ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು

ಇಂದು ನೀವು ಗಮನಿಸಲೇಬೇಕಾದ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳತ್ತ ನೋಟ

ಜಮ್ಮು-ಕಾಶ್ಮೀರದ ಮುಂದಿನ ರಾಜ್ಯಪಾಲರಾಗಿ ಸತ್ಯಪಾಲ್ ಮಲಿಕ್ ನೇಮಕ

ಹಿರಿಯ ಬಿಜೆಪಿ ನಾಯಕ ಹಾಗೂ ಬಿಹಾರದ ರಾಜ್ಯಪಾಲರಾಗಿರುವ ಸತ್ಯಪಾಲ್‌ ಮಲಿಕ್‌ ಅವರನ್ನು ರಾಷ್ಟ್ರಪತಿಗಳು ಜಮ್ಮು ಕಾಶ್ಮೀರದ ರಾಜ್ಯಪಾಲರಾಗಿ ನೇಮಕ ಮಾಡಿದ್ದಾರೆ. ಪ್ರಸ್ತುತ ಜಮ್ಮು ಕಾಶ್ಮೀರದ ರಾಜ್ಯಪಾಲ ಎನ್ ಎನ್ ವೋಹ್ರಾ ಅವರ ಸ್ಥಾನಕ್ಕೆ ಸತ್ಯಪಾಲ್ ಆಯ್ಕೆಯಾಗಿದ್ದಾರೆ. ಕಳೆದ ಜೂ.೨೮ಕ್ಕೆ ವೋಹ್ರಾ ಅವರ ಅಧಿಕಾರಾವಧಿ ಮುಗಿದಿತ್ತು. ಬಿಹಾರದ ಸತ್ಯಪಾಲ್ ಅವರ ಸ್ಥಾನಕ್ಕೆ ಹಿರಿಯ ಬಿಜೆಪಿ ನಾಯಕ ಲಾಲ್ ಜೀ ಟಂಡನ್ ಆಯ್ಕೆಯಾಗಿದ್ದಾರೆ.

ಪರಿಹಾರ ಕೇಂದ್ರದಲ್ಲಿ ಸಚಿವ ರೇವಣ್ಣ ನಡವಳಿಗೆ ಪ್ರಹ್ಲಾದ್‌ ಜೋಶಿ ಆಕ್ರೋಶ

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ರಾಮನಾಥಪುರದ ಪರಿಹಾರ ಕೇಂದ್ರದಲ್ಲಿ ನೆರೆ ಸಂತ್ರಸ್ತರಿಗೆ ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ಅವರು ಬಿಸ್ಕತ್ ಪೊಟ್ಟಣಗಳನ್ನು ಎಸೆದ ಘಟನೆ ರಾಜಕೀಯ ಸಂಘರ್ಷಕ್ಕೆ ನಾಂದಿಯಾಗಿದೆ. ರೇವಣ್ಣ ಅವರು ಅಚಾನಕ್‌ ಆಗಿ ಸಚಿವರಾಗಿರುವುದರಿಂದ ದುರಹಂಕಾರ ಬಂದಿದೆ ಎಂದು ಹುಬ್ಬಳ್ಳಿ-ಧಾರವಾಡ ಲೋಕಸಭಾ ಸದಸ್ಯ ಹಾಗೂ ಬಿಜೆಪಿ ಮುಖಂಡ ಪ್ರಹ್ಲಾದ್‌ ಜೋಶಿ ಹೇಳಿದ್ದಾರೆ. “ರಾಜ್ಯ ಸರ್ಕಾರವು ಉತ್ತರ ಕರ್ನಾಟಕ ಜನರ ಬಗ್ಗೆ ಅಸಡ್ಡೆ ತೋರಿರುವ ವಿಚಾರ ಸಾಕಷ್ಟು ಚರ್ಚೆಯಾಗಿದೆ. ಈಗ ರೇವಣ್ಣನವರ ನಡವಳಿಕೆಯನ್ನೂ ಜನರು ನೋಡಿದ್ದಾರೆ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಈ ಬಗ್ಗೆ ಗಮನ ಹರಿಸುತ್ತಾರೆ,” ಎಂದು ತಿಳಿದಿದ್ದೇನೆ ಎಂದು ಜೋಶಿ ಪ್ರತಿಕ್ರಿಯಿಸಿದ್ದಾರೆ.

ಕೇರಳ ಪ್ರವಾಹ: ವಿಶೇಷ ಅಧಿವೇಶನಕ್ಕೆ ಮುಖ್ಯಮಂತ್ರಿ ಪಿಣರಾಯ್ ಚಿಂತನೆ

ಕೇರಳದಲ್ಲಿ ಪ್ರವಾಹ ಪರಿಸ್ಥಿತಿ ತಗ್ಗಿದ್ದರೂ, ಅಪಾಯದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಭೀಕರ ಪ್ರವಾಹದಿಂದ ಕೊಟ್ಯಂತರ ರುಪಾಯಿ ನಷ್ಟ ಸಂಭವಿಸಿದ್ದು, ಮರುನಿರ್ಮಾಣ ಕಾರ್ಯಾಚರಣೆಯ ಕುರಿತಂತೆ ಚರ್ಚಿಸಲು ಈ ತಿಂಗಳಾಂತ್ಯಕ್ಕೆ ವಿಶೇಷ ಅಧಿವೇಶನ ಕರೆಯಲು ಮುಖ್ಯಮಂತ್ರಿ ಪಿಣರಾಯ್ ವಿಜಯನ್ ಚಿಂತನೆ ನಡೆಸಿದ್ದಾರೆ. ಈ ಕುರಿತಂತೆ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಪಿಣರಾಯ್ ವಿಜಯನ್, “ಭಾರಿ ಮಳೆಯಿಂದ ಉಂಟಾಗಿರುವ ಪ್ರವಾಹದಿಂದಾಗಿ ಸಾವಿರಾರು ಮಂದಿ ನಿರ್ಗತಿಕರಾಗಿದ್ದಾರೆ. ಹಲವೆಡೆ ಸಂಪರ್ಕ ಕಡಿತಗೊಂಡಿದೆ. ಪುನರ್ವಸತಿ ಹಾಗೂ ಪುನರ್ನಿರ್ಮಾಣ ಕಾರ್ಯಗಳ ಬಗ್ಗೆ ಚರ್ಚಿಸಲು, ವಿಶೇಷ ಅಧಿವೇಶನವನ್ನು ಆ.30ರಂದು ಕರೆಯಲು ನಿರ್ಧರಿಸಲಾಗಿದ್ದು, ಶೀಘ್ರವೇ, ರಾಜ್ಯಪಾಲರಿಗೆ ಈ ಕುರಿತಂತೆ ಮನವಿ ಸಲ್ಲಿಸಲಾಗುವುದು,” ಎಂದಿದ್ದಾರೆ.

ದೇವಸ್ಥಾನದ ನಿಧಿಯನ್ನು ರಕ್ಷಣಾ ಕಾರ್ಯಕ್ಕೆ ಬಳಕೆ ಮಾಡಲು ಮುಜರಾಯಿ ಇಲಾಖೆ ನಿರ್ಧಾರ

ರಾಜ್ಯದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಸತತ ಮಳೆ ಹಾಗೂ ಪ್ರವಾಹದಿಂದ ಉಂಟಾಗಿರುವ ಹಾನಿ ಹಾಗೂ ನಷ್ಟವನ್ನು ಭರಿಸಲು ಧಾರ್ಮಿಕ ದತ್ತಿ ಮತ್ತು ಮುಜರಾಯಿ ಇಲಾಖೆ ಮುಂದಾಗಿದೆ. ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ದೇವಾಲಯಗಳ ನಿಧಿಯಲ್ಲಿ ಲಭ್ಯವಿರುವ ಮೊತ್ತವನ್ನು ಆಯುಕ್ತರ ಖಾತೆಗೆ ಪಾವತಿಸುವಂತೆ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ರಾಜ್ಯ ಒಟ್ಟು ೮೧ ದೇವಾಲಯಗಳಲ್ಲಿ ಲಭ್ಯವಿರುವ ೧೨.೩೦ ಕೋಟಿ ರು.ಗಳನ್ನು ಪಾವತಿಸಬೇಕಿದೆ. ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಕುಕ್ಕೆ ದೇವಾಲಯ ೩ ಕೋಟಿ ರು. ಹಾಗೂ ನಂಜನಗೂಡಿನ ಶೀಕಂಠೇಶ್ವರ ದೇವಾಲಯ ೧ ಕೋಟಿ. ಚಾಮುಂಡಿ ದೇವಾಲಯ ೧ ಕೋಟಿ ಪಾವತಿಸಬೇಕಿದೆ.

ಕಾಂಗ್ರೆಸ್ಸಿನ ನೂತನ ಖಜಾಂಚಿಯಾಗಿ ಅಹ್ಮದ್ ಪಟೇಲ್ ನೇಮಕ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಅಹ್ಮದ್ ಪಟೇಲ್ ಅವರನ್ನು ಪಕ್ಷದ ನೂತನ ಖಜಾಂಚಿಯಾಗಿ ನೇಮಕ ಮಾಡಿದ್ದಾರೆ. ಮೋತಿಲಾಲ್ ವೊರಾ ಅವರ ಸ್ಥಳಕ್ಕೆ ಅಹ್ಮದ್ ಪಾಟೀಲ್ ಅವರನ್ನು ನೇಮಿಸಲಾಗಿದೆ. ಮೋತಿಲಾಲ್ ವೊರಾ ಅವರು ಹೊಸದಾಗಿ ರಚಿಸಿದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನೇಮಕಗೊಂಡಿದ್ದಾರೆ. ಏತನ್ಮಧ್ಯೆ, ಹಿರಿಯ ನಾಯಕ ಆನಂದ್ ಶರ್ಮಾ ಅವರನ್ನು ವಿದೇಶಾಂಗ ಕಾಂಗ್ರೆಸ್ ಪಕ್ಷದ ವ್ಯವಹಾರ ವಿಭಾಗದ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ.

ನವಜೋತ್‌ ಸಿಂಗ್ ಸಿಧುರನ್ನು ಶಾಂತಿಯ ರಾಯಭಾರಿ ಎಂದ ಇಮ್ರಾನ್ ಖಾನ್

ಪಂಜಾಬ್‌ ಸಚಿವ ಹಾಗೂ ಮಾಜಿ ಕ್ರಿಕೆಟ್ ಆಟಗಾರ ನವಜೋತ್ ಸಿಂಗ್ ಸಿಧು ಅವರು ಪಾಕಿಸ್ತಾನ ನೂತನ ಪ್ರಧಾನಿ ಇಮ್ರಾನ್ ಖಾನ್‌ರ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಹೋಗಿದ್ದು ವಿವಾದವಾಗಿತ್ತು. ವಿವಾದ ಸೃಷ್ಟಿಸಿದ ಭಾರತೀಯರಿಗೆ ಪ್ರತ್ಯುತ್ತರವಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಸಿಧು ಅವರನ್ನು ಶಾಂತಿ ರಾಯಭಾರಿ ಎಂದು ಮಂಗಳವಾರ ಕರೆದಿದ್ದಾರೆ. ಪಾಕಿಸ್ತಾನದ ಸೇನಾ ಮುಖ್ಯಸ್ಥ ಕಮರ್ ಜಾವೇದ್ ಬವೇಜಾ ಅವರನ್ನು ಅಪ್ಪಿಕೊಂಡಿದ್ದಕ್ಕಾಗಿ ಹಾಗೂ ಆ.೧೮ರಂದು ಇಮ್ರಾನ್ ಖಾನ್‌ರ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿಧು ಭೇಟಿ ನೀಡಿದ್ದಕ್ಕೆ ಅವರನ್ನು ಬಿಜೆಪಿ ಹಾಗೂ ಬಲಪಂಥೀಯ ಬೆಂಬಲಿಗರು ಟೀಕಿಸಿದ್ದರು. ಅಲ್ಲದೆ, ಅವರ ವಿರುದ್ಧ ದೇಶದ್ರೋಹ ಪ್ರಕರಣವೂ ದಾಖಲಾಗಿತ್ತು.

ಕೊಡಗು ಸಂತ್ರಸ್ತರಿಗೆ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ 20 ಲಕ್ಷ ರು.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೊಡಗು ಸಂತ್ರಸ್ತರಿಗೆ ನೆರವಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ 20 ಲಕ್ಷ ರುಪಾಯಿ ನೀಡಲು ಮಂಡಳಿ ನಿರ್ಧರಿಸಿದೆ. ಅದೇ ರೀತಿ, ಕೇರಳ ಪ್ರವಾಹ ಸಂತ್ರಸ್ತರ ನಿಧಿಗೆ 5 ಲಕ್ಷ ರುಪಾಯಿ ನೆರವು ನೀಡುವುದಾಗಿ ಮಂಡಳಿ ಅಧ್ಯಕ್ಷ ಚಿನ್ನೇಗೌಡರು ಹೇಳಿದ್ದಾರೆ. ಕನ್ನಡ ಚಿತ್ರರಂಗದ ಹಲವಾರು ತಾರೆಯರು ಕೊಡಗು ನಿರಾಶ್ರಿತರ ಪುನರ್ವಸತಿಗಾಗಿ ಹಣ ನೀಡುತ್ತಿದ್ದು, ಅಭಿಮಾನಿಗಳಿಗೂ ನೆರವಾಗುವಂತೆ ಮನವಿ ಮಾಡಿದ್ದಾರೆ.

ಜಿಎಸ್ಟಿ ಮೇಲೆ ಶೇ.10ರಷ್ಟು ಸೆಸ್ ವಿಧಿಸಲು ಮುಂದಾದ ಕೇರಳ ಸರ್ಕಾರ

ಪ್ರವಾಹದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಕೇರಳ ಸರ್ಕಾರವು ಸಂಪನ್ಮೂಲ ಕ್ರೋಢೀಕರಣಕ್ಕೆ ಜಿಎಸ್ಟಿ ಮೇಲೆ ಶೇ.10ರಷ್ಟು ಸೆಸ್ ವಿಧಿಸಲು ನಿರ್ಧರಿಸಿದೆ. ಸೆಸ್ ವಿಧಿಸಲು ಅನುಮತಿ ನೀಡುವಂತೆ ಸರಕು ಮತ್ತು ಸೇವಾ ತೆರಿಗೆ ಮಂಡಳಿಗೆ ಮನವಿ ಮಾಡಿದೆ. ಮುಖ್ಯಮಂತ್ರಿ ಪಿನರಾಯ್ ವಿಜಯನ್ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟದಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈಗಿರುವ ಜಿಎಸ್ಟಿ ಕಾನೂನುಗಳ ಪ್ರಕಾರ, ರಾಜ್ಯ ಸರ್ಕಾರ ಪ್ರತ್ಯೇಕವಾಗಿ ಸೆಸ್ ವಿಧಿಸಲು ಸಾಧ್ಯವಿಲ್ಲ. ವಿಶೇಷ ಸಂದರ್ಭ ಎಂದು ಪರಿಗಣಿಸಿ, ವಿವೇಚನಾ ಅಧಿಕಾರ ಬಳಸಿಕೊಂಡು ಮಂಡಳಿ ಅನುಮತಿ ನೀಡಬಹುದಷ್ಟೆ. ವಿಶೇಷ ಲಾಟರಿ ಯೋಜನೆಯನ್ನು ತರಲು ಮತ್ತು ಪ್ಲಾಂಟೇಷನ್ ಕಾರ್ಮಿಕರಿಗೆ 50 ಕೆಜಿ ಅಕ್ಕಿಯನ್ನು ಉಚಿತವಾಗಿ ವಿತರಿಸಲು ಸಂಪುಟ ಸಭೆ ನಿರ್ಧರಿಸಿದೆ.

ಭಾರಿ ಮಳೆ; ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ ಬಂದ್

ಶಿರಾಡಿ ಘಾಟ್ ರಾಜ್ಯ ಹೆದ್ದಾರಿಯಲ್ಲಿ (೪೮) ವಾಹನ ಸಂಚಾರ ನಿಷೇಧ ನಂತರದಲ್ಲೇ ಇಂದು ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿಯಲ್ಲೂ ವಾಹನ ಸಂಚಾರ ನಿಷೇಧಿಸಲಾಗಿದೆ. ಈ ಕುರಿತು ಶಿವಮೊಗ್ಗ ಜಿಲ್ಲಾಧಿಕಾರಿ ಅಧಿಕೃತ ಆದೇಶ ಹೊರಡಿಸಿದ್ದಾರೆ. ತೀರ್ಥಹಳ್ಳಿ-ಕುಂದಾಫುರ ರಾಜ್ಯ ಹೆದ್ದಾರಿಯಲ್ಲಿ ಭಾರಿ ವಾಹನಗಳು ಓಡಾಡುತ್ತಿದ್ದು ಜನರ ಹಿತದೃಷ್ಟಿ ಕಾಯುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.

ಅಜರುದ್ದೀನ್ ದಾಖಲೆ ಮುರಿದ ವಿರಾಟ್ ಕೊಹ್ಲಿ

ನಾಟಿಂಗ್‌ಹ್ಯಾಂನ ಟ್ರೆಂಟ್‌ಬ್ರಿಡ್ಜ್ ಟೆಸ್ಟ್ ಪಂದ್ಯದಲ್ಲಿ ೧೦೩ ರನ್ ಗಳಿಸಿ ಇಂಗ್ಲೆಂಡ್ ಗೆಲುವಿಗೆ ೫೨೧ ರನ್‌ಗಳ ಗುರಿ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದ ವಿರಾಟ್ ಕೊಹ್ಲಿ, ಮಾಜಿ ನಾಯಕ ಮೊಹಮದ್ ಅಜರುದ್ದೀನ್ ದಾಖಲೆ ಹಿಂದಿಕ್ಕಿದ್ದಾರೆ. ಪ್ರಸ್ತುತ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ೪೪೦ ರನ್ ಕಲೆಹಾಕಿರುವ ಕೊಹ್ಲಿ, ಆ ಮೂಲಕ ೧೯೯೦ರಲ್ಲಿ ಅಜರುದ್ದೀನ್, ಇಂಗ್ಲೆಂಡ್ ವಿರುದ್ಧದ ಮೂರು ಟೆಸ್ಟ್ ಸರಣಿಯಲ್ಲಿ ಪೇರಿಸಿದ್ದ ೪೨೬ ರನ್‌ ಗಡಿ ದಾಟಿದರು. ಮೊದಲ ಇನ್ನಿಂಗ್ಸ್‌ನಲ್ಲಿ ೯೭ ರನ್‌ಗಳಿಗೆ ವಿಕೆಟ್ ಒಪ್ಪಿಸಿದ್ದ ಕೊಹ್ಲಿ, ಎರಡನೇ ಇನ್ನಿಂಗ್ಸ್‌ನಲ್ಲಿ ೯೩ ರನ್ ಗಳಿಸಿದ್ದಾಗ, ಜೇಮ್ಸ್ ಆಂಡರ್ಸನ್ ಬೌಲಿಂಗ್‌ನಲ್ಲಿ ಕೀಟನ್ ಜೆನ್ನಿಂಗ್ಸ್ ಗಲ್ಲಿಯಲ್ಲಿ ಕೈಬಿಟ್ಟ ಕ್ಯಾಚ್‌ನ ಲಾಭ ಪಡೆದು ವೃತ್ತಿಬದುಕಿನ ೨೩ನೇ ಟೆಸ್ಟ್ ಶತಕ ಪೂರೈಸಿದ್ದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More