ಗುಡ್ ನ್ಯೂಸ್ | ರಾಜಕೀಯಕ್ಕಿಂತ ರಾಜ್ಯದ ಜನ ಮುಖ್ಯವೆಂದು ಸಾರಿದ ಕೇರಳ ಜನನಾಯಕರು

ಪ್ರವಾಹ ಪೀಡಿತರಿಗೆ ಬಿಸ್ಕತ್ತು ಎಸೆದ ಸಚಿವ ಎಚ್ ಡಿ ರೇವಣ್ಣ ಸುದ್ದಿಯಲ್ಲಿದ್ದಾರೆ. ಇನ್ನೊಂದೆಡೆ, ಕೇರಳದ ಸಚಿವರು ಜನತೆ ಜೊತೆಗಿದ್ದು ನೆರವು ನೀಡಿ ಸುದ್ದಿಯಲ್ಲಿದ್ದಾರೆ. ಸಿಎಂ ಪಿಣರಾಯ್ ಮತ್ತು ವಿಪಕ್ಷ ನಾಯಕ ರಮೇಶ್ ಒಂದೇ ಹೆಲಿಕಾಪ್ಟರ್‌ನಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳ ವೀಕ್ಷಣೆ ಮಾಡಿದ್ದಾರೆ

ಪ್ರವಾಹ ಪೀಡಿತ ಕೇರಳದ ರಾಜಕಾರಣಿಗಳು ಮತ್ತು ಜನಪ್ರತಿನಿಧಿಗಳು ತಮ್ಮ ಜನರ ಬಗ್ಗೆ ತೋರಿಸಿರುವ ಮಾನವೀಯ ಕಳಕಳಿ ಬಗ್ಗೆ ಕಳೆದೊಂದು ವಾರದಲ್ಲಿ ಬಹಳಷ್ಟು ಮಾಧ್ಯಮಗಳು ವರದಿ ಮಾಡಿವೆ. ಕೊಡಗು ಪ್ರವಾಹ ಪೀಡಿತರಿಗೆ ಬಿಸ್ಕತ್ತು ಎಸೆದ ಕರ್ನಾಟಕದ ಸಚಿವ ಎಚ್ ಡಿ ರೇವಣ್ಣರಂತಲ್ಲ ಕೇರಳದ ಸಚಿವರು; ಬದಲಿಗೆ, ಪ್ರವಾಹ ಪೀಡಿತ ಗ್ರಾಮಗಳಲ್ಲಿ ಜನತೆಯ ಜೊತೆಗಿದ್ದು ನೆರವಾದವರು. ಎಚ್ ಡಿ ರೇವಣ್ಣರ ಬಿಸ್ಕತ್ತು ಎಸೆತ ಪ್ರಕರಣದಂತೆಯೇ, ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಅವರು ಪರಿಹಾರದ ದೋಣಿಯಲ್ಲಿ ಕುಳಿತು ಮಕ್ಕಳನ್ನು ದಡ ಸೇರಿಸುವ ಚಿತ್ರಗಳೂ ರಾಷ್ಟ್ರೀಯ ಮಾಧ್ಯಮಗಳಲ್ಲಿ ಜನಪ್ರಿಯವಾಗಿವೆ. ಆದರೆ, ಎರಡೂ ಪ್ರಕರಣಗಳಲ್ಲಿರುವ ಅಂತರ ಮಾನವೀಯ ಕಳಕಳಿಯುಳ್ಳ ರಾಜಕಾರಣಿಗಳು ಮತ್ತು ಅಹಂಕಾರಿ ರಾಜಕಾರಣಿಗಳ ನಡುವಿನ ವ್ಯತ್ಯಾಸಕ್ಕೆ ಸಾಕ್ಷಿ.

ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರಂತೂ, ರಾಜ್ಯದಲ್ಲಿ ಮಳೆಯಿಂದ ಸಮಸ್ಯೆ ಆರಂಭವಾದ ದಿನದಿಂದಲೇ ಪತ್ರಿಕಾಗೋಷ್ಠಿಗಳ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡುವುದು, ಸಭೆಗಳ ಮೂಲಕ ಕೇಂದ್ರ ಸರ್ಕಾರ, ಸೇನಾಪಡೆ ಮತ್ತು ರಾಜ್ಯದ ರಕ್ಷಣಾ ಪಡೆಗಳ ನಡುವೆ ಸಂಯೋಜನೆ ಮುಂತಾಗಿ ಸಂಪೂರ್ಣ ತೊಡಗಿಸಿಕೊಂಡಿದ್ದರು. ಪ್ರಧಾನಿ, ಗೃಹಸಚಿವರು ರಾಜ್ಯಕ್ಕೆ ಭೇಟಿ ನೀಡಿದಾಗ ಅವರ ಜೊತೆಯಾಗಿದ್ದಂತೆಯೇ, ದಿನಕ್ಕೆ ಎರಡು ಬಾರಿ ಪತ್ರಿಕಾಗೋಷ್ಠಿ ನಡೆಸಿ ವಿವರ ನೀಡಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಗಳು ಸುಗಮವಾಗಿ ನಡೆಯಲು ಮುಖ್ಯಮಂತ್ರಿಗಳು ಸ್ವತಃ ನಿಂತು ಗಮನ ಹರಿಸಿರುವುದು ಸಂತ್ರಸ್ತರಿಗೆ ಹೆಚ್ಚು ಅನುಕೂಲವಾಗಿದೆ. ಕೇರಳದ ಸಚಿವರು ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯವಾಗಿ ಕೆಲಸ ಮಾಡಿದ್ದಾರೆ. ಸುಳ್ಳು ಸುದ್ದಿಗಳಿಗೆ ಅವಕಾಶವಾಗದಂತೆ ಸರಿಯಾದ ಮಾಹಿತಿ ಜನರನ್ನು ತಲುಪುವಂತೆ ಗಮನಿಸಿಕೊಂಡಿದ್ದಾರೆ.

ಕೇರಳದ ಆಡಳಿತಶಾಹಿ ಕೂಡ ಜನನಾಯಕರಿಗೆ ಸಹಕರಿಸಿದೆ. ತಿರುವನಂತಪುರದ ಸೆಕ್ರೆಟೆರಿಯೇಟ್ ಮತ್ತು ಜಿಲ್ಲಾ ಕಚೇರಿಗಳ ಕಂಟ್ರೋಲ್ ರೂಂಗಳಲ್ಲಿ ಸತತ ೨೪ ಗಂಟೆ ಕೆಲಸದಲ್ಲಿ ನಿರತರಾದವರಿದ್ದಾರೆ. ವಯನಾಡ್ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಮೊದಲಾದವರು ಅಕ್ಕಿಮೂಟೆಗಳನ್ನು ಲಾರಿಗಳಿಂದ ಕೆಳಗೆ ಇಳಿಸಲು ನೆರವಾಗಿರುವ ಫೋಟೋಗಳೂ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಇಲ್ಲೆಲ್ಲೂ ಅಧಿಕಾರದ ದರ್ಪ ಕಂಡುಬರಲೇ ಇಲ್ಲ. ಮಾನವೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರೆಲ್ಲರೂ ಸಾಮಾನ್ಯ ಮನುಷ್ಯರಂತೆಯೇ ವ್ಯವಹರಿಸಿದ್ದರು.

ಕೇರಳದ ರಾಜಕಾರಣಿಗಳು ಪ್ರವಾಹ ಪೀಡಿತರ ಸಮಸ್ಯೆಗೆ ಕೇಂದ್ರವನ್ನು ಶಪಿಸಲಿಲ್ಲ ಅಥವಾ ಕೇಂದ್ರದ ಸಹಕಾರ ಸಿಗಲಿಲ್ಲ ಎಂದು ಅಳಲಿಲ್ಲ. ೧೯೨೪ರಿಂದೀಚೆಗೆ ಕಂಡ ಅತಿ ಭೀಕರ ಪ್ರವಾಹದಲ್ಲಿ ಈವರೆಗೆ ೩೦೦ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಆದರೆ, ನಾಗರಿಕ ಸಮಾಜವೂ ಆಡಳಿತಶಾಹಿಯ ಜೊತೆಗಿದ್ದು ಕೆಲಸ ಮಾಡುತ್ತಿದೆ. ಎಲ್ಲೂ ಮತ್ತೊಬ್ಬರ ಮೇಲೆ ದೂರು ಹೇಳುವ ಅಥವಾ ಅವರು ಕೆಲಸ ಮಾಡಲಿಲ್ಲ ಎನ್ನುವ ಆರೋಪವನ್ನು ಪರಸ್ಪರರ ಮೇಲೆ ಹೊರಿಸುವುದು ನಡೆದಿಲ್ಲ. ರಾಜ್ಯದ ವಿರೋಧ ಪಕ್ಷಗಳೂ ಸರ್ಕಾರದ ಕಡೆಗೆ ಬೊಟ್ಟು ಮಾಡದೆ, ಪರಿಹಾರ ಕಾರ್ಯಗಳಲ್ಲಿ ತೊಡಗಿಸಿಕೊಂಡಿವೆ. ಕೇರಳದ ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಹಾಗೂ ವಿರೋಧ ಪಕ್ಷದ ನಾಯಕ ರಮೇಶ್ ಚೆನ್ನಿತ್ತಾಲ ಅವರು ಜೊತೆಯಾಗಿ ಒಂದೇ ಹೆಲಿಕಾಪ್ಟರ್‌ನಲ್ಲಿ ಪ್ರವಾಹ ಪೀಡಿತ ಜಿಲ್ಲೆಗಳನ್ನು ವೀಕ್ಷಣೆ ಮಾಡಿರುವುದು ಭಾರತೀಯ ಇತಿಹಾಸದಲ್ಲಿ ಹಿಂದೆಂದೂ ಕಂಡರಿಯದ ವಿಚಾರ. ಬಿಕ್ಕಟ್ಟಿನ ಸ್ಥಿತಿಯಲ್ಲಿ ರಾಜಕೀಯಕ್ಕೆ ಬದಲು ಪರಿಹಾರ ಮತ್ತು ರಕ್ಷಣಾ ಕಾರ್ಯಕ್ಕೆ ಮಹತ್ವ ಕೊಡಬೇಕು ಎನ್ನುವ ಸಂದೇಶವನ್ನು ಕೇರಳ ಸಾರಿದೆ. ಪ್ರವಾಹದ ಸಂದರ್ಭದಲ್ಲಿ ಸ್ಥಳದಲ್ಲಿದ್ದು ಜನರಿಗೆ ನೆರವಾದ ಕೇರಳದ ರಾಜಕಾರಣಿಗಳ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿವೆ. ಅಂತಹ ಕೆಲವರ ವಿವರ ಇಲ್ಲಿದೆ.

ಶಾಸಕ ಸಾಜಿ ಚೆರಿಯನ್

ಚೆಂಗನೂರಿನ ಸಿಪಿಐಎಂ ಶಾಸಕ ಸಾಜಿ ಚೆರಿಯನ್ ಅವರು ನೀರು ತುಂಬಿಕೊಂಡ ಪ್ರದೇಶದಲ್ಲಿದ್ದುಕೊಂಡು ಹೆಲಿಕಾಪ್ಟರ್‌ಗಾಗಿ ಬೇಡುತ್ತಿರುವ ವಿಡಿಯೋಗಳು ರಾಷ್ಟ್ರಮಟ್ಟದ ಸುದ್ದಿಯಾಯಿತು. “ದಯವಿಟ್ಟು ನಿಮ್ಮ ಹೆಲಿಕಾಪ್ಟರ್ ಕೊಡಿ. ನಿಮ್ಮ ಬಳಿ ಬೇಡಿಕೊಳ್ಳುತ್ತೇವೆ. ದಯವಿಟ್ಟು ನನಗೆ ನೆರವಾಗಿ. ನನ್ನ ಕ್ಷೇತ್ರದ ಜನರು ಸಾಯುತ್ತಿದ್ದಾರೆ. ದಯವಿಟ್ಟು ನೆರವಾಗಿ. ಬೇರೆ ಯಾವುದೇ ಪರಿಹಾರವಿಲ್ಲ. ಜನರನ್ನು ವಾಯುಮಾರ್ಗದ ಮೂಲಕವೇ ಸುರಕ್ಷಿತ ಸ್ಥಳಕ್ಕೆ ಕೊಂಡೊಯ್ಯಬೇಕಿದೆ. ನಮ್ಮ ರಾಜಕೀಯ ಪ್ರಭಾವ ಬಳಸಿ ಮೀನುಗಾರಿಕಾ ದೋಣಿಗಳನ್ನು ಬಳಸಿ ಸಾಕಷ್ಟು ಕೆಲಸ ಮಾಡಿದ್ದೇವೆ. ಆದರೆ ಇದಕ್ಕಿಂತ ಹೆಚ್ಚಿನದನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಸೇನೆ ಇಲ್ಲಿಗೆ ಬರಬೇಕು. ದಯವಿಟ್ಟು ನಮಗೆ ನೆರವಾಗಿ,” ಎಂದು ಕಳೆದ ಶುಕ್ರವಾರ ಚೆಂಗನ್ನೂರ್ ಶಾಸಕ ಸಾಜಿ ಚೆರಿಯನ್ ಕಳುಹಿಸಿದ ಸಂದೇಶವನ್ನು ಬಹುತೇಕ ಎಲ್ಲ ಭಾಷೆಯ ಮಾಧ್ಯಮಗಳೂ ಪ್ರಸಾರ ಮಾಡಿದವು.

ಲಕ್ಷಾಂತರ ಜನರನ್ನು ಸುರಕ್ಷಿತವಾದ ಸ್ಥಳಕ್ಕೆ ತಲುಪಿಸುವುದು ಕೇರಳ ಸರ್ಕಾರಕ್ಕೆ ಕಷ್ಟವಾದಾಗ ಸಾಜಿ ಚೆರಿಯನ್ ಅವರು ತಮ್ಮ ಪ್ರತಿಕ್ರಿಯೆಗಾಗಿ ಕರೆ ಮಾಡಿದ ಏಷ್ಯಾನೆಟ್ ಸುದ್ದಿವಾಹಿನಿಗೆ ಈ ಮಾತುಗಳನ್ನು ಹೇಳಿದ್ದರು. ತಮ್ಮ ಫೇಸ್ಬುಕ್ ಪುಟದಲ್ಲೂ ಅವರು ಈ ಬೇಡಿಕೆಯನ್ನು ಹಾಕಿದ್ದರು. “ದಯವಿಟ್ಟು ಪ್ರಧಾನಿ ನರೇಂದ್ರ ಮೋದಿಯವರಿಗೆ ಕರೆ ಮಾಡಿ ಸೇನೆಯನ್ನು ಕಳುಹಿಸಲು ಹೇಳಿ. ಇಲ್ಲವಾದರೆ 50,000 ಜನರು ಪ್ರಾಣ ಕಳೆದುಕೊಳ್ಳಲಿದ್ದಾರೆ,” ಎಂದು ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಂದೇಶ ಹಾಕಿದ್ದಾರೆ. ಅಲೆಪ್ಪಿಯ ಚೆಂಗನೂರು ಪ್ರವಾಹದ ಭಾರಿ ಹೊಡೆತಕ್ಕೆ ಸಿಕ್ಕ ಪ್ರದೇಶ. “ಹೆಲಿಕಾಪ್ಟರ್ ಕಳುಹಿಸಿದಲ್ಲಿ ನಾವು ಹಣ ಕೊಡಲೂ ಸಿದ್ಧರಿದ್ದೇವೆ. ದಯವಿಟ್ಟು ಒಂದು ಹೆಲಿಕಾಪ್ಟರ್ ಕಳುಹಿಸಿ,” ಎಂದು ಸಾಜಿ ಅವರು ಅಲವತ್ತುಕೊಂಡಿರುವ ವಿಡಿಯೋಗಳು ವೈರಲ್ ಕೂಡ ಆಗಿದ್ದವು.

ಇಡುಕ್ಕಿ ಸಂಸದ ಜಾಯ್ಸ್ ಜಾರ್ಜ್

ಹಲವು ಭೂಕುಸಿತಗಳು ಮತ್ತು ಪ್ರವಾಹದ ನಡುವೆ ಅತೀವ ಸಂಕಷ್ಟ ಎದುರಿಸಿದ ಜಿಲ್ಲೆ ಇಡುಕ್ಕಿ. ಆಹಾರ ಮತ್ತು ಕುಡಿಯುವ ನೀರು ಖಾಲಿಯಾಗುತ್ತ ಬಂದಾಗ ಇಡುಕ್ಕಿ ಸಂಸದ ಜಾಯ್ಸ್ ಜಾರ್ಜ್‌ ಅವರು ಜಿಲ್ಲೆಯ ಜನರಿಗೆ ಯಾರಾದರೂ ನೆರವಾಗಿ ಎನ್ನುವ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದರು. ವಿದ್ಯುತ್ ಇಲ್ಲದೆ, ಸಂವಹನಕ್ಕೆ ದಾರಿಯೇ ಇಲ್ಲದೆ, ಎಲ್ಲ ರಸ್ತೆಗಳ ಮೇಲೂ ಗುಡ್ಡಗಳು ಜರಿದು, ದಾರಿಗಳೇ ಇಲ್ಲದ ಸ್ಥಿತಿ ಜಿಲ್ಲೆಯಲ್ಲಿ ನಿರ್ಮಾಣವಾಗಿತ್ತು.

“ಇಡುಕ್ಕಿ ಅಪಾಯಕಾರಿ ಸ್ಥಿತಿಯಲ್ಲಿದೆ. ರಸ್ತೆ ಸಂಪರ್ಕವೇ ಇಲ್ಲವಾಗಿದೆ. ಸಂಪೂರ್ಣ ಪ್ರಾಂತ್ಯ ನಾಶವಾಗಿದೆ. ಜನರ ಶವಗಳನ್ನು ಮಣ್ಣಿನಿಂದ ತೆಗೆಯುವುದೂ ಕಷ್ಟವಾಗಿದೆ. ರಕ್ಷಣಾ ಕಾರ್ಯದಲ್ಲಿರುವ ಎನ್‌ಡಿಆರ್‌ಎಫ್ ಮತ್ತು ಸೇನೆ ರಸ್ತೆ ಸಂಪರ್ಕವಿಲ್ಲದ ಕಾರಣ ನಮ್ಮನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ,” ಎಂದು ಪರಿಸ್ಥಿತಿಯ ಬಗ್ಗೆ ಅವರು ಧ್ವನಿ ರೆಕಾರ್ಡ್ ಮಾಡಿ ವಿವರಣೆ ನೀಡಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದರು. ಜಾರ್ಜ್ ಅವರು ನಂತರ ಪರಿಹಾರ ಶಿಬಿರಗಳಲ್ಲಿ ಸ್ವಯಂಸೇವಕರಾಗಿಯೂ ಕೆಲಸ ಮಾಡುತ್ತಿರುವ ಚಿತ್ರಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ.

ಹಣಕಾಸು ಸಚಿವ ಥಾಮಸ್ ಐಸಾಕ್

ಕೇರಳದ ಹಣಕಾಸು ಸಚಿವ ಥಾಮಸ್ ಐಸಾಕ್ ಸ್ವತಃ ರಕ್ಷಣಾ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಫೋಟೋಗಳು ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಅವರು ಫೇಸ್ಬುಕ್‌ನಲ್ಲಿ ಹಾಕಿದ ಸಂದೇಶದಲ್ಲಿ, “ನಾವು ಈ ಸಮಸ್ಯೆಯಿಂದ ಬದುಕಿ ಉಳಿಯುತ್ತೇವೆ. ಎಲ್ಲರನ್ನೂ ರಕ್ಷಿಸುತ್ತೇವೆ,” ಎಂದು ಭರವಸೆಯ ಮಾತುಗಳನ್ನು ಆಡಿದ್ದರು. ಮಗುವನ್ನು ತಮ್ಮ ಕೈಯಲ್ಲಿ ಹಿಡಿದು ರಕ್ಷಣಾ ಕಾರ್ಯದಲ್ಲಿ ತೊಡಗಿರುವ ಅವರ ಚಿತ್ರಗಳು ರಾಷ್ಟ್ರಾದ್ಯಂತ ಸುದ್ದಿಯಾಗಿವೆ.

ಪ್ರವಾಹಪೀಡಿತ ಸ್ಥಳಗಳಲ್ಲಿ ಇವರು ಕೆಲಸ ಮಾಡುತ್ತಿರುವ ವಿಡಿಯೋಗಳು ಮತ್ತು ಚಿತ್ರಗಳು ಪ್ರಕಟವಾಗಿದ್ದ ಕಾರಣದಿಂದಲೇ ಹೀಗೆ ನಾವು ಕೆಲವು ಸಚಿವರು ಮತ್ತು ಶಾಸಕರನ್ನು ಪ್ರತ್ಯೇಕವಾಗಿ ಉಲ್ಲೇಖಿಸಲು ಸಾಧ್ಯವಾಗಿದೆ. ಆದರೆ, ಕೇರಳದ ಈ ಮಳೆಯ ರೌದ್ರಾವತಾರದ ಸಂದರ್ಭ ಎದುರಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಮಾನವೀಯವಾಗಿ ನಡೆದುಕೊಂಡ ಹಲವು ರಾಜಕಾರಣಿಗಳು, ಅಧಿಕಾರಿಗಳು ಇದ್ದಾರೆ. ಬಹಳಷ್ಟು ಮಂದಿ ಉತ್ತಮ ಕೆಲಸ ಮಾಡಿಯೂ ಹೆಚ್ಚು ಸುದ್ದಿಯಾಗದೆ ಉಳಿಸಿದ್ದಾರೆ. ಮಲಯಾಳಿಗರು ಯಾವಾಗಲೂ ತಮ್ಮ ಸಮುದಾಯದ ವಿಷಯಕ್ಕೆ ಬಂದಾಗ ಬಹಳ ಕಾಳಜಿ ವಹಿಸುತ್ತಾರೆ ಎನ್ನುವ ವಿಚಾರ ಕೆಲವೊಮ್ಮೆ ತಮಾಷೆ ಮತ್ತು ಗಂಭೀರ ಚರ್ಚೆಗೂ ಕಾರಣವಾಗಿದೆ. ಅಂತಹ ಸಮುದಾಯವಾಗಿ ಜೊತೆಯಲ್ಲಿ ಕೆಲಸ ಮಾಡುವ ಅಗತ್ಯ ಮತ್ತು ಅನಿವಾರ್ಯತೆಯನ್ನು ಈ ಪ್ರವಾಹ ಕೇರಳಿಗರಿಗೆ ತಂದಿಟ್ಟಿದೆ. ಸಹಜವಾಗಿಯೇ ಈ ಸಂದರ್ಭದಲ್ಲಿ ಮಲಯಾಳಿಗರು ತಮ್ಮ ಎಂದಿನ ಒಗ್ಗಟ್ಟಿನಲ್ಲಿಯೇ ಕೆಲಸ ಮಾಡಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More