ಸಚಿವ ರೇವಣ್ಣ, ಸಂಸದ ಪ್ರತಾಪ್‌ ಸಿಂಹ ನಡೆ-ನುಡಿ ರವಾನಿಸಿದ ಸಂದೇಶವೇನು?

ಜನಪ್ರತಿನಿಧಿಗಳು ಜವಾಬ್ದಾರಿಯುತ ಸ್ಥಾನದಲ್ಲಿರುವುದರಿಂದ ಅವರ ನಡೆ, ನುಡಿಗಳಿಗೆ ಮಹತ್ವ ಇರುತ್ತದೆ. ಆದರೆ, ಸಚಿವ ರೇವಣ್ಣ ಸಂತ್ರಸ್ತರಿಗೆ ಬಿಸ್ಕೆಟ್‌ ಎಸೆದರೆ, ಸಂಸದ ಪ್ರತಾಪ್‌ ಸಿಂಹ ‘ಸೇವಾ ಭಾರತಿ’ಗೆ ಆರ್ಥಿಕ ಸಹಾಯ ಮಾಡುವಂತೆ ಮನವಿ ಮಾಡಿದ್ದು, ಚರ್ಚೆಯ ಕೇಂದ್ರಬಿಂದುಗಳಾಗಿದ್ದಾರೆ

ಜನಪ್ರತಿನಿಧಿಗಳಿಗೆ ಕಿಂಚಿತ್ತೂ ಸೂಕ್ಷ್ಮತೆ ಇಲ್ಲವೇ? ಅಧಿಕಾರದ ಅಮಲು ತಮ್ಮ ಸ್ಥಾನಮಾನದ ಘನತೆ ಮರೆಯುವಂತೆ ಮಾಡಿದೆಯೇ? ಸೈದ್ಧಾಂತಿಕ ಮತ್ತು ರಾಜಕೀಯ ಕಾರಣಗಳಿಗೆ ನಿರ್ದಿಷ್ಟ ಸಂಘಟನೆಗಳು ಮಾತ್ರ ನಂಬಿಕೆಗೆ ಅರ್ಹ ಎನ್ನುವಂತೆ ವರ್ತಿಸುವುದು ಎಷ್ಟು ಸರಿ? ತಮ್ಮ ಸ್ಥಾನಮಾನ, ಕರ್ತವ್ಯ, ಸಂವಿಧಾನ, ಪ್ರಜಾತಾಂತ್ರಿಕ ಮೌಲ್ಯದ ಮೇಲೆ ಕಿಂಚಿತ್ತಾದರೂ ಜನಪ್ರತಿನಿಧಿಗಳಿಗೆ ಗೌರವವಿದೆಯೇ? ಜನರ ದೃಷ್ಟಿಯಲ್ಲಿ ಸರ್ಕಾರಿ ಸಂಸ್ಥೆಗಳ ಮೌಲ್ಯ ಕಡಿಮೆಯಾಗುವ ರೀತಿ ನಡೆದುಕೊಳ್ಳುವುದು ಎಷ್ಟು ಸರಿ? ಎಂಬಂಥ ಹಲವು ಪ್ರಶ್ನೆಗಳು ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ನಡೆ ಹಾಗೂ ಸಂಸದ ಪ್ರತಾಪ್‌ ಸಿಂಹ ಅವರ ನುಡಿ ಹುಟ್ಟುಹಾಕಿದ್ದು, ಈ ಕುರಿತು ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಕಂಡುಕೇಳರಿಯದ ಮಳೆ ಹಾಗೂ ಪ್ರವಾಹದಿಂದ ರಾಜ್ಯದ ಕೊಡಗು, ಹಾಸನ, ಉತ್ತರ ಮತ್ತು ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳು ತತ್ತರಿಸಿವೆ. ಕರ್ನಾಟಕದ ಕಾಶ್ಮೀರ ಎಂದೇ ಗುರುತಿಸಲ್ಪಡುವ ಕೊಡಗು, ಮಳೆ ಹಾಗೂ ಪ್ರವಾಹದ ಆರ್ಭಟಕ್ಕೆ ಅಕ್ಷರಶಃ ಧ್ವಂಸವಾಗಿದೆ. ಪ್ರವಾಹದಿಂದ ಸಂತ್ರಸ್ತರಾಗಿರುವ ಜನರು ತಮ್ಮ ಸಮಸ್ಯೆಗಳಿಂದ ಸುದ್ದಿಯಾಗುತ್ತಿರುವುದು ಒಂದೆಡೆಯಾದರೆ, ಕೆಲವು ಜನಪ್ರತಿನಿಧಿಗಳು ಬೇಜವಾಬ್ದಾರಿ ನಡವಳಿಕೆಯಿಂದ ಸಾರ್ವಜನಿಕ ಆಕ್ರೋಶಕ್ಕೆ ತುತ್ತಾಗುತ್ತಿದ್ದಾರೆ. ಈ ನಡುವೆ, ಹಾಸನ ಜಿಲ್ಲೆಯ ರಾಮನಾಥಪುರದ ಸಂತ್ರಸ್ತರ ಕೇಂದ್ರದಲ್ಲಿ ನಿರಾಶ್ರಿತರಿಗೆ ಆಹಾರ ಹಂಚಿಕೆ ಮಾಡುವ ಸಂದರ್ಭದಲ್ಲಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎಚ್‌ ಡಿ ರೇವಣ್ಣ ಅವರು ಬಿಸ್ಕೆಟ್‌ ಪೊಟ್ಟಣಗಳನ್ನು ನಿರಾಶ್ರಿತರತ್ತ ತೂರುತ್ತಿರುವ ದೃಶ್ಯ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.

ಹಿರಿಯ ಸಚಿವರಾದ ರೇವಣ್ಣ ಅವರು ನಿರಾಶ್ರಿತರಿಗೆ ಆಹಾರ ಪದಾರ್ಥ ಹಂಚಿಕೆ ಮಾಡುವುದು ತಮಗೆ ತ್ರಾಸದಾಯಕ ಎನಿಸಿದರೆ ಮತ್ತೊಬ್ಬರಿಗೆ ಹಂಚಿಕೆ ಮಾಡುವಂತೆ ಸಲಹೆ ನೀಡಬಹುದಿತ್ತು. ಆದರೆ ಹಾಗೆ ಮಾಡಿಲ್ಲದಿರುವುದು ಅವರು ಕೇವಲ ಪ್ರಚಾರಕ್ಕಾಗಿ ಆಹಾರ ಹಂಚಲು ಮುಂದಾಗಿರುವ ಅನುಮಾನ ಮೂಡಿಸಿದೆ. ಮನುಷ್ಯತ್ವ ಮತ್ತು ತಮ್ಮಂತೆಯೇ ಉಳಿದವರೂ ಆತ್ಮಗೌರವ ಹೊಂದಿರುತ್ತಾರೆ ಎಂಬುದನ್ನು ಮಾಜಿ ಪ್ರಧಾನಿಯವರ ಪುತ್ರನಾದ ರೇವಣ್ಣ ಅವರು ಅರಿತಿದ್ದರೆ ಹೀಗಾಗುತ್ತಿರಲಿಲ್ಲ. ಮಿಗಿಲಾಗಿ, ಸಚಿವ ಸ್ಥಾನ ಎನ್ನುವುದು ಜನರ ಸೇವೆಯನ್ನು ದೈನ್ಯತೆಯಿಂದ ಮಾಡಲು ದೊರೆತಿರುವ ಅಪೂರ್ವ ಅವಕಾಶ ಎಂದು ರೇವಣ್ಣ ಅರಿತಿದ್ದರೆ ಇಷ್ಟು ಅಸೂಕ್ಷ್ಮವಾಗಿ ನಡೆದುಕೊಳ್ಳುತ್ತಿರಲಿಲ್ಲ. ಕನಿಷ್ಠ ಪಕ್ಷ, ಎಲ್ಲರೂ ಸಮಾನರು ಎಂದು ಸಾರುವ ಸಂವಿಧಾನದ ಮೇಲೆ ಗೌರವ ಹೊಂದಿದ್ದರೂ ಅವರು ಈ ರೀತಿಯ ವರ್ತನೆಗೆ ಮುಂದಾಗುತ್ತಿರಲಿಲ್ಲ ಎನ್ನುವುದು ಕಟುಸತ್ಯ. ಎಲ್ಲವನ್ನೂ ಕಳೆದುಕೊಂಡು ಘಾಸಿಗೊಂಡಿರುವ, ಹಸಿವಿನಿಂದ ಬಳಲುತ್ತಿರುವ ಜನರತ್ತ ಆಹಾರ ಎಸೆಯುವುದು ದುರ್ನಡತೆಯಲ್ಲದೆ ಮತ್ತೇನು? ಬಿಸ್ಕೆಟ್‌ಗಾಗಿ ಹಾತೊರೆಯುವ ಮಕ್ಕಳು ಒಂದೆಡೆಯಾದರೆ, ಸಚಿವರು ಎಸೆಯುತ್ತಿರುವ ಪೊಟ್ಟಣಗಳನ್ನು ಪಡೆದುಕೊಳ್ಳಲು ನಾಚಿಕೆ, ಮುಜುಗರದಿಂದಲೇ ಕೈಜೋಡಿಸಿ ಮುಂದಾಗುತ್ತಿರುವ ಹೆಣ್ಣುಮಕ್ಕಳ ಸ್ಥಿತಿಯು ತಲೆತಗ್ಗಿಸುವಂತಿದೆ ಎಂದು ಹಲವರು ಬೇಸರ ವ್ಯಕ್ತಪಡಿಸಿದ್ದಾರೆ.

Posted by Pratap Simha on Sunday, August 19, 2018

ಇನ್ನೊಂದು ಕಡೆ, ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಅವರು ಕೊಡಗಿನ ಹೃದಯವಿದ್ರಾವಕ ಸ್ಥಿತಿಯನ್ನು ವಿವರಿಸುತ್ತಲೇ, ಅಲ್ಲಿನ ಜನರಿಗೆ ನೆರವಾಗುವಂತೆ ಸಾಮಾಜಿಕ ಜಾಲತಾಣದಲ್ಲಿ ಮನವಿ ಮಾಡಿದ್ದಾರೆ. ಆ ಭಾಗದ ಜನಪ್ರತಿನಿಧಿಯಾಗಿ ಸಂತ್ರಸ್ತರ ಪರವಾಗಿ ತಡವಾಗಿಯಾದರೂ ಪ್ರತಾಪ್ ಅವರು ಮೈಕೊಡವಿ ಎದ್ದುನಿಂತಿರುವುದು ಮೆಚ್ಚುವಂಥದ್ದೇ. “ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲಾಗುವುದು. ಇದಕ್ಕೂ ಮುನ್ನ, ತಾತ್ಕಾಲಿಕವಾಗಿ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡಲು ಹಣವನ್ನು ಆರ್‌ಎಸ್‌ಎಸ್‌ನ ‘ಸೇವಾ ಭಾರತಿ’ ಅಥವಾ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮಕ್ಕೆ ತಲುಪಿಸಿ,” ಎಂದು ಪ್ರತಾಪ್ ಅವರು ಮನವಿ ಮಾಡಿರುವ ಬಗ್ಗೆ ಜಿಜ್ಞಾಸೆ ಆರಂಭವಾಗಿದೆ.

ಪ್ರತಾಪ ಸಿಂಹ ಅವರು ಜನಪ್ರತಿನಿಧಿಯಾಗಿದ್ದು, ಸಾರ್ವಜನಿಕರ ಕೆಲಸ ಮಾಡಿಸಿಕೊಡುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಯಾವುದೇ ಕೆಲಸವಾದರೂ ಸರ್ಕಾರದ ವತಿಯಿಂದ ನಡೆಯುವಂತೆ ನೋಡಿಕೊಳ್ಳಬೇಕು. ಯಾವುದೇ ವ್ಯಕ್ತಿ, ಸಂಸ್ಥೆ ಆರ್ಥಿಕ ಸಹಾಯ ಮಾಡಲು ಮುಂದಾದರೂ ಸರ್ಕಾರದ ಮೂಲಕ ನಡೆಯುವಂತೆ ನೋಡಿಕೊಳ್ಳುವುದು ಉತ್ತಮ ನಡೆ. ಹಾಗೆಂದು, ಹಣವನ್ನು ಸರ್ಕಾರದ ಖಾತೆಗೆ ಜಮೆ ಮಾಡಬೇಕು ಎಂಬ ಲಿಖಿತ ನಿಯಮವೇನು ಇಲ್ಲ. ಆದರೆ, ಜನಪ್ರತಿನಿಧಿಯಾದ ಪ್ರತಾಪ್‌ ಸಿಂಹ ಅವರು ಸರ್ಕಾರದ ಮೂಲಕ ವ್ಯವಹರಿಸುವುದು ಉತ್ತಮ ಮತ್ತು ಸರಿಯಾದ ನಡೆ. ಆದರೆ, ಅವರು ಆರ್ಥಿಕ ಸಹಾಯ ಮಾಡಲು ಸೂಚಿಸಿರುವುದು ಬಿಜೆಪಿಯ ಮಾತೃಸಂಸ್ಥೆಯಾದ ಆರ್‌ಎಸ್‌ಎಸ್‌ ಜೊತೆ ಗುರುತಿಸಿಕೊಂಡಿರುವ ಸೇವಾ ಭಾರತಿ ಸಂಘಟನೆಯನ್ನು.

ಇದನ್ನೂ ಓದಿ : ಸ್ಟೇಟ್‌ಮೆಂಟ್‌ | ಕೇರಳ, ಕೊಡಗು, ಪ್ರವಾಹ, ಪ್ಯಾರಿಸ್‌

ಬಿಜೆಪಿ ಟಿಕೆಟ್‌ ಪಡೆದು ಆಯ್ಕೆಯಾಗಿರುವ ಪ್ರತಾಪ್‌ ಸಿಂಹ ಅವರು ಸೇವಾ ಭಾರತಿಯ ಖಾತೆಗೆ ಹಣ ಜಮೆ ಮಾಡಿ ಎಂದು ಸಾರ್ವಜನಿಕವಾಗಿ ಮನವಿ ಮಾಡುವುದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ. ಕಾಂಗ್ರೆಸ್‌-ಜೆಡಿಎಸ್‌ ಸರ್ಕಾರದ ಬದಲಿಗೆ ಬಿಜೆಪಿ ಸರ್ಕಾರವಿದ್ದರೆ ಇದೇ ರೀತಿಯ ಮನವಿಯನ್ನು ಪ್ರತಾಪ್‌ ಮಾಡುತ್ತಿದ್ದರೇ ಎಂಬ ಪ್ರಶ್ನೆಗಳು ಮೂಡಿವೆ. ಈ ಮಧ್ಯೆ, ಕೇರಳದ ಪ್ರವಾಹ ಸಂತ್ರಸ್ತರಿಗೆ ಸಹಾಯ ಮಾಡಲು ಹಣ, ಆಹಾರ ಸಾಮಗ್ರಿ, ಉಡುಪು ನೀಡುವವರು ಸೇವಾ ಭಾರತಿಗೆ ತಲುಪಿಸಿ. ಈ ಸಂಘಟನೆಗೆ ತಲುಪಿಸುವ ಸಾಮಗ್ರಿಗಳು ಹಿಂದೂಗಳಿಗೆ ಪೂರೈಕೆಯಾಗುತ್ತವೆ ಎಂದು ಕೆಲವು ಬಿಜೆಪಿ ಬೆಂಬಲಿಗರು ಜಾಲತಾಣಗಳಲ್ಲಿ ಹೇಳಿಕೊಂಡಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More