ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 9 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಲೇಬೇಕಾದ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳತ್ತ ನೋಟ

ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆ ಆರ್ಭಟ; ಜನಜೀವನ ಅಸ್ತವ್ಯಸ್ತ

ಮಳೆಯ ಆರ್ಭಟಕ್ಕೆ ಕರ್ನಾಟಕದ ಮಡಿಕೇರಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಹಾಸನ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿನ ಜನರು ಕಂಗಾಲಾಗಿದ್ದಾರೆ. ಕೊಡಗಿನಲ್ಲಿ ಬೆಟ್ಟಗುಡ್ಡಗಳು ಕುಸಿಯುತ್ತಿದ್ದು, ಮಳೆಯ ಆರ್ಭಟಕ್ಕೆ ಮನೆಗಳು ನೆಲಸಮವಾಗುತ್ತಿವೆ. ಸಾವಿರಾರು ಜನರು ಪ್ರವಾಹದಿಂದ ನೆಲೆ ಕಳೆದುಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ವಿದ್ಯುತ್‌ ಸಂಪರ್ಕ ಕಡಿತವಾಗಿದ್ದು, ಸಾವಿರಾರು ವಿದ್ಯುತ್‌ ಕಂಬ ಮತ್ತು ಮರಗಳು ನೆಲಕ್ಕುರಳಿವೆ. ಹಲವೆಡೆ ರಸ್ತೆ ಸಂಚಾರ ಬಂದ್‌ ಆಗಿದ್ದು, ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾಡಳಿತ ಪುನರ್ವಸತಿ ಕೇಂದ್ರಗಳನ್ನು ತೆರೆದಿದ್ದರೂ ಪ್ರವಾಹಪೀಡಿತರನ್ನು ಅಲ್ಲಿಗೆ ಕರೆತರುವುದು ಪ್ರಯಾಸದ ಕೆಲಸವಾಗಿ ಮಾರ್ಪಟ್ಟಿದೆ. ರಾಜ್ಯ ಸರ್ಕಾರವು ಈ ಜಿಲ್ಲೆಗಳಲ್ಲಿ ಪರಿಹಾರ ಕಾರ್ಯ ಕೈಗೊಳ್ಳಲು ೨೦೦ ಕೋಟಿ ರುಪಾಯಿ ಬಿಡುಗಡೆ ಮಾಡಿದೆ.

ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್ ಮೇಲೆ ಬಿಜೆಪಿ ಕಚೇರಿಯಲ್ಲಿ ಹಲ್ಲೆ‌

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆಯಲು ಶುಕ್ರವಾರ ಬಿಜೆಪಿ ಕಚೇರಿಗೆ ತೆರಳಿದ್ದ ಸಾಮಾಜಿಕ ಕಾರ್ಯಕರ್ತ ಸ್ವಾಮಿ ಅಗ್ನಿವೇಶ್‌ ಮೇಲೆ ದಾಳಿ ನಡೆದಿದೆ. ಹಿಂದೂ ಸಂಪ್ರದಾಯ ವಿರೋಧಿಯಾದ ಅಗ್ನಿವೇಶ್ ದೇಶವಿರೋಧಿ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿರುವ ಹಲ್ಲೆಕೋರರು, ಅವರನ್ನು ತಳ್ಳಾಡಿ, ಹಲ್ಲೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪೊಲೀಸರು ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಈಚೆಗೆ ಜಾರ್ಖಂಡ್‌ನಲ್ಲಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಹೊರಬರುವ ಸಂದರ್ಭದಲ್ಲಿ ಅಗ್ನಿವೇಶ್‌ ಅವರ ಮೇಲೆ ಬಿಜೆಪಿ ಹಾಗೂ ಎಬಿವಿಪಿ ಕಾರ್ಯಕರ್ತರು ಹಲ್ಲೆ ನಡೆಸಿದ್ದರು. ಇದಕ್ಕೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.

ಕೇರಳದಲ್ಲಿನ ಪ್ರವಾಹ ಪರಿಸ್ಥಿತಿ ಕುರಿತು ವರದಿ ಕೇಳಿದ ಸುಪ್ರೀಂ ಕೋರ್ಟ್

ಭಾರಿ ಮಳೆಯ ಕಾರಣ ಮುಲ್ಲಾಪೆರಿಯಾರ್ ಅಣೆಕಟ್ಟೆಯ ನೀರಿನ ಪ್ರಮಾಣ ಹೆಚ್ಚಿದ್ದು, 142 ಅಡಿಗಳಷ್ಟು ನೀರು ಶೇಖರಣೆಗೊಂಡಿದೆ. ಅಣೆಕಟ್ಟೆಯ ನೀರಿನ ಪ್ರಮಾಣವನ್ನು ಮೂರು ಅಡಿಯಷ್ಟು ತಗ್ಗಿಸುವ ಅನಿವಾರ್ಯತೆ ಇರುವುದರಿಂದ ಇಂದು ಸುಪ್ರೀಂ ಕೋರ್ಟ್, ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ ಮತ್ತು ಕೇಂದ್ರೀಯ ಉಪ ಸಮಿತಿಗೆ ಈವರೆಗೆ ಕೈಗೊಡಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಹಾಗೂ ಪ್ರವಾಹಪೀಡಿತ ಸ್ಥಳಗಳಲ್ಲಿನ ಜನರನ್ನು ತಮಿಳುನಾಡಿಗೆ ಸ್ಥಳಾಂತರಿಸಿ ಪುನರ್ವಸತಿ ಕಲ್ಪಿಸುವಂತೆ ಸೂಚನೆ ನೀಡಿದೆ.

ಚಿರನಿದ್ರೆಗೆ ಜಾರಿದ ಕ್ರಿಕೆಟಿಗ ಅಜಿತ್ ವಾಡೇಕರ್

ಎರಡು ದಿನಗಳ ಹಿಂದಷ್ಟೇ ಇಹಲೋಕ ತ್ಯಜಿಸಿದ ಅಜಿತ್ ವಾಡೇಕರ್ ಅಂತಿಮ ಸಂಸ್ಕಾರ ಇಂದು ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಜರುಗಿತು. ೧೯೭೧ರಲ್ಲಿ ಇಂಗ್ಲೆಂಡ್ ವಿರುದ್ಧ ಇಂಗ್ಲೆಂಡ್ ನೆಲದಲ್ಲೇ ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಭಾರತಕ್ಕೆ ೧-೦ ಅಂತರದ ಗೆಲುವು ತಂದುಕೊಟ್ಟು ಚಾರಿತ್ರಿಕ ಸಾಧನೆ ಮೆರೆದಿದ್ದ ವಾಡೇಕರ್, ವಯೋಸಹಜ ಕಾಯಿಲೆಯಿಂದ ಮುಂಬೈ ಆಸ್ಪತ್ರೆಯಲ್ಲಿ ಬುಧವಾರ (ಆ.೧೫) ರಾತ್ರಿ ಅಸುನೀಗಿದ್ದರು. ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆದ ಅಂತ್ಯಕ್ರಿಯೆಯಲ್ಲಿ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ, ಸಮೀರ್ ಡಿಘೆ, ಮಾಜಿ ಹಾಕಿ ನಾಯಕ ಎಂ ಎಂ ಸೋಮಯ್ಯ, ಮಾಜಿ ಹಾಗೂ ಹಾಲಿ ಮುಂಬೈ ಕ್ರಿಕೆಟ್ ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು. ಬಿಸಿಸಿಐ ಪ್ರಧಾನ ನಿರ್ವಾಹಕ ಸಾಬಾ ಕರೀಮ್ ಕೂಡಾ ವಾಡೇಕರ್ ಅಂತಿಮ ಪಯಣದಲ್ಲಿ ಭಾಗಿಯಾದರು.

ಮತ್ತೆ ಚೇತರಿಸಿಕೊಂಡ ಷೇರುಪೇಟೆ, ಸೆನ್ಸೆಕ್ಸ್ 284 ಅಂಶ ಏರಿಕೆ

ಟರ್ಕಿ ಲಿರಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಎರಡು ದಿನ ಕುಸಿತದ ಹಾದಿಯಲ್ಲಿದ್ದ ಷೇರುಪೇಟೆ ವಾರಂತ್ಯದ ವಹಿವಾಟಿನಲ್ಲಿ ಚೇತರಿಸಿಕೊಂಡಿದೆ. ಸೆನ್ಸೆಕ್ಸ್ 284 ಅಂಶ ಜಿಗಿದರೆ ನಿಫ್ಟಿ 85 ಅಂಶ ಏರಿದೆ. ಜಾಗತಿಕ ವ್ಯಾಪಾರ ಸಮರದ ಬಿಕ್ಕಟ್ಟು ನಿವಾರಿಸಿಕೊಳ್ಳಲು ವಾಷಿಂಗ್ಟನ್-ಬೀಜಿಂಗ್ ನಡುವೆ ಮಾಸಾಂತ್ಯದಲ್ಲಿ ಮಾತುಕತೆ ನಡೆಯುವ ಸಾಧ್ಯತೆ ಇದೆ ಎಂಬ ಸುದ್ದಿ ಚೇತರಿಕೆ ನೀಡಿದೆ. ಮೆಟಲ್, ಎಫ್ಎಂಸಿಜಿ, ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಬಂದ ತೀವ್ರ ಬೇಡಿಕೆ, ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಹೆಚ್ಚಿನ ಖರೀದಿ ಮತ್ತು ಲಿರಾ ಮತ್ತಷ್ಟು ಸ್ಥಿರವಾದ ಕಾರಣ ಪೇಟೆಯಲ್ಲಿ ಚೇತರಿಕೆ ಕಂಡುಬಂದಿದೆ.

ಲಸಿಕೆ ಹಗರಣ: 12 ಅಧಿಕಾರಿಗಳನ್ನು ವಜಾ ಮಾಡಿದ ಚೀನಾ ಸರ್ಕಾರ

ಲಸಿಕೆ ಹಗರಣದ ಆರೋಪದ ಮೇಲೆ ಹನ್ನೆರಡು ಪ್ರಾಂತೀಯ ಮತ್ತು ಸ್ಥಳೀಯ ಅಧಿಕಾರಿಗಳನ್ನು ಚೀನಾ ಸರ್ಕಾರವು ಶುಕ್ರವಾರ ವಜಾ ಮಾಡಿದೆ. ಸ್ಥಳೀಯವಾಗಿ ತಯಾರಿಸಿದ ಔಷಧಿಗಳ ಸುರಕ್ಷತೆ ವಿಷಯದಲ್ಲಿ ಸಾರ್ವಜನಿಕರಲ್ಲಿ ಆತಂಕ ಉಂಟಾಗುತ್ತಿದ್ದು, ಔಷಧ ತಯಾರಿಕಾ ವಲಯದಲ್ಲಿ ಸಾರ್ವಜನಿಕರ ವಿಶ್ವಾಸವನ್ನು ಹೆಚ್ಚಿಸಲು ಚೀನಾ ಸರ್ಕಾರ ಹೆಣಗಾಡುತ್ತಿದೆ. ರೇಬಿಸ್ ಲಸಿಕೆಗಳನ್ನು ಚೀನಾದ ಕೆಲ ಕಂಪನಿಗಳು ದಾಖಲೆ ಪ್ರಮಾಣದಲ್ಲಿ ತಯಾರಿಸಿದ್ದು, ಉತ್ಪಾದನೆಯನ್ನು ನಿಲ್ಲಿಸಲು ಸರ್ಕಾರ ಆದೇಶಿಸಿದೆ.

ಏಷ್ಯಾ ಕಪ್ ಕ್ರಿಕೆಟ್ ಆತಿಥ್ಯದ ಹಕ್ಕನ್ನು ಯುಎಇಗೆ ನೀಡಿದ ಬಿಸಿಸಿಐ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಡೆಗೂ ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ ಆತಿಥ್ಯದ ಹಕ್ಕನ್ನು ಎಮಿರೇಟ್ಸ್ ಕ್ರಿಕೆಟ್ ಮಂಡಳಿಗೆ ವರ್ಗಾಯಿಸಿದೆ. "ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ೨೦೧೮ರ ಏಷ್ಯಾ ಕಪ್ ಕ್ರಿಕೆಟ್ ಆಯೋಜನೆ ಸಂಬಂಧ ಪರಸ್ಪರ ಒಪ್ಪಂದ ಪತ್ರಕ್ಕೆ ಸಹಿ ಹಾಕಿದವು,'' ಎಂದು ಬಿಸಿಸಿಐ ಪ್ರಕಟಣೆ ತಿಳಿಸಿದೆ. ಏಷ್ಯಾ ಕ್ರಿಕೆಟ್ ಸಮಿತಿಯ ಅರ್ಹತಾ ಟೂರ್ನಿಯಲ್ಲಿ ಗೆದ್ದ ತಂಡದೊಟ್ಟಿಗೆ ಆಫ್ಘಾನಿಸ್ತಾನ, ಬಾಂಗ್ಲಾದೇಶ, ಭಾರತ, ಪಾಕಿಸ್ತಾನ, ಶ್ರೀಲಂಕಾ ಪಾಲ್ಗೊಳ್ಳಲಿರುವ ಏಷ್ಯಾ ಕಪ್ ಪಂದ್ಯಾವಳಿಯು ಸೆಪ್ಟೆಂಬರ್ ೧೫ರಿಂದ ೨೮ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಜರುಗಲಿದೆ. ವಾಸ್ತವವಾಗಿ ಟೂರ್ನಿ ಭಾರತದಲ್ಲಿ ನಡೆಯಬೇಕಿತ್ತಾದರೂ, ಪಾಕಿಸ್ತಾನ ತಂಡದ ಪಾಲ್ಗೊಳ್ಳುವಿಕೆ ದ್ವಿಪಕ್ಷೀಯ ಸಂಬಂಧದ ಹಿನ್ನೆಲೆಯಲ್ಲಿ ಅನಿಶ್ಚಿತವಾಗಿದ್ದರಿಂದ ಬಿಸಿಸಿಐ ಟೂರ್ನಿ ಆತಿಥ್ಯದಿಂದ ಹಿಂದೆ ಸರಿದಿದೆ.

ಫೋರ್ಬ್ಸ್‌ ಪಟ್ಟಿಯಲ್ಲಿ ಶ್ರೀಮಂತ ನಟಿ ಪಟ್ಟ ಪಡೆದ ಸ್ಕಾರ್ಲೆಟ್ ಜಾನ್ಸನ್

ಫೋರ್ಬ್ಸ್‌ ಮ್ಯಾಗಜಿನ್‌ ಬಿಡುಗಡೆ ಮಾಡಿರುವ ವರ್ಷದ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಹಾಲಿವುಡ್ ನಟಿ ಸ್ಕಾರ್ಲೆಟ್‌ ಅಗ್ರಸ್ಥಾನದಲ್ಲಿದ್ದಾರೆ. 33ರ ಹರೆಯದ ಸ್ಕಾರ್ಲೆಟ್‌ ಅವರ ವರ್ಷದ ಗಳಿಕೆ 40.5 ಮಿಲಿಯನ್ ಅಮೆರಿಕನ್ ಡಾಲರ್ ಎನ್ನಲಾಗಿದೆ. ವರ್ಷದ ಹಿಟ್ ಸಿನಿಮಾ ‘ಅವೆಂಜರ್ಸ್‌: ಇನ್ಫಿನಿಟಿ ವಾರ್‌’ನಲ್ಲಿ ಸ್ಕಾರ್ಲೆಟ್ ನಟಿಸಿದ್ದರು. ಹಾಲಿವುಡ್ ನಟಿ ಏಂಜಲಿನಾ ಜೋಲಿ 28 ಮಿಲಿಯನ್ ಅಮೆರಿಕನ್ ಡಾಲರ್‌ ಗಳಿಕೆಯೊಂದಿಗೆ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಮುಜಾಫರ್‌ಪುರ ಪ್ರಕರಣ: ಮಾಜಿ ಸಚಿವೆ ಮಂಜು ವರ್ಮಾ ನಿವಾಸದ ಮೇಲೆ ಸಿಬಿಐ ದಾಳಿ

ಮುಜಾಫರ್‌ಪುರ್ ಪುನರ್ವಸತಿ ಕೇಂದ್ರಗಳಲ್ಲಿ ಬಾಲಕಿಯರ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ, ಬಿಹಾರದ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಸಚಿವೆ ಮಂಜು ವರ್ಮಾ ಅವರ ನಿವಾಸದ ಮೇಲೆ ಶುಕ್ರವಾರ ಸಿಬಿಐ ದಾಳಿ ಮಾಡಿದೆ. ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಜು ವರ್ಮಾ ಅವರ ಪತಿಯ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ಇತ್ತೀಚೆಗೆ ರಾಜಿನಾಮೆ ನೀಡಿದ್ದರು. ಬಿಹಾರದ ಮುಜಾಫರ್‌ಪುರ್ ಪುನರ್ವಸತಿ ಕೇಂದ್ರದಲ್ಲಿನ ಸುಮಾರು 30ಕ್ಕೂ ಹೆಚ್ಚು ಬಾಲಕಿಯರ ಮೇಲೆ ಅತ್ಯಾಚಾರ ನಡೆದ ಪ್ರಕರಣ ಇಡೀ ದೇಶದಲ್ಲಿ ಟೀಕೆಗೆ ಗುರಿಯಾಗಿದೆ. ಪುನರ್ವಸತಿ ಕೇಂದ್ರ ನಡೆಸುತ್ತಿದ್ದ ವ್ಯಕ್ತಿಯ ಜೊತೆ ಸಚಿವೆ ಮಂಜು ವರ್ಮಾ ಅವರ ಪತಿ ನಿರಂತರವಾಗಿ ಸಂಪರ್ಕದಲ್ಲಿರುವುದು ಪೊಲೀಸ್ ತನಿಖೆಯಲ್ಲಿ ಗೊತ್ತಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More