ಆ ಪರಿಸರ ವರದಿ ಜಾರಿಗೊಳಿಸಿದ್ದರೆ ನಿಜಕ್ಕೂ ಜಲಪ್ರಳಯ ತಡೆಯಬಹುದಿತ್ತೇ?

ಕೊಡಗು ಮತ್ತು ಕೇರಳದ ಜಲಪ್ರಳಯದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಗಳು ಸಾರ್ವಜನಿಕ ಚರ್ಚೆಗೆ ಬಂದಿವೆ. ಪರಿಸರವಾದಿಗಳು ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿದ್ದೇ ಈ ಅನಾಹುತಕ್ಕೆ ಕಾರಣ ಎನ್ನುತ್ತಿದ್ದಾರೆ. ಹಾಗಾದರೆ, ಆ ವರದಿಗಳಲ್ಲಿ ಏನಿದೆ?

ಪಶ್ಚಿಮಘಟ್ಟದ ಹೃದಯಭಾಗದಲ್ಲಿ ಜಲಪ್ರಳಯವೇ ಸಂಭವಿಸಿದೆ. ಕೇರಳ ಮತ್ತು ರಾಜ್ಯದ ಕೊಡಗು ಜಿಲ್ಲೆಗಳಲ್ಲಿ ಸಂಭವಿಸಿರುವ ಪ್ರಾಕೃತಿಕ ಅನಾಹುತಗಳ ಹಿನ್ನೆಲೆಯಲ್ಲಿ ಹಿಂದೆಂದೂ ಕಂಡರಿಯದ ಪ್ರಮಾಣದ ಭೂಕುಸಿತಗಳ ಕುರಿತು ಈಗ ಎಲ್ಲೆಡೆ ವ್ಯಾಪಕ ಚರ್ಚೆಗಳು ಆರಂಭವಾಗಿವೆ. ಪರಿಸರ ಕುರಿತ ಅಂತಹ ಆತಂಕ ಮತ್ತು ಭೀತಿಯ ನಡುವೆಯೇ, ಸಹ್ಯಾದ್ರಿಯ ಉಳಿವಿನ ಕಾಳಜಿಯ ಎರಡು ಪರಿಸರ ವರದಿಗಳು ಕೂಡ ಚರ್ಚೆಯ ಮುನ್ನೆಲೆಗೆ ಬಂದಿವೆ.

ಹೀಗೆ, ಸಾವು-ಬದುಕಿನ ಪ್ರಶ್ನೆಯ ಹೊತ್ತಲ್ಲಿ ದುತ್ತನೆ ನೆನಪಾಗಿರುವ ಆ ಎರಡು ವರದಿಗಳಲ್ಲಿ ಒಂದು, ಪರಿಸರ ವಿಜ್ಞಾನಿ ಮಾಧವ್ ಗಾಡ್ಗೀಳ್ ಅವರ ನೇತೃತ್ವದ ಪರಿಸರ ತಜ್ಞರ ತಂಡವನ್ನೊಳಗೊಂಡ, ಪಶ್ಚಿಮಘಟ್ಟ ಪರಿಸರ ಪರಿಣಿತರ ಸಮಿತಿ (Western Ghats Ecology Expert Panel (WGEEP) ೨೦೧೧ರ ಆಗಸ್ಟ್ ೩೧ರಂದು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ್ದ ವರದಿ. ಮತ್ತೊಂದು, ಗಾಡ್ಗೀಳ್ ಅವರ ಆ ವರದಿಯನ್ನು ಆಧಾರವಾಗಿಟ್ಟುಕೊಂಡು ಸರ್ಕಾರ ಕಾರ್ಯನೀತಿ ರೂಪಿಸಲು ಅನುವಾಗುವಂತೆ, ಕೆಲವು ಮಾರ್ಪಾಡುಗಳೊಂದಿಗೆ ಖಗೋಳ ವಿಜ್ಞಾನಿ ಕಸ್ತೂರಿ ರಂಗನ್ ಅವರ ನೇತೃತ್ವದ ಉನ್ನತ ಮಟ್ಟದ ಕಾರ್ಯಪಡೆ (Western Ghats Ecology Authority (WGEA) ಸಿದ್ಧಪಡಿಸಿದ ವರದಿ.

“ಮೊದಲನೆಯ ವರದಿಯು ಜನಜೀವನ ಮತ್ತು ಅದಕ್ಕೆ ಅಗತ್ಯ ಅಭಿವೃದ್ಧಿ ಅವಕಾಶವನ್ನು ಸಂಪೂರ್ಣ ನಿರ್ಲಕ್ಷಿಸಿ, ಪರಿಸರ ಹಿತವನ್ನೇ ಕೇಂದ್ರವಾಗಿಟ್ಟುಕೊಂಡು ಏಕಪಕ್ಷೀಯ ದೃಷ್ಟಿಕೋನ ಹೊಂದಿದೆ. ಹಾಗಾಗಿ, ಅದನ್ನು ಅನುಷ್ಠಾನಕ್ಕೆ ತಂದರೆ, ಕರ್ನಾಟಕವೂ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ಆರು ರಾಜ್ಯಗಳ ಅಭಿವೃದ್ಧಿ ಮತ್ತು ಜನಜೀವನಕ್ಕೆ ಪೆಟ್ಟು ಬೀಳಲಿದೆ. ಈ ರಾಜ್ಯಗಳು ಭವಿಷ್ಯದಲ್ಲಿ ಸಂಕಷ್ಟಕ್ಕೆ ಸಿಲುಕಲಿವೆ,” ಎಂಬ ವ್ಯಾಪಕ ವಿರೋಧ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಅಂದಿನ ಯುಪಿಎ ಸರ್ಕಾರ, ಕಸ್ತೂರಿ ರಂಗನ್ ಅವರ ಸಮಿತಿ ನೇಮಕ ಮಾಡಿ, ಗಾಡ್ಗೀಳ್ ವರದಿಯನ್ನು ಪರಿಸರ ಪರದಿಂದ ಜನಪರದತ್ತ ವಾಲಿಸಿ ಅನುಷ್ಠಾನಯುಕ್ತಗೊಳಿಸುವಂತೆ ತಾಕೀತು ಮಾಡಿತ್ತು. ಅದರಂತೆ, ಕಸ್ತೂರಿ ರಂಗನ್ ಅವರು ೨೦೧೩ರ ಏಪ್ರಿಲ್ ೧೫ರಂದು ತನ್ನ ವರದಿ ಸಲ್ಲಿಸಿದ್ದರು.

ಆದರೆ, ಕಸ್ತೂರಿ ರಂಗನ್ ವರದಿಯ ಬಗ್ಗೆಯೂ ಮತ್ತದೇ ಆತಂಕ ಮತ್ತು ದೂರುಗಳು ವ್ಯಕ್ತವಾದವು. “ಈ ವರದಿ ಪರಿಸರ ವಿರೋಧಿ. ಪಶ್ಚಿಮಘಟ್ಟ ವ್ಯಾಪ್ತಿಯ ಗಣಿ, ಮರಳು ಮತ್ತು ಮರ ಲಾಬಿಗೆ ಮಣಿದು ಸರ್ಕಾರ ಇಂತಹ ವರದಿಯನ್ನು ತರಿಸಿಕೊಂಡಿದೆ,” ಎಂದು ಪರಿಸರವಾದಿಗಳು ಆರೋಪ ಮಾಡಿದರು. “ಅದು ಜನವಿರೋಧಿ, ವಾಸ್ತವಿಕ ಪರಿಸ್ಥಿತಿ ಅವಲೋಕಿಸದೆ, ಕೇವಲ ಉಪಗ್ರಹ ಚಿತ್ರ ನೋಡಿ ಪರಿಸರ ಪ್ರದೇಶವನ್ನು ಗುರುತಿಸಲಾಗಿದೆ,” ಎಂದು ಸಹ್ಯಾದ್ರಿ ಶ್ರೇಣಿಯ ಜನ ಆರೋಪಿಸಿದರು. ಕೇರಳ, ಗೋವಾ, ತಮಿಳುನಾಡು, ಕರ್ನಾಟಕ ರಾಜ್ಯಗಳಲ್ಲಿ ಆ ವರದಿಯ ವಿರುದ್ಧ ವ್ಯಾಪಕ ಪ್ರತಿಭಟನೆಗಳು ನಡೆದವು. ಕೇರಳದಲ್ಲಿ ವಾರಗಟ್ಟಲೆ ಬಂದ್, ಹರತಾಳಗಳಾದವು.

ಜನರ ಒತ್ತಡಕ್ಕೆ ಮಣಿದ ರಾಜ್ಯ ಸರ್ಕಾರಗಳು ಕಸ್ತೂರಿ ರಂಗನ್ ವರದಿಯ ಅನುಷ್ಠಾನಕ್ಕೂ ಆಕ್ಷೇಪ ವ್ಯಕ್ತಪಡಿಸಿ ಕೇಂದ್ರಕ್ಕೆ ಪತ್ರ ಬರೆದವು. ಕೇಂದ್ರ ಸರ್ಕಾರ ವರದಿ ಅನುಷ್ಠಾನದ ಅಧಿಸೂಚನೆಯನ್ನು ಬದಲಾಯಿಸುತ್ತಲೇ ಹೋಯಿತು. ಇಂತಹ ವಿರೋಧ ಮತ್ತು ಆಕ್ಷೇಪಗಳ ಕಾರಣದಿಂದಾಗಿ ಇದೀಗ ವರದಿ ಜಾರಿಯ ಅಂತಿಮ ಅಧಿಸೂಚನೆ ಕೂಡ ವಿಳಂಬವಾಗಿದೆ. ಹಸಿರು ನ್ಯಾಯಪೀಠದ ಒತ್ತಡದ ಕಾರಣದಿಂದ ಇದೀಗ ಕೇಂದ್ರ ಸರ್ಕಾರ ಅಂತಿಮ ಅಧಿಸೂಚನೆಯ ತಯಾರಿ ಮಾಡುತ್ತಿದ್ದು, ಕರ್ನಾಟಕ ಸರ್ಕಾರ ಮೂರು ದಿನಗಳ ಹಿಂದಷ್ಟೇ ಮತ್ತೊಮ್ಮೆ ತನ್ನ ಆಕ್ಷೇಪ ಸಲ್ಲಿಸಿದೆ ಎಂಬ ವರದಿಗಳಿವೆ. ಆದರೆ, ಆ ಆಕ್ಷೇಪ ಸಲ್ಲಿಸುವ ಹೊತ್ತಿಗಾಗಲೇ ಕೊಡಗು ಜಿಲ್ಲೆಯಲ್ಲಿ ಮುನಿದ ಮಳೆಗೆ ಪಶ್ಚಿಮಘಟ್ಟದ ಹೃದಯ ಒಡೆದು ಛಿದ್ರವಾಗತೊಡಗಿತ್ತು; ಮಾಧವ್ ಗಾಡ್ಗೀಳ್ ಅವರ ವರದಿಯ ಕಾಳಜಿಯ ಬಗ್ಗೆ ಅದೇ ಜನರೇ ಕನವರಿಸಿತೊಡಗಿದ್ದರು.

ಹಾಗಾದರೆ, ನಿಜಕ್ಕೂ ಈ ವರದಿಗಳಲ್ಲಿ ಏನಿತ್ತು? ಎರಡೂ ವರದಿಗಳ ನಡುವಿನ ವ್ಯತ್ಯಾಸಗಳೇನಾಗಿದ್ದವು? ಜನ ಏಕೆ ಆಗ ಈ ವರದಿಗಳ ವಿರುದ್ಧ ತಿರುಗಿಬಿದ್ದಿದ್ದರು? ಎಂಬ ಕುತೂಹಲಗಳಿಗೆ ಎರಡೂ ವರದಿಗಳ ಪ್ರಮುಖಾಂಶಗಳ ಮೇಲೆ ಕಣ್ಣಾಡಿಸಬೇಕಿದೆ.

ಪರಿಸರ ವಿಜ್ಞಾನಿ ಗಾಡ್ಗೀಳ್ ಅವರು ಒಟ್ಟು ಆರು ಜಿಲ್ಲೆಗಳ ಸುಮಾರು ೧,೨೯,೦೩೭ ಚದರ ಕಿಮೀ ಪ್ರದೇಶವನ್ನು ಪಶ್ಚಿಮಘಟ್ಟ ಭೂಪ್ರದೇಶ ಎಂದು ಗುರುತಿಸಿ, ಆ ಪೈಕಿ ಶೇ.೬೦ರಷ್ಟು ಅಂದರೆ, ಸುಮಾರು ೭೭ ಸಾವಿರ ಚದರ ಕಿಮೀ ಪ್ರದೇಶವನ್ನು ಅತಿ ಸೂಕ್ಷ್ಮ ಪರಿಸರ ಪ್ರದೇಶ (ಇಎಸ್‌ಝಡ್-೧) ಎಂದೂ, ಶೇ.೨೫ರಷ್ಟು ಪ್ರದೇಶವನ್ನು ಅತಿ ಕಡಿಮೆ ಸೂಕ್ಷ್ಮ ಪ್ರದೇಶವೆಂದೂ (ಇಎಸ್‌ಝಡ್ ೩) ಮತ್ತು ಉಳಿದ ಶೇ.೧೫ರಷ್ಟು ಪ್ರದೇಶವನ್ನು ಕಡಿಮೆ ಸೂಕ್ಷ್ಮ ಪ್ರದೇಶವೆಂದು (ಇಎಸ್‌ಝಡ್ ೨) ವಿಂಗಡಿಸಿದ್ದರು. ಈ ವಲಯಗಳ ಪೈಕಿ ಇಎಸ್‌ಝಡ್ ೧ರಲ್ಲಿ ಯಾವುದೇ ಬಗೆಯ ಪರಿಸರ ಮಾರಕ ಚಟುವಟಿಕೆಗಳಿಗೆ ಅವಕಾಶ ನೀಡಬಾರದು, ನೀರಿನ ಮೂಲಗಳಿಗೆ ಧಕ್ಕೆಯಾಗಬಾರದು, ಕೃಷಿ, ಗಣಿಗಾರಿಕೆ ಸೇರಿದಂತೆ ಯಾವುದೇ ಬಗೆಯ ಮಾನವ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು ಎಂದಿದ್ದರೆ; ಇಎಸ್‌ಝಡ್ ೨ರಲ್ಲಿ ಈಗಾಗಲೇ ಇರುವ ಗಣಿ, ಕೃಷಿ, ಮೂಲಸೌಕರ್ಯ ಮುಂದುವರಿಯಬಹುದು. ಆದರೆ, ಹೊಸ ವಿಸ್ತರಣೆಗೆ ಅವಕಾಶ ನೀಡಬಾರದು. ಹಂತಹಂತವಾಗಿ ಇಲ್ಲಿನ ಮಾನವ ಹಸ್ತಕ್ಷೇಪವನ್ನು ಕಡಿತಗೊಳಿಸಬೇಕು ಎಂದಿದ್ದರು. ಇನ್ನು, ಇಎಸ್‌ಝಡ್ ೩ರಲ್ಲಿ ರಾಸಾಯನಿಕ ಮುಕ್ತ ಕೃಷಿ, ಗಣಿ, ಜಲವಿದ್ಯುತ್ ಯೋಜನೆಗಳಿಗೆ ಅವಕಾಶ ನೀಡಲಾಗಿತ್ತು.

ಅಲ್ಲದೆ, ಪಶ್ಚಿಮಘಟ್ಟ ಪ್ರದೇಶದ ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ಪ್ರತ್ಯೇಕ ಪಶ್ಚಿಮಘಟ್ಟ ಪರಿಸರ ಪ್ರಾಧಿಕಾರ ರಚನೆ ಹಾಗೂ ಅಧಿಕಾರ ವಿಕೇಂದ್ರೀಕರಣದ ಆಧಾರದ ಮೇಲೆ ಪ್ರತಿ ಗ್ರಾಮ ತನ್ನ ವ್ಯಾಪ್ತಿಯ ಪರಿಸರದಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಧರಿಸುವ ಹೊಣೆಗಾರಿಕೆಯ ವಿಕೇಂದ್ರೀಕರಣವನ್ನು ಕೂಡ ಶಿಫಾರಸು ಮಾಡಿತ್ತು.

ಆದರೆ, ಕಸ್ತೂರಿ ರಂಗನ್ ಸಮಿತಿಯು ಈ ವಲಯಗಳನ್ನು ಮತ್ತೊಂದು ಬಗೆಯಲ್ಲಿ ವಿಗಂಡಿಸಿ, ಸಾಂಸ್ಕೃತಿಕ ಭೂಭಾಗ ಮತ್ತು ನೈಸರ್ಗಿಕ ಭೂಭಾಗ ಎಂದು ಕರೆಯಿತು. ಆ ಪೈಕಿ, ಸಾಂಸ್ಕೃತಿಕ ಭೂಭಾಗದ ಶೇ.೫೮ರಷ್ಟು ಮತ್ತು ನೈಸರ್ಗಿಕ ಭೂಭಾಗದ ಶೇ.೯೦ರಷ್ಟು ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಹೇಳಿತು. ಆದರೆ, ಗಾಡ್ಗೀಳ್ ಅವರು ಪರಿಗಣಿಸಿದ ೧,೨೯,೦೩೭ ಚದರ ಕಿಮೀ ಪ್ರದೇಶಕ್ಕೆ ಬದಲಾಗಿ, ಕಸ್ತೂರಿ ರಂಗನ್ ಸಮಿತಿಯು ೧,೬೪,೨೮೦ ಚದರ ಕಿಮೀ ಪ್ರದೇಶವನ್ನು ಪಶ್ಚಿಮಘಟ್ಟ ವಲಯ ಎಂದೂ ಗುರುತಿಸಿತು. ಆದರೆ, ಆ ಪೈಕಿ ಕೇವಲ ಶೇ.೩೭ರಷ್ಟು ಪ್ರದೇಶವನ್ನು ಮಾತ್ರ ಪರಿಸರ ಸೂಕ್ಷ್ಮ ವಲಯ ಎಂದು ವಿಂಗಡಿಸಿತು. ಈ ಇಎಸ್‌ಝಡ್ ವ್ಯಾಪ್ತಿಯಲ್ಲಿ ಯಾವುದೇ ಬಗೆಯ ಗಣಿ, ಉದ್ಯಮ, ಕೃಷಿ ವಿಸ್ತರಣೆ ಮತ್ತು ಬೃಹತ್ ಕಟ್ಟಡ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಶಿಫಾರಸು ಮಾಡಿತು. ಆದರೆ, ಈ ನಿರ್ಬಂಧಿತ ವಲಯದ ಪ್ರಮಾಣ, ಗಾಡ್ಗೀಳ್ ಶಿಫಾರಸಿನ ಇಎಸ್‌ಝಡ್ ೧ರ ವ್ಯಾಪ್ತಿಯಷ್ಟು ಮಾತ್ರ ಆಗಲಿದೆ. ಅಂದರೆ, ಗಾಡ್ಗೀಳ್ ವರದಿಯಲ್ಲಿ ಪ್ರಸ್ತಾವಿಸಲಾಗಿದ್ದ ಶೇ.೪೦ರಷ್ಟು ಪ್ರದೇಶವನ್ನು ಕಸ್ತೂರಿ ರಂಗನ್ ಸಮಿತಿಯು ಪಶ್ಚಿಮಘಟ್ಟದ ಸಂರಕ್ಷಣಾ ವ್ಯಾಪ್ತಿಯಿಂದಲೇ ಕೈಬಿಟ್ಟಿತ್ತು! ಗಾಡ್ಲೀಳ್‌ ಅವರ ಅತಿ ಸೂಕ್ಷ್ಮ ವಲಯ ಪ್ರಸ್ತಾವನೆಗಿಂತ ೧೭ ಸಾವಿರ ಚದರ ಕಿಮೀ ಕಡಿಮೆ ವ್ಯಾಪ್ತಿಯನ್ನು ಒಟ್ಟಾರೆ ಸೂಕ್ಷ್ಮ ಪ್ರದೇಶವೆಂದು ಕಸ್ತೂರಿ ರಂಗನ್ ವರದಿ ಘೋಷಿಸಿತ್ತು. ಒಟ್ಟಾರೆ, ಗಾಡ್ಗೀಳ್ ಅವರು ಶಿಫಾರಸು ಮಾಡಿದ್ದ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಗೆ ಹೋಲಿಸಿದರೆ, ಕಸ್ತೂರಿ ರಂಗನ್ ಅವರ ವರದಿಯಲ್ಲಿ ಸುಮಾರು ೭೦ ಸಾವಿರ ಚದರ ಕಿಮೀ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಿಂದ ಹೊರಗಿಡಲಾಗಿತ್ತು.

ಇದನ್ನೂ ಓದಿ : ಸ್ವಾಮಿ ಅಯ್ಯಪ್ಪ, ಬಿಷಪ್ ಫ್ರಾಂಕೋ, ಗಾಡ್ಗಿಳ್ ವರದಿ ನಡುವೆ ಉಕ್ಕಿ ಹರಿದ ನೆರೆ

ಆದರೆ, ಅಷ್ಟಾಗಿಯೂ, ಜನ ಮತ್ತು ರಾಜ್ಯ ಸರ್ಕಾರಗಳು ಕಸ್ತೂರಿ ರಂಗನ್ ವರದಿಯನ್ನು ಕೂಡ ತಿರಸ್ಕರಿಸಲು ಕಾರಣಗಳಿದ್ದವು. ಗಾಡ್ಗೀಳ್ ವರದಿ ವಾಸ್ತವವಾಗಿ ಸಾಂಪ್ರದಾಯಿಕ ಕೃಷಿಕರು, ಕಾಡಿನಂಚಿನ ಜನರ ಹಿತರಕ್ಷಣೆಯ ಶಿಫಾರಸುಗಳನ್ನು ಹೊಂದಿತ್ತು. ಆದರೆ, ಗಣಿ, ಮರಳು, ಮರದಂತಹ ಪರಿಸರ ಮಾರಕ ಉದ್ಯಮ ಮತ್ತು ಲಾಬಿಗಳಿಗೆ ಸಂಪೂರ್ಣ ವಿರುದ್ಧವಾಗಿತ್ತು. ಆ ಕಾರಣಕ್ಕಾಗಿಯೇ ೫೨೨ ಪುಟಗಳ ಸುದೀರ್ಘ ಆ ವರದಿಯನ್ನು ಬಹಳಷ್ಟು ದಿನ ಜನರಿಂದ ಬಚ್ಚಿಡಲಾಗಿತ್ತು. ಬಳಿಕ, ನ್ಯಾಯಾಲಯಗಳ ಮಧ್ಯಪ್ರದೇಶದಿಂದಾಗಿ ಸಾರ್ವಜನಿಕರಿಗೆ ಲಭ್ಯವಾಯಿತು. ಆದರೆ, ಸ್ಥಳೀಯ ಭಾಷೆಗಳಲ್ಲಿ ಲಭ್ಯವಿಲ್ಲದ ಅದರ ಜನಪರ ಅಂಶಗಳನ್ನು ಮುಚ್ಚಿಟ್ಟು, ಪರಿಸರ ವಿರೋಧಿ ಲಾಬಿಗಳು ‘ಜನರನ್ನು ಎತ್ತಂಗಡಿ ಮಾಡಲಾಗುವುದು’ ಎಂದು ಭೀತಿ ಹುಟ್ಟಿಸಿ, ವರದಿಯ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ಕುಮ್ಮಕ್ಕು ನೀಡಿದರು. ಹಾಗಾಗಿ, ಆ ವರದಿಯನ್ನು ಶಿಥಿಲಗೊಳಿಸುವ ಪ್ರಯತ್ನವಾಗಿ, ದುರ್ಬಲಗೊಳಿಸುವ ಯತ್ನವಾಗಿ ಕಸ್ತೂರಿ ರಂಗನ್ ಸಮಿತಿ ರಚಿಸಲಾಯಿತು.

ಅಂತಹ ಪ್ರಯತ್ನಗಳ ಫಲವಾಗಿ, ಕಸ್ತೂರಿ ರಂಗನ್ ಸಮಿತಿಯು ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿಯನ್ನು ಭಾರಿ ಪ್ರಮಾಣದಲ್ಲಿ ಕಡಿತ ಮಾಡಿ ಶಿಫಾರಸು ಸಲ್ಲಿಸಿದರೂ, ಅದರಲ್ಲಿನ ವಾಸ್ತವಿಕ ಲೋಪಗಳು ಜನರನ್ನು ದಿಕ್ಕುಗೆಡಿಸಿದವು. ವಿವಿಧ ಲಾಬಿಗಳಿಗೆ ಅವಕಾಶ ಮಾಡಿಕೊಡುವಂತಿದ್ದ ವರದಿಯಲ್ಲಿ, ಕಾಡಂಚಿನ ಜನರ ವಸತಿ ಪ್ರದೇಶ, ತೋಟಗಳನ್ನು ಕೂಡ ಪರಿಸರ ಸೂಕ್ಷ್ಮ ಪ್ರದೇಶವೆಂದು ಗುರುತಿಸಲಾಗಿತ್ತು. ವಾಸ್ತವಿಕ ಸಮೀಕ್ಷೆ ನಡೆಸದೆ, ಉಪಗ್ರಹ ಚಿತ್ರ ಆಧಾರಿತವಾಗಿ ಪರಿಸರ ಸೂಕ್ಷ್ಮ ಪ್ರದೇಶವನ್ನು ಗುರುತಿಸಿದ್ದರಿಂದ ಆದ ಈ ಎಡವಟ್ಟು, ಪಶ್ಚಿಮಘಟ್ಟ ಪ್ರದೇಶದ ಜನರನ್ನು ಕೆರಳಿಸಿತು. ಹಾಗಾಗಿ, ಮತ್ತೆ ಪ್ರತಿಭಟನೆಗಳು ಭುಗಿಲೆದ್ದವು. ಜನರ ಒತ್ತಡಕ್ಕೆ ಮಣಿದ ಕರ್ನಾಟಕದಂತಹ ರಾಜ್ಯಗಳು ಪರಿಸರ ಸೂಕ್ಷ್ಮ ಪ್ರದೇಶ ವ್ಯಾಪ್ತಿಯಿಂದ ಜನವಸತಿ ಪ್ರದೇಶಗಳನ್ನು ಕೈಬಿಡುವಂತೆ ಆಗ್ರಹಿಸಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದವು. ರಾಜ್ಯಗಳ ಅಸಹಕಾರದ ಹಿನ್ನೆಲೆಯಲ್ಲಿ ಈಗಾಗಲೇ ಮೂರು ಬಾರಿ ಅಧಿಸೂಚನೆ ಹೊರಡಿಸಿದ್ದರೂ, ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿಯ ಜಾರಿಯ ಅಂತಿಮ ಅಧಿಸೂಚನೆಗೆ ಮೀನಮೇಷ ಎಣಿಸುತ್ತಿದೆ.

ಆದರೆ ಈ ನಡುವೆ, ಕೇರಳ ಮತ್ತು ಕೊಡಗು ಜಲಪ್ರಳಯದ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಮಾಧವ್ ಗಾಡ್ಗೀಳ್ ಮತ್ತು ಕಸ್ತೂರಿ ರಂಗನ್ ವರದಿಯ ಪರ ಅದೇ ಜನಸಾಮಾನ್ಯರೇ ಮತ್ತೆ ಮಾತನಾಡತೊಡಗಿದ್ದಾರೆ. “ಗಾಡ್ಗೀಳ್ ವರದಿಯನ್ನು ತಿರಸ್ಕರಿಸಿದ್ದೇ ಈ ಅನಾಹುತಕ್ಕೆ ಕಾರಣ. ಮುಂದೆ ಮತ್ತೆ ಇಂತಹ ಅನಾಹುತಗಳನ್ನು ತಡೆಯಲು ಈಗಲಾದರೂ ಆ ವರದಿಯನ್ನು ಒಪ್ಪಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು,” ಎಂದು ಪರಿಸರವಾದಿಗಳು ವಾದಿಸುತ್ತಿದ್ಧಾರೆ. ಸ್ವತಃ ಮಾಧವ್ ಗಾಡ್ಗೀಳ್ ಅವರೂ, ಕೇರಳದ ಈ ದುರಂತಕ್ಕೆ ಅಲ್ಲಿನ ಜನ ಮತ್ತು ಆಡಳಿತಗಳು ಪರಿಸರ ಸಂರಕ್ಷಣೆಯನ್ನು ನಿರ್ಲಕ್ಷಿಸಿ ಅಭಿವೃದ್ಧಿಯ ದಾಹಕ್ಕೆ ಬಿದ್ದದ್ದೇ ಕಾರಣ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದ ಆರೇಳು ವರ್ಷಗಳಲ್ಲಿ ಆಗಿರುವ ಪರಿಸರದ ಮೇಲಿನ ಹಾನಿಯಷ್ಟೇ ಇಂತಹದ್ದೊಂದು ಭಾರಿ ಅನಾಹುತಕ್ಕೆ ಕಾರಣವೆಂದು ಹೇಳಲಾಗದು ಎಂಬುದನ್ನು ಮರೆಯುವಂತಿಲ್ಲ. ಇದು ಹತ್ತು-ಇಪ್ಪತ್ತು ವರ್ಷಗಳ ಪ್ರಮಾದದ ಫಲವಲ್ಲ. ಬದಲಾಗಿ, ನೂರಾರು ವರ್ಷಗಳಿಂದ ಆಗಿರುವ ಅವಿವೇಕದ ಅಭಿವೃದ್ಧಿ ಮತ್ತು ಪರಿಸರದ ಕಡೆಗಿನ ಅವಜ್ಞೆಯ, ಶೋಷಣೆಯ ಫಲ ಇದು ಎಂಬುದು ದಿಟ. ಹಣ ಮತ್ತು ಮೋಜಿನ ಹಿಂದೆ ಬಿದ್ದ ಮನುಷ್ಯ ತನ್ನ ಪೊರೆಯುವ ಪ್ರಕೃತಿಯ ಒಡಲನ್ನೇ ದೋಚುವ ದುರಾಸೆ ಮತ್ತು ಲೋಭದ ವೇಗ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿತ್ತು ಮತ್ತು ಒಂದು ವೇಳೆ, ಪರಿಸರ ವಿಜ್ಞಾನಿಗಳ ಮಾತಿಗೆ ಕಿವಿಗೊಟ್ಟು ಅಂತಹ ವೇಗಕ್ಕೆ ಕಡಿವಾಣ ಹಾಕಿದ್ದರೆ, ಈ ಅನಾಹುತ ಇಷ್ಟು ಭೀಕರವಾಗಿ ಇರುತ್ತಿರಲಿಲ್ಲವೇನೋ ಅಥವಾ ಇಷ್ಟು ಬೇಗ ಸಂಭವಿಸುತ್ತಿರಲಿಲ್ಲವೇನೋ ಎಂಬ ಪ್ರಶ್ನೆಯಂತೂ ಮೂಡಿದೆ.

ಹಾಗಾಗಿ, ಈಗಲೂ ಕಾಲ ಮಿಂಚಿಲ್ಲ. ಕನಿಷ್ಟ ಈಗಲಾದರೂ ಗಾಡ್ಗೀಳ್ ವರದಿಯ ಜನಪರ ಅಂಶಗಳನ್ನು ಅರ್ಥಮಾಡಿಕೊಂಡು ಪರಿಸರದ ಉಳಿವಿಗೆ ಮತ್ತು ಆ ಮೂಲಕ ಮನುಷ್ಯನ ನೆಮ್ಮದಿಗಾಗಿ ಸರ್ಕಾರಗಳು ದೃಢ ನಿರ್ಧಾರ ಕೈಗೊಳ್ಳಬೇಕಿದೆ. ಅಗತ್ಯಬಿದ್ದಲ್ಲಿ ಆ ವರದಿಯನ್ನು ಇನ್ನೊಮ್ಮೆ ಪರಿಶೀಲಿಸಿ, ಪರಿಸರ ಮತ್ತು ಕನಿಷ್ಠ ನಾಗರಿಕ ಸೌಲಭ್ಯಗಳೆರಡನ್ನೂ ಸರಿದೂಗಿಸುವ ರೀತಿಯಲ್ಲಿ ಹಂತಹಂತವಾಗಿ ಅಳವಡಿಸಿಕೊಳ್ಳಬೇಕಿದೆ. ಮನುಷ್ಯನಿಗೆ ಪರಿಸರ ಅನಿವಾರ್ಯ, ಪರಿಸರಕ್ಕೆ ಮನುಷ್ಯ ಅನಿವಾರ್ಯವಲ್ಲ ಎಂಬ ಮಾತನ್ನು ಅರ್ಥಮಾಡಿಕೊಳ್ಳಲು ಎಲ್ಲರಿಗೂ ಈಗ ಸಕಾಲ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More