ಮಾರ್ನಿಂಗ್ ಡೈಜೆಸ್ಟ್ | ಇಂದು ಗಮನಿಸಬೇಕಾದ ಪ್ರಮುಖ 4 ಸುದ್ದಿಗಳು

ಇಂದು ಗಮನಿಸಬೇಕಾದ ಪ್ರಮುಖ ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಸುದ್ದಿಗಳು

ಏಷ್ಯಾಡ್‌ನಲ್ಲಿಂದು ದೀಪಾ ಕರ್ಮಾಕರ್ ಕಣಕ್ಕೆ

ಭಾರತದ ನಂ.೧ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಜಕಾರ್ತ ಏಷ್ಯಾ ಕ್ರೀಡಾಕೂಟದ ಮೂರನೇ ದಿನದ ಪ್ರಮುಖ ಆಕರ್ಷಣೆಯಾಗಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಕೂದಲೆಳೆಯ ಅಂತರದಲ್ಲಿ ಪದಕ ವಂಚಿತವಾದ ದೀಪಾ, ಆ ಬಳಿಕ ಸ್ಪರ್ಧಿಸುತ್ತಿರುವ ಮೊಟ್ಟಮೊದಲ ಪ್ರಮುಖ ಕ್ರೀಡಾಕೂಟವಿದಾಗಿದೆ. ಮಧ್ಯಾಹ್ನ ೧.೦೦ ಗಂಟೆಗೆ ದೀಪಾ ಸ್ಪರ್ಧಿಸಲಿದ್ದು, ಭಾರತದ ಬಿಲ್ಲುಗಾರರು, ಶೂಟರ್‌ಗಳು ಹಾಗೂ ಕಬಡ್ಡಿ ತಂಡ ಕೂಡಾ ಕಣಕ್ಕಿಳಿಯುತ್ತಿವೆ. ಅಂದಹಾಗೆ, ನಿನ್ನೆ ನಡೆದ ಕಬಡ್ಡಿ ಪಂದ್ಯದಲ್ಲಿ ಇರಾನ್ ಎದುರು ಸೋತಿರುವ ಭಾರತ ತಂಡ ಪುಟಿದೇಳಲು ಸಜ್ಜಾಗಿದೆ. ಇತ್ತ, ಶೂಟಿಂಗ್‌ನಲ್ಲಿ ಈಗಾಗಲೇ ಮೂರು ಪದಕಗಳನ್ನು ಗೆದ್ದಿರುವ ಭಾರತ, ಈ ವಿಭಾಗದಲ್ಲಿ ಚಿನ್ನಕ್ಕೆ ಗುರಿ ಇಡಲು ಸಂಕಲ್ಪ ತೊಟ್ಟಿದೆ. ಒಟ್ಟಾರೆ, ಇಂದು ಭಾರತದ ಸ್ಟಾರ್ ಆಟಗಾರರು ಸ್ಪರ್ಧೆಗಿಳಿಯುತ್ತಿದ್ದು, ಸೋನಿ ನೆಟ್ವರ್ಕ್‌ನಲ್ಲಿ ನೇರಪ್ರಸಾರವಿದೆ.

ಶಾಸಕರ ಜೊತೆ‌ ಸಿಎಂ ಕುಮಾರಸ್ವಾಮಿ ಸಭೆ

ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ‌ ಅವರು ಮಂಗಳವಾರ ವಿಧಾನಸಭೆ ಮತ್ತು ವಿಧಾನ ಪರಿಷತ್ ಸದಸ್ಯರೊಂದಿಗೆ ಗೃಹ ಕಚೇರಿ ಕೃಷ್ಙಾದಲ್ಲಿ ಸಭೆ ನಡೆಸಲಿದ್ದಾರೆ. ಕೊಡಗಿನಲ್ಲಿ ಪ್ರವಾಹ ಪರಿಸ್ಥಿತಿಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಕೊಡಗಿನಲ್ಲಿ ಪ್ರವಾಹ ಹಾಗೂ ಭೂ ಕುಸಿತಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಸಂಬಂಧಿಸಿದಂತೆ ಪ್ರತಿ ಗಂಟೆಗೊಮ್ಮೆ ಪರಿಸ್ಥಿತಿಯ ಕುರಿತು ಮಾಹಿತಿಯನ್ನು ಪರಿಶೀಲಿಸುತ್ತಿದ್ದಾರೆ.

ಭಾರತಕ್ಕೆ ಚೀನಾ ರಕ್ಷಣಾ ಸಚಿವ ಭೇಟಿ

ಭಾರತ ಹಾಗೂ ಜಪಾನ್ ದೇಶಗಳು ತಮ್ಮ ರಕ್ಷಣಾ ಸಂಬಂಧಗಳನ್ನು ವಿಸ್ತರಿಸಿರುವ ನಿಟ್ಟಿನಲ್ಲಿ ನಿನ್ನೆ (ಆ.೨೦) ದೆಹಲಿಯಲ್ಲಿ ವಾರ್ಷಿಕ ಸಭೆ ನಡೆಸಿದ್ದು, ಇಂದು ಅದೇ ಸಭೆಗೆ ಚೀನಾ ರಕ್ಷಣಾ ಸಚಿವ ವೇ ಫೇಂಗೇ ಅವರು ಭಾಗವಹಿಸಲಿದ್ದಾರೆ. ನಿನ್ನೆ ನಡೆಸಿದ ಸಭೆಯಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಜಪಾನ್ ರಕ್ಷಣಾ ಸಚಿವ ಇತ್ಸುನೊರಿ ಒಡೊನೆರಾ ಅವರು ಮಾತುಕತೆ ನಡೆಸಿದ್ದು, ಎರಡೂ ದೇಶಗಳ ವಾಯುಸೇನೆಯನ್ನು ಗಟ್ಟಿಗೊಳಿಸಲು ನಿರ್ಣಾಯಕ ಒಪ್ಪಂದಗಳ ಕುರಿತಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಚೀನಾ ರಕ್ಷಣಾ ಸಚಿವ ಭಾರತದಲ್ಲಿ ಆ.೨೪ರವರಗೆ ಪ್ರವಾಸದಲ್ಲಿದ್ದು, ಚೀನಾ ಹಾಗೂ ಭಾರತ ದೇಶಗಳ ಸೇನಾಪಡೆ ಬಲಗೊಳಿಸುವ ಕೆಲ ಒಪ್ಪಂದಗಳ ಕುರಿತಾಗಿ ಚರ್ಚೆ ನಡೆಯಲಿದೆ ಎನ್ನಲಾಗಿದೆ.

ಕೊಹ್ಲಿ ಪಡೆಯಿಂದ ಸೋಲು ತಪ್ಪಿಸಿಕೊಳ್ಳುವುದೇ ಇಂಗ್ಲೆಂಡ್?

ಟ್ರೆಂಟ್ ಬ್ರಿಡ್ಜ್ ಟೆಸ್ಟ್ ಪಂದ್ಯದಲ್ಲಿ ಸಂಪೂರ್ಣ ಹಿಡಿತ ಸಾಧಿಸಿರುವ ಭಾರತ ತಂಡದ ಕೈಯಿಂದ ಸೋಲು ತಪ್ಪಿಸಿಕೊಳ್ಳಲು ಇಂಗ್ಲೆಂಡ್ ಹೆಣಗುತ್ತಿದೆ. ಐದು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಮೊದಲ ಎರಡೂ ಪಂದ್ಯಗಳನ್ನು ಸೋತಿದ್ದ ಭಾರತ ತಂಡ, ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ತಿರುಗೇಟು ನೀಡಿದೆ. ಗೆಲ್ಲಲು ೫೨೧ ರನ್ ಪೇರಿಸಬೇಕಿರುವ ಇಂಗ್ಲೆಂಡ್, ತನ್ನ ಎರಡನೇ ಇನ್ನಿಂಗ್ಸ್‌ನಲ್ಲಿ ನಿನ್ನೆ ವಿಕೆಟ್ ನಷ್ಟವಿಲ್ಲದೆ ೯ ಓವರ್‌ಗಳಲ್ಲಿ ೨೩ ರನ್ ಗಳಿಸಿದೆ. ಪಂದ್ಯದ ನಾಲ್ಕನೇ ದಿನವಾದ ಇಂದು ಆಂಗ್ಲರಿಗೆ ಅಗ್ನಿಪರೀಕ್ಷೆ ಕಾದಿದೆ. ಭಾರತಕ್ಕೆ ೧೦ ವಿಕೆಟ್‌ಗಳು ಬೇಕಿದ್ದರೆ, ಇಂಗ್ಲೆಂಡ್‌ಗೆ ೪೯೮ ರನ್‌ಗಳ ಅಗತ್ಯವಿದೆ. ಇಂಗ್ಲೆಂಡ್‌ಗೇನೋ ಎರಡು ದಿನಗಳ ಅವಕಾಶವಿದೆ. ಆದರೆ, ಭಾರತದ ಬೌಲರ್‌ಗಳ ದಾಳಿಯನ್ನು ಹೇಗೆ ನಿಗ್ರಹಿಸುತ್ತದೆ ಎಂಬುದು ಕೌತುಕ ಕೆರಳಿಸಿದೆ. ಕೀಟನ್ ಜೆನ್ನಿಂಗ್ಸ್ ಮತ್ತು ಅಲೆಸ್ಟೈರ್ ಕುಕ್ ಕ್ರಮವಾಗಿ ೧೩ ಮತ್ತು ೯ ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More