ಮಹಾಮಳೆ, ಭೂಕುಸಿತದಿಂದ ನಲುಗಿದ ಕೊಡಗಿಗೆ ನೆರವಿನ ಮಹಾಪೂರ

ಪ್ರಕೃತಿ ವಿಕೋಪದಿಂದ ನಲುಗಿರುವ ಕೊಡಗಿನಲ್ಲಿ ಆತಂಕದ ಮಧ್ಯೆಯೂ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಶನಿವಾರ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಕುಮಾರಸ್ವಾಮಿ ಪರಿಹಾರದ ಅಭಯ ನೀಡಿದ್ದಾರೆ. ಈ ನಡುವೆ, ಜಿಲ್ಲೆಗೆ ನೆರವಿನ ಮಹಾಪೂರವೇ ಹರಿದುಬಂದಿದೆ

ಪುಟ್ಟ ಜಿಲ್ಲೆ ಕೊಡಗು ಮಹಾಮಳೆಯ ಜಲಪ್ರಳಯಕ್ಕೆ ನಲುಗಿದ್ದು, ಬಹುಶಃ ಇದು ಈ ಶತಮಾನದ ಮಹಾದುರಂತ. ಶಾಂತಳ್ಳಿ ಗ್ರಾಮದ ನಿವಾಸಿ, 90 ವರ್ಷ ವಯಸ್ಸಿನ ಮಲ್ಲಪ್ಪ ಗೌಡ ಅವರ ಪ್ರಕಾರ, “ಈ ರೀತಿಯ ನಿರಂತರ ಮಣ್ಣು ಕುಸಿತದ ಪ್ರಕರಣಗಳು ಜಿಲ್ಲೆಯಲ್ಲಿ ಈ ಹಿಂದೆ ಯಾವತ್ತೂ ಸಂಭವಿಸಿದ್ದಿಲ್ಲ.’’ ರಾಷ್ಟೀಯ ವಿಪತ್ತು ನಿರ್ವಹಣಾ ಪಡೆ (ಎನ್‌ ಡಿಆರ್‌ಎಫ್‌) ಜೊತೆ ಸ್ಥಳಿಯ ಸಂಘ ಸಂಸ್ಥೆಗಳು ಹಗಲಿರುಳು ಶ್ರಮಿಸುತ್ತಿದ್ದರೂ, ಸಂಪರ್ಕವೇ ಸಾಧ್ಯವಾಗದಂಥ ದುರ್ಗಮವೆನಿಸುವ ಪ್ರದೇಶದಲ್ಲಿ ಸಿಲುಕಿಕೊಂಡಿರುವಹಲವು ಜನರ ರಕ್ಷಣೆ ಇನ್ನೂ ಸಾಧ್ಯವಾಗಿಲ್ಲ.

ಅನೇಕ ಗ್ರಾಮಗಳಲ್ಲಿ ಮತ್ತು ಸಂಪರ್ಕ ಬೆಸೆಯುವ ರಸ್ತೆಗಳ ಮಧ್ಯೆ ಗುಡ್ಡ ಕುಸಿದಿರುವುದರಿಂದ ರಕ್ಷಣಾ ಕಾರ್ಯಕರ್ತರು ಅಲ್ಲಿಗೆ ತಲುಪುವುದು ಸಾಧ್ಯವಾಗುತ್ತಿಲ್ಲ. ಭಾರಿ ಕುಸಿತಗಳ ನಂತರವೂ ರಸ್ತೆಯ ಸ್ವರೂಪ ಉಳಿದಿರುವ ಸ್ಥಳಗಳಲ್ಲಿ ಆರೇಳು ಅಡಿಗಳಷ್ಟು ಕೆಸರು ಆವರಿಸಿದ್ದು, ಸಂಚಾರ ದುಸ್ಸಾಧ್ಯವೆನಿಸಿದೆ. ಮಣ್ಣು ಮತ್ತು ಕೆಸರಿನ ಅಡಿಯಲ್ಲಿ ಸಿಲುಕಿಕೊಂಡಿರುವವರ ಅಥವಾ ಮೃತಪಟ್ಟವರ ಬಗ್ಗೆ ಸದ್ಯಕ್ಕೆ ಯಾವುದೇ ಮಾಹಿತಿ ಲಭ್ಯವಿಲ್ಲ ಎನ್ನುತ್ತದೆ ಜಿಲ್ಲಾಡಳಿತ. ಇನ್ನೂ ಸಂಪರ್ಕಕ್ಕೆ ಸಿಗದವರ ಸ್ಥಿತಿಗೆ ಹೇಗಿದೆ, ಸಾವು-ನೋವು, ಆಸ್ತಿಪಾಸ್ತಿ ನಷ್ಟದ ಪ್ರಮಾಣ ಎಷ್ಟೆನ್ನುವುದು ಸದ್ಯ ಯಾರ ಅಳತೆಗೂ ಸಿಗುತ್ತಿಲ್ಲ. ಈ ಮಧ್ಯೆ, ಮಳೆ ತುಸು ಬಿಡುವು ನೀಡಿದ್ದು ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳು ಬಿರುಸು ಪಡೆಯುವ ವಿಶ್ವಾಸ ಮೂಡಿದೆಯಾದರೂ, ಏನೂ ಸಂಭವಿಸಬಹುದೆನ್ನುವ ಆತಂಕ ಮುಂದುವರಿದೇ ಇದೆ.

ಕುಸಿದ ಬೆಟ್ಟ, ಸಂಪರ್ಕ ಕಡಿತ

ಸೋಮವಾರಪೇಟೆ ಸಮೀಪದ ತಾಕೇರಿ ಗ್ರಾಮದ ಹತ್ತಿರ ಇರುವ ಪ್ರವಾಸಿ ಸ್ಥಳ ಮಕ್ಕಳ ಗುಡಿ ಬೆಟ್ಟದ ಒಂದು ಭಾಗ ಸಂಪೂರ್ಣ ಕುಸಿದಿದ್ದು ಮುಂಜಾಗರೂಕತಾ ಕ್ರಮವಾಗಿ ಜಿಲ್ಲಾಡಳಿತ ಜನರನ್ನು ಸ್ಥಳಾಂತರಿಸಿದ್ದರಿಂದ ಯಾವುದೇ ಅಪಾಯ ಸಂಭವಿಸಿಲ್ಲ. ಆದರೆ ತಾಕೇರಿ- ಸೋಮವಾರಪೇಟೆ ರಸ್ತೆ ಸಂಪರ್ಕ ಕಡಿದುಕೊಂಡಿದ್ದು ದುರಸ್ತಿಗೆ ವಾರಗಳೇ ಬೇಕಾಗಬಹುದು. ಸೋಮವಾರಪೇಟೆ- ಮಡಿಕೇರಿ ರಸ್ತೆಯಲ್ಲಿ ಕೂಡ ಭೂಕುಸಿತದಿಂದ ಭಾರೀ ಹೊಂಡ ನಿರ್ಮಾಣವಾಗಿದ್ದು ಸಹಜ ಸ್ಥಿತಿಗೆ ಬರಲು ಬಹಳ ಸಮಯವೇ ಬೇಕಾಗುತ್ತದೆ. ಕುಶಾಲನಗರ ಸೇರಿದಂತೆ ಜಿಲ್ಲೆಯ ಎಲ್ಲೆಡೆ ಹೊಳೆ ಹಾಗೂ ನದಿಗಳ ನೀರಿನ ಮಟ್ಟ ಇನ್ನೂ ಕಡಿಮೆ ಆಗಿಲ್ಲ. ಭೂಕುಸಿತ ಕೂಡ ಅಲ್ಲಲ್ಲಿ ಮುಂದುವರಿದಿದೆ.

1,500ಕ್ಕೂ ಹೆಚ್ಚು ಜನರ ರಕ್ಷಣೆ; ನೆರವಿನ ಪೂರ

ದುರಂತದಲ್ಲಿ ಸಿಲುಕಿದವರ ರಕ್ಷಣೆಗೆ ಟೊಂಕ ಕಟ್ಟಿ ನಿಂತ ರಕ್ಷಣಾ ಪಡೆಗಳು ಮತ್ತು ಸ್ವಯಂಸೇವಕರ ಸೇವೆ ಜನರ ಶ್ಲಾಘನೆಗೆ ಪಾತ್ರವಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಜತೆಯೇ ದುಡಿಯುತ್ತಿರುವ ಕಾರ್ಯಕರ್ತರು ಈವರೆಗೂ ಸುಮಾರು 1500 ಕ್ಕೂ ಹೆಚ್ಚು ಜನರನ್ನು ಸಂಕಷ್ಟದಿಂದ ಪಾರು ಮಾಡಿ ಸಮೀಪದ ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರ ಮಾಡಿದ್ದಾರೆ. ಮೊನ್ನೆಯಿಂದ ದುಡಿಯುತ್ತಿರುವ ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್ ನ ಯೋಧರ ಜೊತೆಗೇ ಶನಿವಾರ ಬೆಳಗ್ಗೆ ಮಂಗಳೂರಿನಿಂದ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ ಯೋಧರೂ ಸೇರಿಕೊಂಡಿದ್ದು ಬಹುತೇಕ ತುರ್ತು ರಕ್ಷಣಾ ಕಾರ್ಯ ಮುಗಿಯುತ್ತ ಬಂದಿದೆ.

ಜಿಲ್ಲಾದ್ಯಂತ ಸುಮಾರು 30ಕ್ಕೂ ಅಧಿಕ ಗಂಜಿ ಕೇಂದ್ರಗಳಲ್ಲಿ ಜಿಲ್ಲಾಡಳಿತ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದೆ. “ಸುಮಾರು 30 ಜೆಸಿಬಿಗಳು ಹಾಗೂ 100 ಕ್ಕೂ ಅಧಿಕ ಲೋಕೋಪಯೋಗಿ ಎಂಜಿನಿಯರ್‌ಗಳು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ,’’ ಎಂದು ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ ಹೇಳಿದ್ದಾರೆ. ಸಚಿವರ ಪ್ರಯತ್ನದಿಂದ ಹಾಸನ ಹಾಲು ಉತ್ಪಾದಕರ ಒಕ್ಕೂಟದಿಂದ ಇಂದು ಮೂರು ಟ್ರಕ್ ಗಳಲ್ಲಿ ಸುಮಾರು 26 ಸಾವಿರ ಲೀಟರ್ ಹಾಲು, 3 ಸಾವಿರ ಬಿಸ್ಕತ್ ಪೊಟ್ಟಣ ಹಾಗೂ ಇತರ ಸಾಮಗ್ರಿಗಳು ಜಿಲ್ಲೆಗೆ ಬಂದು ತಲುಪಿವೆ. ಅಷ್ಟೇ ಅಲ್ಲ ಹಾಲು ಉತ್ಪಾದಕರ ಒಕ್ಕೂಟದ ಅಧಿಕಾರಿಗಳು ಮತ್ತು ನೌಕರರು ತಮ್ಮ ಒಂದು ದಿನದ ವೇತನವಾದ 10 ಲಕ್ಷ ರೂ.ಗಳನ್ನು ಪರಿಹಾರ ನಿಧಿಗೆ ನೀಡಿ ಔದಾರ್ಯ ಮೆರೆದಿದ್ದಾರೆ.

ದೂರದ ಟಿಬೆಟ್‌ನಿಂದ ಬಂದು ಕುಶಾಲನಗರದ ಬೈಲಕೊಪ್ಪೆಯಲ್ಲಿ ನೆಲೆಸಿರುವ ಟಿಬೇಟಿಯನ್ನರು ಸಹ ನೊಂದವರ ಕಣ್ಣೀರು ಒರೆಸಲು ಮುಂದಾಗಿರುವುದು ಜನಮೆಚ್ಚುಗೆಗೆ ಪಾತ್ರವಾಗಿದೆ. ಟಿಬೆಟಿಯನ್ ಯೂತ್ ಕಾಂಗ್ರೆಸ್ ಸದಸ್ಯರು, ಕುಶಾಲನಗರದಲ್ಲಿ ನೀರಿನಲ್ಲಿ ಮುಳುಗಿರುವ ಮನೆಗಳವರಿಗೆ ಆಹಾರ ಸಾಮಾಗ್ರಿ ಒದಗಿಸುತಿದ್ದು ಚರಂಡಿಗಳಿಗೆ ಬ್ಲೀಚಿಂಗ್ ಪೌಡರ್ ಹಾಕಿ ರೋಗ ಹರಡದಂತೆ ಶ್ರಮಿಸುತಿದ್ದಾರೆ.

ಬೆಂಗಳೂರಿನ ಕೊಡವ ಸಮಾಜದ ಕಾರ್ಯ ಭಾರೀ ಪ್ರಶಂಸೆಗೆ ಪಾತ್ರವಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಕೊಡವರು ತಾವು ನೆರವು ನೀಡಿರುವುದಲ್ಲದೆ ತಾವು ಕೆಲಸ ಮಾಡುತ್ತಿರುವ ಕಂಪೆನಿ ಸಂಸ್ಥೆಗಳಿಂದಲೂ ಸಾಕಷ್ಟು ನೆರವು ನೀಡುವಂತೆ ಮಾಡಿದ್ದು, ಸುಮಾರು 6 ಟ್ರಕ್ ಗಳಲ್ಲಿ ಅಕ್ಕಿ, ಬೇಳೆ, ಬಟ್ಟೆ, ಹೊದಿಕೆ ಇತ್ಯಾದಿ ಜಿಲ್ಲೆಯನ್ನು ತಲುಪಿವೆ. ಮೈಸೂರು,ಮಂಡ್ಯ ಜಿಲ್ಲಾಡಳಿತಗಳು ನಿರಶ್ರಿತರಿಗೆ ಪರಿಹಾರ ಸಾಮಗ್ರಿಯನ್ನು ಕಳಿಸಿದ್ದು ಮೈಸೂರಿನಿಂದ 9 ವೈದ್ಯರ ತಂಡವೂ ಜಿಲ್ಲೆಗೆ ಆಗಮಿಸಿದೆ. ಗಂಜೀ ಕೇಂದ್ರಗಳಲ್ಲಿ ಆಹಾರದ ಕೊರತೆ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೈಸೂರು, ಮಂಡ್ಯ, ಬೆಂಗಳೂರು ಸಹಿತ ಹಲವು ಜಿಲ್ಲೆಗಳಿಂದ ಅನೇಕ ಸಂಘಸಂಸ್ಥೆಗಳು ಆಹಾರ, ಜೌಷಧ, ಬಟ್ಟೆ, ನೀರು ಇತ್ಯಾದಿ ಅವಶ್ಯ ಪದಾರ್ಥಗಳನ್ನು ಸಂಗ್ರಹಿಸಿದ್ದು, ಕೊಡಗಿಗೆ ರವಾನಿಸುವ ಕೆಲಸ ಮಾಡುತ್ತಿವೆ.

ಸಾಮಾಜಿಕ ತಾಣಗಳು ಬಹುಮುಖ್ಯವಾಗಿ ವಾಟ್ಸಾಪ್ ನಿರಾಶ್ರಿತರ ನೆರವಿಗೆ ಸ್ಪಂದಿಸುವಲ್ಲಿ ಮುಖ್ಯ ಪಾತ್ರ ವಹಿಸಿದೆ. ಕೆಲವು ಕಿಡಿಗೇಡಿಗಳು ‘ಕೊಡಗಿನಲ್ಲಿ ಭೂಕಂಪ’ ಎಂಬ ಸುದ್ದಿಯನ್ನೂ, ಮಾದಾಪುರ ಸಮೀಪದ ಕೋಟೆಬೆಟ್ಟ ಕುಸಿಯಲಿದೆ ಎಂಬ ಮಾಹಿತಿ ಹರಿಯಬಿಟ್ಟು ಗೊಂದಲ ಸೃಷ್ಟಿಸಿದರು. ಆದರೆ, ಜಿಲ್ಲಾಧಿಕಾರಿಗಳು ಸ್ಪಷ್ಟನೆ ನೀಡಿ ವದಂತಿಗಳಿಗೆ ಕಿವಿಗೊಡಬಾರದೆಂದು ಮನವಿ ಮಾಡಿಕೊಂಡಿದ್ದಾರೆ.

ಮುಖ್ಯಮಂತ್ರಿ ಅಭಯ

ಇದನ್ನೂ ಓದಿ : ವಿಡಿಯೋ ಸ್ಟೋರಿ | ಮಳೆ ಆರ್ಭಟಕ್ಕೆ ಕಂಗಾಲಾದ ಕೊಡಗು, ದ್ವೀಪಗಳಾದ ತಗ್ಗು ಪ್ರದೇಶ

ಲೋಕೋಪಯೋಗಿ ಸಚಿವ ಎಚ್ ಡಿ ರೇವಣ್ಣ, ಕಂದಾಯ ಸಚಿವ ಆರ್ ವಿ ದೇಶಪಾಂಡೆ ಅವರ ಕೊಡಗು ಭೇಟಿಯ ಬೆನ್ನಲ್ಲೇ ಶನಿವಾರ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಜಿಲ್ಲೆಗೆ ಆಗಮಿಸಿ ವೈಮಾನಿಕ ಸಮೀಕ್ಷೆ ನಡೆಸಿದ್ದು, ಮನೆ ಕಳೆದುಕೊಂಡವರಿಗೆ ಎರಡು ಲಕ್ಷ ರೂ. ಮತ್ತು ಪ್ರಾಣ ಕಳೆದುಕೊಂಡವರ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಮಾತ್ರವಲ್ಲ, ಮನೆ ಕಳೆದುಕೊಂಡು ನಿರಾಶ್ರಿತರಾದವರಿಗೆ ಪ್ರತ್ಯೇಕ ಬಡಾವಣೆಯೊಂದನ್ನು ನಿರ್ಮಿಸಿ ಮನೆ ಕಟ್ಟಿಸಿಕೊಡುವದಾಗಿಯೂ ಭರವಸೆ ನೀಡಿದ್ದು ನಿರಾಶ್ರಿತರಲ್ಲಿ ಹೊಸ ಬದುಕಿನ ಬೆಳಕು ಮೂಡಿದೆ. ಅಲ್ಲದೆ, ಮುಂದಿನ ವಾರ ಪುನಃ ಜಿಲ್ಲೆಗೆ ಆಗಮಿಸಿ ಎರಡು ದಿನ ವಾಸ್ತವ್ಯ ಹೂಡುವುದಾಗಿಯೂ ಭರವಸೆ ನೀಡಿದ್ದಾರೆ. ಭಾನುವಾರ ಕೂಡ ಮುಖ್ಯಮಂತ್ರಿ ಕೊಡಗಿಗೆ ಭೇಟಿ ನೀಡುತ್ತಾರೆ ಎನ್ನಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More