ವಿದ್ಯಾರ್ಥಿಗಳ ಸಹಕಾರದೊಂದಿಗೆ ಸುಳ್ಳು ಸುದ್ದಿ ವಿರುದ್ಧ ಯುದ್ಧಕ್ಕೆ ನಿಂತ ಕಣ್ಣೂರು ಜಿಲ್ಲಾಡಳಿತ

ಕಣ್ಣೂರಿನಲ್ಲಿ ಲಸಿಕೆ ಹಾಕುವ ಕಾರ್ಯಕ್ರಮಕ್ಕೂ ಸುಳ್ಳು ಸುದ್ದಿ ಪೀಡೆ ಆವರಿಸಿಕೊಂಡಿತು. ಕಡೆಗೆ, ಅಲ್ಲಿನ ಜಿಲ್ಲಾಧಿಕಾರಿ ಮೈಕೊಡವಿ ನಿಂತರು. ಸುಳ್ಳು ಸುದ್ದಿಗಳ ವಿರುದ್ಧ ದೇಶದಲ್ಲೇ ಮೊದಲ ಬಾರಿಗೆ ವಿಶಿಷ್ಟ ರೀತಿಯ ಸಮರ ಸಾರಿದರು. ಈ ಕುರಿತ ‘ಬಿಬಿಸಿ’ ವರದಿಯ ಭಾವಾನುವಾದ ಇಲ್ಲಿದೆ

ಕೇರಳದ ಕಣ್ಣೂರು ಜಿಲ್ಲೆಯ ಪ್ರೌಢಶಾಲೆಯೊಂದರಲ್ಲಿ ಇತ್ತೀಚೆಗೆ ಒಂದು ವಿಶೇಷ ತರಗತಿ ನಡೆಯಿತು. ಬಾಲಕಿಯರು ಮತ್ತು ಬಾಲಕರು ಕುಳಿತಿದ್ದ ಆ ತರಗತಿಯಲ್ಲಿ ಪರದೆಯ ಮೇಲೆ ಒಂದು ಪ್ರಶ್ನೆ ಮೂಡಿತು: ‘ಸುಳ್ಳು ಸುದ್ದಿ ಎಂದರೇನು?’

ಮತ್ತೊಂದು ಸ್ಲೈಡ್‌ನಲ್ಲಿ ಉತ್ತರವಿತ್ತು. ಅದನ್ನು ವಿದ್ಯಾರ್ಥಿಗಳು ಗಟ್ಟಿಯಾಗಿ ಓದಿದರು: “ಜನರಲ್ಲಿ ಗೊಂದಲ ಮೂಡಿಸುವ, ಭಯ ಹುಟ್ಟಿಸುವ, ಹಿಂಸೆಗೆ ಪ್ರಚೋದಿಸುವ ಮೂಲಕ ಗಮನ ಸೆಳೆಯುವ ಉದ್ದೇಶದಿಂದ ತಪ್ಪು ಮಾಹಿತಿ, ಫೋಟೊ, ವೀಡಿಯೊವನ್ನು ಉದ್ದೇಶಪೂರ್ವಕವಾಗಿ ಸೃಷ್ಟಿಸಿ ಹರಡುವುದೇ ಸುಳ್ಳು ಸುದ್ದಿ.”

ದೇಶದ ಶಾಲೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಡ್ರಿಲ್ ವೇಳೆ ನಡೆಯುವ ಘೋಷಣೆಯಂತೆ ವಿದ್ಯಾರ್ಥಿಗಳು ಓದಿದ ಉತ್ತರವೂ ಇತ್ತು. ಆದರೆ, ಗಣಕ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಶಿಕ್ಷಕಿ ಎಂ ಬಿಂದ್ಯಾ, ವಿದ್ಯಾರ್ಥಿಗಳ ಎದುರು ಪ್ರತ್ಯಕ್ಷವಾಗಿ ಆ ಏಕತಾನತೆಯನ್ನು ಮುರಿದರು. “ನಾಳೆ ಕಣ್ಣೂರಿನಲ್ಲಿ ಭೂಕಂಪವಾಗುತ್ತದೆ ಎಂಬ ಸುದ್ದಿ ವಾಟ್ಸಾಪ್‌ನಲ್ಲಿ ಬಂದರೆ ಅದನ್ನು ನೀವು ನಂಬುತ್ತೀರಾ? ಮತ್ತು ಅದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳುತ್ತೀರಾ?” ಎಂಬ ಪ್ರಶ್ನೆಯನ್ನು ಎಸೆದರು. “ಹೌದು,” ಎಂದು ನಾಚಿಕೆ ಬೆರೆತ ಭಾವದಲ್ಲಿ ವಿದ್ಯಾರ್ಥಿಗಳು ನುಡಿದರು. “ಅದನ್ನು ಹಂಚಿಕೊಳ್ಳಬೇಕೇ?” ಎಂದು ಬಿಂದ್ಯಾ ಮತ್ತೆ ಪ್ರಶ್ನಿಸಿದಾಗ ಎಲ್ಲರೂ ಒಕ್ಕೊರಲಿನಿಂದ “ಇಲ್ಲ!” ಎಂದು ಕೂಗಿದರು. ಅದಕ್ಕೆ ಪ್ರತಿಕ್ರಿಯೆ ಎಂಬಂತೆ ಬಿಂದ್ಯಾ, “ನೀವು ನಿಮಗೆ ಬರುವ ಸಂದೇಶಗಳ ಬಗ್ಗೆ ಪ್ರಶ್ನಿಸಿಕೊಳ್ಳಬೇಕು ಹಾಗೂ ಪರಾಮರ್ಶೆ ಮಾಡಬೇಕು,” ಎಂದರು.

ಕೇರಳದಲ್ಲಿರುವ ಈ ಶಾಲೆಯಲ್ಲಿ ಸುಮಾರು 1,500 ಮಕ್ಕಳು ವಿದ್ಯಾಭ್ಯಾಸದಲ್ಲಿ ತೊಡಗಿದ್ದಾರೆ. ಎಡಪಂಥೀಯರು ಮತ್ತು ಬಲಪಂಥೀಯರ ನಡುವಿನ ಸಂಘರ್ಷಕ್ಕಾಗಿ ಕಣ್ಣೂರು ಜಿಲ್ಲೆ ಕುಖ್ಯಾತಿ ಗಳಿಸಿದ್ದೂ ಇದೆ. 1972ರಿಂದ ಇತ್ತೀಚಿನವರೆಗೆ ಏನಿಲ್ಲವೆಂದರೂ ಜಿಲ್ಲೆಯಲ್ಲಿ ಎರಡೂ ಕಡೆಯ ಸುಮಾರು 200 ಮಂದಿ ಸಂಘರ್ಷದಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಸುಮಾರು 25 ಲಕ್ಷ ಮಂದಿ ಇರುವ ಜಿಲ್ಲೆಯಲ್ಲಿ ಶೇ.95ರಷ್ಟು ಜನ ಸಾಕ್ಷರರು. ಅವರಲ್ಲಿ ಅರ್ಧಕ್ಕೂ ಹೆಚ್ಚು ಮಂದಿ ಪಟ್ಟಣಗಳಲ್ಲಿ ವಾಸಿಸುತ್ತಿದ್ದಾರೆ.

ಮಾಧ್ಯಮ ಸಾಕ್ಷರತೆಯೂ ಇಲ್ಲಿ ಸದೃಢವಾಗಿದೆ. ‘ಮಲಯಾಳಂ ಮನೋರಮಾ’ ಪತ್ರಿಕೆ ಅತ್ಯಧಿಕ ಪ್ರಸಾರ ಹೊಂದಿದ್ದು, ಸುಮಾರು 1.6 ಕೋಟಿ ಜನ ಪತ್ರಿಕೆ ಓದುತ್ತಿದ್ದಾರೆ. ಇದು ವಿಶ್ವದಲ್ಲೇ ಅತ್ಯಧಿಕ ಪ್ರಸಾರ ಹೊಂದಿದ ಪತ್ರಿಕೆಗಳಲ್ಲಿ ಒಂದು ಎಂಬ ಹೆಗ್ಗಳಿಕೆಯೂ ಇದೆ. ಬೆಳಗ್ಗೆ ಶಾಲೆಗೆ ಬರುವ ಮಕ್ಕಳು ಅಲ್ಲಿ ಅರ್ಧ ಡಜನ್‌ಗೂ ಹೆಚ್ಚು ಪತ್ರಿಕೆಗಳ ಹೆಡ್‌ಲೈನ್ ಓದುತ್ತಾರೆ. ಇಷ್ಟೆಲ್ಲ ಸಾಕ್ಷರತೆ, ನಗರೀಕರಣಕ್ಕೆ ಕಣ್ಣೂರು ಒಳಪಟ್ಟಿದ್ದರೂ ಇತ್ತೀಚಿನ ವರ್ಷಗಳಲ್ಲಿ ಇಲ್ಲಿ ಸುಳ್ಳು ಸುದ್ದಿಗಳು, ವೈರಲ್ ಆಗುವ ತಪ್ಪು ಮಾಹಿತಿಗಳಿಗೇನೂ ಕೊರತೆ ಇಲ್ಲ. ಇದನ್ನು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ 150 ಶಾಲೆಗಳಲ್ಲಿ 40 ನಿಮಿಷ ಅವಧಿಯ ಸುಳ್ಳು ಸುದ್ದಿ ಕುರಿತು ಜಾಗೃತಿ ಮೂಡಿಸುವ ತರಗತಿಗಳನ್ನು ಹಮ್ಮಿಕೊಂಡಿದೆ.

ಪದಗಳು, ಚಿತ್ರ, ದೃಶ್ಯಾವಳಿಗಳನ್ನು ಬಳಸಿ ಸರಳವಾಗಿ ತರಗತಿಗಳನ್ನು ನಡೆಸಲಾಗುತ್ತಿದೆ. ಕೆಲವು ಕಡೆ ಅಭಿನಯದ ಮೂಲಕವೂ ಮಕ್ಕಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಇಡೀ ದೇಶದಲ್ಲಿಯೇ ಇಂತಹ ಕೆಲಸ ಮೊದಲ ಬಾರಿಗೆ ನಡೆಯುತ್ತಿದೆ ಎಂಬ ಹಿರಿಮೆಯೂ ಕೇರಳಕ್ಕೆ ಸಂದಿದೆ. ಸುಳ್ಳು ಸುದ್ದಿಗಳ ವಿರುದ್ಧ ನಡೆಯುತ್ತಿರುವ ಈ ವಿಶಿಷ್ಟ ಸಮರಕ್ಕೆ ವಿದ್ಯಾರ್ಥಿಗಳೇ ಯೋಧರು.

ಭಾರತದ ಬೇರೆಡೆಯಂತೆ ಕಣ್ಣೂರಿನಲ್ಲೂ ವಾಟ್ಸಾಪ್, ಫೇಸ್ಬುಕ್ ಮೂಲಕ ಸುಳ್ಳು ಸುದ್ದಿ ಹರಡುವ ಪರಿಪಾಠ ಇದೆ. ಭಾರತದಲ್ಲಿ ಸದ್ಯ 30 ಕೋಟಿ ಸ್ಮಾರ್ಟ್‌ಫೋನ್ ಇವೆ. ಅದರಲ್ಲಿ 20 ಕೋಟಿ ಮಂದಿ ವಾಟ್ಸಾಪ್ ಬಳಸುತ್ತಿದ್ದು, ವಿಶ್ವದಲ್ಲೇ ಅತಿ ಹೆಚ್ಚು ಗ್ರಾಹಕರು ಭಾರತದಲ್ಲಿದ್ದಾರೆ.

ತನ್ನ ಆಪ್ ಬಳಸಿ ಪ್ರತಿದಿನ ರವಾನೆಯಾಗುವ 6,500 ಕೋಟಿ ಸಂದೇಶಗಳಲ್ಲಿ ಸುಮಾರು 60 ಭಾಷೆಗಳು ಬಳಕೆಯಾಗುತ್ತಿವೆ ಎಂದು ವಾಟ್ಸಾಪ್ ಹೇಳಿಕೊಂಡಿದೆ. ಆದರೆ, ಭಾರತದಲ್ಲಿ ಸಾವಿರಾರು ವಾಟ್ಸಾಪ್ ಗುಂಪುಗಳ ಮೂಲಕ ಸುಳ್ಳು ಸುದ್ದಿ, ತಪ್ಪು ಮಾಹಿತಿಗಳು ವಿಪರೀತವಾಗಿ ಹರಡುತ್ತವೆ. ಅವುಗಳಲ್ಲಿ ಪ್ರತಿಯೊಂದು ಗುಂಪಿನಲ್ಲೂ ಗರಿಷ್ಠ 256 ಸದಸ್ಯರು ಇರಬಹುದಾಗಿದ್ದು, ಖಾಸಗಿ ಚಾಟ್ ರೂಮುಗಳಾಗಿ ಕಾರ್ಯನಿರ್ವಹಿಸುತ್ತವೆ (ಉತ್ತರ ಪ್ರದೇಶ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಿಜೆಪಿಯೊಂದೇ 6,600ಕ್ಕೂ ಹೆಚ್ಚು ವಾಟ್ಸಾಪ್ ಗುಂಪುಗಳನ್ನು ಪಕ್ಷದ ಸಂದೇಶ ಹರಡಲು ರಚಿಸಿದ್ದನ್ನು ಸ್ಮರಿಸಬಹುದು).

ಇದನ್ನೂ ಓದಿ : ಸುಳ್ಳು ಸುದ್ದಿ ತಡೆಗೆ ಯುರೋಪಿಯನ್ ಕಮಿಷನ್ ದಾರಿ ಅನುಸರಿಸಲಿದೆ ಚುನಾವಣಾ ಆಯೋಗ

ದಿನನಿತ್ಯ ಸಾಮಾನ್ಯ ಗುಡ್ ಮಾರ್ನಿಂಗ್ ಸಂದೇಶದಿಂದ ಹಿಡಿದು ವದಂತಿ, ಹಾಸ್ಯ, ಕಾಮಪ್ರಚೋದಕ, ಗಾಸಿಪ್, ಸುಳ್ಳು ಸುದ್ದಿ, ಹೀಗೆ ನಾನಾ ನಮೂನೆಯ ಮಾಹಿತಿ ವಾಟ್ಸಾಪ್‌ನಲ್ಲಿ ಬಿತ್ತರವಾಗುತ್ತದೆ. ಸುಳ್ಳು ಸುದ್ದಿ, ತಪ್ಪು ಮಾಹಿತಿಗಳಿಗೆ ಬರುವುದಾದರೆ, ಇಂತಹ ವಿಷಯಗಳನ್ನು ಸ್ನೇಹಿತರು, ಸಂಬಂಧಿಕರು ರವಾನಿಸುತ್ತಿದ್ದಂತೆ ಸಭ್ಯರು ಕೂಡ ಅವುಗಳನ್ನು ನಂಬಿಬಿಡುತ್ತಾರೆ. ಪೋಷಕರೊಬ್ಬರು ಈ ಲೇಖನ ಬರೆದ ‘ಬಿಬಿಸಿ’ ಭಾರತದ ಪ್ರತಿನಿಧಿ ಸೌತಿಕ್ ಬಿಸ್ವಾಸ್ ಅವರೊಂದಿಗೆ ಮಾತನಾಡುತ್ತ, “ಬಂಧುಗಳು, ಸ್ನೇಹಿತರೇ ಇಂತಹ ಸುದ್ದಿಗಳನ್ನು ಕಳಿಸುವುದರಿಂದ ನಂಬದೆ ಹೇಗೆ ಇರಲಾದೀತು?” ಎಂದು ಪ್ರಶ್ನಿಸಿದ್ದರು.

ಕಣ್ಣೂರಿನ ಆ ಶಾಲೆಗೆ ಮರಳೋಣ. ಮಕ್ಕಳು ಸ್ವೀಕರಿಸಿದ ಅಥವಾ ಕೇಳಿದ ಸುಳ್ಳು ಸುದ್ದಿಗಳ ಬಗ್ಗೆ ತರಗತಿ ನಡೆಯುತ್ತಿತ್ತು. ಅದರಲ್ಲಿ ಮಕ್ಕಳ ಕಳ್ಳರು ಎಂಬ ಸಂದೇಶ ಹೊತ್ತು ಇಬ್ಬರು ಬೈಕ್ ಸವಾರರು ಮಕ್ಕಳತ್ತ ಧಾವಿಸುತ್ತಿರುವ ಚಿತ್ರವಿತ್ತು. ಅದು ಕಳೆದ ಜೂನ್‌ನಲ್ಲಿ 25 ಮಂದಿ ಸಾವಿಗೆ ಕಾರಣವಾಗಿತ್ತು. ಅಲ್ಲದೆ, ಮಹಾತ್ಮ ಗಾಂಧಿ ಅವರನ್ನು ಕುರಿತ ಸುಳ್ಳು ಸುದ್ದಿ, ತಂಪು ಪಾನೀಯದಲ್ಲಿ ಎಚ್‌ಐವಿ ಸೋಂಕಿತ ರಕ್ತದ ಕುರಿತು ಎಚ್ಚರಿಕೆ ಮೂಡಿಸುವ ಸಂದೇಶ, ರಸ್ತೆ ಬದಿಯಲ್ಲಿ ಕಂಡ ಮೂರು ಹೆಡೆಯ ಹಾವು, ಬ್ಯಾಂಕೊಂದು ಲಾಟರಿ ಮೂಲಕ ಹಣದ ಆಮಿಷ ಒಡ್ಡುತ್ತಿರುವುದು, ಕಂಪನಿಗಳು ನಕಲಿ ವಿಮಾನ ಟಿಕೆಟ್ ನೀಡುತ್ತಿರುವುದು, ಮಿಸ್ಟರ್ ಬೀನ್ ಖ್ಯಾತಿಯ ನಟ ರೊವಾನ್ ಅಟ್ಕಿನ್ಸನ್ ಸಾವನ್ನಪ್ಪಿದ್ದಾರೆ ಎಂದು ‘ಬಿಬಿಸಿ’ ಹೆಸರು ನಮೂದಿಸಿ ಪ್ರಕಟವಾದ ವದಂತಿ, ನಕಲಿ ಉದ್ಯೋಗ ಸಂದೇಶಗಳ ಕುರಿತು ಜಾಗೃತಿ ಮೂಡಿಸುವ ಸ್ಲೈಡ್‌ಗಳು ಪ್ರದರ್ಶನಗೊಂಡವು. “ಇವೆಲ್ಲಾ ಸುಳ್ಳು ಸುದ್ದಿಗಳೇ?” ಎಂದು ಶಾಲೆಯ ಕೆಲವು ವಿದ್ಯಾರ್ಥಿಗಳು ಅಚ್ಚರಿ ವ್ಯಕ್ತಪಡಿಸುತ್ತಿದ್ದ ದೃಶ್ಯ ಕಂಡುಬಂತು.

ಮಕ್ಕಳ ಕಳ್ಳರು ಇದ್ದಾರೆ ಎಂಬ ವದಂತಿ ಎರಡು ವರ್ಷಗಳ ಹಿಂದೆ ಕಣ್ಣೂರಿನಾದ್ಯಂತ ವ್ಯಾಪಕವಾಗಿ ಹರಡಿತ್ತು. ವ್ಯಕ್ತಿಯೊಬ್ಬ ಆಸ್ಪತ್ರೆಯಲ್ಲಿ ಅಡಗಿ ಮಕ್ಕಳನ್ನು ಕದಿಯುತ್ತಿದ್ದಾನೆ ಎಂದು ಬಿಂಬಿಸುವ ಸುಳ್ಳು ಸುದ್ದಿಯನ್ನು ನಂಬಿ ಜನ ಅನುಮಾನ ಬಂದವರನ್ನೆಲ್ಲ ಥಳಿಸತೊಡಗಿದ್ದರು. ಪುಣ್ಯವಶಾತ್ ದಾಳಿಗೊಳಗಾದವರಿಗೆ ತೀವ್ರ ಮಟ್ಟದ ಗಾಯಗಳಾಗಲಿಲ್ಲ. ಆದರೆ, ಕಳೆದ ಒಂದು ವರ್ಷದಿಂದ ಪರಿಸ್ಥಿತಿ ಚಿಂತಾಜನಕವಾಗಿದೆ. ಕಳೆದ ಚಳಿಗಾಲದಲ್ಲಿ ಲಸಿಕೆ ಹಾಕುವ ಕಾರ್ಯಕ್ರಮವೊಂದರ ಬಗ್ಗೆ ಹಬ್ಬಿದ ಸುಳ್ಳು ಸುದ್ದಿಯಿಂದಾಗಿ ಸುಮಾರು ಎರಡೂವರೆ ಲಕ್ಷ ವಿದ್ಯಾರ್ಥಿಗಳ ಪೋಷಕರು ಆತಂಕಕ್ಕೊಳಗಾದರು. ಕಳೆದ ಮೇನಲ್ಲಿ ಕೋಳಿಗಳಿಂದಾಗಿ ನಿಪಾ ವೈರಸ್ ಹರಡುತ್ತದೆ ಎಂಬ ಸುಳ್ಳು ಸುದ್ದಿ ಹಬ್ಬಿ ಜಿಲ್ಲೆಯ ಶೇ.60ರಷ್ಟು ಕುಕ್ಕುಟೋದ್ಯಮ ಪಾತಾಳಕ್ಕೆ ಕುಸಿಯಿತು.

ಇಂತಹ ಪ್ರಕರಣಗಳಿಂದ ಎಚ್ಚೆತ್ತುಕೊಂಡ ಕಣ್ಣೂರು ಜಿಲ್ಲಾಧಿಕಾರಿ ಮೀರ್ ಮಹಮದ್ ಅಲಿ, “ಪೋಷಕರು ತಮ್ಮ ಫೋನಿಗೆ ಬಂದ ಸಂದೇಶಗಳನ್ನೆಲ್ಲ ಸತ್ಯವೆಂದು ನಂಬುವುದರಿಂದ ಮಕ್ಕಳಲ್ಲಿ ಜಾಗೃತಿ ಮೂಡಿಸಲು ಮುಂದಾದೆವು. ಮಕ್ಕಳು ಎಚ್ಚೆತ್ತುಕೊಂಡರೆ ಸುಳ್ಳು ಸುದ್ದಿಗಳ ವಿರುದ್ಧದ ನಮ್ಮ ಹೋರಾಟದಲ್ಲಿ ಜಯ ಸಿಗಲಿದೆ ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದೆವು,” ಎಂದು ಹೇಳುತ್ತಾರೆ.

ಸುಳ್ಳು ಸುದ್ದಿ ಕುರಿತ ವಿಶೇಷ ತರಗತಿಗಳ ಬಗ್ಗೆ ಮಕ್ಕಳಿಂದ ಅಭೂತಪೂರ್ವ ಪ್ರತಿಕ್ರಿಯೆ ದೊರೆತಿದೆ. ಮಕ್ಕಳು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇವರಲ್ಲಿ ಅನೇಕರು ಇನ್ನೂ ಸ್ಮಾರ್ಟ್‌ಫೋನ್ ಬಳಸುತ್ತಿಲ್ಲವಾದರೂ, ತಮ್ಮ ಪೋಷಕರ ಫೋನುಗಳನ್ನು ಬಳಸಿ ವಿಡಿಯೊ, ವಾಟ್ಸಾಪ್ ಸಂದೇಶಗಳನ್ನು ಗಮನಿಸುತ್ತಾರೆ. ಸ್ಮಾರ್ಟ್‌ಫೋನ್ ಅನ್ನು ಪೋಷಕರಿಂದ ಕೊಡುಗೆಯಾಗಿ ಪಡೆದಿರುವ ಹದಿನೇಳು ವರ್ಷದ ಆಶಿಯಾನ್ ಅಹಮದ್ ಎಂಬ ವಿದ್ಯಾರ್ಥಿ, “ಇತ್ತೀಚಿನ ದಿನಗಳಲ್ಲಿ ಏನನ್ನೂ ನಂಬುವಂತಿಲ್ಲ. ದಿನಪತ್ರಿಕೆಗಳು, ಟಿವಿ, ಫೋನ್, ಅಂತರ್ಜಾಲ ಎಲ್ಲವೂ ಅಪರಿಚಿತ ಭಾವ ಹುಟ್ಟುಹಾಕುತ್ತಿವೆ,” ಎನ್ನುತ್ತಾನೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More