ದ್ವೇಷಭಾಷೆಯ ಕಾಲದಲ್ಲಿ ಮರೆಯಾದ ಒಲವಿನ ಚಹರೆ

ಬಿಜೆಪಿಯ ಕಟ್ಟಾಳು, ಮಾಜಿ ಪ್ರಧಾನಿ ವಾಜಪೇಯಿ ಅವರ ಅಂತ್ಯಸಂಸ್ಕಾರವು ಅಪಾರ ಅಭಿಮಾನಿಗಳು, ದೇಶ-ವಿದೇಶಗಳ ಗಣ್ಯರ ಸಮ್ಮುಖದಲ್ಲಿ ಶುಕ್ರವಾರ ನೆರವೇರಿತು. ಅಜಾತಶತ್ರು ವಾಜಪೇಯಿ ಅವರಿಗೆ ಅಪಾರ ಜನಸ್ತೋಮ ಕಂಬನಿ ಮಿಡಿಯುವ ಮೂಲಕ ಅಂತಿಮ ವಿದಾಯ ಸಲ್ಲಿಸಿತು

ಬದುಕಿನುದ್ದಕ್ಕೂ ಎಲ್ಲರ ಪ್ರೀತಿ, ಗೌರವಕ್ಕೆ ಪಾತ್ರರಾಗಿದ್ದ ಕವಿಹೃದಯದ ಮಾಜಿ ಪ್ರಧಾನಮಂತ್ರಿ ಅಟಲ್‌ ಬಿಹಾರಿ ವಾಜಪೇಯಿ ಅವರಿಗೆ ಪಕ್ಷಾತೀತವಾಗಿ ದೇಶದ ಗಣ್ಯರು, ಸಾರ್ಕ್‌ ರಾಷ್ಟ್ರಗಳ ಪ್ರತಿನಿಧಿಗಳು ಶುಕ್ರವಾರ ಹೃದಯಸ್ಪರ್ಶಿ ವಿದಾಯ ಹೇಳಿದರು. ದೆಹಲಿಯ ರಾಷ್ಟ್ರೀಯ ಸ್ಮೃತಿ ಸ್ಥಳದಲ್ಲಿ ನಡೆದ ವಾಜಪೇಯಿ ಅವರ ಅಂತ್ಯಸಂಸ್ಕಾರಕ್ಕೂ ಮುನ್ನ ಮಾಜಿ ಪ್ರಧಾನಿಗೆ ಸೇನಾ ಗೌರವ ಸಲ್ಲಿಸಲಾಯಿತು. ನಂತರ ಸಂಜೆ ೫ ಗಂಟೆ ಸುಮಾರಿಗೆ ವೈದಿಕ ಸಂಪ್ರದಾಯದಂತೆ ವಾಜಪೇಯಿ ಅವರ ಅಂತ್ಯಸಂಸ್ಕಾರವು ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ಅಟಲ್‌ಜೀ‌ ಅವರ ಚಿತೆಗೆ ಅವರ ದತ್ತು ಪುತ್ರಿ ನಮಿತಾ ಭಟ್ಟಾಚಾರ್ಯ ಅಗ್ನಿಸ್ಪರ್ಶ ಮಾಡುವುದರೊಂದಿಗೆ ವಾಜಪೇಯಿ ಪಂಚಭೂತಗಳಲ್ಲಿ ಲೀನರಾದರು. ಅಜಾತಶತ್ರುವಿನ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡುತ್ತಿದ್ದಂತೆ ಅವರ ಮೊಮ್ಮಗಳಾದ ನಿಹಾರಿಕ ಅವರ ದುಃಖದ ಕಟ್ಟೆಯೊಡೆಯಿತು.

ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಗುರುವಾರ ಸಂಜೆ ನಿಧನರಾದ ವಾಜಪೇಯಿ ಅವರ ಮೃತದೇಹವನ್ನು ಶುಕ್ರವಾರ ಬೆಳಗಿನತನಕ ಕೃಷ್ಣ ಮೆನನ್‌ ಮಾರ್ಗದಲ್ಲಿರುವ ಅವರ ನಿವಾಸದಲ್ಲಿ ಇರಿಸಲಾಗಿತ್ತು. ಬೆಳಗ್ಗೆ ೯ ಗಂಟೆಗೆ ಸುಮಾರಿಗೆ ಪಾರ್ಥಿವ ಶರೀರವನ್ನು ಬಿಜೆಪಿಯ ಕೇಂದ್ರ ಕಚೇರಿಗೆ ಕೊಂಡೊಯ್ಯಲಾಯಿತು. ಅಲ್ಲಿ ಮಧ್ಯಾಹ್ನ ಎರಡು ಗಂಟೆವರೆಗೆ ವಾಜಪೇಯಿ ಅವರ ಅಂತಿಮ ದರ್ಶನ ಪಡೆಯಲು ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿತ್ತು. ವಿವಿಧ ಪಕ್ಷಗಳ ಮುಖಂಡರು, ವಿವಿಧ ಪಕ್ಷಗಳ ಕಾರ್ಯಕರ್ತರು, ವಾಜಪೇಯಿ ಅವರ ಆತ್ಮೀಯರು ಅಗಲಿದ ನಾಯಕನಿಗೆ ಭಾವಪೂರ್ಣ ವಿದಾಯ ಹೇಳಿದರು.

ಆನಂತರ ಅಲಂಕೃತ ಸೇನಾ ವಾಹನದಲ್ಲಿ ವಾಜಪೇಯಿ ಅವರ ಪಾರ್ಥೀವ ಶರೀರವನ್ನು ರಾಷ್ಟ್ರೀಯ ಸ್ಮೃತಿ ಸ್ಥಳಕ್ಕೆ ಮೆರವಣಿಗೆ ಮೂಲಕ ತರಲಾಯಿತು. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಹಲವು ನಾಯಕರು, ಅಭಿಮಾನಿಗಳು ಪಾರ್ಥಿವ ಶರೀರದ ಮೆರವಣಿಗೆಯಲ್ಲಿ ನಡೆದು ಸಾಗಿದರು. ರಸ್ತೆಯ ಇಕ್ಕೆಲದಲ್ಲಿ ನಿಂತಿದ್ದ ವಾಜಪೇಯಿ ಅವರ ಲಕ್ಷಾಂತರ ಅಭಿಮಾನಿಗಳು, “ವಾಜಪೇಯಿ ಅಮರ್‌ ರಹೇ,” ಎಂಬ ಘೋಷಣೆ ಹಾಕಿ, ಪುಷ್ಪಾರ್ಚನೆ ಮಾಡಿ, ಅಶ್ರುತರ್ಪಣದ ಮೂಲಕ ಅಗಲಿದ ನಾಯಕನಿಗೆ ಭಾವಪೂರ್ಣ ಬೀಳ್ಗೊಡುಗೆ ನೀಡಿದರು.

ಇದನ್ನೂ ಓದಿ : ಹಿಂದುತ್ವದ ಮೃದುಭಾಷೆಯಿಂದ ವಾಜಪೇಯಿ ಕೊಟ್ಟದ್ದು, ಪಡೆದದ್ದು ಏನನ್ನು?

ವಿಶ್ವಮಟ್ಟದಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದ ವಾಜಪೇಯಿ ಅವರಿಗೆ ಹಲವು ರಾಷ್ಟ್ರಗಳ ನಾಯಕರು ಖುದ್ದು ಹಾಜರಾಗಿ ಗೌರವ ಸಲ್ಲಿಸಿದರು. ನೇಪಾಳ ರಾಜಕುಮಾರ ಜಿಗ್ಮೆ ಖೇಸರ್‌ ನೆಮ್ಗೈಲ್‌ ವಾಂಗ್‌ಚುಕ್‌, ಆಫ್ಘಾನಿಸ್ತಾನದ ಮಾಜಿ ಅಧ್ಯಕ್ಷ ಹಮೀದ್ ಕರ್ಜೈ, ಪಾಕಿಸ್ತಾನ, ಭೂತಾನ್, ಶ್ರೀಲಂಕಾ ಸೇರಿದಂತೆ ಸಾರ್ಕ್ ರಾಷ್ಟ್ರಗಳ ಪ್ರತಿನಿಧಿಗಳು ವಾಜಪೇಯಿ ಅವರ ಅಂತಿಮ ದರ್ಶನ ಪಡೆದರು. ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌, ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ದು, ಪ್ರಧಾನಿ ನರೇಂದ್ರ ಮೋದಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಮಾಜಿ ಉಪ ಪ್ರಧಾನಿ ಲಾಲ್‌ ಕೃಷ್ಣ ಅಡ್ವಾಣಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಕೇಂದ್ರ ಸಚಿವರು, ಬಿಜೆಪಿ ಅಧಿಕಾರದಲ್ಲಿರುವ ೨೨ ರಾಜ್ಯಗಳ ಮುಖ್ಯಮಂತ್ರಿಗಳು, ವಿವಿಧ ರಾಜ್ಯಗಳ ರಾಜ್ಯಪಾಲರು ಸೇರಿದಂತೆ ಸಾಕಷ್ಟು ಮಂದಿ ವಾಜಪೇಯಿ ಅವರ ಅಂತ್ಯಸಂಸ್ಕಾರದಲ್ಲಿ ಭಾಗಿಯಾಗಿದ್ದರು. ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಅವರು ಬೆಳಗ್ಗೆಯೇ ವಾಜಪೇಯಿ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದಿದ್ದರು.

ಇದಕ್ಕೂ ಮುನ್ನ, ವಾಜಪೇಯಿ ಅವರ ವಿಧಿವಶರಾದ ಸುದ್ದಿ ಹರಡುತ್ತಿದ್ದಂತೆ ರಾಷ್ಟ್ರ ರಾಜಧಾನಿ ಸಂಪೂರ್ಣ ಸ್ತಬ್ಧವಾಗಿತ್ತು. ಅಹಿತಕರ ಘಟನೆ ತಡೆಯಲು ಭಾರಿ ಬಂದೋಬಸ್ತ್‌ ಒದಗಿಸಲಾಗಿತ್ತು. ಸದಾ ಗಿಜಿಗುಡುತ್ತಿದ್ದ ದೆಹಲಿ ಶುಕ್ರವಾರ ಮೌನಕ್ಕೆ ಶರಣಾಗಿತ್ತು. ವಾಜಪೇಯಿ ಅವರ ಅಂತಿಮ ಯಾತ್ರೆಯಲ್ಲಿ ಜನಸಾಗರವೇ ಹರಿದುಬಂದಿತ್ತು. ಹಲವರು ತಮ್ಮ ನೆಚ್ಚಿನ ನಾಯಕನೊಂದಿಗಿನ ನೆನಪುಗಳನ್ನು ಕೆದಕುತ್ತ ಗದ್ಗದಿತರಾಗುತ್ತಿದ್ದರು. ವಾಜಪೇಯಿ ಅವರ ನಿಧನ ಹಿನ್ನೆಲೆಯಲ್ಲಿ ದೇಶಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಿಸಲಾಗಿದೆ. ಕರ್ನಾಟಕ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಶುಕ್ರವಾರ ರಜೆ ಘೋಷಿಸಲಾಗಿತ್ತು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More