ಎಂ ಎಂ ಕಲಬುರ್ಗಿ ಹತ್ಯೆಯಾಗಿ ಮೂರು ವರ್ಷ; ಏನಾಯಿತು ಸಿಐಡಿ ತನಿಖೆ?

ಸಂಶೋಧಕ ಎಂ ಎಂ ಕಲಬುರ್ಗಿ ಅವರನ್ನು ದುಷ್ಕರ್ಮಿಗಳಿಬ್ಬರು ಕಲ್ಯಾಣ ನಗರದ ಅವರ ಮನೆ ಬಾಗಿಲಿನಲ್ಲೇ ಗುಂಡಿಟ್ಟು ಹತ್ಯೆ ಮಾಡಿ ಮೂರು ವರ್ಷವಾಗುತ್ತ ಬಂತು. ಆದರೆ, ತನಿಖೆ ನಡೆಸುತ್ತಿರುವ ಕರ್ನಾಟಕದ ಸಿಐಡಿ ಈವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನೂ ಬಂಧಿಸಿಲ್ಲ!

ಕರ್ನಾಟಕವೇ ಬೆಚ್ಚಿಬೀಳುವ ಘಟನೆಯೊಂದು ೨೦೧೫ರ ಆಗಸ್ಟ್ ೩೦ರಂದು ಧಾರವಾಡದಲ್ಲಿ ನಡೆದುಬಿಟ್ಟಿತು. ಸಂಶೋಧಕ ಎಂ ಎಂ ಕಲಬುರ್ಗಿ ಅವರನ್ನು ಬೆಳಗಿನ ಸಮಯದಲ್ಲಿ ದುಷ್ಕರ್ಮಿಗಳಿಬ್ಬರು ವಿದ್ಯಾರ್ಥಿ ಸೋಗಿನಲ್ಲಿ ಬೈಕ್ ಮೂಲಕ ಬಂದು ಕಲ್ಯಾಣನಗರದ ಅವರ ಮನೆ ಬಾಗಿಲಿನಲ್ಲೇ ಗುಂಡಿಟ್ಟು ಹತ್ಯೆ ಮಾಡಿ ಪರಾರಿಯಾದರು. ಇನ್ನು ಒಂಬತ್ತು ದಿನ ಕಳೆದರೆ, ಕಲಬುರ್ಗಿ ಅವರ ಹತ್ಯೆಯಾಗಿ ಮೂರು ವರ್ಷವಾಗುತ್ತದೆ. ಆದರೆ, ತನಿಖೆ ನಡೆಸುತ್ತಿರುವ ಕರ್ನಾಟಕದ ಅಪರಾಧ ತನಿಖಾ ದಳ (ಸಿಐಡಿ) ಈವರೆಗೂ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಕೂಡ ಬಂಧಿಸಿಲ್ಲ!

ಕಲಬುರ್ಗಿ ಅವರ ಹತ್ಯೆ ತನಿಖೆ ಎಲ್ಲಿಗೆ ಬಂತು ಎನ್ನುವ ವಿಚಾರದಲ್ಲಿ ಸಿಐಡಿ ಈವರೆಗೂ ಯಾವುದೇ ಅಧಿಕೃತ ಮಾಹಿತಿಯನ್ನು ಎಲ್ಲೂ ಹಂಚಿಕೊಂಡಿಲ್ಲ. ಕಲಬುರ್ಗಿ ಅವರ ಹತ್ಯೆಗೆ ಎರಡು ವರ್ಷ ತುಂಬಿದ ಸಂದರ್ಭದಲ್ಲಿ ಆಗಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸುತ್ತ, “ಕಲಬುರ್ಗಿ ಅವರ ಹತ್ಯೆ ಪ್ರಕಣರದ ತನಿಖೆಯನ್ನು ಸಿಐಡಿ ಚುರುಕಿನಿಂದ ನಡೆಸುತ್ತಿದ್ದು, ಪ್ರಕರಣ ಅಂತಿಮ ಘಟಕ್ಕೆ ತಲುಪಿದೆ,” ಎಂದಷ್ಟೇ ಹೇಳಿದ್ದರು. ಅವರ ಹೇಳಿಕೆಗೆ ಒಂದು ವರ್ಷ ಆಗುತ್ತ ಬಂದರೂ ಯಾವ ಮಾಹಿತಿಯೂ ಈವರೆಗೆ ಸಾರ್ವಜನಿಕರಿಗಾಗಲೀ, ಕಲಬುರ್ಗಿ ಅವರ ಕುಟುಂಬಕ್ಕಾಗಲೀ ಲಭ್ಯವಾಗಿಲ್ಲ.

‘ದಿ ಸ್ಟೇಟ್’ ಕಲಬುರ್ಗಿ ಅವರ ಮಗ ಶ್ರೀವಿಜಯನನ್ನು ತನಿಖೆಯ ಮಾಹಿತಿ ವಿಚಾರವಾಗಿ ಮಾತನಾಡಿಸಿದಾಗ, “ನಮ್ಮ ತಂದೆಯ ಹತ್ಯೆ ವಿಚಾರದ ತನಿಖೆ ಎಲ್ಲಿಗೆ ಬಂತು ಎಂಬುದನ್ನು ತನಿಖಾ ದಳದವರು ಈವರೆಗೂ ತಿಳಿಸಿಲ್ಲ. ನಾವು ಕೂಡ ಆಗಾಗ ತನಿಖೆ ಎಲ್ಲಿಗೆ ಬಂತು ಎಂದು ಕೇಳಿದಾಗ, ತನಿಖೆ ನಡೆಯುತ್ತಿದೆ ಎಂದಷ್ಟೇ ಅಧಿಕಾರಿಗಳು ಹೇಳುತ್ತಿದ್ದಾರೆ. ಹೆಚ್ಚಿನ ವಿಷಯವನ್ನು ನಮ್ಮ ಕುಟುಂಬಕ್ಕೆ ಅವರು ತಿಳಿಸುತ್ತಿಲ್ಲ,” ಎಂದರು.

“ನಮ್ಮ ತಂದೆಯ ಸಾವಿಗೆ ನ್ಯಾಯ ಕೇಳಿ ಸುಪ್ರೀಂ ಕೋರ್ಟ್‌ ಮೆಟ್ಟಲು ಏರಿದ್ದೇವೆ. ಈಗಾಗಲೇ ಎರಡ್ಮೂರು ಬಾರಿ ವಿಚಾರಣೆ ನಡೆದಿದ್ದು, ಸಂಬಂಧಿಸಿದ ತನಿಖಾ ದಳದವರಿಗೂ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ. ಮಾಧ್ಯಮಗಳ ವರದಿಯನ್ನು ಗಮನಿಸುತ್ತಿದ್ದೇನೆ. ಹಲವಾರು ತನಿಖಾ ದಳದವರು ನಾಲ್ವರ ಹತ್ಯೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಹಲವಾರು ಜನ ಬಂಧಿತರಾಗಿದ್ದಾರೆ. ಬೇರೆ-ಬೇರೆ ತನಿಖಾ ದಳದವರು ಸದ್ಯ ಹಲವಾರು ಆರೋಪಿಗಳನ್ನು ಬಂಧಿಸುತ್ತಿರುವುದನ್ನು ನೋಡಿದರೆ ನಮ್ಮ ತಂದೆಯವರನ್ನು ಕೊಂದವರು ಸಿಗುವ ಆಶಾಭಾವನೆ ಇದೆ,” ಎನ್ನುತ್ತಾರವರು.

ಹಿರಿಯ ಪತ್ರಕರ್ತೆ ಗೌರಿ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ, ಈವರೆಗೂ ೧೨ ಜನ ಆರೋಪಿಗಳನ್ನು ಬಂಧಿಸಿದೆ. ಇದರಲ್ಲಿ ನಾಲ್ವರು ಆರೋಪಿಗಳು ಕಲಬುರ್ಗಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದುಬಂದಿದ್ದಾಗಿ\ಮಾಧ್ಯಮಗಳು ವರದಿ ಮಾಡಿವೆ. ಎಸ್‌ಐಟಿ ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಗೌರಿ ಹಾಗೂ ಕಲಬುರ್ಗಿ ಅವರನ್ನು ಒಂದೇ ಪಿಸ್ತೂಲ್ ಮೂಲಕ ಹತ್ಯೆ ಮಾಡಲಾಗಿದೆ ಎಂದು ಉಲ್ಲೇಖಿಸಿದೆ. ಗೌರಿ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಹುಬ್ಬಳ್ಳಿ ಮೂಲದ ಗಣೇಶ್ ಮಿಸ್ಕೀನ್‌ನೇ ಕಲಬುರ್ಗಿ ಅವರನ್ನು ಹತ್ಯೆ ಮಾಡಿದ್ದಾನೆ ಎಂದು ಶಂಕಿಸಲಾಗಿದೆ. ಆದರೆ, ಈ ಬಗ್ಗೆ ಎಸ್ಐಟಿ ಎಲ್ಲೂ ಅಧಿಕೃತವಾಗಿ ತಿಳಿಸಿಲ್ಲ.

ಕಲಬುರ್ಗಿ ಹತ್ಯೆಗೆ ಪತ್ರಿಕೆಯೊಂದರ ಬರಹಗಳೇ ಕಾರಣವಾಯಿತೇ?

ಎಂ ಎಂ ಕಲಬುರ್ಗಿ ಅವರು ೨೦೧೪ ಜೂನ್ ೯ರಂದು ಬೆಂಗಳೂರಿನ ವಿಜ್ಞಾನ ಭವನದಲ್ಲಿ ನಡೆದ ‘ಮೌಢ್ಯಮುಕ್ತ ಸಮಾಜ, ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಅನುಷ್ಠಾನ ಚರ್ಚೆ ಕಾರ್ಯಕ್ರಮ’ದಲ್ಲಿ ಹಿಂದೂ ದೇವರುಗಳ ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪ ಕೇಳಿಬಂತು. ಆ ಸಂದರ್ಭದಲ್ಲಿ ಬೆಂಗಳೂರಿನಿಂದ ಪ್ರಕಟವಾಗುವ ಕನ್ನಡದ ದಿನಪತ್ರಿಕೆಯೊಂದು ‘ಕಲಬುರ್ಗಿ ಹೇಳ್ತಾರೆ ಕೇಳಿ… ದೇವತೆಗಳೆಂದರೆ ಕಲ್ಲಂತೆ’ ಎನ್ನುವ ಶೀರ್ಷಿಕೆ ನೀಡಿ, “ಮೂರ್ತಿಗಳ ಮೇಲೆ ಮೂತ್ರ ಮಾಡಿದರೂ ತಪ್ಪಲ್ಲ, ಕಾಡುವ ಕಾಪಾಡುವ ಶಕ್ತಿ ಅದರಲಿಲ್ಲ, ಇದರಿಂದ ತಪ್ಪೇನೂ ಆಗಲ್ಲ, ಪೂಜೆ ನಿಲ್ಲಿಸಿದ್ರೆ ಅಪಾಯವಿಲ್ಲ,” ಎನ್ನುವ ಉಪ ಶೀರ್ಷಿಕೆಯಡಿ ವರದಿಯನ್ನು ಪ್ರಕಟಿಸಿತ್ತು. ಹಾಗೆಯೇ, ಸಾರ್ವಜನಿಕರ ಚರ್ಚೆಗೆ ಆಹ್ವಾನ ನೀಡುವುದರೊಂದಿಗೆ, “ಸುಮ್ಮನಿದ್ರೆ ಕಲ್ಬುರ್ಗಿಯಂಥವರು ಕಂಡವರ ತಲೆ ಮೇಲೂ ಉಚ್ಚೆ ಹೊಯ್ತಾರೇನೋ?” ಎಂದು ಬರೆದು ಅದನ್ನು ಹೈಲೆಟ್ ಮಾಡಿತ್ತು.

“ಮರುದಿನ ಅದೇ ಪತ್ರಿಕೆಯಲ್ಲಿ ಕಲಬುರ್ಗಿ ಅವರು ಆಡಿದ್ದಾರೆ ಎನ್ನಲಾಗಿರುವ ಮಾತುಗಳನ್ನು ಹಿಂದೂ ವಿಚಾರಧಾರೆಗಳಿಗೆ ಹೋಲಿಕೆ ಮಾಡುತ್ತ, ‘ಮೂರ್ತಿ ಮೂತ್ರಿ ಪ್ರಸಂಗ ಕಲಬುರ್ಗಿ ಅಧಿಕ ಪ್ರಸಂಗ’ ತಲೆಬರಹದಡಿ ಲೇಖನವೊಂದು ಪ್ರಕಟವಾಗಿತ್ತು. ಹಿಂದುತ್ವವನ್ನು ಅತಿಯಾಗಿ ಆರಾಧಿಸುವವರಿಗೆ ಕಲಬುರ್ಗಿ ಅವರನ್ನು ಕಂಡರೆ ದ್ವೇಷ ಭಾವನೆ ಮೂಡುವಷ್ಟು ಪ್ರಚೋದನೆ ಆ ಬರಹದಲ್ಲಿ ತುಂಬಿತ್ತು. ನಂತರ ಕಲಬುರ್ಗಿ ಅವರನ್ನೇ ಕೇಂದ್ರಿಕರಿಸಿ ಅನೇಕ ಬರಹಗಳು ಪ್ರಕಟಗೊಂಡು, ಅವರೊಬ್ಬ ಹಿಂದೂ ವಿರೋಧಿ ಎನ್ನುವ ಮಟ್ಟಕ್ಕೆ ಬಿಂಬಿಸಲಾಗಿತ್ತು,” ಎಂದು ಕಲಬುರ್ಗಿ ಹತ್ತಿರದವರು ಹೇಳುತ್ತಾರೆ.

ವಿವಾದಿತ ಹೇಳಿಕೆಗೆ ಕುರಿತು ಕಲಬುರ್ಗಿ ಅವರು ಸ್ಪಷ್ಟನೆ ನೀಡುತ್ತ, “ಅನಂತಮೂರ್ತಿ ಅವರ, ‘ಬೆತ್ತಲೆ ಪೂಜೆ ಯಾಕೆ ಕೂಡದು?’ ಪುಸ್ತಕದಲ್ಲಿನ ಸಾಲುಗಳನ್ನು ಆ ಸಭೆಯ ಗಮನಕ್ಕೆ ತಂದಿದ್ದೇ ಹೊರತು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿಲ್ಲ. ದೇವರನ್ನು ನಂಬುವ ನಾನು ಮೂತ್ರ ವಿಸರ್ಜನೆಯಂಥ ಪ್ರಯೋಗಗಳನ್ನು ಒಪ್ಪುವುದಿಲ್ಲ. ನನ್ನ ಮಾತು ತಪ್ಪಾಗಿ ಅರ್ಥವಾಗಿದ್ದರೆ ಸಾರ್ವಜನಿಕವಾಗಿ ವಿಷಾದಿಸುತ್ತೇನೆ,” ಎಂದಿದ್ದರು.

ಇದನ್ನೂ ಓದಿ : ಗೌರಿಯ ನೆನೆಯುತ್ತ ಕಲಬುರ್ಗಿ, ದಾಭೋಲ್ಕರ್, ಪನ್ಸಾರೆ ಮರೆತರೇ ಪ್ರಗತಿಪರರು?

ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ೨೦೧೫ರ ಫೆಬ್ರವರಿ ತಿಂಗಳಿನಲ್ಲಿ ಕಾರ್ಯಕ್ರಮವೊಂದಕ್ಕೆ ಆಹ್ವಾನಿಸಲು ಹೋದ ಸಂದರ್ಭದಲ್ಲಿ ಪತ್ರಕರ್ತರ ಬಗ್ಗೆ ಸಿಡಿಮಿಡಿಗೊಂಡು ಮಾತನಾಡಿದ ಕಲಬುರ್ಗಿ ಅವರು, “ನಾವು ಏನು ಹೇಳಿರುತ್ತೇವೆಯೋ ಅದನ್ನು ಬರೆಯುವುದು ಬಿಟ್ಟು ವಿವಾದ ಮಾಡಲೆಂದೇ ಕೆಲವು ಪತ್ರಕರ್ತರು ತಿರುಚಿ ಬರೆಯುತ್ತಾರೆ. ನನ್ನ ಅರ್ಧ ಕೊಂದಿರುವುದೇ ಮಾಧ್ಯಮದವರು,” ಎಂದು, ತನ್ನ ವಿರುದ್ಧ ಬರೆದ ಪತ್ರಿಕೆಯ ಹೆಸರನ್ನು ಉಲ್ಲೇಖಿಸುತ್ತ, “ನೀವು ಕೂಡ ಅಂತ ಪತ್ರಕರ್ತರಾಗಬೇಡಿ,” ಎಂದಿದ್ದನ್ನು ಇಲ್ಲಿ ನೆನೆಯಬಹುದು.

ಕಲಬುರ್ಗಿ ಅವರು ಬೆಂಗಳೂರಿನಲ್ಲಿ ಮೂರ್ತಿ ಪೂಜೆ ಕುರಿತು ಆಡಿದ ಮಾತುಗಳು ವಿವಾದವಾಗಿ ೧೫ ತಿಂಗಳು ಕಳೆಯುವುದರೊಳಗೆ ಅವರ ಹತ್ಯೆಯಾಗಿದೆ. ಈಗಲೂ ಮೂರ್ತಿಗಳ ಕುರಿತು ಹೇಳಿದ ಮಾತುಗಳೇ ಅವರ ಸಾವಿಗೆ ಕಾರಣ ಎನ್ನಲಾಗುತ್ತಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More