು ಹಿಂದೇಟು ಹಾಕುವ ಸನ್ನಿವೇಶಕ್ಕಿಂತಲೂ ಆಗ ಅಧಿಕಾರಿಗಳು ಸರ್ಕಾರದ ದಿನನಿತ್ಯದ ನೀತಿ ನಿರೂಪಣೆಗಳನ್ನು ಖಾಸಗಿಯಾಗಿ ಪತ್ರಕರ್ತರೊಂದಿಗೆ ಚರ್ಚಿಸುತ್ತಿದ್ದರು. ಈಗ ಪರೋಕ್ಷವಾಗಿ ತಾವು ನೀಡಿದ ಸುದ್ದಿಯು ಪತ್ರಿಕೆ ಅಥವಾ ಸುದ್ದಿವಾಹಿನಿಗಳಲ್ಲಿ ನೇತ್ಯಾತ್ಮಕವಾಗಿ ಪ್ರಸಾರವಾದರೆ ಆಳುವವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ಅವರು ಹಿಂದೇಟು ಹಾಕುತ್ತಿದ್ದಾರೆ. ಅದಕ್ಕಿಂತಲೂ ಹೆಚ್ಚಾಗಿ, ತಮ್ಮ ಹೆಸರನ್ನು ವರದಿಯಲ್ಲಿ ಪತ್ರಕರ್ತರು ಉಲ್ಲೇಖಿಸಿಬಿಡಬಹುದು ಎಂಬ ಭೀತಿಯೂ ಅವರನ್ನು ಕಾಡುತ್ತಿದೆ. ಪರಿಣಾಮ, ಸರ್ಕಾರಿ ನೀತಿಯ ದೋಷಗಳು ಸಾರ್ವಜನಿಕ ಸಂಪರ್ಕದ ಹೊದಿಕೆಯಲ್ಲಿ ಮುಚ್ಚಿಹೋಗುತ್ತಿವೆ. ಮುಕ್ತ ಜಾಲತಾಣಗಳಲ್ಲಿ ಅವು ಪ್ರಕಟವಾಗದೆ ಹೋದರೆ ಅಂತಹ ಅಪಥ್ಯ ಸತ್ಯಗಳು ಬೆಳಕಿಗೆ ಬಾರದ ಸ್ಥಿತಿ ಇದೆ.

ವಾಜಪೇಯಿ ಅವರ ಅವಧಿಯಲ್ಲಿ ಅಧಿಕಾರಿಗಳು ಮಾತ್ರವಲ್ಲದೆ ಸಚಿವರು ಸಹ ಅನಧಿಕೃತವಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುತ್ತಿದ್ದರು. ಇಂತಹ ಮಾತುಕತೆಗಳು ಸದಾ ಸರ್ಕಾರವನ್ನು ಹೊಗಳಲು ಸೀಮಿತ ಆಗಿರುತ್ತಿರಲಿಲ್ಲ. ಕೆಲವು ಪಟ್ಟಭದ್ರ ಹಿತಾಸಕ್ತಿಗಳ ಪರವಾಗಿ ನಿರ್ಧಾರ ತೆಗೆದುಕೊಂಡಾಗ ವಿಮರ್ಶಾತ್ಮಕ ಚರ್ಚೆ ನಡೆಯುತ್ತಿತ್ತು. ಅಂತೆಯೇ, ಬಿಜೆಪಿಯ ಸಂಸದರು ಮತ್ತು ಮೈತ್ರಿಕೂಟದ ಸದಸ್ಯರು ಮುಕ್ತವಾಗಿ ಪತ್ರಕರ್ತರನ್ನು ಭೇಟಿಯಾಗಲು ತಮ್ಮ ಕಾಳಜಿ ವ್ಯಕ್ತಪಡಿಸಲು ಅವಕಾಶವಿತ್ತು. ಆದರೆ, ಇಂತಹ ಸಭೆಗಳು ಇಂದು ಅಪರೂಪ. ‘ಮೌನ ಸಂಹಿತೆ’ಯನ್ನು ಉಲ್ಲಂಘಿಸುವ ಮಂತ್ರಿ ಅಥವಾ ಸಂಸತ್ ಸದಸ್ಯರು ಬಂಡೆದ್ದವರು ಎಂದು ಪರಿಗಣಿಸಿ ಮೂಲೆಗುಂಪಾಗಿಸುವ ಸ್ಥಿತಿ ನಿರ್ಮಾಣವಾಗಿದೆ.

ಎನ್‌ಡಿಎ-1 ಸರ್ಕಾರವನ್ನು ವಿಮರ್ಶಿಸಿ ‘ಔಟ್‌ಲುಕ್’ ಅನೇಕ ಸುದ್ದಿಗಳನ್ನು ಪ್ರಕಟಿಸಿತು. ಪೋಖ್ರಾನ್ ಪರಮಾಣು ಪರೀಕ್ಷೆಯ ವಿರುದ್ಧ ದಾಳಿ ಮಾಡಿದೆವು; ಆರೆಸ್ಸೆಸ್‌ನ ಹೆಚ್ಚುವರಿ ಸಂವಿಧಾನಾಧಿಕಾರವನ್ನು ಪ್ರಶ್ನಿಸಿದೆವು; ಹೂಡಿಕೆ, ಕೃಷಿ ಹಾಗೂ ಸಮಾಜ ಕಲ್ಯಾಣ ನೀತಿಗಳಲ್ಲಿದ್ದ ಅಂತರವನ್ನು ಬಹಿರಂಗಪಡಿಸಿದೆವು. ಕಾರ್ಗಿಲ್ ಯುದ್ಧದ ಬಗೆಗೆ ಒಂದು ಸರಣಿಯನ್ನೇ ನಾವು ಮಾಡಿದ್ದು, ಅದು ಸೇನೆ ಮತ್ತು ರಕ್ಷಣಾ ವ್ಯವಸ್ಥೆಯ ಬಣ್ಣ ಬಯಲು ಮಾಡಿದೆ. ಶತ್ರುಗಳ ದಾಳಿಯ ಭೀತಿಯನ್ನು ನಿರ್ಲಕ್ಷಿಸಿ ಗಡಿ ನಿಯಂತ್ರಣಾ ರೇಖೆಯುದ್ದಕ್ಕೂ ಸಂಚರಿಸಿ ವರದಿ ಪ್ರಕಟ ಮಾಡಿದ್ದೇವೆ.

ಸೇನೆಯ ಉನ್ನತಾಧಿಕಾರಿಗಳು ಯುದ್ಧವನ್ನು ತಪ್ಪಿಸಲು ಶ್ರಮಿಸಲಿಲ್ಲ ಎಂಬುದು ‘ಔಟ್‌ಲುಕ್’ ವಿಶ್ಲೇಷಣೆಯಾಗಿತ್ತು. 1998ರಲ್ಲಿ ಭಾರತ ಮತ್ತು ಪಾಕಿಸ್ತಾನ ಪರಮಾಣು ಸಮಾನತೆ ಸಾಧಿಸಿದಾಗಿನಿಂದ ಸಾಂಪ್ರದಾಯಿಕ ಮಾತುಕತೆ ಸಾಧ್ಯವಾಗುವುದಿಲ್ಲ ಎಂದೂ ಹೇಳಲಾಯಿತು. ವಾಜಪೇಯಿ ಲಾಹೋರ್‌ಗೆ ಬಸ್ ಸಂಚಾರಕ್ಕೆ ಅನುವು ಮಾಡಿಕೊಟ್ಟ ಬಳಿಕ ಸುರಕ್ಷತೆಯ ವಾತಾವರಣ ನಿರ್ಮಾಣವಾಗಿತ್ತು. ಅದಾದ ಕೆಲವೇ ತಿಂಗಳಲ್ಲೇ ಕಾರ್ಗಿಲ್ ಯುದ್ಧ ಸಂಭವಿಸಿತು.

‘ವಿಜಯ್ ಕಾರ್ಯಾಚರಣೆ’ಯ ಪರಾಮರ್ಶೆಗಾಗಿ ನಾವು ದ್ರಾಸ್-ಕಾರ್ಗಿಲ್ ವಲಯದ ಸೇನಾಧಿಕಾರಿಗಳನ್ನು ಭೇಟಿಯಾದೆವು. ನಮ್ಮ ಪ್ರವೇಶವನ್ನು ಯಾರೂ ನಿರಾಕರಿಸಲಿಲ್ಲ. ನಂತರ ಪ್ರಕಟವಾದ ಸುದ್ದಿಗಳು ರಕ್ಷಣಾ ವ್ಯವಸ್ಥೆಯನ್ನು ಪ್ರಶ್ನಿಸುವಂತಿದ್ದವು, ಅತೃಪ್ತಿಗೆ ಕಾರಣ ಒದಗಿಸುತ್ತಿದ್ದವು. ಹಿಮ ಹೆಪ್ಪುಗಟ್ಟುವ ಡಿಸೆಂಬರ್ ತಿಂಗಳ ಹೊತ್ತಿಗೆ ಸೇನೆಯು ಸಂಪಾದಕರಿಗೆ ಸಮನ್ಸ್ ನೀಡಿ ಅಧಿಕೃತ ಗೌಪ್ಯತಾ ಕಾಯ್ದೆಯಡಿ ನ್ಯಾಯಾಂಗ ವಿಚಾರಣೆಗೆ ನಿರ್ಧರಿಸಿತು. ಸ್ವಲ್ಪ ದಿನಗಳ ಬಳಿಕ ಅದನ್ನು ಕೈಬಿಟ್ಟಿತು. ಇಷ್ಟಾದರೂ ಪ್ರಧಾನಿ ಕಚೇರಿ ಸುಮ್ಮನಿರಲಿಲ್ಲ. ಸರ್ಕಾರ ಅತೃಪ್ತಗೊಳ್ಳುವಂಥ ಎಲ್ಲ ಅಂಶಗಳು ನಮ್ಮ ವರದಿಯಲ್ಲಿವೆ, ಆದರೆ ಅದು ಸತ್ಯಾಂಶದಿಂದ ಕೂಡಿದೆ ಎಂಬುದು ಪ್ರಧಾನಿ ಕಚೇರಿಗೆ ಮನವರಿಕೆಯಾಗಿತ್ತು. ಇದನ್ನು ತಮ್ಮ ಕೆಲವು ಮೂಲಗಳಿಂದ ನಮ್ಮ ಸಂಪಾದಕರಾಗಿದ್ದ ವಿನೋದ್ ಮೆಹ್ತಾ ಕಂಡುಕೊಂಡರು. ಆನಂತರ ಹೊರಬಿದ್ದ ಕಾರ್ಗಿಲ್ ಕುರಿತ ಅಧಿಕೃತ ಪರಾಮರ್ಶೆ ಭಾರತ ಸೇನೆ ಪಾಕಿಸ್ತಾನದ ಒಳನುಸುಳುಕೋರರನ್ನು ತಡೆಯಲು ಸನ್ನದ್ಧ ಸ್ಥಿತಿಯಲ್ಲಿರಲಿಲ್ಲ ಎಂದು ಹೇಳಿ ಸೇನೆಗೆ ಅಚ್ಚರಿ ಉಂಟುಮಾಡಿತು.

ಸುದ್ದಿಯು ವಾಜಪೇಯಿ ಅವರಿಗೆ ಅತೃಪ್ತಿ ತಂದಿತು; ಅಷ್ಟೇ ಅಲ್ಲ, ಅವರು ಕೈಗೊಂಡ ಪ್ರತೀಕಾರದ ಕ್ರಮ ಪ್ರಧಾನಿ ಕಚೇರಿಯ ದ್ವಿಮುಖ ನೀತಿಗೆ ಸಾಕ್ಷಿಯಾಯಿತು. ಪ್ರಧಾನಿ ಕಚೇರಿಯನ್ನು ನಿಯಂತ್ರಿಸುತ್ತಿದ್ದ ಬ್ರಜೇಶ್ ಮಿಶ್ರಾ, ಎನ್ ಕೆ ಸಿಂಗ್, ಹಾಗೂ ರಂಜನ್ ಭಟ್ಟಾಚಾರ್ಯ ಅವರ ಕಣ್ಣಿಗೆ ‘ಔಟ್‌ಲುಕ್’ ಬಿತ್ತು. ಇದರಲ್ಲಿ ಮೊದಲನೆಯವರು ಮಾಜಿ ರಾಜತಾಂತ್ರಿಕ ಅಧಿಕಾರಿ ಮತ್ತು ವಾಜಪೇಯಿ ಪರಮಾಪ್ತರು. ಎರಡನೆಯವರು ಮಿಶ್ರಾ ರೂಪಿಸಿದ ಗೌರವಾನ್ವಿತ ಅಧಿಕಾರಿಯಾಗಿದ್ದರು. ಮೂರನೆಯವರು ಯಾವುದೇ ಅಧಿಕಾರವಿರದಿದ್ದರೂ ಭಾರಿ ಪ್ರಭಾವಶಾಲಿ ಆಗಿದ್ದವರು ಹಾಗೂ ವಾಜಪೇಯಿ ಅವರ ಅಳಿಯ ಎಂದೇ ಕರೆಸಿಕೊಳ್ಳುತ್ತಿದ್ದವರಾಗಿದ್ದರು.

ತಮ್ಮ ನಿವೃತ್ತಿಗೂ ಮೊದಲು ‘ಔಟ್‌ಲುಕ್’ಗೆ ಸಂದರ್ಶನ ನೀಡಿದ ಆಯವ್ಯಯ ಕಾರ್ಯದರ್ಶಿ ಇಎಎಸ್ ಶರ್ಮಾ ಅವರ ಪ್ರಕಾರ, ಕ್ಯಾಬಿನೆಟ್ ಸಮ್ಮತಿಯನ್ನೂ ಪಡೆಯದೆ ಪ್ರಧಾನಿ ಕಚೇರಿ ಅಂಗೀಕರಿಸಿದ ವಿವಿಧ ನೀತಿಗಳು, ಯೋಜನೆಗಳು ಹಾಗೂ ಪರವಾನಗಿಗಳ ಮೇಲೆ ಈ ಮೂವರೂ ಪ್ರಭಾವ ಬೀರುತ್ತಿದ್ದರು! ಇಂತಹ ನಿರ್ಧಾರಗಳಿಂದಾಗಿ ಕೆಲವೊಮ್ಮೆ ಹಿಂದುಜಾ, ರಿಲಯನ್ಸ್‌ನಂತಹ ಖಾಸಗಿ ಕಂಪನಿಗಳು ಲಾಭ ಮಾಡಿಕೊಂಡದ್ದೂ ಇದೆ.

2001ರ ಮಾ.5ರಂದು ಪರಿಸ್ಥಿತಿ ಬಿಗಡಾಯಿಸಿತು. ವಿಷಯವನ್ನು ಚರ್ಚಿಸಲು ನಂಬರ್ 7 ರೇಸ್‌ಕೋರ್ಸ್ ರಸ್ತೆಯಿಂದ ಬುಲಾವ್ ಬಂತು. ನಂತರ ಇದನ್ನು ಮೆಹ್ತಾ ತಮ್ಮ ಆತ್ಮಕತೆ ‘ಲಖನೌ ಬಾಯ್’ನಲ್ಲಿ ಹಂಚಿಕೊಂಡಿದ್ದಾರೆ: “ವಾಜಪೇಯಿ ಚಹಾ ಔತಣಕೂಟ ಏರ್ಪಡಿಸಿ ನನ್ನನ್ನು ಮನೆಗೆ ಆಹ್ವಾನಿಸಿದ್ದರು. ಅದು ಸಂತೋಷದಾಯಕವಾದ ಸಭೆಯಾಗಿರಲಿಲ್ಲ. ಅಗತ್ಯವಿದ್ದರೆ ಬಾಗಿಲು ತೋರಿಸಬಹುದಾಗಿತ್ತಾದರೂ ಎನ್ ಕೆ ಸಿಂಗ್ ಮತ್ತು ವಾಜಪೇಯಿ ಹಾಗೆ ಮಾಡಲಿಲ್ಲ. ಬ್ರಜೇಶ್ ಮತ್ತು ರಂಜನ್ ಅವರದು ಬೇರೆಯದೇ ಕತೆ. ನಾನು ತಪ್ಪು ಮಾಡಿದ್ದೇನೆಂದು ವಾಜಪೇಯಿ ಮೆದುವಾಗಿ ಬೈದರು. ಅಷ್ಟೇ ಅಲ್ಲ, ಅವರಿಬ್ಬರೂ ಹಿಮದಷ್ಟು ಪರಿಶುದ್ಧ ಎಂದರು.” ನಂತರ ಕಚೇರಿಗೆ ಬಂದ ವಿನೋದ್, “ಪ್ರಧಾನಿ ಲಕ್ಷ್ಮಣ ರೇಖೆ ಎಳೆದಿದ್ದಾರೆ. ಆದರೆ, ಅದರ ನಡುವೆ ತಮ್ಮಿಂದ ತಪ್ಪಾಗಿರುವುದನ್ನು ಒಪ್ಪಿಕೊಂಡಿದ್ದಾರೆ,” ಎಂದು ನನಗೆ ಹೇಳಿದರು. ಬಳಿಕ ಇನ್ನಷ್ಟು ವರದಿಗಳನ್ನು ಪ್ರಕಟಿಸಲು ಮುಂದಾಗಿ ಎಂದು ಸೂಚಿಸಿದರು.

ಹಾಗಾಗಿ, ನಾನು ಮತ್ತು ನನ್ನ ಸಹೋದ್ಯೋಗಿ ಮುರಳಿ ಕೃಷ್ಣನ್, ‘PM's Achilles Heel’ ಕವರ್ ಸ್ಟೋರಿಗೆ ಅಂತಿಮ ಸ್ಪರ್ಶ ನೀಡಲು ಮುಂದಾದೆವು. ಆ ಮೂಲಕ ಮೂವರ ಬಗ್ಗೆಯೂ ವರದಿಯಲ್ಲಿ ಪ್ರಸ್ತಾಪಿಸಲಾಯಿತಾದರೂ ರಂಜನ್ ಭಟ್ಟಾಚಾರ್ಯ ಬಗ್ಗೆ ಹೆಚ್ಚು ಗಮನ ಕೇಂದ್ರೀಕರಿಸಲಾಗಿತ್ತು. ವಾಜಪೇಯಿ ಮತ್ತೊಮ್ಮೆ ಅಸಮಾಧಾನಗೊಂಡಿದ್ದರು; ಏಕೆಂದರೆ, ಚಹಾ ಚರ್ಚೆ ವೇಳೆ ಅವರು ಹೇಳಿದ್ದ, “ಸರ್ಕಾರವನ್ನು ಬೇಕಾದರೆ ಟೀಕಿಸಿ. ಆದರೆ ನನ್ನನ್ನು ಮತ್ತು ನನ್ನ ಸುತ್ತಲಿನವರ ಮೇಲೆ ದಾಳಿ ಮಾಡಬೇಡಿ," ಎಂಬ ಸಲಹೆಯನ್ನು ವಿನೋದ್ ಮೆಹ್ತಾ ತಿರಸ್ಕರಿಸಿದ್ದರು. ಆಗ ಹಬ್ಬಿದ ವದಂತಿಗಳ ಪ್ರಕಾರ, ನನ್ನ ಸಂಪಾದಕರು ಕೆಲಸ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು ಅಥವಾ ನಾನು ಇಲ್ಲವೇ ಮುರಳಿ ಸ್ಥಾನ ಕಳೆದುಕೊಳ್ಳಲು ಸಿದ್ಧವಾಗಿರಬೇಕಿತ್ತು.

ಮುಖ್ಯವಾಗಿ ‘ಔಟ್‌ಲುಕ್’, ವಾಜಪೇಯಿ ಅವರು ಎಳೆದಿದ್ದ ರೇಖೆಯನ್ನು ಉಲ್ಲಂಘಿಸಿ ಪಾಪ ಎಸಗಿತ್ತು. ಶಿಕ್ಷೆಯ ರೂಪದಲ್ಲಿ ನಿಯತಕಾಲಿಕದ ಮಾಲೀಕರಾದ ರಾಜನ್ ರಹೇಜಾ ಐಟಿ ಇಲಾಖೆಯ ದಾಳಿಗೆ ಗುರಿಯಾದರು. 12 ನಗರಗಳಲ್ಲಿದ್ದ ಅವರ ಕಚೇರಿಗಳ ಮೇಲೆ 700 ಅಧಿಕಾರಿಗಳು ಏಕಕಾಲಕ್ಕೆ ದಾಳಿ ನಡೆಸಿದರು. ಅನೇಕ ವಾರಗಳವರೆಗೆ ಬೆಳಿಗ್ಗೆಯಿಂದ ತಡರಾತ್ರಿವರೆಗೆ ರಹೇಜಾ ಅವರನ್ನು ವಿಚಾರಣೆಗೆ ಒಳಪಡಿಸಲಾಯಿತು. ಶಿಕ್ಷೆಯಂತೆ, ನಿಯತಕಾಲಿಕದ ಮಾಲೀಕರಾದ ರಾಜನ್ ರಹೇಜಾ ಅವರು ಶೀಘ್ರದಲ್ಲೇ ಐಟಿ ಇಲಾಖೆಯ ಗುರಿಯಾಗಿದ್ದರು. ಅವರ ಕಚೇರಿಗಳಿದ್ದ 12 ನಗರಗಳಲ್ಲಿ 700 ಅಧಿಕಾರಿಗಳು ವಾರಗಳವರೆಗೆ ಏಕಕಾಲದಲ್ಲಿ ದಾಳಿ ನಡೆಸಿ, ರಾಹೇಜಾರನ್ನು ತಡರಾತ್ರಿವರೆಗೆ ತನಿಖೆ ನಡೆಸಿದರು. ಮಾಲೀಕರನ್ನು ಬಿಡಿಸಬೇಕೆಂದು ಮತ್ತು ಪತ್ರಿಕೆ ಪ್ರಕಟಿಸಿದ ಲೇಖನಕ್ಕಾಗಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳದಿರಿ ಎಂದು ವಿನೋದ್ ಮೆಹ್ತಾ ವಾಜಪೇಯಿ ಅವರಿಗೆ ಪತ್ರ ಬರೆದ ನಂತರವಷ್ಟೇ ದಾಳಿ ನಿಂತಿತು.

ಇದನ್ನೂ ಓದಿ : ಸಂಕಲನ | ಅಟಲ್‌ ಬಿಹಾರಿ ವಾಜಪೇಯಿ ಕುರಿತ ವಿಡಿಯೋ, ಫೋಟೊ, ಬರಹಗಳು

ಎರಡು ಭಾಗಗಳಲ್ಲಿ ಸುದ್ದಿ ಪ್ರಸಾರ ಮಾಡಿದ್ದಕ್ಕಾಗಿ ‘ಔಟ್‌ಲುಕ್’ ವಿರುದ್ಧ ಯಾವುದೇ ಮೊಕದ್ದಮೆ ದಾಖಲಿಸಲಿಲ್ಲ. ಆದರೆ, ಸಂದೇಶವೊಂದನ್ನು ನೀಡಲಾಯಿತು. ಪತ್ರಿಕೆಯ ಉತ್ಸಾಹವೇ ಕುಗ್ಗಿ ಅದು ಮರುಕಳಿಸಲು ತಿಂಗಳುಗಳೇ ಹಿಡಿದವು. ಈ ಮಧ್ಯೆ, ನಮ್ಮನ್ನು ಬೆಂಬಲಿಸಲು ಯಾರೂ ಮುಂದಾಗಲಿಲ್ಲ. ನಮ್ಮನ್ನು ಗುರಿಮಾಡಲಾಗಿದೆ ಎಂದು ಮಾಧ್ಯಮಗಳ ಕೆಲವರಷ್ಟೇ ಅಭಿಪ್ರಾಯಪಟ್ಟರು. ಪತ್ರಿಕಾ ಸ್ವಾತಂತ್ರ್ಯದ ಭಾಗವಾಗುವುದಿಲ್ಲ ಎಂಬ ಕಾರಣಕ್ಕೆ ಮಾಲೀಕರ ಮೇಲೆ ದಾಳಿ ನಡೆದಿದೆ ಎಂದು ಸಂಪಾದಕರು ಪುನರುಚ್ಛರಿಸಿದರು. ವಿನೋದ್ ಮೆಹ್ತಾ ದೆಹಲಿ ಪ್ರೆಸ್ ಕ್ಲಬ್‌ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಗೆ ಬೆರಳೆಣಿಕೆಯಷ್ಟು ಪತ್ರಕರ್ತರು ಮಾತ್ರ ಹಾಜರಿದ್ದರು. ಕೆಲವು ಅಂಕಣಕಾರರನ್ನು ಹೊರತುಪಡಿಸಿದರೆ ಮುಖ್ಯವಾಹಿನಿಯ ಮಾಧ್ಯಮಗಳು ಈ ಬಗ್ಗೆ ತುಟಿಬಿಚ್ಚಲಿಲ್ಲ.

ಆದಾಗ್ಯೂ, ವಾಜಪೇಯಿ ಅವರ ಜನಪ್ರಿಯತೆಗೆ ಸಂಬಂಧಿಸಿದಂತೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತದೆ. ಮೋದಿ ಅವರಂತಲ್ಲದೆ ವಾಜಪೇಯಿ ಪತ್ರಕರ್ತರೊಂದಿಗೆ ಮುಕ್ತವಾಗಿ ಮಾತನಾಡುತ್ತಿದ್ದರು, ಸಂದರ್ಶನಗಳನ್ನು ನೀಡುತ್ತಿದ್ದರು. ತಮ್ಮ ಬಗ್ಗೆ ತಮಾಷೆ ಮಾಡಿಕೊಳ್ಳುವುದೂ ಅವರಿಗೆ ಗೊತ್ತಿತ್ತು. ಭೇಟಿಯಾದವರೆಲ್ಲ ಅವರ ವರ್ಚಸ್ಸು ಮತ್ತು ವಿಡಂಬನೆಯ ಬಗ್ಗೆ ಮಾತನಾಡಿಕೊಳ್ಳುವುದಿದೆ. ಆದರೆ, ಇದು ವಾಜಪೇಯಿಯವರ ಇನ್ನೊಂದು ಮುಖವನ್ನು ಮರೆಮಾಚಿತು.

1992ರ ಡಿಸೆಂಬರ್ 5ರಂದು ವಾಜಪೇಯಿ ಲಖನೌನಲ್ಲಿ (ಬಾಬರಿ ಮಸೀದಿ ಧ್ವಂಸದ ಒಂದು ದಿನದ ಮೊದಲು) ಕರಸೇವಕರನ್ನು ಉದ್ದೇಶಿಸಿ ಮಾತನಾಡಿದ್ದ ವೀಡಿಯೊದ ಸಾರವನ್ನು ಪ್ರಕಟಿಸಿದಾಗ ಯಾರೂ ಅಚ್ಚರಿಪಡಲಿಲ್ಲ. ಮರುದಿನ ಬೆಳಗ್ಗೆ ನೆಲಸಮ ಮಾಡಬೇಕಿರುವ ಮಸೀದಿಯ ಕುರಿತು ಮುಂದೇನಾಗಲಿದೆ ಎಂಬುದನ್ನು ಅರಿತೇ ಅವರು ಮಾತನಾಡಿದ್ದರು. ನಂತರ, "ಮಸೀದಿ ಉರುಳಿಸಿದ್ದು ದುರದೃಷ್ಟಕರ ಘಟನೆ," ಎಂದು ಅವರೇ ನೀಡಿದ ಹೇಳಿಕೆಗೂ ಈ ದೃಶ್ಯಾವಳಿಗಳಿಗೂ ಯಾವುದೇ ತಾಳೆ ಆಗುತ್ತಿರಲಿಲ್ಲ. ಈ ಬಗ್ಗೆ ಈಗಲೂ ಯಾರೂ ಪ್ರಶ್ನೆ ಎತ್ತುವುದಿಲ್ಲ.

ಅವರ ಆಡಳಿತಾವಧಿಯಲ್ಲಿ ಕೇವಲ ‘ಔಟ್‌ಲುಕ್’ ಮಾತ್ರವೇ ಗುರಿಯಾಗಲಿಲ್ಲ. ‘ತೆಹಲ್ಕಾ’ದಂತಹ ಪತ್ರಿಕೆಗಳು ಕೂಡ ಲಕ್ಷ್ಮಣ ರೇಖೆಯನ್ನು ದಾಟಿದವು. ಆದರೆ, ಎಲ್ಲರೂ ಸಾಂಪ್ರದಾಯಿಕ ಮೌಲ್ಯಗಳನ್ನು ಹೊಂದಿದ್ದ ರಾಜಕಾರಣಿಯಾಗಿದ್ದ ವಾಜಪೇಯಿ ಅವರು ಬಿಜೆಪಿಯ ಪ್ರಜಾಪ್ರಭುತ್ವದ ಮುಖ ಎಂದೇ ಬಣ್ಣಿಸುತ್ತಾರೆ. ಬಹುಶಃ ಪ್ರಸ್ತುತ ಸನ್ನಿವೇಶದಲ್ಲಿ ಅನೇಕರು, ಸಂಸದೀಯ ತತ್ವಗಳಿಗೆ ಅವರು ತೋರಿದ ಗೌರವ ಹಾಗೂ ಆಡಳಿತ ವೈಖರಿಯ ಕುರಿತಂತೆ ಪಾಠ ಕಲಿಯುವಲ್ಲಿ ಮಗ್ನರಾದಂತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More