ಸ್ವಾಮಿ ಅಯ್ಯಪ್ಪ, ಬಿಷಪ್ ಫ್ರಾಂಕೋ, ಗಾಡ್ಗಿಳ್ ವರದಿ ನಡುವೆ ಉಕ್ಕಿ ಹರಿದ ನೆರೆ

ಕೇರಳ, ಕೊಡಗಿನ ಪ್ರವಾಹದ ಹಿನ್ನೆಲೆಯಲ್ಲಿ ಮೂವರು ವ್ಯಕ್ತಿಗಳ ಬಗ್ಗೆ ಜನ ಮಾತನಾಡಿಕೊಂಡರು. ಅದರಲ್ಲಿ ಇಬ್ಬರು ಧರ್ಮಕ್ಕೆ ಸಂಬಂಧಿಸಿದವರಾದರೆ, ಮತ್ತೊಬ್ಬರು ಪರಿಸರದ ಪರ ನಿಂತವರು. ಈ ಚರ್ಚೆಯಲ್ಲಿ ಒಂದು ಮೌಢ್ಯವನ್ನು ಬಿಂಬಿಸಿದರೆ, ಮತ್ತೊಂದು ಪ್ರಾಕೃತಿಕ ಸತ್ಯ ಸಾರಿತು

ಕೇರಳ ಮತ್ತು ಕೊಡಗಿನ ಮಳೆಗೆ ಸಂಬಂಧಿಸಿದಂತೆ ಮೂವರು ವ್ಯಕ್ತಿಗಳು ಪ್ರಧಾನವಾಗಿ ಚರ್ಚೆಗೆ ಒಳಗಾಗುತ್ತಿದ್ದಾರೆ. ಒಬ್ಬರು ದೇವರೆಂದು ಪೂಜೆಗೆ ಒಳಗಾಗುವ ಅಯ್ಯಪ್ಪ ಸ್ವಾಮಿ, ಎರಡನೆಯವರು ಬಿಷಪ್ ಫ್ರಾಂಕೋ ಮುಳಕ್ಕಳ್, ಮೂರನೆಯವರು ಪರಿಸರ ತಜ್ಞ ಮಾಧವ ಗಾಡ್ಗಿಳ್. ಮೊದಲನೆಯವರು ಪೌರಾಣಿಕ ವ್ಯಕ್ತಿ ಎನಿಸಿಕೊಂಡರೆ, ಎರಡನೆಯವರು ಅತ್ಯಾಚಾರದ ಕಳಂಕ ಎದುರಿಸುತ್ತಿರುವವರು, ಮೂರನೆಯವರು ಸದ್ಯ ತಿರಸ್ಕಾರಕ್ಕೆ ಒಳಗಾಗಿರುವ ಪಶ್ಚಿಮಘಟ್ಟ ಜೈವಿಕ ಸಮಿತಿ ವರದಿಯನ್ನು ರೂಪಿಸಿದವರು. ಕುತೂಹಲದ ಸಂಗತಿ ಎಂದರೆ, ಕೇರಳ ನೆರೆಯ ಉದ್ದಕ್ಕೂ ಈ ಮೂವರೂ ಜನರ ಬಾಯಲ್ಲಿ ಹರಿದಾಡಿದ್ದಾರೆ.

“ಸ್ವಾಮಿ ಅಯ್ಯಪ್ಪ ದೇವಸ್ಥಾನವನ್ನು ಮಹಿಳೆಯೊಬ್ಬರು ಪ್ರವೇಶಿಸಿದ್ದರಿಂದ ದೇವರು ಮುನಿದು ಕೇರಳಕ್ಕೆ ಇಂತಹ ಸ್ಥಿತಿ,” ಬಂದಿದೆ ಎಂದು ಮೊದಮೊದಲು ಸುದ್ದಿ ಹರಿದಾಡಿತು. ನಂತರ ಅದು ಇನ್ನೊಂದು ರೂಪ ಪಡೆದುಕೊಂಡಿತು. ಟ್ವಿಟರ್‌ನಲ್ಲಿ ಸೆಲ್ವಾ (@starrysky186) ಎಂಬುವವರು ಸುಪ್ರಿಯನ್ ಎಂಬುವವರಿಗೆ ನೀಡಿದ ಪ್ರತಿಕ್ರಿಯೆ ರೂಪದ ಹೇಳಿಕೆ ಹೇಳಿಕೆಯೊಂದು ಹೀಗಿತ್ತು: “ಕೇರಳಕ್ಕೆ ಸಹಾಯಹಸ್ತ ಚಾಚಬೇಡಿ. ರಾಜ್ಯದ ಅರ್ಧಕ್ಕೂ ಹೆಚ್ಚು ಭಾಗ ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರಿಂದ ತುಂಬಿದೆ. ಶಬರಿಮಲೈಗೆ ತಾವು ಮಾಡುತ್ತಿರುವುದಕ್ಕಾಗಿ ಅವರು ಅನುಭವಿಸಲಿ. ಅವರು ತಪ್ಪಾಗಿ ದೇವರನ್ನು ಎದುರು ಹಾಕಿಕೊಂಡಿದ್ದಾರೆ,” ಎಂದು ವಿವರಿಸಲಾಗಿತ್ತು. ಇಂತಹ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಕಟುಟೀಕೆಗೂ ಗುರಿಯಾಗುತ್ತಿದೆ. ಅಲ್ಲದೆ, ಇತ್ತೀಚೆಗೆ ರಿಸರ್ವ್ ಬ್ಯಾಂಕ್ ನಿರ್ದೇಶಕರಾಗಿ ನೇಮಕಗೊಂಡ ಎಸ್ ಗುರುಮೂರ್ತಿ ಅವರ ಹೆಸರಿನಲ್ಲಿ ಪ್ರಕಟವಾಗಿರುವ ಹೇಳಿಕೆಯೊಂದರಲ್ಲಿ, “ಕೇರಳದ ಪ್ರವಾಹಕ್ಕೂ ಸುಪ್ರೀಂ ಕೋರ್ಟಿನಲ್ಲಿರುವ ಶಬರಿಮಲೆ ಮಹಿಳಾ ಪ್ರವೇಶ ಪ್ರಕರಣಕ್ಕೂ ಸಂಬಂಧವಿರಬಹುದೇ? ಮಿಲಿಯದಲ್ಲಿ ಒಂದು ಭಾಗ ಸಂಬಂಧವಿದ್ದರೂ ಕೋರ್ಟ್ ಶಬರಿಮಲೆಯ ವಿರುದ್ಧ ತೀರ್ಪು ನೀಡಬಾರದು,” ಎಂದು ಸೂಚಿಸಲಾಗಿದೆ. ಸರ್ಕಾರದ ಅತ್ಯುನ್ನತ ಸ್ಥಾನದಲ್ಲಿರುವವರು ಇಂತಹ ಆಧಾರರಹಿತ ಹೇಳಿಕೆ ನೀಡುತ್ತಿರುವುದಕ್ಕೆ ಕೂಡ ಭಾರಿ ಪ್ರತಿರೋಧ ವ್ಯಕ್ತವಾಗಿದೆ.

ಎರಡನೆಯವರು ಜಲಂಧರ್ ಬಿಷಪ್ ಫ್ರಾಂಕೋ ಮುಳಕ್ಕಳ್. ಕೆಲ ವರ್ಷಗಳ ಹಿಂದೆ ಕ್ರೈಸ್ತ ಸನ್ಯಾಸಿನಿಯೊಬ್ಬರ ಮೇಲೆ ಅತ್ಯಾಚಾರ ಎಸಗಿದ ಆರೋಪ ಅವರ ಮೇಲಿದೆ. ಬಿಷಪ್ ವಿರುದ್ಧ ಇಲ್ಲಸಲ್ಲದ ಆರೋಪ ಹೊರಿಸಿದ್ದರಿಂದಲೇ ಕೇರಳ ಪ್ರವಾಹ ಅನುಭವಿಸುವಂತಾಯಿತು ಎಂಬಂತಹ ಮಾತುಗಳು ಕೇಳಿಬರುತ್ತಿವೆ. ಇದು ಕೂಡ ಆಧಾರರಹಿತ ಅತಿರೇಕದ ಹೇಳಿಕೆ ಎನ್ನುವುದರಲ್ಲಿ ಅನುಮಾನವೇ ಇಲ್ಲ.

ಆದರೆ, ಕೇರಳ ಪ್ರವಾಹಕ್ಕೆ ಅಯ್ಯಪ್ಪಸ್ವಾಮಿ ಕಾರಣವಲ್ಲ, ಬಿಷಪ್ ಫ್ರಾಂಕೋ ಕೂಡ ಕಾರಣವಲ್ಲ, ಬದಲಿಗೆ ಮಾಧವ ಗಾಡ್ಗಿಳ್ ಅವರ ವರದಿಯನ್ನು ತಿರಸ್ಕರಿಸಿದ್ದು ಎನ್ನುತ್ತದೆ ಒಂದು ವಾಟ್ಸಾಪ್ ಸಂದೇಶ. ಈ ಸಂದೇಶ ಹರಿದಾಡುವ ಒಂದು ದಿನ ಮೊದಲು (ಆ.17) ಮಾಧವ ಗಾಡ್ಗಿಳ್ ಅವರು ಕೇರಳದ ಸ್ಥಳೀಯ ಮಾಧ್ಯಮಗಳೊಂದಿಗೆ ಮಾತನಾಡುತ್ತ, “ಬೇಜವಾಬ್ದಾರಿಯುತ ಪರಿಸರ ನೀತಿಗಳು, ಕೇರಳದ ಪ್ರವಾಹಕ್ಕೆ ಭೂಕುಸಿತಕ್ಕೆ ಕಾರಣ. ಇದೊಂದು ಮಾನವ ನಿರ್ಮಿತ ದುರಂತ,” ಎಂದು ಕಟುಶಬ್ದಗಳಲ್ಲಿ ಟೀಕಿಸಿದರು.

ಮೇಲಿನೆರಡು ಸಂಗತಿಗಳನ್ನು ಆಧಾರರಹಿತ ಎಂದು ಬದಿಗೆ ಸರಿಸಿದಷ್ಟು ಸುಲಭವಾಗಿ ಗಾಡ್ಗಿಳ್ ಮಾತುಗಳನ್ನು ಪಕ್ಕಕ್ಕಿಡಲು ಬರುವುದಿಲ್ಲ. ಅವರ ನೇತೃತ್ವದಲ್ಲಿ ರಚನೆಯಾದ ಪಶ್ಚಿಮಘಟ್ಟ ಜೈವಿಕ ತಜ್ಞರ ಸಮಿತಿ (ಡಬ್ಲ್ಯೂಜಿಇಇಪಿ) ಜೈವಿಕ ಸೂಕ್ಷ್ಮ ವಲಯಗಳು ಎಂದು ಗುರುತಿಸಿದ್ದ ಪ್ರದೇಶಗಳಲ್ಲೇ ಹೆಚ್ಚು ಹಾನಿ ಉಂಟಾಗಿದೆ. ಪಶ್ಚಿಮಘಟ್ಟದ ಸುಮಾರು 1,40,000 ಕಿಲೋಮೀಟರ್ ವಿಸ್ತೀರ್ಣದ ಭೂಭಾಗವನ್ನು ಮೂರು ವರ್ಗಗಳಾಗಿ ವಿಂಗಡಿಸಿ 2011ರಲ್ಲಿ ಕೇಂದ್ರಕ್ಕೆ ವರದಿ ನೀಡಲಾಗಿತ್ತು. ಸ್ಥಳೀಯ ಸ್ವಯಂ ಆಡಳಿತ ನಡೆಸುವವರೊಂದಿಗೆ ಕೈಜೋಡಿಸಿ ಪರಿಸರ ಸಮತೋಲನ ಸಾಧಿಸಬೇಕು ಎಂದು ಹೇಳಲಾಗಿತ್ತು. ಭೂಕುಸಿತಕ್ಕೆ ಘಟ್ಟ ಪ್ರದೇಶದಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆ ಕಾರಣ ಎಂದು ಅವರು ವರದಿಯಲ್ಲಿ ಉಲ್ಲೇಖಿಸಿದ್ದರು. ಇತರ ಪರಿಸರ ತಜ್ಞರು ಕೂಡ ಗಾಡ್ಗಿಳ್ ವರದಿಯ ಮಹತ್ವವನ್ನು ಉಲ್ಲೇಖಿಸುತ್ತ, ಘಟ್ಟಸಾಲಿನಲ್ಲಿ ಪ್ರವಾಸದ ಹೆಸರಿನಲ್ಲಿ ನಡೆಯುತ್ತಿರುವ ಅಕ್ರಮಗಳು, ಅರಣ್ಯ ಒತ್ತುವರಿ ಇತ್ಯಾದಿ ಕಾರಣಗಳನ್ನು ನೀಡಿದ್ದರು. ಆದರೆ, ಕೇರಳ ಸರ್ಕಾರ ವರದಿಯನ್ನು ಸಾರಾಸಗಟಾಗಿ ತಿರಸ್ಕರಿಸಿತು. ಅಷ್ಟೇ ಅಲ್ಲ, ಘಟ್ಟ ಹಬ್ಬಿರುವ ಉಳಿದ ರಾಜ್ಯಗಳು ಕೂಡ ಅದನ್ನು ಅಂಗೀಕರಿಸಲು ಮನಸ್ಸು ಮಾಡಲಿಲ್ಲ. ಭೂಕಬಳಿಕೆದಾರರು, ಪರಿಸರ ನಾಶ ಮಾಡುವವರ ಕೈವಾಡ ಇದರಲ್ಲಿದೆ ಎಂಬ ಮಾತುಗಳಿವೆ.

ಇದನ್ನೂ ಓದಿ : ಕೇರಳ ಭೀಕರ ಪ್ರವಾಹ; ಭಾರತೀಯ ಸೇನಾ ಕಾರ್ಯಾಚರಣೆಯ ರೋಚಕ ದೃಶ್ಯಗಳು

ಬಳಿಕ ಗಾಡ್ಗಿಳ್ ವರದಿಯಷ್ಟು ಕಠಿಣವಾಗಿರದ ಕಸ್ತೂರಿ ರಂಗನ್ ವರದಿ ಎಂಬ ‘ಸುಧಾರಿತ’ ರೂಪವೊಂದನ್ನು ಸರ್ಕಾರ ಪರಿಚಯಿಸಿತು. ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನವನ್ನು ಬಳಸಿ ರೂಪುಗೊಂಡಿದ್ದ ಈ ವರದಿ ಇಡೀ ಘಟ್ಟ ಪ್ರದೇಶವನ್ನು ನೈಸರ್ಗಿಕ ಭೂಪ್ರದೇಶ ಸಾಂಸ್ಕೃತಿಕ ಭೂಪ್ರದೇಶ ಎಂದು ಎರಡು ಭಾಗಗಳಾಗಿ ವಿಂಗಡಿಸಿತು. ಅದರಂತೆ, ಶೇ.41ರಷ್ಟು ಪ್ರದೇಶ ನೈಸರ್ಗಿಕ ಭೂಮಿ ಮತ್ತು ಶೇ.51ರಷ್ಟು ಭೂಮಿ ಸಾಂಸ್ಕೃತಿಕ ಭೂಪ್ರದೇಶ ಎಂದು ಭಾಗ ಮಾಡಿತು. ಶೇ.41ರಷ್ಟು ಭೂಪ್ರದೇಶದಲ್ಲಿ ಕಡಿಮೆ ಜನಸಂಖ್ಯೆ ಇದ್ದು ಜೀವವೈವಿಧ್ಯ ಅಪಾರವಾಗಿದೆ. ಹಾಗೂ ಶೇ.59ರಷ್ಟು ಭೂಪ್ರದೇಶ ಮಾನವ ವಸತಿಯಿಂದ ಕೂಡಿದ್ದು ಅಲ್ಲಿ ಕೃಷಿ ನಡೆಯುತ್ತಿದೆ ಎಂದು ಅಭಿಪ್ರಾಯಪಟ್ಟಿತು. ಇಷ್ಟೂ ಪ್ರದೇಶವನ್ನು ಜೈವಿಕ ಸೂಕ್ಷ್ಮ ಪ್ರದೇಶ (ಇಎಸ್ಎ) ಎಂದು ಗುರುತಿಸುವ ಬದಲಿಗೆ ಅದು ನೈಸರ್ಗಿಕ ಭೂಪ್ರದೇಶದ ಶೇ.90ರಷ್ಟು ಭಾಗವನ್ನು ರಕ್ಷಣೆ ಮಾಡಿದರೆ ಸಾಕು ಎಂದು ಹೇಳಿತು. ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸದೇ ಹೋದರೂ ವಾಣಿಜ್ಯ ಚಟುವಟಿಕೆಗಳನ್ನು ನಡೆಸಲು ಅಡ್ಡಿ ಇಲ್ಲ ಎಂದಿತು. ಪರಿಸರ ಪ್ರವಾಸ, ಸುಸ್ಥಿರ ಕೃಷಿ ಮುಂತಾದ ಚಟುವಟಿಕೆಗಳಿಗೆ ವರದಿ ಯಾವುದೇ ಅಡ್ಡಿ ಉಂಟುಮಾಡಲಿಲ್ಲ.

ಆದರೆ, ಇದಕ್ಕೂ ವಿರೋಧ ವ್ಯಕ್ತವಾಯಿತು. ಕೇವಲ ಭೂಗಳ್ಳರು, ಪ್ರಕೃತಿಯ ಖಳರೇ ಇದನ್ನು ವಿರೋಧಿಸುತ್ತಿದ್ದಾರೆ ಎಂದರೆ, ಅದು ಅತಿರೇಕದ ಹೇಳಿಕೆಯಾದೀತು. ಈಗಾಗಲೇ ಘಟ್ಟದ ಸಾಲಿನಲ್ಲಿ ನಾಗರಿಕತೆಯ ಚಕ್ರ ಒಂದು ಸುತ್ತು ಉರುಳಿದೆ. ಅದನ್ನು ಮತ್ತೆ ಹಿಂದಕ್ಕೆ ಉರುಳಿಸುವುದಂತೂ ಸಾಧ್ಯವಿಲ್ಲ. ಇಲ್ಲಿರುವವರನ್ನು ಒಕ್ಕಲೆಬ್ಬಿಸುವುದು ಎಷ್ಟು ಕಷ್ಟವೋ ಅವರಿಗೆ ಬೇರೆಡೆ ನೆಲೆ ಕಲ್ಪಿಸುವುದು ಕೂಡ ಅಷ್ಟೇ ಕಷ್ಟ. ಇದರ ನಡುವೆ, ವರದಿಯನ್ನು ಪೂರ್ಣವಾಗಿ ಅರ್ಥ ಮಾಡಿಕೊಳ್ಳದಿರುವುದು, ಅದು ಜಾರಿಯಾಗುತ್ತದೆ ಎಂಬ ಭೀತಿಯಲ್ಲಿಯೇ ಕಾಲ ಕಳೆಯುತ್ತಿರುವುದು ಪಶ್ಚಿಮಘಟ್ಟಗಳ ತಪ್ಪಲಿನಲ್ಲಿ ನಿತ್ಯ ಕಂಡುಬರುವ ಸಂಗತಿ.

ವಿಪರ್ಯಾಸವೆಂದರೆ, ವರದಿ ಜಾರಿ ವಿಚಾರ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ. ಉದಾಹರಣೆಗೆ, ಬೆಳ್ತಂಗಡಿ ಶಾಸಕ ಬಿಜೆಪಿಯ ಹರೀಶ್ ಪೂಂಜ ಆಗಸ್ಟ್ 13ರಂದು ಮಾತನಾಡಿ, “ದಕ್ಷಿಣ ಕನ್ನಡದ 44 ಗ್ರಾಮಗಳು ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡಲಿವೆ. ಅದು ಜಾರಿಯಾದರೆ ಈ ಎಲ್ಲ ಗ್ರಾಮಗಳು ಕಳೆದುಹೋಗಲಿವೆ. ಸುಪ್ರೀಂ ಕೋರ್ಟ್ ಸೂಚನೆಯಂತೆ ವಿಶೇಷ ಗ್ರಾಮಸಭೆ ನಡೆಸಿ ಈಗಾಗಲೇ ವರದಿ ಕಳಿಸಲಾಗಿದೆ. ಆದರೆ, ಇದನ್ನು ರಾಜ್ಯ ಸರ್ಕಾರಕ್ಕೆ ತಲುಪಿಸುವಲ್ಲಿ ಹಿಂದಿನ ಉಸ್ತುವಾರಿ ಸಚಿವರು ಶಾಸಕರು ವಿಫಲವಾಗಿದ್ದಾರೆ,” ಎಂದಿದ್ದರು. ಇದಕ್ಕೆ ಪ್ರತಿಯಾಗಿ ಹೇಳಿಕೆ ನೀಡಿದ ಮಾಜಿ ಅರಣ್ಯ ಸಚಿವ ರಮಾನಾಥ ರೈ, “ವರದಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಲು ಸನ್ನದ್ಧವಾಗಿದೆ. ಇದರ ಬಗ್ಗೆ ಮಾಹಿತಿ ಪಡೆದ ಶಾಸಕ ಹರೀಶ್ ಪೂಂಜ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಸಲುವಾಗಿ ಕಾಂಗ್ರೆಸ್ ವಿರುದ್ಧ ಆರೋಪ ಹೊರಿಸಿ ಜನರಲ್ಲಿ ಗೊಂದಲ ಸೃಷ್ಟಿಸುತ್ತಿದ್ದಾರೆ,” ಎಂದು ಆಗಸ್ಟ್ 16ರಂದು ಆರೋಪಿಸಿದರು. 2014ರಲ್ಲಿ ಒಂದು ಹೇಳಿಕೆ ನೀಡಿದ್ದ ಈಗಿನ ಮುಖ್ಯಮಂತ್ರಿ ಕುಮಾರಸ್ವಾಮಿ, ಜೆಡಿಎಸ್ ಗೆದ್ದರೆ ಕಸ್ತೂರಿ ರಂಗನ್ ವರದಿ ಜಾರಿಗೆ ತರುವುದಾಗಿ ಹೇಳಿದ್ದರು. ಇತ್ತೀಚೆಗೆ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, “ಪರಿಸರಕ್ಕೂ ಹಾನಿಯಾಗದಂತೆ ಜನರಿಗೂ ತೊಂದರೆಯಾಗದಂತೆ ಯೋಜನೆ ಜಾರಿಗೆ ಕೇಂದ್ರಕ್ಕೆ ಸೂಚಿಸಲಾಗುವುದು,” ಎಂಬ ಹೇಳಿಕೆಯನ್ನೂ ನೀಡಿದರು.

ಕುಮಾರಸ್ವಾಮಿ ಅವರ ಮಾತು ಒಗಟಿನ ರೂಪದಲ್ಲಿದೆ. ಏಕೆಂದರೆ, ಪರಿಸರಕ್ಕೂ ಹಾನಿಯಾಗದಂತೆ, ಜನರಿಗೂ ತೊಂದರೆಯಾಗದಂತೆ ವರದಿ ಜಾರಿ ಎಷ್ಟರಮಟ್ಟಿಗೆ ಕಾರ್ಯಸಾಧು ಎಂಬುದು ಉತ್ತರ ದೊರೆಯದ ಪ್ರಶ್ನೆ. ಇದೆಲ್ಲದರ ನಡುವೆ ಮಳೆ ಹುಯ್ಯುತ್ತಿದೆ, ಕೇರಳ ಕೊಚ್ಚಿಹೋಗಿದೆ, ಕೊಡಗು ಮುಳುಗುತ್ತಿದೆ!

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More