ಸಂತ್ರಸ್ತರ ಕಣ್ಣೀರಿನ ನಡುವೆಯೂ ಹರಿದಿದೆ ಕೊಳಕು ಮನಸ್ಥಿತಿಯ ದ್ವೇಷದ ಪ್ರವಾಹ!

ಮಲೆಯಾಳಂ ನೆಲದ ನೋವಿಗೆ ಮನುಷ್ಯರಾದವರು ಮಿಡಿದಿದ್ದಾರೆ ಎಂಬುದು ದಿಟ. ಆದರೆ, ಅಂತಹ ಮಾನವೀಯ ಸ್ಪಂದನೆಯ ನಡುವೆಯೂ ಕೇರಳದಲ್ಲಿ ದೊಡ್ಡ ಮಟ್ಟದಲ್ಲಿ ಈ ದುರಂತವನ್ನೇ ಕೋಮುದ್ವೇಷ ಮತ್ತು ಮೌಢ್ಯದ ಅಂಧಕಾರವನ್ನು ಹರಡಲು ಬಳಸಲಾಗುತ್ತಿದೆ ಎಂಬುದು ಕೂಡ ಅಷ್ಟೇ ನಿಜ

ಒಂದು ಕಡೆ ಕೇರಳದ ಭೀಕರ ಪ್ರವಾಹದ ಸಂತ್ರಸ್ತರಿಗೆ ದೇಶದ ಮೂಲೆಮೂಲೆಗಳಿಂದ ಜನಸಾಮಾನ್ಯರು ಪಕ್ಷ, ಜಾತಿ, ಮತ, ಪಂಥ ಮರೆತು ನೆರವಿನ ಹಸ್ತ ಚಾಚುತ್ತಿದ್ದಾರೆ. ಮತ್ತೊಂದು ಕಡೆ, ಇಂತಹ ಹೃದಯವಿದ್ರಾವಕ ಕ್ಷಣದಲ್ಲೂ, ಮಾನವೀಯತೆಯೇ ಮರುಗಿ ಮಿಡಿಯುವ ಹೊತ್ತಲ್ಲೂ ದೇಶದ ಪ್ರತಿಷ್ಠಿತ ವ್ಯಕ್ತಿಗಳೆನಿಸಿಕೊಂಡವರೂ ಸೇರಿದಂತೆ ಕೆಲವರು ಕೊಳಕು ಕೋಮುವಾದಿ ಮನಸ್ಥಿತಿ ಮೆರೆಯುತ್ತಿದ್ದಾರೆ. ಆ ಮೂಲಕ, ಮಾನವೀಯ ಮನಸುಗಳ ನಡುವೆ ಬೆತ್ತಲಾಗುತ್ತಿದ್ದಾರೆ.

ಶತಮಾನದಲ್ಲಿ ಕಂಡರಿಯದ ಪ್ರಮಾಣದ ಪ್ರವಾಹಕ್ಕೆ ತುತ್ತಾಗಿರುವ ನೆರೆಯ ರಾಜ್ಯದಲ್ಲಿ ಜಲಪ್ರಳಯವೇ ಸಂಭವಿಸಿದ್ದು, ಸುಮಾರು ೩೫೦ಕ್ಕೂ ಹೆಚ್ಚು ಮಂದಿ ಜಲಸಮಾಧಿಯಾಗಿದ್ದಾರೆ. ಎರಡೂವರೆ ಲಕ್ಷ ಮಂದಿ ನಿರಾಶ್ರಿತರಾಗಿದ್ದಾರೆ. ಆಸ್ತಿಪಾಸ್ತಿಯ ನಷ್ಟಕ್ಕೆ ಲೆಕ್ಕವಿಲ್ಲ. ಮಳೆ ಮತ್ತು ಅದು ಸೃಷ್ಟಿಸಿದ ಅನಾಹುತಕ್ಕೆ ಯಾವ ಜಾತಿ, ಧರ್ಮ, ಮತ, ಪಂಥಗಳ, ರಾಜಕೀಯ ಸಿದ್ಧಾಂತಗಳ ಬೇಧವಿಲ್ಲ. ಎಲ್ಲರನ್ನೂ ಅದು ಕೊಚ್ಚಿ ಒಯ್ದಿದೆ. ಮನುಷ್ಯರಷ್ಟೇ ಅಲ್ಲ, ಪ್ರಾಣಿಪಕ್ಷಿ, ಗಿಡಮರಗಳೂ ನೀರುಪಾಲಾಗಿವೆ. ಪ್ರಕೃತಿಯ ವಿಕೋಪದ ಮುಂದೆ ಯಾವ ಬೇಧವೂ ಇರಲಿಲ್ಲ.

ಆದರೆ, ತನ್ನ ಸಹ-ಮಾನವರ ನೋವಿಗೆ, ಕಣ್ಣೀರಿಗೆ, ಅಸಹಾಯಕತೆಗೆ ಮತ್ತು ಜೀವರಕ್ಷೆಯ ಆರ್ತನಾದಕ್ಕೆ ಮಡಿಯಬೇಕಾದ ಮನುಷ್ಯ ಮಾತ್ರ ಎಷ್ಟು ಕ್ಷುಲ್ಲಕವಾಗಿ, ಹೇಯವಾಗಿ ನಡೆದುಕೊಳ್ಳಬಲ್ಲ ಎಂಬುದಕ್ಕೆ ಕೇರಳದ ಈ ದುರಂತ ನಮ್ಮೆದುರಿನ ದೊಡ್ಡ ಉದಾಹರಣೆಯಾಗಿ ನಿಂತಿದೆ. ಮಲೆಯಾಳಂ ನೆಲದ ನೋವಿಗೆ ಲಕ್ಷಾಂತರ ಜನ ತಮ್ಮ ಕೈಲಾದ ನೆರವು ನೀಡಿದ್ದಾರೆ. ಅವರ ದುಃಖದಲ್ಲಿ ಪಾಲುದಾರರಾಗಿದ್ದಾರೆ. ನೋವಿಗೆ ಮನುಷ್ಯರಾಗಿ ಮಿಡಿದಿದ್ದಾರೆ ಎಂಬುದು ನಿಜ. ಆದರೆ, ಅಂತಹ ಮಾನವೀಯ ಸ್ಪಂದನೆಯ ನಡುವೆಯೂ ಕೇರಳದಲ್ಲಿ ದೊಡ್ಡ ಮಟ್ಟದಲ್ಲಿ ಈ ದುರಂತವನ್ನೇ ಕೋಮುದ್ವೇಷ ಮತ್ತು ಮೌಢ್ಯದ ಅಂಧಕಾರವನ್ನು ಹರಡಲು ಬಳಸಲಾಗುತ್ತಿದೆ ಎಂಬುದು ಕೂಡ ಅಷ್ಟೇ ನಿಜ.

ರಾಜೀವ್ ಮಲ್ಹೋತ್ರಾ ಎಂಬುವರು, “ಕೇರಳ ಹಿಂದೂಗಳಿಗೆ ನೆರವು ನೀಡಿ, ಕ್ರೈಸ್ತರು ಮತ್ತು ಮುಸ್ಲಿಮರು ಜಗತ್ತಿನಾದ್ಯಂತ ತಮ್ಮ ಜನರಿಗಾಗಿ ಮತ್ತು ತಮ್ಮ ಸಿದ್ಧಾಂತದ ಹಿತರಕ್ಷಣೆಗಾಗಿ ಭಾರೀ ನೆರವು ನೀಡುತ್ತಿದ್ದಾರೆ,” ಎಂದು ಟ್ವೀಟ್‌ ಮಾಡಿದ್ದಾರೆ. ಭೀಕರ ದುರಂತವೊಂದನ್ನು, ಎಲ್ಲ ಮನುಷ್ಯರ ಅಸಹಾಯಕತೆಯನ್ನು ಧರ್ಮ ಮತ್ತು ಸಿದ್ಧಾಂತದ ನೆಲೆಯ ಮೇಲೆ ನೋಡುವ ಕೊಳಕು ಕೋಮುವಾದಿ ಮನಸ್ಥಿತಿಯ ಈ ಟ್ವೀಟನ್ನು ಪ್ರಮುಖ ಉದ್ಯಮಿ, ಪದ್ಮಶ್ರೀ ಪುರಸ್ಕೃತ ಟಿ ಎ ಮೋಹನ್ ದಾಸ್ ಪೈ ಕೂಡ ರೀಟ್ವೀಟ್ ಮಾಡಿದ್ದಾರೆ. ಆ ಮೂಲಕ, ದೇಶದ ಅತ್ಯುನ್ನತ ನಾಗರಿಕ ಗೌರವ ಪಡೆದಿರುವ ಈ ವ್ಯಕ್ತಿ, ತಮ್ಮ ಮನಸ್ಸು ಎಷ್ಟು ದೊಡ್ಡದು ಎಂಬುದನ್ನು ಜಗಜ್ಜಾಹೀರು ಮಾಡಿದ್ದಾರೆ!

ಮೋಹನ್ ದಾಸ್ ಪೈ ಅವರು ಹಂಚಿಕೊಂಡಿರುವ ಇದೇ ಮಾದರಿಯನ್ನು ಇನ್ನಷ್ಟು ವಿಸ್ತರಿಸಿರುವ ಕೆಲವು ಕೊಳಕು ಮನಸ್ಸುಗಳು, “ಕೇರಳ ಸರ್ಕಾರ ಪ್ರವಾಹ ಸಂತ್ರಸ್ತರ ನೆರವಿಗಾಗಿ ರಚಿಸಿರುವ ಮುಖ್ಯಮಂತ್ರಿ ಪರಿಹಾರ ನಿಧಿಗೆ ದೇಣಿಗೆ ನೀಡಬೇಡಿ, ಅದು ಪರಿಹಾರ ಕಾರ್ಯಕ್ಕೆ ಬಳಕೆಯಾಗುವುದಿಲ್ಲ. ಎಡಪಂಥೀಯರು ಆ ಹಣವನ್ನು ನಕ್ಸಲೀಯರು ಮತ್ತು ಜೆಎನ್‌ಯು ಟುಕ್ಡೆ-ಟುಕ್ಡೆ ಗ್ಯಾಂಗುಗಳಿಗೆ ನೀಡುವ ಮೂಲಕ ನಮ್ಮ ದೇಶದ ವಿರುದ್ಧವೇ ಬಳಸುತ್ತಾರೆ,” ಎಂದು ಟ್ವಿಟರ್, ಫೇಸ್ಬುಕ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪರಿಹಾರ ವಿರೋಧಿ ಆಂದೋಲನವನ್ನೇ ಆರಂಭಿಸಿದ್ದಾರೆ. ರವಿಶಂಕರ ಗುರೂಜಿ ಅವರ ಆರ್ಟ್‌ ಆಫ್ ಲಿವಿಂಗ್ ಸಂಸ್ಥೆಯ ಸಮಾಲೋಚಕ ಎಂದು ತನ್ನ ಫೇಸ್ಬುಕ್ ಪುಟದ ವೈಯಕ್ತಿಕ ವಿವರದಲ್ಲಿ ಹೇಳಿಕೊಂಡಿರುವ ಧನಂಜಯ ಉಪಾಧ್ಯಾಯ ಎಂಬಾತ ಮಾಡಿರುವ ಈ ಪೋಸ್ಟ್ ಕೂಡ ಸಾಕಷ್ಟು ಶೇರ್ ಆಗಿದೆ. “ಕೇರಳಿಗರಿಗೆ ನೆರವಾಗಲು ಬೇರೇನಾದರೂ ದಾರಿ ಕಂಡುಕೊಳ್ಳಿ, ಯಾವ ಕಾರಣಕ್ಕೂ ಮುಖ್ಯಮಂತ್ರಿ ಪರಿಹಾರ ನಿಧಿಗೆ ನೆರವು ನೀಡಬೇಡಿ,” ಎಂದು ಆತ ಮನವಿ ಮಾಡಿದ್ದಾನೆ!

ಇದನ್ನೂ ಓದಿ : ಕೋಮು ರಾಜಕಾರಣದ ಪುತ್ತೂರಿನ ನೆಲದಲ್ಲಿ ಕಮಲ ಅರಳಿದ- ಮುದುಡಿದ ಕಥೆ

ಅಲ್ಲದೆ, “ಈ ಪ್ರಕೃತಿ ವಿಕೋಪ ಮುಸ್ಲಿಮರು ಮತ್ತು ಕ್ರೈಸ್ತರು ಹೆಚ್ಚಿರುವ ಜಿಲ್ಲೆಗಳಲ್ಲೇ ಸಂಭವಿಸಿದೆ. ಈ ಸತ್ಯವನ್ನು ಹೇಳುತ್ತಿರುವುದಕ್ಕೆ ಕ್ಷಮಿಸಿ, ಆದರೆ, ಈ ವಾಸ್ತವತೆ ಅರಿತು ಅವರುಗಳು ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಲಿ,” ಎಂದೂ ಉಪಾಧ್ಯಾಯ ಬರೆದಿದ್ದಾನೆ ಎಂದು ‘ದಿ ಟೆಲಿಗ್ರಾಫ್’ ವರದಿ ಮಾಡಿದೆ.

ಅದೇ ಜನ, ಆರ್‌ಎಸ್‌ಎಸ್‌ ಸ್ವಯಂಸೇವಕರು ಕೇರಳದ ಪ್ರವಾಹ ಸಂತ್ರಸ್ತರಿಗೆ ನೆರವು ನೀಡುತ್ತಿದ್ದಾರೆ ಎಂದು ಗುಜರಾತಿನ ಹಳೆಯ ಫೋಟೋಗಳನ್ನು ನಕಲಿ ಪ್ರಚಾರ ಮಾಡಿದ ಜನರೇ ಉಪಾಧ್ಯಾಯ ಅವರ ಪೋಸ್ಟನ್ನೂ ಅತಿ ಹೆಚ್ಚು ಶೇರ್ ಮಾಡಿದ್ದಾರೆ. ಅಲ್ಲದೆ, ಆ ವ್ಯಕ್ತಿಗಳೇ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಮತ್ತು ಇತರ ಸಂಘಪರಿವಾರದ ಗುಂಪುಗಳಲ್ಲಿ ಇದ್ದಾರೆ ಎಂದೂ ‘ಟೆಲಿಗ್ರಾಫ್’ ಹೇಳಿದೆ. ಆದರೆ, ಕೇರಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ ಸುರೇಂದ್ರನ್‌, “ಅಂತಹ ವ್ಯಕ್ತಿಗಳೊಂದಿಗೆ ನಮಗೆ ಯಾವ ಸಂಬಂಧವೂ ಇಲ್ಲ. ನಾವು ಬಿಜೆಪಿ ವತಿಯಿಂದಲೂ ದೇಣಿಗೆ ಸಂಗ್ರಹಿಸುತ್ತಿದ್ದೇವೆ,” ಎಂದು ಹೇಳಿ, ಅಂತಹ ರೋಗಿಷ್ಟ ಮನಸ್ಥಿತಿಯ ಹೇಳಿಕೆಗಳಿಂದ ಅಂತರ ಕಾಯ್ದುಕೊಂಡಿದ್ದಾರೆ.

ಅಲ್ಲದೆ, ಸಂಕಷ್ಟದಲ್ಲಿರುವ ಸಹವರ್ತಿಗಳಿಗೆ ಮಿಡಿಯುವ ಮನಸ್ಸುಗಳನ್ನು ದಿಕ್ಕುಗೆಡಿಸಲು, ಮಾನವೀಯ ಅಂತಃಕರಣಕ್ಕೆ ದ್ವೇಷದ ವಿಷ ಬೆರೆಸಲು ಹವಣಿಸುವ ಮನಸ್ಸುಗಳು, ಮತ್ತೊಂದು ದುಸ್ಸಾಹಸಕ್ಕೂ ಕೈಹಾಕಿವೆ. ಅದಕ್ಕೆ ಅವರು ಕಂಡುಕೊಂಡದ್ದು ದೇವರು, ದೈವದ ಶಾಪ ಎಂಬ ಮೌಢ್ಯದ ಆಶ್ರಯವನ್ನು!

ಹೌದು, ಇತ್ತೀಚೆಗೆ ಕೇರಳದ ಪ್ರಸಿದ್ಧ ಅಯ್ಯಪ್ಪಸ್ವಾಮಿ ದೇವಾಲಯಕ್ಕೆ ವಯಸ್ಕ ಮಹಿಳೆಯರೂ ಯಾತ್ರೆ ಕೈಗೊಳ್ಳಬಾರದೇಕೆ? ದೇವರ ದರ್ಶನಕ್ಕೆ ಲಿಂಗ ತಾರತಮ್ಯ ಏಕೆ? ಎಂಬ ಪ್ರಶ್ನೆಗಳನ್ನು ಎತ್ತಿದ್ದ ಸುಪ್ರೀಂ ಕೋರ್ಟ್, ಅಂತಹ ಮೌಢ್ಯಗಳು, ತಾರತಮ್ಯ ನೀತಿಗಳು ದೇಶದ ಸಂವಿಧಾನಕ್ಕೆ, ಮಹಿಳಾ ಘನತೆಗೆ ವಿರುದ್ಧ ಎಂದು ಅಭಿಪ್ರಾಯಪಟ್ಟಿತ್ತು. ನ್ಯಾಯಾಂಗದ ಆ ಅಭಿಪ್ರಾಯವನ್ನೇ ಈ ಪ್ರಾಕೃತಿಕ ವಿಕೋಪಕ್ಕೆ ತಳಕು ಹಾಕಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದ ಅಪಪ್ರಚಾರವನ್ನೂ ಆರಂಭಿಸಿದ್ದಾರೆ.

ಈ ವಿಷಯದಲ್ಲಿಯೂ ಮೋಹನ್ ದಾಸ್ ಪೈ ಅವರಂತೆಯೇ ದೇಶದ ಕೆಲವು ಗಣ್ಯರು ಕೂಡ ಮುಂಚೂಣಿಯಲ್ಲಿದ್ದಾರೆ. ಇತ್ತೀಚೆಗಷ್ಟೇ ರಿಸರ್ವ್ ಬ್ಯಾಂಕಿನ ನಿರ್ದೇಶಕರಲ್ಲಿ ಒಬ್ಬರಾಗಿ ಆಯ್ಕೆಯಾದ, ಸಂಘಪರಿವಾರದ ನಾಯಕರೂ ಮತ್ತು ಹಿಂದೂಪರ ಅರ್ಥಶಾಸ್ತ್ರ ಪರಿಣಿತರರೂ ಎನ್ನಲಾಗುತ್ತಿರುವ ಎಸ್ ಗುರುಮೂರ್ತಿ ಅವರೇ ಸ್ವತಃ ತಮ್ಮ ಟ್ವಿಟರ್‌ ಖಾತೆಯಲ್ಲಿ ಅಯ್ಯಪ್ಪಸ್ವಾಮಿಗೂ, ಜಲಪ್ರಳಯಕ್ಕೂ ನಂಟುಹಾಕಿ ಟ್ವೀಟ್ ಮಾಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಅಯ್ಯಪ್ಪಸ್ವಾಮಿ ದೇವಾಲಯ ಜಲಾವೃತವಾಗಿದೆ ಎಂಬುದನ್ನು ತೋರಿಸುವ ಫೋಟೋವೊಂದನ್ನು ಹಾಕಿ, “ಶಬರಿಮಲೈನಲ್ಲಿ ಈಗ ಏನಾಗುತ್ತಿದೆಯೋ ಅದಕ್ಕೂ, ಆ ಪ್ರಕರಣಕ್ಕೂ ಏನಾದರೂ ಸಂಬಂಧವಿದೆಯೇ ಎಂಬುದನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಪರಿಶೀಲಿಸಬಹುದು. ಹಾಗೇನಾದರೂ, ರವಷ್ಟು ಸಂಬಂಧವಿದೆ ಎನಿಸಿದರೆ, ಅಯ್ಯಪ್ಪ ಸ್ವಾಮಿ ಇಚ್ಛೆಗೆ ವಿರುದ್ಧವಾಗಿ ಪ್ರಕರಣದ ತೀರ್ಪು ನೀಡುವುದನ್ನು ಜನ ಒಪ್ಪುವುದಿಲ್ಲ,” ಎಂದು ಗುರುಮೂರ್ತಿ ಟ್ವೀಟ್ ಮಾಡಿದ್ದಾರೆ. ಆದರೆ, ಅವರು ಹಾಕಿರುವ ಆ ಫೋಟೋ ನಕಲಿ ಎಂಬುದೂ ಸೇರಿದಂತೆ, ಅವರ ಮನಸ್ಥಿತಿಯ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಇಂತಹ ವ್ಯಕ್ತಿಯೊಬ್ಬರು ನಮ್ಮ ದೇಶದ ಅತ್ಯುನ್ನತ ಹಣಕಾಸು ಕಣ್ಗಾವಲು ಸಂಸ್ಥೆಯ ನಿರ್ದೇಶಕರ ಸ್ಥಾನದಲ್ಲಿ ಕೂತಿರುವುದು ದುರದೃಷ್ಟಕರ ಎಂಬ ಆಕ್ರೋಶ ಕೂಡ ವ್ಯಕ್ತವಾಗಿದೆ. ಜನ ಸಾವು- ಬದುಕಿನ ನಡುವೆ ಹೋರಾಡುತ್ತಿರುವ ಹೊತ್ತಲ್ಲಿ, ಇಂತಹ ಕೀಳು ಯೋಚನೆ ಮಾಡಲು ನಿಮಗೆ ನಾಚಿಕೆಯಾಗುವುದಿಲ್ಲವೇ ಎಂದೂ ಟ್ವೀಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ದೇಶದ ನಿಜವಾದ ಶಾಪ ಶಬರಿಮಲೈ ಅಲ್ಲ, ಬದಲಾಗಿ ನಿಮ್ಮಂತಹ ಮೂರ್ಖರು ಎಂದೂ ಕೆಲವರು ಕಿಡಿಕಾರಿದ್ದಾರೆ.

ಅದೇ ವೇಳೆ, ಗುರುಮೂರ್ತಿಯವರ ವರಸೆಯನ್ನು ಬೆಂಬಲಿಸಿಯೂ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ, ಕೇರಳದ ದುರಂತಕ್ಕೆ ಅಯ್ಯಪ್ಪಸ್ವಾಯಿಯ ಮುನಿಸೇ ಕಾರಣ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಹೀಗೆ ಅಯ್ಯಪ್ಪಸ್ವಾಮಿಯ ಪ್ರಭಾವದ ವಾದ ಮಂಡಿಸುವವರೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕ ಪ್ರಧಾನಿ ನರೇಂದ್ರ ಮೋದಿಯವರ ಅನುಯಾಯಿಗಳೂ ಆಗಿದ್ದಾರೆ ಎಂಬುದು ಕೇವಲ ಕಾಕತಾಳೀಯವೇನಲ್ಲ!

ಮತ್ತೊಬ್ಬ ಮನುಷ್ಯನ ನೋವಿನಲ್ಲಿ, ಸಾವು-ಬದುಕಿನ ಹೋರಾಟದಲ್ಲಿ, ಎಲ್ಲವನ್ನೂ ಕಳೆದುಕೊಂಡು, ಎಲ್ಲರನ್ನೂ ಕಳೆದುಕೊಂಡು ನೆರವಿಗಾಗಿ, ಆಶ್ರಯಕ್ಕಾಗಿ ಗೋಗರೆಯುವ, ಕಣ್ಣೀರಿಡುವ ಸಹಚಾರಿಗಳ ಅಸಹಾಯಕತೆಯಲ್ಲಿ ಅವರ ಆ ಸಂಕಷ್ಟಕ್ಕೆ ಮಿಡಿಯುವ ಬದಲು, ಕೇವಲ ಮನುಷ್ಯರಾಗಿ ಮರುಗುವ ಬದಲು, ಸಿದ್ಧಾಂತ, ನಂಬಿಕೆ, ಜಾತಿ-ಮತ, ಧರ್ಮ, ಪಂಥಗಳ ತರತಮದ ಬೇಧವೆಣಿಸುವ, ನೊಂದವರನ್ನು ಇನ್ನಷ್ಟು ನೋಯಿಸುವ, ಅಸಹಾಯಕರನ್ನು ಮತ್ತಷ್ಟು ಕೆಳಕ್ಕೆ ತಳ್ಳುವ, ಹುಲ್ಲುಕಡ್ಡಿಯ ಆಸರೆ ಬಯಸುವವರ ಮೇಲೆ ಚಪ್ಪಡಿ ಹಾಕುವ ಈ ಮನಸ್ಸುಗಳ ಹಿಂದಿನ ಸಿದ್ಧಾಂತ ಎಷ್ಟು ಅಮಾನವೀಯ? ಎಷ್ಟು ಮನುಷ್ಯ ವಿರೋಧಿ ಎಂಬುದು ಕೂಡ ಗಂಭೀರ ಚರ್ಚೆಗೆ ಒಳಗಾಗಿದೆ.

ಕಲ್ಲು ಹೃದಯ ಕೂಡ ಕರಗುವ ಇಂತಹ ಹೊತ್ತಲ್ಲಿಯೂ, ಅಸಹ್ಯಕರ ದ್ವೇಷ ಮತ್ತು ಸೇಡು ಕಾರುವ ಮನಸ್ಥಿತಿ ನಮ್ಮ ಕೊಡಗಿನಲ್ಲೂ ಮುಂದುವರಿದಿದೆ. ಕೊಡಗಿನ ಪ್ರವಾಹ ಸಂತ್ರಸ್ತರ ಪರಿಹಾರ ಮತ್ತು ರಕ್ಷಣಾ ಕಾರ್ಯದ ವಿಷಯದಲ್ಲಿಯೂ ಸಾಮಾಜಿಕ ಜಾಲತಾಣಗಳಲ್ಲಿ ಕೋಮು ಮತ್ತು ಮತೀಯ ದ್ವೇಷದ ಮಾತುಗಳು ಜೋರಾಗಿಯೇ ಕೇಳಿಬಂದಿವೆ.

ಇಂತಹ ಅಮಾನವೀಯ ಆಂದೋಲನಗಳ ನಡುವೆಯೂ, ಸಂಕಷ್ಟದಲ್ಲಿರುವವರಿಗೆ ಮಿಡಿಯುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತಲೇ ಇದೆ. ಸಾವಿರಾರು ಮಂದಿ ಜೀವ ಪಣಕ್ಕಿಟ್ಟು ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜನರ ಕಣ್ಣೀರು ಒರೆಸುವ, ಅವರ ದುಃಖಕ್ಕೆ ಮಿಡಿಯುವ ಮನಸ್ಸುಗಳು ನೂರ್ಮಡಿಯಾಗುತ್ತಲೇ ಇವೆ ಎಂಬುದು, ಕೀಳು, ಅಸಹ್ಯಕರ ಮನೋವ್ಯಾದಿಯ ನಡುವೆಯೂ ಆರೋಗ್ಯವಂತ, ಜೀವಪರ ಮನಸ್ಸುಗಳು ಈ ನೆಲದಲ್ಲಿ ಇನ್ನೂ ಇವೆ ಎಂಬ ಸಮಾಧಾನಕ್ಕೆ ಕಾರಣ.

ಚಿತ್ರ: ಮೋಹನದಾಸ್ ಪೈ

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More