ಕೊಡಗಿನ ಈಗಿನ ದುಸ್ಥಿತಿಗೆ ಮಿತಿಮೀರಿದ ಭೂಪರಿವರ್ತನೆ ಕಾರಣವಾಯಿತೇ?

ಸಂಪದ್ಭರಿತವಾಗಿದ್ದ ಕೊಡಗಿನ ಪರಿಸರ ಈಗ ಸಂಪೂರ್ಣ ತಲೆಕೆಳಗಾಗಿದ್ದು, ಅನಿರೀಕ್ಷಿತ ಪ್ರವಾಹಕ್ಕೆ ಜಿಲ್ಲೆಯು ಅಕ್ಷರಶಃ ನಲುಗಿಹೋಗಿದೆ. ಮಳೆಯ ಪ್ರಮಾಣದಲ್ಲಿ ಆಗಿರುವ ಏರಿಕೆಯೇ ಇದಕ್ಕೆಲ್ಲ ಕಾರಣ ಎಂದು ಮೇಲ್ನೋಟಕ್ಕೆ ಅನ್ನಿಸಿದರೂ ಈಗಿನ ಸ್ಥಿತಿಗೆ ಬೇರೆಯೇ ಕಾರಣಗಳಿವೆ

ನಿರಂತರವಾಗಿ ಸುರಿಯುತ್ತಿರುವ ಮಳೆ, ಗುಡ್ಡ ಕುಸಿತ, ಬಿರುಗಾಳಿಗೆ ಕೊಡಗು ಅಕ್ಷರಶಃ ತತ್ತರಿಸಿದೆ. ಮಡಿಕೇರಿ, ವೀರಾಜಪೇಟೆ, ಸೋಮವಾರಪೇಟೆಗಳಲ್ಲಿ ಮಳೆ ಪ್ರಮಾಣ ಈ ಬಾರಿ ಶೇ.೫೦ಕ್ಕಿಂತಲೂ ಹೆಚ್ಚಿದೆ. ಈ ಜಿಲ್ಲೆಯಲ್ಲಿ ಅತಿ ಸೂಕ್ಷ್ಮ ಹಾಗೂ ಜಲಮೂಲವನ್ನು ಹಿಡಿದಿಟ್ಟುಕೊಳ್ಳುವ ಕೃಷಿ ಪ್ರದೇಶಗಳನ್ನು ಸಂರಕ್ಷಿಸುವಲ್ಲಿ ಸ್ಥಳೀಯ ಆಡಳಿತವೂ ಸೇರಿದಂತೆ ಕಂದಾಯ ಇಲಾಖೆ ವೈಫಲ್ಯವೇ ಈಗ ಎದುರಾಗಿರುವ ಪ್ರವಾಹಕ್ಕೆ ಮೂಲ ಕಾರಣ. ಮಡಿಕೇರಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸದ್ದಿಲ್ಲದೆ ನಡೆಯುತ್ತಿರುವ ನಗರೀಕರಣವೂ ಒಂದಷ್ಟು ಕೊಡುಗೆ ನೀಡಿದೆ.

ಕೃ‍ಷಿ ಪ್ರದೇಶಗಳನ್ನು ಖರೀದಿಸಿ ಭೂಪರಿವರ್ತನೆಗೆ ಒಳಪಡಿಸುತ್ತಿರುವುದಲ್ಲದೆ, ಮನಸೋ ಇಚ್ಛೆ ಬಡಾವಣೆಗಳನ್ನು ನಿರ್ಮಾಣ ಮಾಡುತ್ತಿರುವುದು ಮತ್ತೊಂದು ಕಾರಣ. ಜಿಲ್ಲೆಯಲ್ಲಿ ಈಗಾಗಲೇ ಆಗಿರುವ ಭೂಪರಿವರ್ತನೆ ಬೆಳವಣಿಗೆಯನ್ನು ಗಮನಿಸಿದರೆ, ಮುಂದಿನ ದಿನಗಳು ಆತಂಕದಿಂದಲೇ ಕೂಡಿವೆ. ವಸತಿ ಬಡಾವಣೆಗಳು ಮತ್ತು ರೆಸಾರ್ಟ್‌ಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಭೂಪರಿವರ್ತನೆ ಆಗಿದೆ ಎನ್ನಲಾಗಿದೆ.

ಕೃಷಿಯೇತರ ಚಟುವಟಿಕೆಗಳಿಗೆ ಕೃಷಿಭೂಮಿ ಬಳಕೆ ಮಾಡಿಕೊಳ್ಳಲು ಮಡಿಕೇರಿ ಪಟ್ಟಣ ಅಭಿವೃದ್ಧಿ ಪ್ರಾಧಿಕಾರ (ಮುಡಾ) ಅನುಮತಿ ನೀಡುವ ಮೂಲಕ ಪ್ರವಾಹಕ್ಕೆ ಪರೋಕ್ಷವಾಗಿ ಕಾರಣವಾಗಿದೆ. ನೀರಿನ ಮುಖ್ಯ ಸೆಲೆಗಳಾಗಿರುವ ಭತ್ತದ ಗದ್ದೆಗಳು ಕಣ್ಮರೆ ಆಗುತ್ತಿರುವುದಲ್ಲದೆ, ಈ ಪ್ರದೇಶಗಳು ಬಡಾವಣೆಗಳಾಗಿ ತಲೆ ಎತ್ತಿವೆ. ಅತ್ಯಂತ ಸೂಕ್ಷ್ಮ ಪರಿಸರದ ಸಾಮರ್ಥ್ಯ ಹೊಂದಿರುವ ಕೊಡಗಿನಲ್ಲಿ ಅವೈಜ್ಞಾನಿಕವಾಗಿ ಬಡಾವಣೆಗಳ ನಿರ್ಮಾಣವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಬಡಾವಣೆಗಳ ಸಂಖ್ಯೆ ಹೆಚ್ಚುತ್ತಿರುವ ಕಾರಣ ಮೂಲಸೌಕರ್ಯ ಮತ್ತು ಜಲಮೂಲಗಳಿಗೆ ವಿಪರೀತ ಎನಿಸುವಷ್ಟರ ಮಟ್ಟಿಗೆ ಧಕ್ಕೆಯಾಗುತ್ತಿದೆ. ಇದರಿಂದಾಗುವ ಪರಿಣಾಮಗಳ ಬಗ್ಗೆ ಅರಿವಿದ್ದರೂ ಕೊಡಗು ಜಿಲ್ಲೆಯಾದ್ಯಂತ ಕೃಷಿ ಹಾಗೂ ಕಾಫಿ ಜಮೀನುಗಳು ವಾಣಿಜ್ಯ ಹಾಗೂ ಬಡಾವಣೆಗಳ ನಿರ್ಮಾಣಕ್ಕೆಂದೇ ಭೂಪರಿವರ್ತನೆ ಗೆ ಸ್ಥಳೀಯ ಆಡಳಿತ ಅನುಮೋದನೆ ನೀಡುತ್ತಲೇ ಇದೆ.

ಇದನ್ನೂ ಓದಿ : ರಾಜ್ಯದ ಎಲ್ಲ ಕಡೆಯೂ ಮಳೆ ಆಗಿಲ್ಲ; ಎದುರಾಗಿದೆ ಕುಡಿಯುವ ನೀರಿಗೆ ತತ್ವಾರ

ಕಳೆದ ಹತ್ತು ವರ್ಷಗಳಲ್ಲಿ ಅಂದಾಜು 2,800 ಎಕರೆಯಷ್ಟು ಕಾಫಿ ತೋಟ ಹಾಗೂ ಭತ್ತದ ಗದ್ದೆಗಳು ವಾಣಿಜ್ಯ ಉದ್ದೇಶಗಳಿಗಾಗಿ ಭೂಪರಿವರ್ತನೆ ಆಗಿದೆ ಎಂದು ಹೇಳಲಾಗುತ್ತಿದೆ. ಹೀಗಾಗಿ, ಕೊಡಗಿನ ನಗರಗಳು ಹಾಗೂ ಪಟ್ಟಣಗಳು ವಿಸ್ತರಣೆಯಾಗುತ್ತಿವೆ. ಹೊಸದಾಗಿ ನಿರ್ಮಾಣವಾಗುತ್ತಿರುವ ವಸತಿ ಬಡಾವಣೆಗಳು ಎರಡು ಪಟ್ಟಣಗಳ ನಡುವೆ ನಿರ್ಮಿತವಾಗುತ್ತಿವೆ. ಇದರಿಂದ ಪಟ್ಟಣಗಳು ಪರಸ್ಪರ ಸೇರ್ಪಡೆಯಾಗಿ ದೊಡ್ಡ ಪಟ್ಟಣವಾಗುತ್ತಿವೆ.

ಮಡಿಕೇರಿಯ ಸಿ.ಡಿ.ಪಿ.ಯನ್ನು (ಪಟ್ಟಣ ಅಭಿವೃದ್ಧಿ ಯೋಜನೆ) ಮೇಕೇರಿವರೆಗೆ ಅನುಮತಿ ನೀಡಲಾಗಿದೆ. ವಿಪರ್ಯಾಸ ಎಂದರೆ, ಬಡಾವಣೆಗಳಿಗೆ ಮತ್ತು ಸಿಡಿಪಿಗೆ ಸಂಬಂಧಿಸಿದ ಗ್ರಾಮ ಪಂಚಾಯಿತಿಗಳಿಂದಾಗಲೀ ಅಥವಾ ಇತರ ಅಧಿಕಾರಿಗಳಿಂದಾಗಲೀ ಅನುಮತಿ ಪಡೆದಿಲ್ಲ ಎಂಬ ಆರೋಪಗಳು ಕೇಳಿಬಂದರೂ ಅನಧಿಕೃತ ಬಡಾವಣೆಗಳಿಗೆ ಕಡಿವಾಣ ಬೀಳುತ್ತಿಲ್ಲ.

ಮೈಸೂರು-ಕೋಝಿಕೋಡ್ 400 ಕೆ.ವಿ ವಿದ್ಯುತ್‍ ಲೈನ್ ನಿರ್ಮಾಣಕ್ಕೆ 54,000 ಮರಗಳನ್ನು ಕಡಿದು ಹಾಕಲಾಗಿದೆ. ಕರಿಕೆಯಲ್ಲಿನ ಜಲವಿದ್ಯುತ್ ಯೋಜನೆಗಾಗಿಯೂ ಮರಗಳ ಮಾರಣಹೋಮ ಆಗಿದೆ. ಮುಂದಿನ ದಿನಗಳಲ್ಲಿ ರೈಲುಮಾರ್ಗ ನಿರ್ಮಾಣ, ರಾಷ್ಟ್ರೀಯ ಹೆದ್ದಾರಿ ಯೋಜನೆ ಹಾಗೂ ಕೊಂಗಣ ಹೊಳೆ ಯೋಜನೆಗಳಿಗಾಗಿ ಬೃಹತ್ ಪ್ರಮಾಣದಲ್ಲಿ ಕೊಡಗಿನ ಅರಣ್ಯ ಬಳಕೆಯಾಗಿದ್ದೇ ಆದಲ್ಲಿ ಕೊಡಗಿನ ಸ್ಥಿತಿ ಮತ್ತಷ್ಟು ಭಯಾನಕವಾಗಲಿದೆ ಎಂದು ಹೇಳಲಾಗುತ್ತಿದೆ.

ಕೊಡಗು ಜಿಲ್ಲೆಯಲ್ಲಿನ ಮಳೆ ವಿವರ

  • ಜನವರಿ ೧ರಿಂದ ಅಗಸ್ಟ್‌ ೧೮ರವರೆಗೆ ೩೨೭೦ ಮಿಲಿಮೀಟರ್‌
  • ಜೂನ್ ೧ರಿಂದ ಆಗಸ್ಟ್‌ ೧೮ರವರೆಗೆ ೨೮೪೮ ಮಿಮೀ
  • ಜೂನ್‌ ತಿಂಗಳಲ್ಲಿ ೮೯೧ ಮಿಮೀ
  • ಜುಲೈ ತಿಂಗಳಿನಲ್ಲಿ ೧,೧೧೭ ಮಿಮೀ
  • ಆಗಸ್ಟ್‌ ೧ರಿಂದ ೧೮ರವರೆಗೆ ೮೩೯ ಮಿಮೀ
  • ಆಗಸ್ಟ್‌ ೧೨ರಿಂದ ೧೮ರವರೆಗೆ ೫೮೫ ಮಿಮೀ
  • ಮಡಿಕೇರಿಯಲ್ಲಿ ಮಳೆ ( ಜನವರಿ ೧ರಿಂದ ಆಗಸ್ಟ್‌ ೧೮ವರೆಗೆ) ೪,೪೦೨ ಮಿಮೀ (ಶೇ.೪೦ ಹೆಚ್ಚಳ)
  • ಸೋಮವಾರ ಪೇಟೆ: ೨,೫೭೨ ಮಿಮೀ (ಶೇ.೫೪ ಹೆಚ್ಚಳ)
  • ವಿರಾಜಪೇಟೆ: ೨೭೩೨ ಮಿಮೀ (ಶೇ.೫೪ ಹೆಚ್ಚಳ)

ಇನ್ನು, 2011ರ ಸಾಲಿನಲ್ಲಿ ಮಾಧವ ಗಾಡ್ಗೀಳರ ನೇತೃತ್ವದಲ್ಲಿ ರಚನೆಯಾದ ಪಶ್ಚಿಮಘಟ್ಟ ಪರಿಸರಶಾಸ್ತ್ರ ಪರಿಣಿತರ ಸಮಿತಿಯು ಕೊಡಗಿನ ಮೂರೂ ತಾಲೂಕುಗಳನ್ನು ಪರಿಸರ ಸೂಕ್ಷ್ಮ ಪ್ರದೇಶಗಳೆಂದು ಘೋಷಿಸಲು ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಪರಿಶೀಲಿಸಿ ವರದಿ ತಯಾರಿಸಲು ಸರಕಾರವು ಕಸ್ತೂರಿ ರಂಗನ್ ಸಮಿತಿಯನ್ನು ರಚಿಸತ್ತು. ಆ ಸಂದರ್ಭದಲ್ಲಿ ಕೊಡಗು ವನ್ಯಜೀವಿ ಸಂರಕ್ಷಣಾ ಸಂಘವು ಕಸ್ತೂರಿ ರಂಗನ್ ಸಮಿತಿಗೆ ಕೆಲವು ಶಿಫಾರಸುಗಳನ್ನು ಮಾಡಿತ್ತು. ಇದರ ಪರಿಣಾಮವಾಗಿ, ಕಸ್ತೂರಿ ರಂಗನ್ ಸಮಿತಿಯು ಮಾಧವ ಗಾಡ್ಗೀಳ್ ಶಿಫಾರಸನ್ನು ಕೆಲವು ಮಾರ್ಪಾಡುಗಳೊಂದಿಗೆ ಜಾರಿಗೆ ತರುವಂತೆ ಸೂಚಿಸಿತು. ಸ್ಥಳೀಯ ಚುನಾಯಿತ ಜನಪ್ರತಿನಿಧಿಗಳು ಮಾಧವ ಗಾಡ್ಗೀಳ್ ವರದಿಗೆ ಸ್ಪಂದಿಸಿ ಕೆಲ ಷರತ್ತುಗಳೊಡನೆ ಒಪ್ಪಿಕೊಂಡಿದ್ದರೆ ಕೊಡಗಿಗೆ ಇಂದಿನ ಸ್ಥಿತಿ ಬಂದೊದಗಿರುತ್ತಿರಲಿಲ್ಲ. ವಿದ್ಯುತ್ ಮಾರ್ಗ, ಕೊಂಗಣ ಹೊಳೆ ತಿರುವು ಯೋಜನೆ ಹಾಗೂ ರೈಲುಮಾರ್ಗ ಯೋಜನೆಗಳನ್ನು ತಪ್ಪಿಸಬಹುದಿತ್ತು. ಆದರೆ, ಜನಪ್ರತಿನಿಧಿಗಳು ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದೇ ಈಗಿನ ಸ್ಥಿತಿಗೆ ಮತ್ತೊಂದು ಕಾರಣ ಎನ್ನಲಾಗುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More