ವಂಚನೆ ಪತ್ತೆ ಮಾಡದಿದ್ದರೆ ಬ್ಯಾಂಕರುಗಳ ವಿರುದ್ಧವೇ ಕ್ರಿಮಿನಲ್ ಮೊಕದ್ದಮೆ

ನಿಷ್ಕ್ರಿಯ ಸಾಲದ ಪ್ರಕರಣಗಳಲ್ಲಿ ಹಣವನ್ನು ಬೇರೆಡೆಗೆ ಅಕ್ರಮವಾಗಿ ವರ್ಗಾಯಿಸಿರುವ ಹಾಗೂ ಮತ್ತಿತರ ವಂಚನೆ ಪ್ರಕರಣಗಳ ಮೇಲೆ ನಿಗಾ ಇಡುವಂತೆ ಕೇಂದ್ರ ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಸೂಚಿಸಿದೆ. ನಿಗಾ ಇಡದ ಬ್ಯಾಂಕುಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡುವ ಎಚ್ಚರಿಕೆ ನೀಡಲಾಗಿದೆ

ಬ್ಯಾಂಕಿಂಗ್ ವಂಚನೆ ಪ್ರಕರಣಗಳ ಮೇಲೆ ನಿಗಾ ಇಡುವಂತೆ ಬ್ಯಾಂಕುಗಳ ಮುಖ್ಯಸ್ಥರಿಗೆ ಸೂಚಿಸಿರುವ ಕೇಂದ್ರ ವಿತ್ತ ಸಚಿವಾಲಯವು 50 ಕೋಟಿ ರು.ಗಳನ್ನುಮೀರಿದ ನಿಷ್ಕ್ರಿಯ ಸಾಲಗಳಲ್ಲಿ ವಂಚನೆ ನಡೆದಿರುವ ಸಾಧ್ಯತೆಯನ್ನು ಪರಿಶೀಲಿಸುವಂತೆ ಸೂಚಿಸಿದೆ. ಒಂದು ವೇಳೆ ವಂಚನೆ ಪ್ರಕರಣಗಳನ್ನು ಪತ್ತೆ ಹಚ್ಚದೇ ಇದ್ದರೆ ಕ್ರಿಮಿನಲ್ ಮೊಕದ್ದಮೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನೂ ನೀಡಿದೆ.

ಭೂಷಣ್ ಸ್ಟೀಲ್ಸ್ ಕಂಪನಿ ಪ್ರವರ್ತಕ ನೀರಜ್ ಸಿಂಘಾಲ್ ಬ್ಯಾಂಕುಗಳಿಂದ ಸಾಲ ಪಡೆದು 6000 ಕೋಟಿ ರುಪಾಯಿ ವಂಚಿಸಿರುವುದನ್ನು ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆ (ಎಸ್ಎಫ್ಐಒ) ಪತ್ತೆ ಹಚ್ಚಿರುವ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವಾಲಯ ಬ್ಯಾಂಕುಗಳಿಗೆ ಎಚ್ಚರಿಕೆ ನೀಡಿದೆ.

ವಂಚನೆ ತಡೆಗೆ ಕಟ್ಟುನಿಟ್ಟಿನ ನಿಗಾ ಇಡುವುದು ಬ್ಯಾಂಕರುಗಳ ಕರ್ತವ್ಯ. ಯಾವುದೇ ಖಾತೆಯಲ್ಲಿ ವಂಚನೆ ನಡೆದಿರುವುದು ನಂತರ ಪತ್ತೆ ಆದರೆ ಭಾರತೀಯ ದಂಡ ಸಂಹಿತೆ 120ಬಿ ಅಡಿಯಲ್ಲಿ ಬ್ಯಾಂಕರುಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತದೆ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳನ್ನು ಉಲ್ಲೇಖಿಸಿ ಡಿಎನ್ಎ ವರದಿ ಮಾಡಿದೆ.

ನಿಷ್ಕ್ರಿಯವಾದ ಸಾಲದ ಖಾತೆಯ ಹಣವು ಬೇರೆಗೆ ವರ್ಗಾಯಿಸಿರುವುದನ್ನು ತನಿಖಾ ಸಂಸ್ಥೆಗಳು ಪತ್ತೆ ಹಚ್ಚಿದರೆ ಅಂತಹ ಪ್ರಕರಣಗಳಲ್ಲಿ ಬ್ಯಾಂಕರುಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲಾಗುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ. ವಿತ್ತ ಸಚಿವಾಲಯದ ಈ ಎಚ್ಚರಿಕೆಯು ಬ್ಯಾಂಕರುಗಳು ಮತ್ತಷ್ಟು ಕಾನೂನು ತೊಡಕಿಗೆ ಸಿಕ್ಕಿಕೊಳ್ಳುವಂತಾಗಲಿದೆ.

ಭಾರತದ ಬ್ಯಾಂಕುಗಳಲ್ಲಿ, ಮುಖ್ಯವಾಗಿ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಿಷ್ಕ್ರಿಯ ಸಾಲದ ಪ್ರಮಾಣ ಬೃಹತ್ತಾಗಿ ಬೆಳೆದಿದ್ದು 8,00,000 ಕೋಟಿ ದಾಟಿದೆ. ಅಲ್ಲದೇ ಇತ್ತೀಚೆಗೆ ಬ್ಯಾಂಕುಗಳಿಗೆ ವಂಚಿಸಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ ನೀರವ್ ಮೋದಿ, ಮೆಹುಲ್ ಚೊಕ್ಸಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ವಂಚಿಸಿರುವ ಮೊತ್ತವೇ 14000 ಕೋಟಿ ರುಪಾಯಿ ಮೀರಿದೆ. ಇದು ಭಾರತೀಯ ಬ್ಯಾಂಕಿಂಗ್ ಇತಿಹಾಸದಲ್ಲೇ ಅತಿದೊಡ್ಡ ವಂಚನೆ ಪ್ರಕರಣವಾಗಿದೆ.

6000 ಕೋಟಿ ರು. ವಂಚಿಸಿರುವ ಭೂಷಣ್ ಸ್ಟೀಲ್ಸ್ ಕಂಪನಿ ಅಲ್ಲದೇ ಇತರ ಹತ್ತು ಕಂಪನಿಗಳಿಗೆ ನೀಡಿರುವ ಸಾಲದಲ್ಲಿ ಕೆಲವು ಲೋಪಗಳು ಕಂಡುಬಂದಿವೆ. ಈ ಹಿನ್ನೆಲೆಯಲ್ಲಿ ಬ್ಯಾಂಕರುಗಳಿಗೆ ಕಠಿಣ ಎಚ್ಚರಿಕೆ ನೀಡಲಾಗಿದೆ. ವಂಚನೆ ನಡೆದಿರುವು ಮೇಲ್ನೋಟಕ್ಕೆ ಕಂಡು ಬಂದಿದೆ. ಅಲ್ಲದೇ ಅಂತಹ ಪ್ರಕರಣಗಳಲ್ಲಿ ಐದು ವರ್ಷಗಳ ಹಿಂದಿನ ವ್ಯವಹಾರ ದಾಖಲೆ ಒದಗಿಸುವಂತೆ ಸೂಚಿಸಲಾಗಿದೆ. ಅಗತ್ಯ ಬಿದ್ದರೆ ಬ್ಯಾಂಕುಗಳು ಈ ಖಾತೆಗಳ ಸಮಗ್ರ ಮರು ಲೆಕ್ಕಪರಿಶೀಲನೆ ನಡೆಸಲಿವೆ.

ತಿಂಗಳ ಆರಂಭದಲ್ಲಿ ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿದ ಆರೋಪದ ಮೇಲೆ ಗಂಭೀರ ವಂಚನೆ ಪ್ರಕರಣಗಳ ತನಿಖಾ ಸಂಸ್ಥೆಯು ನೀರಜ್ ಸಿಂಘಾಲ್ ನನ್ನು ಬಂಧಿಸಿತ್ತು. ನೀರಜ್ ಸಿಂಘಾಲ್ ಬ್ಯಾಂಕುಗಳಿಗೆ ವಂಚಿಸಿದ ಕಾರ್ಯತಂತ್ರ ಬಳಸಿ ಹಲವು ಕಂಪನಿಗಳ ಪ್ರವರ್ತಕರು ವಂಚಿಸಿರುವ ಸಾಧ್ಯತೆ ಇದೆ. ಬ್ಯಾಂಕುಗಳಿಂದ ಪಡೆದ ಬೃಹತ್ ಸಾಲದ ಮೊತ್ತವನ್ನು ಸಹ ಕಂಪನಿಗಳ ಮೂಲಕ ಬೇರೆಡೆಗೆ ವರ್ಗಾಯಿಸಿರುವ ಬಗ್ಗೆ ಗುಪ್ತಚರ ಮಾಹಿತಿ ಇದೆ ಎಂದು ಹಿರಿಯ ಅಧಿಕಾರಿಗಳನ್ನು ಉಲ್ಲೇಖಿಸಿ ಡಿಎನ್ಎ ವರದಿ ಮಾಡಿದೆ.

ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ನೀಡಿರುವ ಮಾಹಿತಿಗಳನ್ನು ಆಧರಿಸಿ ಈಗಾಗಲೇ ನಿಷ್ಕ್ರಿಯ ಸಾಲ ನಿರ್ವಹಣೆ ಪ್ರಕ್ರಿಯೆಗೆ ಒಳಗಾಗಿರುವ ಕಂಪನಿಗಳ ವಿರುದ್ಧವೂ ಪ್ರಕರಣ ದಾಖಲಿಸಲು ಎಸ್ಎಫ್ಐಒ ಚಿಂತಿಸುತ್ತಿದೆ. ದಿವಾಳಿ ಸಂಹಿತೆಗೆ ಒಳಗಾಗಿರುವ ಕಂಪನಿಗಳಲ್ಲಿ ವ್ಯಾಪಕ ವಂಚನೆ ಪ್ರಕರಣಗಳು ನಡೆದಿರುವುದು ಲೆಕ್ಕಪರಿಶೋಧನೆ ವೇಳೆ ಪತ್ತೆಯಾಗಿದೆ.

ಇದನ್ನೂ ಓದಿ : ನೀರವ್ ಮೋದಿಗಿಂತ ಮುಂಚೆ ನಡೆದ ಅತಿದೊಡ್ಡ ಆರ್ಥಿಕ ಹಗರಣಗಳು ಗೊತ್ತೆ?


2017 ಜೂನ್ ತಿಂಗಳಲ್ಲಿ ಆರ್‌ಬಿಐ 5000 ಕೋಟಿ ರುಪಾಯಿ ನಿಷ್ಕ್ರಿಯ ಸಾಲ ಮೀರಿದ 12 ಖಾತೆಗಳನ್ನು ಗುರುತಿಸಿ, ಅವುಗಳನ್ನು ದಿವಾಳಿ ಸಂಹಿತೆಯಡಿ ವಿಲೇವಾರಿ ಮಾಡಲು ಸೂಚಿಸಿತ್ತು. 2017 ಆಗಸ್ಟ್ ತಿಂಗಳಲ್ಲಿ ಇನ್ನೂ 28 ನಿಷ್ಕ್ರಿಯ ಸಾಲಗಳ ಖಾತೆಯನ್ನು ದಿವಾಳಿ ಸಂಹಿತೆಯಡಿ ವಿಲೇವಾರಿ ಮಾಡಲು ಆರ್‌ಬಿಐ ಸೂಚಿಸಿತ್ತು.

ಕಂಪನಿ ಕಾನೂನುಗಳನ್ನು ಉಲ್ಲಂಘನೆ ಮಾಡಿದವರನ್ನು ಬಂಧಿಸುವ ಅಧಿಕಾರವನ್ನು 2017ರಲ್ಲಿ ಎಸ್ಎಫ್ಐಒಗೆ ನೀಡಲಾಗಿದೆ. ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸುವ ಎಸ್ಎಫ್ಐಒ ಕಾರ್ಪೊರೆಟ್ ವಲಯದಲ್ಲಿ ನಡೆಯುವ ವಂಚನೆ ಪ್ರಕರಣಗಳ ತನಿಖೆ ನಡೆಸಿ ಕಾನೂನು ಕ್ರಮ ಜರುಗಿಸುತ್ತದೆ. ನೀರವ್ ಮೋದಿ, ಮೆಹುಲ್ ಚೊಕ್ಸಿ ಪ್ರಕರಣದ ಬಿಸಿ ಆರುವ ಮುನ್ನವೇ ಭೂಷಣ್ ಸ್ಟೀಲ್ಸ್ ವಂಚನೆ ಪ್ರಕರಣ ಬೆಳಕಿಗೆ ಬಂದಿರುವುದು ಕೇಂದ್ರ ವಿತ್ತ ಸಚಿವಾಲಯವನ್ನು ಮುಜುಗರಕ್ಕೀಡು ಮಾಡಿದೆ. ಈ ಹಿನ್ನೆಲೆಯಲ್ಲಿ ಬ್ಯಾಂಕುಗಳಿಗೆ ಎಚ್ಚರಿಕೆ ನೀಡಲಾಗಿದೆ.

ಗಣಿಗಾರಿಕೆ ಅನುಮತಿಗೆ ಲಂಚ; ಐಎಫ್‌ಎಸ್‌, ಐಎಎಸ್‌ ಅಧಿಕಾರಿಗೆ ಎಸಿಬಿ ಕ್ಲೀನ್‌ಚಿಟ್‌?
ಕಬ್ಬನ್‌ ಪಾರ್ಕ್‌ ಠಾಣೆಗೆ ಶ್ರುತಿ ದೂರು; ಅರ್ಜುನ್ ಸರ್ಜಾ‌ ವಿರುದ್ಧ ಎಫ್‌ಐಆರ್
ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
Editor’s Pick More