ಇಂದಿನ ಡೈಜೆಸ್ಟ್ | ಇಂದು ಗಮನಿಸಬೇಕಾದ ಇತರ 10 ಪ್ರಮುಖ ಸುದ್ದಿಗಳು  

ಇಂದು ನೀವು ಗಮನಿಸಲೇಬೇಕಾದ ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಸುದ್ದಿಗಳತ್ತ ನೋಟ  

ದಾಂಪತ್ಯ ಕಲಹ- ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ, ಪತಿಯ ಸಂಬಂಧಿಕರ ವಿರುದ್ಧ ದೂರು ದಾಖಲಿಸುವಂತಿಲ್ಲ,ಸುಪ್ರೀಂ

ದಾಂಪತ್ಯ ಕಲಹ ಮತ್ತು ವರದಕ್ಷಿಣೆ ಸಾವು ಸಂದರ್ಭದಲ್ಲಿ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಹೊರತು  ಪತಿಯ ಸಂಬಂಧಿಕರನ್ನು ಘಟನೆಯ ಮಧ್ಯೆ ಎಳೆತರುವಂತಿಲ್ಲ ಎಂದು ಸುಪ್ರೀಂಕೋರ್ಟ್ ಆದೇಶ ನೀಡಿದೆ. ಪತಿಯ ವಿರುದ್ಧದ ದೂರುಗಳಲ್ಲಿ, ಆತನ ದೂರದ ಸಂಬಂಧಿಕರನ್ನು ವಿಚಾರಣೆಗೆ ಗುರಿಪಡಿಸುವ ಸಂದರ್ಭದಲ್ಲೂ ನ್ಯಾಯಾಲಯ ಸೂಕ್ಷ್ಮವಾಗಿ ನಡೆದುಕೊಳ್ಳಬೇಕು ಎಂದು ನ್ಯಾಯಮೂರ್ತಿಗಳಾದ ಎಸ್ ಎ ಬಬ್ಬೆ ಮತ್ತು ಎಲ್ ನಾಗೇಶ್ವರ್ ರಾವ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. ವೈವಾಹಿಕ ವಿವಾದ ಸಂಬಂಧ ವ್ಯಕ್ತಿಯೊಬ್ಬರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಬೇಕೆಂದು ಹೈದರಾಬಾದ್  ಹೈಕೋರ್ಟ್ 2016ರ ಜನವರಿಯಲ್ಲಿ ನೀಡಿದ್ದ ತೀರ್ಪನ್ನು ಪ್ರಶ್ನಿಸಿ, ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ತೀರ್ಪು ನೀಡಿದೆ.

ಎಚ್ಡಿಕೆ, ರೇವಣ್ಣ ವಿರುದ್ಧ ಅನಂತಕುಮಾರ ಹೆಗಡೆ ಪರೋಕ್ಷ ವಾಗ್ದಾಳಿ

ಬೆಂಕಿಯುಗುಳುವ ಹೇಳಿಕೆಗಳಿಂದ ವಿವಾದ ಸೃಷ್ಟಿಸುವ ಕೇಂದ್ರ ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಖಾತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಅವರು “ರಾಜ್ಯದಲ್ಲಿ ಸಿಎಂ ಹಾಗೂ ಶ್ಯಾಡೋ ಸಿಎಂ ಅವರ ದುರಹಂಕಾರದಿಂದ ಜನ ಸಂಕೋಚಕ್ಕೀಡಾಗಿದ್ದಾರೆ” ಎಂದು ಮುಖ್ಯಮಂತ್ರಿ ಎಚ್‌ ಡಿ ಕುಮಾರಸ್ವಾಮಿ ಹಾಗೂ ಲೋಕೋಪಯೋಗಿ ಸಚಿವ ಎಚ್‌ ಡಿ ರೇವಣ್ಣ ಅವರ ಹೆಸರು ಪ್ರಸ್ತಾಪಿಸಿದೇ ವಾಗ್ದಾಳಿ ನಡೆಸಿದ್ದಾರೆ. ಕ್ಷೇತ್ರದ ಅಭಿವೃದ್ಧಿಗೆ ಶಾಸಕರು ಅನುದಾನ ಕೇಳಿದರೆ, ರೈತರ ಸಾಲಮನ್ನಾ ಮಾಡಲಾಗಿದೆ. ಆದ್ದರಿಂದ ಹಣವಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಭಾರತ ಪಾಕಿಸ್ತಾನ ಉಭಯ ದೇಶಗಳ ಮಾತುಕತೆ ಅಗತ್ಯವಿದೆ; ಇಮ್ರಾನ್ ಖಾನ್

ಭಾರತ ಪಾಕಿಸ್ತಾನ ದೇಶಗಳ ಸಂಘರ್ಷಗಳನ್ನು ಕೊನೆಗಾಣಿಸಲು ಭಾರತ ಜೊತೆಗೆ ಪಾಕಿಸ್ತಾನ ಮಾತುಕತೆ ನಡೆಸುವ ಅಗತ್ಯವಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅಭಿಪ್ರಾಯಪಟ್ಟಿದ್ದಾರೆ. ಪಾಕಿಸ್ತಾನದ ಬಡತನವನ್ನು ನಿರ್ಮೂಲನೆ ಹಾಗೂ ಜನರ ಸಮಸ್ಯೆ ನಿವಾರಿಸಲು ಭಾರತದ ಜೊತೆ ಸಂವಾದದ ಅಗತ್ಯವಿದೆ. ಆ ಮೂಲಕ ಪಾಕಿಸ್ತಾನ ಹಾಗೂ ಭಾರತ ಉತ್ತಮ ವ್ಯಾಪಾರ ವಹಿವಾಟನ್ನು ಮಾಡಬಹುದು ಎಂದು ತಮ್ಮ ಟ್ವಿಟ್ಟರ್‌ನಲ್ಲಿ ಇಮ್ರಾನ್ ಖಾನ್ ಬರೆದುಕೊಂಡಿದ್ದಾರೆ.

ಬಿಜೆಪಿ ವಿರುದ್ಧ ಕೆಪಿಸಿಸಿ ಅಧ್ಯಕ್ಷ‌ ದಿನೇಶ್‌ ಗುಂಡೂರಾವ್‌ ವಾಗ್ದಾಳಿ

ಬಹುಮತವಿಲ್ಲದಿದ್ದರೂ ಸರ್ಕಾರ ರಚನೆ ಮಾಡಲು ಬೇರೆ ಪಕ್ಷಗಳ ಶಾಸಕರಿಗೆ ಆಮಿಷ ಒಡ್ಡಿದ್ದ ಬಿಜೆಪಿ ನಾಯಕರು ನೈತಿಕತೆಯನ್ನು ಮರೆತಿದ್ದಾರೆ, ಅವರಿಗೆ ಅಧಿಕಾರ ಮುಖ್ಯವೇ ಹೊರತು ಅಭಿವೃದ್ಧಿಯಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಶನಿವಾರ ಹುಬ್ಬಳ್ಳಿಯಲ್ಲಿ ವಾಗ್ದಾಳಿ ನಡೆಸಿದ್ದಾರೆ. ಮಹಾದಾಯಿ ವಿಚಾರದಲ್ಲಿ ಕೇಂದ್ರ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ, ಬಿಜೆಪಿಯ ಸಚಿವರಿಂದ ರಾಜ್ಯದಲ್ಲಿ ಯಾವ ಅಭಿವೃದ್ಧಿಯೂ ಆಗಿಲ್ಲ, ದೇಶದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ, ರಾಜ್ಯದಲ್ಲಿ ಲೋಕಸಭಾ ಚುನಾವಣೆಯನ್ನು ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳು ಜೊತೆಗೂಡಿ ಎದುರಿಸಲಿದ್ದೇವೆ ಎಂದು ತಿಳಿಸಿದ್ದಾರೆ.

2019 ಜೂನ್ ವೇಳೆಗೆ ಸೆನ್ಸೆಕ್ಸ್ 44000 ಅಂಶಕ್ಕೇರಲಿದೆ ಎಂದ ಮಾರ್ಗನ್ ಸ್ಟ್ಯಾನ್ಲಿ

ಬಾಂಬೆ ಷೇರು ವಿನಿಮಯ ಸೂಚ್ಯಂಕ (ಸೆನ್ಸೆಕ್ಸ್) 2019 ಜೂನ್ ವೇಳೆಗೆ 44000 ಅಂಶಕ್ಕೆ ಏರುವ ಸಾಧ್ಯತೆ ಶೇ.30ರಷ್ಟಿದೆ ಎಂದು ಜಾಗತಿಕ ಹೂಡಿಕೆ ಸಂಸ್ಥೆ ಮಾರ್ಗನ್ ಸ್ಟ್ಯಾನ್ಲಿ ಹೇಳಿದೆ. ಒಂದು ವೇಳೆ ಸೆನ್ಸೆಕ್ಸ್ ಕುಸಿದರೆ 26500ಕ್ಕೆ ಇಳಿಯುವ ಸಾಧ್ಯತೆ ಶೇ.20ರಷ್ಟಿದೆ ಎಂದೂ ಮಾರ್ಗನ್ ಸ್ಟ್ಯಾನ್ಲಿ ಹೇಳಿದೆ. ಸೆನ್ಸೆಕ್ಸ್ ಈಗಾಗಲೇ ಸಾರ್ವಕಾಲಿಕ ಗರಿಷ್ಠ ಮಟ್ಟ 38400ಕ್ಕೇರಿದೆ. ಜಾಗತಿಕ ರಾಜಕೀಯ ಅಸ್ಥಿರತೆ, ಕಚ್ಚಾ ತೈಲ ದರ ಏರಿಕೆ, ರುಪಾಯಿ ಕುಸಿತದ ನಡುವೆಯೂ ಸೆನ್ಸೆಕ್ಸ್ ಸತತ ಏರುಹಾದಿಯಲ್ಲಿ ಸಾಗಿದೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು ಗರಿಷ್ಠ ಪ್ರಮಾಣದಲ್ಲಿ ಷೇರು ಖರೀದಿ ಮಾಡುತ್ತಿದ್ದಾರೆ. ಮ್ಯೂಚುವಲ್ ಫಂಡ್ ಹೌಸ್ ಗಳು ಖರೀದಿಗೆ ಇಳಿದಿದ್ದು ಸೆನ್ಸೆಕ್ಸ್ ಸತತ ಏರಿಕೆಗೆ ಕಾರಣವಾಗಿದೆ.

ಕೇರಳ ನೆರೆಹಾವಳಿಗೆ 10 ಸಾವಿರ ಕಿಮೀ ಹೆದ್ದಾರಿ ರಸ್ತೆ ನಾಶ, 1 ಲಕ್ಷ ಕಟ್ಟಡ ನೆಲಸಮ

ನೆರೆಹಾವಳಿಗೆ ಸಿಕ್ಕು 10 ಸಾವಿರ ಕಿಮೀ ಹೆದ್ದಾರಿ ರಸ್ತೆಗಳು ಹಾಳಾಗಿದ್ದು, ಸುಮಾರು ಒಂದು ಲಕ್ಷ ಕಟ್ಟಡಗಳು ನೆಲಸಮಗೊಂಡಿವೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 19 ಸಾವಿರ ಕೋಟಿ ರೂ.ಗಳಷ್ಟು ಹಾನಿಯಾಗಿದೆ ಎಂದು ಕೇರಳ ಸರ್ಕಾರ ಹೇಳಿದೆ. ಪ್ರವಾದ ಕಾರ್ಯಾಚರಣೆ ಪೂರ್ಣಗೊಂಡ ನಂತರ ಹಾನಿ ಪ್ರಮಾಣವನ್ನು ನಿಖರವಾಗಿ ಲೆಕ್ಕಹಾಕುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಭೀಕರ ಪ್ರವಾಹಕ್ಕೆ ಒಳಗಾದ ಕೇರಳದ ಹಲವು ಸ್ಥಳಗಳು ಮೊದಲಿನಂತಾಗಲು ಒಂದು ದಶಕವಾದರೂ ಬೇಕು ಎಂದು ಹಿಂದೂಸ್ತಾನ್‌ ಟೈಮ್ಸ್‌ ವರದಿ ಮಾಡಿದೆ.

ಬಾಂಡ್‌ ತಂಡದಿಂದ ಹೊರನಡೆದ ಡ್ಯಾನಿ

ಜನಪ್ರಿಯ ಜೇಮ್ಸ್‌ ಬಾಂಡ್‌ ಸರಣಿಯ 25ನೇ ಸಿನಿಮಾ ನಿರ್ದೇಶಿಸಬೇಕಿದ್ದ ಡ್ಯಾನಿ ಬಾಯ್ಲ್‌ ತಂಡದಿಂದ ಹೊರನಡೆದಿದ್ದಾರೆ. ನಿರ್ಮಾಪಕರಾದ ಮೈಕೆಲ್ ವಿಲ್ಸನ್‌ ಮತ್ತು ಬಾರ್ಬರಾ ಬ್ರೊಕೊಲಿ ಹಾಗೂ ನಟ ಡೇನಿಯಲ್‌ ಈ ಸುದ್ದಿಯನ್ನು ಅಧಿಕೃತಗೊಳಿಸಿದ್ದಾರೆ. ‘ಕ್ರಿಯಾಶೀಲ ಭಿನ್ನಾಭಿಪ್ರಾಯ’ಗಳಿಂದಾಗಿ ಡ್ಯಾನಿ ತಂಡದಿಂದ ಹೊರನಡೆದಿದ್ದಾರೆ ಎನ್ನಲಾಗಿದೆ. 25ನೇ ಬಾಂಡ್‌ ಸಿನಿಮಾದ ಬಿಡುಗಡೆ ದಿನಾಂಕ 2019, ನವೆಂಬರ್‌ 9 ಎಂದು ನಿಗಧಿಯಾಗಿದೆ. ಸದ್ಯದಲ್ಲೇ ಹೊಸ ನಿರ್ದೇಶಕರ ಬಗ್ಗೆ ಮಾಹಿತಿ ನೀಡುವುದಾಗಿ ನಿರ್ಮಾಪಕರು ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ನಿರೀಕ್ಷಿತ ಗೆಲುವು

ನಿರೀಕ್ಷೆಯಂತೆಯೇ ನಾಟಿಂಗ್‌ಹ್ಯಾಂ ಟೆಸ್ಟ್‌ನಲ್ಲಿ ಭಾರತ ತಂಡ ಗೆಲುವಿನ ನಗೆಬೀರಿದೆ. ಗೆಲ್ಲಲು ೫೨೧ ರನ್ ಗುರಿ ಪಡೆದಿದ್ದ ಆತಿಥೇಯ ಇಂಗ್ಲೆಂಡ್, ನಾಲ್ಕನೇ ದಿನದಾಟದ ಅಂತ್ಯಕ್ಕೆ ೯ ವಿಕೆಟ್‌ಗೆ ೩೧೧ ರನ್ ಗಳಿಸಿತ್ತು. ಇಂದು ಕೇವಲ ೧೦ ನಿಮಿಷಗಳಲ್ಲೇ ಇನ್ನುಳಿದ ಒಂದು ವಿಕೆಟ್ ಗಳಿಸಿದ ಭಾರತ ತಂಡ, ೨೦೩ ರನ್‌ಗಳ ಅಮೋಘ ಗೆಲುವು ಸಾಧಿಸಿತು. ಕೇರಂ ಬಾಲ್ ಎಸೆತದಲ್ಲಿ ಜೇಮ್ಸ್ ಆಂಡರ್ಸನ್ (೧೧), ಅಜಿಂಕ್ಯ ರಹಾನೆಗೆ ಕ್ಯಾಚಿತ್ತು ಕ್ರೀಸ್ ತೊರೆಯುತ್ತಿದ್ದಂತೆ ಭಾರತ ಗೆಲುವಿನ ಕೇಕೆ ಹಾಕಿತು. ಆದಿಲ್ ರಶೀದ್ ೩೩ ರನ್‌ಗಳೊಂದಿಗೆ ಅಜೇಯರಾಗುಳಿದರು. ಬೆನ್ ಸ್ಟೋಕ್ಸ್ (೬೨) ಮತ್ತು ಜೋಸ್ ಬಟ್ಲರ್ (೧೦೬) ಪ್ರತಿರೋಧ ಬಿಟ್ಟರೆ, ಇಂಗ್ಲೆಂಡ್ ವಿರುದ್ಧ ಭಾರತ ಸಂಪೂರ್ಣ ಪಾರಮ್ಯ ಮೆರೆಯಿತು. ಹಾರ್ದಿಕ್ ಪಾಂಡ್ಯ ಮೊದಲ ಇನ್ನಿಂಗ್ಸ್‌ನಲ್ಲಿ ೨೮ಕ್ಕೆ ೫ ವಿಕೆಟ್ ಪಡೆದರೆ, ಎರಡನೇ ಇನ್ನಿಂಗ್ಸ್‌ನಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ (೮೫ಕ್ಕೆ ೫) ಮಾರಕ ದಾಳಿಗೆ ಸಿಲುಕಿದ ಇಂಗ್ಲೆಂಡ್ ಅತಿ ಹೀನಾಯ ಸೋಲುಂಡಿತು. ಈ ಪಂದ್ಯದ ಗೆಲುವಿನೊಂದಿಗೆ ಭಾರತ ತಂಡ ಐದು ಪಂದ್ಯ ಸರಣಿಯಲ್ಲಿ ೧-೨ ಅಂತರ ಕಾಯ್ದುಕೊಂಡಿದ್ದು, ನಾಲ್ಕನೇ ಪಂದ್ಯ ಸೌಥಾಂಪ್ಟನ್‌ನಲ್ಲಿ ಇದೇ ತಿಂಗಳು ೩೦ರಿಂದ ಶುರುವಾಗಲಿದೆ.

ಆರ್ಟಿಸ್ಟಿಕ್ ಜಿಮ್ನಾಸ್ಟಿಕ್‌ ಫೈನಲ್‌ನಿಂದ ಹಿಂದೆ ಸರಿದ ದೀಪಾ

ಮಂಗಳವಾರ (ಆ.೨೧) ಅರ್ಹತಾ ಸುತ್ತಿನ ವೇಳೆ ಬಲ ಮೊಣಕಾಲಿಗೆ ಗಾಯ ಮಾಡಿಕೊಂಡ ಭಾರತದ ಮಹಿಳಾ ಜಿಮ್ನಾಸ್ಟ್ ದೀಪಾ ಕರ್ಮಾಕರ್ ಏಷ್ಯಾ ಕ್ರೀಡಾಕೂಟದ ಆರ್ಟಿಸ್ಟಿಕ್ ವಿಭಾಗದ ಫೈನಲ್‌ನಿಂದ ಹಿಂದೆ ಸರಿದಿದ್ದಾರೆ. ತರಬೇತಿ ಸಂದರ್ಭದಲ್ಲಿ ಲ್ಯಾಂಡಿಂಗ್ ಆಗುವ ವೇಳೆ ದೀಪಾ ಆಯತಪ್ಪಿ ಗಾಯ ಮಾಡಿಕೊಂಡರು. "ಮೊಣಕಾಲಿಗೆ ತಗಲಿರುವ ಗಾಯ ಹೆಚ್ಚು ಮಾರಕವಾಗಿದ್ದು, ಹೆಚ್ಚು ರಿಸ್ಕ್ ತೆಗೆದುಕೊಳ್ಳಕೂಡದೆಂದು ಆರ್ಟಿಸ್ಟಿಕ್ ವಿಭಾಗದ ಸ್ಪರ್ಧೆಯಲ್ಲಿ ದೀಪಾ ಅವರನ್ನು ಕಣಕ್ಕಿಳಿಸುತ್ತಿಲ್ಲ. ಆದರೆ, ಬ್ಯಾಲೆನ್ಸಿಂಗ್ ಬೀಮ್ ಫೈನಲ್‌ನಲ್ಲಿ ಅವರು ನಿಸ್ಸಂಶಯವಾಗಿಯೂ ಸ್ಪರ್ಧಿಸಲಿದ್ದಾರೆ,'' ಎಂದು ದೀಪಾ ಕೋಚ್ ಬಿಸ್ವೇಶ್ವರ್ ನಂದಿ ತಿಳಿಸಿದ್ದಾರೆ. ಇನ್ನು, ವಾಲ್ಟ್ ವಿಭಾಗದ ಫೈನಲ್‌ಗೆ ದೀಪಾ ಅರ್ಹತೆ ಗಳಿಸಲಿಲ್ಲ. ಆಕೆಯ ಸಹ ಸ್ಪರ್ಧಿಗಳಾದ ಪ್ರಣತಿ ನಾಯಕ್ (೧೩.೪೨೫) ಮತ್ತು ಅರುಣಾ ರೆಡ್ಡಿ (೧೩.೩೫೦) ದೀಪಾ ಅವರನ್ನು ಹಿಂದಿಕ್ಕಿ ಆರು ಮತ್ತು ಏಳನೇ ಸ್ಥಾನ ಗಳಿಸಿದರು.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More